Wednesday, 11th December 2024

ವಿದೇಶ ಪ್ರವಾಸ, ವಾಸ, ವಿಲಾಸ, ಕೈಲಾಸ

ರಾವ್ – ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ರಾ ಹುದ್ದೆಗಳನ್ನು ತುಂಬುವುದು ಸಂಸ್ಥೆಯ ಕಾರ್ಯದರ್ಶಿಗಿರುತ್ತದೆ. ಆದ್ದರಿಂದ ಮೇಲಾಧಿಕಾರಿಗಳನ್ನು ಒಲಿಸಿಕೊಳ್ಳುವ ಪ್ರವೃತ್ತಿ ಸಹಜವಾಗಿ ಎಲ್ಲರಲ್ಲೂ ಮೈಗೂಡಿರುತ್ತೆ. ಬೇರಾವುದೇ ಸರಕಾರಿ ಇಲಾಖೆಯಲ್ಲಿ ಬಳಸುವುದಕ್ಕಿಂತ ಹೆಚ್ಚು ಬೆಣ್ಣೆ ರಾ ನಲ್ಲಿ ಬಳಕೆಯಾಗು ತ್ತದೆ.

ಕಾಲ ಕೆಟ್ಹೋಯ್ತು ಅಂತ ಹೇಳೋದಿಕ್ಕೆ ಮನಸು ಒಪ್ಪುವುದಿಲ್ಲ. ಆಗಲೂ ಕೆಟ್ಟಿತ್ತು. ಈಗ ಇನ್ನೂ ಕೆಟ್ಟಿರಬಹುದು. ನಾನು ಕಾಲೇಜಲ್ಲಿ ಓದಬೇಕಾದರೂ ಇನ್ನೊಬ್ರಿಗೆ ಪರೀಕ್ಷೆ ಬರ್ಕೊಡೊ ಅಕ್ರಮ ನಡೀತಾ ಇತ್ತು. ಕ್ಲಾಸ್‌ಗೆ ಚಕ್ಕರ್ ಹೊಡ್ಕೊಂಡು ಪೋಲಿ ತಿರುಗುತ್ತಾ ಇದ್ದ ಅನುಕೂಲಸ್ಥ ಕುಟುಂಬದಿಂದ ಬಂದ ಕೆಲ ವಿದ್ಯಾರ್ಥಿಗಳು ತೇರ್ಗಡೆ ಆಗಲು ಸಾಧಾರಣ ಆರ್ಥಿಕ ಹಿನ್ನೆಲೆ ಯಿಂದ ಬಂದ ಚುರುಕು ಹುಡುಗರನ್ನು ಅವಲಂಬಿಸ್ತಾ ಇದ್ರು.

ಪ್ರಾಕ್ಸಿ ಬರಿಯೋದಕ್ಕೆ ಒಂದೊಂದು ಪೇಪರ್‌ಗೂ ನೂರು ರುಪಾಯಿ, ಪರೀಕ್ಷೆ ಬರೆದ ನಂತರ ಬಿಯರ್ ಮತ್ತು ಊಟ, ಸಿಕ್ಕಿಬಿದ್ದರೆ ಪೊಲೀಸರಿಂದ ರಕ್ಷಣೆ ಇವಿಷ್ಟೂ ಆಫರ್ ಇರ್ತಿದ್ವು. ಸಹಾಯ ಕೇಳುತ್ತಿದ್ದವರ ನಿರೀಕ್ಷೆಯೂ ಹೆಚ್ಚೇನಿಲ್ಲ. ಜ ಪಾಸಾದರೆ ಸಾಕು. – ಕ್ಲಾಸ್ ಬರಬೇಕೆಂದೇನಿಲ್ಲ. ಅಲ್ಪತೃಪ್ತರು. ನನ್ನ ಸಹಪಾಠಿಯೊಬ್ಬನ ಅಣ್ಣ ಅಂತಹ ವಿದ್ಯಾದಾನದಲ್ಲಿ ತೊಡಗಿಸಿಕೊಂಡಿದ್ದನು. ಡಿಗ್ರಿ ಮುಗಿಸಿದ ನಂತರ – ನೌಕರಿ ದೊರಕದಿದ್ದಕ್ಕಿರ ಬಹುದು – ಅವನಿಗೆ ಇದು ಜೀವನೋಪಾಯವೂ ಆಗಿತ್ತು. ನಾನವನನ್ನು ಒಮ್ಮೆ ಭೇಟಿ ಮಾಡಿದ್ದೆ. (ನನ್ನ ಪರವಾಗಿ ಪರೀಕ್ಷೆ ಬರೆಯಲು ಕೇಳಲಲ್ಲ!) ಒಮ್ಮೆ ಆ ವಿದ್ಯಾದಾನಿ ನಮ್ಮ ಕಾಲೇಜಿಗೆ ಬರುವವನಿದ್ದ. ಅವನು ತನ್ನ ಅಣ್ಣನೆಂದು ಯಾರಿಗೂ ಹೇಳಬಾರದೆಂದು ನನ್ನ ಸಹಪಾಠಿ ತಾಕೀತು ಮಾಡಿದ್ದ. ಯಾಕೆಂದು ಕೇಳಿದ್ದಕ್ಕೆ ಮೇಲಿನ ರೋಚಕ ವಿಷಯವನ್ನು ಗೋಪ್ಯವಾಗಿ ಹಂಚಿಕೊಂಡಿದ್ದ.

ಅವನು ಎಷ್ಟು ದಿನ ಈ ಉದ್ಯೋಗವನ್ನು ಮುಂದುವರೆಸಲು ಸಾಧ್ಯ, ಎಂಬ ಪ್ರಶ್ನೆ ಮನಸ್ಸಲ್ಲಿ ಮೂಡಿತ್ತು. ಅಬ್ಬಬ್ಬಾ ಎಂದರೆ ಒಂದು ಮೂರ್ನಾಲ್ಕು ವರ್ಷ. ಮುಖದಲ್ಲಿ ವಯಸ್ಸು ಎದ್ದುಕಾಣಲು ಶುರುವಾದರೆ, ಅವನು ವಿದ್ಯಾರ್ಥಿಯಲ್ಲ ಎಂಬುದು ವಿದಿತ ವಾಗುತ್ತದೆ. ಆಗ ಕಸುಬು ಮುಂದು ವರೆಸ ಲಾಗುವುದಿಲ್ಲ ಎಂದು ಹೊಳೆಯಿತಾದರೂ ಸಹಪಾಠಿಯೊಂದಿಗೆ ಪ್ರಸ್ತಾಪ ಮಾಡಲಿಲ್ಲ. ಸಹಪಾಠಿಯ ಕೋರಿಕೆಯನ್ನು ಅರೆಕ್ಷಣ ನಿರ್ಲಕ್ಷಿಸಿ ಒಂದು ತಪ್ಪು ಮಾಡಿಬಿಟ್ಟೆ. ಅವನನ್ನು ಬಹುವಾಗಿ ಇಷ್ಟ ಪಡುತ್ತಿದ್ದ ಮತ್ತೊಬ್ಬ ಸಹಪಾಠಿಗೆ ಅವನ ಅಣ್ಣನನ್ನು ದೂರದಿಂದಲೇ ತೋರಿಸಿ ಅವನ ಗುರುತನ್ನು ಹೇಳಿಬಿಟ್ಟೆ.

ಅವನು ಖುಷಿಯಾಗಿ, ಕುತೂಹಲದಿಂದ ದೂರದಲ್ಲಿ ಕಾಲೇಜಿನ ಪ್ರಾಂಗಣದಲ್ಲಿ ಮತ್ತೊಂದೆಡೆ ನಿಂತಿದ್ದ ಸಹಪಾಠಿಯ ಬಳಿ ಹೋಗಿ ಅಲ್ಲಿ ನಿಂತಿರು ವವನು ನಿನ್ನ ಅಣ್ಣನೇ ಎಂದು ಪ್ರಶ್ನಿಸಿದ. ಅವನಣ್ಣನ ಗುರುತನ್ನು ಬಹಿರಂಗಗೊಳಿಸಿದ್ದು ನಾನೇ ಎಂದು ಅಸಮಾಧಾನಗೊಂಡ ಸಹಪಾಠಿ ನನ್ನತ್ತ ತೀಕ್ಷ್ಣವಾಗಿ ದೃಷ್ಠಿ ಹಾಯಿಸಿ ಅವನಾರೊ ನನಗೆ ಗೊತ್ತಿಲ್ಲ, ನನಗೆ ಅಣ್ಣನೇ ಇಲ್ಲ ಎಂದು ತನ್ನ ಕರುಳ ಸಂಬಂಧವನ್ನು ನಿರಾಕರಿಸಿದ. ಆ ವಿಜಯೇಂದ್ರ ಹೇಳಿದಾಗ ನಂಗೂ ಅದೇ ಡೌಟ್ ಬಂತು. ಅವನ್ಯಾರೋ ಪ್ಯಾದೆ ಇದ್ದ್ಹಂಗೆ ಇದ್ದಾನೆ, ಅವನನ್ನ ನಿನ್ನಣ್ಣ ಅಂತ ಹೇಳ್ತಾನಲ್ಲ ಅಂತ ಅವನ ಅನುಯಾಯಿ ಹೇಳಿದಾಗ ಆ ಸಹಪಾಠಿಗೆ ತನ್ನ ಅಣ್ಣನ ಜತೆಗಿನ ಕೊಂಡಿಯನ್ನು ಶಾಶ್ವತವಾಗಿ ಕಳಚಿಕೊಳ್ಳುವ ಮನಸ್ಸಾಗಿದ್ದರೂ ಅಚ್ಚರಿಯಿಲ್ಲ!

ಭಾರತೀಯರೇ ಹಾಗೆ, ಭದ್ರತೆಯ ವಿಷಯದಲ್ಲಿ ನಾವು ಬಹಳಷ್ಟು ಮಂದಿ ನಿರ್ಲಕ್ಷ ತೋರುತ್ತೇವೆ ಅಥವಾ ತೋರಬೇಕಾದಷ್ಟು ಜಾಗ್ರತೆ ತೋರುವುದಿಲ್ಲ. ಅದಕ್ಕಾಗಿ ಆಗಾಗ್ಗೆ ಬೆಲೆ ತೆರುತ್ತಲೇ ಬಂದಿದ್ದೇವೆ. ನಮ್ಮ ಯೋಧರ ಮರಣಕ್ಕೆ ಕಾರಣವಾದ ಕಾರ್ಗಿಲ್ ಯುದ್ಧಕ್ಕೂ ಕಾರಣವಾದದ್ದು ಅಸಡ್ಡೆ. ಬೇಹು ಗಾರಿಕೆಯ ವೈಫಲ್ಯಕ್ಕೆ ಇದು ಕಾರಣವೆಂಬುದು ಸರ್ವವಿದಿತ. ಅಂತಹ ವೈಫಲ್ಯಗಳು ಸಂಭವಿಸುತ್ತಲೇ ಬಂದಿವೆ. ಅವುಗಳನ್ನು ಪಟ್ಟಿ ಮಾಡುವ ಬದಲು ಅವುಗಳಿಗೆ ಹೊಣೆ ಹೊರಬೇಕಾದ Research and Analysis Wing (RAW)  ವೈಫಲ್ಯಗಳ ಕೆಲವು ತುಣುಕುಗಳನ್ನು ಇತ್ತೀಚಿನ ಲೇಖನದಲ್ಲಿ ಪ್ರಸ್ತಾ ಪಿಸಿದ್ದೇನೆ. ಸಹಜವಾಗೇ, ಈ ಸಂಸ್ಥೆಯ ಗಣನೀಯ ಸಂಖ್ಯೆಯ ಸಿಬ್ಬಂದಿ ನೇಮಕವಾಗಿರುವುದು ವಿದೇಶಗಳಲ್ಲಿ. ನೇಮಕಾತಿಗೆ ಆಯ್ಕೆ ಮಾಡುವ ಸ್ಥಳಕ್ಕೂ ದೇಶದ ಅವಶ್ಯಕತೆಗಳಿಗೂ ಸಂಬಂಧವೇ ಇಲ್ಲ, ಎನ್ನುತ್ತಾರೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಅದರ ಬಹಳಷ್ಟು ಒಳಗುಟ್ಟುಗಳನ್ನೆಲ್ಲ ಮುಕ್ತವಾಗಿ ಪುಸ್ತಕ ರೂಪದಲ್ಲಿ ದಾಖಲಿಸಿರುವ ನಿವೃತ್ತ ಮೇಜರ್ ಜನರಲ್ ವಿ.ಕೆ ಸಿಂಗ್.

ಯೂರೋಪ್ ಮತ್ತು ಅಮೆರಿಕದಲ್ಲಿರುವ ಘಟಕಗಳ ಸಂಖ್ಯೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಘಟಕಗಳ ಸಂಖ್ಯೆಗಿಂತ ಹೆಚ್ಚು. (ಹಿಂದುಳಿದ) ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಗಳನ್ನು ಕಡೆಗಣಿಸಲಾಗಿದೆ. ಆಕರ್ಷಕ ದೇಶಗಳಲ್ಲಿ ನೇಮಕಗೊಳ್ಳಲು ಎಲ್ಲರಲ್ಲೂ ಉತ್ಕಟ ಬಯಕೆ. ಅದಕ್ಕೆ ಒಂದೇ ಕಾರಣ ಹೆಚ್ಚಿನ ಭತ್ಯೆಯ ಮೂಲಕ ಗಳಿಸಬಹುದಾದ ಹೆಚ್ಚುವರಿ ಸಂಪಾದನೆ. ನೇಮಕಗೊಂಡವರ ಪ್ರವಾಸ ಮತ್ತಿತರ ಏರ್ಪಾಡನ್ನು ಮಾಡುವುದರ ಬಹುತೇಕ ಸಿಬ್ಬಂದಿಯ ಹೆಚ್ಚಿನ ಸಮಯ ಕಳೆಯುತ್ತದೆ. ಅಧೀನ ಸಿಬ್ಬಂದಿಯೇ ತಮ್ಮ ಸೇವಾವಧಿಯಲ್ಲಿ ಇಂತಹ ಒಂದೋ ಎರಡೋ ಪೋಸ್ಟಿಂಗ್ ಪಡೆಯುತ್ತಾರೆ. ಮತ್ತೊಂದನ್ನು ಪಡೆಯುವುದಕ್ಕೆ ಹಪಹಪಿಸುತ್ತಾರೆ. ವಿದೇಶಿ ಪೋಸ್ಟಿಂಗ್‌ನಲ್ಲಿ ಸಿಗುವ ಹೆಚ್ಚಿನ ಭತ್ಯೆಯೇ ತಾವು ಅಲ್ಲಿಗೆ ಹೋಗಬಯಸುವ ಕಾರಣ ವೆಂದು ಅರ್ಜಿಯಲ್ಲಿ ನಮೂದಿಸುವ ಪ್ರಸಂಗಗಳೂ ಉಂಟು. ಗೃಹ ನಿರ್ಮಾಣಕ್ಕೋ, ಮಗಳ ಮದುವೆಗೋ ಹಣ ಒದಗಿಸುವ ಸಲುವಾಗಿ ಇಂತಹ ಅರ್ಜಿಗಳು ಗುಜರಾಯಿಸಲ್ಪಡುತ್ತವೆ.

ಬಹಳಷ್ಟು ಹಿರಿಯ ಅಧಿಕಾರಿಗಳು ಮೂರ್ನಾಲ್ಕು ದೇಶಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಈ ಹುದ್ದೆಗಳನ್ನು ತುಂಬುವುದು ಸಂಸ್ಥೆಯ ಕಾರ್ಯದರ್ಶಿಗಿದ್ದು ಮೇಲಾಧಿಕಾರಿಗಳನ್ನು ಒಲಿಸಿಕೊಳ್ಳುವ ಪ್ರವೃತ್ತಿ ಸಹಜವಾಗಿ ಎಲ್ಲರಲ್ಲೂ ಮೈಗೂಡಿರುತ್ತೆ. ಬೇರಾವುದೇ ಸರಕಾರಿ ಇಲಾಖೆಯಲ್ಲಿ ಬಳಸುವುದಕ್ಕಿಂತ ಹೆಚ್ಚು ಬೆಣ್ಣೆ ರಾ ನಲ್ಲಿ ಬಳಕೆಯಾಗುತ್ತದೆ. ವಿದೇಶಿ ನೇಮಕಾತಿಯಲ್ಲಷ್ಟೇ ಅಲ್ಲದೆ ವಿದೇಶಿ ಪ್ರವಾಸಗಳಿಗೆ ಅನುಮತಿ ನೀಡುವುದಕ್ಕೂ ಕಾರ್ಯದರ್ಶಿಗೆ
ಸರ್ವಾಧಿಕಾರ. ಯಾವುದೇ ಅಧಿಕಾರಿಯನ್ನು ಯಾವುದೇ ದೇಶಕ್ಕೆ ಅಧಿಕೃತ ಪ್ರವಾಸನಿಮಿತ್ತ ಕಳಿಸಲು ಆತ(ಕೆ) ಸರ್ವಶಕ್ತ(ಕ್ತೆ). ಹಿರಿಯ ಅಧಿಕಾರಿ ಗಳನೇಕರು ಪ್ರತಿವರ್ಷ ಕಡಿಮೆಯೆಂದರೂ ಆರು ಬಾರಿ ವಿದೇಶ ಸುತ್ತುತ್ತಾರೆ.

ಪ್ರಬಲ ಕೇಂದ್ರ ಸಚಿವರಿಗೂ ವಿದೇಶ ಪ್ರವಾಸ ಇಷ್ಟು ಸಲಿಸಲ್ಲ, ಪ್ರಧಾನಿ ಕಚೇರಿಯಿಂದಲೂ, ಹಣಕಾಸು, ಮತ್ತು ವಿದೇಶಾಂಗ ಸಚಿವಾಲಯ ಗಳಿಂದಲೂ ಅನುಮತಿ ಪಡೆಯಬೇಕು. ವಿಕೆ ಸಿಂಗ್ ಒಮ್ಮೆ ಅಧಿಕೃತ ವಿದೇಶಿ ಪ್ರವಾಸದಿಂದ ಹಿಂತಿರುಗಿ ಹೋಟೆಲ್‌ನಲ್ಲಿ ತಂಗಿದ್ದಕ್ಕೆ ಮತ್ತು ಅಲ್ಲಿಂದ
ಕಚೇರಿಗೆ ಮಾಡಿದ ಫೋನ್ ಕರೆಗಳ ಖರ್ಚುಗಳ ಮರುಪಾವತಿಗಾಗಿ ಕೋರಿಕೆ ಸಲ್ಲಿಸುತ್ತಾರೆ. ತಾಂತ್ರಿಕ ಕಾರಣಗಳಿಗೆ ಅದನ್ನು ಅನುಮೋದಿಸ ಲಾಗುವು ದಿಲ್ಲ. ಆ ಕುರಿತು ಸಂಸ್ಥೆಯ ಜಂಟಿ ಕಾರ್ಯದರ್ಶಿಗೆ ದೂರಿದಾಗ ಆತ ಮುಗುಳ್ನಗೆಯೊಂದಿಗೆ ಉತ್ತರಿಸುತ್ತಾರೆ, ‘ಅದಕ್ಕೇಕೆ ತಲೆಕೆಡಿಸಿ ಕೊಳ್ಳುತ್ತೀರಿ. ನಿಮ್ಮನ್ನು ಮತ್ತೊಂದು ಪ್ರವಾಸಕ್ಕೆ ಕಳಿಸುತ್ತೇನೆ.

ನಿಮ್ಮ ನಷ್ಟವನ್ನು ಅದು ತುಂಬಿಕೊಡುತ್ತದೆ.’ ಬೇಹುಗಾರಿಕಾ ಜಗತ್ತಿನಲ್ಲಿ ಹಲವಾರು ರೋಚಕ ಕಥೆಗಳಿವೆ. ಅವುಗಳನ್ನು ಕೇಳಲು ಅಮೆರಿಕ, ಬ್ರಿಟನ್, ರಷ್ಯಾಗೆ ಹೋಗಬೇಕಿಲ್ಲ. ನಮ್ಮವರೇ ಆಗಿಯೂ, ನಮ್ಮವರಲ್ಲದ ರವೀಂದ್ರ ಕೌಶಿಕರ ವೃತ್ತಿಜೀವನ ಮೈ ಝಂ ಎನಿಸುವಂತಹದ್ದು. ಪ್ರಾಣವನ್ನು ಪಣಕ್ಕಿಟ್ಟು ವೈರಿಯ ವಿರುದ್ಧ ಸೆಣಸಾಡುವ ಯೋಧರ ತ್ಯಾಗ-ಸೇವೆಗಳು ಒಂದು ಬಗೆಯದ್ದು. ವೈರಿಪಾಳಯದ ನೆಲೆಸಿ, ಅಲ್ಲಿಂದ ಮಾತೃಭೂಮಿಗೆ ಉಪಯುಕ್ತ ಮಾಹಿತಿ ಸಲ್ಲಿಸುವ ಎದೆಗಾರಿಕೆ ತೋರುತ್ತಾ, ಅನಿಶ್ಚತತೆಯ ಬದುಕು ನಡೆಸುವ ಗೂಢಚಾರರ ಬದುಕು ಮತ್ತೊಂದು ಬಗೆ.

ಜನಸಾಮಾನ್ಯರಾರೂ ಊಹಿಸಲಾರದ ರೀತಿಯಲ್ಲಿ ಸಾಹಸ ಮೆರೆದ ರವೀಂದ್ರ ಕೌಶಿಕ್ ಒಂದು ದಂತಕಥೆ. ರಾಜಾಸ್ತಾನದ ಶ್ರೀಗಂಗಾನಗರದ ಬ್ರಾಹ್ಮಣ ಕುಟುಂಬ ದಲ್ಲಿ ಜನಿಸಿದ (1952) ಕೌಶಿಕ್ ಅಭಿನಯ ಕಲೆಯನ್ನು ಮೈಗೂಡಿಸಿಕೊಂಡಿದ್ದರು. ವಿದ್ಯಾರ್ಥಿ ದೆಶೆಯಲ್ಲಿ, ಲಕ್ನೋ ನಲ್ಲಿ ನಡೆದ ನಾಟಕ ಸ್ಪರ್ಧೆಯೊಂದರಲ್ಲಿ ಅವರ ಅಭಿನಯ ಸಭಾಂಗಣದಲ್ಲಿ ಉಪಸ್ಥಿತರಿದ್ದ ‘ರಾ’ ಅಧಿಕಾರಿಗಳ ಗಮನ ಸೆಳೆಯುತ್ತದೆ. ಬೇಹುಗಾರಿಕಾ ಜಗತ್ತಿಗೆ ಪ್ರವೇಶಿಸಲು   ಆಮಂತ್ರಣ ಸಿಗುತ್ತದೆ. ಪಾಕಿಸ್ತಾನವನ್ನು 1971ರ ಸಮರದಲ್ಲಿ ಬಗ್ಗು ಬಡಿದಿದ್ದ ಭಾರತ ಸೈನಿಕರ ಪರಾಕ್ರಮದಿಂದ ಸ್ಪೂರ್ತಿ ಪಡೆದಿದ್ದ ಕೌಶಿಕ್ ಅದನ್ನು ಸ್ವೀಕರಿಸಲು ಹಿಂದುಮುಂದೆ ನೋಡುವುದಿಲ್ಲ.

ದೆಹಲಿಯಲ್ಲಿ ಎರಡು ವರ್ಷ ಸಮಗ್ರ ತರಬೇತಿ ಪಡೆದ ಕೌಶಿಕ್ ಪಾಕಿಸ್ಥಾನದಲ್ಲಿ ಬೇಹುಗಾರಿಕೆಗಾಗಿ ತೆರಳುವ ಮೊದಲು ಉರ್ದು ಕಲಿಯುತ್ತಾರೆ. ಪಂಜಾಬಿ ಮುಂಚೆಯೇ ಅವರಿಗೆ ತಿಳಿದಿರುತ್ತದೆ. ಇಸ್ಲಾಂ ಧರ್ಮದ ಆಚಾರವಿಚಾರಗಳನ್ನು ಅಭ್ಯಾಸ ಮಾಡುವ ಕೌಶಿಕ್ ಸುನ್ನತಿಯನ್ನೂ ಮಾಡಿಸಿ ಕೊಳ್ಳುತ್ತಾರೆ. ನಬಿ ಅಹ್ಮದ್ ಶರ್ಕೀ ಎಂಬ ಹೊಸ ಹೆಸರಿನಲ್ಲಿ ಕರಾಚಿಗೆ ತೆರಳುವ ಅವರು ಅಲ್ಲಿ ಕಾನೂನು ಪದವಿಯನ್ನು ಪಡೆದು ಪಾಕಿಸ್ತಾನದ ಸೈನ್ಯದಲ್ಲಿ ಅಧಿಕಾರಿಯಾಗಿ ನೇಮಕವಾಗುತ್ತಾರೆ. ಇದನ್ನು ಓದುವಾಗ ನಿಮ್ಮ ರೋಮಗಳು ಸೆಟೆದು ನಿಲ್ಲದಿದ್ದರೆ, ನೀವು ವಿಚಾರವಾದಿಯೇ ಸರಿ. ಸ್ಥಳೀಯ ದರ್ಜಿಯ ಮಗಳಾದ ಅಮಾನತ್ ಎಂಬುವಳನ್ನು ಮದುವೆಯೂ ಆಗುತ್ತಾರೆ.

1979ರಿಂದ ನಾಲ್ಕು ವರ್ಷ ಭಾರತಕ್ಕೆ ಅಮೂಲ್ಯವಾದ ಮಾಹಿತಿ ಒದಗಿಸುವ ನಬಿಯ ಅದೃಷ್ಟ 1983ರಲ್ಲಿ ಕೈಕೊಡುತ್ತದೆ. ರಾ ನಿಂದ ಪಾಕಿಸ್ತಾನಕ್ಕೆ ನಿಯೋಜಿತನಾಗುವ ಇನ್ಯಾತ್ ಮಸೀ ಎಂಬ ಕನಿಷ್ಠ ದರ್ಜೆಯ ಗುಪ್ತಚಾರಿ ಐಎಸ್ ಎಸ್‌ಗೆ ಸಿಕ್ಕಿಬಿದ್ದು ನಬಿಯ ನಿಜರೂಪವನ್ನು ಹೊರಗೆಡವಿ ಬಿಡುತ್ತಾನೆ. ಅಲ್ಲಿಂದ ಶುರುವಾಗುತ್ತದೆ ಭಾರತದ ಸುಪುತ್ರನ ಚಿತ್ರಹಿಂಸೆ. ಹದಿನಾರು ವರ್ಷ ರೌರವ ನರಕವನ್ನನುಭವಿಸುತ್ತಾ ಜೀವ ಸವೆಸುತ್ತಾರೆ. ಭಾರತದಲ್ಲಿನ ತಮ್ಮ ಕುಟುಂಬಕ್ಕೆ ಬರೆದು ರವಾನಿಸಿದ ಗೋಪ್ಯ ಪತ್ರಗಳಲ್ಲಿ ಭಾರತದಂತಹ ಬೃಹತ್ ದೇಶಕ್ಕಾಗಿ ತ್ಯಾಗಮಾಡಿದವರಿಗೆ ಸಿಗೋದು
ಇದೇನೇ? ಎಂದು ವಿಷಣ್ಣರಾಗಿ ಬರೆಯುತ್ತಾರೆ. ಗೂಢಚಾರರು ಸಿಕ್ಕಿಬಿದ್ದ ತಕ್ಷಣ ಅವರನ್ನು ಬೇಹುಗಾರಿಕೆಗೆ ಕಳಿಸಿದ ದೇಶ ಮಾಡುವ ಮೊದಲ ಕೆಲಸ ಅವರಿಂದ ದೂರವಾಗುವುದು, ಅವರಾರೋ ಗೊತ್ತಿಲ್ಲವೆಂಬಂತೆ ಹೇಳಿಕೆ ನೀಡುವುದು. (ಕುಲಭೂಷಣ್ ಜಾಧವರ ವಿಚಾರ ಬೇರೆ.) ಕ್ರಿಕೆಟ್ ನಲ್ಲಿ ಮೈ ಮರೆಯುವ ನಾವು ಅದಾವನೋ ಮುನ್ನೂರು ರನ್ ಹೊಡೆದದ್ದಕ್ಕೆ ಮುಲ್ತಾನಿನ ಸುಲ್ತಾನ್ ಎಂದು ಬಿರುದು ನೀಡುತ್ತೇವೆ. ದೇಶಕ್ಕಾಗಿ ಮುಲ್ತಾನಿನ ಜೈಲಿನಲ್ಲಿ ವೀರಮರಣ ವನ್ನಪ್ಪಿದ ರವೀಂದ್ರ ಕೌಶಿಕ್ ಮೂಲೆಗುಂಪಾಗುತ್ತಾರೆ.

ಅಂದ ಹಾಗೆ, 1. ಕೌಶಿಕ್ ರಾ ಗೆ ಸೇವೆ ಸಲ್ಲಿಸಲು ಮುಂದಾಗಿದ್ದು ಹೊಟ್ಟೆಪಾಡಿಗಲ್ಲ. 2. ನಾನು ಇದನ್ನು ಬರೆದದ್ದು ಅವರ ಜಾತಿಯ ಕಾರಣಕ್ಕೂ ಅಲ್ಲ.