Monday, 9th December 2024

ಆಚರಣೆಗೆ ಸೀಮಿತವಾಗುತ್ತಿವೆ ಏಕೆ ವನಮಹೋತ್ಸವ

ಅಭಿವ್ಯಕ್ತಿ

ಚಂದ್ರಶೇಖರ ಬೇರಿಕೆ

ಭೂಮಂಡಲದ ಸಂರಚನೆ ಮತ್ತು ವಿಶ್ವದ ಅಸ್ತಿತ್ವದಲ್ಲಿ ಪ್ರಮುಖ ಪಾತ್ರ ವಹಿಸುವ ಪರಿಸರ ಎಂಬ ವ್ಯವಸ್ಥೆಯಲ್ಲಿ ಅರಣ್ಯದ ಪಾತ್ರ ನಿರ್ಣಾಯಕವಾಗಿದ್ದು, ಜಗತ್ತಿ ನಲ್ಲಿ ಬೆಲೆ ಕಟ್ಟಲಾಗದ ಪ್ರಾಕೃತಿಕ ಸಂಪತ್ತಾಗಿದೆ. ನಾಗರಿಕತೆಯ ಹಂತದಿಂದ ಪ್ರಾರಂಭವಾದ ಮಾನವನ ದುರಾಸೆಯ ಫಲದಿಂದ ಅರಣ್ಯ ಸಂಪತ್ತು ಅತೀ ವೇಗವಾಗಿ ನಶಿಸುತ್ತಿದೆ.

ಸ್ಪರ್ಧಾತ್ಮಕ ಜಗತ್ತಿನಲ್ಲಿ ದೇಶದ ಆರ್ಥಿಕತೆಯನ್ನು ಜಾಗತಿಕ ವ್ಯಾಪಾರ ವಹಿವಾಟಿಗೆ ಮತ್ತು ಆರ್ಥಿಕ ಪ್ರಬಲ ರಾಷ್ಟ್ರಗಳಿಗೆ ಸರಿ ಸಮಾನವಾಗಿ ಕೊಂಡೊಯ್ಯಲು
ಅಭಿವೃದ್ಧಿ ಕಾರ್ಯಗಳು ಬಹಳ ಅಗತ್ಯ. ರಾಷ್ಟ್ರದ ಹಿತಕ್ಕಾಗಿ ಅಭಿವೃದ್ಧಿ ಕಾರ್ಯಗಳು ಎಷ್ಟು ಮುಖ್ಯವೋ ಮಾನವ ಸಹಿತ ಜೀವ ಸಂಕುಲಗಳ ಉಳಿವಿಗಾಗಿ
ಅರಣ್ಯದ ರಕ್ಷಣೆಯೂ ಅಷ್ಟೇ ಮುಖ್ಯ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಮರಗಳು, ಅರಣ್ಯಗಳು ನಾಶ ಹೊಂದುತ್ತಿರುವ ಪ್ರಮಾಣಕ್ಕೆ ಅನುಗುಣವಾಗಿ ಅರಣ್ಯದ ಅಭಿವೃದ್ಧಿ, ವಿಸ್ತೀರ್ಣದಲ್ಲಿ ವೃದ್ಧಿ ಯಾಗುತ್ತಿಲ್ಲ. ಇದರಿಂದ ಆರ್ಥಿಕತೆ ಉದ್ದೇಶಿತ ಪ್ರಗತಿ ಸಾಧಿಸುತ್ತೇವೆಯೇ ಹೊರತು ಆರೋಗ್ಯದಾಯಕ ಪರಿಸರದ ನಿರ್ಮಾಣದಲ್ಲಿ ನಾವು ಎಡವಿದ್ದೇವೆ ಎನ್ನಬಹುದು.

ಜಾಗತಿಕ ಅರಣ್ಯ ಸಂಪನ್ಮೂಲಗಳ ಮೌಲ್ಯಮಾಪನ 2020ರ ಪ್ರಕಾರ ಕಾಡುಗಳು ಭೂಮೇಲ್ಮೆ ಯ ಶೇಕಡಾ 31ರಷ್ಟು ಅಂದರೆ ಸುಮಾರು 4 ಬಿಲಿಯನ್ ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ. 2019ರ ಅಂಕಿ ಅಂಶಗಳ ಪ್ರಕಾರ ಭಾರತದ ಒಟ್ಟು ಅರಣ್ಯ ಪ್ರದೇಶ 7,12,249 ಚದರ ಕಿ.ಮೀ ಆಗಿದ್ದು, ಇದು ದೇಶದ ಭೌಗೋಳಿಕ ಪ್ರದೇಶದ ಶೇಕಡಾ 21.67 ರಷ್ಟಾಗಿದೆ. ಭಾರತ ಕನಿಷ್ಠ ಶೇಕಡಾ 33 ರಷ್ಟು ಅರಣ್ಯ ಪ್ರದೇಶವನ್ನು ಹೊಂದಬೇಕೆಂಬ ಗುರಿಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತಲೇ ಇದೆ.

ಆರೋಗ್ಯಕರ ಜೀವನಕ್ಕಾಗಿ ಸಕಾಡು ಮತ್ತು ನಾಡಿನ ಮಧ್ಯೆ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ. ಆದರೆ ಅರಣ್ಯ ಜಾಗವನ್ನು ಅರಣ್ಯೇತರ ಉದ್ದೇಶ ಕ್ಕಾಗಿ ಬಳಸಿಕೊಳ್ಳುತ್ತಿರುವುದರಿಂದ ಕಾಡುಗಳು ನಿರ್ಣಮವಾಗುತ್ತಿದೆ. ಕೈಗಾರಿಕೀಕರಣ, ನಗರೀಕರಣ, ಗಣಿಗಾರಿಕೆ, ನೀರಾವರಿ ಮತ್ತು ಜಲ ವಿದ್ಯುತ್
ಯೋಜನೆಯಡಿ ಅಣೆಕಟ್ಟುಗಳ ನಿರ್ಮಾಣ, ರಬ್ಬರ್ ಮುಂತಾದ ವಾಣಿಜ್ಯ ಉದ್ದೇಶಿತ ಕೃಷಿ ಚಟುವಟಿಕೆಗಳು, ರಸ್ತೆ ಮತ್ತು ಹೆದ್ದಾರಿಗಳ ನಿರ್ಮಾಣ, ವಿವಿಧ ರೈಲು
ಪಥಗಳ ನಿರ್ಮಾಣ, ಕಾಗದ ತಯಾರಿಕೆ, ರಕ್ಷಣಾ ಯೋಜನೆಗಳು, ಹೋಮ್ ಸ್ಟೇ ಮತ್ತು ರೆಸಾರ್ಟ್‌ಗಳ ನಿರ್ಮಾಣ, ಜನಸಂಖ್ಯೆಯ ಏರಿಕೆಗನುಗುಣವಾಗಿ
ವಸತಿಗಳ ನಿರ್ಮಾಣಕ್ಕಾಗಿ ಅರಣ್ಯ ಪ್ರದೇಶದ ಕಬಳಿಕೆ, ಕಾಳ್ಗಿಚ್ಚು, ಸೌದೆಗಾಗಿ ಗಿಡಮರಗಳ ನಾಶ, ಟಿಂಬರ್ ಮಾಫಿಯಾ ಮುಂತಾದವುಗಳು ಅರಣ್ಯ ನಾಶಕ್ಕೆ
ಪ್ರಮುಖವಾಗಿ ಪಟ್ಟಿ ಮಾಡಬಹುದಾದ ಕಾರಣಗಳು.

ಅರಣ್ಯ ನಾಶದಿಂದ ಪ್ರತಿ ವರ್ಷ ಮಳೆಯ ಪ್ರಮಾಣದಲ್ಲಿ ಉಂಟಾಗುವ ಏರುಪೇರಿನಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಭೂಮಿಯು ಬರಡಾಗುವು ದರ ಜತೆಗೆ ಪರಿಸರ ಮಾಲಿನ್ಯದ ಮಟ್ಟ ಹೆಚ್ಚಾಗುತ್ತಿದ್ದು, ಶುದ್ಧ ಗಾಳಿಯ ಕೊರತೆಯುಂಟಾಗಿ ಮಾರಣಾಂತಿಕ ಕಾಯಿಲೆಗಳು ಹುಟ್ಟಿಕೊಳ್ಳುತ್ತಲೇ ಇದೆ. ಭಾರತದಲ್ಲಿ 2019ರಲ್ಲಿ 1.7 ಮಿಲಿಯನ್ ಅಂದರೆ ದೇಶದ ಒಟ್ಟು ಸಾವಿನ ಶೇ.18 ಪ್ರಮಾಣದ ಜನರು ವಾಯಮಾಲಿನ್ಯದ ಕಾರಣದಿಂದುಂಟಾದ
ಅನಾರೋಗ್ಯದಿಂದ ಮರಣ ಹೊಂದಿದ್ದಾರೆ ಎಂಬ ವರದಿಯಿದೆ. ಅರಣ್ಯ ನಾಶದಿಂದಾಗಿ ಪ್ರಾಣಿಗಳ ಭೌಗೋಳಿಕ ವಾಸ ಪ್ರದೇಶ ಕಿರಿದಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿಗೆ, ಜನ ವಸತಿ ಪ್ರದೇಶಗಳಿಗೆ ಲಗ್ಗೆಯಿಡುತ್ತಿರುವುದರಿಂದ ಪ್ರಾಣಿಗಳು ಮತ್ತು ಮಾನವರ ನಡುವೆ ಸಂಘರ್ಷ ನಡೆಯುತ್ತಿದೆ.
ಅತಿವೃಷ್ಠಿಯಿಂದಾಗುವ ಪ್ರವಾಹ ಮತ್ತು ಅನಾವೃಷ್ಠಿ ಯಿಂದಾಗುವ ಬರಗಾಲಕ್ಕೆ ಪರಿಸರದ ಅಸಮತೋಲನವೇ ಕಾರಣ ಎಂಬುದು ವಾಸ್ತವ.

ಪ್ರತಿ ವರ್ಷ ಭೂ ಸವೆತದ ಪ್ರಮಾಣ ಹೆಚ್ಚಾಗುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಜೀವಿಗಳಿಗೆ ನೆಲೆಯಾಗಿರುವ ಭೂಮಿಯನ್ನು ಅಪಾಯದಿಂದ
ರಕ್ಷಿಸುವ ಸಲುವಾಗಿ ಹಲವು ದಶಕಗಳಿಂದ ಜಾಗತಿಕ ಪ್ರಯತ್ನಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಡೀ ವಿಶ್ವವನ್ನು ಒಗ್ಗೂಡಿಸಿ ಹೋರಾಡುವ ಸಲುವಾಗಿ ವಿಶ್ವ
ಸಂಸ್ಥೆಯು ವಿಶ್ವ ಪರಿಸರ ದಿನವನ್ನು ಸ್ಥಾಪಿಸಿದ್ದು, 1974ರಿಂದ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಪರಿಸರದ ಬಗ್ಗೆ
ಜಾಗೃತಿ, ಅರಿವು ಮತ್ತು ಕಾಳಜಿ ಮೂಡಿಸುವುದು, ಜಾಗತಿಕ ತಾಪಮಾನ ತಡೆಗಟ್ಟುವುದು ವಿಶ್ವ ಪರಿಸರ ದಿನಾಚರಣೆಯ ಪ್ರಮುಖ ಉದ್ದೇಶವಾಗಿದ್ದು, ಇದು
ಸಕಾರಾತ್ಮಕ ಬದಲಾವಣೆಯನ್ನು ಪ್ರೇರೇಪಿಸುವ ಜಾಗತಿಕ ವೇದಿಕೆಯನ್ನು ಕಲ್ಪಿಸುತ್ತದೆ. ಪರಿಸರದ ಕುರಿತು ಜಾಗತಿಕ ಬದಲಾವಣೆಗೆ ವಿಶ್ವ ಸಮುದಾಯವನ್ನು
ಒಂದುಗೂಡಿಸುತ್ತದೆ.

ಪರಿಸರ ದಿನಕ್ಕೆ ಪೂರಕವಾಗಿ ಭಾರತದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದು ವಾರ್ಷಿಕ ಗಿಡ ನೆಡುವ ಕಾರ್ಯಕ್ರಮ ವಾಗಿದ್ದು, ಭಾರತದ ಪರಿಸರ ಹಬ್ಬ ಎಂದು ಕರೆಯಲ್ಪಟ್ಟಿದೆ. ಕೇಂದ್ರದ ಮಾಜಿ ಮಂತ್ರಿ ಕೆ.ಎಂ. ಮುನ್ಷಿಯವರಿಂದ 1950ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮ ಪ್ರತಿ ವರ್ಷ ಜುಲೈ ತಿಂಗಳ ಮೊದಲನೇ ವಾರದಲ್ಲಿ ಆಯೋಜಿಸಲ್ಪಡುತ್ತದೆ. ಇದು ರಾಷ್ಟ್ರೀಯ ಮಹತ್ವವನ್ನು ಪಡೆದುಕೊಂಡಿದ್ದು, ಕಾಡುಗಳ ಸಂರಕ್ಷಣೆ ಮತ್ತು ಸಸಿಗಳನ್ನು ನೆಡುವುದಕ್ಕಾಗಿ ಜನರ ಮನಸ್ಸಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆರಂಭಿಸಲಾಯಿತು.

ಪ್ರತಿ ವರ್ಷ ವನಮಹೋತ್ಸವ ವಾರದ ಆಚರಣೆಯಲ್ಲಿ ದೇಶಾದ್ಯಂತ ಕೋಟ್ಯಂತರ ಸಸಿಗಳನ್ನು ನೆಡುವ ಕಾರ್ಯಕ್ರಮ ಮಾಡಲಾಗುತ್ತಿದೆ. ೨೦೨೦ರ ವನ ಮಹೋತ್ಸವ ಕಾರ್ಯಕ್ರಮದ ಅವಧಿಯಲ್ಲಿ ಉತ್ತರ ಪ್ರದೇಶ ಸರಕಾರ ಆ ರಾಜ್ಯಕ್ಕೆ ನಿಗದಿಪಡಿಸಲಾದ ಗುರಿಯನ್ನು ಮೀರಿ ಸಾಧನೆಯನ್ನು ಮಾಡಿತ್ತು. ಆ ರಾಜ್ಯಕ್ಕೆ ನಿಗದಿಪಡಿಸಲಾದ 48 ಲಕ್ಷ ಸಂಖ್ಯೆಯ ಸಸಿಗಳ ಬದಲಾಗಿ ಒಟ್ಟು 55 ಲಕ್ಷ ಸಸಿಗಳನ್ನು ನೆಟ್ಟು ದೇಶದಲ್ಲಿಯೇ ಮುಂಚೂಣಿಯಲ್ಲಿ ಗುರುತಿಸಿ
ಕೊಂಡಿತ್ತು. ದೇಶಾದ್ಯಂತ ಈ ಕಾರ್ಯಕ್ರಮದ ಯಶಸ್ಸಿಗಾಗಿ ಸರಕಾರಗಳು ಸ್ಥಳೀಯ ಪಂಚಾಯತ್ಗಳ ಮೂಲಕ ಉಚಿತವಾಗಿ ಸಸಿ ವಿತರಣೆ ಮಾಡಿ ಪ್ರೋತ್ಸಾಹ
ನೀಡುತ್ತಿದೆ. ಚಿಕ್ಕ ವಯಸ್ಸಿನ ಪರಿಸರದ ಬಗ್ಗೆ ಅಭಿರುಚಿ ಮೂಡಿಸುವ ಪ್ರಯತ್ನವಾಗಿ ನಮ್ಮ ಶಾಲಾ ದಿನಗಳಲ್ಲಿ ವನಮಹೋತ್ಸವದ ಕಾರ್ಯಕ್ರಮಗಳ
ಸಂದರ್ಭದಲ್ಲಿ ಅಧ್ಯಾಪಕರುಗಳು ಶಾಲಾ ಮಕ್ಕಳಿಗೆ ಒಂದೊಂದು ಸಸಿಯನ್ನು ವಿತರಿಸಿ ಅದನ್ನು ಮನೆಗೆ ಒಯ್ದು, ನೆಟ್ಟು ಪೋಷಿಸಬೇಕು ಎಂದು ತಾಕೀತು
ಮಾಡುತ್ತಿದ್ದುದು ವನ ಮಹೋತ್ಸವ ಸಂದರ್ಭದಲ್ಲಿ ಬಾಲ್ಯದ ದಿನಗಳ ನೆನಪುಗಳನ್ನು ಮರುಕಳಿಸುತ್ತದೆ.

ಪರಿಸರ ಅಭಿವೃದ್ಧಿಯ ಯೋಜನೆಯನ್ನು ಮುಂದಿಟ್ಟುಕೊಂಡು ಗುಜರಾತ್‌ನ ಅಹಮದಾಬಾದ್ ಮೂಲದ ಒಂದು ಫಾರ್ಮಾಸ್ಯುಟಿಕಲ್ ಸಂಸ್ಥೆಯು ಕೈಗೊಂಡ ವಿನೂತನ ಯೋಜನೆ ನಿಜಕ್ಕೂ ಶ್ಲಾಘನೀಯ. ಸಂಸ್ಥೆಯ ಯಾವುದೇ ಉದ್ಯೋಗಿ ರಾಜೀನಾಮೆ ಸಲ್ಲಿಸಿದ ಸಂದರ್ಭದಲ್ಲಿ ಆ ಸಂಸ್ಥೆಯಿಂದ ಒಂದು ಸಸಿಯನ್ನು ಆ ಉದ್ಯೋಗಿಗೆ ವಿತರಿಸಲಾಗುತ್ತದೆ. ಆ ಉದ್ಯೋಗಿ ಆ ಸಂಸ್ಥೆಯ ಹಿತ್ತಲಿನಲ್ಲಿ ಸಸಿಯನ್ನು ನೆಟ್ಟು ರಾಜೀನಾಮೆ ನಿಯಮಾವಳಿಯಂತೆ ನೋಟೀಸ್ ಅವಧಿಯ ಸೇವೆ ಮುಕ್ತಾಯವಾಗುವವರೆಗೆ ಆ ಗಿಡದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಬಳಿಕ ಆ ರಾಜೀನಾಮೆ ನೀಡಿದ ಉದ್ಯೋಗಿಯ ಹುದ್ದೆಯನ್ನು ತುಂಬುವ ಹೊಸ ಉದ್ಯೋಗಿಯು ಆತನ ಪ್ರೊಬೇಷನ್ ಅವಧಿ ಮುಕ್ತಾಯಗೊಳ್ಳುವವರೆಗೆ ಆ ಗಿಡದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ.

ಹೀಗೆ ಇತ್ತೀಚೆಗಿನ 3 ತಿಂಗಳಿನಲ್ಲಿ ಒಟ್ಟು 12 ಗಿಡಗಳಿಗೆ ಜೀವ ತುಂಬಿದ ಹಿರಿಮೆ ಆ ಸಂಸ್ಥೆಯzಗಿದೆ. ಇದು ರಾಜೀನಾಮೆ ಪತ್ರವನ್ನು ಅಂಗೀಕರಿಸುವುದಕ್ಕೆ
ಸಂಬಂಧಪಟ್ಟಂತೆ ಆ ಸಂಸ್ಥೆಯು ಸಾಮಾಜಿಕ ಕಳಕಳಿಯಿಂದ ರೂಪಿಸಿಕೊಂಡ ಒಂದು ನಿಯಮಾವಳಿಯಾಗಿದೆ. ನಾಸಾ ಹಾಗೂ ನ್ಯಾಷನಲ್ ಓಷಿಯಾನಿಕ್ ಮತ್ತು ಅಟ್ಮಾಸಿಯರಿಕ್ ಅಡ್ಮಿನಿಸ್ಟ್ರೇಷನ್ ನಡೆಸಿದ ಸ್ವಾತಂತ್ರ್ಯ ವಿಶ್ಲೇಷಣೆಗಳ ಪ್ರಕಾರ 2019ನೇ ಇಸವಿಯು ಕಳೆದ 140 ವರ್ಷಗಳಲ್ಲಿ ಎರಡನೇ ಅತೀ ಹೆಚ್ಚಿನ ಭೂಮಿಯ ಮೇಲ್ಮೆ ಯ ಜಾಗತಿಕ ತಾಪಮಾನ ಹೊಂದಿದ ವರ್ಷ ಎಂದು ದಾಖಲಾಗಿದ್ದು, ಇದರಿಂದ ತಾಪಮಾನದ ತೀವ್ರತೆಯ ಪ್ರಮಾಣವನ್ನು ನಾವು
ಅಂದಾಜಿಸಬಹುದು.

2005ರಲ್ಲಿ ಇರಾನ್‌ನ ಲುಟ್ ಮರುಭೂಮಿಯಲ್ಲಿ 70.7 ಸೆಲ್ಸಿಯಸ್ ತಾಪಮಾನ ಕಂಡು ಬಂದಿದ್ದು, ಇದು ಭೂಮಿಯ ಮೇಲೆ ದಾಖಲಾದ ಅತೀ ಹೆಚ್ಚಿನ ತಾಪಮಾನ ಎಂದು ದಾಖಲಾಗಿದೆ. ಜಗತ್ತಿನಲ್ಲಿ ಬಹಳ ಚರ್ಚೆಯಲ್ಲಿರುವ ಜಾಗತಿಕ ತಾಪಮಾನದ ಏರಿಕೆಯನ್ನು ನಿಯಂತ್ರಿಸಲು ಅಂತಾರಾಷ್ಟ್ರೀಯ ಸಹಕಾರ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಪ್ಯಾರಿಸ್ ಒಪ್ಪಂದವು ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ -ಮ್‌ವರ್ಕ್ ಕನ್ವೆನ್ಷನ್‌ನಲ್ಲಿನ ಒಂದು ಒಪ್ಪಂದವಾಗಿದ್ದು, ಹಸಿರು ಮನೆ ಅನಿಲ ಹೊರಸೂಸುವಿಕೆ, ರೂಪಾಂತರ ಮತ್ತು ಹಣಕಾಸು ವ್ಯವಹಾರದ ಕುರಿತಾಗಿ 2016ರಲ್ಲಿ ಸುಮಾರು 195 ಪ್ರತಿನಿಧಿ ದೇಶಗಳ ಸಹಿಯೊಂದಿಗೆ ಅಂತಾರಾಷ್ಟ್ರೀಯ ಒಪ್ಪಂದವೆಂದು ಅಂಗೀಕರಿಸಲಾಗಿದೆ.

ಈ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಭಾರತದ ಪ್ರಧಾನ ಮಂತ್ರಿಗಳು, ಭಾರತದಲ್ಲಿ 2030ರ ಹೊತ್ತಿಗೆ ಅನಿಲ ಹೊರಸೂಸುವಿಕೆ ಪ್ರಮಾಣವನ್ನು 2005ನೇ ವರ್ಷದಲ್ಲಿ ದಾಖಲಾದ ಪ್ರಮಾಣದ ಶೇಕಡಾ 30 ರಿಂದ 35ರಷ್ಟು ತಗ್ಗಿಸಿ ಗುರಿ ಸಾಧಿಸುವ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿರುತ್ತಾರೆ. ಇದಕ್ಕೆ ಪೂರಕವಾಗಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಪರಿಸರಕ್ಕೆ ಸಂಬಂಧಿಸಿದ ಪ್ರಮುಖ
ಆಡಳಿತಾತ್ಮಕ ತೀರ್ಮಾನಗಳು ಮತ್ತು ನ್ಯಾಯಾಲಯದ ತೀರ್ಪುಗಳು ಪರಿಸರಕ್ಕೆ ಸಂಬಂಧಪಟ್ಟ ಕಾನೂನುಗಳನ್ನು ಬಲಪಡಿಸಲು ಸಹಕಾರಿಯಾಯಿತು ಎಂದು ಹೇಳಬಹುದು.

1972ರ ಮಾನವ ಪರಿಸರ ಕುರಿತ ವಿಶ್ವಸಂಸ್ಥೆಯ ಸ್ಟಾಕ್ಹೋಂ ಮಹಾಽವೇಶನದ ನಿರ್ಣಯಗಳು ಮಹತ್ವದ್ದಾಗಿದ್ದು, ಈ ಸಮ್ಮೇಳನದ ಪ್ರತಿನಿಧಿ ದೇಶಗಳಿಗೆ ಪರಿಸರಕ್ಕೆ ಸಂಬಂಧಪಟ್ಟ ಕಾನೂನುಗಳನ್ನು ರೂಪಿಸಿಕೊಳ್ಳುವ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಿತ್ತು. ಭಾರತದಲ್ಲಿ ಪರಿಸರವನ್ನು ರಕ್ಷಿಸಲು
ಹಲವಾರು ಕಾನೂನುಗಳನ್ನು ಜಾರಿಗೊಳಿಸಿದಲ್ಲದೇ 1985ರಲ್ಲಿ ಭಾರತ ಸರಕಾರ ಪರಿಸರ ಮತ್ತು ಅರಣ್ಯ ಸಚಿವಾಲಯವನ್ನು ಸೃಷ್ಟಿಸಿತ್ತು. ಇದರ ಅಡಿಯಲ್ಲಿ
ರಾಷ್ಟ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಕೆಲಸ ಮಾಡುತ್ತಿವೆ. 2010ರ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಕಾಯಿದೆಯ ಮೂಲಕ
ರಾಷ್ಟ್ರೀಯ ಹಸಿರು ಪ್ರಾಧಿಕಾರಗಳು ರಚನೆಗೊಂಡವು.

2006ನೇ ಇಸವಿಯಲ್ಲಿ ರಾಷ್ಟ್ರೀಯ ಪರಿಸರ ನೀತಿಯನ್ನು ರೂಪಿಸಲಾಗಿದೆ. ನಗರ ಪ್ರದೇಶಗಳಲ್ಲಿ ವಸತಿ ಸಮುಚ್ಚಯಗಳ ನಿರ್ಮಾಣ ಮಾಡುವುದಿದ್ದಲ್ಲಿ
ಕಟ್ಟಡ ನಿರ್ಮಾಣದ ವ್ಯಾಪ್ತಿಯಲ್ಲಿ ನಿಗದಿತ ಪ್ರಮಾಣದ ಗಿಡಗಳನ್ನು ನೆಡುವಂತೆ ಷರತ್ತು ವಿಧಿಸಿ ಕಟ್ಟಡಗಳಿಗೆ ಅನುಮೋದನೆ ನೀಡುವ ನಿಯಮ ರೂಪಿಸಲಾಗಿದೆ. ರಾಷ್ಟ್ರ, ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲೆ ಮತ್ತು ಗ್ರಾಮೀಣ ರಸ್ತೆಗಳ ಇಕ್ಕೆಲಗಳಲ್ಲಿ ಮರಗಿಡಗಳನ್ನು ಬೆಳೆಸುವ ಸಲುವಾಗಿ ಸರಕಾರಗಳು ಹೆಚ್ಚಿನ ಕ್ರಮ
ವಹಿಸುತ್ತವೆಯಾದರೂ ಸೂಕ್ತ ನಿರ್ವಹಣೆಯಿಲ್ಲದೇ ನಿರೀಕ್ಷಿತ ಗುರಿ ಮುಟ್ಟಲಾಗಲಿಲ್ಲ. ಆದಾಗ್ಯೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
ಸಚಿವಾಲಯ, ಭಾರತ ಸರಕಾರ ಇದರ ಅಽನದಲ್ಲಿ ‘ಫಾರೆಸ್ಟ್ ಸರ್ವೆ ಆಫ್ ಇಂಡಿಯಾ’ ಪ್ರತಿ ಎರಡು ವರ್ಷಕ್ಕೊಮ್ಮೆ ದೇಶದ ಅರಣ್ಯ ಸಂಪನ್ಮೂಲಗಳ ಮೌಲ್ಯಮಾಪನ ಕೈಗೊಳ್ಳುತ್ತಿದ್ದು, ಇದರ ಅಡಿಯಲ್ಲಿ ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್ 2019ನ್ನು 2017ರ ಮೌಲ್ಯಮಾಪನ ವರದಿಗೆ
ಹೋಲಿಸಿದಾಗ ಎರಡು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಒಟ್ಟು 5188 ಚದರ ಕಿ. ಮೀ ಅರಣ್ಯ ಪ್ರದೇಶ ವೃದ್ಧಿಯಾಗಿರುವುದು ಕಂಡು ಬಂದಿದೆ.

ಪರಿಸರವನ್ನು ನಾವು ನಮ್ಮ ಮುಂದಿನ ತಲೆಮಾರುಗಳಿಗೂ ಮೀಸಲಿಡಬೇಕಾಗಿರುವುದರಿಂದ ಬಹಳ ಜೋಪಾನವಾಗಿ ಸಂರಕ್ಷಿಸಬೇಕು. ಈ ಹಿನ್ನೆಲೆಯಲ್ಲಿ
ಪರಿಸರ ಪ್ರೇಮ ಮೂಡಿಸುವ ಇನ್ನಷ್ಟು ಪ್ರಯತ್ನ ಗಳಾಗಬೇಕು. ಪರಿಸರದ ಬಗ್ಗೆ ಅಭಿರುಚಿ ಮೂಡಿಸುವ ಮತ್ತು ಈ ಕ್ಷೇತ್ರದಲ್ಲಿ ನಿಸ್ವಾರ್ಥ ಸಾಧನೆಗೈದ ಹಲವು
ಮಹನೀಯರುಗಳ ಬಗ್ಗೆ ಪಠ್ಯ ವಿಷಯದಲ್ಲಿ ಆದ್ಯತೆ ನೀಡಿ ಹಸಿರು ಮತ್ತು ಸ್ವಚ್ಛ ಪರಿಸರದ ಬಗ್ಗೆ ಮಕ್ಕಳಿಗೆ ಪ್ರಾಥಮಿಕ ಹಂತದ ಅರಿವು ಮೂಡಿಸು
ವಂತಾಗಬೇಕು.