ವಿಶ್ವಗುರು
ಗಣೇಶ್ ಭಟ್, ವಾರಣಾಸಿ
ಪ್ರಧಾನಿ ಮೋದಿಯವರು ವಿದೇಶ ಪ್ರವಾಸವನ್ನು ಮುಗಿಸಿ ಮರಳುವಾಗ, ಭಾರತದ ಪ್ರಾಚೀನ ಕಲಾಕೃತಿಗಳನ್ನು ತಮ್ಮೊಂದಿಗೆ ತರುತ್ತಿರುವುದು ಇತ್ತೀಚಿನ ಕೆಲ ವರ್ಷಗಳಲ್ಲಿ ಕಾಣಬರುತ್ತಿರುವ ವಿದ್ಯಮಾನ. ಜರ್ಮನಿ, ಆಸ್ಟ್ರೇಲಿ ಯಾ, ಅಮೆರಿಕ ಮುಂತಾದ ದೇಶಗಳ ಪ್ರಮುಖರು ಇಂಥ ಪ್ರಾಚೀನ ಕಲಾಕೃತಿಗಳನ್ನು ನಮ್ಮ ಪ್ರಧಾನಿಗೆ ಉಡು ಗೊರೆಯಾಗಿ ನೀಡುತ್ತಿರುವ ನಿದರ್ಶನಗಳಿವೆ. ಆಸ್ಟ್ರೇಲಿಯಾ ೨೦೧೪ ಮತ್ತು ೨೦೨೦ರಲ್ಲಿ ನಟರಾಜ, ಅರ್ಧನಾರೀಶ್ವರ ವಿಗ್ರಹಗಳನ್ನು ಮತ್ತು ನಾಗರಾಜನ ಕಲ್ಲಿನ ಕೆತ್ತನೆಗಳನ್ನು, ೨೦೧೫ರಲ್ಲಿ ಸಿಂಗಾಪುರವು ಉಮಾಮಹೇಶ್ವರಿಯ ವಿಗ್ರಹವನ್ನು ಭಾರತಕ್ಕೆ ಮರಳಿಸಿವೆ.
ಅಮೆರಿಕ ೨೦೨೩ರಲ್ಲಿ ೧೦೫ ಭಾರತೀಯ ಪ್ರಾಚೀನ ಕಲಾಕೃತಿಗಳನ್ನು ಮರಳಿಸಿದ್ದರೆ, ಇಟಲಿ ಮತ್ತು ಜರ್ಮನಿಗಳೂ ದೇವತಾ ವಿಗ್ರಹಗಳನ್ನು ಭಾರತಕ್ಕೆ ಹಿಂದಿರುಗಿಸಿವೆ. ವಿಗ್ರಹಚೋರರು ವಿವಿಧ ಕಾಲಘಟ್ಟಗಳಲ್ಲಿ ಭಾರತದ ದೇವ ಸ್ಥಾನಗಳಿಂದ ಹಾಗೂ ಪುರಾತನ ವಸ್ತು ಸಂಗ್ರಹಾಲಯಗಳಿಂದ ಈ ಎಲ್ಲಾ ಅಮೂಲ್ಯ ವಸ್ತುಗಳನ್ನು ಕದ್ದು ಅಕ್ರಮವಾಗಿ ವಿದೇಶಗಳಿಗೆ ಸಾಗಿಸಿ ಮಾರಾಟ ಮಾಡಿದ್ದರು ಎಂಬುದು ಗಮನಾರ್ಹ.
ಭಾರತದಿಂದ ಅಕ್ರಮವಾಗಿ ಹೊರಗೊಯ್ಯಲಾದ ಕಲಾಕೃತಿಗಳಲ್ಲಿ ೩೬೩ ವಸ್ತುಗಳನ್ನು ಸ್ವಾತಂತ್ರ್ಯಾನಂತರ ದೇಶಕ್ಕೆ ಮರಳಿ ತರಲಾಗಿದ್ದು, ಈ ಪೈಕಿ ೩೪೪ ವಸ್ತುಗಳು ಮರಳಿದ್ದು ೨೦೧೪ರ ನಂತರ ಎನ್ನುವುದು ವಿಶೇಷ. ಭಾರತದಿಂದ ಲಕ್ಷಾಂತರ ಪ್ರಾಚೀನ ವಸ್ತುಗಳನ್ನು ಕದ್ದು ಅಥವಾ ಬಲವಂತವಾಗಿ ಸೆಳೆದು ವಿದೇಶಗಳಿಗೆ ಸಾಗಿಸಲಾಗಿದೆ. ತುರ್ಕರು, ಮಂಗೋಲರು, ಅರಬರು, ಇರಾನಿಗಳು, ಆಫ್ಘನ್ನರು, ಮೊಘಲರು ಭಾರತದಿಂದ ಹೊತ್ತೊಯ್ದ ಸಂಪತ್ತು ಹಾಗೂ ಕಲಾಕೃತಿಗಳಿಗೆ ಲೆಕ್ಕವಿಲ್ಲ.
ಬ್ರಿಟಿಷರ ಕಾಲದಲ್ಲೂ ಭಾರತೀಯ ಪರಂಪರಾಗತ ವಸ್ತುಗಳ ಅಪಹರಣ ಮುಂದುವರಿಯಿತು; ಕೊಹಿನೂರು ವಜ್ರ, ನುಸ್ಸಾಕ್ ವಜ್ರ, ಅಮರಾವತಿ ಮಾರ್ಬಲ್ಸ್ (ಇದು ಬುದ್ಧನ ಜೀವನಕ್ಕೆ ಸಂಬಂಧ ಪಟ್ಟ ಶಿಲ್ಪಕಲೆ), ಸುಲ್ತಾನ್ ಗಂಜ್ ಬುದ್ಧ ಮೊದಲಾದ ಕಲಾಕೃತಿಗಳು ಹಾಗೂ ಮೂರ್ತಿಗಳನ್ನು ಬ್ರಿಟಿಷರು ಭಾರತದಿಂದ ಹೊತ್ತೊಯ್ದಿದ್ದು ಈ
ಮಾತಿಗೆ ಪುಷ್ಟಿ ನೀಡುತ್ತದೆ. ಭಾರತದ ೫,೦೦೦ ವರ್ಷಗಳ ಕಲಾವೈಭವ ಮತ್ತು ನೈಪುಣ್ಯವನ್ನು ಸಾರುವ ೨೦ ಲಕ್ಷಕ್ಕಿಂತಲೂ ಹೆಚ್ಚಿನ ಕೆತ್ತನೆಗಳು, ಶಿಲ್ಪಗಳು, ಮೂರ್ತಿಗಳು, ಚಿತ್ರಗಳು, ಆಯುಧಗಳು, ಆಭರಣಗಳು, ವೈಭವೋ ಪೇತ ಉಡುಪುಗಳು, ಉತ್ಖನನ ಕಾಲದಲ್ಲಿ ಸಿಕ್ಕಿದ ಪ್ರಾಚೀನ ವಸ್ತುಗಳೇ ಮೊದಲಾದ ಅಮೂಲ್ಯ ವಸ್ತುಗಳು ತನ್ನ ಸಂಗ್ರಹದಲ್ಲಿವೆ ಎಂದು ಬ್ರಿಟಿಷ್ ಮ್ಯೂಸಿಯಂ ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಹೀಗೆ ಭಾರತದಿಂದ ಹೊತ್ತೊಯ್ಯಲಾಗಿರುವ ಅಮೂಲ್ಯ ಐತಿಹಾಸಿಕ ವಸ್ತುಗಳನ್ನು ಮರಳಿ ತರುವ ಉದ್ದೇಶ ದೊಂದಿಗೆ ಕಾರ್ಯನಿರ್ವಹಿಸುತ್ತಿದೆ ‘ಇಂಡಿಯಾ ಪ್ರೈಡ್ ಪ್ರಾಜೆಕ್ಟ್’ (ಐಪಿಪಿ) ಎಂಬ ಸಂಸ್ಥೆ. ಇಂದು ನರೇಂದ್ರ ಮೋದಿಯವರು ವಿದೇಶ ಭೇಟಿಯ ನಂತರ ಭಾರತೀಯ ಕಲಾಕೃತಿಗಳನ್ನು ದೇಶಕ್ಕೆ ಮರಳಿ ತರುತ್ತಿರುವುದು ನಮಗೆ ಬಹಳ ಸರಳವಾಗಿ ಕಾಣಬಹುದು; ಆದರೆ ಈ ಕೆಲಸದ ಹಿಂದಿನ ಪ್ರಕ್ರಿಯೆಗಳು ಬಹಳ ಕಸರತ್ತನ್ನು ಒಳಗೊಂಡಿವೆ. ಈ ನಿಟ್ಟಿನಲ್ಲಿ ಸಕ್ರಿಯವಾಗಿರುವ ‘ಐಪಿಪಿ’ ಸಂಸ್ಥೆಯನ್ನು ಹುಟ್ಟುಹಾಕಿದವರು ಸಿಂಗಾಪುರದಲ್ಲಿ ನೆಲೆಸಿರುವ ಭಾರತೀಯ ಮೂಲದ ಎಸ್.ವಿಜಯ್‌ಕುಮಾರ್ ಮತ್ತು ಅನುರಾಗ್ ಸಕ್ಸೇನಾ. ಈ ಪೈಕಿ ವಿಜಯ್‌ಕುಮಾರ್ ಅವರು
ಶಿಪ್ಪಿಂಗ್ ಕಂಪನಿಯೊಂದರ ಕಾರ್ಯನಿರ್ವಹಣಾಧಿಕಾರಿಯಾದರೆ (ಇವರು ‘ದಿ ಐಡಲ್ ಥೀಮ್’ ಎಂಬ ಪ್ರಸಿದ್ಧ ಕೃತಿಯ ಲೇಖಕರೂ ಹೌದು), ಅನುರಾಗ್ ಸಕ್ಸೇನಾ ಅವರು ಸಿಂಗಾಪುರದಲ್ಲಿ ಕಂಪನಿಗಳ ಸಲಹೆಗಾರರಾಗಿದ್ದಾರೆ. ಇಂದು ‘ಐಪಿಪಿ’ ಸಂಸ್ಥೆಗೆ ವಿಶ್ವಾದ್ಯಂತ ೨೮೦ಕ್ಕೂ ಹೆಚ್ಚು ಸ್ವಯಂಸೇವಕರಿದ್ದು, ಇವರೆಲ್ಲರೂ ಕೈಜೋಡಿಸಿ,
ವಿಶ್ವದ ವಿವಿಧೆಡೆ ಚದುರಿಹೋಗಿರುವ ಭಾರತದ ಸಾಂಸ್ಕೃತಿಕ ಕುರುಹುಗಳನ್ನು ಪತ್ತೆಹಚ್ಚಿ, ಅವನ್ನು ಭಾರತಕ್ಕೆ ಮರಳಿ ತರುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಸ್ವಯಂಸೇವಕರಲ್ಲಿ ಐಟಿ ಕಂಪನಿಗಳ ಸ್ಥಾಪಕರು ಮಾತ್ರ ವಲ್ಲದೆ, ಐಟಿ, ಮ್ಯಾನೇಜ್ ಮೆಂಟ್ ಹಾಗೂ ಇತರ ಸೇವಾಕ್ಷೇತ್ರಗಳ ಉದ್ಯೋಗಿಗಳೂ ಸೇರಿದ್ದಾರೆ ಎಂಬುದು ಗಮನಾರ್ಹ.
ವಾಟ್ಸ್ಯಾಪ್, ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್ ಮಾಧ್ಯಮಗಳ ಮೂಲಕ ಸ್ವಯಂಸೇವಕ ರನ್ನು ಬೆಸೆಯುವ, ಪರಸ್ಪರ ವಿಚಾರ ವಿನಿಮಯದಲ್ಲಿ ಅವರನ್ನು ತೊಡಗಿಸುವ ಕೆಲಸವನ್ನು ಮಾಡುತ್ತಿರುವ ‘ಐಪಿಪಿ’ ಸಂಸ್ಥೆ, ಕಾಲಕಾಲಕ್ಕೆ ‘ U U ’ / ‘ g h i ’ ಮಾರ್ಗೋಪಾಯದ ಮೂಲಕ ಮೀಟಿಂಗ್‌ಗಳನ್ನು ನಡೆಸುತ್ತದೆ.
ಸಂಸ್ಥೆಯ ಸ್ವಯಂಸೇವಕರು ವಾರಾಂತ್ಯದ ರಜಾದಿನಗಳಲ್ಲಿ ವಿವಿಧ ವಸ್ತುಸಂಗ್ರಹಾಲಯಗಳು ಮತ್ತು ಕಲಾ ಕೃತಿಗಳ ವಸ್ತುಪ್ರದರ್ಶನ ತಾಣಗಳಿಗೆ ಪ್ರವಾಸಿಗರಂತೆ ಭೇಟಿ ನೀಡಿ, ಅಲ್ಲಿ ಕಾಣಸಿಗುವ ಭಾರತೀಯ ಮೂಲದ ಅಮೂಲ್ಯ ಪ್ರಾಚೀನ ವಸ್ತುಗಳ ಫೋಟೋವನ್ನು ಅಥವಾ ಅವುಗಳ ಜತೆಗಿನ ಸೆಲ್ಫಿ ತೆಗೆದುಕೊಂಡು ‘ಐಪಿಪಿ’ ಸಂಸ್ಥೆಗೆ ಕಳುಹಿಸುತ್ತಾರೆ.
೧೯೭೦ರಲ್ಲಿ ಸಭೆ ಸೇರಿದ ಯುನೆಸ್ಕೋ, ವಿವಿಧ ದೇಶಗಳ ಸಾಂಸ್ಕೃತಿಕ ಆಸ್ತಿಗಳ ಕಳ್ಳಸಾಗಣೆ, ಅಕ್ರಮ ಆಯಾತ ಹಾಗೂ ಒಡೆತನದ ಹಸ್ತಾಂತರವನ್ನು ತಡೆಗಟ್ಟಲು/ನಿಷೇಽಸಲು ನಿರ್ಣಯಿಸಿ, ತನ್ನೆಲ್ಲಾ ಸದಸ್ಯ ರಾಷ್ಟ್ರಗಳು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕೆಂದು ಕೋರಿತು. ದೇಶವೊಂದು ತನ್ನ ಸರಹದ್ದಿನೊಳಗಿಂದ ಇನ್ನೊಂದು ದೇಶಕ್ಕೆ ಸಾಗಿಸಲ್ಪಟ್ಟ ಕಲಾಕೃತಿ, ಧಾರ್ಮಿಕ ಮತ್ತು ಸ್ಮಾರಕ ವಸ್ತುಗಳನ್ನು ರಾಜತಾಂತ್ರಿಕ ಮಾತುಕತೆಗಳ ಮೂಲಕ ಹಿಂಪಡೆಯಲು ಮತ್ತು ಮೂಲಸ್ಥಾನದಲ್ಲಿ ಮರುಪ್ರತಿ ಷ್ಠಾಪಿಸುವಂತಾಗಲು ಯುನೆಸ್ಕೋದ ಈ ನಿರ್ಣಯ
ಅನುವುಮಾಡಿಕೊಟ್ಟಿತು (೧೯೭೦ರ ನಂತರ ಅಕ್ರಮವಾಗಿ ಸಾಗಿಸಲ್ಪಟ್ಟ ಕಲಾಕೃತಿಗಳಿಗೆ ಮಾತ್ರ ಇದು ಅನ್ವಯ ವಾಗುತ್ತದೆ). ೧೯೭೦ರಿಂದ ಇದುವರೆಗೆ ಭಾರತದಿಂದ ೫೦ ಸಾವಿರಕ್ಕೂ ಹೆಚ್ಚು ಇಂಥ ವಸ್ತುಗಳು ಅಕ್ರಮವಾಗಿ ಸಾಗಿಸಲ್ಪಟ್ಟಿವೆ ಎಂದು ಅಂದಾಜಿಸಲಾಗಿದ್ದು, ಇವನ್ನು ಹಿಂಪಡೆಯುವ ನಿಟ್ಟಿನಲ್ಲಿ ೨೦೧೪ರವರೆಗಿನ ಭಾರತ ಸರಕಾರಗಳು ರಚನಾತ್ಮಕವಾಗಿ ಕೆಲಸ ಮಾಡಿಲ್ಲ.
ಪ್ರಾಚೀನ ಅಮೂಲ್ಯ ವಸ್ತುಗಳನ್ನು ಭಾರತಕ್ಕೆ ಮರಳಿ ತರುವ ನಿಟ್ಟಿನಲ್ಲಿ ‘ಐಪಿಪಿ’ ಸಂಸ್ಥೆ ೩ ಹಂತಗಳಲ್ಲಿ ಕೆಲಸ ಮಾಡುತ್ತದೆ. ಮೊದಲನೆಯ ಹಂತದಲ್ಲಿ, ಭಾರತದಿಂದ ಹೊರಗೆ ಸಾಗಿಸಲ್ಪಟ್ಟಿರುವ ವಸ್ತುಗಳನ್ನು ಪತ್ತೆ ಹಚ್ಚಲಾಗುತ್ತದೆ. ಮೊದಲೇ ಉಲ್ಲೇಖಿಸಿದಂತೆ, ವಿದೇಶಗಳಲ್ಲಿ ನೆಲೆಸಿರುವ ಸಂಸ್ಥೆಯ ಸ್ವಯಂಸೇವಕರು ಅಲ್ಲಲ್ಲಿನ ವಿವಿಧ ವಸ್ತುಸಂಗ್ರಹಾಲಯಗಳಿಗೆ ಭೇಟಿಯಿತ್ತು ಅಲ್ಲಿ ಪ್ರದರ್ಶಿಸಲ್ಪಟ್ಟಿರುವ ಪ್ರಾಚೀನ ಭಾರತೀಯ ವಸ್ತು
ಗಳನ್ನು ಕಂಡುಹಿಡಿದು ಸಂಸ್ಥೆಯ ಮುಖ್ಯತಂಡಕ್ಕೆ ಮಾಹಿತಿ ನೀಡುತ್ತಾರೆ. ಎರಡನೆಯ ಹಂತ ಬಹಳ ಸವಾಲಿ ನದ್ದು. ಕಾರಣ, ಅಲ್ಲಿ ಪ್ರದರ್ಶಿಸಲ್ಪಟ್ಟಿರುವಂಥದ್ದು ಭಾರತೀಯ ಮೂಲದ ಕಲಾಕೃತಿಗಳೇ/ ವಸ್ತುಗಳೇ ಎಂಬುದನ್ನು ಸಾಬೀತುಪಡಿಸುವುದು ಕಷ್ಟದ ಕೆಲಸ.
ಅವು ಭಾರತದ ಯಾವ ದೇವಸ್ಥಾನ ಅಥವಾ ವಸ್ತು ಸಂಗ್ರಹಾಲಯದಿಂದ ಕಳವಾಗಿದ್ದು ಎಂಬುದನ್ನು ಪತ್ತೆ ಹಚ್ಚಬೇಕು ಮತ್ತು ಅದನ್ನು ಸಾಬೀತುಪಡಿಸಲು ಯಾವುದಾದರೂ ಫೋಟೋ ಅಥವಾ ಗ್ರಂಥದ ಆಧಾರವನ್ನು ಕೊಡಬೇಕು. ಈ ಹಂತದಲ್ಲಿ ಭಾರತೀಯ ಪ್ರಾಚ್ಯವಸ್ತು ಸಂರಕ್ಷಣಾ ಅಧಿಕಾರಿಗಳ ಸಹಕಾರವು ಬೇಕಾಗುತ್ತದೆ. ಈ ಎಲ್ಲಾ ಸಾಕ್ಷ್ಯವನ್ನು ಒದಗಿಸಿ, ಮೂರ್ತಿ ಅಥವಾ ಕಲಾಕೃತಿಯನ್ನು ಮರಳಿಸುವಂತೆ ವಸ್ತುಸಂಗ್ರಹಾಲಯಗಳ ಅಧಿಕಾರಿಗಳ ಮನವೊಲಿಸಬೇಕು. ಈ ಕಲಾಕೃತಿಗಳು ಭಾರತಕ್ಕೆ ರವಾನೆಯಾಗುವಂತಾಗಲು ರಾಜತಾಂತ್ರಿಕ ಮಾತುಕತೆ ನಡೆಸುವಂತೆ ಮಾಡಬೇಕಾದುದು ಮೂರನೆಯ ಹಂತ. ಇಂಥ ಮಾತುಕತೆ ನಡೆಸಬೇಕಾದ್ದು ನಮ್ಮ ಸರಕಾರಿ ಅಧಿಕಾರಿಗಳು; ಹೇಳಿಕೇಳಿ ಅವರು ವಿಳಂಬಕ್ಕೆ, ಬೇಜವಾಬ್ದಾರಿಗೆ ಹೆಸರಾದವರು. ಪ್ರಧಾನಿ ಮತ್ತು ಇತರ ಸಚಿವರು ಎಷ್ಟೇ ಕ್ರಿಯಾಶೀಲರಾಗಿದ್ದರೂ ಈ ಅಧಿಕಾರಿಗಳು ತಮ್ಮ ಔದಾಸೀನ್ಯವನ್ನು ತೋರಿಯೇ ತೋರುತ್ತಾರೆ.
ಮೋದಿಯವರು ೨೦೧೬ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ ವೇಳೆ ಅಲ್ಲಿನ ಸರಕಾರ ನೂರಕ್ಕಿಂತಲೂ ಹೆಚ್ಚು ಭಾರತೀಯ ಪ್ರಾಚ್ಯವಸ್ತುಗಳನ್ನು ಹಿಂದಿರುಗಿಸಿತ್ತು; ಮೋದಿಯವರು ಖುದ್ದಾಗಿ ಇಂಥ ೬ ವಸ್ತುಗಳನ್ನು ಜತೆಗೆ ತಂದರು. ಆದರೆ ಮಿಕ್ಕವನ್ನು ಹಿಂತರುವ ವಿಷಯದಲ್ಲಿ ನಮ್ಮ ಅಧಿಕಾರಿಗಳು ತೋರಿದ ನಿರ್ಲಕ್ಷ್ಯದಿಂದಾಗಿ ಅವು ೭ ವರ್ಷಗಳಷ್ಟು ತಡವಾಗಿ ಭಾರತಕ್ಕೆ ಮರಳುವಂತಾಯಿತು. ಭಾರತ ಮೂಲದ ವಿಗ್ರಹ ಕಳ್ಳಸಾಗಣೆಗಾರ ಸುಭಾಷ್ ಕಪೂರ್‌ನನ್ನು ೨೦೧೧ರಲ್ಲಿ ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಬಂಧಿಸಿ ೨೦೧೨ರಲ್ಲಿ ಭಾರತಕ್ಕೆ ಹಸ್ತಾಂತರಿ ಸಲಾಯಿತು.
ಅಮೆರಿಕದ ನ್ಯೂಯಾಕ್ ನಲ್ಲಿನ ಈತನ ಉಗ್ರಾಣದ ಮೇಲೆ ಪೊಲೀಸರ ದಾಳಿಯಾದಾಗ, ಹಲವು ಮಿಲಿಯನ್ ಡಾಲರ್ ಮೌಲ್ಯದ ಭಾರತೀಯ ಪ್ರಾಚ್ಯವಸ್ತುಗಳು ದೊರಕಿದವು. ಇಂಥ ವಸ್ತುಗಳನ್ನು ವಿಶ್ವದ ವಿವಿಧೆಡೆಯ ವಸ್ತುಸಂಗ್ರಹಾಲಯಗಳು ಈತನಿಂದ ಖರೀದಿಸಿದ್ದವು. ತಮಿಳುನಾಡಿನ ಶ್ರೀಪುರಂತನ್ ನಟರಾಜ ವಿಗ್ರಹವನ್ನು ಅಪಹರಿಸಿ ‘ನ್ಯಾಷನಲ್ ಗ್ಯಾಲರಿ ಆಫ್ ಆಸ್ಟ್ರೇಲಿಯಾ’ಗೆ ೫.೫ ಮಿಲಿಯನ್ ಡಾಲರ್‌ಗೆ ಮಾರಿದ್ದು ಈತನೇ. ಪಶ್ಚಿಮ ಬಂಗಾಳದ ಚಂದ್ರಕೇತುಘರ್‌ನಲ್ಲಿ ೧೯೬೦ರಲ್ಲಿ ನಡೆಸಲಾದ ಉತ್ಖನನದಲ್ಲಿ ದೊರಕಿದ, ಕ್ರಿ.ಪೂ. ೮ನೇ ಶತಮಾ
ನಕ್ಕಿಂತಲೂ ಹಳೆಯ ಟೆರಾಕೋಟ್ ಕಲಾಕೃತಿಗಳಲ್ಲಿ ನೂರಾರನ್ನು ಅಪಹರಿಸಿ ವಿದೇಶಗಳಿಗೆ ಸಾಗಿಸಿದ ಆರೋಪವೂ ಈತನ ಮೇಲಿದೆ. ಭಾರತದ ನ್ಯಾಯಾಲಯಗಳಲ್ಲಿ ಇವನ ಮೇಲಿನ ಮೊಕದ್ದಮೆಗಳ ವಿಚಾರಣೆಗಳು ನಡೆಯುತ್ತಲೇ ಇವೆ.
ವಿಗ್ರಹಚೋರರ ವಿರುದ್ಧ ನಮ್ಮ ಕಾನೂನುಗಳು ಅಷ್ಟು ಪರಿಣಾಮಕಾರಿಯಾಗಿ ಕಾರ್ಯವೆಸಗುತ್ತಿಲ್ಲ; ಭಾರತದಿಂದ ೧೦ ಸಾವಿರಕ್ಕೂ ಹೆಚ್ಚು ಅಮೂಲ್ಯ ಪ್ರಾಚೀನ ವಸ್ತುಗಳನ್ನು ವಿದೇಶಗಳಿಗೆ ಸಾಗಿಸಿದ ವಾಮನ್ ಯಾ ಎಂಬ ಕಳ್ಳಸಾಗಣೆಗಾರನನ್ನು ಒಂದಿಷ್ಟು ವರ್ಷ ಕಾಲ ಜೈಲಿನಲ್ಲಿಟ್ಟು ನಂತರ ಹೊರಬಿಡಲಾಯಿತು. ಇಷ್ಟು ದೊಡ್ಡ
ಅಪರಾಧವೆಸಗಿದ್ದರೂ ವಾಮನ್ ಇಂದು ಕಾನೂನಿನ ಕುಣಿಕೆಯಿಂದ ಬಚಾವಾಗಿ ಹಾಯಾಗಿದ್ದಾನೆ.
ಭಾರತೀಯ ಪ್ರಾಚ್ಯ ಕಲಾಕೃತಿಗಳಿಗೆ ಅಥವಾ ದೇವರ ಮೂರ್ತಿಗಳಿಗೆ ಇರುವ ಸೊಬಗಿನ ಆಧಾರದ ಮೇಲೆ ಕಳ್ಳ ಸಾಗಣೆಗಾರರು ಅವಕ್ಕೆ ಮೌಲ್ಯವನ್ನು ನಿಗದಿಪಡಿಸಿ ಮಾರುತ್ತಾರೆ. ಆದರೆ ಭಕ್ತಾದಿಗಳ ಪಾಲಿಗೆ ಆ ವಿಗ್ರಹವು ಮೌಲ್ಯಾತೀತವಾಗಿರುತ್ತದೆ. ೧೯೭೦ರಲ್ಲಿ ಕಳವಾಗಿದ್ದ ಶೀಪುರಂತನ್ ನಟರಾಜ ವಿಗ್ರಹವು, ‘ಐಪಿಪಿ’ ಸಂಸ್ಥೆ ಹಾಗೂ ಭಾರತ ಸರಕಾರಗಳ ಕಾರ್ಯಾಚರಣೆಯ ಫಲವಾಗಿ ತಮಿಳುನಾಡಿನ ಕಲ್ಲಿದೈಕುರಿಚ್ಚಿಯ ದೇಗುಲಕ್ಕೆ ಮರಳಿ
ದಾಗ ಭಕ್ತಾದಿಗಳು ಭಾರಿ ಉತ್ಸವ ನಡೆಸಿ ಸಂಭ್ರಮಿಸಿದ್ದು ನೋಡಿದರೆ, ಅವರು ಆ ವಿಗ್ರಹದ ಮೇಲಿರಿಸಿದ್ದ ಭಕ್ತಿಯ ಮಟ್ಟವು ಅರಿವಾ ಗುತ್ತದೆ. ವಿಗ್ರಹ ಕಳ್ಳಸಾಗಣೆಯ ಆದಾಯವು ಭಯೋತ್ಪಾದನೆಗೂ ಬಳಕೆಯಾಗಿ ದೇಶದ ಭದ್ರತೆಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ.
ದೇಶದ ಸಾಂಸ್ಕೃತಿಕ ವೈಭವ ಪುನರುತ್ಥಾನಗೊಳ್ಳಬೇಕೆಂದರೆ, ಭಾರತದಿಂದ ಕಳುವಾದ ಪ್ರಾಚೀನ ವಸ್ತುಗಳನ್ನು ದೇಶಕ್ಕೆ ಮರಳಿ ತರಲೇಬೇಕು. ಇಟಲಿ ಯು ತನ್ನ ನೆಲದಿಂದ ಕಳುವಾದ ೧೦ ಸಾವಿರಕ್ಕೂ ಹೆಚ್ಚಿನ ಪ್ರಾಚೀನ ವಸ್ತು
ಗಳನ್ನು ಮರಳಿ ಪಡೆದಿದೆ. ಆದರೆ ಭಾರತಕ್ಕೆ ೩೦೦ ಚಿಲ್ಲರೆ ವಸ್ತುಗಳನ್ನಷ್ಟೇ ಮರಳಿ ತರಲು ಸಾಧ್ಯವಾಗಿದೆ. ಅಮೆರಿಕವು ೧೪೪೦ಕ್ಕೂ ಹೆಚ್ಚಿನ ವಸ್ತುಗಳನ್ನು ಹಿಂದಿರುಗಿಸುವ ಭರವಸೆಯನ್ನು ನೀಡಿದೆ. ಇಂಗ್ಲೆಂಡ್, ಆಸ್ಟ್ರೇ ಲಿಯಾ, ಜರ್ಮನಿ ಮೊದಲಾದ ದೇಶಗಳು ಕೂಡ ಭಾರತೀಯ ಪ್ರಾಚ್ಯವಸ್ತುಗಳನ್ನು ಹಿಂದಿರುಗಿಸುವುದಾಗಿ
ಹೇಳಿವೆ. ಇವನ್ನು ಮರಳಿ ಭಾರತಕ್ಕೆ ತರುವ ನಿಟ್ಟಿನಲ್ಲಿನ ‘ಐಪಿಪಿ’ ಸಂಸ್ಥೆ ಮತ್ತು ಭಾರತ ಸರಕಾರದ ಪ್ರಯತ್ನ ಸಫಲವಾಗಲಿ ಎಂದು ಹಾರೈಸೋಣ.
(ಲೇಖಕರು ಹವ್ಯಾಸಿ ಬರಹಗಾರರು)