Wednesday, 11th December 2024

ಸಮಯ ಮಿತಿ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ ?

ವೈದ್ಯ ವೈವಿಧ್ಯ

drhsmohan@gmail.com

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ – ಇದೊಂದು ಹಳೆಯ ಗಾದೆ.

ಹಾಗೆಯೇ ನಮ್ಮ ಹಿಂದಿನ ಪೀಳಿಗೆಯವರು ಏಕಾದಶಿ ಅಂತಲೋ, ಗುರುವಾರ, ಶುಕ್ರವಾರ, ಶನಿವಾರ ಅಂತಲೋ ವಾರಕ್ಕೊಮ್ಮೆ ಉಪವಾಸ (ಒಂದು ಹೊತ್ತಾದರೂ) ಮಾಡುವ ವಾಡಿಕೆ ಇತ್ತು. ಈಗಲೂ ಕೆಲವರು ಅದನ್ನು ಮಾಡುತ್ತಿದ್ದಾರೆ. ನಾನು ಚಿಕ್ಕವನಿದ್ದಾಗ ನಮ್ಮ ದೇಶದ ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರು ದೇಶದಲ್ಲಿ ಯುದ್ಧದ ನಂತರದ ಆಹಾರ ಕೊರತೆ ಕಾರಣದಿಂದ ಪ್ರತಿ ಸೋಮವಾರ ರಾತ್ರಿ ಒಂದು ಹೊತ್ತು ಉಪವಾಸ ಮಾಡಲು ಕರೆ ಕೊಟ್ಟಿದ್ದರು. ನಮ್ಮ ಮನೆಯಲ್ಲಿನ ಎಲ್ಲರೂ ಇದನ್ನು ಬಹಳ ವರ್ಷ ಪಾಲಿಸಿದ್ದೆವು.

ಹಾಗಾಗಿ ಉಪವಾಸಕ್ಕೆ ಮಾನವನ ಆರೋಗ್ಯದ ವಿಚಾರದಲ್ಲಿ ಬಹಳ ಮಹತ್ವ ಇದೆ. ಈಗ ಆಧುನಿಕ ವೈದ್ಯಕೀಯದಲ್ಲೂ ಉಪವಾಸದ ಪ್ರಸ್ತಾಪ ಬೇರೆ ರೀತಿಯಲ್ಲಿ ಆಗುತ್ತಿದೆ. ಸಮಯ ಮಿತಿಯಲ್ಲಿ ಆಹಾರ ಸೇವನೆ (Time Restricted Eating) TRE ಎಂಬ ಇತ್ತೀಚಿನ ಈ ಪದ್ಧತಿಯಲ್ಲಿ ದಿನದ ೨೪ ಗಂಟೆಯಲ್ಲಿ ನಾವು ಸೇವಿಸುವ ಆಹಾರದ ಸಮಯವನ್ನು ಪ್ರತಿದಿನ ೮-೧೦ ಗಂಟೆಯ ಅವಧಿಯಲ್ಲಿ ಮಾತ್ರ ತೆಗೆದುಕೊಳ್ಳಬೇಕು. ಬೆಳಗಿನ ೯ ಗಂಟೆಗೆ ಬೆಳಗಿನ ತಿಂಡಿ ಸೇವಿಸಿದರೆ ಸಂಜೆ ೭ ಅಥವಾ ೭.೩೦ ರ ಒಳಗೆ ರಾತ್ರಿಯ ಊಟ ಮಾಡಬೇಕು. ಅಂದರೆ ಆಹಾರ ತೆಗೆದು ಕೊಳ್ಳುವಾಗ – ಊಟ, ತಿಂಡಿ, ಲಘು ಉಪಹಾರ, ಸಕ್ಕರೆಯೊನ್ನೊಳಗೊಂಡ ಪಾನೀಯ ಇವೆಲ್ಲವೂ ಈ ಅವಧಿಯಲ್ಲಿರಬೇಕು. ಉಳಿದ ಸಮಯ ದಲ್ಲಿ ಉಪವಾಸ – ಅಂದರೆ ಆಹಾರವನ್ನು ಸೇವಿಸಲೇಬಾರದು.

ಅಂದರೆ ಸುಲಭವಾಗಿ ಹೇಳುವುದಾದರೆ ಮಧ್ಯಂತರ ಉಪವಾಸ – ನಿರ್ದಿಷ್ಟ ಅವಧಿಯಲ್ಲಿ ಆಹಾರ ಸೇವನೆ-ಉಳಿದ ಸಮಯದಲ್ಲಿ ಆಹಾರ ತೆಗೆದು ಕೊಳ್ಳಲೇಬಾರದು. ಈ ರೀತಿಯಲ್ಲಿ ನಮ್ಮ ಆಹಾರ ಸೇವನೆಯ ಕ್ರಮವನ್ನು ಮಾಡುವುದರಿಂದ ದೇಹದ ಸಹಜವಾದ ವಿರಾಮ ಮತ್ತು ಚಟುವಟಿಕೆ ಗಳು ಉದ್ದೀಪನಗೊಂಡು ವ್ಯಕ್ತಿಯ ಆರೋಗ್ಯ ಗಮನಾರ್ಹವಾಗಿ ಉತ್ತಮಗೊಳ್ಳುತ್ತದೆ ಎಂದು ವಿಜ್ಞಾನಿಗಳ ಅಭಿಮತ. ಇಲಿಗಳಲ್ಲಿ ಸಮಯ ಮಿತಿಯಲ್ಲಿ ಆಹಾರ ಕೊಟ್ಟು ಇತ್ತೀಚೆಗೆ ಒಂದು ಪ್ರಯೋಗ ಮಾಡಲಾಯಿತು.

ಅದು ಮೆದುಳು, ಹೃದಯ, ಶ್ವಾಸಕೋಶ, ಯಕೃತ್ತು, ಕರುಳು – ಈ ಎಲ್ಲವೂ ಸೇರಿ ದೇಹದ ವಿವಿಧ ೨೨ ಅಂಗಾಂಶಗಳಲ್ಲಿ ಜೀನ್‌ಗಳ ಚಟುವಟಿಕೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನಲಾಗಿದೆ. ಈ ರೀತಿಯ ಜೀನ್ ಮೇಲೆ ಆಹಾರ ಕ್ರಮವು ಪ್ರಭಾವ ಬೀರುವುದಾದರೆ ಕ್ಯಾನ್ಸರ್‌ನಂತಹ ನಿರ್ದಿಷ್ಟ
ಕಾಯಿಲೆಯಲ್ಲಿ ಈ ಆಹಾರ ಕ್ರಮ ಯಾವ ರೀತಿಯಲ್ಲಿ ಪ್ರಭಾವ ಬೀರಬಹುದು ಎಂದು ನಾವು ಪ್ರತ್ಯೇಕವಾಗಿ ಯೋಚಿಸಿ ಬೇರೆ ರೀತಿಯ ಪ್ರಯೋಗ
ಮಾಡಬಹುದು ಎಂಬ ಸಾಧ್ಯತೆ ನಮ್ಮ ಮುಂದಿದೆ ಎಂದು ಅಮೆರಿಕದ ಕ್ಯಾಲಿಫೋರ್ನಿಯಾದ ಸಾಲ್ಕ್ ಇನ್ಸ್ಟಿಟ್ಯೂಟ್ ಆಫ್ ಬಯಲಾಜಿಕಲ್ ಸ್ಟಡೀಸ್‌ನ ಮುಖ್ಯಸ್ಥ ಪ್ರೊ | ಚಿದಾನಂದ ಪಂಡಾ ಅವರು ಅಭಿಪ್ರಾಯ ಪಡುತ್ತಾರೆ. ಈ ಅಧ್ಯಯನ ಇತ್ತೀಚಿನ ಸೆಲ್ ಮೆಟಬಾಲಿಸಂ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಸಮಯ ಮಿತಿ ಆಹಾರ ಸೇವನೆ:
ಪ್ರಯೋಜನಗಳೇನು?: ೨೦೨೨ ರಲ್ಲಿ ಕೈಗೊಂಡ ಒಂದು ವಿವರವಾದ ಅಧ್ಯಯನದಲ್ಲಿ ಸಮಯ ಮಿತಿ ಆಹಾರ ಸೇವನೆಯು ವ್ಯಕ್ತಿಯ ಸ್ಥೂಲಕಾಯ,
ಡಯಾಬಿಟಿಸ್ ಮತ್ತು ಹೃದಯದ ಕಾಯಿಲೆಗಳ ಮೇಲೆ ಗಮನಾರ್ಹವಾದ ಪ್ರಭಾವ ಬೀರಿ ಆಯಾಯ ಕಾಯಿಲೆಗಳು ಕಡಿಮೆ ಆಗುವಂತೆ ಮಾಡುತ್ತದೆ ಎಂದು ತಿಳಿಸಿದೆ. ಹಾಗೆಯೇ ಈ ಆಹಾರ ಕ್ರಮ ವ್ಯಕ್ತಿಯ ನಿದ್ರೆ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಇತ್ತೀಚೆಗೆ ಇಲಿಗಳಲ್ಲಿ ಕೈಗೊಂಡ ಮತ್ತೊಂದು ಅಧ್ಯಯನದಲ್ಲಿ ವಿವಿಧ ಕ್ಯಾನ್ಸರ್‌ಗಳು ಬರದಿರುವಂತೆ ಮಾಡುವಲ್ಲಿ ಇದು ಸಹಾಯಮಾಡುತ್ತದೆ ಎನ್ನಲಾಗಿದೆ. ದಿನದ ಯಾವುದೇ ಹೊತ್ತು ಆಹಾರ ತೆಗೆದುಕೊಳ್ಳುವುದಕ್ಕಿಂತ ಸಮಯ ಮಿತಿಯಲ್ಲಿ ಆಹಾರ ಸೇವಿಸುವುದರಿಂದ ಆರೋಗ್ಯದ ದೃಷ್ಟಿಯಿಂದ  ಗಮನಾರ್ಹ ವಾದ ಲಾಭವಿದೆ.

ಯಾವ ರೀತಿಯ ಆಹಾರ? ಎಷ್ಟು ಕ್ಯಾಲೊರಿ ಒಳಗೊಂಡಿದೆ? ಎಂಬ ಅಂಶಗಳು ಮೇಲಿನ ಆರೋಗ್ಯದ ಲಾಭಕ್ಕೆ ಅನ್ವಯಿಸುವುದಿಲ್ಲ. ಈ ರೀತಿಯ ಆಹಾರ ಸೇವನೆಯಿಂದ ದೇಹದ ಇನ್ಸುಲಿನ್ ರೆಸ್ಪಾನ್ಸ್ ಕಡಿಮೆಯಾಗಿ ವ್ಯಕ್ತಿಯ ಹಸಿವು ಕಡಿಮೆಯಾಗುತ್ತದೆ, ಹಾಗೆಯೇ ದೇಹದ ತೂಕವು ಕಡಿಮೆ ಯಾಗುತ್ತದೆ ಎಂದು ಆಹಾರ ವಿಜ್ಞಾನದ ಖ್ಯಾತ ತಜ್ಞ ಕಿಂಬರ್ಲಿ ಗೋಮರ್ ಅಭಿಪ್ರಾಯ ಪಡುತ್ತಾರೆ. ಇದು ಬಹಳ ಸ್ಥೂಲಕಾಯದ ವ್ಯಕ್ತಿಗಳಲ್ಲಿ ಪುನ ಪುನಃ ಕುರುಕಲು ತಿಂಡಿಯನ್ನು ತಿನ್ನುವ ಸಾಧ್ಯತೆ ತೆಗೆದುಹಾಕಿ ಅಂತಹ ವ್ಯಕ್ತಿಗಳು ತೂಕ ಇಳಿಸಲು ಬಹಳ ದೊಡ್ಡ ಅಸ್ತ್ರ ಎಂದು ಮೇಲಿನ ತಜ್ಞರ
ಅಭಿಮತ. ಹಾಗೆಯೇ ಡಯಾಬಿಟಿಸ್ ಇರುವ ವ್ಯಕ್ತಿಗಳು ಯಾವ ರೀತಿಯ ಆಹಾರ ಸೇವಿಸುತ್ತಾರೆ ಎಂಬುದೂ ಮುಖ್ಯವಾಗುತ್ತದೆ.

ಇಲಿಗಳಲ್ಲಿನ ಪ್ರಯೋಗ : ಪ್ರೊ.ಪಾಂಡಾ ಮತ್ತು ಅವರ ತಂಡ ಒಂದು ಗುಂಪಿನ ಇಲಿಗಳಿಗೆ ಯಾವಾಗ ಬೇಕಾದರೂ ಆಹಾರ ಸೇವಿಸಲು ಅವಕಾಶ ಕೊಟ್ಟರು. ಎರಡನೆಯ ಗುಂಪಿನ ಇಲಿಗಳಿಗೆ ದಿನದ ೯ ಗಂಟೆಯ ಅವಧಿಯಲ್ಲಿ ಮಾತ್ರ ಆಹಾರ ಕೊಟ್ಟರು. ಎರಡೂ ಗುಂಪುಗಳಿಗೆ ಒಂದೇ ರೀತಿಯ ಪಾಶ್ಚ್ಯಾತ್ಯರ ಒಂದೇ ಪ್ರಮಾಣದ ಕ್ಯಾಲೋರಿ ಇರುವ ಆಹಾರವನ್ನು ಒದಗಿಸಿದ್ದರು. ಏಳು ವಾರಗಳ ನಂತರ ದೇಹದ ೨೨ ಅಂಗಗಳು ಮತ್ತು ಮೆದುಳಿನಿಂದ ೨೪ ಗಂಟೆಯ ಅವಧಿಯಲ್ಲಿ ಪ್ರತಿ ಎರಡು ಗಂಟೆಗೊಮ್ಮೆ ಅಂಗಾಂಶಗಳ ತುಣುಕುಗಳನ್ನು ತೆಗೆದುಕೊಂಡರು.

ಮುಖ್ಯವಾಗಿ ಅವರು ಜಠರ (ಹೊಟ್ಟೆ), ಕರುಳು, ಲಿವರ್, ಶ್ವಾಸಕೋಶ, ಹೃದಯ, ಅಡ್ರಿನಲ್ ಗ್ರಂಥಿ, ಮೆದುಳಿನಲ್ಲಿನ ಹೈಪೋಥಲಾಮಸ್ ಬಾಗ, ಕಿಡ್ನಿ ಮತ್ತು ಮೆದುಳು – ಗಳಿಂದ ಅಂಗಾಂಶಗಳನ್ನು ತೆಗೆದುಕೊಂಡು ವಿಶ್ಲೇಷಣೆಗೆ ಒಳಪಡಿಸಿದರು. ಮೊದಲಿನ ಕಂಟ್ರೋಲ್ ಗುಂಪಿಗೆ ಹೋಲಿಸಿದರೆ ಈ ರೀತಿಯ ಸಮಯ ಮಿತಿ ಆಹಾರ ಸೇವನೆ ಮಾಡಿಸಿದ ಇಲಿಗಳಲ್ಲಿ ಅಂಗಾಶಗಳ ಜೀನ್‌ಗಳ ಹೊರಸೂಸುವಿಕೆ (ಜೀನ್‌ಗಳು ಪ್ರೋಟೀನ್‌ಗಳನ್ನು ಹುಟ್ಟು ಹಾಕುವ ವೇಗ) ಬದಲಾಗಿತ್ತು.

ಇದು ದೇಹದ ಸರ್ಕೇಡಿಯನ್ ರಿದಂ ಅನ್ನು ವಿಷದೀಕರಿಸಿತು. ಅಂದರೆ ದೇಹದ ಚಟುವಟಿಕೆ ಮತ್ತು ವಿರಾಮ – ಇವುಗಳಲ್ಲಿರುವ ಒಂದು ಹೊಂದಾಣಿಕೆ. ನಮ್ಮ ದೇಹದ ಎಲ್ಲ ಜೀವಕೋಶಗಳಲ್ಲಿಯೂ ಈ ಸರ್ಕೇಡಿಯನ್ ರಿದಂ ಇದೆ ಎಂದು ಪ್ರೊ.ಪಾಂಡಾ ಅಭಿಪ್ರಾಯ. ಈ ಸಮಯ ಮಿತಿಯ ಆಹಾರ ಸೇವನೆಯ ದೈನಂದಿನ ಸರ್ಕೇಡಿಯನ್ ರಿದಂ ನಲ್ಲಿ ಎರಡು ಮುಖ್ಯ ಅಲೆಗಳು (Waves) ಕಂಡು ಬಂದವು. ಉಪವಾಸದ ಸಮಯದಲ್ಲಿ ಒಂದು ಅಲೆ, ಆಹಾರ ಸೇವನೆಯ ತಕ್ಷಣದ ಕ್ಷಣದಲ್ಲಿ ಮತ್ತೊಂದು ಅಲೆ – ಇವು ದೇಹದ ಕ್ರಿಯೆಗಳಿಗೆ ಸಂಯೋಜನೆ ಮಾಡುವ ಒಂದು ವ್ಯವಸ್ಥೆ ಎಂದು ತಿಳಿಯಬಹುದು.

ಸಮಯ ಮಿತಿ ಆಹಾರ ಸೇವಿಸಿದ ಇಲಿಗಳಲ್ಲಿ ದೇಹದ ಉರಿಯೂತಕ್ಕೆ ಸಂಬಂಧಪಟ್ಟ ಜೀನ್‌ಗಳ ಚಟುವಟಿಕೆಯನ್ನು ಕಡಿಮೆ ಮಾಡಿತು. ಹಾಗೆಯೇ ಹಳೆಯ ಮತ್ತು ದೋಷಪೂರಿತ ಜೀವಕೋಶಗಳನ್ನು ಪುನರ್ ನವೀಕರಿಸುವ ಜೀನ್ ಗಳ ಚಟುವಟಿಕೆಯನ್ನು ಜಾಸ್ತಿ ಮಾಡಿತು. ಉಪವಾಸದ
ಸಮಯದಲ್ಲಿ ಜರುಗುವ ದೋಷಪೂರಿತ ಜೀವಕೋಶಗಳನ್ನು ರಿಪೇರಿ ಮಾಡುವ ಕ್ರಿಯೆಯು ಇಳಿವಯಸ್ಸಿನಲ್ಲಿ ಬರುವ ಹಲವು ಕಾಯಿಲೆಗಳನ್ನು
ಬರದಿರುವಂತೆ ಮಾಡುತ್ತದೆ, ಹಾಗೆಯೇ ಆರೋಗ್ಯಕರ ಜೀವನದ ಅವಽಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ಗಮನಿಸಿ ಸಾಮಾನ್ಯವಾಗಿ ಇಳೀ ವಯಸ್ಸಿನಲ್ಲಿ ಉರಿಯೂತದ ಪ್ರಮಾಣ ಜಾಸ್ತಿ ಆಗುತ್ತದೆ, ಹಾಗೆಯೇ ದೋಷಪೂರಿತ ಜೀವಕೋಶಗಳ ರಿಪೇರಿಯ ಕೆಲಸ ಕಡಿಮೆಯಾಗುತ್ತದೆ.

ಪಾಳಿಯಲ್ಲಿ ಕೆಲಸ ಮಾಡುವವರಿಗೆ ಲಾಭ: ಹಲವು ರೀತಿಯ ಕೆಲಸಗಾರರಿಗೆ ದಿನದ ವಿವಿಧ ಪಾಳಿ ಅಥವಾ ಶಿಫ್ಟ್ ನಲ್ಲಿ ಕೆಲಸ ಮಾಡುವುದು ಅನಿವಾರ್ಯ. ಸಾಮಾನ್ಯವಾಗಿ ಇಂತಹ ಕೆಲಸಗಾರರಲ್ಲಿ ಸ್ಥೂಲಕಾಯ, ಡಯಾಬಿಟಿಸ್, ಹೃದಯದ ಕಾಯಿಲೆಗಳು, ಕ್ಯಾನ್ಸರ್ ರೀತಿಯ ಕಾಯಿಲೆ ಗಳು ಬರುವ ಸಾಧ್ಯತೆ ಇತರರಿಗಿಂತ ಜಾಸ್ತಿ. ಮುಖ್ಯ ಕಾರಣ ಎಂದರೆ ಇಂತಹವರಲ್ಲಿ ಮೊದಲು ತಿಳಿಸಿದ ದೇಹದ ಸರ್ಕೇಡಿಯನ್ ರಿದಂ ತೀವ್ರ ರೀತಿಯಲ್ಲಿ ವ್ಯತ್ಯಾಸವಾಗುತ್ತದೆ. ಅಂತಹವರಲ್ಲಿ ಸಮಯ ಮಿತಿಯ ಆಹಾರ ಸೇವನೆ ಈ ಕೆಲಸಗಾರರ ಸರ್ಕೇಡಿಯನ್ ರಿದಂ ಅನ್ನು ಸರಿಪಡಿಸು ತ್ತದೆ. ಪರಿಣಾಮ ಅಂದರೆ ಅಂತಹ ಕೆಲಸಗಾರರ ಆರೋಗ್ಯ ಮತ್ತು ಮನಸ್ಥಿತಿ ಗಮನಾರ್ಹವಾಗಿ ಉತ್ತೇಜನಗೊಳ್ಳುತ್ತದೆ. ದಿನದ ೨೪ ಗಂಟೆಯ ಶಿಫ್ಟ್ ನಲ್ಲಿ ಕೆಲಸ ಮಾಡುವ ಅಗ್ನಿಶಾಮಕ ದಳದ ಕೆಲಸಗಾರರಲ್ಲಿ ಇತ್ತೀಚೆಗೆ ಒಂದು ಕ್ಲಿನಿಕಲ್ ಟ್ರಯಲ್ ಅನ್ನು ಪ್ರೊ. ಪಾಂಡಾ ಮತ್ತು ಅವರ ತಂಡ ಕೈಗೊಂಡಿತು. ಸಮಯ ಮಿತಿಯ ಆಹಾರ ಸೇವನೆ ಇಂತಹವರಲ್ಲಿ ದೈಹಿಕ ಮಾನಸಿಕ ಆರೋಗ್ಯವನ್ನು ಗಮನಾರ್ಹವಾಗಿ ವೃದ್ಧಿಸಿರುವುದು ಇವರಿಗೆ ಕಂಡು ಬಂದಿತು. ಅವರ ಪ್ರಕಾರ ಇದು ಎಲ್ಲರಿಗೂ ಅನ್ವಯವಾಗುತ್ತದೆ.

ಸಮಯ ಮಿತಿ ಆಹಾರ ಸೇವನೆಯ ಪ್ರಯೋಜನಗಳು: ಅಮೆರಿಕವನ್ನೂ ಸೇರಿ ಹೆಚ್ಚಿನ ಮುಂದುವರಿದ ದೇಶಗಳಲ್ಲಿ ಬಹಳಷ್ಟು ಜನರು ಒಂದು ರೀತಿಯ ಅನಿಯಮಿತ ಹಾಗೂ ಬೇಕಾಬಿಟ್ಟಿ ಆಹಾರ ಸೇವಿಸುವ ಕ್ರಮವನ್ನು ರೂಡಿಸಿಕೊಂಡಿದ್ದಾರೆ. ದಿನದ ೧೨ – ೧೪ ಗಂಟೆಯ ಅವಧಿಯಲ್ಲಿ ಊಟ, ಕುರು ಕುರು ಅಥವಾ ಕರಿದ ತಿಂಡಿ, ಸಿಹಿಯುಕ್ತ ಪಾನೀಯಗಳು – ಇವನ್ನೆಲ್ಲ ಮನಸ್ಸಿಗೆ ಬಂದ ಹಾಗೆ ಸೇವಿಸುತ್ತಾರೆ. ಅದರ ಬದಲು
ಸಮಯ ಮಿತಿಯ ಆಹಾರ ಸೇವನೆಯು ನಮ್ಮ ಕರುಳಿನ ಸೂಕ್ಷ್ಮ ಜೀವಿಗಳ ವ್ಯವಸ್ಥೆ, ಯಕೃತ್ತಿನ ಆರೋಗ್ಯ, ಗ್ಲುಕೋಸ್ (ಸಕ್ಕರೆಯ) ನಿಯಂತ್ರಣ,
ಮಾಂಸಖಂಡಗಳ ಕರ್ತವ್ಯ, ಗುಣಮಟ್ಟದ ನಿದ್ರೆ,ಮೆದುಳಿನ ಸೂಕ್ಷ್ಮತೆ, ಸೋಂಕು ರೋಗಗಳ ವಿರುದ್ಧ ಪ್ರತಿರೋಧ – ಇವೆಲ್ಲವನ್ನೂ ಉತ್ತಮ ಮಟ್ಟದಲ್ಲಿಡುತ್ತದೆ ಎಂದು ಪ್ರೊ.ಪಾಂಡಾ ಅಭಿಪ್ರಾಯಪಡುತ್ತಾರೆ.

ಹಾಗಾಗಿ ಈ ಕ್ರಮದಿಂದ ಪ್ರತಿಯೊಬ್ಬರೂ ದೀರ್ಘಕಾಲ ಆರೋಗ್ಯಯುತ ಜೀವನ ನಡೆಸಬಹುದು, ಹಾಗೆಯೇ ಅವರವರ ದೈಹಿಕ ಆರೋಗ್ಯದ
ಪರಮಾವಽ ಪ್ರಯೋಜನ ತೆಗೆದುಕೊಳ್ಳಬಹುದು. ಈ ಅಧ್ಯಯನದ ಸಂಶೋಧಕರು ಈ ಕೆಳಗಿನ ವಿಚಾರಗಳನ್ನು ತಮ್ಮ ಅಧ್ಯಯನದ ಕೊನೆಯ ಅಂಶಗಳಾಗಿ ನುಡಿಯುತ್ತಾರೆ. ಪ್ರಾಣಿಗಳಲ್ಲಿ ಕೈಕೊಂಡ ತಮ್ಮ ಈ ಅಧ್ಯಯನ ಮುಂದಿನ ಸಂಶೋಧನೆ ಮತ್ತು ಅಧ್ಯಯನಗಳಿಗೆ ಒಂದು ಮಾಹಿತಿಯ ಕಣಜವಾಗಲಿದೆ.

ಪ್ರಾಣಿಗಳಲ್ಲಿನ ದೇಹದ ನಾನಾ ತೊಂದರೆಗಳು, ನರಗಳಿಗೆ ಸಂಬಂಧಪಟ್ಟ ಡಿಜನರೇಟಿವ್ ಕಾಯಿಲೆಗಳು, ಕ್ಯಾನ್ಸರ್- ಇವುಗಳಲ್ಲಿ ಸಮಯ ಮಿತಿ ಆಹಾರ ಸೇವನೆಯ ಪರಿಣಾಮಗಳನ್ನು ಗಮನಿಸಿ ಭವಿಷ್ಯದಲ್ಲಿ ವಿವಿದ ರೀತಿಯ ಕ್ಲಿನಿಕಲ್ ಟ್ರಯಲ್ ಮತ್ತು ಅಧ್ಯಯನಗಳನ್ನು ಕೈಗೊಂಡು ಈ ಕ್ರಮದಿಂದ ದೇಹದ ವಿವಿಧ ದೀರ್ಘಕಾಲೀನ ಕಾಯಿಲೆಗಳು ಬರದಿರುವಂತೆ ಮಾಡಲು ಸಾಧ್ಯವೇ? ಈ ಎಲ್ಲ ವಿಚಾರಗಳ ಬಗ್ಗೆ ವಿವರವಾದ ಅಧ್ಯಯನಗಳ ಅಗತ್ಯವಿದೆ ಎಂದು ಪ್ರೊ. ಪಾಂಡಾರ ಅಭಿಪ್ರಾಯ.

ಅವರ ಪ್ರಕಾರ ಮನುಷ್ಯರಲ್ಲಿ ಸಮಯ ಮಿತಿ ಆಹಾರ ಸೇವನೆಯ ಲಾಭಗಳ ಬಗೆಗಿನ ೧೫೦ ಕ್ಕೂ ಹೆಚ್ಚಿನ ಸಂಖ್ಯೆಯ ಅಧ್ಯಯನಗಳು ಈಗಾಗಲೇ
ವಿವಿಧ ಹಂತದಲ್ಲಿವೆ. ಮಿತಿಮೀರಿದ ದೇಹದ ತೂಕ, ಟೈಪ್ ೨ ಡಯಾಬಿಟಿಸ್, ಏರು ರಕ್ತದೊತ್ತಡ, ರಕ್ತದಲ್ಲಿನ ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟ, ಹೃದಯದ ಕಾಯಿಲೆಗಳು, ವಿವಿಧ ಕ್ಯಾನ್ಸರ್ ಕಾಯಿಲೆಗಳು – ಇವುಗಳ ಮೇಲೆ ಸಮಯ ಮಿತಿ ಆಹಾರವು ಉಂಟು ಮಾಡುವ ಧನಾತ್ಮಕ ಪರಿಣಾಮ ಗಳನ್ನು ಪರಿಶೀಲಿಸಲು ಈ ಅಧ್ಯಯನಗಳು ನಡೆಯುತ್ತಿವೆ. ಅವುಗಳ ಪರಿಣಾಮಗಳನ್ನು ಅವಲಂಬಿಸಿ ಭವಿಷ್ಯದಲ್ಲಿ ಈ ಬಗೆಗೆ ಒಂದು ನಿರ್ದಿಷ್ಟ ಅಭಿಪ್ರಾಯ, ನಿಲುವುಗಳಿಗೆ ಬರಲು ಸಾದ್ಯ ಎಂದು ಹಲವು ವಿಜ್ಞಾನಿಗಳ ಅಭಿಮತ.