Saturday, 14th December 2024

ಸ್ವಾತಂತ್ರ‍್ಯ ಅಮೃತ ಮಹೋತ್ಸವದಲ್ಲಿ ಸಂಸ್ಕೃತೋತ್ಸವ ಸಪ್ತಾಹ

ತನ್ನಿಮಿತ್ತ

ನಂ.ಶ್ರೀಕಂಠ ಕುಮಾರ್‌

ಭಾಷೆ ಒಂದು ಸಂಪರ್ಕ ಸಾಧನವಾಗಿ ಜನಿಸಿ, ಬೆಳೆದು ಬಂದಿದೆ. ಪ್ರತಿಯೊಂದು ಭಾಷೆಗೂ ಸಾವಿರಾರು ವರ್ಷಗಳ ಇತಿಹಾಸವಿದೆ. ಜಗತ್ತಿನಲ್ಲಿ ಸಾವಿರಾರು ಭಾಷೆಗಳಿದ್ದು ಕೆಲವಂತೂ ಲಿಪಿಯಿಲ್ಲದೆಯೇ ಕೇವಲ ಸಂಭಾಷಣೆಯ ರೂಪದಲ್ಲಿ ಬೆಳೆದು ಬಂದಿದೆ.

ಅವುಗಳಲ್ಲಿ ಅತೀ ಪ್ರಾಚೀನ ಭಾಷೆಯೆಂದರೆ ಸಂಸ್ಕೃತ. ಈ ಭಾಷೆಯನ್ನು ಭಗವಂತನ ಬಾಯಿಂದ ಬಂದ ದೇವ ಭಾಷೆ, ಗೀರ್ವಾಣ ಭಾಷೆ ಎಂದು ಹೇಳಲಾಗುತ್ತದೆ. ಪ್ರಾಚೀನ ಎಂಬುವುದಕ್ಕೆ ಕಾಲ ನಿಗದಿ ಮಾಡಲು ಸಾಧ್ಯವಾಗದಿದ್ದರೂ ಲಭ್ಯ ಮಾಹಿತಿ ಆಧರಿಸಿ ಪಾಶ್ಚಿಮಾತ್ಯರು ಕ್ರಿ.ಪೂ 1500 ವರ್ಷಗಳಷ್ಟು ಹಿಂದಿನದೆಂದು ಅಂದಾಜಿಸಿದ್ದಾರೆ. ಇದು ಪ್ರಾಚೀನವಷ್ಟೇ ಅಲ್ಲ. ಸಮೃದ್ಧ, ವೈಜ್ಞಾನಿಕ ಹಾಗೂ ಹಲವಾರು ಭಾಷೆಗಳಿಗೆ ಮಾತೃ ಸ್ಥಾನದಲ್ಲಿದೆ.

ಪ್ರಾಂತೀಯ ಭಾಷೆಗಳಾದ ಕನ್ನಡ, ತೆಲುಗು, ಮಲೆಯಾಳಂ ಸೇರಿದಂತೆ ಹಲವು ಭಾಷೆಗಳ ಪರಿಪೂರ್ಣ ತಿಳಿವಳಿಕೆಗೆ ಸಂಸ್ಕೃತದ ಜ್ಞಾನ ಅತ್ಯಂತ ಪೂರಕ. ಇತರ ಭಾಷೆಗಳಿಗೆ ಆಯಾ ಭೌಗೋಳಿಕ ಪ್ರದೇಶದ ಹಿನ್ನೆಲೆ ಇರುತ್ತದೆ. ಆದರೆ ಸಂಸ್ಕೃತ ಇಂತಹ ಗಡಿಗಳನ್ನು ದಾಟಿ ನಿಂತಿರುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ತರದ ಭಾಷೆ. ಇಲ್ಲಿನ ವೇದ ದರ್ಶನ, ರಾಮಾಯಣ, ಮಹಾ ಭಾರತ ಇತ್ಯಾದಿ ಗ್ರಂಥಗಳು ಜಗತ್‌ಪೂಜ್ಯವೆನಿಸಿದೆ. ಅಲ್ಲದೆ ಇಂತಹ ಹಲವಾರು ಗ್ರಂಥಗಳು ಸಂಸ್ಕೃತದಿಂದ ಅನುವಾದಗೊಂಡು ಆಯಾ ಪ್ರಾಂತೀಯ ಭಾಷೆಗಳು ಶ್ರೀಮಂತವಾಗಿವೆ.

ಸಂಸ್ಕೃತ ಎಲ್ಲ ಆಯಾಮಗಳಲ್ಲಿ ಹಾಗೂ ಪ್ರಾಚೀನ ಭಾರತದ ೬೪ ಕಲೆಗಳಲ್ಲಿ ಸಂವೃದ್ಧಿಯಾಗಿದೆ ಎಂಬುದು ವಿಶೇಷ. ಪ್ರಾಚೀನ ಭಾರತದಲ್ಲಿ ಪ್ರತಿ ಜ್ಞಾನ ಶಾಖೆ ಮತ್ತು ಕಲೆಯನ್ನು ಬ್ರಹ್ಮಜ್ಞಾನ ಪಡೆಯಲು ಪೂರಕ ಮಾರ್ಗ ಎಂದೇ ಪರಿಗಣಿಸಲಾಗುತ್ತಿತ್ತು.
ಶ್ರೀಕೃಷ್ಣನು ಕಂಸನ ಸಂಹಾರದ ನಂತರ ಸಾಂದೀಪನಿ ಮಹರ್ಷಿಗಳ ಬಳಿ ಗುರುಕುಲದಲ್ಲಿ ಕೇವಲ 64 ದಿನಗಳಲ್ಲಿ 64 ಕಲೆಗ ಳನ್ನು, 14 ವಿದ್ಯೆಗಳನ್ನು ಕಲಿತ ನೆಂಬ ಉಲ್ಲೇಖವಿದೆ.

ಹಾಗೆಯೇ ಸಂಸ್ಕೃತದಲ್ಲಿ ಕಾವ್ಯಗಳು, ಸಂಸ್ಕೃತದಲ್ಲಿ ವಿಜ್ಞಾನ, ಅರ್ಥಶಾಸ, ಗಣಿತ, ನ್ಯಾಯ ನಿರ್ಣಯಗಳು, ಆಯುರ್ವೇದ
ಮತ್ತು ಇತ್ತೀಚೆಗೆ ಪ್ರಸಿದ್ಧ ಸಂಸ್ಥೆಗಳಲ್ಲಿನ ಧ್ಯೇಯ ವಾಕ್ಯಗಳನ್ನು ಸಹ ಸಂಸ್ಕೃತದಲ್ಲಿ ಕಾಣಬಹುದು. ಈ ದೃಷ್ಟಿಯಿಂದ ಸಂಸ್ಕೃತ ಭಾಷೆ ಹಾಗೂ ಸಾಹಿತ್ಯ ವಿಶ್ವಕ್ಕೆ ವಿಶಿಷ್ಟ ಕೊಡುಗೆ ನೀಡಿದೆ.

ಸಂಸ್ಕೃತ ಮತ್ತು ಕಾವ್ಯ
ಬರೆದವರೆಲ್ಲ ಕವಿಗಳಾಗಲಾರರು, ಬರೆದುದೆಲ್ಲ ಕಾವ್ಯವಾಗದು. ಕವಿಯಲ್ಲಿ ಉತ್ತಮ ಸಂಸ್ಕಾರ, ಉತ್ತಮ ಗುರುಗಳಲ್ಲಿ ಕಲಿಕೆ, ಉದಾತ್ತ ಜೀವಿಗಳ ನಿರಂತರ ಮಾರ್ಗದರ್ಶನ, ಪ್ರವಾಸ, ಪ್ರತಿದಿನ ಪಠನ, ಚಿಂತನೆ ಇತ್ಯಾದಿಗಳು ಇರಬೇಕು. ಪ್ರಪಂಚದ ಮೊದಲ ಮಹಾಕವಿಯೆಂದರೆ ವಾಲ್ಮೀಕಿ ಮಹರ್ಷಿಗಳು. ಅವರು ಲೋಕಕ್ಕೆ ಸಮರ್ಪಿಸಿರುವ ರಾಮಾಯಣ ಆದಿಕಾವ್ಯವೆಂದೇ ಪ್ರಸಿದ್ಧ. ಇನ್ನು ಸಾಂಕೇತಿಕವಾಗಿ ಪಂಚ ಮಹಾಕಾವ್ಯಗಳೆಂದು ೫ ಕೃತಿಗಳನ್ನು ಗುರುತಿಸಲಾಗುತ್ತದೆ.

ಕಾಳಿದಾಸನ ರಘುವಂಶ ಹಾಗೂ ಕುಮಾರಸಂಭವ. ಭಾರವಿಯ ಕಿರಾತಾರ್ಜು ನೀಯ, ಮಾಘ ಕವಿಯ ಶಿಶುಪಾಲವಧ ಹಾಗೂ ಶ್ರಿ
ಹರ್ಷನ ನೈಷಧಿಯ ಚರಿತೆ. ಇನ್ನು ವಿಶ್ವ ಪ್ರಸಿದ್ಧ ಪಂಚತಂತ್ರ ರಚಿಸಿದ ವಿಷ್ಣುಶರ್ಮ, ಸಮಕಾಲೀನ ಕವಿಗಳಾಗಿದ್ದ ನಾಗಪುರದ ಡಾ. ರ್ಶರೀಧರಭಾಸ್ಕರ ವರ್ಣೇಕರರು ಬರೆದ ಶಿವರಾಜ್ಯೋದಯಮ್, ಜ್ಞಾನಪೀಠ ಪುರಸ್ಕೃತ ಸಂಸ್ಕೃತ ಮಹಾಕವಿ ಡಾ.
ಸತ್ಯವತ ಶಾಸ್ತ್ರೀಗಳು ಬರೆದ ರಾಮಕೀರ್ತಿ ಮಹಾಕಾವ್ಯಮ್, ಬೃಹತ್ತರಮ್ ಭಾರತಮ್ ಇನ್ನೂ ಅನೇಕ ಮಹಾಕಾವ್ಯಗಳು ಉಲ್ಲೇಖಾರ್ಹ.

ಮೈಸೂರಿನವರೇ ಆದ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಡಾ. ಎಚ್.ವಿ ನಾಗರಾಜರಾವ್ ದೇಶಖ್ಯಾತ ಸಂಸ್ಕೃತ ಮಹಾಕವಿ ಗಳಾಗಿದ್ದು ಇವರು ರಚಿಸಿದ ಹತ್ತೂ ಶತಕಗಳು ಪ್ರಸಿದ್ಧವಾಗಿವೆ. ಸಂಸ್ಕೃತ ಮತ್ತು ವಿಜ್ಞಾನ ಸಂಸ್ಕೃತ ವಿಜ್ಞಾನದಲ್ಲಿ ಖಗೋಳ ಶಾಸ್ತ್ರದ ಜ್ಞಾನರಾಶಿ ವೇದ ಕಾಲದ ಕೊಡುಗೆ. ಕ್ರಿ.ಪೂ ೬೦೦೦ ಇಸವಿಯ ಋಗ್ವೇದದ ಮಂತ್ರದಿಂದ ಹಿಡಿದು ೧೪ನೇ ದಶಕದ ಸಾಯಾಣಾಚಾರ್ಯರ ವ್ಯಾಖ್ಯೆಯವರೆಗೂ ಇದರ ಪರಂಪರೆ ಹಬ್ಬಿದೆ.

ನಂತರದ ಕ್ರಿ.ಶ. ೫ನೇ ದಶಕದ ಆರ್ಯಭಟ, ೭ನೇ ದಶಕದ ಬ್ರಹ್ಮಗುಪ್ತ ಮತ್ತು ಭಾಸ್ಕರ-೧, ಕ್ರಿ.ಶ ೧೨ನೇ ದಶಕದ ಭಾಸ್ಕರ-೨
ನಮ್ಮ ಋಷಿ ಸದೃಶ ವಿಜ್ಞಾನಿಗಳ ಖಗೋಳ ಜಗತ್ತಿನ ಅನ್ವೇಷಣೆಗಳಲ್ಲಿನ ಕೊಡುಗೆ ಅಪಾರ. ಪಾಶ್ಚಿಮಾತ್ಯ ವಿಜ್ಞಾನಿಗಳಾದ ಮೈಖೆಲ್ಸನ್ ಮತ್ತು ಮಾರ್ಲೆ ೧೯ನೇ ಶತಮಾನದಲ್ಲಿ ಸೂರ್ಯನ ಬೆಳಕಿನ ಕಿರಣಗಳ ವೇಗವನ್ನು ಅನ್ವೆಷಿಸಿದರು ಎಮದು ದಾಖಲಾಗಿದೆ.

ಆದರೆ ಪ್ರಾಚೀನ ಭಾರತದ ಮಹರ್ಷಿಗಳು ಕ್ರಿ.ಪೂ ೬೦೦೦ ವರ್ಷಗಳ ಹಿಂದೆಯೇ ಇದನ್ನು ಕಂಡು ಹಿಡಿದಿದ್ದರು ಎಂಬುದು ಹೆಮ್ಮೆಯ ವಿಷಯ. ಸಂಸ್ಕೃತ ಮತ್ತು ಅರ್ಥಶಾಸ್ತ್ರ ಅರ್ಥಶಾಸ್ತ್ರವು ಅಥರ್ವವೇದದ ಉಪವೇದ. ರಾಜನೀತಿಗೆ ಸಂಬಂಧಿಸಿದ್ದು. ಅರ್ಥಶಾಸ್ತ್ರವನ್ನು ಬರೆದವನು ಆಚಾರ್ಯ ವಿಷ್ಣಗುಪ್ತ. ಇವನಿಗೆ ಚಾಣುಕ್ಯ, ಕೌಟಿಲ್ಯ ಎಂಬ ಉಪನಾಮಗಳಿವೆ. ಜೀವನದ ನಿರ್ವಹಣೆಗೆ ಅವಶ್ಯಕವಾದುದ್ದನ್ನು ‘ಅರ್ಥ’ವೆಂದು ಕೌಟಿಲ್ಯನು ಕರೆದಿದ್ದಾನೆ. ಈ ಅರ್ಥದ ಲಾಭ ಮತ್ತು ಪರಿರಕ್ಷಣಾ ಕ್ರಮ ಗಳನ್ನು ವಿವರವಾಗಿ ತಿಳಿಸಿಕೊಡುವ ಶಾಸ್ತ್ರ ಅರ್ಥಶಾಸ್ತ್ರ.

ರಾಜ್ಯ ರಕ್ಷಣೆಯಿಂದಾರಂಭಿಸಿ, ಕಾರ್ಯಭಾರಗಳು, ಶಿಕ್ಷಾವಿಧಾನಗಳವರೆಗೆ ಹಲವು ವಿಚಾರಗಳು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿದೆ. ಈ ಗ್ರಂಥವನ್ನು ಮೊಟ್ಟ ಮೊದಲಿಗೆ ಸಂಪಾದಿಸಿ ಪರಿಶೀಲಿಸಿ ಗ್ರಂಥರೂಪಕ್ಕೆ ತಂದವರು ಮೈಸೂರಿನ ರುದ್ರ ಪಟ್ಟಣದ ಡಾ. ಆರ್ ರಾಮಶಾಸಿಗಳು. ೧೯೦೯ರಲ್ಲಿ ಇದನ್ನು ಪ್ರಪಂಚದಲ್ಲೇ ಮೊದಲಿಗೆ ಮುದ್ರಿಸಿ ಪ್ರಕಟಿಸಿದ ಹೆಮ್ಮೆ ಮೈಸೂರಿನ ಪ್ರಾಚ್ಯವಿದ್ಯಾ ಸಂಶೊಧನಾಲಯದ್ದು.

ಸಂಸ್ಕೃತ ಮತ್ತು ಗಣಿತ
ಮೊದಲೆಲ್ಲ ಗಣಿತವನ್ನು ಸಂಸ್ಕೃತದಲ್ಲೇ ಬೋಧಿಸಲಾಗುತ್ತಿತ್ತು. ಯಾವುದೇ ವಿಷಯವನ್ನು ಲಯದ ಮೂಲಕ ತಿಳಿಸುವು ದರಿಂದ ಮನಸ್ಸಿಗೆ ಮುದ ಕೊಡುವ ಜತೆಗೆ ಅದು ಹೆಚ್ಚಿನ ಕಾಲ ಮನಸ್ಸಿನಲ್ಲಿ ಉಳಿಯುತ್ತದೆ ಎಂಬ ಸತ್ಯ ನಮ್ಮೆಲ್ಲರ ಅನುಭವ ದಲ್ಲಿದೆ. ಹಾಗಾಗಿ ಗಣಿತವನ್ನು ಕೂಡ ಲಯ, ಛಂದೋಬದ್ಧ ಪದ್ಯಗಳ ಮೂಲಕ ಸುಲಭವಾಗಿ ಹೇಳಿಕೊಡಲಾಗುತ್ತಿತ್ತು. ನಮ್ಮ ಶಾಲಾ ಕಾಲೇಜುಗಳಲ್ಲಿ ತಿಳಿಸಿಕೊಡಲಾಗುವ ಎಷ್ಟೋ ಗಣಿತ ಪ್ರಮೇಯಗಳು ಪ್ರಾಚೀನ ಸಂಸ್ಕೃತ ಸಾಹಿತ್ಯದಲ್ಲೇ ಇದ್ದವು.

‘ಪೈಥಾಗೊರಸ್ ಪ್ರಮೇಯ’ ಕ್ರಿ.ಶ. ೫೦೦ ವರ್ಷಗಳ ಹಿಂದೆಯೇ ಅನ್ವೇಷಿಸಲ್ಪಟ್ಟಿತು ಎನ್ನುತ್ತದೆ ಇತಿಹಾಸ. ಅದಕ್ಕೂ ಮೊದಲು ಕ್ರಿ.ಪೂ ೬೦೦ ವರ್ಷಗಳ ಹಿಂದೆಯೇ ಈ ಪ್ರಮೇಯವನ್ನು ಸಂಸ್ಕೃತದ ಶುಲ್ಬ ಸೂತ್ರಗಳಲ್ಲಿ ಹೇಳಲಾಗಿತ್ತು ಎನ್ನಲಾಗಿದೆ. ಶುಲ್ಬ
ಸೂತ್ರಗಳು ಆಪಸ್ತಂಬ, ಭೋದಾಯನ, ಮಾನನ, ಕಾತ್ಯಾಯನ ಮೊದಲಾದ ಪಂಡಿತರಿಂದ ಹೇಳಲ್ಪಟ್ಟಿತ್ತು.

ಯಾರನ್ನು ನಾವು ಕ್ಯಾಲುಕ್ಯುಲಸ್‌ನ ಪಿತಮಹಾ ಎಂದು ಕರೆಯಬಹುದೋ, ಹಾಗೆಯೇ ವಿಜ್ಞಾನವನ್ನು ನ್ಯೂಟನ್‌ಗಿಂತ ಹಲವು ಶತಕಗಳ ಮುಂಚೆಯೇ ನಮ್ಮಲ್ಲಿ ಪ್ರತಿಪಾದಿಸಿದ್ದರೋ ಅಂತಹ ದ್ವೀತಿಯ ಭಾಸ್ಕರಾಚಾರ್ಯರನ್ನು, ತ್ರಿಕೋನ ಮಿತಿಯ ಅಭಿ ವೃದ್ಧಿಗೆ ಕಾರಣರಾದ ೧ನೇ ಆರ್ಯ ಭಟ, ೨ನೇ ಆರ್ಯಭಟ, ಬ್ರಹ್ಮಗುಪ್ತ ಮತ್ತು ಮಾಧವ ಇವರನ್ನು ನಾವು ಸ್ಮರಿಸಲೇಬೇಕಾಗಿದೆ.

ಸಂಸ್ಕೃತ ಮತ್ತು ನ್ಯಾಯಾಲಯ
ನ್ಯಾಯಾಲಯಗಳಲ್ಲಿ ಸಾಕ್ಷಿಯಾಗುವವನಿಗೆ ಇರುವ ಮಾನದಂಡಗಳನ್ನು ಸಹಸ್ರಾರು ವರ್ಷಗಳ ಹಿಂದೆಯೇ ಸಂಸ್ಕೃತ ಗ್ರಂಥ ಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಯಾಜ್ಞವಲ್ಕ್ಯ ಸ್ಮತಿಯಲ್ಲಿ ಬರುವ ವ್ಯವಹಾರಾಧ್ಯಾಯದಲ್ಲಿ ಸಾಕ್ಷಿಯ ಗುಣಧರ್ಮ ವಿವರಿಸಲಾಗಿದೆ. ಅಲ್ಲದೇ ಯಾಜ್ಞವಲ್ಕ್ಯ ಸ್ಮೃತಿಯ ಪ್ರಸಿದ್ಧ ವ್ಯಾಖ್ಯಾನವಾದ ವಿಜ್ಞಾನೇಶ್ವರ ಲಿಖಿತ ಮಿತಾಕ್ಷರ ಎಂಬ ಗ್ರಂಥವ ನ್ನು ಅನುಸರಿಸಿಯೇ ಸರ್ವೋಚ್ಚ ನ್ಯಾಯಾಲಯದಲ್ಲಿ ಅನೇಕ ತೀರ್ಪುಗಳು ಪ್ರಕಟಗೊಂಡಿವೆ ಎಂಬುದು ಗಮನಿಸಲೇ ಬೇಕಾದ ಅಂಶ. ಈ ವಿಜ್ಞಾನೇಶ್ವರರ ಜನ್ಮ ಭೂಮಿ ಕರ್ನಾಟಕದ ಕಲ್ಬುರ್ಗಿ ತಾಲ್ಲೂಕಿನ ‘ಮರತ್ತೂರು’ ಗ್ರಾಮ.

ಸಂಸ್ಕೃತ ಮತ್ತು ಆರ್ಯುವೇದ
ಆರ್ಯುವೇದ ವೈದ್ಯ ಶಾಸ ಭಾರತೀಯರನ್ನಷ್ಟೇ ಅಲ್ಲದೇ ವಿದೇಶದವರನ್ನೂ ಸೆಳೆಯುತ್ತಿರುವ ವಿಸ್ಮಯ ವಿಜ್ಞಾನ. ಆಯು ಎಂದರೆ ಆಯುಷ್ಯ, ವೇದ ಎಂದರೆ ವಿಜ್ಞಾನ. ಒಬ್ಬ ಮನುಷ್ಯನು ತನ್ನ ಸಂಪೂರ್ಣ ಜೀವತಾವಧಿಯನ್ನು ಆರೋಗ್ಯಕರವಾಗಿ ಸಾಗಿಸಲು ಪಾಲಿಸಬೇಕಾದ ವಿಧಾನಗಳ ಬಗ್ಗೆ ಆರ್ಯುವೇದದಲ್ಲಿ ಪ್ರಾಶಸ್ತ್ಯ ನೀಡಲಾಗಿದೆ.

ಬ್ರಹ್ಮದೇವರು ಆರ್ಯುವೇದ ಶಾಸ್ತ್ರ ಬೋಧಿಸಿದರು ಎನ್ನಲಾಗಿದೆ. ಗುರುಶಿಷ್ಯ ಪರಂಪರೆಯಲ್ಲಿ ಅನೇಕ ಋಷಿಗಳು ಕಲಿತು ಅವರದ್ದೇ ಗ್ರಂಥಗಳನ್ನು ರಚಿಸುತ್ತಾರೆ. ಚರಕಸಂಹಿತೆ, ಸುಶ್ರತ ಸಂಹಿತೆ, ವಾಗ್ಭಟರ ಗ್ರಂಥಗಳು ಪ್ರಾಚೀನ ಹಾಗೂ ಪ್ರಮುಖ
ಆರ್ಯುವೇದ ವಿಜ್ಞಾನ ಗ್ರಂಥಗಳು. ಇವೆಲ್ಲವೂ ಸಂಸ್ಕೃತದಲ್ಲಿ ರಚಿತವಾಗಿವೆ. ಬೇರೆ ಬೇರೆ ಭಾಷೆಗಳಲ್ಲಿ ತರ್ಜುಮೆಯಾದ ಪುಸ್ತಕಗಳೂ ಅಧ್ಯಯನಕ್ಕೆ ಲಭ್ಯ. ಆದರೆ ಯಥಾವತ್ ವಿಷಯ ಗ್ರಹಣಕ್ಕೆ ಸಂಸ್ಕೃತ ಅತ್ಯಗತ್ಯ.

ಸಂಸ್ಕೃತ ಮತ್ತು ಪತ್ರಿಕೆ
‘ಸುಧರ್ಮಾ’ ಸಂಸ್ಕೃತದ ಏಕೈಕ ದಿನಪತ್ರಿಕೆ. ೧೯೭೦ರ ಜುಲೈ ೧೫ ರಂದು ಪಂಡಿತ ಕೆ.ಎನ್ ವರದರಾಜ ಅಯ್ಯಂಗಾರ್ ಆವರು ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಪಾಠ ಶಾಲೆಯ ಶ್ರೀಗಣಪತಿ ಸನ್ನಿಧಿಯಲ್ಲಿ ಪ್ರಾರಂಭಿಸಿದರು. ಸಂಪಾದಕರು ಹಾಗೂ ಮುದ್ರಕರಾಗಿ ಸುಮಾರು ೨೦ ವರ್ಷ ಸಂಸ್ಕೃತ ಪತ್ರಿಕೆ ಪ್ರಕಟಿಸಿ ಸಾಧನೆಗೈದಿದ್ದಾರೆ. ಅಂದು ಪತ್ರಿಕೆ ಬೆಲೆ ಕೇವಲ ಐದು ಪೈಸೆ. ಅಲ್ಲದೇ ೧೯೭೬ರಲ್ಲಿ ಕೇಂದ್ರ ಸರಕಾರವು ಆಕಾಶವಾಣಿಯಲ್ಲಿ ‘ಸಂಸ್ಕೃತ ವಾರ್ತೆ’ ಪ್ರಸಾರ ಮಾಡಲು ಶ್ರೀಯುತರೇ ಕಾರಣ ರಾದರು. ಅವರ ನಿಧಾನಾನಂತರ ಅವರ ಪುತ್ರ ವಿದ್ವಾನ್ ಕೆ. ವಿ ಸಂಪತ್ ಕುಮಾರ್ ಏಳು ಬೀಳುಗಳ ನಡುವೆ ಪತ್ರಿಕೆಯ ಪ್ರಕಟಣೆ ಮುಂದುವರಿಸಿದರು.

‘ಸುಧರ್ಮಾ’ ಜಗತ್ತಿಗೆ ಹಲವಾರು ಲೇಖಕರನ್ನು ಪರಿಚಯಿಸಿದೆ. ವಿದ್ವಾಂಸರುಗಳಿಂದ ರಚಿತವಾದ ಹಲವಾರು ಪುಸ್ತಕಗಳನ್ನು ಸುಧರ್ಮಾ ಪ್ರಕಾಶನ ಮಾಡಿದೆ. ಸಂಸ್ಕೃತಕ್ಕೆ ಸಂಬಂಧಿಸಿದ ಪುಸ್ತಕ ಮೇಳ ಆಯೋಜಿಸಿ ಸಂಸ್ಕೃತ ಭಾಷೆ ಹಾಗೂ ಹಲವಾರು ಪ್ರಕಾಶಕರಿಗೆ ಪ್ರೋತ್ಸಾಹ ನೀಡುತ್ತಿದೆ. ೨೦೧೯ ರಲ್ಲಿ ಪತ್ರಿಕೆಯು ಸುವರ್ಣ ವರ್ಷವನ್ನು ಆಚರಿಸಿದ್ದು ಸಂತಸದ ವಿಷಯ. ೨೦೨೦ರಲ್ಲಿ ಸುಧರ್ಮಾ ಪತ್ರಿಕೆಯ ಸಂಪಾದಕ ದಂಪತಿ ವರದರಾಜ ಅಯ್ಯಂಗಾರ್ ಮತ್ತು ಜಯಲಕ್ಷ್ಮಿಯವರಿಗೆ ಪದ್ಮಶ್ರೀ ಪ್ರಶಸ್ತಿ
ಸಂದಿದೆ. ೨೦೨೧ರಲ್ಲಿ ವರದರಾಜ ಅಯ್ಯಂಗಾರ್ ಅವರ ನಿಧನಾನಂತರ ಜಯಲಕ್ಷ್ಮಿಯವರು ಆರ್ಥಿಕ ಸಂಕಷ್ಟದ ನಡುವೆಯೂ ಪತ್ರಿಕೆಯ ಪ್ರಸಾರ ಮುಂದುವರಿಸಿದ್ದು, ಸಂಸ್ಕೃತ ಪ್ರೇಮಿಗಳ ಸಹಕಾರವೂ ಅಗತ್ಯ.

ಸಂಸ್ಕೃತ ಮತ್ತು ಸಂಸ್ಥಾನ
ಮೈಸೂರು ಸಂಸ್ಥಾನವು ಸಂಸ್ಕೃತ ಭಾಷೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿ ಪ್ರೋತ್ಸಾಹಿಸಿದೆ. ಸ್ವಯಂ ಸಂಸ್ಕೃತ ವಿದ್ವಾಂಸರಾದ ಮಹಾರಾಜ ಶ್ರೀ ಚಿಕ್ಕದೇವರಾಜ ಒಡೆಯರ್ ಅವರು ಗೀರ್ವಾಣಿ ಭಾಷೆಯಲ್ಲಿರುವ ಜಯದೇವ ಕವಿಯ ‘ಗೀತ ಗೋವಿಂದ’ ಎಂಬ ಪ್ರಬಂಧವನ್ನು ಮಾದರಿಯಾಗಿಟ್ಟುಕೊಂಡು ‘ಗೀತಗೋಪಾಲ’ ಎಂಬ ಗೇಯ ಪ್ರಬಂಧವನ್ನು ಕನ್ನಡದಲ್ಲಿ ರಚಿಸಿದ್ದಾರೆ. ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಸಂಸ್ಕೃತದ ಅಪಾರ ಜ್ಞಾನ ಹೊಂದಿದ್ದು ಶ್ರೀ ತತ್ವನಿಧಿ, ಗಣಿತ ಸಂಗ್ರಹ, ಸ್ವರಚೂಡಾಮಣಿ ಸೌಂಗಧಿಕ ಪರಿಣಯ, ಸಂಖ್ಯಾ ರತ್ನಕೋಶ, ಶ್ರೀಕೃಷ್ಣಕಥಾಸಾರ ಸಂಗ್ರಹ, ಶ್ರೀ ಚಾಮುಂಡಿಕ ಲಘು ನಿಘಂಟು, ಶ್ರೀಮದ್ಭಾಗವತ, ಮಹಾಭಾರತ, ರಾಮಾಯಣಗಳಿಗೂ ಭಾಷಾನುವಾದ ಮಾಡಿ ಭಗವದ್ಗೀತೆ ಮೊದಲಾದ ಅನೇಕ ಪ್ರಾಚೀನ ಗ್ರಂಥಗಳನ್ನು ಆಯಾ ದೇವತಾ ಚಿತ್ರಗಳಿಂದ ಒಳಗೊಂಡಿರುವಂತೆ ಅಂಬಾವಿಲಾಸ ಮುದ್ರಾಕ್ಷರ ಶಾಲಾ ಯಂತ್ರದಲ್ಲಿ ಅಚ್ಚು ಹಾಕಿಸಿ ವಿದ್ವಾಂಸರುಗಳಿಗೆ ಉಚಿತವಾಗಿ ಕೊಟ್ಟು ಪ್ರೋತ್ಸಾಹಿಸಿದ್ದರು.

ಸಂಸ್ಕೃತ ಶಾಸ್ತ್ರವನ್ನು ಪ್ರೋತ್ಸಾಹಿಸಲು ೧೮೬೮ ರಲ್ಲಿ ಅರಮನೆಯ ಸಮೀಪದಲ್ಲಿಯೇ‘ಸರಸ್ವತಿ ಪ್ರಸಾದ’ ಎಂಬ ಹೆಸರಿನಲ್ಲಿ ಸಂಸ್ಕೃತ ಪಾಠ ಶಾಲೆ ಆರಂಭಿಸಿದರು. ಇದೀಗ ಪಾಠಶಾಲೆಯಲ್ಲಿ ದೇವಾಲಯ ಪೂಜಾ ಪದ್ಧತಿಯ ಆಗಮ ಶಾಸವನ್ನು ಸಹ
ಬೋಽಸಲಾಗುತ್ತಿದೆ. ಅಲ್ಲದೇ ಮಹಾರಾಜ ಜಯಚಾಮರಾಜ ಒಡೆಯರ್ ಅವರು ಸಹ ಬ್ರಹ್ಮಸೂತ್ರ ಭಾಷ್ಯ, ಇತರೆ ವೇದಾಂತ ಗ್ರಂಥಗಳು, ತರ್ಕಶಾಸ್ತ್ರ ಇವುಗಳನ್ನೂ ಆಳವಾಗಿ ಅಧ್ಯಯನ ಮಾಡಿ ಗಿರ್ವಾಣ ಭಾಷೆಯಲ್ಲೂ ಪಾಂಡಿತ್ಯವನ್ನು ಪಡೆದಿದ್ದರು.

ಅಲ್ಲದೇ ಹಲವಾರು ಕೃತಿಗಳನ್ನು ಸಹ ಸಂಸ್ಕೃತದಲ್ಲಿ ರಚಿಸಿದ್ದರು. ಇತ್ತೀಚೆಗೆ ರಾಜಮಾತೆ ಡಾ. ಪ್ರಮೋದಾದೇವಿ ಒಡೆಯರ್ ಅವರು ಮಹಾರಾಜ ಜಯಚಾಮರಾಜ ಒಡೆಯರ್‌ರ ಅನೇಕ ಕೃತಿ ಗಳನ್ನು ಕನ್ನಡ ಮತ್ತು ಸಂಸ್ಕೃತ ಲಿಪಿಯಲ್ಲಿ ಮುದ್ರಿಸಿ
ಒದಗಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳು, ಇನ್ನಿತರ ಭಾಷಾ ಪ್ರೇಮಿಗಳು ಸಂಸ್ಕೃತ ಕಲಿಕೆಯ ಬಗ್ಗೆ ಬಹಳ
ಆಸಕ್ತಿ ಹೊಂದುತ್ತಿದ್ದು ವಿದೇಶಗಳಲ್ಲೂ ಸಂಸ್ಕೃತದ ಬಗ್ಗೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ದೇಶದ ಎಲ್ಲ ವಿದ್ಯಾಲಯ, ಸಂಶೋಧನಾ ಸಂಸ್ಥೆಗಳು ಹಾಗೂ ಖಾಸಗಿ ಸಂಘ ಸಂಸ್ಥೆಗಳಲ್ಲೂ ಶ್ರಾವಣ ಪೂರ್ಣಿಮ ದಿನದ ಹಿಂದೆಯ ಮೂರು ದಿನ ಹಾಗೂ ಮುಂದಿನ ಮೂರು ದಿನ ಒಟ್ಟು ಒಂದು ವಾರ ಕಾಲ ‘ಸಂಸ್ಕೃತ ಸಪ್ತಾಹ’ ಆಚರಿಸಲು ತೀರ್ಮಾನಿಸಿದ್ದು
ಸಂಸ್ಕೃತ ಪ್ರೇಮಿಗಳಿಗೆ ಸಂತಸ ತಂದಿದೆ.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸಂಸ್ಕೃತೋತ್ಸವವನ್ನು ಈ ವರ್ಷದ ಆಗಸ್ಟ್ ೯ ರಿಂದ ೧೫ರವರೆಗೆ ಆಚರಿಸಲಾಗುತ್ತಿದ್ದು ಈ ಸಪ್ತಾಹದಲ್ಲಿ ಸಂಸ್ಕೃತ ಭಾಷೆ ಕಲಿಕೆಗೆ ಪ್ರೋತ್ಸಾಹ, ಉಪನ್ಯಾಸ, ಸಂಭಾಷಣಾ ಶಿಬಿರ ಹಲವಾರು ಕಾರ್ಯಕ್ರಮಗಳನ್ನು ಸಂಸ್ಕೃತ ಭಾರತೀ ಸಂಸ್ಥೆಯು ರಾಜ್ಯಾದ್ಯಂತ ಆಯೋಜಿಸುತ್ತಿರುವುದು ಅಭಿನಂದನಾರ್ಹ.