ಶಿಶಿರ ಕಾಲ
shishirh@gmail.com
ಅಕ್ಬರ್ ದಿ ಗ್ರೇಟ್!? ಇತಿಹಾಸ ಪುಸ್ತಕದಲ್ಲಿ ಈತನ ಬಗ್ಗೆ ನಾವು ಓದಿದ್ದು ಒಂದೆರಡು ಪ್ಯಾರಾ ಅಷ್ಟೆ. ಅದು ಬಿಟ್ಟರೆ ಅಕ್ಬರ್ ಬೀರಬಲ್ ಕಥೆಯಲ್ಲಿ. ಅಲ್ಲಿ ಅಕ್ಬರ್ ಸಂಭಾವಿತ. ಆಗೀಗ ಸಂಕಷ್ಟಕ್ಕೆ ಸಿಲುಕಿ ಬೀರಬಲ್‌ನ ಸಹಾಯ ಪಡೆಯುವ, ಜನಕ್ಕೆ ನ್ಯಾಯವನ್ನಷ್ಟೇ ಕೊಡುವ ಪರಮ ಸಾಚಾ. ಈ ಕಥೆಗಳನ್ನು ಮಾತ್ರ ಓದಿಕೊಂಡವರಿಗೆ ಅಕ್ಬರ್ ಯಾವತ್ತೂ ಗ್ರೇಟ್.
ನಂತರದಲ್ಲಿ ಬೀರಬಲ್‌ನ ಅಸಲಿ ಹೆಸರು ಮಹೇಶ್ ದಾಸ್ ಎನ್ನುವುದನ್ನು ಅಧಿಕೃತವಲ್ಲದ ಎಲ್ಲಿಯೋ ಓದಿದ್ದೆ. ಅಲ್ಲಿಂದ ಮುಂದೆ ಈ ಬೀರಬಲ್ ಎಂಬ ವ್ಯಕ್ತಿ ಇದ್ದದ್ದು ಸತ್ಯವೇ ಎಂದು ಅದೆಷ್ಟೋ ಇತಿಹಾಸಕಾರರನ್ನು ಕೇಳಿದ್ದೇನೆ, ಒಬ್ಬರೂ ಗಟ್ಟಿ ಹೌದೆಂದಿಲ್ಲ, ಹಿಂಜರಿಯುತ್ತಾರೆ. ಅತ್ತ ಅಕ್ಬರ್-ಬೀರಬಲ್ ನಂತೆಯೇ ಇತ್ತ ಕೃಷ್ಣದೇರಾಯ-ತೆನಾಲಿ ರಾಮಕೃಷ್ಣರು. ತೆನಾಲಿ ಕವಿ, ಜ್ಞಾನಿ, ಪಂಡಿತರು. ತೆಲುಗಿನಲ್ಲಿ ಅವರು ಬರೆದ ಪಾಂಡು ರಂಗ ಮಹಾತ್ಯಮ್ ಅವರು ಇದ್ದುದರ ಸಾಕ್ಷಿ. ಆದರೆ ಬೀರಬಲ್ ಪ್ರಶ್ನೆಯಾಗಿ ಮತ್ತು ಒಳ್ಳೆಯ ಕಲ್ಪನೆಯಾಗಿಯೇ ಉಳಿಯುತ್ತಾನೆ.
ಇಲ್ಲಿ ಬೀರಬಲ್ ಪಾತ್ರ ಅಕ್ಬರನ ಗ್ರೇಟ್ನೆಸ್‌ನ ಕಲ್ಪನೆಗೆ ಸಾಕ್ಷ್ಯವಾಗಿ ನಿಲ್ಲುವಂಥದ್ದು. ಆತ ಇದ್ದದ್ದೇ ಅನುಮಾನವೆಂದಾದ ಮೇಲೆ ಉಳಿದ ಅಕ್ಬರನ ಸುತ್ತ ಕಟ್ಟಿಕೊಂಡ ಕಲ್ಪನೆ ನೆಲಗಟ್ಟಿಲ್ಲದೆ ಕುಸಿಯುತ್ತದೆ. ಈ ಮಿಸ್ಟರ್ ಗ್ರೇಟ್ (?) ಅಕ್ಬರ್ ಇದ್ದನಲ್ಲ, ಆತನಿಗೆ
ಮುಘಲ್ ಪೂರ್ವಜರಂತೆ ಚಿರತೆಗಳೆಂದರೆ ಎಲ್ಲಿಲ್ಲದ ಖಯಾಲಿ. ತೇಜಾಯ್ ಬಾಜಿ ಆತನ ಬಲು ಇಷ್ಟದ ಆಟ. ಚಿರತೆಗಳನ್ನು ಬಂಧಿಸಿ ಅವುಗಳನ್ನು ಪ್ರಾಣಿಗಳ ಬೇಟೆಗೆ ಬಳಸಿಕೊಳ್ಳುವುದು. ತರಬೇತಿ ಕೊಟ್ಟು, ಕಾಡಿನೊಳಕ್ಕೆ ಬಿಟ್ಟ ಚಿರತೆ ಜಿಂಕೆ, ಕೃಷ್ಣ ಮೃಗ, ಹಂದಿ ಇತ್ಯಾದಿಗಳನ್ನು ಹಿಡಿದುಕೊಂಡು ಬರುತ್ತಿತ್ತು. ಕೆಲವೊಮ್ಮೆ ಈ ಚಿರತೆಯನ್ನು ಮುಂದಕ್ಕೆ ಬಿಟ್ಟು ಹಿಂದಿನಿಂದ ಓಡಿಸಿಕೊಂಡು ಹೋಗುವುದೂ ಇತ್ತು.
ಈ ಆಟವೇ ಮುಂದುವರಿದು ಈ ರೀತಿ ಬೇಟೆ ಮಾಡುವ ಚಿರತೆ ಇನ್ನೇನು ಮಿಕದ ಮೇಲೆ ಎರಗಬೇಕು, ಆ ಕ್ಷಣ ಅದನ್ನು ಕೊಲ್ಲುವುದೂ ಅವರೆಲ್ಲರ ಆಟವಾಗಿತ್ತು. ಅಕ್ಬರನ ಆಳ್ವಿಕೆ ೧೬೦೫ರ ವರೆಗಿತ್ತು. ಅವನಲ್ಲಿ ತೇಜಾಯ್ ಬಾಜಿಗೆಂದೇ ಇದ್ದದ್ದು
ಬರೋಬ್ಬರಿ ಹತ್ತು ಸಾವಿರ (ಕೆಲವು ಕಡೆ ೧೨-೧೫೦೦೦ ಎಂದಿದೆ) ಚಿರತೆಗಳು. ಅದು ಅಂದು ಭಾರತದಲ್ಲಿದ್ದ ಚಿರತೆಗಳ ಶೇ.೧೫-
೨೦ರಷ್ಟು. ಅವೆಲ್ಲ ಅಕ್ಬರನ ಬಂಧನದಲ್ಲಿ. ಅನಂತರದಲ್ಲಿ ಮುಂದಿನ ಮುನ್ನೂರು ವರ್ಷ ಬ್ರಿಟೀಷರು ಮತ್ತು ಮುಘಲರನ್ನು ಹಿಂಬಾಲಿಸಿದ ಉಳಿದ ಭಾರತೀಯ ರಾಜರುಗಳು ಲೆಕ್ಕ ಮೀರಿ ಚಿರತೆಯನ್ನು ಕೊಂದರು.
ಇದರಿಂದ ೧೯೪೭-೧೯೫೦ ರಲ್ಲಿ ಚಿರತೆ ಭಾರತದಲ್ಲಿ ನಾಮಾವಶೇಷವಾಗಿ ಹೋಯ್ತು. ಅದಾದ ಮೇಲೆ ಇತ್ತೀಚೆ ಆಫ್ರಿಕಾದಿಂದ ಭಾರತ ಚಿರತೆ ತಂದದ್ದು, ಮೋದಿ ಅದನ್ನು ಹೊರ ಬಿಟ್ಟದ್ದು ಇತ್ಯಾದಿಯಂತೂ ನಿಮಗೆ ಗೊತ್ತೇ ಇದೆ. ಆಫ್ರಿಕಾದಲ್ಲಿ ಸದ್ಯ ಇರುವ ಚಿರತೆಯ ಸಂಖ್ಯೆ ಕೇವಲ ಏಳು ಸಾವಿರ. ಒಂದು ಕಾಲದಲ್ಲಿ ಭಾರತದಲ್ಲಿಯೇ ಲಕ್ಷಕ್ಕಿಂತ ಜಾಸ್ತಿ ಇದ್ದ ಚಿರತೆಗಳು ಸಂಪೂರ್ಣ ನಶಿಸಿ ಹೋದ ಮೇಲೆ ನೂರು ತಂದು ಬದುಕಿಸಿಕೊಳ್ಳುವುದು ಸಣ್ಣ ಕೆಲಸವಲ್ಲ, ಕಷ್ಟ ಉಂಟು. ಆದರೆ ಅವಶ್ಯಕವೆನ್ನುವುದರಲ್ಲಿ ದೂಸ್ರಾ ಮಾತಿಲ್ಲ.
ಅಂದ ಹಾಗೆ ನಮಿಬಿಯಾದಿಂದ ಎಂಟು, ದಕ್ಷಿಣ ಆಫ್ರಿಕಾದಿಂದ ಹನ್ನೆರಡು, ಒಟ್ಟು ಇಪ್ಪತ್ತು ಚಿರತೆಗೆ ೭೫ ಕೋಟಿ ರುಪಾಯಿ, ಅಂದರೆ ಒಂದಕ್ಕೆ ಮೂರೂಮುಕ್ಕಾಲು ಕೋಟಿ. ಇಲ್ಲಿ ಆಕ್ಷೇಪ ದುಡ್ಡಿನ ಮೊತ್ತದ್ದಲ್ಲ. ಸಂರಕ್ಷಣೆ, ಜೀವ ವೈವಿಧ್ಯದ ಮರುಸ್ಥಾಪನೆ ಅಥವಾ ಮೃಗಾಲಯಗಳಿಗೆ ಪ್ರಾಣಿಗಳನ್ನು ಸರ್ಕಾರ ಖರೀದಿಸಬಹುದೆಂದಾದರೆ ಪ್ರಶ್ನೆ ಏಳುವುದು ನೈತಿಕತೆಯದು. ಪ್ರಾಣಿಯನ್ನು ಸರಕಿನಂತೆ ಉಳಿದವರು ಖರೀ ದಿಸಬಾರದೆಂದಾದರೆ, ಸರಕಾರ ಅದನ್ನು ಮಾಡಬಹುದೇ ಎನ್ನುವುದು.
ಪ್ರಾಣಿಗಳನ್ನು ವ್ಯಾವಹಾರಿಕ ದೃಷ್ಟಿಯಿಂದ ಕೂಡಿಟ್ಟು, ಪ್ರದರ್ಶಿಸಿ ವ್ಯಾಪಾರ ಮಾಡುವುದಕ್ಕೆ ಸಾವಿರ ವರ್ಷಕ್ಕಿಂತ ಹೆಚ್ಚಿನ ಇತಿಹಾಸವಿದೆ. ಆದರೆ ನವ್ಯ ಮೃಗಾಲಯ ವ್ಯವಸ್ಥೆ ಮೊದಲು ನಿರ್ಮಾಣವಾಗಿದ್ದು ಇತ್ತೀಚೆಗೆ, ೧೭೫೨ ರಲ್ಲಿ, ಆಸ್ಟ್ರೀಯಾದಲ್ಲಿ. ಅಲ್ಲಿಂದ ಮುಂದೆ ನೂರಾರು ವರ್ಷಗಳ ಕಾಲ ಮೃಗಾಲಯವನ್ನು ನಮ್ಮ ಪೂರ್ವಜರು ನೈತಿಕ ಹಿನ್ನೆಲೆಯಲ್ಲಿ ಪ್ರಶ್ನಿಸಲೇ ಇಲ್ಲ. ೧೭, ೧೮, ೧೯ನೇ ಶತಮಾನದಲ್ಲಿ ಯುರೋಪಿನೆಲ್ಲೆಡೆ ಹೊಸ ಮೃಗಾಲಯಗಳು ಊರಿಗೊಂದು ತಲೆಯೆತ್ತಿದವು. ಮೃಗಾಲಯ ಊರಿಗೊಂದು ಶೋಭೆ ಎಂಬಂತಾಯಿತು.
ಅಪರೂಪದ ಪ್ರಾಣಿಗಳನ್ನು ಹೊಂದಲು ಮೃಗಾಲಯಗಳ ನಡುವೆ ಸ್ಪರ್ಧೆ. ವಿಭಿನ್ನ, ಅಪರೂಪದ ಪ್ರಾಣಿಗಳು ಹೆಚ್ಚಿದ್ದ ಮೃಗಾಲಯಕ್ಕೆ ಗ್ರಾಹಕರು ಜಾಸ್ತಿ ಬರುತ್ತಿದ್ದರಿಂದ, ಪ್ರಾಣಿಗಳೆಂದರೆ ಅವುಗಳಿಗೆ ಸರಕು. ಹೆಚ್ಚು ಹಣ ತೊಡಗಿಸಿ ವಿರಳಾತಿವಿರಳ, ಹೊಸ ನಮೂನೆಯ ಪ್ರಾಣಿಗಳನ್ನು ತಂದಿರಿಸಿಕೊಂಡರೆ ಗ್ರಾಹಕರ ಸಂಖ್ಯೆ ಏರುತ್ತದೆ ಎಂಬ ನೇರ ವ್ಯಾವಹಾರ. ಈ ರೀತಿ ವ್ಯಾಪಾರೀ ಅವಕಾಶಗಳು ನಿರ್ಮಾಣವಾದಾಗ ಅಲ್ಲಿ ಪೂರೈಸುವವರೂ ಹೆಚ್ಚಬೇಕಲ್ಲ, ಹಾಗೆಯೇ ಆಯಿತು.
ಅದರಲ್ಲೊಬ್ಬ ಜರ್ಮನ್ ವ್ಯಾಪಾರೀ ಕಾರ್ಲ್ ಹಾಗಾನ್ ಬ್ಯಾಕ್. ಈತನ ದಂಧೆಯೇ ವನ್ಯಪ್ರಾಣಿಗಳನ್ನು ಮೃಗಾಲಯಕ್ಕೆ ಒದಗಿಸುವುದು, ಮಾರಾಟ ಮತ್ತು ಖರೀದಿ. ಈತನದು ಅಂದಿನ ಕಾಲದ ಬಹುರಾಷ್ಟ್ರೀಯ ವ್ಯಾಪಾರಿ ಸಂಸ್ಥೆ. ಹಾಗನ್ ಬ್ಯಾಕ್‌ನ ಹತ್ತಿರ ನನಗೆ ಇಷ್ಟು ಎತ್ತರದ, ಈ ಬಣ್ಣದ ಕಣ್ಣಿನ, ಈ ಬಣ್ಣದ ಇಂತಹ ಪ್ರಾಣಿ ಬೇಕು ಎಂದರೆ ಆತ ಅದೆಲ್ಲಿಂದಲೋ ಸಂಪಾದಿಸಿ ಕೊಡುತ್ತಿದ್ದ. ಆಳೆತ್ತರದ ಹಿಮ ಕರಡಿ, ಆಫ್ರಿಕಾದ ಗೊರಿಲ್ಲಾ, ಸಹರಾ ಮರುಭೂಮಿಯ ಒಂಟೆ, ಮಂಗೋಲಿಯಾದ ಕಾಡು ಕುದುರೆ, ಭಾರತದ ಹುಲಿ, ಚಿರತೆ, ಕಿರುಬ, ಆಸ್ಟ್ರೇಲಿಯಾದ ಆಸ್ಟ್ರಿಚ್, ಆಫ್ರಿಕಾದ ಅತ್ಯಪರೂಪದ ಹಾವುಗಳು, ಹೀಗೆ ನೀವು ಇಂತಹ ಜಾತಿಯ, ಇಂತಹ ಪ್ರದೇಶದ ಪ್ರಾಣಿ ಬೇಕೆಂದರೆ ಆತ ಅದನ್ನು ಕೆಲವೇ ದಿನಗಳಲ್ಲಿ ಮೃಗಾಲಯಕ್ಕೆ ಮುಟ್ಟಿಸುವ ವ್ಯವಸ್ಥೆ ಮಾಡುತ್ತಿದ್ದ.
ಅಷ್ಟೇ ಅಲ್ಲ, ಆತ ಹೀಗೆ ಮಾರಾಟ ಮಾಡುತ್ತಿದ್ದ ಪ್ರಾಣಿಗಳ ಬಗ್ಗೆ ಗ್ಯಾರಂಟಿ ಕೂಡ ಕೊಡುತ್ತಿದ್ದ. ಹೇಳಿದ ಅಳತೆ, ಬಣ್ಣ,
ಗಾತ್ರದಲ್ಲಿ ವ್ಯತ್ಯಾಸವಾದಲ್ಲಿ ರಿಯಾಯತಿ ದರ. ಹಾಗಾನ್ ಬ್ಯಾಕ್ ಪ್ರಾಣಿಗಳನ್ನು ಒದಗಿಸುವುದು ಹೇಗೆ ಎಂದು ಎಲ್ಲರಿಗೂ ತಿಳಿದಿರಲಿಲ್ಲ. ಆತ ಅಮೆರಿಕಾ ಮತ್ತು ಯುರೋಪ್ ದೇಶಗಳಲ್ಲಿ ಸುತ್ತಾಡಿ ಮೃಗಾಲಯಗಳ ಬೇಕುಗಳ ಪಟ್ಟಿಯನ್ನು ತಯಾರಿಸಿ ಕೊಳ್ಳುತ್ತಿದ್ದ. ನಂತರ ಆತ ಮತ್ತು ತಂಡ ದಂಡಯಾತ್ರೆಗೆ ಹೊರಡುತ್ತಿತ್ತು. ಕಾಡಿನಲ್ಲಿ ಮೃಗಾಲಯ ಬಯಸಿದ ಪ್ರಾಣಿಗಳನ್ನು ಗುರುತಿಸಿಕೊಳ್ಳುತ್ತಿದ್ದರು. ನಂತರ ಅವರು ಮಾಡುತ್ತಿದ್ದ ಮೊದಲ ಕೆಲಸವೆಂದರೆ ಆ ಪ್ರಾಣಿಯ ಗುಂಪಿನ ವಯಸ್ಸಾದ, ತಂದೆ-ತಾಯಿಯನ್ನು ಮೊದಲು ಕೊಲ್ಲುವುದು.
ತೀರಾ ಚಿಕ್ಕ ಮರಿಗಳನ್ನು, ಅನಾಥವಾದ ಮತ್ತು ಬೇಡಿಕೆಗೆ ಹೊಂದುವ ಪ್ರಾಣಿಯನ್ನಷ್ಟೇ ಬಂಧಿಸಿ ಅದನ್ನು ಮೃಗಾಲಯಕ್ಕೆ ತಂದೊಪ್ಪಿಸಿ ಯಥೇಚ್ಛ ಮೊತ್ತವನ್ನು ಕಿಸೆಗಿಳಿಸಿಕೊಳ್ಳುವುದು. ಇಂಥವರು ಬಹಳಷ್ಟು ಮಂದಿಯಿದ್ದರು. ಅವರೇ ತಮ್ಮನ್ನು ಇxಠಿeಜಣoಟಿeಡಿ ದಂಡಯಾತ್ರಿಕರು ಎಂದು ಕರೆದುಕೊಳ್ಳುತ್ತಿದ್ದರು. ಇವರೆಲ್ಲ ಮಾಡುತ್ತಿದ್ದುದು ಇಂತಹ ಅತ್ಯಂತ ಹೇಯ, ರಕ್ತಸಿಕ್ತ ಅಮಾನವೀಯ ಕೆಲಸವನ್ನು. ಕ್ರಮೇಣ ಹಾಗಾನ್ ಬ್ಯಾಕ್‌ನ ಈ ಕೆಲಸ ಕೇವಲ ಪ್ರಾಣಿಗಳಿಗಷ್ಟೇ ಸೀಮಿತವಾಗಿ ಉಳಿ
ಯಲಿಲ್ಲ.
ಪ್ರಾಣಿಗಳ ಜೊತೆಯಲ್ಲಿ ಅಲ್ಲಿ, ಅದರ ಜೊತೆಯಲ್ಲಿಯೇ ಸೌಹಾರ್ದತೆಯಿಂದ ಬದುಕಿಕೊಂಡಿದ್ದ ಬುಡಕಟ್ಟು ಜನಾಂಗದವ ರನ್ನೂ ಅನಾಮತ್ತು ಬಂಽಸಿ ಎತ್ತಿಕೊಂಡು ಬಂದು ಮೃಗಾಲಯಕ್ಕೆ ಮಾರಾಟ ಮಾಡುತ್ತಿದ್ದ. ಎಸ್ಕಿಮೋಗಳು, ಸಮೋವೀ, ಸುಡಾನ್, ಭಾರತ ಮೊದಲಾದ ದೇಶಗಳ ಲೆಕ್ಕವಿಲ್ಲದಷ್ಟು ಮೂಲನಿವಾಸಿಗಳನ್ನೂ ಅಪಹರಿಸುತ್ತಿದ್ದ. ಅವರನ್ನು ಮೃಗಾಲಯಕ್ಕೆ ಮಾರುತ್ತಿದ್ದ. ಮೃಗಾಲಯಗಳು ಅವರ ಮನೆಗಳನ್ನು ಹೋಲುವ ಚಿಕ್ಕ ವ್ಯವಸ್ಥೆಯನ್ನು ನಿರ್ಮಿಸಿ ಅದರೆದುರು ಅವರನ್ನೆಲ್ಲ ನಿಲ್ಲಿಸಿ ಪ್ರದರ್ಶಿಸುತ್ತಿದ್ದವು.
ಮೃಗಾಲಯದಲ್ಲಿ ಆದಿವಾಸಿ ಮನುಷ್ಯರಿಗೆ, ಪ್ರಾಣಿಗಳಿಗೆ ಕಿಮ್ಮತ್ತೇ ಇರಲಿಲ್ಲ. ಹಾಗಾನ್ ಬ್ಯಾಕ್‌ಗೆ ಜಗತ್ತಿನ ಬಹುತೇಕ ಜಾಗಗಳ
ರಾಜರುಗಳ ಸಂಪರ್ಕವಿತ್ತು. ಭಾರತದಿಂದ ಕೂಡ ಅವನಿಗೆ ಚಿಕ್ಕಾಸಿಗೆ ಪ್ರಾಣಿಗಳ ಜೊತೆ ಆದಿವಾಸಿ ಕುಟುಂಬಗಳನ್ನು ಮಾರಾಟ ಮಾಡಲು ಸ್ವತಃ ರಾಜರುಗಳೇ ಮುಂದೆ ಬಂದು ಸಹಾಯ ಮಾಡುತ್ತಿದ್ದರು. ಒಂದು ಮೃಗಾಲಯ ಬಯಸಿದ ನಿರ್ದಿಷ್ಟ ಗೊರಿಲ್ಲಾವನ್ನು ಪಡೆಯಲು ಸುಮಾರು ಅರವತ್ತು ಗೊರಿಲ್ಲಾಗಳನ್ನು ಕೊಲ್ಲಬೇಕಾಯಿತು ಎಂದು ಆತ್ಮವೇ ಇಲ್ಲದಂತೆ ವ್ಯವಹರಿಸಿದವನ ಆತ್ಮಕಥೆಯಲ್ಲಿ ಬರೆದುಕೊಂಡದ್ದು ದಾಖಲೆಯಾಗಿ ಸಿಗುತ್ತದೆ. ಇದೆಲ್ಲ ನಡೆದದ್ದು ೧೮೬೦ ರಿಂದ ೧೯೦೦ ರ ಸಮಯದಲ್ಲಿ.
ಹೀಗೆ ಮೃಗಾಲಯ ಕ್ರಮೇಣ ಎಲ್ಲ ನೈತಿಕತೆಯ ಎಲ್ಲೆಯನ್ನು ಮೀರಿಬಿಟ್ಟಿತ್ತು. ಒಂದು ಅಂದಾಜಿನ ಪ್ರಕಾರ ಹಾಗಾನ್ ಬ್ಯಾಕ್ ಒಬ್ಬನೇ ಏನಿಲ್ಲವೆಂದರೂ ನಾಲ್ಕರಿಂದ ಆರು ಲಕ್ಷ ವನ್ಯಪ್ರಾಣಿಗಳ ಹತ್ಯೆಗೆ ಕಾರಣವಾಗಿದ್ದ. ಅವನಂತೆಯೇ ಅದೆಷ್ಟೋ ಅಸಂಖ್ಯ ಕೊಲೆಗಾರರು ೧೮೦೦-೧೯೦೦ ರ ಸಮಯದಲ್ಲಿದ್ದರು. ಇವರು ಜಗತ್ತಿನ ಅರ್ಧದಷ್ಟು ವನ್ಯಪ್ರಾಣಿಗಳನ್ನು ಕೊಂದದ್ದು ಈ ಅವಽಯ ನಲವತ್ತು ವರ್ಷದಲ್ಲಿ! ಕೆಲವು ಕಾಲ ಗೌಪ್ಯವಾಗಿಯೇ ಇದ್ದ ಈ ಅಮಾನವೀಯತೆಯ ವಿಚಾರಗಳು ಕ್ರಮೇಣ ಮುನ್ನೆಲೆಗೆ, ಪತ್ರಿಕೆಗಳಲ್ಲಿ ಬರಲು ಶುರುವಾದವು.
ಇದು ಜನರಲ್ಲಿ ಜಾಗೃತಿ ಮೂಡಿಸಲು ಶುರುಮಾಡಿತು. ಆದರೆ ನಡೆಯುತ್ತಿದ್ದ ವ್ಯಾಪಾರ, ವ್ಯವಹಾರವನ್ನು ಹಾಗೆ ಸಮಾಜದಲ್ಲಿ ಒಮ್ಮೆಲೇ ನಿಲ್ಲಿಸಿಬಿಡಲಿಕ್ಕಾಗುವುದಿಲ್ಲವಲ್ಲ! ಏಕೆಂದರೆ ಮೃಗಾಲಯಗಳಿಗೆ ಪ್ರಾಣಿಗಳು ಬೇಕು, ಅದನ್ನೇ ಅವಲಂಬಿಸಿ ಅದೆಷ್ಟೋ ಕುಟುಂಬ, ಕಂಪನಿಗಳು ಬದುಕಿಕೊಂಡಿರುತ್ತವೆ. ಈ ವನ್ಯ ಮೃಗಗಳನ್ನು ಕೊಲ್ಲುವ, ಕೊಳ್ಳುವ, ಮಾರಾಟ ಮಾಡುವ ವ್ಯವಹಾರ ರಾಜಾರೋಷ್ ಆಗಿ ತೀರಾ ಇತ್ತೀಚಿನವರೆಗೆ ನಡೆದುಕೊಂಡೇ ಬಂದಿತು. ಇದೆಲ್ಲ ಬದಲಾದದ್ದು ೧೯೬೦-೧೯೭೦ ರಲ್ಲಿ. ಏಷ್ಯಾ ಮತ್ತು ಆಫ್ರಿಕಾದ ದೇಶಗಳಲ್ಲಿ ಅವೈಜ್ಞಾನಿಕ, ಅನೈತಿಕ ಬೇಟೆ ಅಲ್ಲಿನ ಆಡಳಿತಕ್ಕೆ ತಲೆಬಿಸಿಯಾಗುವ ಹಂತವನ್ನು ತಲುಪಿದಾಗ ಈ ಭಾಗದ ದೇಶಗಳು ಇದರ ವಿರುದ್ಧ ದನಿಯೆತ್ತಿದವು.
೧೯೭೩ರಲ್ಲಿ ಭಾರತವೂ ಸೇರಿದಂತೆ ಸುಮಾರು ೮೮ ದೇಶಗಳು ವನ್ಯಜೀವಿಗಳ, ವನ್ಯೋತ್ಪನ್ನಗಳ ಅವ್ಯಾಹತ, ಲೆಕ್ಕ ಮೀರಿದ
ವ್ಯಾಪಾರವನ್ನು ಹತೋಟಿಗೆ ತರುವುದು ಹೇಗೆ ಎಂದು ಚರ್ಚಿಸಲು ಒಂದೆಡೆ ಸೇರಿದ್ದವು. ಈ ಸಮ್ಮೇಳನ ದಿಕ್ಕು ದೆಸೆಯಿಲ್ಲದ ರೀತಿ, ಕಾಟಾಚಾರಕ್ಕೆ ನಡೆಯುತ್ತಿತ್ತು. ಸಮ್ಮೇಳನ ಇನ್ನೇನು ಮುಗಿಯುವ ಹಂತದಲ್ಲಿತ್ತು. ಈ ವನ್ಯ ಸಂರಕ್ಷಣಾ ಸಮ್ಮೇಳನ ನಡೆಯು ತ್ತಿರುವಾಗಲೇ ಒಂದು ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ನ್ಯೂಯಾರ್ಕ್ ಜೆಎ-ಕೆ ವಿಮಾನ ನಿಲ್ದಾಣದಲ್ಲಿ ಆಫ್ರಿಕಾದಿಂದ ಬಂದ ಒಂದು ಬೃಹತ್ ಪೆಟ್ಟಿಗೆ ವಿಮಾನ ದಿಂದ ಸಾಗಿಸುವಾಗ ಒಡೆದು ಹೋಗಿತ್ತು. ಅಲ್ಲಿನ ಸಿಬ್ಬಂದಿ ಅದರೊಳಗೆ ಏನಿದೆ ಎಂದು ನೋಡಿ ಹೌಹಾರಿದರು. ಆ ದೊಡ್ಡ ಪೆಟ್ಟಿಗೆಯ ತುಂಬೆಲ್ಲ ಪ್ರಾಣಿಯ ಚರ್ಮಗಳು ತುಂಬಿದ್ದವು.
ಅದೆಷ್ಟು ಪ್ರಾಣಿಗಳ ಚರ್ಮ ಅಲ್ಲಿದ್ದಿರಬಹುದು ಅಂದಾಜಿಸಿ ನೋಡೋಣ! ಒಂದು ಲಕ್ಷ ಪ್ರಾಣಿಗಳ ಚರ್ಮ ಆ ಪೆಟ್ಟಿಗೆಯಲ್ಲಿ ಅಮೆರಿಕಾದ ನೆಲಕ್ಕೆ ಬಂದು ಮುಟ್ಟಿದ್ದವು. ಭಾರತದ ಹುಲಿ, ಚಿರತೆ, ದಕ್ಷಿಣ ಅಮೆರಿಕಾದ ಪ್ಯೂಮಾ, ಆಫ್ರಿಕಾದ ಕುಡು, ಜಿಂಕೆ ಹೀಗೆ ಜಗತ್ತಿನ ಎಲ್ಲ ನೆಲದ ಪ್ರಾಣಿಗಳ ಚರ್ಮವಿದ್ದವು. ಇನ್ನೊಂದು ದಿಗ್ಭ್ರಮಿಸುವ ವಿಚಾರವೆಂದರೆ ಅಂದು ಜಗತ್ತಿನಲ್ಲಿದ್ದ ಚಿರತೆಯ ಶೇ.೧೦ ರಷ್ಟಾಗುವಷ್ಟು ಚರ್ಮ ಆ ಪೆಟ್ಟಿಗೆಯಲ್ಲಿತ್ತು. ಇದು ಅಂದು ಜಾಗತಿಕ ಸಂಚಲನವನ್ನೇ ಹುಟ್ಟುಹಾಕಿತು. ಅಲ್ಲಿಯವರೆಗೆ ನಾಮ್ ಕೆ ವಾಸ್ತೆ ನಡೆಯುತ್ತಿದ್ದ ಆ ಸಂರಕ್ಷಣಾ ಸಮ್ಮೇಳನ ಇದರಿಂದಾಗಿ ಅನಿವಾರ್ಯವಾಗಿ ಕೆಲವೊಂದಿಷ್ಟು ನಿರ್ಣಯವನ್ನು ತೆಗೆದುಕೊಳ್ಳುವಂತಾಯಿತು.
ಅಲ್ಲಿಂದ ಮುಂದೆ ವನ್ಯಪ್ರಾಣಿಗಳ ವ್ಯಾಪಾರ ನಿಷೇಧ ಕಾಯ್ದೆಗಳು ಪ್ರಪಂಚದಲ್ಲೆಲ್ಲ ಜಾರಿಯಾದವು. ಅಷ್ಟಕ್ಕೇ ಇದೆಲ್ಲ ಮುಗಿದುಬಿಡುತ್ತದೆಯೇ? ಕಾನೂನು ಜಾರಿ ಮಾಡಿಬಿಡಬಹುದು. ಆದರೆ ಇದು ಅತ್ಯಂತ ಹಣವುಳ್ಳ ಮತ್ತು ವ್ಯವಸ್ಥಿತ ಜಾಲ. ಕಾನೂನುಬಾಹಿರವಾಗಿ ವನ್ಯಪ್ರಾಣಿಗಳ ಮಾರಾಟ ನಿಷೇಽಸಬಹುದು. ಆದರೆ ಸರಕಾರಿ ಸ್ವಾಮ್ಯದ ಮೃಗಾಲಯಗಳನ್ನು ಹೇಗೆ ನಿಭಾಯಿಸುವುದು? ಜಗತ್ತಿನಲ್ಲೆಲ್ಲ ಮೃಗಾಲಯಗಳಾಗಿಬಿಟ್ಟಿದ್ದವು. ಅವುಗಳನ್ನು ಕಾಪಾಡಿಕೊಳ್ಳಬೇಕಲ್ಲ. ಸರಕಾರಗಳಿಗೆ ಒಳ್ಳೆಯ
ಪೀಕಲಾಟ. ಅಲ್ಲಿ ಅಂದು ತೆಗೆದುಕೊಂಡ ಇನ್ನೊಂದು ಅದ್ಭುತ ನಿರ್ಣಯವೆಂದರೆ ಇನ್ನು ಮುಂದೆ ವನ್ಯಜೀವಿಗಳ, ಅವುಗಳ
ಉತ್ಪನ್ನ, ಚರ್ಮ, ಉಗುರು ಇತ್ಯಾದಿ ಯಾರೂ ಹಣಕ್ಕಾಗಿ ಖರೀದಿಸುವಂತಿಲ್ಲ, ಅದು ಕಾನೂನು ಬಾಹಿರ ಎಂದಾಯಿತು.
ಮೃಗಾಲಯಕ್ಕೆ ಪ್ರಾಣಿ ಬೇಕಾದಲ್ಲಿ ಅದನ್ನು ಕೂಡ ಸರಕಾರಗಳು ಹಣ ಕೊಟ್ಟು ಖರೀದಿಸುವಂತಿಲ್ಲ. ಇದಕ್ಕೆ ಭಾರತವೂ ಸೇರಿದಂತೆ ಎಲ್ಲ ದೇಶಗಳು ಒಪ್ಪಿಕೊಂಡವು. ಇದಾದ ನಂತರ ಇಂದಿಗೂ ಯಾವುದೇ ಮೃಗಾಲಯಗಳು, ಸಂರಕ್ಷಣಾ ಕಾರ್ಯ ಕ್ರಮಗಳಿಗೆ ಯಾವುದೇ ಸರಕಾರ ಹಣ ಕೊಟ್ಟು ಪ್ರಾಣಿಗಳನ್ನು ಖರೀದಿಸುವುದಿಲ್ಲ. ಎಲ್ಲ ಮೃಗಾಲಯ ಮತ್ತು ಸರಕಾರ ಬಾರ್ಟರ್ ಪದ್ಧತಿಯ ಮೂಲಕ (ವಿನಿಮಯ ವ್ಯವಸ್ಥೆ) ಪ್ರಾಣಿಗಳನ್ನು ಅದಲಿ ಬದಲಿ ಮಾಡಿಕೊಳ್ಳುತ್ತವೆ.
ಭಾರತ ತಂದ ಚಿರತೆಗೆ ಮೂರೂವರೆ ಕೋಟಿ, ಅದು ಒಂದು ಚಿರತೆಯ ರೇಟ್ ಅಲ್ಲ. ಬದಲಿಗೆ ಅದು ಸಾಗಾಣಿಕೆಗೆ, ವ್ಯವಸ್ಥೆಗೆ, ಆ ಯೋಜನೆಗೆ ತಗುಲಿದ ಅಥವಾ ತೆಗೆದಿಟ್ಟ ವೆಚ್ಚ. ಇಂದು ಮೃಗಾಲಯಕ್ಕೆ ಪ್ರಾಣಿ ಬೇಕೆಂದರೆ ಮೃಗಾಲಯ ಅಥವಾ ಸರಕಾರ ಬೇಡಿಕೆಯನ್ನು ಮುಂದಿಡುತ್ತದೆ. ಈ ಬೇಡಿಕೆಗಳನ್ನೆಲ್ಲ ಈಗೀಗ ಒಂದೆಡೆ ಇಂಟರ್‌ನೆಟ್‌ನಲ್ಲಿ ಕೋರಿಕೊಳ್ಳುವ ವ್ಯವಸ್ಥೆ ಜಾರಿಯಲ್ಲಿದೆ. ನನಗೆ ಮೂರು ನರಿ ಬೇಕು ಎಂದು ಒಂದು ಮೃಗಾಲಯ ಕೇಳಿಕೊಂಡರೆ, ನನ್ನಲ್ಲಿ ನರಿಗಳಿವೆ, ಬದಲಿಗೆ ಹತ್ತು ಹೆಬ್ಬಾವು ಬೇಕು ಎಂದು ಹಣವಿಲ್ಲದೇ ವ್ಯವಹಾರ ನಡೆಯುತ್ತದೆ.
ಈ ಪದ್ಧತಿ ಒಳ್ಳೆಯದೇ ಆಗಿದ್ದರೂ ಇದು ಕೂಡ ನೈತಿಕವಾಗಿಯೇ ನಡೆಯುತ್ತದೆ ಎಂಬುದರ ಬಗ್ಗೆ ಖಚಿತತೆಯಿಲ್ಲ. ಯಾವುದೇ
ದೃಷ್ಟಿಯಿಂದ ನೋಡಿದರೂ ಮೃಗಾಲಯಗಳು ಅನೈತಿಕವೇ. ಇದೆಲ್ಲವನ್ನು ಬುಡದಿಂದ ತುದಿಯವರೆಗೆ ನೈತಿಕವಾಗಿ ನಡೆಸಿಕೊಂಡು ಹೋಗಲು ಸಾಧ್ಯವೇ ಇಲ್ಲ. ಹೇಗೋ ನಡೆದುಕೊಂಡು ಬಂದಿದೆ. ವೀರಪ್ಪನ್ ಅಷ್ಟು ಕಾಲ ಸರಕಾರ ಬಯಸಿ ದರೂ ಬಂಧಿಸಲಾಗಿಲ್ಲ ಎಂಬುದಕ್ಕೆ ಆತ ದಟ್ಟ ಕಾಡಿನಲ್ಲಿದ್ದ ಎನ್ನುವ ವಿವರಣೆ ಸರಿ ಹೊಂದಬಹುದು. ಆದರೆ ಆತ ಇಷ್ಟೆಲ್ಲಾ
ಕಾನೂನು ಇದ್ದರೂ ಆನೆ ದಂತ, ಪ್ರಾಣಿಗಳ ಚರ್ಮ, ಉಗುರು, ಮೂಳೆ ಇವನ್ನೆಲ್ಲ ದೇಶದ ಮಧ್ಯದಲ್ಲಿ ಕೂತು ಕಳ್ಳ ಸಾಗಾಣಿಕೆ ಮಾಡುತ್ತಿದ್ದನಲ್ಲ, ಇದೆಲ್ಲ ನಡೆಯುತ್ತಿದ್ದುದು ಹೇಗೆ ಎಂದು ಪ್ರಶ್ನಿಸಿಕೊಂಡಾಗ ಇದೆಲ್ಲ ಎಷ್ಟು ವ್ಯವಸ್ಥಿತವಾಗಿ ಜಾಗತಿಕ ಮಟ್ಟದಲ್ಲಿ ನಮ್ಮೆದುರಲ್ಲಿಯೇ ವ್ಯಾಪಿಸಿದೆ ಎಂಬ ಅಂದಾಜಾಗುತ್ತದೆ.
ನಮ್ಮಲ್ಲಿಯೇ ಹೀಗಾದರೆ ಅರಾಜಕತೆ ತುಂಬಿದ, ಇಂದು ಅತಿಹೆಚ್ಚು ವನ್ಯ ಮೃಗಗಳಿರುವ ಆಫ್ರಿಕಾ ದೇಶಗಳಲ್ಲಿ, ಬ್ರೆಝಿಲ್‌ನಲ್ಲಿ ಸ್ಥಿತಿ ಹೇಗಿರಬಹುದು? ಎಲ್ಲ ಸಮಸ್ಯೆಯನ್ನೂ ಕಾನೂನು ನಿಭಾಯಿಸಲಿಕ್ಕಾಗುವುದಿಲ್ಲ. ಜಾಗೃತಿ ಬೆಳೆಯಬೇಕು, ಬೆಳೆಸಬೇಕು, ಸರಕಾರ ಜನರಿಗೆ ಹೇಳಿದ್ದನ್ನೇ ಹೇಳುತ್ತಿರಬೇಕು. ಆಗ ಕ್ರಮೇಣ ಇದೆಲ್ಲ ಬದಲಾಗಬಹುದು. ಆದರೆ ಕಾಲ ಅಷ್ಟರೊಳಗೆ ಮೀರಿ ಇನ್ನಷ್ಟು ಘಾಸಿಯಾಗಬಾರದಷ್ಟೆ. ಇವೆಲ್ಲ ಹೀಗೆ ಮಾಡಿದರೂ ತಪ್ಪು, ಹಾಗೆ ಮಾಡಿದರೂ ತಪ್ಪು. ಕೆಲವೊಂದನ್ನು ಕಂಡರೂ ಕಾಣದಂತೆ ಇರಬೇಕಾದ ಅನಿವಾರ್ಯತೆ.
ಇದೆಲ್ಲ ನಮ್ಮ ಪೂರ್ವಜರು ಮಾಡಿಹೋದ ಅನಾಚಾರ, ನಾವು ಅನುಭವಿಸಬೇಕು. ಇಂದು ಸರಿ ಮಾಡಲಿಲ್ಲವೆಂದರೆ ಮುಂದಿನ ವರು ಇನ್ನಷ್ಟು ಭೀಕರವಾಗಿ ಇದನ್ನೆಲ್ಲ ಎದುರಿಸಬೇಕಾಗುತ್ತದೆ. ಹಾಗಂತ ಪರಿಹಾರ ಯಾವುದೇ ಮಾರ್ಗದ್ದಿರಲಿ, ಅವು ಮಾತ್ರ ಅನೈತಿಕವೇ.