Friday, 13th December 2024

ಅತಿರೇಕದ ಓಲೈಕೆ, ಕರಾಳ ಹತ್ಯಾಕಾಂಡ

ವಿಶ್ಲೇಷಣೆ

ಮಂಜುನಾಥ ಅಜ್ಜಂಪುರ

anmanjunath@gmail.com

ಪ್ರತಿ ವರ್ಷ ಜನವರಿ ತಿಂಗಳು ಬಂತೆಂದರೆ ಗಾಂಧೀಜಿಯವರ ಉಪವಾಸ, ಪಾಕಿಸ್ತಾನಕ್ಕೆ ೫೫ ಕೋಟಿ ರು. ಕೊಡಲೇಬೇಕೆನ್ನುವ ಹಠಮಾರಿತನ, ಗೋಡ್ಸೆ
ಮಾಡಿದ ಹತ್ಯೆ ಸೇರಿದಂತೆ ಅನೇಕ ವಿಷಯಗಳು ನೆನಪಾಗುತ್ತವೆ. ಗಾಂಧೀಜಿ ವಿಚಾರವನ್ನು ಟೀಕಿಸಬಾರದು ಎನ್ನುವ ಕೆಲವರ ವಾದ ವಿಚಿತ್ರವಾಗಿದೆ.

ಮಹಾತ್ಮಾ ಗಾಂಧೀಜಿಯವರ ಆತ್ಮವೃತ್ತಾಂತ ಮೈ ಎಕ್ಸ್ ಪೆರಿಮೆಂಟ್ಸ್ ವಿತ್ ಟ್ರೂತ್ ಕೃತಿಯ ಕನ್ನಡ ಅವತರಣಿಕೆಯ ಹೆಸರೇ ನನ್ನ ಸತ್ಯಾನ್ವೇಷಣೆ. ನಮ್ಮ ಪರಂಪರೆಯಲ್ಲಿ ಸತ್ಯವೆಂಬುದು ಪರಮೋಚ್ಚ ಮೌಲ್ಯ. ಮೈ ಎಕ್ಸ್ ಪೆರಿಮೆಂಟ್ಸ್ ವಿತ್ ಟ್ರೂತ್ ಎಂದು ಸ್ವತಃ ಸಾರಿದ ಗಾಂಧೀಜಿಯವರ ಬಗೆಗಿನ ಸತ್ಯನಿಷ್ಠ ವಿಶ್ಲೇಷಣೆಗಳನ್ನು ಸಾರಾ ಸಗಟಾಗಿ ವಿರೋಧಿಸುವ ಹತ್ತಿಕ್ಕುವ ಇಂದಿನ ಸಾಮಾಜಿಕ ವಾತಾವರಣವು, ಸೈದ್ಧಾಂತಿಕ ಅಂತರ್‌ವಿರೋಧವೇ ಆಗುತ್ತದೆ. ಗಾಂಧೀಜಿ
ಯನ್ನು ಕೆಲವರು ಇನ್ನೊಬ್ಬ ಪ್ರವಾದಿಯನ್ನಾಗಿಸುತ್ತಿದ್ದಾರೆಯೇ? ಗಾಂಧೀಜಿಯವರು ಟೀಕಾ ತೀತರೇ? ವಿಮರ್ಶಾತೀತರೇ? ಎನ್ನುವ ಪ್ರಶ್ನೆಗಳು ಪ್ರಸ್ತುತ ಜನಮಾನಸದಲ್ಲಿ ಉದ್ಭವವಾಗಿವೆ.

ಇದೀಗ ಕಾಳೀಚರಣ್ ಮಹಾರಾಜ್ ಅವರು ಗಾಂಧೀಜಿಯವರ ಕುರಿತಾಗಿ ಅವಾಚ್ಯ ಶಬ್ದಗಳನ್ನು ಉಪಯೋಗಿಸಿ ಸೆರೆಮನೆಯಲ್ಲಿದ್ದಾರೆ. ಅವರು ಆಡಿದ ಮಾತುಗಳು ಖಂಡಿಸುವಂತಹವೇ. ಆದರೆ ಅವರನ್ನು ಬಂಧಿಸುವುದರಲ್ಲಿ ಕಾಂಗ್ರೆಸ್ ಸರಕಾರವು ವಹಿಸಿದ ಪಾತ್ರ ಆ ಕುರಿತಾಗಿ ಬೇರೆ ರಾಜ್ಯಕ್ಕೂ ಹೋಗಿ ಬಂಽಸುವುದರಲ್ಲಿ ತೋರಿದ ಕಾರ್ಯಾಚರಣೆಯ ವೇಗ ಎಲ್ಲವೂ ಅಸಹಜವೇ ಆಗಿ ತೋರುತ್ತವೆ. ಶತಮಾನದ ಹಿಂದಿನ ಆ ಕಾಲದಲ್ಲಿ ಛಾಯಾಗ್ರಹಣ ಬಲು ಕ್ಲಿಷ್ಟ. ತುಂಬಾ ವೆಚ್ಚದ ಸಂಗತಿ ಸಹ. ಅಂದಿನ ಬಡ-ಭಾರತದಲ್ಲಿ ಬ್ರಿಟಿಷ್ ಕೃಪಾ ಪೋಷಿತ ಪತ್ರಿಕಾ ಕಚೇರಿಗಳವರಿಗೆ ಮಾತ್ರ ಕ್ಯಾಮರಾಗಳನ್ನು ಕೊಳ್ಳಲು ಸಾಧ್ಯವಿತ್ತು.

ಮುಂಬಯಿಯ ದ ಬಾಂಬೆ ಕ್ರಾನಿಕಲ್ (1910-1959) ಪತ್ರಿಕೆಯ ಅನೇಕ ಸಂಚಿಕೆಗಳನ್ನು ನೋಡಿದ್ದೇನೆ. ಸ್ವಾತಂತ್ರ್ಯಪೂರ್ವದ ಅನೇಕ ಮಹತ್ವದ ಛಾಯಾಚಿತ್ರಗಳನ್ನು ಮತ್ತು ಸುದ್ದಿಗಳನ್ನು ಈ ಪತ್ರಿಕೆಯಲ್ಲಿ ಕಾಣಬಹುದು. ಸಾಬರಮತಿ, ದೆಹಲಿಯ ಗಾಂಧೀ ವಸ್ತು ಸಂಗ್ರಹಾಲಯ, ಮುಂತಾದೆಡೆ ದ ಬಾಂಬೆ
ಕ್ರಾನಿಕಲ್ ಪತ್ರಿಕೆಯ ಸಂಚಿಕೆಗಳನ್ನು-ಛಾಯಾಚಿತ್ರಗಳನ್ನು ನೋಡಿದ್ದೇನೆ. ಗಾಂಧಿ, ನೆಹರೂ ಮತ್ತು ಕಾಂಗ್ರೆಸ್ಸಿನ ನಾಯಕರ ನೂರಾರು ಫೋಟೋಗಳನ್ನು ಇಲ್ಲಿ ನೋಡಬಹುದು ಮತ್ತು ಸಹಜವಾಗಿಯೇ ಸ್ವಾತಂತ್ರ್ಯ ಪ್ರಾಪ್ತಿಯಲ್ಲಿ ಇವರುಗಳ ಪಾತ್ರವೇ ಪ್ರಮುಖವಾದುದು ಎಂಬ ಭಾವ ಮೂಡುತ್ತದೆ. ಈ ಪತ್ರಿಕೆಯನ್ನು ಪ್ರಾರಂಭಿಸಿದವರು ಫಿರೋಜ್ ಶಾ ಮೆಹ್ತಾ. ಅವರು ೧೮೮೫ರಲ್ಲಿ ಪ್ರಖ್ಯಾತ ಎ.ಓ.ಹ್ಯೂಮ್ ಸ್ಥಾಪಿಸಿದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಸಂಸ್ಥಾಪಕ
ಸದಸ್ಯರೂ ಹೌದು.

ಮೆಹ್ತಾ ಅವರಿಗೆ ಬ್ರಿಟಿಷ್ ಸರಕಾರ ನೈಟ್ ಹುಡ್ ಪದವಿಯನ್ನೂ ದಯಪಾಲಿಸಿತ್ತು. ಅವರು ಅಂದಿನ ಬಾಂಬೆಯ ಕಮಿಷನರ್ ಆಗಿದ್ದರು, ಮುನಿಸಿಪಲ್ ಪ್ರೆಸಿಡೆಂಟ್
ಸಹ ಆಗಿದ್ದರು. ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿದಾಗ ಅವರ ಸ್ವಾಗತಕ್ಕೆ ಅಣಿ ಮಾಡಿದವರೇ ಈ ಮೆಹ್ತಾ. ಸಹಜವಾಗಿ ಈ ಸುದ್ದಿ ಅಂದಿನ ಬ್ರಿಟಿಷ್ ಭಾರತದ ಪ್ರಮುಖ ಸುದ್ದಿಯೂ ಆಯಿತು, ಇತಿಹಾಸದ ಪುಟಗಳಲ್ಲಿ ದಾಖಲೆಯೂ ಆಯಿತು. ೧೯೧೯ರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದಿಂದ ನೊಂದ ನೊಂದ ಕವಿ ರವೀಂದ್ರ ನಾಥ ಟ್ಯಾಗೋರರು ಬ್ರಿಟಿಷರು ನೀಡಿದ್ದ ನೈಟ್ ಹುಡ್ ಗೌರವವನ್ನು ಹಿಂತಿರುಗಿಸಿದರು. ಆದರೆ ರಾಜಕಾರಣಿಯಾದ ಗಾಂಽಜಿ ತಮ್ಮ ಕೈಸರ್ ಏ ಹಿಂದ್ ಗೌರವವನ್ನು ಹಿಂದಿರುಗಿಸಲಿಲ್ಲ.

ಆದರೆ, ೧೯೨೦ರ ಆಗಸ್ಟ್ ೧ರಂದು ಖಿಲಾಫತ್ ಸಮಿತಿ ಆಂದೋಲನ ಹಮ್ಮಿಕೊಂಡಾಗ ಕೈಸರ್ ಏ ಹಿಂದ್ ಸೇರಿದಂತೆ, ಬ್ರಿಟಿಷರು ನೀಡಿದ್ದ ಎಲ್ಲ ಪದಕಗಳನ್ನೂ ಗಾಂಧೀಜಿ ಹಿಂದಿರುಗಿಸಿದರು. ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ಅನಂತರದ ಅವಧಿ ಯಲ್ಲಿ, ಗಾಂಧೀಜಿಯವರು ಮುಸ್ಲಿಂ ಓಲೈಕೆಗೆ ತಮ್ಮ ಪೂರ್ಣಶಕ್ತಿ ವಿನಿ ಯೋಗಿಸಿದರು. ಖಿಲಾಫತ್ ಹೋರಾಟದಿಂದ ಕೇರಳದಲ್ಲಿ ಜಿಹಾದಿಗಳು ಮಾಡಿದ ಹಿಂದೂ ನರಹತ್ಯೆ, ಸೀಯರ ಮಾನ ಭಂಗ, ಲೂಟಿಗಳ ಕುರಿತು ಅನಿಬೆಸಂಟ್ ಅವರು ಲೇಖನ ಬರೆದು, ವಿವರಗಳನ್ನು ದಾಖಲಿಸಿ ಪ್ರತಿಭಟಿಸಿದರು.

ಕಾಂಗ್ರೆಸ್ ಪಕ್ಷದ ಇತಿಹಾಸ ಮಾನಸಿಕತೆಗಳೇ ವಿಚಿತ್ರವಾಗಿವೆ. ಹಿಂದೂ ನರಹತ್ಯೆಗೆ ಕಾರಣರಾದ ಮೋಪ್ಲಾಗಳನ್ನು ನಂತರದ ತಮ್ಮ ಅಧಿಕಾರಾವಧಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರೆಂದು ಪರಿಗಣಿಸಿ, ಅವರಿಗೆ ಪಿಂಚಣಿ ನೀಡಿದ್ದು ಈ ದೇಶದ ಕರಾಳ ಇತಿಹಾಸ! ೧೯೪೬-೧೯೪೮ರ ಅವಽಯ ನಮ್ಮ ಇತಿಹಾಸ ವನ್ನು ನಾವೆ ಈಗ ಮತ್ತೊಮ್ಮೆ ಎಚ್ಚರಿಕೆಯಿಂದ ವಿಮರ್ಶಿಸಬೇಕಾಗಿದೆ. ಹಿಂದೂ -ಮುಸ್ಲಿಮರ ಯೋಜನಾ ಬದ್ಧ ಪರಸ್ಪರ ಸ್ಥಳಾಂತರಕ್ಕಾಗಿ ಡಾ||ಅಂಬೇಡ್ಕರ್ ಅವರಂತಹ ತಜ್ಞರು ೧೯೪೦ರಿಂದ ಆಗ್ರಹಿಸಿದ್ದರೂ, ಅತ್ಯಂತ ಅವ್ಯವಸ್ಥಿತವಾಗಿ ಹಾನಿಕಾರಕವಾಗಿ ದೇಶ ವಿಭಜಿಸಲಾಯಿತು.

ಮೊದಲು ನನ್ನ  ದೇಹ ತುಂಡರಿಸಿ, ನಂತರ ದೇಶ ತುಂಡರಿಸಿ ಎಂದು ಹೇಳುತ್ತಿದ್ದ ಗಾಂಧೀಜಿಯವರು ಮತ್ತು ಅವರ ಕಾಂಗ್ರೆಸ್ ಪಕ್ಷದವರು ದೇಶ ವಿಭಜನೆಗೆ ಸಮ್ಮತಿಸಿದರು. ಮುಸ್ಲಿಮರ ಹಿತರಕ್ಷಣೆಗಾಗಿ ಮಾತ್ರ ತಮ್ಮ ಉಪವಾಸದ ಬ್ರಹ್ಮಾಸ ಉಪಯೋಗಿಸುತ್ತಿದ್ದ ಗಾಂಧೀಜಿ ದೇಶ ವಿಭಜನೆಯನ್ನು ತಪ್ಪಿಸಲು
ಉಪವಾಸವನ್ನೇನೂ ಹಮ್ಮಿಕೊಳ್ಳಲಿಲ್ಲ. ೧೯೪೭ರ ದೇಶ ವಿಭಜನೆಯಿಂದಾದ ಜೀವಹಾನಿ, ಮಾನಹಾನಿ, ಆಸ್ತಿನಾಶಗಳು ವಿಶ್ವದ ಇತಿಹಾಸದ ಅತ್ಯಂತ ಭಯಾನಕ ಎನ್ನಿಸಿವೆ. ಈಗ ಬಾಂಗ್ಲಾದೇಶಕ್ಕೆ ಸೇರಿ ಹೋಗಿರುವ ನೋವಾಖಾಲಿಯಲ್ಲಿ ಕನಿಷ್ಠ ಐದು ಸಾವಿರ ಹಿಂದೂಗಳ ಹತ್ಯೆಯಾಯಿತು. ಇನ್ನು ಆಸ್ತಿಪಾಸ್ತಿ ಗಳಿಗೆ ಬೆಂಕಿ, ಸೀಯರ ಮಾನಭಂಗ ಅತ್ಯಾಚಾರಗಳ ಜೊತೆ ಅವ್ಯಾಹತವಾದ ಬಲವಂತದ ಮತಾಂತರವೂ ಎಗ್ಗಿಲ್ಲದೆ ನಡೆಯಿತು. ಈ ಅವಧಿಯಲ್ಲಿ
ಶತಮಾನಗಳ ಕಾಲದ ಹಿಂದಿನ ಇಸ್ಲಾಮೀ ಆಳ್ವಿಕೆಯಂತೆ ಹಿಂದೂಗಳು ಅನಿವಾರ್ಯವಾಗಿ ಜಿಜಿಯಾ ತೆರಿಗೆಯನ್ನು ಸಲ್ಲಿಸಬೇಕಾಗಿತ್ತು.

ಅಽಕಾರಿಗಳು ಯಾರಾದರೂ ತಪಾಸಣೆಗಾಗಿ ಬಂದರೆ ಅವರಿಗೆ ಮೊದಲೇ ಬರಹರೂಪದಲ್ಲಿ ಸಿದ್ಧಪಡಿಸಿಟ್ಟುಕೊಂಡು ಹಿಂದೂಗಳು ತಾವು ಸ್ವ-ಇಚ್ಛೆಯಿಂದ ಮತಾಂತರವಾಗಿರುವುದಾಗಿ ಘೋಷಿಸಬೇಕಾಗಿತ್ತು. ಈ ಎಲ್ಲ ಅವಧಿಯಲ್ಲಿ ಗಾಂಧೀಜಿಯವರ ಜನಪ್ರಿಯತೆ ಕುಸಿದು ಉತ್ತರ ಭಾರತದಲ್ಲಿ ಗಾಂಧಿ ವಿರೋಧಿಸಿ ಪ್ರದರ್ಶನಗಳೂ ನಡೆಯು ತ್ತಿದ್ದವು. ಜನರು ದುರ್ಭಾಷೆ ಬಳಸಿ ಪತ್ರಗಳನ್ನೂ ಬರೆಯುತ್ತಿದ್ದರು. ಆದರೂ ಅವರು ತಮ್ಮ ಹಠಮಾರಿತ-ಮುಸ್ಲಿಂ ಓಲೈಕೆಯನ್ನು ನಿಲ್ಲಿಸಲಿಲ್ಲ. ನೋವಾಖಾಲಿ ಮತ್ತು ಬೇರೆ ಕೆಲವೆಡೆ ಹಿಂದೂಗಳು ಪ್ರತೀಕಾರ ಕ್ರಮ ಕೈಗೊಂಡಾಗ ಗಾಂಧೀಜಿಯವರು ಅಲ್ಲಿಗೆ ಹೋಗಿ ಮುಸ್ಲಿಮರನ್ನು ಸಂರಕ್ಷಿಸುತ್ತಿದ್ದರು. ಕೇರಳದ ಮಲಬಾರ್ ನಗಲೀ, ನೋವಾಖಾಲಿಯಗಲಿ ಹಿಂದೂ ನರಹತ್ಯಾಕಾಡ ವಿರೋಧಿಸಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿಲ್ಲ. ಒಂದು ಸಂದರ್ಭದಲ್ಲಂತೂ, ಕೊಲ್ಕತ್ತಾ ಹಿಂದೂ ನರಹತ್ಯಾಕಾಂಡದ ರೂವಾರಿ ಸುಹ್ರವರ್ದಿಯನ್ನು ಸಂರಕ್ಷಿಸಿದರು.

ನಮಗೆ ನಿರಾಶ್ರಿತರ ಆಕ್ರಂದನಗಳು, ದೇಶವಿಭಜನೆಯ ನರಹತ್ಯಾಕಾಂಡದ ಮತ್ತು ಗಾಂಧೀಜಿಯವರ ಮುಸ್ಲಿಂ ಓಲೈಕೆ ಅರ್ಥವಾಗಬೇಕಾದರೆ ಆ ಕಾಲಘಟ್ಟ ಅಧ್ಯಯನ ಮಾಡಬೇಕಾಗುತ್ತದೆ. ಗಾಂಧೀಜಿಯವರ ಕೊನೆಯ ದಿನಗಳಲ್ಲಿ ಅಂದರೆ ೧೯೪೮ರ ಜನವರಿ ತಿಂಗಳಲ್ಲಿ ಅವರ ಮೇಲೆ ಪ್ರತಿಭಟನೆಗಳೂ ಹಾಗೂ ಪ್ರಾಣಾಂತಿಕ ದಾಳಿಗಳೂ ಆಗಿದ್ದವು. ದೆಹಲಿಯಲ್ಲಿ ಆಗ ನಡೆಯುತ್ತಿದ್ದ ಸಂವಿಧಾನ ರಚನಾ ಸಭೆಯ ಕಟ್ಟಡಗಳ ಬಳಿಯೂ ಪಾಕಿಸ್ತಾನದಿಂದ ದಿಕ್ಕೆಟ್ಟು ಬಂದ ನಿರಾಶ್ರಿತರು ಗಾಂಧೀಜಿ ಧಿಕ್ಕರಿಸಿ, ಘೋಷಣೆಗಳನ್ನು ಕೂಗುತ್ತಿದ್ದರು. ಆ ಋತುಮಾನದಲ್ಲಿ ದೆಹಲಿಯಲ್ಲಿ ಭೀಕರವಾದ ಚಳಿ. ಮನೆ ಮಠ ಕಳೆದುಕೊಂಡು ಬಂದಿದ್ದ ಅನೇಕ ನಿರಾಶ್ರಿತರು, ಗತಿಯಿಲ್ಲದೆ ದೆಹಲಿಯ ಮಸೀದಿ ಗಳಲ್ಲಿ ಆಶ್ರಯ ಪಡೆದರು. ಆದರೆ ದಯಾಳುಗಳಾದ ಗಾಂಧಿ-ನೆಹರೂ ಜೋಡಿ ಎಲ್ಲರನ್ನೂ
ಬಲವಂತ ವಾಗಿ ಆಚೆಗೆ ಹಾಕಿಸಿ ಆ ಮಸೀದಿಗಳನ್ನು ಮುಸ್ಲಿಮರಿಗೆ ಮತ್ತೆ ಒಪ್ಪಿಸಿದರು.

ಈ ವಿವರಗಳನ್ನು ಗಾಂಧೀಜಿಯವರ ಕಾರ್ಯದರ್ಶಿ ಯಾಗಿದ್ದ ಪ್ಯಾರೇಲಾಲ್ ಅವರು ಬರೆದ ದ ಲಾಸ್ಟ್ -ಸ್ ಸಂಪುಟಗಳಲ್ಲಿ ಡೊಮಿನಿಕ್ -ಲೇಪಿಯರ್ ಬರೆದ ಫ್ರೀಡಂ ಅಟ್ ಮಿಡ್ ನೈಟ್ ಕೃತಿಯಲ್ಲಿ ನೋಡಬಹುದು. ೨೦೧೪ರ ಅನಂತರದ ಕಾಲಘಟ್ಟದಲ್ಲಿ ಮಾತ್ರ ಗಾಂಧೀಜಿಯವರನ್ನು ನಿಂದಿಸುವ ಪರಿಪಾಠ ಬೆಳೆಯಿತು, ಇದು ಅಸಹಿಷ್ಣುತೆ ಎಂದೆ ಕೆಲವರು ಹೇಳುವುದುಂಟು. ನಿಜ-ಇತಿಹಾಸದ ವಿವರಗಳು ಈ ಅಂಶವನ್ನು ಸಮರ್ಥಿಸುವುದಿಲ್ಲ. ಗಾಂಧೀಜಿ ಯವರ ಮತ್ತು ಅವರ ಮಾನಸಪುತ್ರ ನೆಹರೂ ಅವರ ಸಮ್ಮುಖದಲ್ಲಿಯೇ ಇಂದಿನ ಈ ನಿಂದನೆ ಮೀರಿಸುವ ಪ್ರತಿಭಟನೆ – ಘೋಷಣೆಗಳು ಆಗುತ್ತಿದ್ದವು.

ಆಗ ಪಾಕಿಸ್ತಾನಕ್ಕೆ ಭಾರತ ಸರಕಾರ ಕೊಡ ಬೇಕಾದ ೫೫ ಕೋಟಿ ರು.ಗಳನ್ನು ನೆಹರು ಸರಕಾರ ತಡೆಹಿಡಿದಿತ್ತು. ಆ ಹಣದಲ್ಲಿ ಪಾಕಿಸ್ತಾನ ಶಸಾಸ
ಕೊಂಡು ಕಾಶ್ಮೀರದ ಮೇಲೆ ಆಕ್ರಮಣವನ್ನು ತೀವ್ರಗೊಳಿಸುತ್ತದೆ ಎಂದೇ ಹೇಳಲಾಗುತ್ತಿತ್ತು. ಇದರಿಂದ ಗಾಂಧೀಜಿ ತಮ್ಮ ಮುಸ್ಲಿಂ ಮತ್ತು ಪಾಕ್ ಓಲೈಕೆಯ ಮತ್ತೊಂದು ಕಂತಿನ ಭಾಗವಾಗಿ ೧೨ ಜನವರಿ ೧೯೪೮ರಲ್ಲಿ ಗಾಂಧೀಜಿಯವರು ತಮ್ಮ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಹಸಿವು, ಕಾರ್ಪಣ್ಯ, ಅವಮಾನ, ಅತ್ಯಾಚಾರ, ಚಳಿಗಳಿಗೆ ಸಿಲುಕಿ ಹತಾಶರಾಗಿದ್ದ ಬೀದಿಗೆ ಬಿದ್ದಿದ್ದ ಹಿಂದೂ ಮತ್ತು ಸಿಖ್ ನಿರಾಶ್ರಿತರ ನೋವು-ಆಕ್ರೋಶಗಳು ಸೋಟಗೊಂಡವು.

ಗಾಂಧೀಜಿಯವರು ಆ ದಿನಗಳಲ್ಲಿ ನೆಲೆಸಿದ್ದ ಬಿರ್ಲಾ ಭವನದ ಎದುರು ಸಹಸ್ರಾರು ನಿರಾಶ್ರಿತರು ಗಾಂಧೀ ಸಾಯಲಿ ಎಂದು ಕೂಗುತ್ತಿದ್ದರು. ೧೯೪೮ರ ಜನವರಿ ೧೩ರಂದು ಅಂದಿನ ಪ್ರಧಾನ ಮಂತ್ರಿ ನೆಹರೂ ಅವರು ಗಾಂಧೀಜಿ ಭೇಟಿಗೆ ಬಂದಾಗ ಅವರೆದರು ರಕ್ತದ ಬದಲು ರಕ್ತ ನಾವು ಸೇಡು ತೀರಿಸಿಕೊಂಡು ತೀರುತ್ತೇವೆಂಬ ಘೋಷಣೆಗಳು ಕೂಗಲ್ಪಟ್ಟವು. ಇದನ್ನು ಕೇಳಿದ ನೆಹರು ಎಷ್ಟು ಧೈರ್ಯ ನಿಮಗೆ, ಗಾಂಧೀ ಸಾಯಲಿ ಎಂದು ಕೂಗುತ್ತಿದ್ದೀರಿ. ಯಾರು ಹಾಗೆ ಕೂಗಿ
ದ್ದು? ಮೊದಲು ನನ್ನನ್ನು ಕೊಂದು ನಂತರ ಗಾಂಧೀಜಿ ಕೊಲ್ಲಿ ಎಂದು ಕೂಗಾಡಿದರು. ಸ್ವತಃ ಪ್ರತ್ಯಕ್ಷದರ್ಶಿಯೂ ಆಗಿದ್ದ ಪ್ಯಾರೇಲಾಲ್ ಅವರು ಈ ಘಟನೆಯನ್ನು ದಾಖಲಿಸಿದ್ದಾರೆ.

ಅಂದು ರಾತ್ರಿ ನಿರಾಶ್ರಿತರು ಬಿರ್ಲಾ ಭವನದೊಳಗೆ ನುಗ್ಗಿ ಗಾಂಧೀಜಿಯವರನ್ನು ಕೊಂದುಹಾಕಲು ಸಿದ್ಧವಾಗಿದ್ದರು. ಗಾಂಧೀಜಿಯವರ ಆಪ್ತರೂ ಆಗಿದ್ದ ಬ್ರಿಜ್ ಕೃಷ್ಣ ಚಾಂದಿ ವಾಲಾ ಅವರೂ ಸಹ ಆ ದಿನಗಳಲ್ಲಿ ಬಿರ್ಲಾ ಭವನದಲ್ಲಿಯೇ ಇದ್ದರು ಮತ್ತು ಗಾಂಧೀ ಹತ್ಯೆಯ ಅನಂತರ, ಹತ್ಯೆಯ ವಿಚಾರಣೆ ಕುರಿತು ಕೇಂದ್ರ ಸರ್ಕಾರ ನೇಮಿಸಿದ ಕಪೂರ್ ಆಯೋಗದ ಸಮ್ಮುಖದಲ್ಲಿ ತಮ್ಮ ವಿವರವಾದ ಹೇಳಿಕೆ ಯನ್ನು(ಆಯೋಗದ ವರದಿಯ ಪುಟ ೧೯೪) ನೀಡಿದರು. ಪ್ರಧಾನ ಮಂತ್ರಿ ನೆಹರೂ ಅವರು ತಕ್ಷಣ ಹೆಚ್ಚಿನ ಪೊಲೀಸ್ ಸಂರಕ್ಷಣೆಯನ್ನು ಏರ್ಪಾಡು ಮಾಡಿದ್ದುದರಿಂದ ಅಂದು ಹತ್ಯೆ ಸಂಭವಿಸಲಿಲ್ಲ.

ಕಪೂರ್ ಆಯೋಗದ ವರದಿಯ ಭಾಗ ೧, ಪುಟ ೧೪೪ ತಿಳಿಸುವಂತೆ, ಪ್ರಸಿದ್ಧ ಗಾಂಧೀವಾದಿ ಕೆ.ಎಂ.ಮುನ್ಷಿ ಅವರು ಜನವರಿ ೨೯ ಹಾಗೂ ೩೦ರಂದು ಬಿರ್ಲಾ ಭವನಕ್ಕೆ ಭೇಟಿ ನೀಡಿದ್ದರು. ಈ ವಿವರಗಳನ್ನು ಅವರೂ ಸಹ ನ್ಯಾಯಮೂರ್ತಿ ಕಪೂರ್ ಅವರ ಮುಂದೆ ನೀಡಿದರು. ವಿಭಜನೆಯ ಭಯಾನಕ ಪರಿಣಾಮಕ್ಕೆ ಕಾರಣಿಕರ್ತರಾದ ಮತ್ತು ಪಾಕಿಸ್ತಾನಕ್ಕೆ ೫೫ ಕೋಟಿ ರೂ ಹಣ ನೀಡಲೇಬೇಕೆಂದು ಒತ್ತಾಯಿಸಿದ ಗಾಂಧೀಜಿ ಈ ದುಸ್ಥಿತಿಗೆ ಕಾರಣ ಎಂದು ಜನ ಭಾವಿಸಿದ್ದಾರೆ
ಎಂದು ಅವರು ಆಯೋಗದ ಮುಂದೆ ವಿವರಿಸಿದರು.

ಅಂತೆಯೇ, ಅಂದಿನ ಜನಾಭಿಪ್ರಾಯವೂ ಈ ವರದಿಯಲ್ಲಿ ದಾಖಲಾಗಿದೆ. ದೆಹಲಿಯ ಕನಾಟ್ ಪ್ಲೇಸ್‌ನಿಂದ ಹಿಡಿದು ಚಾಂದನಿ ಚೌಕ್‌ವರೆಗೆ ಜನಸಾಮಾನ್ಯರು, ಈ ಉಪವಾಸ ಕುರಿತಂತೆ ಚರ್ಚಿಸುತ್ತಿದ್ದರು ಮತ್ತು ಗಾಂಧೀಜಿಯವರು ಬದುಕುಳಿಯಬೇಕು ಎನ್ನುವುದಕ್ಕಿಂತ, ಈ ಮುದುಕ ಯಾವಾಗ ನೆಗೆದುಬೀಳುತ್ತಾನೆ ಎಂದೇ ಮಾತನಾಡುತ್ತಿದ್ದರು. ಸ್ವತಃ ಗಾಂಧೀಜಿಯವರ ಮಗ ರಾಮದಾಸ್ ಗಾಂಧಿಯವರೇ ನೀವು ಹಿಂದುಗಳಿಗೆ ಶಾಪವಾಗಿದ್ದೀರಿ ಎಂದು ಪತ್ರ ಬರೆದಿದ್ದರು. ಸರದಾರ್ ಪಟೇಲರೆ ಎಲ್ಲರ ಸಮ್ಮುಖದಲ್ಲಿ ಗಾಂಧೀಜಿ ಈ ಕುರಿತು ನಿಂದಿಸಿದ್ದರು. ಆದರೂ, ಗಾಂಧೀಜಿಯವರ ಹಠಮಾರಿತನ ಕುಗ್ಗಲಿಲ್ಲ.

ದೇಶಾದ್ಯಂತ ಅವರನ್ನು ನಿಂದಿಸಿ ಜನರು ಬರೆದ ಪತ್ರಗಳನ್ನು ಸ್ವತಃ ಅವರೇ ತಮ್ಮ ಪ್ರಾರ್ಥನಾ ಸಭೆಯಲ್ಲಿ ಗಟ್ಟಿಯಾಗಿ ಓದುತ್ತಿದ್ದರು.  ನಿಜ-ಇತಿಹಾಸದ ಪುಟಗಳು ದಾಖಲಿಸಿರುವ ಈ ಎಲ್ಲ ವಿವರಗಳ ಹಿನ್ನೆಲೆಯಲ್ಲಿ ಗಾಂಧೀಜಿ ಯವರ ಬಗೆಗೆ ಯಾರೂ ಟೀಕೆ ಮಾಡಬಾರದು, ಅವರ ಕುರಿತು ಚರ್ಚೆಯೇ ಆಗಬಾರದು
ಎನ್ನುವ ಕೆಲವರ ವಾದವು ವಿಚಿತ್ರವಾಗಿದೆ.