Wednesday, 11th December 2024

ಆಹಾರ ಪದ್ದತಿಯ ಬದಲಾವಣೆ ಅಷ್ಟು ಸುಲಭವಲ್ಲ

ಶಿಶಿರ ಕಾಲ

shishirh@gmail.com

ತಾಯಿನಾಡನ್ನು ಬಿಟ್ಟು ಮೊಟ್ಟಮೊದಲ ಬಾರಿಗೆ ಅನ್ಯದೇಶಕ್ಕೆ ವಲಸೆ ತೆರಳುವುದಿದೆಯಲ್ಲಾ ಅದೊಂಥರಾ ವಿಚಿತ್ರ ಅನುಭವ ನೀಡುವ ಬಾಬತ್ತು ಎಂದರೆ ತಪ್ಪಾಗಲಾರದು. ಕಾರಣ, ‘ವಿದೇಶಕ್ಕೆತೆರಳುತ್ತಿದ್ದೇನೆ’ ಎಂಬ ಉತ್ಸಾಹದ ಬುಗ್ಗೆ ಮನದಾಳದಲ್ಲಿ
ಚಿಮ್ಮುತ್ತಿದ್ದರೂ, ಅದರ ಜತೆಜತೆಗೇ ಅರೆಪಾವಿನಷ್ಟು ಬೇಸರ, ತಲ್ಲಣ, ಅನಿಶ್ಚಿತತೆಗಳೂ ಇಣುಕುತ್ತಿರುತ್ತವೆ. ಹಾಗೇ ಸುಮ್ಮನೆ ವಿಹರಿಸಿಕೊಂಡು ಬರಲೆಂದು ಪ್ರವಾಸಕ್ಕೆ ತೆರಳು ವವರಿಗೂ, ವಿದೇಶದಲ್ಲೇ ಒಂದಷ್ಟು ಕಾಲ ಠಿಕಾಣಿ ಹೂಡಲೆಂದು ಸಜ್ಜುಗೊಳ್ಳುತ್ತಿರು ವವರಿಗೂ ನಡುವೆ ತಯಾರಿಯಲ್ಲಿ ಬಹಳ ಅಂತರವಿರುತ್ತದೆ.

ಪ್ರವಾಸಕ್ಕೆಂದು ತೆರಳುತ್ತಿರುವವರಲ್ಲಿ ಆತುರತೆ ಒಂದೇ ಮಿಕ್ಕೆಲ್ಲಕ್ಕಿಂತ ಹೆಚ್ಚಿರುತ್ತದೆ. ಆದರೆ ವಿದೇಶದಲ್ಲಿ ನೆಲೆಸಲು ಹೊರಡು ವವರ ಕಥೆಯೇ ಬೇರೆ. ಅಂದಿಷ್ಟು ಆತಂಕ ಇರುತ್ತದೆ. ಈ ಆತಂಕಕ್ಕೆ ಕಾರಣ ಬೇರೆ ಬೇರೆ. ಮದುವೆಯಾಗದ ಕಿರಿ ವಯಸ್ಸಿನಲ್ಲಿ ಉನ್ನತ ಶಿಕ್ಷಣಕ್ಕೆ ಹೊರಡುವವರದ್ದು ಒಂದು ರೀತಿಯ ಆತಂಕ. ಇನ್ನು ಉದ್ಯೋಗ ಕ್ಕೆಂದು ಹೋಗುವವರದ್ದು, ಮದುವೆಯಾಗಿದೆಯೋ ಇಲ್ಲವೋ, ಮಕ್ಕಳಿದ್ದಾರೋ ಇಲ್ಲವೋ, ಅವರಿಗೆ ಆಗ ಎಷ್ಟು ವಯಸ್ಸು, ಮಕ್ಕಳಿಗೆ ಎಷ್ಟು ವರ್ಷ ಎಂಬಿತ್ಯಾದಿಗಳೆಲ್ಲ ವಿವಿಧ ಪ್ರಮಾಣದ ಆತಂಕ, ಅನಿಶ್ಚಿತತೆ ಮತ್ತು ಚಿಂತೆಗೆ ಕಾರಣವಾಗಿರುತ್ತವೆ.

ಮೊದಲ ಬಾರಿ ವಲಸೆ ಹೋಗುವವರು ಸಾಮಾನ್ಯವಾಗಿ ‘ಒಂದಿಷ್ಟು ವರ್ಷ ಇದ್ದು ವಾಪಸ್ ಬಂದುಬಿಡುತ್ತೇನೆ’ ಎಂದು ಹೇಳುವುದು, ಅದಕ್ಕೆ ‘ಇಲ್ಲ ಬಿಡಿ, ನೀವು ಒಮ್ಮೆ ಹೋದರೆ ವಾಪಸ್ ಬರುವುದಿಲ್ಲ ಎಂದು ನಮಗೆ ಗೊತ್ತು; ಹೋದವರು ನಿನ್ನಂಥ ವರೇ, ವಾಪಸ್ ಬಂದೇ ಇಲ್ಲ’ ಎಂದು ಒಂದು ನಾಲ್ಕು ಉದಾಹರಣೆಗಳು ಇವೆಲ್ಲ ಹೊರಟು ನಿಂತವರ ಜತೆ ನಡೆಯುವ ಚರ್ಚೆ, ಮಾತುಕತೆಗಳು. ಈ ಇನ್ನೊಂದು ದೇಶಕ್ಕೆ ವಲಸೆ ಹೋಗುವುದೆನ್ನುವುದಿದೆಯಲ್ಲ ಅದೊಂದು ಜೀವನದ ಬಹುದೊಡ್ಡ ಟ್ರಾನ್ಸಿಷನ್.

ವಿದೇಶಕ್ಕೆ ವಲಸೆ ಎನ್ನುವುದು ಆರಂಭದಲ್ಲಿ ಕೇವಲ ಸಂಭ್ರಮ. ಆದರೆ ಕ್ರಮೇಣ ಈ ಹೊರಡುವುದು ಎನ್ನುವುದು ಕಾರ್ಯ ರೂಪಕ್ಕೆ ಬರುತ್ತಿದ್ದಂತೆ ಇದರಿಂದಾಗಿ ಪಡೆಯುವುದೇನನ್ನು ಎನ್ನುವ ವಿಚಾರಕ್ಕಿಂತ ಕಳೆದುಕೊಳ್ಳುವುದೇನು ಎನ್ನುವ ವಿಚಾರ  ಮುನ್ನೆಲೆಗೆ ಬಂದು ಅದೊಂದು ರೀತಿಯ ಹೊಟ್ಟೆಯಲ್ಲಿ ಒಳಕಲ್ಲು ತಿರುಗಿಸಿದಂಥ ತೊಳಲಾಟಕ್ಕೆ ಕಾರಣವಾಗುತ್ತದೆ. ಇದರಲ್ಲಿ ತಮ್ಮದೆಲ್ಲವನ್ನು- ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ ಹೀಗೆ ಎಲ್ಲ ಸಂಬಂಧಿಕರನ್ನು, ಸ್ನೇಹಿತವರ್ಗವನ್ನು, ಮನೆ, ಕಾರು, ಬೈಕು, ಸೈಕಲ್ಲು, ಟಿವಿ ಹೀಗೆ ತೀರಾ ತನ್ನದೆಂದುಕೊಂಡ ವಸ್ತುಗಳನ್ನು, ಊರನ್ನು, ರಾಜ್ಯವನ್ನು, ದೇಶವನ್ನು ಬಿಟ್ಟು ಹೋಗ ಬೇಕೆನ್ನುವುದು ಅಕ್ಷರಶಃ ಚಿತ್ರಹಿಂಸೆ. ಈ ಹಿಂಸೆಯ ಅನುಭವಕ್ಕೆ ಬರುವಲ್ಲಿಯವರೆಗೆ ಹೊರಡುವುದು ಎನ್ನುವುದು ಪಕ್ಕಾ ಆಗಿ ಹೋಗಿರುತ್ತದೆ. ಅಲ್ಲಿಂದ ಹಿಂದೆ ಹೆಜ್ಜೆ ಇಡುವಂತಿಲ್ಲ.

ಸುಮಾರು ೧೫ ವರ್ಷದ ಹಿಂದೆ ಮೊದಲಬಾರಿ ವಿದೇಶಕ್ಕೆ ಹೊರಡಬೇಕಾಗಿ ಬಂದದ್ದು ತೀರಾ ಅನಿರೀಕ್ಷಿತ. ಬೆಂಗಳೂರಿನಲ್ಲಿದ್ದು ಕೊಂಡು ಮುಂಬೈ, ದೆಹಲಿ, ಕೋಲ್ಕತಾ, ಚೆನ್ನೆ ಎಂದೆಲ್ಲ ಕೆಲಸ ನಿಮಿತ್ತ ಓಡಾಡಿಕೊಂಡಿದ್ದ ಸಮಯ. ಹೀಗೆ ಮೊದಲ ಬಾರಿ ವಿದೇಶಕ್ಕೆ ಹೋಗಬೇಕು ಎಂದಾಗ ಅದು ಕೂಡ ಹೀಗೆಯೇ ಇನ್ನೊಂದು ಪ್ರವಾಸ, ಬ್ಯಾಗ್ ತುಂಬಿಸಿ ಹೋಗಿ ಬಂದರಾಯ್ತು ಎನ್ನುವ ಹಗುರ. ಬಟ್ಟೆಯನ್ನು ಸೂಟ್‌ಕೇಸ್ ನಲ್ಲಿ ತುಂಬಿಸಿಕೊಂಡು ಹೊರಟುನಿಲ್ಲುವಾಗ ಹೀಗೊಂದು ಉದ್ದೇಶಕ್ಕೆ, ಕೆಲಸಕ್ಕೆ ಹೋಗಬೇಕು, ಮಾಡಿ ಮುಗಿಸಿ ಬರಬೇಕು ಅದಷ್ಟೇ ತಲೆಯಲ್ಲಿತ್ತು. ಹೋಗಬೇಕು ಎಂದು ಒಪ್ಪಿಕೊಂಡ ೧೫-೨೦ ದಿನದಲ್ಲಿ ಹೊರ ಡುವ ದಿನ ಬಂದೇಬಿಟ್ಟಿತ್ತು.

ಹೊರಟದ್ದು ದಕ್ಷಿಣ ಅಮೆರಿಕದ ಉರುಗ್ವೆ ದೇಶಕ್ಕೆ. ಆಗ ಫುಟ್ಬಾಲ್ ಆಟವನ್ನು ತಿಳಿದಿದ್ದವರಿಗಷ್ಟೇ ಇಂಥದ್ದೊಂದು ದೇಶವಿದೆ
ಎಂದು ತಿಳಿದಿತ್ತು. ಉಳಿದವರು ಆ ದೇಶದ ಹೆಸರು ಕೇಳಿದ್ದರೂ ಅದು ಕೇಳಿದ ನೂರೆಂಟು ದೇಶಗಳ ಹೆಸರುಗಳಲ್ಲಿ ಒಂದು ಅಷ್ಟೇ. ಸಾಮಾನ್ಯವಾಗಿ ಯಾವುದೇ ದೇಶಕ್ಕೆ ಹೊರಟು ನಿಂತಲ್ಲಿ ಯಾರಾದರೂ ಮೊದಲೇ ಅಲ್ಲಿ ಹೋಗಿಬಂದವರನ್ನು ಸಂಪರ್ಕಿಸಿ ಅಲ್ಲಿನ ಬಗ್ಗೆ, ತಯಾರಿಯ ಬಗ್ಗೆ ಒಂದಿಷ್ಟು ಕೇಳಿ ತಿಳಿಯ ಬಹುದು. ಈಗಂತೂ ಭಾರತೀಯರಿಲ್ಲದ ದೇಶವೇ ಪ್ರಪಂಚದಲ್ಲಿಲ್ಲ ಎಂಬಂತಾಗಿದೆ. ಆದರೆ ಉರುಗ್ವೆಯಲ್ಲಿ ಆ ಸಮಯದಲ್ಲಿ ಇದ್ದ ಭಾರತೀಯರ ಸಂಖ್ಯೆ ಕೇವಲ ೧೨. ಅವರೆಲ್ಲ ನಮ್ಮ ಆಫೀಸ್‌ ನವರು. ಅದರಲ್ಲಿ ನನಗೆ ಪರಿಚಯವಿದ್ದವರು ಕೇವಲ ೪ ಮಂದಿ.

ಅವರಲ್ಲಿ ಕೇಳಿದಾಗ ‘ಏನಿಲ್ಲ, ಬಂದುಬಿಡು. ಬರುವಾಗ ಒಂದಿಷ್ಟು ಸಾಂಬಾರ್ ಪೌಡರ್, ಮಸಾಲೆಗಳನ್ನು ತುಂಬಿಸಿಕೊಂಡು ಬಂದರಾಯ್ತು’ ಎಂಬ ಒಂದೆರಡು ವಾಕ್ಯದ ಸೂಚನೆ. ಹೊರಟು ನಿಂತzಯ್ತು. ನನ್ನ ಅಮ್ಮನಿಗೆ ಒಂದೇ ಚಿಂತೆ. ‘ಅಲ್ಲಿ ಊಟಕ್ಕೆ ಏನು ಮಾಡಿಕೊಳ್ಳುತ್ತೀಯಾ?’. ‘ಈಗಾಗಲೇ ೧೨ ಮಂದಿ ಅಲ್ಲಿzರೆ. ಅವರಂತೂ ಜೀವಂತವಾಗಿದ್ದಾರೆ. ಹಾಗೆಯೇ, ಅವರಂತೆ ಏನೋ ಒಂದು ತಿಂದುಕೊಂಡು ಬದುಕುತ್ತೇನೆ’ ಎನ್ನುವ ಹುಂಬ ಉತ್ತರ. ಅಲ್ಲಿ ಹೋಗಿ ಇಳಿದಾಗ ಮೊದಲ ೧ ತಿಂಗಳು ಹೋಟೆಲ್‌ನಲ್ಲಿ ವಾಸ ಎಂದಿತ್ತು. ಮೊದಲ ಎರಡು ದಿನ ಎಲ್ಲಿಲ್ಲದ ಉತ್ಸಾಹ. ಮನೆಗೆ ಫೋನ್ ಮಾಡಿದಾಗ ಅಮ್ಮ ಕೇಳುತ್ತಿದ್ದು ದು ಮಾತ್ರ ಏನನ್ನು ತಿಂದೆ ಎಂದು. ಊಟ ಒಂದು ವಿಷಯವೇ ಅಲ್ಲ, ಬೇರೆ ಏನಾದರೂ ಕೇಳು ಹೇಳುತ್ತೇನೆ ಎನ್ನುವ ತಾತ್ಸಾರದ ಉತ್ತರ.

ಮೊದಲ ಒಂದು ವಾರ ಸಿಕ್ಕಿದ್ದನ್ನೆಲ್ಲ, ಬ್ರೆಡ್ ಪಾಸ್ತಾ ತಿಂದು ಕೊಂಡಿದ್ದಾಯ್ತು. ಅದಾದ ಮೇಲೆ ಜೀವನದಲ್ಲಿ ಆಹಾರದ ಪ್ರಾಮುಖ್ಯದ ವಾಸ್ತವ ಅನುಭವಕ್ಕೆ ಬಂದದ್ದು. ಒಂದು ವಾರದ ಒಳಗೆ ಜೀವನವೇ ಬುಡಮೇಲು ಆದಂತೆ. ಪ್ರತಿದಿನ ಸಂಜೆ ಉಳಿದುಕೊಂಡ ಹೋಟೆಲ್‌ನ ಊಟ ಸಿಗುತ್ತಿತ್ತು. ಅಲ್ಲಿ ಹತ್ತೆಂಟು ವಿಧದ ಆಹಾರವಿರುತ್ತಿತ್ತು. ಆದರೆ ಅದರಲ್ಲಿ ಏನನ್ನು ತಿನ್ನಬೇಕು ಎನ್ನುವುದೇ ಯೋಚನೆ. ಅದು ಕ್ರಮೇಣ ಚಿಂತೆಯಾಗಿ ಮಾರ್ಪಾಡಾಗಲು ಒಂದೆರಡು ದಿನ ಸಾಕಾಯಿತು. ಅದೇ ಬ್ರೆಡ್ಡು, ಅದೇ ಪಾಸ್ತಾ, ಸೂಪು. ಅಕ್ಷರಶಃ ಊಟಕ್ಕೆ ಹೋಗಬೇಕೆಂದರೆ ಕಣ್ಣಲ್ಲಿ ನೀರು ಬರಲು ಶುರುವಾಯಿತು. ಅಲ್ಲಿಯವರೆಗೆ ಜೀವನದಲ್ಲಿ ಊಟವೊಂದರ ಪ್ರಾಮುಖ್ಯವೇ ಗೊತ್ತಿರಲಿಲ್ಲ ಎನ್ನುವ ಜ್ಞಾನೋದಯದ ಸಮಯ. ಹತ್ತು ದಿನದ ನಂತರ ಒಬ್ಬ ಸ್ನೇಹಿತ ಅವರ ಮನೆಗೆ ಊಟಕ್ಕೆ ಕರೆದ. ಆ ದಿನ ಮಾತ್ರ ತೆಳ್ಳನೆಯ ಸಾರು ಮತ್ತು ಅನ್ನ ಮೃಷ್ಟಾನ್ನ ಭೂರಿಭೋಜನವೆನ್ನುವಂತೆ ಇಂದಿನ ಊಟಕ್ಕಿಂತ ನಾಲ್ಕು ಪಟ್ಟು ತಿಂದು ಬಂದzಯ್ತು. ಮತ್ತೆ ಮಾರನೆಯ ದಿನ ಊಟಕ್ಕೇನು ಮಾಡಬೇಕು ಎನ್ನುವ ಪ್ರಶ್ನೆ. ಯಾರಾದರೂ ಊಟಕ್ಕೆ ಕರೆದರೆ ಸಾಕು ಎನ್ನುವ ಸ್ಥಿತಿ.

ನಂತರದಲ್ಲಿ ಮನೆ ಬಾಡಿಗೆಗೆ ಪಡೆದಾಗಲೂ ಪ್ರತಿದಿನ ಅದೇ ಚಿಂತೆ. ಅಲ್ಲಿ ಸಿಗುತ್ತಿದ್ದ ಅಕ್ಕಿಯಲ್ಲಿ ಅನ್ನ ಮಾಡಿದರೆ ಅದು ಮುದ್ದೆ ಮುದ್ದೆ. ಟೊಮೇಟೊ ಮತ್ತು ಬಟಾಟೆ ಬಿಟ್ಟರೆ ಇನ್ಯಾವ ತರಕಾರಿಯನ್ನೂ ಮೊದಲು ನೋಡಿದ್ದಲ್ಲ. ಹೊಸ ಹೊಸ ಪ್ರಯೋಗ ಗಳು- ಅಡುಗೆ ಮನೆ ಪಾಕಶಾಲೆ ಅನ್ನಿಸಿದ್ದು ಆಗ. ಯಾವ ತರಕಾರಿಯಲ್ಲಿ ಸಾಂಬಾರ್ ಮಾಡಬಹುದು, ಯಾವುದು ನಮ್ಮಲ್ಲಿನ ಯಾವ ತರಕಾರಿಗೆ ಪರ್ಯಾಯ ಹೀಗೆ ಇದೇ ಪ್ರಯೋಗಗಳು, ಯೋಚನೆ. ಇಡೀ ದಿನ ಏನನ್ನು ತಿನ್ನಬೇಕು ಎನ್ನುವುದೇ ಬಗೆ ಹರಿಯದ ಪ್ರಶ್ನೆ. ಏನನ್ನು ತಿನ್ನಬೇಕು ಎಂದು ನೆನಪಿಸಿಕೊಳ್ಳುವುದೇ ಹಸಿವೆಯನ್ನು ಮೀರಿಸುವ ಹಿಂಸೆ. ಅಲ್ಲಿ ಒಂದು ಚೈನೀಸ್ ರೆಸ್ಟೋರೆಂಟ್ ಇತ್ತು.

ಆದರೆ ಆತನಿಗೆ ಸಸ್ಯಾಹಾರ ಎಂದರೆ ಏನೆಂದು ಹೇಳಿದರೆ ಅರ್ಥವಾಗುತ್ತಿರಲಿಲ್ಲ. ಭಾಷೆ ಬಾರದ, ನಮ್ಮವರಿಲ್ಲದ, ನಮ್ಮ
ತರಕಾರಿ, ಆಹಾರ ದೊರಕದ ದೇಶದಲ್ಲಿ ಎರಡು ತಿಂಗಳು ಕಳೆಯುವುದರೊಳಗೆ ಸಾಕೋ ಸಾಕು. ಹಸಿಮೆಣಸು ಬಿಡಿ, ಕೆಂಪು ಬ್ಯಾಡಗಿ ಮೆಣಸು ಕೂಡ ಸಿಗುತ್ತಿರಲಿಲ್ಲ. ಸೂಪರ್ ಸ್ಟೋರ್ ಒಂದರಲ್ಲಿ ಏನಾದರೂ ನಾವು ತಿನ್ನುವಂಥದ್ದು, ಅಡಿಗೆಗೆ ಬಳಸು ವಂಥದ್ದು ಹುಡುಕಬೇಕು ಎಂದು ಒಂದಿಡೀ ದಿನವನ್ನು ನಿಗದಿಪಡಿಸಿ ಮೀಸಲಿಟ್ಟೆವು. ಇಡೀ ದಿನ ಹುಡುಕಿದಾಗ ಸಿಕ್ಕ ಒಂದೇ ಒಂದು ಮೇಡ್ ಇನ್ ಇಂಡಿಯಾ ಎಂದರೆ ಅದು ಬೆಂಗಳೂರಿನಲ್ಲಿ ತಯಾರಾಗಿದ್ದ ಅಗರ್‌ಬತ್ತಿ. ಇದೇ ಸ್ಥಿತಿ ಬ್ರೆಜಿಲ್, ಚಿಲಿ, ಅರ್ಜೆಂಟಿನಾ ದೇಶದಲ್ಲೂ ಅನುಭವಕ್ಕೆ ಬಂತು.

ಇದೊಂದು ಸಾಕ್ಷಾತ್ಕಾರದ ಸಮಯ. ಮನುಷ್ಯನಿಗೆ ತನ್ನ ಆಹಾರದ ಮೌಲ್ಯ ಎಷ್ಟು ಎನ್ನುವುದು ನನ್ನ ಅನುಭವಕ್ಕೆ ಬಂದದ್ದು ಹೀಗೆ. ವಿದೇಶದ ಚಟವೆಲ್ಲ ಬಿಟ್ಟು ಹೋಗಿತ್ತು. ಅಲ್ಲಿಯವರೆಗೆ ಆಹಾರ ಎಂದರೆ ‘ಟೇಕ್ ಇಟ್ ಫಾರ್ ಗ್ರಾಂಟೆಡ್’. ಇಡ್ಲಿ-ದೋಸೆ-ಸಾಂಬಾರು ಇವೆಲ್ಲವಕ್ಕೆ ಅಷ್ಟೊಂದು ಮಹತ್ವವೇ ಕೊಟ್ಟಿರಲಿಲ್ಲ. ಉರುಗ್ವೆ, ಅದೊಂದು ವೆಜಿಟೇರಿಯನ್ ಎನ್ನುವ ವಿಚಾರವೇ ಇಲ್ಲದ ದೇಶ. ಒಮ್ಮೆ ಅಲ್ಲಿನ ಸ್ನೇಹಿತನ ಮನೆಯ ಪಾರ್ಟಿಯೊಂದಕ್ಕೆ ಹೋಗುವ ಸಂದರ್ಭ ಬಂತು. ಆತನಿಗೆ ನಾನು ಸಸ್ಯಾಹಾರಿ ಅಂತ ಬಹಳ ಕಷ್ಟ ಪಟ್ಟು ಸ್ಪ್ಯಾನಿಷ್‌ನಲ್ಲಿ ವಿವರಿಸಿ ಆಯ್ತು. ‘ಚಿಂತೆಪಡಬೇಕಿಲ್ಲ, ಅಲ್ಲಿ ಸಸ್ಯಾಹಾರದ ವ್ಯವಸ್ಥೆಯಿರುತ್ತದೆ, ಬಂದುಬಿಡಿ’ ಎಂಬ ಆಹ್ವಾನ.

ಹೋಗಿ ಭಾಗವಹಿಸಿ ಆಮೇಲೆ ಊಟಕ್ಕೆಂದು ತಯಾರಾಗಿ ನಿಂತರೆ ಅಲ್ಲಿ ಒಂದು ಮೂಲೆಯಲ್ಲಿ ಎರಡು ಬಟಾಟೆ, ಎರಡು ಟೊಮೇಟೊ ಮತ್ತೊಂದು ಚೀಸ್ ತುಂಡು ಒಂದು ಪ್ಲೇಟಿನಲ್ಲಿ ಬೇಯಿಸಿ ಇಟ್ಟಿದ್ದ. ಅದನ್ನು ನೋಡಿಯೇ ಹೊಟ್ಟೆ ತುಂಬಿ ಹೋಯಿತು. ಅಮೆರಿಕಕ್ಕೆ ಹೊರಟಾಗ ಈ ರೀತಿಯಾಗುವುದಿಲ್ಲ ಎನ್ನುವ ಭರವಸೆ ಸಿಕ್ಕಿತ್ತು. ಇಲ್ಲಿ ಭಾರತೀಯ ಅಂಗಡಿಗಳಿವೆ, ಎಲ್ಲವೂ ಸಿಗುತ್ತವೆ ಎಂದಾಯಿತು. ನಾನು ಅಮೆರಿಕಕ್ಕೆ ಬರುವಾಗ ಅದಾಗಲೇ ೩೦ ಲಕ್ಷಕ್ಕಿಂತ ಹೆಚ್ಚಿಗೆ ಭಾರತೀಯರು ಇಲ್ಲಿದ್ದರು. ಎಷ್ಟೇ ಹೇಳಿ ಕೇಳಿದ್ದರೂ ನನ್ನ ಆಹಾರದ ಮಟ್ಟಿಗಿನ ಆತಂಕ ಇದ್ದೇ ಇತ್ತು.

ಏಕೆಂದರೆ ಹಿಂದೆ ಆದ ಅನುಭವವೇ ಅಂಥದ್ದು. ಏನನ್ನಾದರೂ ಬದಲಿಸಿಕೊಳ್ಳಬಹುದು. ಆದರೆ ಆಹಾರ ಪದ್ಧತಿಯನ್ನು ಬದಲಿಸಿಕೊಳ್ಳಲು ಮನುಷ್ಯನಿಗೆ ಸಾಧ್ಯವೇ ಇಲ್ಲ, ಇಂಪಾಸಿಬಲ್. ಭಾರತೀಯ ಎ ಹೋದರೂ ಒಂದೆರಡು ದಿನದ ನಂತರ ಹುಡುಕುವುದು ಭಾರತೀಯ ರೆಸ್ಟೋರೆಂಟ್‌ಗಳನ್ನೇ. ವಿದೇಶದಲ್ಲಿ ಊರೊಂದರಲ್ಲಿ ನೆಲೆಸಬೇಕೆಂದರೆ ಹತ್ತಿರದಲ್ಲಿ ಎದರೂ ಭಾರತೀಯ ಕಿರಾಣಿ ಅಂಗಡಿ ಇದೆಯೇ ಎನ್ನುವುದು ಮೊದಲ ಪ್ರಶ್ನೆ. ಅಮೆರಿಕದ ಉದ್ದಗಲಕ್ಕೂ ಇಂದು ಭಾರತೀಯ ಕಿರಾಣಿ ಅಂಗಡಿಗಳಿವೆ. ಭಾರತೀಯರಿಲ್ಲದ, ಭಾರತೀಯ ರೆಸ್ಟೋರೆಂಟ್‌ಗಳಿಲ್ಲದ, ಕಿರಾಣಿ ಅಂಗಡಿಯಿಲ್ಲದ ಊರು ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು.

೫೦-೬೦ರ ದಶಕದಲ್ಲಿ ಇಲ್ಲಿಗೆ ವಲಸೆ ಬಂದವರ ಕಥೆ ನನ್ನ ಉರುಗ್ವೆ ಕಥೆಗಿಂತ ವಿಭಿನ್ನವಾಗಿರಲಿಲ್ಲ ಎನ್ನುವುದನ್ನು ಕೇಳಿ ಬ. ಆದರೆ ಕ್ರಮೇಣ ಅಮೆರಿಕವನ್ನು ಭಾರತೀಯರಿಗೆ ವಾಸಯೋಗ್ಯವಾಗಿ ಮಾಡಿದ್ದು ಇಲ್ಲಿ ಹುಟ್ಟಿಕೊಂಡ ಭಾರತೀಯ ಕಿರಾಣಿ ಅಂಗಡಿಗಳು. ಇಲ್ಲಿ ಇದೆಲ್ಲ ಕಿರಾಣಿ ಅಂಗಡಿಗಳಲ್ಲಿ ಮುಂಚೂಣಿಯಲ್ಲಿರುವುದು ಪಟೇಲ್ ಬ್ರದರ್ಸ್ ಎನ್ನುವ ಸರಣಿ ಅಂಗಡಿ.
ಪೂರ್ವ ಮತ್ತು ಮಧ್ಯ ಅಮೆರಿಕದ ಅತಿದೊಡ್ಡ ದಿನಸಿ ಅಂಗಡಿಗಳ ಚೈನ್ ಇದು. ಇದನ್ನು ಸ್ಥಾಪಿಸಿದ್ದು ಮುಫತ್ ಪಟೇಲ.
ಅವರು ಇಂಥದ್ದೊಂದು ಕಿರಾಣಿ ಸಾಮ್ರಾಜ್ಯವನ್ನು ಅಮೆರಿಕದಲ್ಲಿ ಕಟ್ಟಿ ನಿಲ್ಲಿಸಿದ್ದು ಒಂದು ಹರಸಾಹಸ.

ಮುಫತ್ ಗುಜರಾತ್‌ನಿಂದ ಅಮೆರಿಕಕ್ಕೆ ವಲಸೆ ಬಂದದ್ದು ೬೦ರ ದಶಕದಲ್ಲಿ. ಅವರದ್ದು ಕೃಷಿ ಕುಟುಂಬ, ಮಧ್ಯಮ ವರ್ಗ. ಮೆಹಸಾನಾ ಜಿಲ್ಲೆಯ ಚಿಕ್ಕ ಹಳ್ಳಿಯಲ್ಲಿ ಕೃಷಿ ಕೆಲಸ ಮಾಡುತ್ತ ಬೆಳೆದ ಮುಫತ್ ನಂತರದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್
ಮಾಡಲು ಅಮೆರಿಕಕ್ಕೆ ಬರುತ್ತಾರೆ. ಅತ್ಯಂತ ಬುದ್ಧಿವಂತರಾದ ಇವರು ಅರವತ್ತರ ದಶಕದಲ್ಲಿ ಆಗಿನ್ನೂ ರೇಸಿಸಂ ಇದ್ದ ಸಮಯ ದಲ್ಲಿ ಕಲಿಕೆ ಮುಗಿಸಿದ್ದೇ ಒಂದು ಸಾಹಸ. ಕಲಿಕೆ ಮುಗಿದು ಸ್ವಲ್ಪ ಕಾಲ ಉದ್ಯೋಗದಲ್ಲಿದ್ದರೂ ಮುಫತ್ ಹೇಳಿ ಕೇಳಿ ಗುಜರಾತಿ. ವ್ಯಾಪಾರ ವ್ಯವಹಾರ ಗುಜರಾತಿಗಳ ರಕ್ತದ ಹರಿಯುತ್ತಿರುತ್ತದೆ ಎನ್ನುವುದು ನಿಮಗೆ ಗೊತ್ತು.

ಭಾರತೀಯರು ಆಗ ತಾನೇ ಅಮೆರಿಕಕ್ಕೆ ವಲಸೆ ಬರುತ್ತಿದ್ದರು. ಇದೊಂದು ಒಳ್ಳೆಯ ವ್ಯಾಪಾರ ಅವಕಾಶ ಎಂದು ಮುಫತ್‌ಗೆ ಕಾಣಿಸಿತು. ಚಿಕಾಗೋದ ಡೆವೊನ್ ರಸ್ತೆಯಲ್ಲಿ ಮೊದಲ ಅಂಗಡಿ ತೆರೆದದ್ದೇ ಶುರು. ಅಲ್ಲಿಂದ ಮುಂದೆ ಅವರು ಹಿಂದಕ್ಕೆ ತಿರುಗಿ ನೋಡಲೇ ಇಲ್ಲ. ಇಂದು ಅವರು ಕಟ್ಟಿ ನಿಲ್ಲಿಸಿದ್ದು ೧೪೦ ಮಿಲಿಯನ್ ಡಾಲರ್ ವ್ಯವಹಾರ. ಚಿಕಾಗೋದಲ್ಲಿರುವಾಗ ಒಮ್ಮೆ ಮುಫತ್ ಪಟೇಲ್ ಅವರನ್ನು ಭೇಟಿಯಾಗುವ ಅವಕಾಶ, ಅವಶ್ಯಕತೆ ಬಂತು.

ಅಲ್ಲಿನ ಕನ್ನಡ ಕಾರ್ಯಕ್ರಮಕ್ಕೆ ಹಣ ಕೇಳಲು ಇಬ್ಬರು ಹೋಗಿದ್ದೆವು. ಅವರಿಗೆ ಈಗ ಸುಮಾರು ಎಂಬತ್ತು ವರ್ಷವಾಗಿ ರಬೇಕು. ಅಷ್ಟು ವಯಸ್ಸು, ಅಂತಸ್ತು ಇದ್ದರೂ ತೀರಾ ಅಸಾಮಾನ್ಯವೆನಿಸುವಷ್ಟು ಸರಳ ವ್ಯಕ್ತಿತ್ವ. ಸಮಾಜಕ್ಕೆ ಬೇಕಾಗಿ ಹಣವನ್ನು ಕೇಳಲು ಹೊರಟಾಗ ಒಂದಿಷ್ಟು ಅವಮಾನಕ್ಕೆ ತಯಾರಾಗಿಯೇ ಹೋಗಬೇಕು. ಆದರೆ ಮುಫತ್ ನಮ್ಮನ್ನು ನಡೆಸಿಕೊಂಡ ರೀತಿ ಮಾತ್ರ ಆಶ್ಚರ್ಯ ತಂದಿತ್ತು. ಭಾರತೀಯರ ಸಂಘ-ಸಂಸ್ಥೆಗಳೆಂದರೆ ಅವರಿಗೆ ಎಲ್ಲಿಲ್ಲದ ಅಭಿಮಾನ. ಕನ್ನಡ, ತೆಲುಗು, ತಮಿಳು, ಗುಜರಾತಿ ಹೀಗೆ ನೂರೆಂಟು ಸಂಘಗಳ ಪದಾಧಿಕಾರಿಗಳು ಅವರನ್ನು ಪ್ರತಿದಿನ ಭೇಟಿಯಾಗುತ್ತಾರೆ. ಅವರನ್ನೆಲ್ಲ ಮುಫತ್ ಖಾಲಿ ಕೈಯಲ್ಲಿ ಕಳುಹಿಸಿದ ಪ್ರಮೇಯವೇ ಇಲ್ಲವಂತೆ.

ಇರಲಿ, ವಿಷಯಾಂತರವಾಯಿತು. ಆ ದಿನ ಭೇಟಿಯಾದಾಗ ಅವರಲ್ಲಿ ಹಣ ಕೇಳುವುದಕ್ಕಿಂತ ಈ ಎಲ್ಲ ಅಂಗಡಿಯ ವ್ಯವಹಾರ ಗಳು ಹೇಗೆ ನಡೆಯುತ್ತವೆ ಎಂದು ಕುತೂಹಲಕ್ಕೆ ಕೇಳಿದ್ದೆ. ಅದೊಂದು ಹೊಸ ಲೋಕವನ್ನೇ ತೆರೆದಿಟ್ಟಿತ್ತು. ಸಾಮಾನ್ಯವಾಗಿ ಅಮೆರಿಕದಂದು ಅಂಗಡಿ ಇಟ್ಟು ಎಲ್ಲ ಸಾಮಾನನ್ನು ಭಾರತದಿಂದಲೇ ತಂದು ಮಾರುವುದು ಲಾಭದಾಯಕ ವ್ಯವಹಾರ ವಾಗುವುದು ಕಷ್ಟ. ಪಟೇಲ್ ಬ್ರದರ್ಸ್ ಶುರುವಿನಲ್ಲಿ ಕೇವಲ ಭಾರತೀಯ ದವಸ ಧಾನ್ಯಗಳನ್ನಷ್ಟೇ ಇಟ್ಟು ವ್ಯಾಪಾರ ಮಾಡುವ ವ್ಯವಹಾರವಾಗಿತ್ತು. ಕ್ರಮೇಣ ಭಾರತೀಯರ ಸಂಖ್ಯೆ ಹೆಚ್ಚಿದಂತೆಲ್ಲ ಭಾರತದ ತರಕಾರಿಗಳ ಅವಶ್ಯಕತೆ ಉಂಟಾಯಿತು.

ಆ ಕಾರಣದಿಂದ ಮುಫತ್ ಇಲ್ಲಿನ -ರಿಡಾ ಮತ್ತು ಮೆಕ್ಸಿಕೋ ದೇಶದ ಕೆಲವು ಕೃಷಿಕರನ್ನು ಸಂಪರ್ಕಿಸಿದರು. ಅವರಿಂದ ಭಾರತೀ ಯ ತರಕಾರಿಗಳನ್ನು ಬೆಳೆಸುವ ವ್ಯವಸ್ಥೆಯಾಯಿತು. ಪಟೇಲ್ ಬ್ರದರ್ಸ್‌ಗೆ ಕೆಲವು ವಿಶೇಷ ಹಣ್ಣು, ದವಸ ಧಾನ್ಯ ಇವೆಲ್ಲ
ಬರುವುದು ಭಾರತದಿಂದ. ತರಕಾರಿ ಮತ್ತು ಯಾವುದು ಬೇಗ ಕೆಡುವ ಆಹಾರ ವಸ್ತುಗಳಿವೆಯೋ ಅದೆಲ್ಲ ಭಾರತೀಯರಿಗೆಂದೇ ಇಲ್ಲಿಯೇ ಅಥವಾ ಪಕ್ಕದ ಮೆಕ್ಸಿಕೋ ದೇಶದಲ್ಲಿ ಬೆಳೆಸುವ ವ್ಯವಸ್ಥೆಯಾಯಿತು. ಇಂದು ಪಟೇಲ್ ಬ್ರದರ್ಸ್ ಅಂಗಡಿಗಳು ಅಮೆರಿಕದ ಉದ್ದಗಲದಲ್ಲ ಇವೆ.

ಮುಫತ್ ಅವರದ್ದು ಈಗ ನಿವೃತ್ತ ಜೀವನ. ಅವರ ಮಕ್ಕಳು ಇಲ್ಲಿಯವರೇ ಆದರೂ ಈ ಇಡೀ ವ್ಯವಹಾರವನ್ನು ಅತ್ಯಂತ
ಆಸ್ಥೆಯಿಂದ ನಡೆಸಿಕೊಂಡು ಹೋಗುತ್ತಿದ್ದಾರೆ. ಪಟೇಲ್ ಬ್ರದರ್ಸ್ ಅಂಗಡಿಗೆ -ಂಚೈಸಿಗಳಿಲ್ಲ. ಇರುವ ಎಲ್ಲ ೫೪ ಅಂಗಡಿಗಳನ್ನು ನಡೆಸುವವರು ಅವರ ಕುಟುಂಬದವರೇ. ಇದೊಂದು ಕುಟುಂಬ ಬ್ಯುಸಿನೆಸ್. ಇದೆಲ್ಲವನ್ನು ಕೇವಲ ವ್ಯವಹಾರ ಎಂದಷ್ಟೇ ನೋಡ ಬಹುದು. ಆದರೆ ಅದರಾಚೆ ಇಲ್ಲಿ ಗ್ರಹಿಸಬೇಕಾದದ್ದು ತುಂಬಾ ಇದೆ. ಅದೆಷ್ಟೋ ವಸ್ತುಗಳನ್ನು ಭಾರತದಿಂದ ಆಮದು ಮಾಡಿಕೊಳ್ಳುವುದರಿಂದ ಭಾರತದಲ್ಲಿ ಅದೆಷ್ಟೋ ಉದ್ಯೋಗ ಸೃಷ್ಟಿ ಮತ್ತು ಕೋಟಿ ಲೆಕ್ಕದಲ್ಲಿ ಆದಾಯ ಸಾಧ್ಯವಾಗಿದೆ.

ಪಟೇಲ್ ಬ್ರದರ್ಸ್ ಜತೆ ವ್ಯವಹರಿಸುವ ಅದೆಷ್ಟೋ ಕೃಷಿ ಕುಟುಂಬಗಳು ಗುಜರಾತಿನಲ್ಲಿವೆ. ಈ ವ್ಯವಸ್ಥೆಯಿಂದಾಗಿ ಭಾರತದ ಕರ್ನಾಟಕ ಕರಾವಳಿಯನ್ನೂ ಸೇರಿದಂತೆ ಹಲವು ರಾಜ್ಯಗಳ ಕೃಷಿಕರಿಗೆ ಇದರಿಂದ ಪರೋಕ್ಷ ಸಹಾಯವಾಗಿದೆ. ಇಂದು ಕರ್ನಾ ಟಕದ ಕರಾವಳಿಯಲ್ಲಿ ಬೆಳೆಯುವ ಅಡಿಕೆ, ಏಲಕ್ಕಿ ಅಮೆರಿಕಕ್ಕೆ ಪಟೇಲರ ಮೂಲಕ ತಲುಪುತ್ತದೆ. ಉದಾಹರಣೆಗೆ ಕುಮಟಾದಲ್ಲಿ ತಯಾರಾಗುವ ಅಡಿಕೆ ಹಾಳೆಯ ಬಟ್ಟಲು, ಬಿಜಾಪುರದ ದ್ರಾಕ್ಷಿ, ದಕ್ಷಿಣ ಕನ್ನಡದ ಗೋಡಂಬಿ, ಬೆಳಗಾವಿ ಕುಂದಾ, ಮಯ್ಯಾಸ್ ಸಾಂಬಾರ್ ಪೌಡರ್, ಕೇರಳದ ಪರೋಟಾ, ಅಮೂಲ್ ಐಸ್‌ಕ್ರೀಮ್ ಇವೆಲ್ಲ ಇಲ್ಲಿ ಸಿಗುತ್ತವೆ.

ಕರಾವಳಿಯ ಅಥವಾ ಕೆಲವು ತೀರಾ ಲೋಕಲ್ ಎನ್ನಿಸುವ ಬಾಳೆಕಾಯಿ ಹೂವು, ಅಂಬೆ ಕೊಂಬು, ಕೆಸುವಿನ ಸೊಪ್ಪು, ಪಂಜರ ಗಡ್ಡೆ ಹೀಗೆ ಹಲವು ಆಹಾರ ವಸ್ತುಗಳು ಕೆಲವೊಮ್ಮೆ ನಮ್ಮ ಬೆಂಗಳೂರಿನಲ್ಲಿ ಸಿಗದಿರಬಹುದು; ಅವು ಷಿಕಾಗೊ, ನ್ಯೂಜೆರ್ಸಿ ಹೀಗೆ ಅಮೆರಿಕದ ಉದ್ದಗಲದಲ್ಲೂ ಪಟೇಲರ ಅಂಗಡಿಗಳಲ್ಲಿ ಲಭ್ಯ.

ಈಗ ಅದೆಷ್ಟೋ ಈ ರೀತಿಯ ಅಂಗಡಿಗಳಿವೆ. ಅವೆಲ್ಲ ಅಂಗಡಿಗಳಲ್ಲಿ ಈ ಎಲ್ಲ ವಸ್ತುಗಳೂ ಸಿಗುತ್ತವೆ. ಆದರೆ ಪಟೇಲ್ ಬ್ರದರ್ಸ್ ಎನ್ನುವ ಒಂದು ಸಾಮ್ರಾಜ್ಯ ಸೃಷ್ಟಿಸಿದ ಹಾದಿ ಮತ್ತು ಅವಕಾಶವನ್ನೇ ಅವಲಂಬಿಸಿ ಇವೆಲ್ಲ ಬೆಳೆದದ್ದು. ಮುಫತ್ ಪಟೇಲ್ ಇಲ್ಲಿ ಕಟ್ಟಿದ್ದು ಸಾಮ್ರಾಜ್ಯ ಎನ್ನುವುದಕ್ಕಿಂತ ಒಂದು ಅವಶ್ಯಕ ವ್ಯವಸ್ಥೆ ಎನ್ನಬೇಕು. ಈ ಎಲ್ಲ ಅಂಗಡಿಗಳು ಅಮೆರಿಕವನ್ನು ಭಾರತೀ ಯರಿಗಷ್ಟೇ ವಾಸ ಯೋಗ್ಯವಾಗಿ ಸಿದ್ದಲ್ಲ.

ಇವು ಇಂದು ದಕ್ಷಿಣ ಏಷ್ಯಾ ದೇಶಗಳಾದ ಶ್ರೀಲಂಕಾ, ಬಾಂಗ್ಲಾ, ನೇಪಾಳ, ಪಾಕಿಸ್ತಾನ, ಮ್ಯಾನ್ಮಾರ್ ಇವೆಲ್ಲ ದೇಶಗಳಿಂದ ಬಂದ ವರ ಸೇವೆಗೆ ನಿಂತಿವೆ. ಒಂದು ವೇಳೆ ಇಂಥದ್ದೊಂದು ಕಿರಾಣಿ ಅಂಗಡಿಯ ವ್ಯವಸ್ಥೆಯಿಲ್ಲದಿರುತ್ತಿದ್ದರೆ ಅಮೆರಿಕಕ್ಕೆ ಈ ಪ್ರಮಾಣ ದಲ್ಲಿ ದಕ್ಷಿಣ ಏಷ್ಯಾದಿಂದ ಜನರು ವಲಸೆ ಬರುತ್ತಿರಲಿಲ್ಲವೇನೋ. ಭಾರತದಿಂದಾದಾಗುವ ರಫ್ತಿಗೆ ಈ ಅಂಗಡಿಗಳ ಕೊಡುಗೆ ಅಪಾರ. ಸ್ವಿಜರ್ಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್, ಕೆನಡಾ ಇ ಈ ರೀತಿಯ ಅದೆಷ್ಟೋ ಭಾರತೀಯ ಕಿರಾಣಿ ಅಂಗಡಿಗಳಿವೆ. ಅವರೆಲ್ಲರದು ವ್ಯಾಪಾರವೇ ಇರಬಹುದು, ಆದರೆ ಹಾಗೆ ನೋಡುವುದಕ್ಕಿಂತ ಅದರ ಆಚೆಯ ಅವಶ್ಯಕತೆಯನ್ನು ಮತ್ತು ಅದು ಸೃಷ್ಟಿಸಿದ ವಾಸಕ್ಕೆ ಬೇಕಾದ ಸಾಧ್ಯತೆಯನ್ನು ಇಲ್ಲಿ ಗುರುತಿಸಬೇಕು. ಇದೆಲ್ಲದರ ಜತೆ ಈ ದೇಶದವರು ಭಾರತೀಯ ಆಹಾರ ವನ್ನು, ಸಿಹಿ ತಿನಿಸನ್ನು, ತರಕಾರಿಗಳನ್ನು ಸವಿಯಲು ಕೂಡ ಒಂದು ಅವಕಾಶ ಇಲ್ಲಿ ಕಲ್ಪಿತವಾಗಿದ್ದು ಆ ಮೂಲಕ ಭಾರತೀಯ ಆಹಾರ ಸಂಸ್ಕೃತಿಯನ್ನು ಹರಡುವಲ್ಲಿ ಕೂಡ ಇವೆಲ್ಲ ಕಿರಾಣಿ ಅಂಗಡಿ ಗಳ ಬಹುದೊಡ್ಡ ಪಾತ್ರವಿದೆ.

ಇಂದು ಅದೆಷ್ಟೋ ಅಮೆರಿಕನ್ನರು ಮತ್ತು ಇಲ್ಲಿ ನೆಲೆಸಿರುವ ಉಳಿದ ದೇಶದವರು ಈ ಅಂಗಡಿಗಳಿಂದ ಸೃಷ್ಟಿಯಾದ ಸಾಧ್ಯತೆ ಯಿಂದಾಗಿಯೇ ಭಾರತೀಯ ಆಹಾರವನ್ನು ಸವಿಯುತ್ತಿದ್ದಾರೆ. ಅಮೆರಿಕನ್ ಅಡುಗೆಮನೆಯನ್ನು ಭಾರತೀಯ ಅಡುಗೆಗಳು ಪ್ರವೇಶಿಸಿವೆ. ಇದರಿಂದ ಕ್ರಮೇಣ ಇಲ್ಲಿನ ಅಮೆರಿಕನ್ ಅಂಗಡಿಗಳಲ್ಲಿ ಕೂಡ ಭಾರತೀಯ ತಿಂಡಿ, ತಿನಿಸು, ಫ್ರೋಜನ್ ಆಹಾರ ಇವೆಲ್ಲ ಲಭ್ಯವಾಗುವಂತಾಗಿದೆ. ಇದೆಲ್ಲ ಸಾಧ್ಯವಾಗಿದ್ದು ಈ ರೀತಿಯ ಕಿರಾಣಿ ಅಂಗಡಿಗಳಿಂದಾಗಿ.