Wednesday, 11th December 2024

Ganesh Chaturthi: ಸ್ಫೂರ್ತಿಪಥ ಅಂಕಣ: ಮುಂಬಯಿಗರ ಭಕ್ತಿ, ಭಾವದ ಪ್ರತೀಕ- ಲಾಲ್‌ಭಾಗ್ ಚಾ ಮಹಾರಾಜಾ

ganesh chaturthi lalbhagha cha raja 1
rajendra bhat
  • ರಾಜೇಂದ್ರ ಭಟ್ ಕೆ.

Ganesh Chaturthi: ಇದು ಜಗತ್ತಿನ ಅತೀ ದೊಡ್ಡ ಸಾರ್ವಜನಿಕ ಗಣೇಶ ಮಂಡಳ!

ಸ್ಫೂರ್ತಿಪಥ ಅಂಕಣ: ಭಾರತೀಯರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಹೆಚ್ಚಿಸಲು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಲೋಕಮಾನ್ಯ ತಿಲಕರು ಆರಿಸಿಕೊಂಡ ದಾರಿ ಎಂದರೆ ಸಾರ್ವಜನಿಕ ಗಣೇಶ ಉತ್ಸವಗಳು. 1893ರಲ್ಲಿ ಪುಣೆ ಮಹಾನಗರದಲ್ಲಿ ಆರಂಭವಾದ ಈ ಸಾರ್ವಜನಿಕ ಮಹೋತ್ಸವಗಳು ಮುಂದೆ ಇಡೀ ಭಾರತವನ್ನು ತಲುಪಲು ಹೆಚ್ಚು ವರ್ಷ ತೆಗೆದುಕೊಳ್ಳಲಿಲ್ಲ. ಅದರಲ್ಲಿಯೂ ಮುಂಬಯಿಯ ನಾಗರಿಕರ ಭಕ್ತಿ ಭಾವದ ಪ್ರತೀಕವಾಗಿ ಮುಂದೆ 2700ಕ್ಕಿಂತ ಅಧಿಕ ಸಾರ್ವಜನಿಕ ಗಣೇಶ ಮಂಡಲಗಳು ಇಲ್ಲಿ ಆರಂಭವಾದವು!

ಅದರಲ್ಲಿಯೂ ಅತ್ಯಂತ ಹೆಚ್ಚು ಜನಾಕರ್ಷಣೆಯ, ವೈಭವದ ಗಣೇಶ ಮಂಡಲದ ಬಗ್ಗೆ ಇಂದು ನಾನು ಬರೆಯಬೇಕು. ಅದು ಖಂಡಿತವಾಗಿಯೂ ‘ಲಾಲಭಾಗ್ ಚಾ ಮಹಾರಾಜ’ ಎಂದೇ ಜನರಿಂದ ಕರೆಯಲ್ಪಡುವ ಗಣೇಶ ಮಂಡಲ.

90 ವರ್ಷಗಳ ಇತಿಹಾಸ ಇದೆ

1930ರ ಸುಮಾರಿಗೆ ಮುಂಬಯಿಯ ಪೆರು ಚೌಲ್ ಎಂಬ ಪ್ರದೇಶದಲ್ಲಿ ವಿಸ್ತಾರವಾದ ಒಂದು ಮಾರ್ಕೆಟ್ ಪ್ರದೇಶವು ಇತ್ತು. ಅದನ್ನು ನಂಬಿಕೊಂಡು ಬದುಕುತ್ತಿದ್ದ ಸಾವಿರಾರು ವ್ಯಾಪಾರಿಗಳು ಮತ್ತು ಮೀನುಗಾರರು ಇದ್ದರು. ಆದರೆ ಕಾನೂನು ವ್ಯಾಜ್ಯದ ಕಾರಣ ಅದು ಮುಚ್ಚಲ್ಪಟ್ಟಿತು. ಇದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಂದವು. ಮುಂದೆ ತೀವ್ರ ಹೋರಾಟ ಮತ್ತು ಪ್ರತಿಭಟನೆಗಳು ನಡೆದು ಲ್ಯಾಂಡ್ ಲಾರ್ಡ್ ಆದ ರಾಜಾಭಾಯಿ ತಯ್ಯಬಲಿ ಅವರು ಮಾರ್ಕೆಟ್ ಕಟ್ಟಲು ಜಾಗವನ್ನು ಬಿಟ್ಟುಕೊಟ್ಟರು. ಅದರಿಂದಾಗಿ ಬೃಹತ್ ಆದ ಲಾಲಭಾಗ್ ಮಾರ್ಕೆಟ್ ನಿರ್ಮಾಣವಾಯಿತು. ಆಗ ವ್ಯಾಪಾರಿಗಳು ಮತ್ತು ಮೀನುಗಾರರು ಸೇರಿಕೊಂಡು ಕೃತಜ್ಞತೆಯ ರೂಪದಲ್ಲಿ ಸಾರ್ವಜನಿಕ ಗಣೇಶಮಂಡಲ ಸ್ಥಾಪಿಸಿ ಗಣೇಶನ ಪೂಜೆ ಆರಂಭ ಮಾಡಿದರು. 1934ರಲ್ಲಿ ಮೊದಲ ಬಾರಿಗೆ ಸಂಭ್ರಮದ ಗಣೇಶ ಪ್ರತಿಷ್ಠೆ ಮತ್ತು ಪೂಜೆ ನೆರವೇರಿದವು. ಅಲ್ಲಿಂದ ಆರಂಭವಾದ ಆ ವೈಭವ ಇಂದಿನವರೆಗೂ ಹರಿದು ಬಂದಿದೆ.

11 ದಿನಗಳ ಮನ್ನತ್ ಉತ್ಸವ್

ಮನ್ನತ್ ಅಂದರೆ ಹರಕೆ ಎಂದರ್ಥ. ಅದರಿಂದ ಈ ಗಣೇಶನಿಗೆ ಮನ್ನತ್ ಚಾ ರಾಜಾ ಎಂಬ ಹೆಸರು ಬಂದಿದೆ. ಭಕ್ತಿಯಿಂದ ಬೇಡಿಕೊಂಡ ಎಲ್ಲರ ಹರಕೆಗಳು ನೆರವೇರುತ್ತವೆ ಎಂದು ಭಕ್ತರು ನಂಬುವ ಕಾರಣ ಈ ಉತ್ಸವಕ್ಕೆ ಪ್ರತಿದಿನದ ಜನಸಾಗರ ಹರಿದುಬರುತ್ತದೆ. ಆ 11 ದಿನಗಳೂ ಮಹಾನಗರವು ಮಲಗುವುದಿಲ್ಲ. ಪ್ರತೀದಿನ ಗಣೇಶನನ್ನು ನೋಡಲು ಬರುವ ಭಕ್ತರ ಸಂಖ್ಯೆ ಒಂದೂವರೆ ಮಿಲಿಯನ್ ಅಂದರೆ ಆ ಉತ್ಸವದ ಗಾತ್ರ ಮತ್ತು ವೈಭವವನ್ನು ಕಲ್ಪನೆ ಮಾಡಿಕೊಳ್ಳಬಹುದು. 5-6 ಮೀಟರ್ ಎತ್ತರದ ಈ ಮೋಹಕ ಗಣೇಶನ ಮೂರ್ತಿಯೇ ಒಂದು ಅದ್ಭುತವಾದ ಆಕರ್ಷಣೆ.

ಭಕ್ತರ ವ್ಯವಸ್ಥೆಯ ದೃಷ್ಟಿಯಿಂದ ಇಲ್ಲಿ ಎರಡು ಸರತಿಯ ಸಾಲುಗಳನ್ನು ಮಾಡಿರುತ್ತಾರೆ. ಒಂದು ಸಾಲು ನವಸಾಚಿ ಲೈನ್ (ಹರಕೆಯ ಸಾಲು). ಈ ಸಾಲಿನಲ್ಲಿ ಬಂದವರಿಗೆ ಗಣಪತಿಯ ಪೀಠವನ್ನು ಏರಿ ದೇವರ ಪಾದಸ್ಪರ್ಶ ಮಾಡುವ ಅವಕಾಶ ಇದೆ. ಮೈಲುಗಟ್ಟಲೆ ಉದ್ದವಾದ ಈ ಸಾಲಿನಲ್ಲಿ ಬಂದು ದರ್ಶನ ಪೂರ್ತಿಯಾಗಲು 25ರಿಂದ 30 ಘಂಟೆ ಬೇಕು ಎನ್ನುತ್ತಾರೆ ಸ್ವಯಂಸೇವಕರು! ಹಾಗೆಯೇ ಎರಡನೇ ಸರತಿಯ ಸಾಲು ದರ್ಶನ್ ಲೈನ್. ಇಲ್ಲಿ ಪೀಠವನ್ನು ಏರಲು ಅವಕಾಶ ಇರುವುದಿಲ್ಲ. ಗಣಪತಿಯನ್ನು ಹತ್ತಿರದಿಂದ ಕಣ್ಣು ತುಂಬಿಸಿಕೊಳ್ಳಲು ಮಾತ್ರ ಅವಕಾಶ. ಈ ದರ್ಶನ ಪೂರ್ತಿಯಾಗಲು 15ರಿಂದ 17 ಘಂಟೆ ಬೇಕು! ಇತ್ತೀಚಿನ ವರ್ಷಗಳಲ್ಲಿ VIP ದರ್ಶನಕ್ಕೂ ಅವಕಾಶ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ಪ್ರತ್ಯೇಕವಾದ ವ್ಯವಸ್ಥೆ ಮಾಡಿದ್ದಾರೆ. ಅತ್ಯಂತ ಶಿಸ್ತುಬದ್ಧವಾದ 1200 ಸ್ವಯಂಸೇವಕರು 11 ದಿನವೂ ಗಣೇಶನ ಸೇವೆಗೆ ಸಿದ್ಧರಾಗಿ ನಿಂತಿರುತ್ತಾರೆ. ಇಡೀ ಪ್ರದೇಶದಲ್ಲಿ ಒಂದೇ ಒಂದು ರಾಜಕೀಯ ಪಕ್ಷದ ಬಾವುಟ ಅಥವಾ ಹೋರ್ಡಿಂಗ್ ಇಣುಕಲು ಸಮಿತಿಯು ಅವಕಾಶ ಕೊಡುವುದಿಲ್ಲ! ಯಾರೂ ಇಲ್ಲಿ ರಾಜಕೀಯ ತೆಗೆದುಕೊಂಡು ಬರುವುದಿಲ್ಲ. ಅದರಿಂದಾಗಿ ‘ಆಮ್ಚಾ ಗಣಪತಿ ಬಾಪ್ಪಾ’ ಭಾವನೆಯು ಇಲ್ಲಿ ಜೀವಂತವಾಗಿದೆ.

ಕಾಂಬಳೆ ಕುಟುಂಬದ ಉಸ್ತುವಾರಿ

ಆರಂಭದ 50 ವರ್ಷ ವೆಂಕಟೇಶ್ ಕಾಂಬಳೆ ಎಂಬವರು ಮುಂದೆ ನಿಂತು ಈ ಉತ್ಸವದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಮೂರ್ತಿಯನ್ನು ಅವರೇ ಮಾಡುತ್ತಿದ್ದರು. ಈಗ ಅವರ ಸೋದರಳಿಯ ಸಂತೋಷ್ ಕಾಂಬಳೆ ಹೊಣೆಯನ್ನು ಹೊತ್ತಿದ್ದಾರೆ. ಚೌತಿಯ 15 ದಿನಗಳ ಮೊದಲೇ ಗಣೇಶನ ಮೂರ್ತಿಯ ಅನಾವರಣ ಉತ್ಸವ ನಡೆಯುತ್ತದೆ. ಅದಕ್ಕೂ ಸಾವಿರಾರು ಜನರು ಸೇರುತ್ತದೆ. ಆದರೆ ಚೌತಿಯಂದು ಗಣೇಶನ ದೃಷ್ಟಿ ಬಿಡಿಸಿದ ನಂತರ ಧಾರ್ಮಿಕ ಉತ್ಸವಗಳು ಆರಂಭ ಆಗುತ್ತವೆ. ಗಣೇಶನ ಪ್ರಸಾದವಾಗಿ ಲಕ್ಷಾಂತರ ಜನರು ಬೂಂದಿ ಲಡ್ಡು ಸ್ವೀಕಾರ ಮಾಡುತ್ತಾರೆ.

91 ವರ್ಷಗಳಲ್ಲಿ ಉತ್ಸವದ ವೈಭವ, ಆಕರ್ಷಣೆ ಎಂದಿಗೂ ಮಸುಕಾಗಿಲ್ಲ!

ಕೋರೋನಾ ಮಹಾಮಾರಿಯ ಕಾರಣಕ್ಕೆ ಒಂದು ವರ್ಷ ಈ ಉತ್ಸವ ನಡೆದಿಲ್ಲ ಎಂಬುದನ್ನು ಬಿಟ್ಟರೆ 91 ವರ್ಷಗಳ ಅವಧಿಯಲ್ಲಿ ಯಾವತ್ತೂ ಈ ಉತ್ಸವ ನಿಂತಿಲ್ಲ. ಮಹಾನ್ ನಟರು, ಕ್ರಿಕೆಟರುಗಳು, ರಾಜಕಾರಣಿಗಳು ಈ ಗಣೇಶನ ದರ್ಶನವನ್ನು ಮಾಡಲು ತುದಿಗಾಲಿನಲ್ಲಿ ನಿಂತಿರುತ್ತಾರೆ. 91 ವರ್ಷಗಳಲ್ಲಿ ಉತ್ಸವದ ವೈಭವ, ಜನಸಾಗರ ಕಡಿಮೆ ಆಗಿಲ್ಲ ಎನ್ನುತ್ತವೆ ವರದಿಗಳು. 2011ರಲ್ಲಿ ಈ ಗಣೇಶನ ಮೂರ್ತಿಯ ಮುಖವನ್ನು ಪೇಟೆಂಟ್ ಮಾಡಲಾಗಿದೆ. ಹರಕೆಯ ರೂಪದಲ್ಲಿ ಕೋಟಿಗಟ್ಟಲೆ ಹಣ, ಬಂಗಾರ ಮತ್ತು ಬೆಳ್ಳಿ ಹರಿದುಬರುತ್ತಿದೆ. ಸಮಿತಿಯು ಅತ್ಯಂತ ಪಾರದರ್ಶಕವಾಗಿ ಈ ದುಡ್ಡಿನ ಜತನ ಮಾಡುತ್ತಿದೆ. ಉಳಿತಾಯವಾದ ದುಡ್ಡಿನಿಂದ ಸಮಿತಿಯು ಉಚಿತ ವೈದ್ಯಕೀಯ ಶಿಬಿರಗಳನ್ನು ಸಂಘಟನೆ ಮಾಡುತ್ತಿದೆ. ವರ್ಷಪೂರ್ತಿ ಡಯಾಲಿಸಿಸ್ ಶಿಬಿರಗಳು ನಡೆಯುತ್ತವೆ. ಈ ಉತ್ಸವ 51 ಕೋಟಿ ರೂಪಾಯಿಗಳಿಗೆ ವಿಮೆ ಆಗಿರುವುದು ಕೂಡ ವಿಶೇಷ.

ಭಕ್ತಿ, ಭಾವದ ಬೀಳ್ಕೊಡುಗೆ

ಈ ಗಣೇಶನನ್ನು ನೋಡಲು ಸುತ್ತಲಿನ ಗುಜರಾತ್, ಮದ್ಯಪ್ರದೇಶ, ಕರ್ನಾಟಕ ಮತ್ತು ಬಿಹಾರಗಳಿಂದ ಕೂಡ ಜನರು ಬರುತ್ತಾರೆ. 11 ದಿನಗಳ ನಿರಂತರ ಪೂಜೆ, ಪುನಸ್ಕಾರಗಳು ನಡೆದು ಅನಂತ ಚತುರ್ದಶಿಯ (ನೋಂಪಿ) ದಿನ ಗಣೇಶನ ಮೂರ್ತಿಯ ವಿಸರ್ಜನೆಯ ಮೆರವಣಿಗೆಯು ಅತ್ಯಂತ ಭಾವುಕವಾಗಿಯೇ ಇರುತ್ತದೆ. ಮೈಲುಗಟ್ಟಲೆ ಉದ್ದವಾಗಿ ಸಾಗಿ ಬರುವ ಈ ಶೋಭಾಯಾತ್ರೆಯನ್ನು ನೋಡುವುದೇ ಒಂದು ಅದ್ಭುತವಾದ ಅನುಭೂತಿ. ಈ ಶೋಭಾಯಾತ್ರೆ ಮುಗಿದು ಅರಬ್ಬಿ ಸಮುದ್ರದಲ್ಲಿ ಮೂರ್ತಿಯ ಜಲಸ್ತಂಭನ ಮುಗಿಯಲು ಕನಿಷ್ಠ 24 ಘಂಟೆಗಳು ಬೇಕಾಗುತ್ತವೆ!

ಗಣಪತಿ ಬಾಪ್ಪ ಮೊರೆಯ, ಎವಚೇ ವರ್ಷಾ ಲೌಟಕೆ ಆ (ಮುಂದಿನ ವರ್ಷ ಮರಳಿ ಬಾ) ಎಂಬ ಜಯಘೋಷಗಳ ನಡುವೆ ಈ ವಿಶ್ವದ ಬೃಹತ್ ಗಣೇಶನ ಉತ್ಸವ ಮುಗಿಯುತ್ತದೆ, ಮುಂದಿನ ವರ್ಷದ ನಿರೀಕ್ಷೆಯಲ್ಲಿ…!

ಈ ಬರಹ ಓದಿ: Infosys: ಸ್ಫೂರ್ತಿಪಥ ಅಂಕಣ: ಅಜೀಂ ಪ್ರೇಂಜಿ ಸಂದರ್ಶನದಲ್ಲಿ ರಿಜೆಕ್ಟ್ ಆದ ಯುವಕ ಐಟಿ ಸಾಮ್ರಾಜ್ಯವನ್ನೇ ಕಟ್ಟಿದರು!