Thursday, 12th December 2024

G M Inamdar Column: ಅನಂತಕುಮಾರ್‌ ಅವರ ನೆನಪಲ್ಲಿ…

ಅನಂತ ಸ್ಮರಣೆ

ಜಿ.ಎಂ.ಇನಾಂದಾರ್

2018ರ ನವೆಂಬರ್ 12, ಅನಂತಕುಮಾರ್ ಅವರು ಅನಂತದಲ್ಲಿ ಲೀನವಾದ ದಿನ. ಕರ್ನಾಟಕಕ್ಕೆ ಹಾಗೂ ದೇಶಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ ಅನಂತಕುಮಾರ್ ತುಂಬಾ ಕ್ರಿಯಾಶೀಲ ರಾಜಕಾರಣಿ. ಅವರನ್ನು ರಾಜಕಾರಣಿ ಎನ್ನುವುದಕ್ಕಿಂತ ‘ಮುತ್ಸದ್ದಿ’ ಎನ್ನುವುದು ಸೂಕ್ತ.

ಕರ್ನಾಟಕದ ಅವಶ್ಯಕತೆಗಳನ್ನು ದೂರದೃಷ್ಟಿಯಿಂದ ಗಮನಿಸಿ ಅದರ ನೆರವೇರಿಕೆಗಾಗಿ ಶ್ರಮಿಸುವುದು ಅವರಿಗೆ ರಕ್ತಗತವಾಗಿತ್ತು. ಅಂತೆಯೇ, ಬೆಂಗಳೂರು ಮೆಟ್ರೋ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೀಗೆ ಹಲವಾರು ಯೋಜನೆಗಳು ಅವರಿಂದಾಗಿ
ಸಾಕಾರ ಗೊಂಡು ಜನಸೇವೆಗೆ ಅರ್ಪಿತವಾಗಿವೆ. ಕರ್ನಾಟಕದ ನೆಲ, ಜಲ ಹಾಗೂ ಭಾಷೆಯ ಬಗ್ಗೆ ಸದಾ ಅಭಿಮಾನ ಪಡುತ್ತಿದ್ದ ಅನಂತ ಕುಮಾರ್, ಅವುಗಳ ರಕ್ಷಣೆಗೆ ಸದಾ ಮುಂದಾಗುತ್ತಿದ್ದರು.

ಘಟನೆ ೧: ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವುದಕ್ಕೆ ಆಂಧ್ರಪ್ರದೇಶ ಕ್ಯಾತೆ ತೆಗೆಯುತ್ತಿತ್ತು. ಈ ವಿವಾದ ನ್ಯಾಯಾಲಯದಲ್ಲಿತ್ತು. ಆಗ ಅಧಿಕಾರದಲ್ಲಿದ್ದ ವಾಜಪೇಯಿಯವರ ಸರಕಾರಕ್ಕೆ ತೆಲುಗುದೇಶಂ ಪಕ್ಷ ಬೆಂಬಲ ನೀಡಿತ್ತು. ಅಣೆಕಟ್ಟಿನ ಎತ್ತರ ಹೆಚ್ಚಿಸುವ ಬಗ್ಗೆ
ಸುಪ್ರೀಂ ಕೋರ್ಟ್ ಕೇಂದ್ರದ ಅಭಿಪ್ರಾಯ ಕೇಳಿತ್ತು.

ಅನಂತಕುಮಾರ್‌ರನ್ನು ಭೇಟಿಮಾಡಿದ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ನೀರಾವರಿ ಸಚಿವ ಎಚ್. ಕೆ.ಪಾಟೀಲ್ ಅವರು ಈ ವಿಷಯದ ಬಗ್ಗೆ ಚರ್ಚಿಸಿದರು. ನಂತರ ಅವರೊಂದಿಗೆ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ ಈ ನಿಯೋಗ, ವಸ್ತುಸ್ಥಿತಿಯನ್ನು ಪ್ರಧಾನಿ
ಯವರಿಗೆ ವಿವರಿಸಿ ಅವರ ಅನುಮತಿ ಪಡೆಯಿತು. ಸುಪ್ರೀಂಕೋರ್ಟ್ ಕಲಾಪಕ್ಕೆ ಮೊದಲು ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆಯವರನ್ನು ಅನಂತಕುಮಾರ್ ತಮ್ಮ ನಿವಾಸಕ್ಕೆ ಕರೆಸಿಕೊಂಡು, ಅಣೆಕಟ್ಟೆಯ ಎತ್ತರವನ್ನು ಹೆಚ್ಚಿಸಲು ಕೇಂದ್ರದ ಆಕ್ಷೇಪಣೆ ಇಲ್ಲ ಎಂಬುದನ್ನು
ಸುಪ್ರೀಂಕೋರ್ಟ್‌ಗೆ ತಿಳಿಸುವಂತೆ ಕೋರಿದರು.

ಅದರಂತೆ ಸಾಳ್ವೆಯವರು ಕೇಂದ್ರದ ನಿಲುವು ಪ್ರಕಟಿಸಿದಾಗ ಸ್ವತಃ ಚಂದ್ರಬಾಬು ನಾಯ್ಡು ಅವರಿಗೆ ಅಚ್ಚರಿಯಾಯಿತು. ಈ ವಿಷಯವು ಚಂದ್ರಬಾಬು ನಾಯ್ಡು ಅವರಿಗೆ ಮೊದಲೇ ಗೊತ್ತಾಗಿದ್ದರೆ ಕಥೆ ಏನಾಗುತ್ತಿತ್ತು ಎನ್ನುವುದನ್ನು ತಿಳಿದುಕೊಳ್ಳುವುದು ಕಷ್ಟವಲ್ಲ. ಅನಂತಕುಮಾರ್ ಅತ್ಯಂತ ಚಾಣಾಕ್ಷತೆಯಿಂದ ಈ ವಿಷಯವನ್ನು ನಿಭಾಯಿಸಿದರು. ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸಿದ್ದರಿಂದ ಬಾಗಲಕೋಟೆ,
ವಿಜಯಪುರದ ರೈತರ ನೀರಾವರಿ ಪ್ರದೇಶ ೬ ಲಕ್ಷ ಎಕರೆಯಿಂದ ೧೭ ಲಕ್ಷ ಎಕರೆಗೆ ಏರಿತು.

ಘಟನೆ ೨: ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಅನಂತಕುಮಾರ್ ಅವರ ಕನಸಾಗಿತ್ತು. ಅಂತೆಯೇ ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೆ ವಲಯ ಸ್ಥಾಪಿಸುವುದರಿಂದ ಆ ಭಾಗದ ಅಭಿವೃದ್ಧಿಗೆ ಅನುಕೂಲ ಎಂಬುದು ಅವರ ಭಾವನೆಯಾಗಿತ್ತು. ಬೆಂಗಳೂರಿನ ಸಂಸದರಾಗಿದ್ದರು ಕೂಡ ಅವರು ಈ ವಿಷಯದಲ್ಲಿ ಮುತುವರ್ಜಿ ವಹಿಸಿದರು. ಸಂಪುಟ ಸಭೆಯಲ್ಲಿ ಈ ವಿಷಯ ಬಂದಾಗ ಆಡ್ವಾಣಿಯವರು ಸಂಬಂಧಪಟ್ಟ ಕಡತವನ್ನು
ಕೈಗೆತ್ತಿಕೊಂಡು, “ಯೆ ಅನಂತ್‌ಕುಮಾರ್ ಕಾ ಸಪ್ನಾ ಹೈ, ಸಬ್ ಲೋಗ್ ಹಾಂ ಬತಾಯಿಯೆ” ಎಂದು ಅನುಮೋದನೆ ಕೊಡಿಸಿದರು. ಬೆಂಗಳೂರಿನ ಸಂಸದರಾಗಿದ್ದರೂ ಅನಂತಕುಮಾರ್ ಅವರ ದೃಷ್ಟಿ ಇಡೀ ಕರ್ನಾಟಕದ ಅಭಿವೃದ್ಧಿಯತ್ತಲೇ ಇರುತ್ತಿತ್ತು.

ಘಟನೆ ೩: ಕನ್ನಡ ಭಾಷೆಯ ಬಗ್ಗೆ ಅಪಾರ ಪ್ರೀತಿ ಮತ್ತು ಅಭಿಮಾನ ಹೊಂದಿದ್ದ ಅನಂತಕುಮಾರ್ ಅವರು ಪ್ರತಿಬಾರಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸುತ್ತಿದ್ದರು. ಎಲ್ಲ ಕಡತಗಳ ಮೇಲೆ ಕನ್ನಡದಲ್ಲಿಯೇ ಸಹಿ ಮಾಡುತ್ತಿದ್ದರು. ೨೦೧೨ರಲ್ಲಿ ನಡೆದ ವಿಶ್ವಸಂಸ್ಥೆಯ ಮಹಾ
ಅಽವೇಶನದಲ್ಲಿ, ಅನಂತಕುಮಾರ್ ಅವರು ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. ಅಲ್ಲಿಯ ಅಧ್ಯಕ್ಷರು ಹಾಗೂ ಪ್ರತಿನಿಧಿಗಳಿಗೆ ಕನ್ನಡದಲ್ಲೇ ಶುಭಾಶಯ ತಿಳಿಸಿ ಕನ್ನಡದ ಕಂಪನ್ನು ಬೀರಿದ್ದರು. ಕನ್ನಡ ಸಾಹಿತ್ಯದ ಬಗ್ಗೆ ಪ್ರೀತಿ ಹೊಂದಿದ್ದ ಅನಂತಕುಮಾರ್ ಪುಸ್ತಕಗಳನ್ನು
ಓದುವ ಬಗ್ಗೆ ವಿಶೇಷ ಒಲವು ಹೊಂದಿದ್ದರು. ಆಗಾಗ ಚುಟುಕುಗಳನ್ನು ಬರೆಯುವುದು, ನಗೆಚಟಾಕಿಗಳನ್ನು ಹಾರಿಸುವುದು ಅವರಿಗೆ ತುಂಬಾ ಪ್ರಿಯವಾದ ಅಭ್ಯಾಸ. ಜೀವನದ ಬಗೆಗಿನ ಅವರ ನಿಲುವನ್ನು ತೋರ್ಪಡಿಸುವ ಚುಟುಕವೊಂದು ಅವರದೇ ಕೈಬರಹದಲ್ಲಿ ಇಲ್ಲಿದೆ:

(ಲೇಖಕರು ಅನಂತಕುಮಾರ್ ಪ್ರತಿಷ್ಠಾನದ
ಕಾರ್ಯಕರ್ತರು)

ಇದನ್ನೂ ಓದಿ: Rangaswamy Mookanahally Column: ನಮಗೆ ಬೇಕಾದ್ದನ್ನು ಪಡೆವ ದಾರಿಯಿದು !