Saturday, 14th December 2024

ಜನರಿಂದ ಜನರಿಗಾಗಿ ಜನರಿಗೋಸ್ಕರ ಅನ್ನೋದೆಲ್ಲ ನಿಜವೇನಾ ?

ಯಶೋ ಬೆಳಗು

yashomathy@gmail.com

Power, People, Public….The power P….  ಮೊನ್ನೆಯಷ್ಟೇ ಎಪ್ಪತ್ನಾಲ್ಕನೇ ಗಣ ರಾಜ್ಯೋತ್ಸವದ ಸಂಭ್ರಮಾಚರಣೆಯ ಶುಭ  ಹಾರೈಕೆಯ ಮೆಸೇಜುಗಳಲ್ಲಿ ಗಮನ ಸೆಳೆದ ಒಂದು ಮೆಸೇಜೆಂದರೆ; ದೇಶವೆಂದರೆ ಕಲ್ಲಲ್ಲ, ಮಣ್ಣಲ್ಲ, ಗಡಿಯಲ್ಲ, ಬಾವುಟವಲ್ಲ, ಜಾತಿಯಲ್ಲ, ಧರ್ಮ ವಲ್ಲ, ಪಕ್ಷವಲ್ಲ, ನಾಯಕರಲ್ಲ. ಗುಡಿ-ಚರ್ಚು-ಮಸೀದಿಗಳಲ್ಲ. ದ್ವೇಷವಲ್ಲ, ದೊಂಬಿಯಲ್ಲ. ಕುಲವಲ್ಲ, ಮತವಲ್ಲ. ಇದ್ಯಾವುದೂ ಅಲ್ಲವೇ ಅಲ್ಲ. ದೇಶ ವೆಂದರೆ ಇಲ್ಲಿ ಬದುಕುವ ಜನ!

Of the People, by the people, for the people…. ಜನರಿಂದ ಜನರಿಗಾಗಿ ಜನರಿಗೋ ಸ್ಕರ… ಎನ್ನುತ್ತ ಸೃಷ್ಟಿಯಾದ ಪ್ರಜಾಪ್ರಭುತ್ವದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಯಾವುದೇ ನಿರ್ಬಂಧದ ಮಿತಿಯಿಲ್ಲದೆ ಮೊಳಗುವ ಘೋಷ ವಾಕ್ಯಗಳು, ನೀಡುವ ಭರವಸೆ ಗಳು ಒಮ್ಮೆ ಅಧಿಕಾರ ದಕ್ಕಿದ ಮೇಲೆ ಜಾಣ ಮರೆವಾಗಿ ಮರೆಯಾಗಿ ಹೋಗುತ್ತದೆ.

ಗೆದ್ದರೆ ಅದರಿಂದ ಅವರ ಹೆಂಡತಿ ಮಕ್ಕಳು, ಸಂಬಂಧಿಕರಿಗೆ ಅನುಕೂಲವಾಗುತ್ತದೆ. ಅದರಿಂದ ನಮಗೇನು ಲಾಭ? ನಿತ್ಯ ದುಡಿಯೋದೇನು ತಪ್ಪುತ್ತಾ ನಮಗೆ? ಅಂದುಕೊಳ್ಳುತ್ತಾ ಜನಸಾಮಾನ್ಯ ತನ್ನ ನಿತ್ಯ ಕಾಯಕದೆಡೆಗೆ ಎಂದಿನಂತೆ ಗಮನ ಹರಿಸುತ್ತಾನೆ. ಹಾಗಾದರೆ ಇಷ್ಟೆಲ್ಲ ದೊಂಬಿ, ಕೂಗಾಟ, ಹಾರಾಟವೆಲ್ಲ ಯಾಕೆ? ಜನನಾಯಕರ ಆರೋಪ – ಪ್ರತ್ಯಾರೋಪಗಳ ಸುರಿಮಳೆ ಏಕೆ? ರಾಜಕೀಯ ಅನ್ನುವುದು ಸೇವೆಯೋ?
ವ್ಯಾಪಾರವೋ? ನಮ್ಮ ದೇಶ ನಿಧಾನವಾಗಿ ಬಂಡವಾಳ ಶಾಹಿಗಳ, ಹೂಡಿಕೆದಾರರ ಅಡಿಯಾಳಾಗಿ ಹೋಗುತ್ತಿದೆಯಾ? ನಾವು ಲಿಖಿತ ಸಂವಿ ಧಾನವನ್ನು ಅಂಗೀಕರಿಸಿದ್ದೇವೆ.

ಇದು ನಮಗೆ ಬಹಳ ದೃಢವಾದ ಮತ್ತು ಅಷ್ಟು ಸುಲಭವಾಗಿ ಬದಲಾಗದಂತಹ ಸಮ್ಮಿಶ್ರ ರೀತಿಯ ವ್ಯವಸ್ಥೆಯನ್ನು ನೀಡಿದೆ. ಸಂವಿಧಾನವು ಭಾರತ ವನ್ನು ಪರಮಾಧಿಕಾರವುಳ್ಳ ಸಮಾಜವಾದಿ, ಜಾತ್ಯತೀತ, ಪ್ರಜಾಪ್ರಭುತ್ವದ ಗಣರಾಷ್ಟ್ರ ಎಂದು ಕರೆದಿದೆ. ನಮ್ಮಲ್ಲಿ ಪ್ರಜಾ ಸರಕಾರವಿದ್ದು, ನಮ್ಮನ್ನು ನಾವೇ ಆಳಿಕೊಳ್ಳುತ್ತಿದ್ದೇವೆ. 18 ವರ್ಷ ವಯಸ್ಸು ತುಂಬಿ ಪ್ರತಿಯೊಬ್ಬ ಭಾರತೀಯ ಪೌರರೆಲ್ಲರಿಗೂ ಮತದಾನದ ಹಕ್ಕಿದೆ. ಆದರೆ ಇಂದಿಗೂ ಮತ ಚಲಾಯಿಸಲು ಬೇಕಾದ voter ಐಈ ಯಿಲ್ಲದ ಸಹಸ್ರಾರು ಮತದಾರರು ನಮ್ಮೊಂದಿಗಿದ್ದಾರೆ. ಇವರ ನಡುವೆ ಊರಂದು, ಸಿಟಿಯಂದು ಎಂದು ಎರಡೆರಡು ವೋಟರ್ ಐ.ಡಿ.ಗಳನ್ನು ಹೊಂದಿದವರೂ ಸಾಕಷ್ಟು ಮಂದಿಯಿದ್ದಾರೆ!

ಭಾರತದ ಸಂವಿಧಾನವು ಪ್ರತಿಯೊಬ್ಬ ಪೌರನಿಗೂ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳೆಂಬ ಆರು ಮೂಲಭೂತ ಹಕ್ಕುಗಳ ಜೊತೆಗೆ ಸಂವಿಧಾನವನ್ನು ಪಾಲಿಸುವುದು, ಅದರ ಆಶಯಗಳನ್ನು ಗೌರವಿಸುವುದು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಯನ್ನು ಗೌರವಿಸುವುದು, ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಆದರ್ಶಗಳನ್ನು ಗೌರವಿಸು ವುದು ಮತ್ತು ಪಾಲಿಸುವುದು.

ಭಾರತದ ಸಾರ್ವಭೌಮತ್ವ, ಅಖಂಡತೆ ಮತ್ತು ಏಕತೆಯನ್ನು ಎತ್ತಿ ಹಿಡಿಯುವುದು ಮತ್ತು ಕಾಪಾಡುವಂತಹ ಮೂಲಭೂತ ಕರ್ತವ್ಯಗಳನ್ನು ಸಹ ನೀಡಿದೆ. ಹಾಗೆಯೇ ಸರಕಾರದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳೆಂಬ ಮೂರು ಪ್ರಬುದ್ಧ ಅಂಗಗಳಿವೆ. ಪತ್ರಿಕೆಗಳು ನಾಲ್ಕನೆಯ ಅಂಗವಾಗಿ ಕೆಲಸ ಮಾಡುತ್ತವೆ. ನ್ಯಾಯಾಂಗವೇ ಇಲ್ಲಿ ಎಲ್ಲಕ್ಕಿಂತ ಹೆಚ್ಚಿನ ಜವಾಬ್ದಾರಿ ವಹಿಸುತ್ತದೆ. ನಮ್ಮ ದೇಶದಲ್ಲಿ ಹಲವಾರು ಪ್ರಾದೇಶಿಕ
ರಾಜಕೀಯ ಪಕ್ಷಗಳು ಇರುವುದರಿಂದ, ಯಾವುದೇ ಒಂದು ಪಕ್ಷಕ್ಕೆ ಪೂರ್ಣ ಬಹುಮತ ದೊರೆಯುವುದು ಅಸಾಧ್ಯ.

ಹೀಗಾಗಿ ಯಾವುದೇ ಆಡಳಿತ ಪಕ್ಷವೂ ದೃಢವಾದ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ, ಕಾನೂನುಗಳನ್ನು ಮಾಡುವಲ್ಲಿ ಗುರುತರವಾದ ಸಮಸ್ಯೆ ಗಳನ್ನು ಎದುರಿಸುತ್ತಿದೆ. ೧೯೯೦ರ ದಶಕದಲ್ಲಿ ಪಿ.ವಿ. ನರಸಿಂಹರಾವ್ ಸರಕಾರ ಉದಾರೀಕರಣಕ್ಕೆ ತೋರಿದ ಹಸಿರು ನಿಶಾನೆಯಿಂದಾಗಿ
ಆಮದು -ರಫ್ತುಗಳ ಮೇಲಿನ ನಿಯಮಗಳನ್ನು ಸಡಿಲಗೊಳಿಸಿ, ಭಾರತವು ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿ ಜಾಗ ತೀಕರಣಕ್ಕೆ ಮುಕ್ತವಾಗಿ ಬಾಗಿಲು ತೆರೆಯಿತು. ಅಂತಾರಾಷ್ಟ್ರೀಯ ಕಂಪನಿಗಳನ್ನು ಭಾರತಕ್ಕೆ ಸ್ವಾಗತಿಸಲಾಯಿತು. ತ್ವರಿತ ಗತಿಯಲ್ಲಿ ನಡೆದ ಬದಲಾವಣೆಗಳು ಇಂದು ಅನೇಕ
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ತಂದೊಡ್ಡಿವೆ.

ತಂತ್ರಜ್ಞಾನವು ಇಂದು ಮಾನವ ಸಂಕುಲ ದೊಂದಿಗೆ ಬೇರ್ಪಡಿಸಲಾಗದಂತೆ ಬೆರೆತು ಹೋಗಿದೆ. ಇಡೀ ವಿಶ್ವವೇ ಸಮೂಹಸಂಪರ್ಕ ಹಾಗೂ ವಿದ್ಯುನ್ಮಾನ ಮಲ್ಟಿಮೀಡಿಯಾ ಜಾಲಗಳ ಬಲೆಗೆ ಸಿಕ್ಕಿಬಿದ್ದಿದೆ. ಮನರಂಜನಾತ್ಮಕ ಆಟಗಳು, ವ್ಯಾಪಾರಗಳು, ಶಾಲೆ, ಕಚೇರಿ, ಕಾರ್ಖಾನೆ, ಹೊಟೆಲ್ ಅಥವಾ ರಸ್ತೆಯ ಮೂಲೆಯಲ್ಲಿ ನಡೆಯಬಹುದಾದ ಯಾವುದೇ ಮಾನವ ಸಂಬಂಧಿ ವ್ಯವಹಾರಗಳೆಲ್ಲ ಅವ್ಯಾಹತವಾಗಿ ಅಂತರ್ಜಾಲದ ಮೂಲಕವೇ ನಡೆಯಬಹುದಾದಷ್ಟರ ಮಟ್ಟಿಗೆ ನಮ್ಮನ್ನಿಂದು ಆವರಿಸಿಕೊಂಡಿದೆ.

ಇದಿಷ್ಟೇ ಸಾಲದೆಂಬಂತೆ ಸರಕಾರಿ ಸ್ವಾಮ್ಯದಲ್ಲಿರುವ ಸಂಸ್ಥೆಗಳ ಒಡೆತನ ಅಥವಾ ನಿರ್ವಹಣೆಯನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಲು ಸಾಧ್ಯ ವಾಗುವಂತೆ ಖಾಸಗೀಕರಣವನ್ನು ಸಹ ಜಾರಿಗೆ ತಂದಿದೆ. ಇದರಿಂದ ಮೆಲ್ಲಗೆ ಸರಕಾರಿ ಒಡೆತನದ ಕಾರ್ಯಕ್ಷೇತ್ರವೆಲ್ಲ ಪೈಪೋಟಿಗೆ ಬಿದ್ದು
ಖಾಸಗೀಕರಣಗೊಂಡು ಬಿಡುತ್ತದಾ? ಹಾಗಾಗಿಬಿಟ್ಟರೆ ಅದರಿಂದ ಜನರಿಗೆ ಹೆಚ್ಚಿನ ಅನುಕೂಲವೋ? ಅನಾನುಕೂಲವೋ? ನೀವು ಯಾವುದೇ ಸರಕಾರೀ ಕಚೇರಿಗಳಿಗೆ ಭೇಟಿ ನೀಡಿದರೂ ಅಲ್ಲಿ ನಿಮಗೆ ಬೇಕಾದ ಸಮರ್ಪಕವಾದ ಸೇವೆಯ ಸೌಲಭ್ಯಗಳ ಮಾಹಿತಿ ಪಡೆಯುವುದು ಎಷ್ಟು ದುಸ್ಸಾಧ್ಯ ಎನ್ನುವುದು ಅರಿವಿಗೆ ಬರುತ್ತದೆ.

ನೀರಸವಾದ, ಆಲಸ್ಯದಿಂದ ಕೂಡಿದ ಪ್ರತಿಕ್ರಿಯೆಗಳೇ ಹೆಚ್ಚಾಗಿರುತ್ತದೆ. ಅದೇ ಖಾಸಗಿ ಒಡೆತನದ ಸಂಸ್ಥೆಗಳಲ್ಲಿ ಸೇವೆ-ಸೌಲಭ್ಯಗಳ ಮಾಹಿತಿಗಳು ಶೀಘ್ರವಾಗಿ ಹಿತವಾದ ನುಡಿಗಳೊಂದಿಗೆ ಸಿದ್ಧವಿರುತ್ತದೆ. ಇದರಿಂದಾಗಿಯೇ ಹೆಚ್ಚಿನವರು ಸರಕಾರೀ ಕಚೇರಿಗಳಿಗಾಗಲೀ, ಸರಕಾರೀ ಆಸ್ಪತ್ರೆಗಳಿ ಗಾಗಲೀ, ಸರಕಾರೀ ಶಾಲೆಗಳಿಗಾಗಲೀ ಹೋಗಲು ಹಿಂದೇಟು ಹಾಕುತ್ತಾರೆ. ಅನಿವಾರ್ಯದ ಕಾರ್ಯಗಳಿಗೆ ಭೇಟಿ ನೀಡಲೇಬೇಕಾದ ಸಂದರ್ಭ ಎದುರಾದರೆ ಲಂಚವಿಲ್ಲದೆ ಯಾವ ಕೆಲಸವೂ ಆಗದು ಅನ್ನುವ ಪರಿಸ್ಥಿತಿಗೆ ಬಂದು ನಿಂತಿದೆ.

ನೀಡುವ ಅನುದಾನಗಳು, ಮಾಡುವ ಸಾಲ ಮನ್ನಾಗಳು, ಪರಿಹಾರ ನಿಽಗಳು ಎಲ್ಲವೂ ಸಂಗ್ರಹವಾಗಿರುವುದು ನಾವು ಕಟ್ಟುವ ಕಂದಾಯದ ಮೂಲಕವೇ ಅನ್ನುವುದು ಬಹಿರಂಗ ಸತ್ಯ. ಇವತ್ತು ಕುಡಿಯವ ಎಳನೀರಿಗೂ ಎಖS ಕಟ್ಟುವಾಗ ಉಪ್ಪಿನ ಮೇಲೆ ವಿಧಿಸಿದ ತೆರಿಗೆಯನ್ನು
ಹಿಂತೆಗೆದುಕೊಳ್ಳುವಂತೆ ಮಾಡಿದ ಸತ್ಯಾಗ್ರಹಗಳು ನೆನಪಾಗಿ ಕಾಡುತ್ತವೆ. ಜನರ ಸೇವೆಯೇ ಜನಾರ್ಧನ ಸೇವೆ ಅನ್ನುವ ಮಾತುಗಳೆಲ್ಲ ಅರ್ಥ ಕಳೆದುಕೊಂಡು ಸಾಕಷ್ಟು ಕಾಲವಾಗಿ ಹೋಗಿದೆ. ಈಗೇನಿದ್ದರೂ ಬಲವಿದ್ದವನು ಬಲಿಯುತ್ತಲೇ ಹೋಗುತ್ತಾನೆ. ಬಲವಿಲ್ಲದವನು ಉಸಿರೆತ್ತಿದರೆ
ಬಲಿಯಾಗುತ್ತಿದ್ದಾನೆ ಅಷ್ಟೆ!

ಅವರು ಮಾಡುವ ಭಾಷಣಗಳನ್ನು ಕೇಳಲು ಜನರು ಬೇಕು. ನೀಡುವ ಭರವಸೆಗಳನ್ನು ತಲೆಮೇಲೆ ಹೊತ್ತು ತಿರುಗಲು ಜನರು ಬೇಕು. ಖಾಲಿಯಾದ ಬೊಕ್ಕಸವನ್ನು ತುಂಬಿ ಕೊಳ್ಳಲು ಜನರು ಬೇಕು. ಅವರ ಶಕ್ತಿ ಪ್ರದರ್ಶನಕ್ಕೂ ಜನರು ಬೇಕು. ಅವರನ್ನು ಗೆಲ್ಲಿಸಿ ಜನನಾಯಕರನ್ನಾಗಿ ಮೆರೆಸಲು
ಕೂಡ ಬೇಕಾಗಿರುವುದು ಈ ಎರಡಕ್ಷರದ ಜನರೇ! ಆದರೆ ಈ ಜನರಿಂದ ಗಳಿಸಿದ ಹಣವನ್ನು ಕೇವಲ ಜನರಿಗಾಗಿಯೇ ಬಳಸಲಾಗುತ್ತಿದೆಯಾ? ಜನನಾಯಕರು ಉಳಿದುಕೊಳ್ಳುವ ಮನೆ, ತಿನ್ನುವ ಆಹಾರ, ನಡೆದಾಡುವ ರಸ್ತೆ, ಬಳಸುವ ವಾಹನ ಎಲ್ಲದರೊಳಗೂ ಪ್ರತಿನಿತ್ಯ ಬೆವರು ಹರಿಸಿ
ದುಡಿದ ಜನರ ಹಣವಿದೆ. ದಿನಬೆಳಗಾದರೆ ಮಾಧ್ಯಮಗಳಲ್ಲಿ ನಮ್ಮ ಕಣ್ಣಿಗೆ ಕಾಣುವುದು ಕೇವಲ ಅಧಿನಾಯಕರೇ ಹೊರತು ಅವರ ಕೈಕೆಳಗೆ ಅಽಕಾರ ಚಲಾಯಿಸುವ ಅಧಿಕಾರಿಗಳಲ್ಲ. ಜನಸಾಮಾನ್ಯ ನಿಜವಾಗಿಯೂ ನರಳಿಹೋಗುವುದು ಈ ಅಧಿಕಾರಿಗಳ ಅಧಿಕಾರದ.

ಈ ಜನರೆ ಒಗ್ಗಟ್ಟಾಗಿ ನಿಂತರೆ ಏನು ಬೇಕಾದರೂ ಸಾಧಿಸುವಂತಹ ಶಕ್ತಿ ಇರುವಂತಹವರು. ಬ್ರಿಟಿಷರಂಥ ಬ್ರಿಟಿಷರನ್ನೇ ಒಕ್ಕಲೆಬ್ಬಿಸಿದ್ದೂ ಕೂಡಾ ಜನಾಂದೋಲನದ ಶಕ್ತಿಯೇ ಅನ್ನುವುದನ್ನು ಮರೆಯಲಾಗದು. ಆದರೆ ಬ್ರಿಟಿಷರು ಬಿಟ್ಟು ಹೋದ ಒಡೆದು ಆಳುವ ನೀತಿಯಿಂದಾಗಿ ಇಂದಿಗೂ ದಿಕ್ಕುತಪ್ಪಿ ಹೋಗುತ್ತಿದೆ ಜನಸಮೂಹ. ಎಲ್ಲ ವಾದ-ವಿವಾದಗಳ ನಡುವೆ ಜನಜಾಗೃತಿಯ ಅವಶ್ಯಕತೆ ಸಾಕಷ್ಟಿದೆ ಇಂದು. ಒಬ್ಬ ಆರ್ಡಿನರಿ ಬಿಲ್ಡಿಂಗ್ ಕಂಟ್ರಾಕ್ಟರ್‌ಗೆ ಮನೆಕಟ್ಟಿಸಲು ಕೊಟ್ಟರೆ, ಅವನು ತನ್ನ ಮನೆಗೆ ಬೇಕಾದ ಸಲಕರಣೆಗಳನ್ನೂ ನಮ್ಮ ಹಣದಲ್ಲಿಯೇ ಖರೀದಿಸಿ ಲೆಕ್ಕ ತೋರಿಸುವಷ್ಟು ಚಾಣಾಕ್ಷನಾಗಿರುವಾಗ ಇನ್ನು ಇಂಥಾ ಸಂಪದ್ಭರಿತ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಎಂಥವರ ಕೈಗೆ ನಾವು ಅಧಿಕಾರ ಕೊಡುತ್ತಿದ್ದೇವೆ ಅನ್ನುವ ಪ್ರಜ್ಞೆಯ ಜೊತೆಗೆ ಆ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಛಾತಿ ಹಾಗೂ ಅರ್ಹತೆ ಅವನ/ಳಲ್ಲಿದೆಯಾ? ಅನ್ನುವ ಅರಿವು ಕೂಡ ಪ್ರತಿಯೊಬ್ಬ ಪ್ರಜೆಯಲ್ಲೂ ಇರಬೇಕಾದದ್ದು ಅತಿ ಅವಶ್ಯಕ.

ಕಳೆದ ಬಾರಿ ಚುನಾಯಿತರಾಗಿ ಅಧಿಕಾರದ ಚುಕ್ಕಾಣಿ ಹಿಡಿದ ನಾಯಕರು ಎಷ್ಟರ ಮಟ್ಟಿಗೆ ತಮ್ಮ ಜವಾಬ್ದಾರಿ ಯನ್ನು ನಿಭಾಯಿಸಿದ್ದಾರೆ? ಎಷ್ಟು ವಂಚಿಸಿzರೆ? ಕೊಟ್ಟ ಮಾತುಗಳನ್ನು ಎಷ್ಟು ಮರೆತಿದ್ದಾರೆ? ಅನ್ನುವ ಲೆಕ್ಕಾಚಾರವನ್ನು ನಾವೂ ಕಲಿಯಬೇಕಾದ ಅವಶ್ಯಕತೆಯಿದೆ. ಇದೆಲ್ಲ
ದರ ನಡುವೆಯೇ ಅಪರೂಪಕ್ಕೆ ಪ್ರಾಮಾಣಿಕವಾಗಿ ದುಡಿದು ತನ್ನ ಕ್ಷೇತ್ರಕ್ಕೆ ತನ್ನ ಜನರಿಗೆ-ಊರಿಗೆ ಉಪಕಾರ ಮಾಡಿದ್ದವರಿದ್ದರೆ ಅಂಥವರನ್ನು ಮತ್ತೆ ಬೆನ್ತಟ್ಟಿ ಗೆಲ್ಲಿಸುವ ಜವಾಬ್ದಾರಿ ನಮ್ಮದಾಗಬೇಕು. ಅಯ್ಯೋ ರಾಜಕಾರಣವೆಂದರೆ ಭ್ರಷ್ಟಾಚಾರದ ಕೂಪ!

ಅದು ನಮ್ಮಂಥವರಿಗಲ್ಲಪ್ಪ ಅನ್ನುವ ಮಡಿವಂತಿಕೆಯನ್ನು ಮಡಚಿಟ್ಟು ಜವಾಬ್ದಾರಿಯುತ ಮಾತುಗಳನ್ನಾಡುವುದು ಕೂಡ ನಮ್ಮ-ನಿಮ್ಮೆಲ್ಲರ ಆದ್ಯ ಕರ್ತವ್ಯ. ತನ್ನ ಊರಿನ ಬಗ್ಗೆ, ತನ್ನ ನಾಡಿನ ಬಗ್ಗೆ ಕಾಳಜಿಯಿರುವ, ಕೈ-ಕಚ್ಚೆ ಶುದ್ಧವಿರುವ ಯುವಕರಿಗೇನು ನಮ್ಮಲ್ಲಿ ಕೊರತೆಯಿಲ್ಲ. ಬೆರಳು ತೋರಿಸಿದರೆ ಬೆಟ್ಟ ಕಿತ್ತಿಟ್ಟು ಬರುವ ಉತ್ಸಾಹಿಗಳು ಪ್ರತಿ ಮೂಲೆಯಲ್ಲೂ ಇದ್ದಾರೆ. ಅಂಥವರನ್ನು ರುತಿಸಲು ಭೂತಗನ್ನಡಿ ಬೇಕಾಗಿಲ್ಲ. ಕೊಂಚ ಮಟ್ಟಿಗೆ ಓಡಾಡಿಕೊಂಡು, ಸಾಮಾಜಿಕ ಪ್ರಜ್ಞೆ ಮತ್ತು ಜಾತ್ಯತೀತ ಮನೋಭಾವಗಳನ್ನು ರೂಢಿಸಿಕೊಂಡವರನ್ನು ಗುರುತಿಸಿ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುವ ಜವಾಬ್ದಾರಿ ನಮ್ಮದಾಗಬೇಕು.

ಆದರೆ ಜನಸಾಮಾನ್ಯನೇ ಭ್ರಷ್ಟನಾದರೆ ಭ್ರಷ್ಟತೆಯ ವಿರುದ್ಧ ದನಿಯೆತ್ತುವ ಅಧಿಕಾರವನ್ನು ಕಳೆದುಕೊಂಡಂತಾಗುತ್ತದೆ ಅನ್ನುವುದನ್ನೂ ನೆನಪಿಡಬೇಕಾಗುತ್ತದೆ.

Read E-Paper click here