ಅವಲೋಕನ
ಶ್ರೀನಿವಾಸುಲು, ಸದಸ್ಯ ಕಾರ್ಯದರ್ಶಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ಘನ ತ್ಯಾಜ್ಯ ನಿರ್ವಹಣೆಯು ನಗರೀಕರಣ, ಜನಸಂಖ್ಯಾ ಸ್ಫೋಟ ಮತ್ತು ಬದಲಾಗುತ್ತಿರುವ ಜೀವನ ಶೈಲಿಯ ಜತೆಗೆ ಆಧುನೀ ಕರಣದ ಗಂಭೀರ ಸಮಸ್ಯೆಯಾಗಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಘನತ್ಯಾಜ್ಯದ ಉತ್ಪಾದನೆ ಯಾಗುತ್ತಿದೆ.
ದೇಶದಲ್ಲಿ ಪ್ರತಿ ನಿತ್ಯ ಸುಮಾರು 72 ಮಿಲಿಯನ್ ಟನ್‌ನಷ್ಟು ಘನತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅದರಲ್ಲಿ ಪ್ರತಿನಿತ್ಯ 43 ಮಿಲಿಯನ್ ಟನ್‌ನಷ್ಟು ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ ಮತ್ತು ಇದರಲ್ಲಿ ಕೇವಲ 12 ಮಿಲಿಯನ್ ಟನ್‌ನಷ್ಟು ತ್ಯಾಜ್ಯವು ಸಂಸ್ಕರಣಗೊಳ್ಳುತ್ತಿದೆ. ಪ್ರತಿದಿನ ಸಂಸ್ಕರಣವಾಗದ ಸುಮಾರು 31 ಮಿಲಿಯನ್ ಟನ್ ಘನತ್ಯಾಜ್ಯವನ್ನು ಭೂಭರ್ತಿ ಜಾಗದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಘನತ್ಯಾಜ್ಯ ಉತ್ಪಾದನೆಯು 2030ರ ವೇಳೆಗೆ ಪ್ರತಿ ನಿತ್ಯ 165 ಮಿಲಿಯನ್ ಟನ್ ಹಾಗೂ 2050ರ ವೇಳೆಗೆ ದಿನನಿತ್ಯವೂ 436 ಮಿಲಿಯನ್ ಟನ್ ತಲುಪುವ ನಿರೀಕ್ಷೆಯಿದೆ.
ನಗರಗಳಲ್ಲಿ ಪ್ರಸ್ತುತ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಸಂಸ್ಕರಿಸದೆ ವಿಲೇವಾರಿ ಮಾಡುತ್ತಿದ್ದರೆ, ಇಡೀ ದೇಶದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ವರ್ಷಕ್ಕೆ ಸುಮಾರು 1240 ಹೆಕ್ಟೇರ್ ಭೂಮಿ ಬೇಕಾಗುತ್ತದೆ. ನಗರದಲ್ಲಿನ ಭೂ ಸಂಪನ್ಮೂಲವು ಸೀಮಿತ ಮತ್ತು ಅಮೂಲ್ಯವಾದುದರಿಂದ, ಭೂಭರ್ತಿ ಮಾಡುವ ಕಾರ್ಯವನ್ನು ಅವಶ್ಯಕತೆಗೆ ತಕ್ಕಂತೆ ಕಡಿಮೆ ಮಾಡಲು ಕ್ರಿಯಾ ಯೋಜನೆಯನ್ನು ರೂಪಿಸುವುದು ಅವಶ್ಯಕ.
ಘನತ್ಯಾಜ್ಯವನ್ನು ಭೂ ಪ್ರದೇಶಗಳಲ್ಲಿ ತುಂಬಿಸುವುದರಿಂದ ಅಪಾರ ಪ್ರಮಾಣದಲ್ಲಿ ಮಣ್ಣು ಕೊಳೆತು ಅಂತರ್ಜಲ ಕಲುಷಿತ ಗೊಳ್ಳುತ್ತದೆ. ಇದರಿಂದ ಅಮೂಲ್ಯ ವಾದ ಅಂತರ್ಜಲಕ್ಕೆ ಸರಿಪಡಿಸಲಾಗದ ಹಾನಿಯನ್ನುಂಟು ಮಾಡುತ್ತದೆ. ಹೆಚ್ಚಿನ ನಗರ ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯವನ್ನು ವಿಲೇವಾರಿ ಮಾಡಲು ಸುತ್ತಮುತ್ತಲಿನ ಹಳ್ಳಿಗಳ ಭೂ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತವೆ.
ಇಂಥ ಆಳದ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಘನತ್ಯಾಜ್ಯ ಸುರಿಯುವುದರಿಂದ, ಮೀಥೇನ್ ಮತ್ತು ಹೈಡ್ರೋಜನ್ ಸಲ್ಫೆಡ್ ನಂಥ ಹಸಿರುಮನೆ ಅನಿಲಗಳು ಉತ್ಪಾದನೆಗೊಂಡು ಅಂತರ್ಜಲ ಮಾಲಿನ್ಯವಾಗುವುದಷ್ಟೇ ಅಲ್ಲ, ಈ ಪ್ರದೇಶದಲ್ಲಿ ದುರ್ವಾಸನೆ ಯುಂಟಾಗಿ 2-3 ಕಿಲೋ ಮೀಟರ್‌ಗಳವರೆಗೆ ದುರ್ವಾಸನೆ ಹರಡಿಕೊಳ್ಳುತ್ತದೆ. ಇದರಿಂದ ಪಟ್ಟಣಗಳು ಮತ್ತು ನಗರಗಳಲ್ಲಿ ಅತಿಯಾದ ನೈಸರ್ಗಿಕ ಸಂಪನ್ಮೂಲ ಕೊರತೆ ಉಂಟಾಗಿ ಮಾನವ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಘನತ್ಯಾಜ್ಯ ವಿಲೇವಾರಿ ಮಾಡುವ ಪ್ರದೇಶಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಘನತ್ಯಾಜ್ಯ ಸುರಿಯುವುದರ ವಿರುದ್ಧ ಜನಸಾಮಾನ್ಯರು ವ್ಯಾಪಕವಾಗಿ ಪ್ರತಿಭಟನೆ ನಡೆಸುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದಕ್ಕೆ ತದ್ವಿರುದ್ಧವಾಗಿ, ಘನತ್ಯಾಜ್ಯ ವನ್ನು ವೈಜ್ಞಾನಿಕವಾಗಿ ನಿರ್ವಹಿಸಿದರೆ ಅದು ಅಮೂಲ್ಯವಾದ ಗೊಬ್ಬರ ಮತ್ತು ಜೈವಿಕ ಅನಿಲ ಮಾತ್ರವಲ್ಲದೆ, ಆರ್‌ಡಿಎ-ನಂಥ
ನವೀಕರಿಸಬಹುದಾದ ಇಂಧನ ಶಕ್ತಿಯ ಮೂಲವಾಗಿ ಪರಿವರ್ತಿಸಬಹುದಾಗಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 2016ರಲ್ಲಿ ಘನತ್ಯಾಜ್ಯ ನಿಯಮಗಳನ್ನು ಜಾರಿಗೆ ತರುವ ಮೂಲಕ ಕರ್ನಾಟಕ ದಲ್ಲಿ ವೈಜ್ಞಾನಿಕ ಘನತ್ಯಾಜ್ಯ ನಿರ್ವಹಣೆಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಿದೆ. ಸ್ಥಳೀಯ ನಗರ ಮತ್ತು ಪೌರಸಂಸ್ಥೆ ಗಳಿಂದ ದಿನವೊಂದಕ್ಕೆ ಸುಮಾರು 13200 ಟನ್ ಘನತ್ಯಾಜ್ಯ ಉತ್ಪಾದನೆಯಾಗುತ್ತದೆ. ಶೇ. 60 ರಿಂದ 65ರವರೆಗೆ ಹಸಿ/ಸಾವಯವ ತ್ಯಾಜ್ಯ, ಶೇ.25 ರಿಂದ 35ರಷ್ಟು ಒಣ ತ್ಯಾಜ್ಯ ಮತ್ತು ಶೇ. 10 ರಿಂದ 20ರಷ್ಟು ಕಟ್ಟಡ ಉರುಳಿಸುವ ಮರು ನಿರ್ಮಾಣದ ತ್ಯಾಜ್ಯ ಮತ್ತು ಜಡತ್ಯಾಜ್ಯ ಉತ್ಪನ್ನವಾಗುತ್ತಿದೆ.
2031ರ ವೇಳೆಗೆ ಬೆಂಗಳೂರಿನ ಪ್ರತಿನಿತ್ಯ ಉತ್ಪತ್ತಿಯಾಗುವ ಘನತ್ಯಾಜ್ಯದ ಪ್ರಮಾಣ 13000 ಟನ್ ದಾಟಲಿದೆ. ಪೌರಾಡಳಿತ ಸಂಸ್ಥೆಗಳಲ್ಲಿ ಮನೆ ಮನೆಗೆ ತೆರಳಿ ಕಸದ ಸಂಗ್ರಹಣೆ, ಸರಿಯಾದ ರೀತಿಯಲ್ಲಿ ವಿಂಗಡಣೆ, ಸಾಗಾಣಿಕೆ ಹಾಗೂ ವಿಲೇವಾರಿ ಮಾಡಬೇಕೆಂದು ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಿದೆ. ಉಡುಪಿ ಮತ್ತು ಮೈಸೂರಿನಂಥ ಜಿಗಳು ಮನೆ ಬಾಗಿಲಿನಿಂದ ಕಸ ಸಂಗ್ರಹಣೆ ಮಾಡುವಲ್ಲಿ ಹೆಚ್ಚಿನ ಶೇಕಡಾವಾರು ಸಾಧನೆಯನ್ನು ಯಶಸ್ವಿಯಾಗಿ ಮಾಡಿವೆ. ಆದರೆ, ಕಲಬುರ್ಗಿ, ಕೋಲಾರ, ದಾವಣಗೆರೆ ಮತ್ತು ಬೆಂಗಳೂರಿನಂಥ ಜಿಲ್ಲೆಗಳಲ್ಲಿ ಸುಧಾರಣೆಗೆ ಇನ್ನೂ ಸಾಕಷ್ಟು ಅವಕಾಶ ಗಳಿವೆ.
ಶಿವಮೊಗ್ಗ ಮತ್ತು ಕುಂದಾಪುರದಂಥ ಕೆಲವು ಸ್ಥಳೀಯ ಸಂಸ್ಥೆಗಳು ಪ್ರತ್ಯೇಕವಾಗಿ ಹಸಿ ತ್ಯಾಜ್ಯವನ್ನು ಸಂಗ್ರಹಿಸಿ, ಸಮರ್ಥವಾಗಿ ನಿರ್ವಹಿಸುವ ಸಲುವಾಗಿ ಮಿಶ್ರಗೊಬ್ಬರ, ಸಮುದಾಯ ಮಿಶ್ರಗೊಬ್ಬರದಂಥ ತಂತ್ರ ಗಳನ್ನು ಅಳವಡಿಸಿಕೊಂಡಿವೆ. ಹಸಿ ತ್ಯಾಜ್ಯವನ್ನು ಏರೋಬಿಕ್ ಮಿಶ್ರಗೊಬ್ಬರ, ವರ್ಮಿಕಂಪೋಸ್ಟಿಂಗ್ ಮತ್ತು ಆಮ್ಲಜನಕರಹಿತ ಜೀರ್ಣಕ್ರಿಯೆ ಅಥವಾ ಆಮ್ಲಜನಕ ಸಹಿತ ಜೈವಿಕ – ಮೆಥನೇಷನ್ ಮೂಲಕ ಸಾವಯವ ಗೊಬ್ಬರವನ್ನಾಗಿಸಬಹುದು.
ಒಣ ತ್ಯಾಜ್ಯವನ್ನು ರಿಫ್ಯೂಸ್ ಡಿರೈವ್ಡ್ ಇಂಧನ (ಆರ್‌ಡಿಎಫ್), ಪ್ಯಾಲೆಟೈಸೇಶನ್, ದಹನ ಮತ್ತು ಉಷ್ಣ ಪೈರೋಲಿಸಿಸ್ ಮೂಲಕ ಉತ್ತಮವಾಗಿ ನಿರ್ವಹಿಸಿ, ಅಂತಿಮವಾಗಿ ದೊರಕುವ ಅತ್ಯಂತ ಕಡಿಮೆ ಪ್ರಮಾಣದ ಯಾವುದೇ ಉಪಯೋಗಕ್ಕೆ ಬಾರದ ತ್ಯಾಜ್ಯ ವನ್ನು ಮಾತ್ರ ಭೂಭರ್ತಿ ಮಾಡಬೇಕು. ಸಾವಯವ ತ್ಯಾಜ್ಯದ ವಿಭಜನೆಯ ಮೂಲಕ ಗೊಬ್ಬರವನ್ನು ಉತ್ಪಾದಿಸುವ ವೈಜ್ಞಾನಿಕ ವಿಧಾನವೆಂದರೆ ಮಿಶ್ರಗೊಬ್ಬರ. ಗೊಬ್ಬರವು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಸಸ್ಯ ಪೋಷಕಾಂಶಗಳು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುತ್ತದೆ.
ಮಿಶ್ರಗೊಬ್ಬರವನ್ನೇ ರಸಗೊಬ್ಬರಗಳಾಗಿ ಕೂಡ ಬಳಸಬಹುದು. ಪ್ರತಿ ನಿತ್ಯ 2780 ಟನ್ ಸಾವಯವ ಘನತ್ಯಾಜ್ಯವನ್ನು ಬಳಸಿ ಸುಮಾರು 556 ಟನ್ ಗೊಬ್ಬರವನ್ನು ತಯಾರಿಸಬಹುದು ಮತ್ತು ಇದರಿಂದ ಪ್ರತಿ ನಿತ್ಯ ಅಂದಾಜು 27.8 ಲಕ್ಷ ರು. ಆದಾಯ
ಗಳಿಸಬಹುದಾಗಿದೆ. ಪೌರಾಡಳಿತ ಸಂಸ್ಥೆಗಳು ತ್ಯಾಜ್ಯ ನಿರ್ವಹಣೆಯ ಆರ್ಥಿಕ ಕಾರ್ಯಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಸಾವಯವ ತ್ಯಾಜ್ಯವನ್ನು ಕಾಂಪೋಸ್ಟ್ ಆಗಿ ಪರಿವರ್ತಿಸುವಲ್ಲಿ ಸುಧಾರಿತ ಕ್ರಮಗಳನ್ನು ಅಳವಡಿಸಿ
ಕೊಳ್ಳುವ ಮೂಲಕ ಹೆಚ್ಚು ಆದಾಯವನ್ನು ಗಳಿಸಲು ಯೋಜಿಸಬೇಕು.
ವರ್ಮಿ – ಕಾಂಪೋಸ್ಟಿಂಗ್, ಸಹ – ಮಿಶ್ರಗೊಬ್ಬರ, ಇರ್ನಾಕ್ಯುಲಮ್ ಆಧಾರಿತ ಮಿಶ್ರಗೊಬ್ಬರದಂಥ ಸುಧಾರಿತ ಮಿಶ್ರಗೊಬ್ಬರ ವಿಧಾನಗಳನ್ನು ಕಾರ್ಯಗತಗೊಳಿಸಬಹುದು. ಪ್ರಸ್ತುತ, ಕರ್ನಾಟಕದಲ್ಲಿ ಪ್ರತಿ ನಿತ್ಯ ಉತ್ಪತ್ತಿಯಾಗುತ್ತಿರುವ 6145 ಟನ್ ಹಸಿ ತ್ಯಾಜ್ಯದಲ್ಲಿ ಕೇವಲ 3366 ಟನ್ ಹಸಿ ತ್ಯಾಜ್ಯವನ್ನು ಬಳಸಿಕೊಂಡು, ಪ್ರತಿನಿತ್ಯ ಕೇವಲ 672 ಟನ್ ಕಾಂಪೋಸ್ಟ್ ಆಗಿ ಪರಿವರ್ತಿಸ ಲಾಗುತ್ತಿದೆ.
ಇದನ್ನು ರೈತರಿಗೆ ಕೃಷಿ ಇಲಾಖೆಯ ಮೂಲಕ ಕಿಲೋ ಒಂದಕ್ಕೆ 5 ರು. ಬೆಲೆಗೆ ಮಾರಾಟ ಮಾಡಲಾಗುತ್ತಿದೆ, ದಕ್ಷಿಣ ಕನ್ನಡ, ಶಿವಮೊಗ್ಗ, ಮೈಸೂರು, ಬೆಳಗಾವಿ ಮತ್ತು ಧಾರವಾಡದಂಥ ಜಿಗಳು ಸಾವಯವ ತ್ಯಾಜ್ಯದಿಂದ ಪ್ರತಿ ನಿತ್ಯ ಅಂದಾಜು 20 ಟನ್‌ಗಳಿಗೂ ಹೆಚ್ಚು ಮಿಶ್ರಗೊಬ್ಬರವನ್ನು ಉತ್ಪಾದಿಸುತ್ತಿವೆ. ಬಳ್ಳಾರಿ, ರಾಯಚೂರು, ಯಾದಗಿರಿ, ಗದಗ, ಕೊಡಗು, ಚಾಮರಾಜ ನಗರ, ಮಂಡ್ಯ, ಮತ್ತು ಚಿತ್ರದುರ್ಗಗಳಲ್ಲಿ ಪ್ರತಿ ನಿತ್ಯ ಕೇವಲ 5 ಟನ್ ಕಾಂಪೋಸ್ಟ್ ಉತ್ಪನ್ನ ಮಾಡಲಾಗುತ್ತಿದೆ. ಪ್ರತಿ ನಿತ್ಯ ರಾಜ್ಯದಲ್ಲಿ ಸಂಗ್ರಹವಾಗುತ್ತಿರುವ ಹಸಿ ತ್ಯಾಜ್ಯದಲ್ಲಿ ಕೇವಲ ಶೇ.55ರಷ್ಟು ತ್ಯಾಜ್ಯವನ್ನು ಮಾತ್ರ ಕಾಂಪೋಸ್ಟ್ ಆಗಿ ಪರಿವರ್ತಿಸ ಲಾಗುತ್ತಿದ್ದು, ಸುಧಾರಣೆಗೆ ಹೇರಳ ಅವಕಾಶಗಳಿವೆ.
ಕರ್ನಾಟಕದಲ್ಲಿ ಪ್ರತಿ ನಿತ್ಯ ಸುಮಾರು 3476 ಟನ್ ಒಣ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದರಲ್ಲಿ 515 ಟನ್ ಒಣ ಕಸವನ್ನು ಮರು ಬಳಕೆ ಮಾಡಲಾಗುತ್ತಿದೆ ಮತ್ತು 215 ಟನ್‌ಗಳ ಒಣಕಸವನ್ನು ರಿಫ್ಯೂಸ್ ಡೆರಿವ್ಡ್ ಇಂಧನಗಳಾಗಿ (ಡಿಎಫ್ಆರ್) ಕೈಗಾರಿಕೆ ಗಳಲ್ಲಿ ಉಪಯೋಗಿಸಲಾಗುತ್ತಿದೆ. 117.88 ಟನ್ ಒಣಕಸವನ್ನು ಸಿಮೆಂಟ್ ಘಟಕಗಳಿಗೆ ಶಕ್ತಿಯ ಮೂಲವಾಗಿ ಕಳುಹಿಸಲಾಗುತ್ತಿದೆ. ಆದಾಗ್ಯೂ 2628.12 ಟನ್ ಒಣಕಸವನ್ನು ಉಪಯುಕ್ತ ಇಂಧನ ಸಂಪನ್ಮೂಲವಾಗಿ ಪರಿವರ್ತಿಸದೆ ಭೂಭರ್ತಿ ಮಾಡಲಾಗುತ್ತಿದೆ.
ಜೈವಿಕ ವಿಘಟನೀಯವಾದ (ದಹನಕಾರಿ) ಹಾಗೂ ಜೈವಿಕವಾಗಿ ವಿಘಟಿಸಲಾಗದ ವಸ್ತುಗಳನ್ನು ಒಳಗೊಂಡಿರುವ ವಾಣಿಜ್ಯ ಚಟುವಟಿಕೆಗಳ ದೇಶೀಯ ಹಾಗೂ ವಿದೇಶೀಯ ಒಣತ್ಯಾಜ್ಯದಿಂದ ಆರ್ .ಡಿ.ಎಫ್ ಉತ್ಪಾದಿಸಲಾಗುತ್ತಿದೆ. 2000 ಕೆಜಿಗಿಂತಲೂ
ಹೆಚ್ಚಿನ ಕ್ಯಾಲೊರಿಫಿಕ್ ಮೌಲ್ಯವನ್ನು ಹೊಂದಿರುವ ಆರ್ .ಡಿ.ಎಫ್ ನ್ನು (ಕೆ.ಎಲ್.ಸಿ) ಸಿಮೆಂಟ್ ಕೈಗಾರಿಕೆಗಳಲ್ಲಿ ಉತ್ತಮ ಪರ್ಯಾಯ ಶಕ್ತಿಯ ಮೂಲವಾಗಿ ಬಳಸಬಹುದಾಗಿದೆ. ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕಗಳಲ್ಲಿಯೂ ಈ ತ್ಯಾಜ್ಯ ವನ್ನು ಬಳಸಬಹುದಾಗಿದೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವಿವಿಧ ಕೈಗಾರಿಕೆಗಳಲ್ಲಿ ಆರ್‌ಡಿಎಫ್ ಬಳಕೆಯ ಮಾರ್ಗದರ್ಶಿ ಸೂತ್ರಗಳಲ್ಲಿ ಆರ್‌ಡಿಎಫ್ ನ್ನು ಪ್ರತಿ ಟನ್‌ಗೆ 600 ರು. ಗಳಿಂದ 2400 ರು. ಬೆಲೆಯಲ್ಲಿ ಮೌಲ್ಯೀಕರಿಸಲಾಗಿದೆ. ಇದು ನಗರಾಡಳಿತ ಸಂಸ್ಥೆಗಳಿಗೆ ನಿರಂತರ ಆದಾಯದ ಮೂಲವಾಗಿದೆ.
ಪ್ರಮುಖ ಜಿಲ್ಲೆಗಳಾದ ಮೈಸೂರು, ಶಿವಮೊಗ್ಗ, ದಕ್ಷಿಣಕನ್ನಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ ಮತ್ತು ಕಲಬುರ್ಗಿ ಪೌರಾಡಳಿತ ಸಂಸ್ಥೆಗಳು ಪ್ರತಿ ನಿತ್ಯ 20 ಟನ್‌ಗಳಿಗಿಂತಲೂ ಹೆಚ್ಚು ಒಣ ತ್ಯಾಜ್ಯವನ್ನು ಮರುಬಳಕೆ ಮಾಡುತ್ತಿವೆ. ಬೆಂಗಳೂರು ಗ್ರಾಮೀಣ, ದಾವಣಗೆರೆ, ಚಿಕ್ಕಬಳ್ಳಾಪುರ, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಉಡುಪಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಸ್ಥಳೀಯ ಪೌರಾಡಳಿತ ಸಂಸ್ಥೆಗಳು ಪ್ರತಿ ನಿತ್ಯ 5 ಟನ್‌ಗಳಿಗಿಂತಲೂ ಕಡಿಮೆ ಒಣ
ತ್ಯಾಜ್ಯವನ್ನು ಮರುಬಳಕೆ ಮಾಡುತ್ತಿವೆ.
ಒಣ ತ್ಯಾಜ್ಯವನ್ನು ಆರ್‌ಡಿಎಫ್ ಆಗಿ ಪರಿವರ್ತಿಸಲು ಕೋಲಾರ, ಬೆಂಗಳೂರು ನಗರ, ತುಮಕೂರು, ಉತ್ತರ ಕನ್ನಡ, ಬೀದರ್, ಬೆಳಗಾವಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತ್ಯಾಜ್ಯದಿಂದ ಶಕ್ತಿ ಉಪಕ್ರಮದ ಹೆಸರಿನಲ್ಲಿ ಪ್ರಮುಖ ಯೋಜನೆಗಳನ್ನು ಪ್ರಸ್ತಾಪಿಸಿದ್ದು, ಅದು ಇನ್ನೂ ಆರಂಭಿಕ ಹಂತದಲ್ಲಿದೆ. ಉಳಿದೆಡೆ ಒಣ ತ್ಯಾಜ್ಯವನ್ನು ಮೌಲ್ಯ ವರ್ಧನೆ ಮಾಡಲು ದೊಡ್ಡ ಅವಕಾಶವಿದೆ. ಇಲ್ಲವಾದಲ್ಲಿ ಅದು ಭೂಮಿಯೊಂದಿಗೆ
ಮಿಶ್ರಣಗೊಂಡು ಗಂಭೀರ ಪರಿಸರ ಸಮಸ್ಯೆಯನ್ನು ಉಂಟುಮಾಡುತ್ತದೆ.
ಕಳಪೆ ತ್ಯಾಜ್ಯ ನಿರ್ವಹಣೆಯಿಂದಾಗಿ ರಾಜ್ಯಾದ್ಯಂತ ಸುಮಾರು 215 ಭೂಭರ್ತಿ ಪ್ರದೇಶಗಳನ್ನು ಗುರುತಿಸಿ ಉಪಯೋಗಿಸ ಬೇಕಾದ ಅನಿವಾರ್ಯತೆ ಇದೆ. ಬೆಂಗಳೂರಿನ 10 ಭೂಭರ್ತಿ ಪ್ರದೇಶಗಳಲ್ಲದೆ, ಬೆಂಗಳೂರು ಸುತ್ತಮುತ್ತ ಅನೇಕ ಅಕ್ರಮ ಭೂಭರ್ತಿ ಸ್ಥಳ ಗಳನ್ನು ಅನಧಿಕೃತವಾಗಿ ಸ್ಥಾಪಿಸಲಾಗಿದೆ. ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ವಿಧಾನಗಳ ಸಂಪನ್ಮೂಲಗಳು ವಿರಳ ಎಂಬ ಅಂಶವನ್ನು ಪರಿಗಣಿಸಿ, ಸಮರ್ಥ ವೈಜ್ಞಾನಿಕ ಘನತ್ಯಾಜ್ಯ ನಿರ್ವಹಣೆಯ ಕಾರ್ಯತಂತ್ರವು ಅತ್ಯಂತ ತುರ್ತಾಗಿ ಅನುಷ್ಠಾನ ಗೊಳ್ಳಬೇಕು.
ಇದರಿಂದಾಗಿ ತ್ಯಾಜ್ಯವನ್ನು ಅಮೂಲ್ಯ ಶಕ್ತಿಯನ್ನಾಗಿಸಲು ಸಾಧ್ಯವಾಗುತ್ತದೆ. ಚೇತರಿಕೆ ಆಯ್ಕೆಯನ್ನು ಸೇರಿಸುವ ಮೂಲಕ ತ್ಯಾಜ್ಯ ನಿರ್ವಹಣೆಯ ಕ್ರಮವನ್ನು ಉತ್ತಮಗೊಳಿಸಬಹುದು. ಅಂದರೆ, ತ್ಯಾಜ್ಯದ ಉತ್ಪತ್ತಿಯನ್ನು ಕಡಿಮೆ ಮಾಡುವುದು, ಘನತ್ಯಾಜ್ಯವನ್ನು ಮರುಬಳಕೆ ಮಾಡುವುದು ಇಂದಿನ ಆದ್ಯತೆಯಾಗಿದೆ. ಘನ ತ್ಯಾಜ್ಯದಲ್ಲಿ ಕೇವಲ ಶೇ.10 ರಿಂದ 15ರಷ್ಟು ಮಾತ್ರ ಭೂಭರ್ತಿಯಲ್ಲಿ ತುಂಬಲು ಯೋಗ್ಯವಾಗಿರುತ್ತದೆ. ಉಳಿದ ಘನ ತ್ಯಾಜ್ಯವನ್ನು ಸಾವಯವ ಗೊಬ್ಬರ / ಆರ್‌ಡಿಎಫ್
ತಯಾರಿಕೆಯ ಜತೆಗೆ ಮರು ಬಳಕೆ ಮಾಡಲು ಬಳಸಬಹುದಾಗಿದೆ.
ತ್ಯಾಜ್ಯವನ್ನು ಬೇರ್ಪಡಿಸಿ ಅದನ್ನು ಉಪಯುಕ್ತ ವಸ್ತುಗಳನ್ನಾಗಿ ಪರಿವರ್ತಿಸುವುದರಿಂದ ಉಂಟಾಗುವ ಆರ್ಥಿಕ ಗಳಿಕೆಯು ನಗರ ಸ್ಥಳೀಯ ಸಂಸ್ಥೆಗಳ ಆದಾಯವನ್ನೂ ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಆರ್ಥಿಕ ಮತ್ತು ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣೆ ಯಲ್ಲಿ ಸುಸ್ಥಿರತೆಯನ್ನು ಸಾಧಿಸಲು ತ್ಯಾಜ್ಯ ಮರುಬಳಕೆ ಮತ್ತು ಮಿಶ್ರಗೊಬ್ಬರ ಚಟುವಟಿಕೆಗಳ ಅನುಷ್ಠಾನಕ್ಕೆ ನಾವು ಸಾಮೂಹಿಕ ಪ್ರಯತ್ನಗಳನ್ನು ಮಾಡುವ ತುರ್ತು ಸಮಯ ಇದಾಗಿದೆ.