Saturday, 14th December 2024

ಅಪಾತ್ರದಾನ ಯಾವುದು ? ಮತದಾನವೋ, ಗ್ಯಾರಂಟಿ ಯೋಜನೆಗಳೋ ?

ಚರ್ಚಾ ವೇದಿಕೆ

ದಯಾನಂದ ಲಿಂಗೇಗೌಡ

ಉಚಿತ ಫಲಗಳನ್ನು ಅನುಭವಿಸುವ ಜನರ ಸಂತೋಷ ಹೆಚ್ಚು ದಿನ ಬಾಳುತ್ತದೆ ಎಂಬುದಕ್ಕೆ ಖಾತ್ರಿ ಯಿಲ್ಲ. ಮನೆಯಾಕೆ ಮಾಡಿದ ಉಚಿತ ಪ್ರಯಾಣದ ಖರ್ಚನ್ನು, ಪತಿಯ ಟಿಕೆಟ್ಟಿನ ಬೆಲೆ ಹೆಚ್ಚು ಮಾಡಿಯೇ ಸರಿದೂಗಿಸಬೇಕು! ಉಚಿತ ವಿದ್ಯುತ್‌ನಲ್ಲಾದ ಖರ್ಚನ್ನು ಪೆಟ್ರೋಲ್-ಡೀಸೆಲ್ ಬೆಲೆಹೆಚ್ಚಳದ ಮೂಲಕ ತುಂಬಿಸಬೇಕು. ಆಗ ಎಲ್ಲ ದಿನಸಿ ಪದಾರ್ಥಗಳ ಬೆಲೆ ಹೆಚ್ಚಳವಾಗುವುದು ಕಟ್ಟಿಟ್ಟಬುತ್ತಿ.

ಒಂದು ಊರಿನಲ್ಲಿ ಒಂದು ಶಾಲೆಯಿತ್ತು. ಎಲ್ಲಾ ಶಾಲೆಗಳಲ್ಲಿ ಇರುವಂತೆ, ಅದರಲ್ಲಿ ಕೆಲವು ಮಕ್ಕಳು ಚೆನ್ನಾಗಿ ಅಭ್ಯಾಸ ಮಾಡುತ್ತಿದ್ದರೆ, ಮತ್ತೆ ಕೆಲವು ವಿದ್ಯಾರ್ಥಿಗಳ ಸಾಧನೆ ಸಾಧಾರಣವಾಗಿತ್ತು. ತೀರಾ ಕಳಪೆ ಎನ್ನುವಂಥ ವಿದ್ಯಾರ್ಥಿಗಳೂ ಇದ್ದರು. ಕಾಲಕ್ರಮೇಣ ಆ ಶಾಲೆಗೆ ಹೊಸ ಮುಖ್ಯೋ ಪಾಧ್ಯಾ ಯರನ್ನು ನೇಮಿಸುವ ಸಮಯ ಬಂತು. ಈ ಹುದ್ದೆಯನ್ನು ಬಯಸಿದ್ದ ವಿವಿಧ ವ್ಯಕ್ತಿಗಳನ್ನು ಕರೆಸಿ, ಶಾಲೆಯಲ್ಲಿ ಉತ್ತಮ ಫಲಿತಾಂಶ ತರಲು
ಅವರಲ್ಲಿದ್ದ ಕಾರ್ಯಸೂಚಿಯನ್ನು ಮಂಡಿಸುವಂತೆ ಹೇಳಲಾಯಿತು.

ಓದಿನಲ್ಲಿ ಹಿಂದೆ ಬಿದ್ದಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ಪ್ರಸ್ತಾವ ಈ ಪೈಕಿ ಒಬ್ಬರಿಂದ ಹೊಮ್ಮಿ ದರೆ, ಸಾಧಾರಣ ವಿದ್ಯಾರ್ಥಿಗಳಲ್ಲಿರುವ ಅನ್ಯ ಕೌಶಲಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಸರ್ವತೋಮುಖ ಅಭಿ ವೃದ್ಧಿ ಮಾಡುವುದಾಗಿ ಮತ್ತೊಬ್ಬರು ಹೇಳಿದರು. ಸಾಮಾಜಿಕ ನ್ಯಾಯದ ಬಗ್ಗೆ ಒಲವಿದ್ದ ಮತ್ತೊಬ್ಬರು, ಬಂದ ಅಂಕಗಳನ್ನು ಸಮಾನವಾಗಿ ಹಂಚಿ ಎಲ್ಲರನ್ನೂ ಸಮಾನರಾಗಿಸಿ ಮೇಲು-ಕೀಳು ಹೋಗಲಾಡಿಸುವ ಪ್ರಸ್ತಾವವನ್ನು ಮುಂದುಮಾಡಿದರು. ಕೊನೆಯ ಪ್ರಸ್ತಾವವು ತಕ್ಷಣಕ್ಕೆ ಫಲ ನೀಡುವಂತಿದ್ದುದರಿಂದ ಹಾಗೂ ಯಾವುದೇ ಶ್ರಮವಿಲ್ಲದೆ ಅಳವಡಿಸಿಕೊಳ್ಳಬಹುದಾಗಿದ್ದರಿಂದ, ಅದನ್ನು ಮುಂದುಮಾಡಿದ ವ್ಯಕ್ತಿಯನ್ನೇ ಮುಖ್ಯೋಪಾಧ್ಯಾಯರಾಗಿ ನೇಮಿಸಲಾಯಿತು.

ಹೊಸ ಮುಖ್ಯೋಪಾಧ್ಯಾಯರು ನೇಮಕವಾಗುತ್ತಿದ್ದಂತೆ ತಮ್ಮ ಕಲ್ಪನೆಯನ್ನು ಜಾರಿಗೊಳಿಸಿದರು. ಬಂದ ಅಂಕಗಳನ್ನು ಎಲ್ಲರಿಗೂ ಸಮಾನವಾಗಿ ಹಂಚಲಾಯಿತು. ಹೀಗಾಗಿ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾದರು. ಈ ವ್ಯವಸ್ಥೆಯಿಂದ ಎಲ್ಲರೂ ಸಂತೋಷವಾಗಿರುವಂತೆ ಮೇಲ್ನೋಟಕ್ಕೆ ಕಂಡು ಬಂತು. ಆದರೆ, ಚೆನ್ನಾಗಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳು ಕ್ರಮೇಣ ನೀತಿಗೆಟ್ಟರು. ಬೇರೆಯವರಿಗೆ ಅಂಕಗಳನ್ನು ಹಂಚಲು ತಾವೇಕೆ ಕಷ್ಟಪಡ ಬೇಕು? ಎಂಬ ಭಾವನೆ ಅವರಲ್ಲಿ ಸುಳಿಯತೊಡಗಿತು. ಹೀಗಾಗಿ, ಓದುವುದಕ್ಕೆ ಅವರಿಗೆ ಯಾವುದೇ ಪ್ರೇರೇಪಣೆ ಇಲ್ಲದಂತಾಗಿ ಓದುವುದನ್ನು ಬಿಟ್ಟು ಇನ್ನುಳಿದವರಂತೆ ಉಡಾಳರಾದರು.

ಇನ್ನು ಕೆಲವರು ಶಾಲೆ ಬಿಟ್ಟು ಬೇರೆ ಶಾಲೆಗೆ ವಲಸೆ ಹೋದರು. ಹೀಗಾಗಿ ಬರುತ್ತಿದ್ದ ಸರಾಸರಿ ಅಂಕಗಳಲ್ಲಿ ಕುಸಿತವಾಗತೊಡಗಿ ಕೆಲವೇ ವರ್ಷಗಳಲ್ಲಿ
ಎಲ್ಲ ವಿದ್ಯಾರ್ಥಿಗಳೂ ನಪಾಸಾಗತೊಡಗಿದರು. ಕಾಲ ಮಿಂಚಿತ್ತು. ವಿದ್ಯಾರ್ಥಿಗಳಲ್ಲಿ ಮತ್ತೆ ಚೈತನ್ಯ ಮೂಡಿಸಿ ಮೊದಲಿನ ಹಂತಕ್ಕೆ ತರಲು ವರ್ಷಗಳೇ ಹಿಡಿದವು. ಕರ್ನಾಟಕ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ ಈ ಕತೆ ನೆನಪಿಗೆ ಬಂತು. ಪ್ರತ್ಯಕ್ಷ ಅಥವಾ ಪರೋಕ್ಷ ತೆರಿಗೆ ಮೂಲಕ ಪ್ರತಿಯೊಬ್ಬರಿಂದಲೂ ತೆರಿಗೆ ಸಂಗ್ರಹವಾಗುತ್ತದೆ. ಶೇಕಡಾವಾರು ಕಡಿಮೆ ಜನರು ಎರಡೂ ಬಗೆಯ ತೆರಿಗೆ ಪಾವತಿಸಿದರೆ, ಹೆಚ್ಚಿನವರು ಖರೀದಿ ಮಾಡುವ ವಸ್ತುಗಳ ಮೂಲಕ ಪರೋಕ್ಷ ತೆರಿಗೆ ಮಾತ್ರ ನೀಡುತ್ತಾರೆ. ಹೀಗೆ ಸಂಗ್ರಹವಾಗುವ ತೆರಿಗೆ ಯನ್ನು ಜವಾಬ್ದಾರಿಯುತವಾಗಿ ಉಪಯೋಗಿಸಬೇಕು.

ತಾವು ನೀಡುವ ತೆರಿಗೆ ಹಣವು ಸರ್ವರಿಗೂ ಉಪಯೋಗವಾಗುವ ಸೇವೆಗಳಲ್ಲಿ (ಉದಾಹರಣೆಗೆ, ಮೂಲಸೌಕರ್ಯಗಳು, ಸರಕಾರಿ ಸಿಬ್ಬಂದಿಗೆ ಪಾವತಿ
ಸಬೇಕಾದ ಸಂಬಳ ಇತ್ಯಾದಿ) ವಿನಿಯೋಗವಾಗಲಿ ಎಂಬುದು ತೆರಿಗೆದಾರರ ಮೂಲ ಆಶಯವಾಗಿರುತ್ತದೆ. ಕೆಲವೊಮ್ಮೆ ತೆರಿಗೆ ಹಣವು ನಿರ್ದಿಷ್ಟ ಜನರಿಗೆ ಮಾತ್ರವೇ ತಲುಪಿದರೂ, ಮುಂದೆ ಹಣವು ಮರಳಿ ಬರುವಂತಿರಬೇಕು. ಉದಾಹರಣೆಗೆ, ಶಾಲೆಗಳಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದರೆ, ಮುಂದೆ ಮಕ್ಕಳು ವಿದ್ಯಾವಂತರಾಗಿ ಕೆಲಸಕ್ಕೆ ಸೇರಿಕೊಂಡು ದುಡಿದು ತೆರಿಗೆ ಕಟ್ಟುವ ಪ್ರಜೆಗಳಾಗುತ್ತಾರೆ ಎಂಬ ಆಶಯ ಅದರ ಹಿಂದಿರುತ್ತದೆ.

ರಸ್ತೆಯೊಂದನ್ನು ನಿರ್ಮಿಸಿದರೆ, ಆಸುಪಾಸಿನ ವ್ಯಾಪಾರ- ವಹಿವಾಟು ಅಭಿವೃದ್ಧಿಯಾಗಿ, ಹಣಕಾಸಿನ ಚಟುವಟಿಕೆಗಳು ಹೆಚ್ಚಾಗಿ, ತೆರಿಗೆಯ ರೂಪದಲ್ಲಿ ಹಣವು ಮರಳಿ ಬರುತ್ತದೆ. ರೈತರು ಉಪಯೋಗಿಸುವ ಸಾಮಗ್ರಿಗಳ ಮೇಲೆ ಸಬ್ಸಿಡಿ ನೀಡಿದರೆ, ಆಹಾರ ಧಾನ್ಯಗಳ ಬೆಲೆ ನಿಯಂತ್ರಣದಲ್ಲಿರುತ್ತದೆ. ಆದರೆ, ದಿಕ್ಕು-ದೆಸೆಯಿಲ್ಲದೆ ಉಚಿತವಾಗಿ ಹಣ ಹಂಚುವ ವ್ಯವಸ್ಥೆಗಳಲ್ಲಿ ಸರಕಾರಕ್ಕೆ ಮರಳಿ ಏನೂ ಬರುವುದಿಲ್ಲ; ಪ್ರತಿಯಾಗಿ, ಹೆಚ್ಚಾಗಿ ತೆರಿಗೆ ಕಟ್ಟುವವರಿಗೆ ತಪ್ಪುಸಂದೇಶ ರವಾನೆಯಾಗುತ್ತದೆ. ಸರಕಾರದ ಖಜಾನೆಯಲ್ಲಿ ಹಣವು ಅಷ್ಟೊಂದು ಹೆಚ್ಚಾಗಿದ್ದರೆ, ವಿವೇಕದಿಂದ ಉಪಯೋಗಿಸಲು ಹಲವಾರು ಅವಕಾಶಗಳಿವೆ. ಉದಾಹರಣೆಗೆ, ಆರೋಗ್ಯವು ಜನರ ಮೂಲಭೂತ ಹಕ್ಕುಗಳಲ್ಲಿ ಒಂದು.

ಆದರೆ ಸರಕಾರಗಳು ಆರೋಗ್ಯ ಕ್ಷೇತ್ರಕ್ಕೆ ಖರ್ಚುಮಾಡುವುದು ಶೇ. ೩ರಷ್ಟು ಹಣವನ್ನು ಮಾತ್ರ. ಇದು ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ, ಯಾವುದಕ್ಕೂ ಸಾಕಾಗುವುದಿಲ್ಲ. ಆರೋಗ್ಯ ಕ್ಷೇತ್ರಕ್ಕೆ ಆಗುವ ಖರ್ಚನ್ನು ಶೇ. ೧೫ರಿಂದ ೨೦ಕ್ಕೆ ಏರಿಸಬೇಕೆಂಬ ಬೇಡಿಕೆಯಿದೆ. ಪ್ರತಿ ಜಿಲ್ಲೆಯಲ್ಲಿ ಸರಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಅವಶ್ಯಕತೆಯಿದೆ. ತೆರಿಗೆ ಕಟ್ಟುವ ಜನರು ತಮ್ಮ ಆರೋಗ್ಯಕ್ಕಾಗಿ ಖಾಸಗಿ ಆಸ್ಪತ್ರೆಗಳಿಗೇಕೆ ಹೆಚ್ಚೆಚ್ಚು ಹಣವನ್ನು ಸುರಿಯಬೇಕು? ಜನರ ಆರೋಗ್ಯದ ಮೇಲೆ ಸರಕಾರವು ಹಣವನ್ನು ವಿನಿಯೋಗಿಸಿದರೆ, ಆರೋಗ್ಯವಂತ ಜನರು ದುಡಿದು ತೆರಿಗೆ ಕಟ್ಟಿ ಸರಕಾರದ ಹಣವನ್ನು ಮರಳಿಸುತ್ತಾರೆ.

ಸಂಪಾದನೆಯ ಶೇ. ೫ರಿಂದ ೧೦ ಭಾಗವನ್ನು ಉದ್ದೇಶವಿಲ್ಲದೆ ಖರ್ಚುಮಾಡುವುದು ಸಾಕಷ್ಟು ಮಂದಿಯ ಪರಿಪಾಠ- ಅದು ಮನರಂಜನೆಗೆ ಇರಬಹುದು, ಪ್ರವಾಸವಿರಬಹುದು ಅಥವಾ ಪ್ರೀತಿಪಾತ್ರರಿಗೆ ನೀಡುವ ಕಾಣಿಕೆಗಾಗಿ ಇರಬಹುದು. ಆದರೆ ಅದು ಮಿತಿಮೀರಿದರೆ ಮನೆಉದ್ಧಾರವಾಗುವುದಿಲ್ಲ. ಅದೇ ರೀತಿ, ಸರಕಾರವು ತನ್ನ ಸಿದ್ಧಾಂತಗಳಿಗೆ ಅನುಗುಣವಾಗಿ, ತಮ್ಮವರಿಗೆ ಅನುಕೂಲ ಮಾಡಿಕೊಡುವುದಕ್ಕೆಂದು ಅತ್ಯಲ್ಪ ಭಾಗವನ್ನು ಉಪಯೋಗಿಸಿದರೆ ಯಾರೂ ಪ್ರಶ್ನಿಸುವುದಿಲ್ಲ. ಇಂಥ ಸಣ್ಣ ಪುಟ್ಟ ಗಿಮಿಕ್ ಮಾಡದಿರುವ ಸರಕಾರಗಳೇ ಇಲ್ಲ. ಆದರೆ ಅದು ಮಿತಿಮೀರಿ, ಆದಾಯದ ಪ್ರಮುಖ ಭಾಗವೇ
ಮರಳಿ ಬಾರದ ಉದ್ದೇಶಗಳಿಗೆ ಉಪಯೋಗವಾದರೆ, ಆ ಸರಕಾರದ ನಿರ್ಧಾರ ಪ್ರಶ್ನಾರ್ಹವೆನಿಸುತ್ತದೆ.

ಇನ್ನು ಮುಂಬರುವ ಚುನಾವಣೆಗಳನ್ನು ಕಲ್ಪಿಸಿಕೊಂಡರೆ ಪ್ರಜ್ಞಾ ವಂತ ನಾಗರಿಕರು ಕಳವಳಗೊಳ್ಳುವುದಕ್ಕೆ ಸಾಕಷ್ಟು ಕಾರಣ ಗಳಿವೆ. ಏಕೆಂದರೆ, ಈ ಸಲದ ಚುನಾವಣೆಯಲ್ಲಿ ಇತರೆ ಪಕ್ಷಗಳಿಗೆ ತಪ್ಪಾದ ಸಂದೇಶವೇ ರವಾನೆಯಾಗಿರುವುದರಿಂದ ಅವರೇನೂ ಸುಮ್ಮನೆ ಕೂರುವುದಿಲ್ಲ; ಇಡೀ ತೆರಿಗೆ
ಹಣವನ್ನು ಪುಗಸಟ್ಟೆಯಾಗಿ ಹಂಚುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯನ್ನು ಅವರು ಹೊರಡಿಸಿದರೆ ಈ ದೇಶದ ಭವಿಷ್ಯವೇನಾಗಬೇಕು? ಈ ಕೆಟ್ಟಚಾಳಿ ಇಡೀ ದೇಶಕ್ಕೆ ಹಬ್ಬಬಹುದು. ಇದು ಕಲ್ಪನೆಯಲ್ಲ, ಮುಂದಿನ ಚುನಾವಣೆಯಲ್ಲಿ ದಾಂಗಡಿಯಿಡುವ ಎಲ್ಲ ಲಕ್ಷಣಗಳಿವೆ. ಹಿಂದೆಲ್ಲ, ತಂತಮ್ಮ ಮನೆಯ ಹಣ ಕೊಟ್ಟು ಮತ ಖರೀದಿಸುವ ಪರಿಪಾಠವಿತ್ತು. ಆದರಿಂದು ಇದು ಸ್ವಲ್ಪ ‘ಅಪ್ ಗ್ರೇಡ್’ ಆಗಿದೆ, ಅಂದರೆ ತೆರಿಗೆ ಹಣದಿಂದಲೇ ಉಚಿತ ಘೋಷಣೆಗಳ ಮೂಲಕ ಮತ ಖರೀದಿಸುವ ಪರಿಪಾಠ! ಎಲ್ಲೋ ಓದಿದ ಮತ್ತೊಂದು ದೃಷ್ಟಾಂತ ನೆನಪಾಗುತ್ತಿದೆ.

ಕಾಡಿನಲ್ಲಿ ಚುನಾವಣೆ ನಡೆಯುತ್ತಿತ್ತಂತೆ. ಮಣ್ಣಿನ ಮಡಕೆ ಹಾಗೂ ಕೊಡಲಿ ಅದರಲ್ಲಿ ಸ್ಪರ್ಧಿಸಿದ್ದವಂತೆ. ಕೊಡಲಿಯ ಹಿಡಿಕೆಯನ್ನು ಮರದಿಂದ ಮಾಡಿದ್ದರಿಂದ ‘ಇವ ನಮ್ಮವ’ ಎಂದು ಕಾಡಿನ ಮರಗಳೆಲ್ಲ ನೀರೆರೆಯುವ ಮಡಕೆಯನ್ನು ಮರೆತು ಕೊಡಲಿಗೆ ಮತ ನೀಡಿದವಂತೆ. ಗೆದ್ದ ನಂತರ ಕೊಡಲಿಯು ತನ್ನ ಸಂತತಿಯನ್ನು ಹೆಚ್ಚಿಸಿ ಕೊಳ್ಳಲೆಂದು ಮರಕ್ಕೇ ಕೊಡಲಿ ಇಟ್ಟಾಗ, ‘ತಮ್ಮನ್ನೇ ಕಡಿದು ಕೊಡಲಿಯ ಹಿಡಿಕೆಯನ್ನು ಮಾಡುತ್ತಾರೆ’ ಎಂಬ ಕಹಿಸತ್ಯ ಮರಗಳಿಗೆ ನೆನಪಾಯಿತಂತೆ. ಹೀಗೆಯೇ, ಉಚಿತ ಫಲಗಳನ್ನು ಅನುಭವಿಸುವ ಜನರ ಸಂತೋಷ ಹೆಚ್ಚು ದಿನ ಬಾಳುತ್ತದೆ ಎಂಬುದಕ್ಕೆ ಖಾತ್ರಿಯಿಲ್ಲ.

ಮನೆ ಯಾಕೆ ಮಾಡಿದ ಉಚಿತ ಪ್ರಯಾಣದ ಖರ್ಚನ್ನು, ಪತಿಯ ಟಿಕೆಟ್ಟಿನ ಬೆಲೆ ಹೆಚ್ಚು ಮಾಡಿಯೇ ಸರಿದೂಗಿಸಬೇಕು! ಉಚಿತ ವಿದ್ಯುತ್‌ನಲ್ಲಾದ ಖರ್ಚನ್ನು ಪೆಟ್ರೋಲ್ -ಡೀಸೆಲ್ ಬೆಲೆಹೆಚ್ಚಳದ ಮೂಲಕ ತುಂಬಿಸಬೇಕು. ಪೆಟ್ರೋಲ್-ಡೀಸೆಲ್ ಬೆಲೆ ಒಮ್ಮೆ ಹೆಚ್ಚಾದರೆ, ಎಲ್ಲ ದಿನಸಿ ಮತ್ತು ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುವುದು ಕಟ್ಟಿಟ್ಟಬುತ್ತಿ. ಹೀಗೆ ಹೆಚ್ಚಾದ ದಿನಸಿ ಹಣವು ‘ಗೃಹಲಕ್ಷ್ಮಿ’ಗೆ ಬಂದ ಹಣಕ್ಕೆ ಸರಿಹೋಗುತ್ತದೆ! ಒಂದೊಮ್ಮೆ ಯಾವುದೇ ಬೆಲೆಯೇರಿಕೆ ಆಗದಿದ್ದರೆ ರಾಜ್ಯದ ಸಾಲ ಹೆಚ್ಚಾಗಿದೆ ಎಂದೇ ಅರ್ಥ; ಏಕೆಂದರೆ, ಹಣಕಾಸು ನಿರ್ವಹಣೆಯಲ್ಲಿ ಯಾವುದೇ ಜಾದೂ ನಡೆಯು ವುದಿಲ್ಲ!

ಕೆಲವು ವರ್ಷಗಳ ಹಿಂದೆ, ‘ಮೈಸೂರಿನ ಒಡೆಯರು ರಸ್ತೆ, ರೈಲು, ಅಣೆಕಟ್ಟು ಹೀಗೆ ಜನೋಪಯೋಗಿ ಕಾರ್ಯ ಗಳನ್ನು ಮಾಡಿದ್ದಾರೆ’ ಎಂಬ ವಾದ ಮುನ್ನೆಲೆಗೆ ಬಂದಾಗ, ‘ಅವರೇನು ತಮ್ಮಪ್ಪನ ಮನೆಯಿಂದ ತಂದು ಅವೆಲ್ಲವನ್ನೂ ಮಾಡಿದರಾ? ಅದು ಜನರ ತೆರಿಗೆ ದುಡ್ಡು’ ಎಂಬ ಮಾತು ಜನ ನಾಯಕರೊಬ್ಬರ ಬಾಯಿಂದ ಹೊಮ್ಮಿತ್ತು. ಈ ಮಾತಿನ ಹಿನ್ನೆಲೆಯಲ್ಲಿ, ಮುಂದಿನ ಚುನಾವಣೆಯಲ್ಲಿ ‘ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು ನಾನು’ ಎಂದು ಹೇಳಿ ಕೊಳ್ಳುತ್ತಾರಾ, ‘ಇದು ಜನರ ತೆರಿಗೆಯಿಂದ ಕೊಟ್ಟಿದ್ದು’ ಎಂದು ಹೇಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಕೊನೆಯ ಮಾತು: ಸ್ಕಂದ ಪುರಾಣದಲ್ಲಿ ಮೂರು ರೀತಿಯ ದಾನನಾಶಕಗಳ ಉಲ್ಲೇಖ ಬರುತ್ತದೆ- ಪಶ್ಚಾ ತ್ತಾಪ ದಾನ, ಅಪಾತ್ರ ದಾನ ಮತ್ತು ಅಶ್ರದ್ಧಾ ದಾನ. ಪಶ್ಚಾತ್ತಾಪ ದಾನವೆಂದರೆ, ಕೊಟ್ಟ ನಂತರ ‘ಏಕಾದರೂ ದಾನ ಕೊಟ್ಟೆವೋ?’ ಎಂದು ವಿಷಾದಪಡುವ ದಾನ. ಅಪಾತ್ರ ದಾನವೆಂದರೆ, ತಪ್ಪು ವ್ಯಕ್ತಿಗೆ ಅಥವಾ ಅನರ್ಹ ವ್ಯಕ್ತಿಗೆ ಕೊಡುವ ದಾನ. ದಾನ ಕೊಡದಿರುವುದು ಎಷ್ಟು ಕೆಟ್ಟದ್ದೋ, ಅಷ್ಟೇ ಕೆಟ್ಟದ್ದು ಈ ಅಪಾತ್ರ ದಾನ. ಅಶ್ರದ್ಧಾ ದಾನ ವೆಂದರೆ ಸೋಮಾರಿಗೆ ಕೊಡುವ ದಾನ, ಇದಕ್ಕೆ ‘ರಾಕ್ಷಸದಾನ’ ಎಂಬ ಹೆಸರೂ ಇದೆ. ಈ ಎಲ್ಲಾ ದಾನನಾಶಕಗಳಿಗೆ ಈ ಹೊಸ ಸರಕಾರದ ಯೋಜನೆಗಳು
ಉದಾಹರಣೆಯಂತೆ ಕಾಣುತ್ತವೆ. ಮತದಾನಕ್ಕೆ ಪ್ರತಿ ಯಾಗಿ, ಸಂಕುಚಿತ ಲಾಭಗಳ ‘ಗ್ಯಾರಂಟಿ’ ಜಾರಿಯಾಗಿದೆ. ಇಲ್ಲಿ ಅಪಾತ್ರ ದಾನ ಯಾವುದು? ಮತದಾನವೋ ಅಥವಾ ಗ್ಯಾರಂಟಿ ಯೋಜನೆಗಳೋ?!