Friday, 13th December 2024

ಉಚಿತ ಕೊಡುಗೆಗಳ ಕುರಿತು ಪ್ರಶ್ನೆ

ಪ್ರಚಲಿತ

ಗೌತಮ್‌ ಭಾಟಿಯಾ 

ಕಳೆದ ವಾರ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಒಂದು ಪೀಠ ಪ್ರಕರಣವೊಂದರ ಕುರಿತಾಗಿ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.

ಅಲ್ಲಿ ಪ್ರಮುಖವಾಗಿ ಚರ್ಚಿತವಾದ ವಿಷಯವೆಂದರೆ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯ ಭಾಗವಾಗಿ ಮತದಾರರನ್ನು ಓಲೈಸಲು ಘೋಷಿಸುವ ಉಚಿತ ಕೊಡುಗೆಗಳ ಕುರಿತಾದದ್ದು. ಈ ಉಪಕ್ರಮ ಗಂಭೀರವಾದದ್ದು ಮತ್ತು ಸಾರ್ವಜನಿಕ ಋಣಭಾರ ಹೆಚ್ಚಿಸುವಂಥದ್ದು, ಸರಕಾರದ ಬೊಕ್ಕಸಕ್ಕೆ ಧಕ್ಕೆಯುಂಟು ಮಾಡುವಂಥದ್ದು ಎಂಬ ವಿಚಾರ ಪ್ರಮುಖವಾಗಿ ಅಲ್ಲಿ ಚರ್ಚೆಗೆ ಬಂತು.

ಭಾರತ ಸರಕಾರ, ಚುನಾವಣಾ ಆಯೋಗ ಮತ್ತು ಇತರೆ ಸರಕಾರಿ ಸಂಸ್ಥಾಪನೆಗಳ ಅಭಿಪ್ರಾಯಗಳನ್ನೂ ಪಡೆದುಕೊಂಡು ಈ ಚರ್ಚೆ ಇನ್ನೂ ಮುಂದುವರಿಯುತ್ತಲೇ ಇದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ವೆಂದರೆ, ಈ ವಿಚಾರ ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ಅಂಗಳದಲ್ಲಿದೆ. ಯಾವುದೇ ರಾಜಕೀಯ ಪಕ್ಷದಲ್ಲಿ ಅದರ ಪ್ರಣಾಳಿಕೆ ಮತ್ತು ಮತದಾರನ ನಡುವೆ ಒಂದು ಚೌಕಾಶಿ ವ್ಯವಹಾರವಿರುತ್ತದೆ.

ಉದಾಹರಣೆಗೆ ಹೇಳುವುದಾದರೆ, ಪ್ರಣಾಳಿಕೆಯಲ್ಲಿ ಒಂದಷ್ಟು ಬೆದರಿಕೆಗಳನ್ನು ಒಡ್ಡುವಂತಹ ಸಂಗತಿ ಗಳಿರುತ್ತವೆ. ಆದರೆ ಆರ್ಥಿಕ ನೀತಿಗಳ ಕುರಿತಾದ ಯಾವುದೇ ಒಡಂಬಡಿಕೆ ಪ್ರಧಾನವಾಗಿ ಇರುವುದೇ ಇಲ್ಲ. ಆರ್ಥಿಕವಾಗಿ ಬಡತನದಲ್ಲಿರು ವವರನ್ನು ಮೇಲೆತ್ತಲು ಪ್ರಣಾಳಿಕೆಯಲ್ಲಿ ಅದೆಷ್ಟೋ ಘೋಷಣೆಗಳಿರಬಹುದು, ಆದರೆ ದೀರ್ಘಕಾಲವನ್ನು ಗಮನದಲ್ಲಿಟ್ಟು ಆ ಆರ್ಥಿಕ ವ್ಯವಸ್ಥೆ ರೂಪುಗೊಂಡಿರುವುದಿಲ್ಲ. ಕೊನೆಗದು ಪರ್ಯವಸಾನವಾಗುವುದು ಮತದಾರ ವೋಟು ಹಾಕುವುದಕ್ಕಷ್ಟೇ ವಿನಾ, ಅದು ಎಂದಿಗೂ ಸಾಕಾರವಾಗುವುದೇ ಇಲ್ಲ.

ಬಹುಮುಖ್ಯವಾಗಿ ಈ ಉಚಿತ ಕೊಡುಗೆಗಳಿವೆಯಲ್ಲ, ಅವುಗಳಿಗೆ ಯಾವುದೇ ತಳಹದಿ ಇರುವುದಿಲ್ಲ. ಕೇವಲ ಮತ
ದಾರನನ್ನು ಸೆಳೆಯುವ ಉದ್ದೇಶವೊಂದನ್ನೇ ಗಮನದಲ್ಲಿಟ್ಟು ಅವುಗಳನ್ನು ಹೆಣೆಯಲಾಗಿರುತ್ತದೆ. ಸರ್ವೋಚ್ಚ ನ್ಯಾಯಾಲ
ಯದ ಈ ಹಿಂದಿನ ನಡವಳಿಕೆಗಳಲ್ಲಿ ಇಂತಹ ಕೊಡುಗೆಗಳ ವಿಚಾರ ಚರ್ಚೆಗೆ ಬಂದಿದೆ. ಅಷ್ಟೇ ಅಲ್ಲ ಅಭಿವೃದ್ಧಿಯ ವಿಚಾರಗಳು ಕೂಡ ಚರ್ಚೆಗೆ ಬಂದದ್ದಿದೆ. ಅವೆಲ್ಲವೂ ಬಾಹ್ಯ ಪರೀಕ್ಷೆಗೆ ಒಳಪಡುತ್ತವೆ.

ಸಾರ್ವತ್ರಿಕವಾಗಿರುವ ಮೂಲ ವರಮಾನದ ನೆಲೆಯಲ್ಲಿ ಆರ್ಥಿಕ ತಜ್ಞರು ವಿಶ್ವವ್ಯಾಪಿ ಅಂಕಿ-ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಈ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು ಸರಕಾರಗಳು, ಜನಸಾಮಾನ್ಯರಿಗೆ ಕಾಲಕಾಲಕ್ಕೆ ಕೊಡುವ ಉಚಿತ ಉಡುಗೊರೆಗಳನ್ನು ಅಥವಾ ಸಮಾಜ ಕಲ್ಯಾಣಕ್ಕೆ ಸಂಬಂಧಪಟ್ಟ ಅನುದಾನಗಳನ್ನು ನಿರ್ಧರಿಸುತ್ತವೆ. ರಾಷ್ಟ್ರೀಯ ಆರೋಗ್ಯ ಸೇವೆಯ ಕುರಿತಾಗಿ ಯುನೈಟೆಡ್ ಕಿಂಗ್ಡಮ್‌ನಲ್ಲಿರುವ ಪರಿಕಲ್ಪನೆ ಕೂಡ ಇದನ್ನೇ ಅವಲಂಬಿಸಿದೆ.

ರಾಜಕೀಯ ಪಕ್ಷವೊಂದು ಆರೋಗ್ಯ ಸೇವೆಗಳನ್ನು ಉಚಿತವೆಂದು ಘೋಷಿಸಿದರೆ ಅದೊಂದು ಉಚಿತ ಕೊಡುಗೆಯೆನಿಸುತ್ತದೆ.
ಉಚಿತ ಸಾರ್ವಜನಿಕ ಸಾರಿಗೆ ಅಥವಾ ಇನ್ನಾವುದೇ ಆರ್ಥಿಕ ಕೊಡುಗೆಗಳು ಕೂಡ ಇದರಿಂದ ಹೊರತಲ್ಲ. ಮಹಿಳೆಯರ
ಅಭ್ಯುದಯವೂ ಸೇರಿದಂತೆ ಹಲವಾರು ಸಂಗತಿಗಳಲ್ಲಿ ಇದು ಪ್ರತಿಬಿಂಬಿತವಾಗುತ್ತದೆ. ಇದೆಲ್ಲವನ್ನೂ ಉಚಿತ ಕೊಡುಗೆ
ಎನ್ನಲಾದೀತೇ? ಇದು ಇಲ್ಲಿರುವ ಪ್ರಶ್ನೆ. ಇದೆಲ್ಲವನ್ನೂ ಗಮನದಲ್ಲಿಟ್ಟು ಕೆಲವರು ಇಂದು ಸರಳರೇಖೆಯನ್ನು ಎಳೆಯಲು ಯತ್ನಿಸಿದ್ದಾರೆ.

ಅದೆಂದರೆ ಉದ್ದೇಶಿತ ಕಾರ್ಯಕ್ರಮಗಳು ಅಂದರೆ ಬಡತನದ ರೇಖೆಗಿಂತ ಕೆಳಗಿರುವವರಿಗೆ ನೀಡಲಾಗುವ ಸವಲತ್ತುಗಳು
ಮತ್ತು ಸಾರ್ವತ್ರಿಕವಾಗಿ ಕೊಡುವ ಇನ್ನೊಂದಷ್ಟು ಯೋಜನೆಗಳು (ಇದರಲ್ಲಿ ಗ್ಯಾಸ್ ಸಬ್ಸಿಡಿ ಕೂಡ ಸೇರುತ್ತದೆ). ಹೇಳಬೇಕೆಂದರೆ ಈ ವ್ಯತ್ಯಯ ಅಸಮರ್ಥನೀಯವಾದದ್ದು. ವಿಶ್ವಾದ್ಯಂತವಾಗಿ ಆರ್ಥಿಕ ತಜ್ಞರು ಮತ್ತು ನೀತಿ ನಿರೂಪಕರ
ನಡುವೆ ಈ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ.

ಕೆಲವೊಂದು ಯೋಜಿತ ಕಾರ್ಯಕ್ರಮಗಳಲ್ಲಿ ನಿಜವಾಗಿಯೂ ಅರ್ಹರಾದವರು ಹೊರಗುಳಿದುಬಿಡುತ್ತಾರೆ ಮತ್ತು ಆ ಯೋಜನೆಯ ಮೂಲಭೂತ ಉದ್ದೇಶವೇ ವ್ಯರ್ಥವಾಗುವುದೂ ಇದೆ. ಇಂತಹದೊಂದು ಚರ್ಚೆ ಸಾರ್ವತ್ರಿಕವಾಗಿ ನಡೆದಾಗ ಪ್ರಜಾಪ್ರಭುತ್ವದ ನೆಲೆಯಲ್ಲಿ ಅದು ಅಸಮರ್ಪಕವೆನಿಸಬಹುದು ಮತ್ತು ನ್ಯಾಯಯುತವಾಗಿ ಕಾಣಿಸದೆಯೇ ಇರಬಹುದು.
ಅಂತಿಮವಾಗಿ ಜನಸಾಮಾನ್ಯರೇ ಹೇಳುವಂತೆ ಉಚಿತ ಕೊಡುಗೆಗಳೆಂದರೆ ಅದಕ್ಕೆ ಅವಹೇಳನಕಾರಿಯಾದ ಅರ್ಥ ವಿನ್ಯಾಸವಿದೆ.

ಕೇವಲ ಜನಪ್ರಿಯ ಕಾರ್ಯಕ್ರಮಗಳನ್ನು, ಬಡಜನರನ್ನು ಗುರಿಯಾಗಿಸಿ ತೆಗೆದುಕೊಳ್ಳುವ ನಿರ್ಧಾರಗಳನ್ನು, ಸಾಲ ಮನ್ನಾಗಳಂತಹ ನಿರ್ಧಾರಗಳನ್ನು, ಕಾರ್ಪೊರೇಟ್ ತೆರಿಗೆ ಮನ್ನಾ ಯೋಜನೆಗಳನ್ನು ಒಂದರ್ಥದಲ್ಲಿ ಸರಕಾರಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿವೆ ಎನ್ನದೆ ವಿಧಿಯಿಲ್ಲ. ತಾಂತ್ರಿಕವಾಗಿ ಹೇಳುವುದಾದರೆ, ಇದೆಲ್ಲವೂ ಸರಕಾರದ ಬೊಕ್ಕಸಕ್ಕೆ ಗುನ್ನ ಇಡುವ ಯೋಜನೆಗಳು, ರಾಜಕೀಯ ತಂತ್ರಗಾರಿಕೆಯ ಭಾಗಗಳು. ಆದರೆ ಇಂತಹ ವಿಚಾರಗಳು ರಾಜಕೀಯ ವರ್ತುಲಗಳಲ್ಲಿ ಚರ್ಚೆಯಾಗಬೇಕೇ ವಿನಾ ನ್ಯಾಯಾಲಯಗಳಲ್ಲಿ ಅಲ್ಲ.

ಇದೆಲ್ಲ ವಿಚಾರಗಳನ್ನು ಗಮನಕ್ಕೆ ತೆಗೆದುಕೊಂಡು ಸರ್ವೋಚ್ಚ ನ್ಯಾಯಾಲಯ ತನ್ನ ಪರಿಮಿತಿಯಲ್ಲಿ ಆದೇಶವೊಂದನ್ನು ಹೊರಡಿಸಿ ಚುನಾವಣಾ ಆಯೋಗ ಇಂತಹ ಉಚಿತ ಕೊಡುಗೆಗಳನ್ನು ತಡೆಯಬೇಕೆಂಬ ಆದೇಶವನ್ನು ಹೊರಡಿಸಬಹುದು. ಅಷ್ಟೇ ಅಲ್ಲ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆ ಪ್ರಚುರ ಪಡಿಸುವಾಗ ಇಂತಹ ವಿಷಯಗಳ ಬಗ್ಗೆ ಸಾಕಷ್ಟು ಎಚ್ಚರ ವಹಿಸಲು ನಿರ್ದೇಶನ ಕೊಡಬಹುದು. ಆದರೆ ಇದೆಲ್ಲವನ್ನೂ ವಾಸ್ತವವಾಗಿ ತಡೆಯುವುದು ಅಥವಾ ನಿಗ್ರಹಿಸುವುದು ಅಷ್ಟು ಸುಲಭದ ಮಾತಲ್ಲ.

ಯಾವುದೇ ರಾಜಕೀಯ ಪಕ್ಷ ತನ್ನ ಪರಿಮಿತಿಯಲ್ಲಿ ಅಗತ್ಯವಾದ ಕ್ರಮ ಎಂದು ಪರಿಗಣಿಸಿರುವುದನ್ನು ಇನ್ನೊಂದು ಪಕ್ಷ ಉಚಿತ ಕೊಡುಗೆ ಎಂದು ಪರಿಭಾವಿಸಲೂಬಹುದು. ಇಲ್ಲಿ ಚುನಾವಣಾ ಆಯೋಗದ ಮಧ್ಯಪ್ರವೇಶ ಹಲವು ವೈರುಧ್ಯಗಳಿಗೆ ಕಾರಣ ವಾಗಲೂ ಬಹುದು. ಪ್ರಜಾಪ್ರಭುತ್ವವಾದಿ ವ್ಯವಸ್ಥೆಯಲ್ಲಿ ಇದೆಲ್ಲವೂ ಸರ್ವೇಸಾಮಾನ್ಯ. ಇದೆಲ್ಲವನ್ನೂ ಗಮನದಲ್ಲಿಟ್ಟು ಸರ್ವೋಚ್ಚ ನ್ಯಾಯಾಲಯದ ಮುಂದೆ ವಿಚಾರಣೆಗಳು ನಡೆಯುವಾಗ ನ್ಯಾಯಯಾರ ಕಡೆಗಿರುತ್ತದೆ ಎಂಬುದರ ಆಧಾರದ ಮೇಲೆ ಎಲ್ಲವೂ ನಿರ್ಧರಿತವಾಗುತ್ತದೆ.

ಸರ್ವೋಚ್ಚ ನ್ಯಾಯಾಲಯದಲ್ಲಿ ಈಗಾಗಲೇ ವಿಚಾರಣೆಗೆ ಬಾಕಿ ಇರುವ ಹತ್ತು ಹಲವು ಪ್ರಕರಣಗಳಿವೆ. ಗುಪ್ತರೂಪದಲ್ಲಿ ಕಾರ್ಪೊರೇಟ್ ಕಂಪನಿಗಳು ರಾಜಕೀಯ ಪಕ್ಷಗಳಿಗೆ ಫಂಡಿಂಗ್ ಮಾಡುವಂತಹ ಪ್ರಕರಣಗಳೂ ಸಾಕಷ್ಟಿವೆ. ಇವೆಲ್ಲವನ್ನೂ
ತ್ವರಿತವಾಗಿ ವಿಚಾರಣೆಗೆ ಎತ್ತಿಕೊಂಡು ನ್ಯಾಯ ಒದಗಿಸುವುದು ಸಾಧ್ಯವಾದೀತೇ?