Saturday, 14th December 2024

ಗಾಂಧಿಗಳಿಂದ ಮಹಾತ್ಮನ ಆಶಯ ಅನುಷ್ಠಾನ !

ವಿಶ್ಲೇಷಣೆ

ವಿನಯ್‌ ಖಾನ್ 

vinaykhan078@gmail.com

ಇವತ್ತೇಕೋ ಬೀಚಿ ತುಂಬಾ ನೆನಪಾಗುತ್ತಾರೆ! ಅವರಿಗೆ ಯಾರೋ ಕೇಳಿದರಂತೆ-‘ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಕೊಟ್ಟರೆ ಏನು ಮಾಡುತ್ತೀರಿ?’ ಅಂತ. ಆಗ ಬೀಚಿ ಹೇಳಿದ್ದು- ‘ಗಾಂಧೀಜಿ ಪ್ರಕಾರ ಇಲ್ಲದ ಕಾಂಗ್ರೆಸ್ ಅನ್ನು ಇನ್ನಿಲ್ಲವೆಂದು ಘೋಷಿಸಿ, ಮನೆಗೆ ಬಂದು ಸ್ನಾನ ಮಾಡುತ್ತೇನೆ’.

ಬಹುಶಃ ಬೀಚಿ ಅಧ್ಯಕ್ಷರಾಗಿದ್ದರೇ ಒಳಿತಿತ್ತೇನೋ?! ಕೊನೆ ಪಕ್ಷ ಅದಕ್ಕಾದರೂ ಈಗ ಬೀಚಿ ಬದುಕಿರಬೇಕಿತ್ತು. ಅಲ್ಲದಿದ್ದರೆ ಮತ್ತೇನು? ೭೫ಕ್ಕೂ ಹೆಚ್ಚು ವಷರ್ಷಗಳ ಇತಿಹಾಸ ವಿರುವ ಪಕ್ಷ ಕ್ಕಿಂದು ಪರ್ಯಾಯ ಅಧ್ಯಕ್ಷರೇ ಇಲ್ಲ. ಈವರೆಗೆ ಗಾಂಧಿ ಕುಟುಂ ಬದಿಂದ ಹೊರತಾ ದವರ‍್ಯಾರೂ ಆ ಪಕ್ಷದಲ್ಲಿ ಅಧ್ಯಕ್ಷರಾಗಿ ಬಾಳಿಲ್ಲ.

‘ಅವತ್ತು ನಾನು ಸೋನಿಯಾ ಗಾಂಧಿ ಕಾಲು ಹಿಡಿದು ಬೆಗ್ ಮಾಡಿದೆ; ಪಕ್ಷವನ್ನು ಉಳಿಸಲು, ಪಕ್ಷದ ಜವಾಬ್ದಾರಿಯನ್ನು ತೆಗೆದು ಕೊಳ್ಳುವಂತೆ. ಆಗ ಸೋನಿಯಾ ಗಾಂಧಿ ಮುಂದೆಬಂದು ಪಕ್ಷದ ಅಧ್ಯಕ್ಷರಾದರು’ ಇದು ಕಾಂಗ್ರೆಸ್‌ನ ಕಾರ್ಯಕ್ರಮವೊಂದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ ಮಾತು. ಅದು ಯಾಕೆ ಕಾಂಗ್ರೆಸ್‌ಗೆ ಯಾವಾಗಲೂ ಗಾಂಧಿ-ನೆಹರು ಕುಟುಂಬದವರೇ ಹೈ ಕಮಾಂಡ್!. ಎ.ಒ.ಹ್ಯೂಮ್ ಸ್ಥಾಪಿಸಿದ ಕಾಂಗ್ರೆಸ್, ವಿಲಿಯಮ್ ವೆಡ್ಡರ್‌ಬರ್ನ್, ದಾದಾಬಾಯಿ ನವರೋಜಿ ಅವರೆಲ್ಲರೂ ಇದ್ದು ತಳಪಾಯ ಹಾಕಿದ ಕಾಂಗ್ರೆಸ್ ಇಂದು ಏನಾಗಿದೆ.

ಅಸಲಿಗೆ ಈ ಪಕ್ಷ ಸ್ಥಾಪಿಸಿದ್ದು ಕೂಡ ಬ್ರಿಟಿಷ್ ಸರಕಾರ ಮತ್ತು ಭಾರತೀಯರ ನಡುವೆ ಒಳ್ಳೆಯ ಸಂಬಂಧ ಏರ್ಪಡಲಿ(?!) ಎಂಬುದಕ್ಕೆ; ವಿದ್ಯಾವಂತ ಭಾರತಿಯರನ್ನು ಕಾಂಗ್ರೆಸ್‌ನ ಮೂಲಕ ಬ್ರಿಟಿಷ್‌ರಾಜ್‌ನ ಆಳುಗಳನ್ನಾಗಿ ಸಲಿಕ್ಕೆ. ಇದು ಕಾಂಗ್ರೆಸ್‌ನ ಹುಟ್ಟಿನ ಪರಿ. ಸ್ವಲ್ಪ ವರ್ಷ ಬ್ರಿಟಿಷ್ ಮಾರ್ಗದಲ್ಲೇ ಇದ್ದ ಮೂಲ ಕಾಂಗ್ರೆಸ್ ಹೇಳಿದ ಹಾಗೆ ಕಾಂಗ್ರೆಸಿಗರು ಕೇಳಿದರು. ನಂತರ ಗೋಪಾಲ ಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕರಂಥ ಕಾಂಗ್ರೆಸಿಗರೆಲ್ಲ ಬ್ರಿಟಿಷರನ್ನೇ ವಿರೋಧಿಸಿ ಸ್ವಾತಂತ್ರ ಚಳವಳಿಗೆ ಲಗ್ಗೆ ಇಟ್ಟಿದ್ದು ಗೊತ್ತೇ ಇದೆ.

ಈಗಿನ ಕಾಂಗ್ರೆಸಿಗರು ಹೇಳುವ ಹಾಗೆ ಸ್ವತಂತ್ರ ಚಳವಳಿಯಲ್ಲಿ ದೊಡ್ಡ ಮಟ್ಟದಲ್ಲಿ ಭಾಗಿಯಾದವರು ಕೆಲವೇ ಮಂದಿ ಮಾತ್ರ. ಉಳಿದಂತೆ ‘ಕಾಂಗ್ರೆಸ್ ಪಾರ್ಟಿ’ ಹೆಸರಲ್ಲಿ, ಛತ್ರದಡಿ ದೊಡ್ಡ ದೊಡ್ಡ ನಾಯಕರೆನಿಸಿಕೊಂಡು ಹೊರಹೊಮ್ಮಿದವರೆಲ್ಲ ಬ್ರಿಟಿಷರನ್ನು ಎದರು ಹಾಕಿ ಕೊಂಡಿಲ್ಲ; ಬದಲಿಗೆ ಅವರ ಸ್ನೇಹ ಸಂಪಾದಿಸಿದವರೇ ಹೆಚ್ಚು. ಹಾಗೆ ಸ್ನೇಹಿಗಳಾದವರೇ ಮುಂದೆ ಸ್ವತಂತ್ರ ಭಾರತದ ಅಧಿಕಾರದ ಚುಕ್ಕಾಣಿ ಹಿಡಿದರು. ಹೋರಾಡಿದ ಕಾಂಗ್ರೆಸಿಗರು ಮಡಿದರು! ಅಲ್ಲಿಂದ ಮುಂದೆ ಕಾಂಗ್ರೆಸ್ ನೆಹರು-ಗಾಂಧಿ ಪರಿವಾರ (ಅದೂ ಮಹಾತ್ಮ ಗಾಂಧಿ ಪರಿವಾರವಲ್ಲ!) ಬಿಟ್ಟು ಹೋಗಿಲ್ಲ. ಆಗಾಗ ಅಲ್ಪಾವಧಿ ಬೇರೆ ನಾಯಕರ ಕೈಗೆ ಹೋದಾಗ್ಯೂ ಅವರುಗಳೆಲ್ಲ ಗಾಂಧಿ ಕುಟುಂಬಕ್ಕೆ ವಿಧೇಯರಾಗಿದ್ದು ಗೊತ್ತೇ ಇದೆ!

ಇನ್ನು ಕಾಂಗ್ರೆಸ್‌ನಲ್ಲಿ ಇಂಥ ಮೊನೊಪಲಿ ಬಂದದ್ದಾದರೂ ಹೇಗೆ? ಮೊನ್ನೆ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಮೇಲೂ, ಹಿಂದೆ ಬಹಳಷ್ಟು ಬಾರಿ ಪಕ್ಷದ ನಾಯಕತ್ವ ತ್ಯಜಿಸಲು ಮುಂದಾದ ಸೋನಿಯಾಗಾಂಧಿ ರಾಜೀನಾಮೆ ಕೊಡಲು ಯತ್ನಿಸಿದರೂ, ಕಾಂಗ್ರೆಸ್‌ನ ನಾಯಕರು(?) ಅದನ್ನು ಒಪ್ಪುವುದಿಲ್ಲ; ಈಗ ಒಪ್ಪಿಯೂ ಇಲ್ಲ. ಸೋನಿಯಾ-ರಾಹುಲ್ ಇಂಥ ರಾಜೀನಾಮೆ ಪ್ರಹಸನ ಎಲ್ಲರಿಗೂ ಗೊತ್ತು. ಕೆಲವರ ಪ್ರಕಾರ ಗಾಂಧಿ ಕುಟುಂಬಕ್ಕೆ ತನ್ನನ್ನು ತಾನು ಒಪ್ಪಿಸಿಕೊಳ್ಳುವುದಕ್ಕೇ ಕಾಂಗ್ರೆಸ್ ಇನ್ನು ಬದುಕು
ತ್ತಿದೆ!?. ಅದನ್ನು ಸಮರ್ಥಿಸಿಕೊಳ್ಳುವ ಹಲವು ನಿದರ್ಶನ ಇತಿಹಾಸದಲ್ಲಿ ದಾಖಲಾಗಿದೆ.

೧೯೬೯ರಲ್ಲೊಮ್ಮೆ ಕಾಂಗ್ರೆಸ್ ಛಿದ್ರವಾಗಿತ್ತು. ಅದಕ್ಕಿಂತ ಮುಂಚೆ ಹಲವಾರು ರಾಜ್ಯಗಳಲ್ಲಿ ಹೀನಾಯ ಸೋಲುಂಡಿತ್ತು. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೂ ಹಲವು ರಾಜ್ಯಗಳಲ್ಲಿ ತನ್ನ ನೆಲೆ ಯನ್ನು ಕಾಂಗ್ರೆಸ್ ಕಳೆದುಕೊಂಡಿತ್ತು. ಹಲವಾರು ರಾಜಕೀಯ ನಾಟಕಗಳ ನಂತರ ಎಸ್.ನಿಜಲಿಂಗಪ್ಪ, ಇಂದಿರಾರನ್ನು ಪಕ್ಷ ದಿಂದ ಉಚ್ಛಾಟನೆಯನ್ನೂ ಮಾಡಿದರು. ಆದರೇನಾಯಿತು?
ನಿಜಲಿಂಗಪ್ಪ ಮೂಲೆಗುಂಪಾದರು. ಸ್ವಲ್ಪ ವರ್ಷಗಳ ನಂತರ ಮತ್ತೆ ಇಂದಿರಾ ಗಾಂಧಿಯಿಂದ ದೇಶದಲ್ಲಿ ಕಾಂಗ್ರೆಸ್ ಪುನರ್ ಸ್ಥಾಪನೆ ಯಾದದ್ದು ಕಥೆ. ಇದನ್ನು ಒಪ್ಪಬಹುದು.

ಆದರೆ, ಈಗಿನ ಕಾಲಘಟ್ಟ ಬದಲಾಗಿದೆ. ೧೯೬೯ರಿಂದ ಇಂದು ನಾವು ೨೦೨೨ರ ಹೊತ್ತಿನಲ್ಲಿದ್ದರೂ ಕಾಂಗ್ರೆಸ್ ಇನ್ನೂ ಇಂದಿರಾ, ನೆಹರು ಮೂಡ್‌ನಲ್ಲಿಯೇ ಇದೆ. ಅದಕ್ಕೆ ಸಾಕ್ಷಿಯೇ ಮೊನ್ನೆ ನಡೆದ ಪಂಚರಾಜ್ಯ ಚುನಾವಣೆ. ೫ ರಾಜ್ಯಗಳ ೬೯೦ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ ೫೫!. ಇದು ಕಾಂಗ್ರೆಸ್‌ನ ಕತೆ!. ಅಲ್ಲಿಯೂ ಈವಿಎಂ ಹ್ಯಾಕ್ ಆಗಿದೆ ಅಂತನೋ, ಸೋನಿಯಾ ಹೇಳುವ ರೀತಿ ಸೋಷಿಯಲ್ ಮೀಡಿಯಾಗಳಿಂದ ಜನರು ದಿಕ್ಕು ತಪ್ಪುತ್ತಿದ್ದಾರೆ ಅಂತಲೋ ಇನ್ನು ಕೆಲವು ಅಸಂಬದ್ಧ ಪ್ರಲಾಪ ನಡೆದೇ ಇದೆ. ಕೊನೆಗೆ ಸುರ್ಜೀವಾಲನ
ಆತ್ಮವಲೋಕನದ ಭಾಷಣವೇ..

ಎಲ್ಲಕ್ಕಿಂತ ದೊಡ್ಡ ಮೂರ್ಖತನವೆಂದರೆ, ಎರಡು ಭಾರಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಯೂ ಸೋನಿಯಾಗಾಂಧಿಯವರು ಹಕ್ಕಿನಿಂದ ಪಡೆಯಬಹುದಾದ ಪ್ರಧಾನಿ ಪಟ್ಟವನ್ನು ತ್ಯಾಗ ಮಾಡಿ ವಿಶ್ವಕ್ಕೆ ಮಾದರಿಯಾಗಿದ್ದಾರೆಂಬುದು. ನಮ್ಮ ಸಿದ್ದರಾಮಯ್ಯನವರೂ ಇದನ್ನು ಪ್ರತಿಪಾದಿಸಿದ್ದಾರೆ. ಒಂದೊಮ್ಮೆ ಹಾಗೆ ೨೦೦೪ರಲ್ಲಿ ಸೋನಿಯಾ ನಾಯಕತ್ವ ತ್ಯಜಿಸಿದಿದ್ದರೆ ಅಂದೇ ಕಾಂಗ್ರೆಸ್ ತಳ ಕಚ್ಚುತ್ತಿತ್ತು. ಮಾತ್ರವಲ್ಲ ದೇಶ ಇಂದಿನ ಕಾಂಗ್ರೆಸ್‌ನಂತೆ ಅಧೋಗತಿಗಿಳಿದಿರುತ್ತಿತ್ತು.

ನೆನಪಿಡಿ, ಆಗ ದೇಶಕ್ಕೆ ಪರ್ಯಾಯ ನಾಯಕತ್ವ ಇರಲಿಲ್ಲ. ಸೋನಿಯಾ ಗಾಂಽ ಪಟ್ಟವನ್ನು ತ್ಯಾಗ ಮಾಡಿರಲೂ ಇಲ್ಲ. ಬದಲಿಗೆ ಅದನ್ನು ಮನಮೋಹನ ಸಿಂಗ್‌ರ ಕೈಗೆ ಕೊಟ್ಟು ‘ರಿಮೋಟ್ ಪಿಎಂ’ ಮಾಡಿದ್ದನ್ನು ಇಡೀ ವಿಶ್ವವೇ ನೋಡಿದೆ. ಇದೆಲ್ಲ ಇರಲಿ ನಾಯಕನೇ ಸಿಗದ, ಅಡ್ರೆಸ್‌ಗೆ ಇಲ್ಲದಿರುವ ಕಾಂಗ್ರೆಸ್‌ನಿಂದ ಇನ್ನೇನನ್ನು ಈ ದೇಶ ನಿರೀಕ್ಷಿಸಬಹುದು? ಯಾವ ರಾಜಕೀಯ ಪಕ್ಷವಾಗಿರಲಿ ಅದರ ಅಳಿವು ಉಳಿವುಗಳು ನಿರ್ಧಾರವಾಗುವುದೇ ನಾಯಕತ್ವದಿಂದ. ಕೇವಲ ಕಾರ್ಯಕರ್ತರ ಸಂಖ್ಯೆ ನೋಡಿ ಜನ ಮತ ಹಾಕುವುದಿಲ್ಲ.

ಪಕ್ಷದ ಸದಸ್ಯರೆಲ್ಲರೂ ಮತದಾರೂ ಆಗುವುದಿಲ್ಲ. ಅದು ಬಹಳಷ್ಟು ಭಾರಿ ಈ ದೇಶದಲ್ಲಿ ಸಾಬೀತಾಗಿದೆ. ಅನೇಕ ನಿದರ್ಶ ನಗಳು ಈ ಮಾತಿಗಿದೆ. ೨೦೧೩ರ ಚುನಾವಣೆಯಲ್ಲಿ ಯಡಿಯೂರಪ್ಪ ಕೆಜೆಪಿ ಮಾಡಿದಾಗ ಕರ್ನಾಟಕದಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ೨೦೧೪ರಲ್ಲಿ ನರೇಂದ್ರ ಮೋದಿ ಎನ್ನುವ ಬರೀ ಒಂದು ಹೆಸರಿನಿಂದ ಚುನಾವಣೆಗಳಾಗಿ ಅದರಲ್ಲಿ ಬಿಜೆಪಿ ಗೆದ್ದಿದೆ. ಮೊನ್ನೆ ನಡೆದ ಪಂಚರಾಜ್ಯ ಚುನಾವಣೆಯಲ್ಲೂ ಸಹ ಆದದ್ದು ಅದೇ! ಅಭಿವೃದ್ಧಿಯ ಭರವಸೆ ಹುಟ್ಟುವುದು ನಾಯಕತ್ವದಿಂದಲೇ ಎಂಬುದನ್ನು ಕಾಂಗ್ರೆಸಿ ಗರು ಮರೆತಿದ್ದರು.

ಆದರೆ, ಕಾಂಗ್ರೆಸ್‌ಗೆ ಇರುವುದೇ ಮೂರು ಮುಖಗಳು- ಅದೇ ಸೋನಿಯಾ, ರಾಹುಲ್, ಪ್ರಿಯಾಂಕಾ ವಾದ್ರಾ. ಇವರನ್ನು ತೋರಿಸಿ ಜನರಿಂದ ಇನ್ನೂ ಎಷ್ಟು ವರ್ಷ ವೋಟು ಗಿಟ್ಟಿಸಿಕೊಳ್ಳುವುದು!. ಇವರ ಹೆಸರಿನಲ್ಲೇ ಅಧಿಕಾರಕ್ಕೆ ಬರುವುದು ಸುಂದರ ಸ್ವಪ್ನವಷ್ಟೆ. ಹಾಗೆಯೇ ಭಾರತೀಯರಿಗೆ ಕಾಂಗ್ರೆಸ್‌ನ ಘೋಷಣೆಗಳೂ ಬೇಸರ ಮೂಡಿಸಿವೇ!, ೭೦ ವರ್ಷದಿಂದ ‘ಗರೀಬಿ ಹಠಾವೋ’ ಕೇಳಿಕೇಳಿ ಜನರ ಕಿವಿ ಕೆಪ್ಪಗಾ ಗಿವೆ. ಬಿಜೆಪಿಯವರೇ ಹೇಳುವ ಹಾಗೆ ರಾಹುಲ್ ಗಾಂಽಯೇ ಬಿಜೆಪಿಯ ‘ಸ್ಟಾರ್ ಪ್ರಚಾರಕ!’.

ಆತ ಹಾಗೆ ಅಪ್ರಬುದ್ಧವಾಗಿ ಆಡುವುದರಿಂದಲೇ ಎಷ್ಟೋ ಕಡೆಗಳಲ್ಲಿ ಕಾಂಗ್ರೆಸೇತರರು ಗೆದ್ದಿದ್ದಾರೆ. ಇನ್ನು ಪ್ರಿಯಾಂಕಾ ವಾದ್ರಾ, ಮೊದಲೆಲ್ಲ ಇಂದಿರಾಗಾಂಧಿಯ ಅಪರಾವತರವೆಂದು ಗುರುತಿಸಿಕೊಂಡರೂ ಅದು ಫಲಪ್ರದವಾಗಿಲ್ಲ. ಜನ ಇಂದಿರಾರ ನಾಯಕತ್ವ, ರಾಜಕೀಯ ಮುತ್ಸದ್ಧಿತನವನ್ನೂ ನಿರೀಕ್ಷಿಸುತ್ತಾರೆ. ಕೇವಲ ಸ್ವರೂಪವನ್ನಲ್ಲ. ಇನ್ನು ಸೋನಿಯಾ ಅಂತೂ ರಾಜೀವ್ ಮರಣದ ಸಿಂಪಥಿ ಯಲ್ಲಿ ೧೯೯೮ರ ನಂತರ ಪಾರ್ಟಿಗೆ ಬಂದು, ೨೦೦೪, ೨೦೦೯ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರೆಂಬುದನ್ನು ಒಪ್ಪಿದರೂ ಆ ಅವಽಯ ಅಖಂಡ ಭ್ರಷ್ಟಾಚಾರ ಸುಲಭದಲ್ಲಿ ಮೋದಿಯನ್ನು ಈ ದೇಶ ಒಪ್ಪಿಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ. ಗುಜಾರಾತ್‌ನಲ್ಲಿ ಮೋದಿ
ಅಭಿವೃದ್ಧಿ, ಜನರ ಮನ ಕದಿಯಲು ಅವರು ಹರಸಾಹಸ ಪಡುವಂತೆ ಮಾಡಲಿಲ್ಲ.

೨೦೧೪ರಿಂದ ಕಾಂಗ್ರೆಸ್ ದೇಶದೆಲ್ಲೆಡೆ ಬಿಟ್ಟೂ ಬಿಡದೆ ಸೋಲನ್ನೇ ಕಾಣುತ್ತಿದೆ. ಪಾರ್ಟಿಯನ್ನು ಕಟ್ಟುವುದಿರಲಿ, ಇರುವುದನ್ನು ಉಳಿಸಿ ಕೊಳ್ಳಲೂ ಆಗುತ್ತಿಲ್ಲ ಇವರಿಗೆ. ಅದರಲ್ಲೂ ನಾಯಕರ ಪಲಾಯನ!. ರಾಹುಲ್ ಗಾಂಽಯ ಅತ್ಯಾಪ್ತ ಸ್ನೇಹಿತರಾಗಿದ್ದ ಜ್ಯೋತಿರಾಽತ್ಯ ಸಿಂಧ್ಯಾಗೆ ಕೇವಲ ರಾಹುಲ್ ಗಾಂಧಿ ಹಿಂದೆ ನಿಂತು ಅವರ ಮಾತುಗಳನ್ನು ಸರಿಪಡಿಸುವುದೇ ಆಗಿತ್ತು. ಆತನೇ ಈಗ ಬಿಜೆಪಿ ಸೇರಿ ಕಾಂಗ್ರೆಸ್‌ನ ಅತಿ ದೊಡ್ಡ ವಿರೋಧಿಯಾಗಿದ್ದಾರೆ.

ಹಾಗೆ ಹಿಮಂತ್ ಬಿಸ್ವಾ ಶರ್ಮಾ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ, ಸಿಎಂ ಆಗಿ ಇತ್ತೀಚೆಗೆ ಬಿಜೆಪಿ ಕಾರ್ಯಕರ್ತರು ತುಂಬಾ ಇಷ್ಟಪಡುವ ನಾಯಕನಾಗಿ ಹೊರಹೊಮ್ಮಿದ್ದಾರೆ. ಮಣಿಪುರದ ಬಿರೇನ್ ಸಿಂಗ್ ಬಿಜೆಪಿ ಸೇರಿ ಮುಖ್ಯಮಂತ್ರಿಯೂ ಆದರು. ಕ್ಯಾ. ಅಮರೀಂದರ್
ಸಿಂಗ್, ಖುಷ್ಬು ಸುಂದರ್, ಪ್ರೇಮಾ ಖುಂಡು, ಗೋವಿಂದಾಸ್ ಕೌಂತುಜಂ, ವಿಜಯನ್ ಥಾಮಸ್, ಅಷ್ಟೇ ಏಕೆ ಪ್ರಣಬ್ ಮುಖರ್ಜಿ ಅವರ ಮಗ ಅಭಿಜಿತ್ ಮುಖರ್ಜಿ…. ಹೇಳುತ್ತ ಹೋದರೆ ಪುಟವನ್ನೇ ತುಂಬಿಸಬಹುದೇನೋ. ಹೊಸ ತಲೆಮಾರು ಕಾಂಗ್ರೆಸ್‌ನಿಂದ ಕಾಲುಕಿತ್ತು ಹೊರಟಿದೆ. ಕಪಿಲ್ ಸಿಬಲ್, ಗುಲಾಂ ನಭಿಯಂಥ ಅನುಭವಿಗಳಿಗೂ ಕಾಂಗ್ರೆಸ್ ನಲ್ಲಿ ಇನ್ನು ಉಳಿಯುವುದರಲ್ಲಿ ಅರ್ಥವಿಲ್ಲ ಎನಿಸಿದೆ.
ಮೊನ್ನೆ ನಡೆದ ಜಿ-೨೩ ನಾಯಕರ ಸಭೆಯ ಅಭಿಮತವೂ ಇದೇ ಆಗಿರುತ್ತದೆ. ಉಳಿಯುವರ, ಅಳಿಯುವವರ ಚಿಂತನ ಮಂಥನವೂ ಏರ್ಪಟ್ಟಿರುತ್ತದೆ. ಅಲ್ಲಿ ಉಳಿದರೆ ಅಳಿಯುವವರ ಹೆಚ್ಚಿದೆ ಎಂಬುದು ಹಿರಿಯರೆಲ್ಲರಿಗೂ ಅರ್ಥವಾಗಿದೆ.

ಹೀಗಾಗಿಯೇ ೨೪ ಗಂಟೆಗಳಲ್ಲಿ ೩ ಪ್ರಮುಖ ಸಭೆಗಳು ನಡೆದಿದೆ. ಕಪಿಲ್ ಸಿಬಲ್ ಮಾತಿನಂತೆ ಗಾಂಧಿ ಕುಟುಂಬವನ್ನು ಹೊರಗಿಟ್ಟು ಕಾಂಗ್ರೆಸ್ ರಾಜಕೀಯ ಮಾಡುವುದು ತುಂಬಾ ಕಷ್ಟ. ಏಕೆಂದರೆ ಇಷ್ಟು ವರ್ಷ ಕಾಂಗ್ರೆಸ್ ಬೆಳೆದಿರುವುದೇ ಗಾಂಧಿ ಕುಟುಂಬದ ಹೆಸರಿನ ಅಡಿಯಲ್ಲಿ!. ಅದು ಬಿಟ್ಟು ಕಾಂಗ್ರೆಸ್ ಬೆಳೆಯಲು ಕುಟುಂಬಸ್ಥರು ಬಿಡುವುದೂ ಇಲ್ಲ. ನಿಜಲಿಂಗಪ್ಪ, ಸೀತಾರಾಮ್ ಕೇಸರಿ, ನರಸಿಂಹರಾವ್ ಅವರಿಗೆ ಕೊನೆಗೆ ಏನಾಯಿತೆಂಬುದು ಗೊತ್ತಿದೆ. ಅಂದ ಮೇಲೆ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಕಾಂಗ್ರೆಸಿಗರಿಗೆ ಗಾಂಧಿ ಕುಟುಂಬವನ್ನು ಬಿಟ್ಟು ರಾಜಕೀಯ ಮಾಡುವ ಸ್ವಾತಂತ್ರ್ಯವೂ ಇಲ್ಲವೇ? ಇನ್ನು ಎಷ್ಟು ದಿನ ಕಾಂಗ್ರೆಸಿನಲ್ಲಿ ಗಾಂಧಿಗಳು ಈ ರಾಜೀನಾಮೆ ನಾಟಕ ಮಾಡು ತ್ತಿರುತ್ತಾರೆ? ಇನ್ನೆಷ್ಟು ದಿನ ಈ ಗುಲಾಮಿತನವನ್ನು ಕಾಂಗ್ರೆಸಿಗರು ಅನುಭವಿಸಬೇಕು? ಮೊದಲೇ ಅವನತಿಯ ಹಾದಿ ಹಿಡಿದಿರುವ ಕಾಂಗ್ರೆಸ್ ಅನ್ನು ತಮ್ಮ ಬಿಟ್ಟು ಬೆಳೆಸುವ ಮಾನಸಿಕತೆ ಖಂಡಿತಾ ಗಾಂಧಿ ಕುಟುಂಬಕ್ಕಿಲ್ಲ. ತಮ್ಮ ಪಕ್ಷವನ್ನೇ ಸರಿಯಾಗಿ ಉಳಿಸಲಾಗ ದವರು ಇನ್ನು ಈ ದೇಶವನ್ನು ಅದು ಹೇಗೆ ಉಳಿಸಿಯಾರು? ಮಹಾತ್ಮ ಗಾಂಽಜಿಗೆ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಮುಂದುವರಿಯು ವುದು, ರಾಜಕಾರಣ ಮಾಡುವುದು ಬೇಕಿರಲಿಲ್ಲ. ಅದನ್ನು ಅವರು ವಿಸರ್ಜಿಸಬೇಕೆಂದಿದ್ದರು.

ಆದರೂ ಕೆಲವರ ಮೊಂಡುತನದಿಂದ ಕಾಂಗ್ರೆಸ್ ಇನ್ನೂ ದೇಶದಲ್ಲಿ ಉಳಿದಿದೆ. ಬಹುಶಃ ಈ ನಕಲಿ ಗಾಂಧಿಗಳು ಮಹಾತ್ಮರ ಆಶಯವನ್ನು
ಈಗ ಅನುಷ್ಠಾನಕ್ಕೆ ತರಲು ಹೊರಟಿರಬಹುದು. ಆದರೆ, ಒಂದು ಮಾತಂತೂ ನಿಜ ಪ್ರತಿಪಕ್ಷವೇ ಇಲ್ಲದ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ.