Friday, 20th September 2024

ಅರಣ್ಯಾಧಿಕಾರಿಗಳೇ, ಸಫಾರಿ ಡೇಂಜರಸ್, ಡ್ರೋನ್ ಸುರಕ್ಷಿತ !

ನೂರೆಂಟು ವಿಶ್ವ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಆನೆ ಮತ್ತು ನಾನು ಈಗ ಸುದ್ದಿಯಲ್ಲಿದ್ದೇವೆ. ಹೀಗೆ ಸುದ್ದಿಯಲ್ಲಿದ್ದ ತಪ್ಪಿಗೆ ಅರಣ್ಯ ಇಲಾಖೆ ನನಗೊಂದು ನೋಟಿಸ್ ನೀಡಿದೆ. ಅವರ ಪ್ರಕಾರ, ನಾನು ಮಾಡಿದ ಅಪರಾಧ ಅಂದ್ರೆ, ಸಾಯಂಕಾಲ ಐದು ಗಂಟೆ ತನಕ ದೇವಾಲಯದ ಸುತ್ತಮುತ್ತ ಇರಬಹುದು ಎಂಬ ಸೂಚನೆಯಿದ್ದರೂ, ಇನ್ನೂ ಒಂದು ಗಂಟೆ ಹೆಚ್ಚಿನ ಕಾಲ ಅಲ್ಲಿದ್ದಿದ್ದು ಮತ್ತು ಅಲ್ಲಿ ಅನುಮತಿ ಇಲ್ಲದೇ ಡ್ರೋನ್
ಶೂಟಿಂಗ್ ಮಾಡಿದ್ದು.

ಈ ನೋಟಿಸ್ ನೋಡಿ, ನಗಬೇಕು ಅಂತಲೂ ಅನಿಸಲಿಲ್ಲ, ಅಳಬೇಕು ಅಂತಲೂ ಅನಿಸಲಿಲ್ಲ. ನಮ್ಮ ವ್ಯವಸ್ಥೆ ನೋಡಿ ‘ಇಸ್ಶಿ’ ಅನಿಸಿತು. ಈ ನೋಟಿಸ್‌ಗೆ ನಾನು ಕಾನೂನು ಪ್ರಕಾರ ಯಾವ ಕ್ರಮವನ್ನು ಕೈಗೊಳ್ಳಬೇಕೋ, ಅದನ್ನು ಕೈಗೊಳ್ಳುತ್ತೇನೆ, ಬಿಡಿ. ಅದು ಬೇರೆ ಮಾತು. ಆದರೆ ನಮ್ಮ ಅರಣ್ಯಾಧಿಕಾರಿಗಳ ಸೂಕ್ಷ್ಮ ಸಂವೇದನೆ ಮತ್ತು ಕಾರ್ಯದಕ್ಷತೆ ಬಗ್ಗೆ ನನಗೆ ಅತೀವ ಹೆಮ್ಮೆ ಮತ್ತು ಅಭಿಮಾನವಾಯಿತು. ಅರಣ್ಯದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿಲ್ಲದೇ ಪರಿತಪಿಸಿದರೂ
ಸುಮ್ಮನಿರುವ ಮತ್ತು ಹಣ ಕಮ್ಮಿಯಾದಾಗಲೆಲ್ಲ ಪ್ರಾಣಿಗಳಿಗೆ ಕುಡಿಯುವ ನೀರನ್ನು ಪೂರೈಸಲು, ಹೊಂಡ, ಕೆರೆಗಳನ್ನು ತೋಡಲು ಮುಂದಾಗುವ ಅರಣ್ಯಾಧಿ ಕಾರಿಗಳು, ಸಮಯ ಪಾಲಿಸಲಿಲ್ಲ ಮತ್ತು ಅನುಮತಿಯಿಲ್ಲದೇ ಡ್ರೋನ್ ಹಾರಿಸಿದರು ಎಂಬ ಕಾರಣ ನೀಡಿ ನೋಟಿಸ್ ನೀಡಿದ್ದು ತೀರಾ ಕ್ಷುಲ್ಲಕ, ಬಾಲಿಶ ಮತ್ತು ತಮಾಷೆಯಾಗಿ ಕಂಡಿತು.

ನಮ್ಮ ಅರಣ್ಯಾಧಿಕಾರಿಗಳು ಇಷ್ಟೇ ರಕ್ಷಣೆಯನ್ನು ಕಾಡು ಮತ್ತು ಕಾಡಾನೆಗಳಿಗೆ ನೀಡಿದ್ದಿದ್ದರೆ, ಕರ್ನಾಟಕ ಇನ್ನೂ ಹೆಚ್ಚು ಹಸುರಾಗಿರುತ್ತಿತ್ತು. ಇರಲಿ. ಒಂದು ಕ್ಷಣ ಈ ಪ್ರಸಂಗವನ್ನು ಪಕ್ಕಕ್ಕಿಡೋಣ. ಇಲ್ಲಿ ನಿಮಗೆ ಬೇರೊಂದು ಪ್ರಸಂಗವನ್ನು ಹೇಳಬೇಕು. ಸುಮಾರು ಹದಿನೆಂಟು ವರ್ಷಗಳ ಹಿಂದೆ, ನಮ್ಮ ದೇಶದ ಪ್ರಮುಖ
ಫೋಟೋಗ್ರಾಫರ್ ಪೈಕಿ ಒಬ್ಬರಾದ ಅಚಿಂತ್ಯ ಅವರೊಂದಿಗೆ ಗಿರ್ ಅಭಯಾರಣ್ಯಕ್ಕೆ ಹೋಗಲೆಂದು ಅಹಮದಾಬಾದ್‌ಗೆ ಇಂಡಿಯನ್ ಏರ್‌ಲೈನ್ಸ್ ವಿಮಾನದಲ್ಲಿ ಹೋಗುತ್ತಿದ್ದೆ.

ವಿಮಾನ ಇಳಿಯುವುದಕ್ಕೆ ಸುಮಾರು ಒಂದು ಗಂಟೆ ಮೊದಲು, ಅಚಿಂತ್ಯ ಅವರು ವಿಮಾನದಲ್ಲಿ ತಮ್ಮ ಕೆಮರಾ ತೆಗೆದು ಕೆಳಗಿನ ದೃಶ್ಯಗಳನ್ನು ಸೆರೆ ಹಿಡಿಯಲಾ ರಂಭಿಸಿದರು. ಇದನ್ನು ನೋಡಿದ ಗಗನಸಖಿ, ‘ವಿಮಾನದಿಂದ ಫೋಟೋ ತೆಗೆಯಬಾರದು’ ಎಂದು ಹೇಳಿದಳು. ಅದಕ್ಕೆ ಅಚಿಂತ್ಯ ಅವರು, ‘ವಿಮಾನದಿಂದ ಫೋಟೋ ತೆಗೆಯಬಾರದು ಎಂಬ ನಿಯಮ ಇದೆಯಾ? ಅಂಥ ನಿಯಮವಿದ್ದರೆ ತೋರಿಸಿ. ಇಂಡಿಯನ್ ಏರ್‌ಲೈನ್ಸ್ ವಿಮಾನದಲ್ಲಿ ಮಾತ್ರ ಈ ನಿಯಮ ಏಕೆ? ಬೇರೆ ವಿಮಾನದಲ್ಲಿ ಫೋಟೋ ತೆಗೆದರೆ ಯಾರದೂ ಅಭ್ಯಂತರವಿಲ್ಲ. ಇಂಥ ನಿಯಮಗಳ ನೆಪವೊಡ್ಡಿ ಯಾಕೆ ಜನರಿಗೆ ತೊಂದರೆ ಕೊಡುತ್ತೀರಿ? ಇದರಿಂದ ಯಾರಿಗೆ ಸಮಸ್ಯೆ ಆಗುತ್ತದೆ? ಅಕ್ಕಪಕ್ಕದ ಪ್ರಯಾಣಿಕರಿಗೆ ಸಹ ಇದರಿಂದ ತೊಂದರೆ ಆಗುವುದಿಲ್ಲ.

ಯಾಕೆ ನೀವು ನಿಮ್ಮ ಧೋರಣೆಯನ್ನು ಬದಲಿಸಿಕೊಳ್ಳಬಾರದು?’ ಎಂದು ಹೇಳಿ ದರು. ಅಷ್ಟಕ್ಕೇ ಸುಮ್ಮನಾಗದ ಆಕೆ, ತನ್ನ ಹಿರಿಯ ಸಹೋದ್ಯೋಗಿಯನ್ನು ಕರೆದುಕೊಂಡು ಬಂದಳು. ಆತ ಕೂಡ, ‘ಫೋಟೋ ತೆಗೆಯಬಾರದು’ ಎಂದು ವಾದಿಸಿದ. ಅಚಿಂತ್ಯ ತಮ್ಮ ಅದೇ ವಾದವನ್ನು ಮುಂದುವರಿಸಿದರು. ವಿಮಾನದ
ಕರ್ಮಚಾರಿ ಅಚಿಂತ್ಯ ಅವರ ಮುಂದೆ ಸಮರ್ಥ ವಾದ ಮುಂದಿಡಲು ಅಸಮರ್ಥನಾದ. ಅಷ್ಟಕ್ಕೇ ಸುಮ್ಮನಾಗದ ಆತ, ‘ವಿಮಾನದೊಳಗೆ ನಿಯಮ ಉಲ್ಲಂಸಿದ್ದಕ್ಕಾಗಿ ನಿಮ್ಮ ಮೇಲೆ ಕ್ರಮ ಜರುಗಿಸಲಾಗುವುದು’ ಎಂದು ಅವಾಜ್ ಹಾಕಿದ. ಅಚಿಂತ್ಯ ತಮ್ಮ ವಾದವನ್ನು ಬಿಟ್ಟುಕೊಡಲಿಲ್ಲ. ‘ಆ ನಿಯಮವನ್ನು ತೋರಿಸಿ. ನಾನು ಫೋಟೋ ತೆಗೆಯುವುದಿಲ್ಲ’ ಎಂದು ಹೇಳಿದರು.

ಆದರೆ ಆ ನಿಯಮವನ್ನು ತೋರಿಸಲು ಗಗನ ಸಿಬ್ಬಂದಿ ವಿಫಲನಾದ. ವಿಮಾನ ಇಳಿದ ಬಳಿಕ, ಅಚಿಂತ್ಯ ಅವರಿಗೆ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಬುಲಾವ್ ಬಂತು. ‘ನೀವು ತೆಗೆದ ಫೋಟೋವನ್ನು ಡಿಲೀಟ್ ಮಾಡಬೇಕು’ ಎಂದು ಅವರು ಹೇಳಲಾರಂಭಿಸಿದರು. ಅದಕ್ಕೆ ಅಚಿಂತ್ಯ, ‘ವಿಮಾನದಲ್ಲಿ ಫೋಟೋ ತೆಗೆಯ ಬಾರದು ಎಂಬ ನಿಯಮ ಇದ್ದರೆ ಮೊದಲು ತೋರಿಸಿ. ಬೇರೆ ವಿಮಾನದಲ್ಲಿ ಫೋಟೋ ತೆಗೆಯಬಹುದಾದರೆ, ಇಂಡಿಯನ್ ಏರ್‌ಲೈನ್ಸ್ ವಿಮಾನದಲ್ಲಿ ಏಕೆ
ತೆಗೆಯಬಾರದು? ಫೋಟೋ ತೆಗೆಯಬಾರದು ಎಂಬ ನಿಯಮವನ್ನು ತೋರಿಸಿದರೆ, ನಾನೇ ಡಿಲೀಟ್ ಮಾಡುತ್ತೇನೆ’ ಎಂದು ಪಟ್ಟು ಹಿಡಿದರು.

ಕೊನೆಗೂ ಅಧಿಕಾರಿಗಳು ಆ ನಿಯಮವನ್ನು ತೋರಿಸಲಿಲ್ಲ. ಅಸಲಿಗೆ ಅಂಥ ಲಿಖಿತ ನಿಯಮವೇ ಇರಲಿಲ್ಲ. ‘ಈ ಸಲ ಬಿಡ್ತೇವೆ. ಇನ್ನು ಮುಂದೆ ಹೀಗೆ ಮಾಡಿದರೆ ಕೇಸ್ ಹಾಕ್ತೇವೆ’ ಎಂದು ಹೇಳಿ ಮುಖ ಉಳಿಸಿಕೊಂಡರು. ಇದು ಮೊಬೈಲ್ ಯುಗ. ಈಗ ಎಲ್ಲರ ಕೈಯಲ್ಲೂ ಮೊಬೈಲ್ ಅಂದರೆ ಎಲ್ಲರ ಕೈಯಲ್ಲೂ ಕೆಮರಾ. ಎಲ್ಲರೂ ಫೊಟೋಗ್ರಾಫರುಗಳೇ. ಕೋತಿಗೆ ಕೆಮರಾ ಕೊಟ್ಟು ಫೋಟೋ ತೆಗೆಯಬೇಡ ಅಂದ್ರೆ ಕೇಳೀತು. ಮೊಬೈಲ್ ಹಿಡಿದವರಿಗೆ ಈ ಮಾತನ್ನು ಹೇಳುವಂತೆ ಯೇ ಇಲ್ಲ. ವಿಮಾನ ವಿಳಂಬದಿಂದ ನೊಂದ ಪ್ರಯಾಣಿಕನೊಬ್ಬ ಪೈಲಟ್‌ಗೆ ಕಪಾಳಮೋಕ್ಷ ಮಾಡಿದ್ದನ್ನು ಮೊಬೈಲಿನಿಂದ ಸೆರೆ ಹಿಡಿದಿದ್ದನ್ನು ಮೊನ್ನೆಯಷ್ಟೇ ನೋಡಿದ್ದೇವೆ.

ಬೆಂಗಳೂರಿನಿಂದ ಮೈಸೂರಿಗೆ ವಿಮಾನದಲ್ಲಿ ಹೋದ ಪ್ರಯಾಣಿಕನೊಬ್ಬ ಇಡೀ ವಿಮಾನ ಯಾನವನ್ನು ಮೊಬೈಲ್‌ನಲ್ಲಿ ಲೈವ್ ಮಾಡಿದ್ದನ್ನು ನೋಡಿದ್ದೇವೆ. ಇಂದು ಮೊಬೈಲ್ ಫೋಟೋಗ್ರಫಿಯನ್ನು ನಿಗ್ರಹಿಸಲು ಯಾವ ಕಾನೂನಿನಿಂದಲೂ ಸಾಧ್ಯವಾಗುತ್ತಿಲ್ಲ. ‘ಇಲ್ಲಿ ಫೋಟೋ ತೆಗೆಯಬಾರದು’ ಎಂಬ ಫಲಕಕ್ಕೆ ಅರ್ಥವೇ ಇಲ್ಲ. ಕಾರಣ, ಮೂರು ಸಾವಿರ ರುಪಾಯಿಗೆ ಬಟನ್ ಕೆಮರಾ ಅಥವಾ ಹಿಡನ್ ಕೆಮರಾ ಸಿಗುವ ಈ ಕಾಲದಲ್ಲಿ, ಯಾವುದೇ ಪ್ರದೇಶದಲ್ಲಿ ಫೋಟೋ ನಿಷೇಧವಿದ್ದರೂ ಫೋಟೋ ತೆಗೆಯುವುದು ಸಾಧ್ಯವಿದೆ. ಅದರಲ್ಲೂ ಇಂದು ವಿಮಾನದ ಹೊರಗೊಂದೇ ಅಲ್ಲ, ಒಳಗೂ ಫೋಟೋ ತೆಗೆಯಬಹುದು. ಹಾಗಾದರೆ ಫೋಟೋ ತೆಗೆಯಬಾರದು ಎಂಬ ನಿಯಮಕ್ಕೆ ಯಾರಾದರೂ ತಿದ್ದುಪಡಿ ತಂದರಾ? ಇಲ್ಲ. ಆಗಲೂ ಆ ನಿಯಮ ಜಾರಿಯಲ್ಲಿರಲಿಲ್ಲ. ಈಗಲೂ ಇಲ್ಲ. ಇಲ್ಲದ ನಿಯಮ ಇದೆ ಎಂದು ಆಗ ನಂಬಿಸಿದ್ದರಷ್ಟೇ.

ಮೊನ್ನೆ ಮೊನ್ನೆ ತನಕವೂ ವಿಮಾನ ಟೇಕಾಫ್ ಆಗುವಾಗ ಮೊಬೈಲನ್ನು ಸ್ವಿಚಾಫ್ ಮಾಡಬೇಕಿತ್ತು ಅಥವಾ ಏರೋಪ್ಲೇನ್ ಮೋಡ್ ನಲ್ಲಿಡಬೇಕಾಗಿತ್ತು. ಮೊಬೈಲ್ ಸಿಗ್ನಲ್ ನೇವಿಗೇಶನ್ ಸಿಸ್ಟಮ್‌ಗೆ ಧಕ್ಕೆಯಾಗುತ್ತದೆ ಎಂದು ಹೇಳುತ್ತಿದ್ದರು. ಈಗಂತೂ ಅನೇಕರು ತಮ್ಮ ಮೊಬೈಲ್ ಸ್ವಿಚಾಫ್ ಮಾಡುವುದಿಲ್ಲ. ಅಂತಾ ರಾಷ್ಟ್ರೀಯ ವಿಮಾನಯಾನದಲ್ಲಿ ವೈಫೈ ಸೌಲಭ್ಯ ಇರುವುದರಿಂದ ಸದಾ ಕನೆಕ್ಟ್ ಆಗಿರುತ್ತಾರೆ. ಈಗಂತೂ ಮೊಬೈಲ್ ಬಂದ್ ಮಾಡಿಟ್ಟುಕೊಳ್ಳಬೇಕು ಎಂಬ ಮಾತಿಗೆ ಅರ್ಥವೇ ಇಲ್ಲ. ಇಂದಿನ ದಿನಗಳಲ್ಲಿ, ‘ಫೋಟೋ ತೆಗೆಯಬಾರದು’ ಎಂಬ ನಿಯಮಕ್ಕಂತೂ ಅರ್ಥವೇ ಇಲ್ಲ. ಅಂಥ ನಿಯಮ ಹಾಕಿದರೆ, ಅದನ್ನು ಚೆನ್ನಾಗಿ ಉಲ್ಲಂಘಿಸುವುದು ಹೇಗೆ ಎಂದು ಎಲ್ಲರೂ ಯೋಚಿಸುತ್ತಾರೆ ಮತ್ತು ಯಶಸ್ವಿಯೂ ಆಗುತ್ತಾರೆ. ಕಾರಣ ಈ ದಿನಗಳಲ್ಲಿ ತಂತ್ರಜ್ಞಾನ ಅಷ್ಟು ಮುಂದು ವರಿದಿದೆ.

ಮನೆಯಲ್ಲಿ ಕುಳಿತು ಗೂಗಲ್ ತ್ರಿಡಿ ಮ್ಯಾಪ್ ಮೂಲಕ, ಅಮೆರಿಕದ ಅಧ್ಯಕ್ಷರು ವಾಸಿಸುವ ವೈಟ್ ಹೌಸ್, ಫ್ಯಾಮಿಲಿ ಡೈನಿಂಗ್ ರೂಮ್ ಮತ್ತು ಅದರ ಸುತ್ತಮುತ್ತಲ ಪ್ರದೇಶವನ್ನು ನೋಡಲು ಸಾಧ್ಯವಾಗಿರುವಾಗ, ‘ಇಲ್ಲಿ ಫೋಟೋ ನಿಷೇಧಿಸಲಾಗಿದೆ’ ಎಂಬ ಫಲಕವನ್ನು ವೈಟ್ ಹೌಸಿನ ಮುಂದೆ ತಗುಲಿ ಹಾಕಿದರೆ, ಅದಕ್ಕೆ ಅರ್ಥವಿದೆಯಾ? ಮನುಷ್ಯನ ಕಿವಿಯೊಳಗೆ, ಹೃದಯದೊಳಗೆ, ದೇಹದ ನಾಳಗಳೊಳಗೆ ಕೆಮರಾವನ್ನು ಕಳಿಸಿ ಫೋಟೋ ತೆಗೆಯುವುದು ಸಾಧ್ಯವಿರುವಾಗ, ಮನುಷ್ಯನ ಫೋಟೋ ತೆಗೆಯಬಾರದು ಎಂಬ ನಿಯಮವನ್ನು ಜಾರಿಗೆ ತಂದರೆ ಅದೆಷ್ಟು ಬಾಲಿಶವಾಗಬಹುದು, ಒಂದು ಕ್ಷಣ ಯೋಚಿಸಬೇಕು.
ಈಗ ನಾನು ಡ್ರೋನ್ ಕೆಮರಾ ಅಥವಾ ಡ್ರೋನ್ ಚಿತ್ರೀಕರಣದ ವಿಷಯಕ್ಕೆ ಬರುತ್ತೇನೆ. ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಡ್ರೋನ್ ಚಿತ್ರೀಕರಣವನ್ನು ಅಲ್ಲಿಯೇ ನಿಂತು ಮಾಡಬೇಕಿಲ್ಲ.

ಅದೇನು ಸ್ಥಿರ ಛಾಯಾಗ್ರಹಣ (Still Photography) ಅಲ್ಲ. ಬೆಟ್ಟದ ತಪ್ಪಲಲ್ಲಿ ನಿಂತೋ, ಗುಂಡ್ಲುಪೇಟೆ ಪಟ್ಟಣದಲ್ಲಿ ಕುಳಿತೋ, ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿರುವ ದೇವಸ್ಥಾನವನ್ನು ಚಿತ್ರೀಕರಿಸಿಕೊಳ್ಳಬಹುದು. ಡ್ರೋನ್ ಅಂದ್ರೆ ಹದ್ದಿನ ಎದೆಗೆ ಕೆಮರಾ ಕಟ್ಟಿ ಕಳಿಸಿದಂತೆ. ೧೨೦ ಮೀಟರ್ ಎತ್ತರಕ್ಕಿಂತ ಮೇಲೆ ಡ್ರೋನ್ ಹಾರಿಸಬಾರದು ಎಂಬ ನಿಯಮವಿದೆ. ಅದಕ್ಕಿಂತ ಎತ್ತರ ಹಾರಿಸಬೇಕೆಂದರೂ ಹಾರಿಸಲು ಆಗುವುದಿಲ್ಲ. ಕಾರಣ, ಈಗ ಹೊಸತಾಗಿ ಬರುತ್ತಿರುವ ಡ್ರೋನ್‌ನಲ್ಲಿ ೧೨೦ ಮೀಟರ್ ಎತ್ತರಕ್ಕಿಂತ ಎತ್ತರ ಹಾರುವ ಆಯ್ಕೆಯನ್ನು disable ಮಾಡಲಾಗಿದೆ. ಆದರೆ ದೂರದ ವಿಷಯಕ್ಕೆ ಬಂದಾಗ ಮಿತಿಯಿಲ್ಲ. ಹನ್ನೆರಡು ಕಿ.ಮೀ.ಗಿಂತ ದೂರದವರೆಗೆ ಹಾರಿಸಬಹುದು. ಆದರೆ ವಾಪಸ್ ಬರುವಷ್ಟು ಬ್ಯಾಟರಿ ಇರಬೇಕಷ್ಟೆ. ಡ್ರೋನ್ ಕೆಮರಾದ ವೈಶಿಷ್ಟ್ಯಗಳೇ ಇವು.

ಎರಡು ತಿಂಗಳ ಹಿಂದೆ, ನನ್ನ ಸ್ನೇಹಿತರೊಂದಿಗೆ ಚಿಕ್ಕಬಳ್ಳಾಪುರ ಸನಿಹ ಸದ್ಗುರು ನಿರ್ಮಿಸಿರುವ ಭವ್ಯ ಆದಿಯೋಗಿ ಪ್ರತಿಮೆಯನ್ನು ನೋಡಲು ಡ್ರೋನ್ ಕೆಮರಾ
ಸಹಿತ ಹೋಗಿದ್ದೆ. ನನ್ನ ಸ್ನೇಹಿತರ ಬಳಿಯಿದ್ದ ಡ್ರೋನ್ ನೋಡಿ, ‘ಇಲ್ಲಿ ಡ್ರೋನ್ ಚಿತ್ರೀಕರಣಕ್ಕೆ ಅವಕಾಶ ಇಲ್ಲ’ ಎಂದು ಸಂಘಟಕರೊಬ್ಬರು ಹೇಳಿದರು. ಡ್ರೋನ್ ಚಿತ್ರೀಕರಣಕ್ಕೆ ಇಂಥ ರಗಳೆ ಬೇಡ ಎಂದು ನನ್ನ ಸ್ನೇಹಿತರು ಎಷ್ಟೇ ತಿಳಿ ಹೇಳಿದರೂ ಆ ಮಹಾಶಯರು ಕೇಳಲಿಲ್ಲ. ನಂತರ ನನ್ನ ಸ್ನೇಹಿತರು ಅಲ್ಲಿಂದ ಎರಡು ಕಿ.ಮೀ. ದೂರ ಹೋಗಿ, ಆದಿಯೋಗಿಯ ಮುಂದೆ ಡ್ರೋನ್ ಹಾರಿಸಿ ಚಿತ್ರೀಕರಣ ಮಾಡಿ, ಯಾರು ಬೇಡ ಎಂದಿದ್ದರೋ ಅವರಿಗೇ ಎರಡು ಗಂಟೆಯ ಬಳಿಕ, ವಿಡಿಯೋ ಕ್ಲಿಪ್ ಕಳಿಸಿಕೊಟ್ಟಿದ್ದರು!

ನಮ್ಮ ಜನರಿಗೆ ಡ್ರೋನ್ ಬಗ್ಗೆ ಸರಿಯಾದ ಕಲ್ಪನೆ ಇದ್ದಂತಿಲ್ಲ. ಅದೇನು ರಾಕೆಟ್ ಅಥವಾ ಮಿಸೈಲ್ ಅಲ್ಲ. ಅದು ಯಾರ ಮನೆಯನ್ನೂ ಹಾಳು ಮಾಡುವುದಿಲ್ಲ. ಅದು ಭೂತ-ಪಿಶಾಚಿಯೂ ಅಲ್ಲ. ಅದು ಕೆಮರಾ ಇರುವ ಹಾರುವ ಯಂತ್ರ ಅಷ್ಟೇ. ಫೋಟೋ ತೆಗೆಯುವುದರ ಹೊರತಾಗಿ ಮತ್ತೇನೂ ಮಾಡಲೂ ಸಾಧ್ಯವಿಲ್ಲ. ಡ್ರೋನ್ ನಿಷೇಧಿತ ಪ್ರದೇಶಗಳು ಯಾವವು ಎಂಬುದನ್ನು ಈಗಾಗಲೇ ಸ್ಪಷ್ಟವಾಗಿ ಗುರುತಿಸಲಾಗಿದೆ. ಡ್ರೋನ್ ರಿಮೋಟ್ ಕಂಟ್ರೋಲ್‌ನಲ್ಲಿ ಈ ಬಗ್ಗೆ ಕ್ಷಣ ಕ್ಷಣಕ್ಕೂ ಎಚ್ಚರಿಕೆಯ ಸಂದೇಶ ಬರುತ್ತದೆ. ಈಗ ಬರುತ್ತಿರುವ ಡ್ರೋನ್‌ಗಳು ಹಾರುವಾಗ ಡಿಕ್ಕಿಯಾಗದಂತೆ, ಮರ, ಗುಡ್ಡ, ಕಟ್ಟಡಗಳಿಗೆ ಅಪ್ಪಳಿಸದಂತೆ,
ಸೆನ್ಸರ್ ವ್ಯವಸ್ಥೆಯನ್ನು ಹೊಂದಿವೆ. ಹಠಾತ್ ಕಟ್ಟಡ, ಮರ, ಗುಡ್ಡ, ವಿದ್ಯುತ್ ತಂತಿ, ಕಂಬ ಅಡ್ಡ ಬಂದರೆ, ಅಲ್ಲಿಯೇ ಹಾರಾಡುತ್ತಾ ನಿಲ್ಲುತ್ತವೆಯೇ ಹೊರತು ಅಪ್ಪಳಿಸುವುದಿಲ್ಲ.

ವಿಮಾನ, ಹೆಲಿಕಾಪ್ಟರ್ ಎಷ್ಟು ಸುರಕ್ಷಿತವೋ, ಡ್ರೋನ್ ಕೂಡ ಅಷ್ಟೇ ಸುರಕ್ಷಿತ. ಡ್ರೋನ್ ಪರಿಭಾಷೆಯಲ್ಲಿ ಅದನ್ನು ಏರ್ ಕ್ರಾಫ್ಟ್ ಎಂದೂ, ಅದನ್ನು ಹಾರಿಸುವವರನ್ನು ಪೈಲಟ್ ಎಂದೂ ಕರೆಯುತ್ತಾರೆ. ಡ್ರೋನ್ ಟೇಕಾಫ್ ಮತ್ತು ಲ್ಯಾಂಡಿಂಗ್ ವಿಮಾನಕ್ಕಿಂತ ಹೆಚ್ಚು ಸುರಕ್ಷಿತ. ಹಕ್ಕಿಗಳೂ ಡಿಕ್ಕಿ ಹೊಡೆಯುವ ಸಾಧ್ಯತೆ ತೀರಾ ಕಮ್ಮಿ. ಹಾರುವಾಗಲೂ ಡ್ರೋನ್ ಕ್ರ್ಯಾಶ್ ಆಗುವುದಿಲ್ಲ. ಬ್ಯಾಟರಿ ಖಾಲಿಯಾದರೆ, ಅದರ ಪಾಡಿಗೆ ಅದೇ, ಹಾರಿಸಿದ ಜಾಗಕ್ಕೆ ವಾಪಸ್
ಬರುತ್ತದೆ. ಹತ್ತು ತಾಸು ಬಯಲು ಪ್ರದೇಶದಲ್ಲಿ ಪ್ರಾಕ್ಟೀಸ್ ಮಾಡಿದರೆ, ಯಾರು ಬೇಕಾದರೂ ಡ್ರೋನ್ ಪೈಲಟ್ ಆಗಬಹುದು. ಬೆಂಗಳೂರು ವಿಮಾನ ನಿಲ್ದಾಣದ ಆಸುಪಾಸಿನ ಐದಾರು ಏರಿಯಲ್ ಕಿ.ಮೀ. ಪ್ರದೇಶಗಳಲ್ಲಿ ಡ್ರೋನ್‌ನ್ನು ೧೨೦ ಮೀಟರ್ ಎತ್ತರಕ್ಕಿಂತ ಹಾರಿಸಬೇಕೆಂದರೂ ಸಾಧ್ಯವಿಲ್ಲ.

ಹಾಗೆ ಇನ್ನಿತರ ಸೂಕ್ಷ್ಮ ಪ್ರದೇಶಗಳಲ್ಲೂ ಇದಕ್ಕಿಂತ ಎತ್ತರಕ್ಕೆ ಹಾರಿಸುವಂತಿಲ್ಲ. ಹೀಗಿರುವಾಗ ಡ್ರೋನ್ ಚಿತ್ರೀಕರಣಕ್ಕೆ ಯಾಕೆ ಇಷ್ಟೆಲ್ಲ ಬೊಬ್ಬೆಯೋ ಅರ್ಥವಾಗುವುದಿಲ್ಲ. ಡ್ರೋನ್ ಬಗ್ಗೆ ಏನೂ ಗೊತ್ತಿಲ್ಲದ ಅವಿವೇಕಿಗಳು ಬೊಬ್ಬೆ ಹೊಡೆಯುವುದನ್ನು ನೋಡಲಾಗುವುದಿಲ್ಲ. ಡ್ರೋನ್‌ನ್ನು (೨೫೦ ಗ್ರಾಮ್‌ಗಿಂತ
ಹೆಚ್ಚಿನ ಭಾರದ್ದು) ಬಳಸಿ, ಚಿತ್ರೀಕರಣ ಮಾಡಲು ಪರವಾನಗಿ ಬೇಕು ಎಂಬ ನಿಯಮವಿದೆಯಂತೆ. ಆದರೆ ಇಂಥ ಬುದ್ಧಿಗೇಡಿಗಳಿಗೆಂದೇ ‘ಡಿಜೆಐ’ ಎಂಬ ಸಂಸ್ಥೆ ೨೪೯ ಗ್ರಾಮ್ ತೂಕದ ಪುಟ್ಟ ಡ್ರೋನ್‌ನ್ನು ತಯಾರಿಸಿದೆ. ಡ್ರೋನ್ ಮೇಲೆಯೇ ‘೨೪೯ ಗ್ರಾಮ್’ ಎಂದು ದಪ್ಪಕ್ಷರಗಳಲ್ಲಿ ಮುದ್ರಿಸಿದೆ. ೨೫೦ ಗ್ರಾಮ್‌ಗಿಂತ ಕಮ್ಮಿ ಭಾರದ ಡ್ರೋನ್ ಆಟಿಕೆ ಸಾಮಾನಿಗೆ ಸಮ. ನಾನು ಮೊನ್ನೆ ಬಳಸಿದ್ದು ‘೨೪೯ ಗ್ರಾಮ್’ನ ಆಟಿಕೆ ಡ್ರೋನ್‌ನ್ನು. ಅದನ್ನು ಹಾರಿಸಲು ಪರವಾನಗಿ ಬೇಕಿಲ್ಲ.
ನಾನು ಆ ಡ್ರೋನ್‌ನ್ನು ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲೊಂದೇ ಅಲ್ಲ, ಬ್ರಿಟನ್, ಜರ್ಮನಿ, ಆಸ್ಟ್ರಿಯಾ, ಡೆನ್ಮಾರ್ಕಿನಲ್ಲೂ ಹಾರಿಸಿದ್ದೇನೆ. ಎಲ್ಲಿ ಡ್ರೋನ್ ಹಾರಿಸಿದರೂ ತಕ್ಷಣ ಗೊತ್ತಾಗುವ, ಅರಣ್ಯ ಮತ್ತು ಪೊಲೀಸ್ ವ್ಯವಸ್ಥೆ ನಮಗಿಂತ ಚುರುಕಾಗಿರುವ, ಆ ರಾಸ್ಟ್ರಗಳಲ್ಲಿ ಯಾರೂ ನನ್ನನ್ನು ಪ್ರಶ್ನಿಸಿಲ್ಲ.

ಯಾಕೆಂದರೆ, ಹೇಳಿ ಕೇಳಿ ಅದು ಟಾಯ್!

ಅಷ್ಟಕ್ಕೂ ಅರಣ್ಯದಲ್ಲಿ ಸಫಾರಿಗಿಂತ, ಡ್ರೋನ್ ಬಳಕೆ ನೂರಕ್ಕೆ ನೂರು ಪಾಲು ಸುರಕ್ಷಿತ. ನಮ್ಮ ಕಬಿನಿ, ನಾಗರಹೊಳೆ, ಬಂಡೀಪುರದಲ್ಲಿ ಹುಲಿ, ಆನೆಗಳನ್ನು ನೋಡಲು ಪ್ರತಿದಿನ ಎರಡು ಹೊತ್ತು ಅರಣ್ಯ ಇಲಾಖೆ, ಜಂಗಲ್ ಲಾಡ್ಜ್ ಏರ್ಪಡಿಸುವ ಸಫಾರಿ ಅತ್ಯಂತ ಡೇಂಜರಸ್; ಮನುಷ್ಯರಿಗೂ, ಪ್ರಾಣಿಗಳಿಗೂ. ಒಂದು ಹುಲಿಯ ಫೋಟೋ ತೆಗೆಯಲು ಹತ್ತಾರು ವಾಹನಗಳಲ್ಲಿ ಅರವತ್ತು-ಎಪ್ಪತ್ತು ಮಂದಿ ಸುತ್ತು ಗಟ್ಟುವುದು, ಅವನ್ನು ಬೆನ್ನಟ್ಟುವುದು, ಆ ಹುಲಿಗೆ ನೀಡುವ
ಹಿಂಸೆಯಲ್ಲದೇ ಮತ್ತೇನು? ನಿಶ್ಯಬ್ದ ಕಾಡಿನಲ್ಲಿ ಜೀಪ್ ಸಂಚಾರದಿಂದ ಕಾಡುಪ್ರಾಣಿಗಳಿಗೆ ಅದೆಷ್ಟು ಹಿಂಸೆ ಆಗುತ್ತಿರಬಹುದು? ಹುಲಿ ಕಂಡಾಗ, ಇಪ್ಪತ್ತೈದು ಜನ ಏಕಕಾಲಕ್ಕೆ ಫೋಟೋ ಕ್ಲಿಕ್ಕಿಸುವಾಗ ಹೊರಹೊಮ್ಮುವ ಸದ್ದು, ಡ್ರೋನ್ ಹಾರಾಟಕ್ಕಿಂತ ಹೆಚ್ಚು ಗದ್ದಲದಿಂದ ಕೂಡಿರುತ್ತದೆ.

ಸಫಾರಿ ವಾಹನ ಸಂಚರಿಸುವಾಗ ಬರಿಗಣ್ಣಿಗೆ ಕಾಣದ ಅವೆಷ್ಟೋ ಅಸಂಖ್ಯ ಸೂಕ್ಷ್ಮ ಜೀವಿಗಳು ಸಾಯಬಹುದು. ಮುರುಕಿಯಲ್ಲಿ ಜೋರಾಗಿ ಓಡಿಬಂದು ಸಫಾರಿ ವಾಹನಗಳಿಗೆ ಜಿಂಕೆ, ಕಡವೆಗಳು ಡಿಕ್ಕಿ ಹೊಡೆದ ಎಷ್ಟೋ ನಿದರ್ಶನಗಳೂ ಇವೆ. ಕಾಡಾನೆ, ಹುಲಿಗಳು ಮನುಷ್ಯರ ಮೇಲೂ ದಾಳಿ ಮಾಡಬಹುದು. ಇಲ್ಲಿ ತನಕ ದಾಳಿ ಮಾಡಿಲ್ಲ ಅಂದ್ರೆ, ನಾಳೆ ಮಾಡುವುದಿಲ್ಲ ಎಂದರ್ಥವಲ್ಲ. ಹೀಗಾಗಿ ಡ್ರೋನ್‌ಗಿಂತ ಸಫಾರಿ ಅಪಾಯಕಾರಿ. ಕಾಡಿನ ಮೇಲೆ ಹಾರುವ ಡ್ರೋನ್ ಗಳಿಂದ ಯಾವ ರೀತಿಯಿಂದಲೂ ಕಾಡುಪ್ರಾಣಿಗಳಿಗೆ ತೊಂದರೆಯೂ ಇಲ್ಲ, ಅಪಾಯವೂ ಇಲ್ಲ.

ನನಗೆ ಇನ್ನೂ ತಮಾಷೆಯಾಗಿ ಕಂಡಿದ್ದು ಏನು ಗೊತ್ತಾ? ಬಂಡೀಪುರದ ಅರಣ್ಯಾಧಿಕಾರಿಯೊಬ್ಬರು, ‘ನೀವು ಡ್ರೋನ್ ಚಿತ್ರೀಕರಣ ಮಾಡಿದ್ದು ತಪ್ಪಲ್ಲ. ಆದರೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದು ತಪ್ಪು. ಹೀಗಾಗಿ ಅದನ್ನು ಡಿಲೀಟ್ ಮಾಡಿ’ ಎಂದು ಹೇಳಿದ್ದು. ನನಗೆ ಎಲ್ಲಿಂದ ನಗಬೇಕೋ ಗೊತ್ತಾಗಲಿಲ್ಲ. ‘ಅಲ್ಲಾ ಸ್ವಾಮಿ, ಈಗಾಗಲೇ ಕೋಟ್ಯಂತರ ಜನ ಅದನ್ನು ವೀಕ್ಷಿಸಿದ್ದಾರೆ. ನೋಡಿ ಖುಷಿಪಟ್ಟಿದ್ದಾರೆ. ನಾನು ಡಿಲೀಟ್ ಮಾಡಿದರೂ, ಅನೇಕರ ಮೊಬೈಲಿನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಇರುತ್ತದಲ್ಲ? ಈಗಾಗಲೇ ಅನೇಕರು ಶೇರ್ ಮಾಡಿದ್ದಾರೆ, ತಮ್ಮದೇ ಪೋಸ್ಟು ಎಂದು ಅಪ್‌ಲೋಡ್ ಮಾಡಿದ್ದಾರಲ್ಲ? ಅದನ್ನು ಹೇಗೆ ಅಳಿಸಿ ಹಾಕುವುದು, ಹೇಳಿ’ ಎಂದು ತಿಳಿ ಹೇಳಿದರೂ ಅವರಿಗೆ ಅರ್ಥವಾಗಲಿಲ್ಲ. ಡ್ರೋನ್ ಬಗ್ಗೆ ಮಾತಾಡುವ ಮುನ್ನ
ಅದರ ಬಳಕೆ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಆ ಗೋಪಾಲಸ್ವಾಮಿಯೇ ಇವರ ಮೇಲೆ ವಿವೇಕದ ಹಿಮವನ್ನು ಸುರಿಸಬೇಕಷ್ಟೆ!