ಸ್ವಾಸ್ಥ್ಯ ಸಂಪದ
yoganna55@gmail.com
ಮನುಷ್ಯನಾದ ಮೇಲೆ ಕರ್ತವ್ಯವನ್ನು ಮಾಡಲೇಬೇಕು. ಇಲ್ಲವಾದರೆ ಅದು ಅನಾರೋಗ್ಯಕ್ಕೆ ನಾಂದಿಯಾಗುತ್ತದೆ. ಲೌಕಿಕ ಜಗತ್ತಿನಲ್ಲಿ ಅವರವರ ಪಾಲಿನ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಂತೋಷ ಲಭಿಸುತ್ತದೆ; ಆದರೆ ಕಾರ್ಯಗಳಿಂದ ತಪ್ಪಿಸಿಕೊಂಡು ವೈರಾಗ್ಯ ಹೊಂದುವುದರಿಂದ ಮನ್ನಣೆ ಲಭಿಸುವುದಿಲ್ಲ.
ಸೃಷ್ಟಿಯಲ್ಲಿರುವ ಪ್ರತಿಯೊಂದು ಸಜೀವ ಮತ್ತು ನಿರ್ಜೀವ ವಸ್ತುವಿಗೂ ಸೃಷ್ಟಿಕರ್ತ ನಿಗದಿಪಡಿಸಿರುವ ತಮ್ಮದೇ ಆದ ಜವಾಬ್ದಾರಿಗಳಿವೆ. ಇವನ್ನು ಕಾರ್ಯಗತಗೊಳಿಸುವ ವಸ್ತುನಿಷ್ಠ ಕ್ರಿಯೆಯೇ ಕಾಯಕ. ಅವರವರ ಕಾಯಕಗಳನ್ನು ಜವಾಬ್ದಾರಿ ಯುತವಾಗಿ ಚಾಚೂತಪ್ಪದಂತೆ ನಿರ್ವಹಿಸುವು ದರಿಂದ ಮಾತ್ರ ಸೃಷ್ಟಿಯನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಸಾಧ್ಯ.
ಸೃಷ್ಟಿಯಲ್ಲಿ ಯಾರ‍್ಯಾರು ಯಾವ್ಯಾವ ಕಾಯಕಗಳನ್ನು ಮಾಡಬೇಕೆಂಬ ಅರಿವು ಅತ್ಯವಶ್ಯಕ. ಮನುಷ್ಯನನ್ನು ಹೊರತುಪಡಿಸಿದ ಇತರೆಲ್ಲವುಗಳು ತಂತಮ್ಮ ಪೂರ್ವಯೋಜಿತ ಕಾಯಕಗಳನ್ನು ಚಾಚೂತಪ್ಪದೆ ನಿರ್ವಹಿಸಿ ಸೃಷ್ಟಿಯು ಸುಸ್ಥಿತಿಯಲ್ಲಿ ಮುಂದುವರಿಯುವುದಕ್ಕೆ ಪೂರಕವಾಗುತ್ತವೆ. ಆದರೆ ಮನುಷ್ಯ ಮಾತ್ರ ಇದಕ್ಕೆ ಹೊರತಾಗಿದ್ದು, ತನ್ನ ಪೂರ್ವಯೋಜಿತ ಕಾರ್ಯಗಳನ್ನರಿಯದೆ ಅಥವಾ ಅರಿತೂ ಸೃಷ್ಟಿಯ ಸುಸ್ಥಿತಿಯ ಮುಂದುವರಿಕೆಗೆ ಕಂಟಕಪ್ರಾಯ ವಾಗುವಂಥ ಕರ್ಮಗಳನ್ನು ಕೈಗೊಳ್ಳುತ್ತಾನೆ.
ಇದರಿಂದ ಸೃಷ್ಟಿಯಲ್ಲಿ ಅಸಮತೋಲನಗಳು ಉಂಟಾಗುವುದರ ಜತೆಗೆ ಮಾನವ ಕುಲಕ್ಕೂ ಧಕ್ಕೆಯಾಗುತ್ತದೆ. ಆದ್ದರಿಂದ ಮನುಷ್ಯ ತಾನು ಕೈಗೊಳ್ಳಬೇಕಾದ ಕಾಯಕಗಳ ಅರಿವನ್ನು ತನ್ನಲ್ಲಿ ಪ್ರತಿಷ್ಠಾಪಿಸಿಕೊಳ್ಳಬೇಕಾದ್ದು ಅತ್ಯಗತ್ಯ. ಮನುಷ್ಯ ತಾನು ಬದುಕಿನಲ್ಲಿ ಕೈಗೊಳ್ಳಬೇಕಾದ ಕಾಯಕಗಳನ್ನು ನಿರ್ಧರಿಸಲು ತನ್ನ ಹುಟ್ಟಿನ ಮೂಲೋದ್ದೇಶಗಳನ್ನು ಅರ್ಥಮಾಡಿ ಕೊಳ್ಳಬೇಕು. ಹುಟ್ಟು-ಸಾವುಗಳ ನಡುವಿನ ಬದುಕಿನಲ್ಲಿ ತಾನೂ ಸಂತೋಷಪಟ್ಟು ಸುತ್ತಲಿನವರನ್ನೂ ಸಂತೋಷ ದಿಂದಿಡುವ ಕಾಯಕಗಳನ್ನು ಕೈಗೊಂಡು, ಸಂತಾನಾಭಿವೃದ್ಧಿಯಲ್ಲಿ ತೊಡಗಿ ಸೃಷ್ಟಿಯ ಮುಂದುವರಿಕೆಗೆ ಪೂರಕವಾಗಿ ವರ್ತಿಸಿ ಸಾವನ್ನಪ್ಪಬೇಕು ಎಂಬುದು ಸೃಷ್ಟಿಕರ್ತನ ಮೂಲೋದ್ದೇಶ.
ಇದಕ್ಕೆ ತದ್ವಿರುದ್ಧವಾಗಿ ವರ್ತಿಸಿದಲ್ಲಿ ಅಸಂತೋಷ ಕಟ್ಟಿಟ್ಟಬುತ್ತಿ. ವೈಜ್ಞಾನಿಕವಾಗಿಯೂ ಆರೋಗ್ಯ ಎಂದರೆ ಸಂತೋಷ (ನಿರಾಳ) ಸ್ಥಿತಿ, ಅನಾರೋಗ್ಯವೆಂದರೆ ಅಸಂತೋಷ ಎಂದರ್ಥ. ಲೌಕಿಕ ಬದುಕಿನಲ್ಲಿ ಸಂತೋಷ-ಅಸಂತೋಷಗಳು ಪ್ರಧಾನವಾಗಿ ಅವರವರ ಆಸೆಗಳಿಗನುಗುಣವಾಗಿ ಕೈಗೊಳ್ಳುವ ಕಾರ್ಯಗಳನ್ನು ಅವಲಂಬಿಸಿರುವುದರಿಂದ, ಬದುಕಿನಲ್ಲಿ ಕಾಯಕಗಳ ನಿರ್ಧಾರವು ಮನುಷ್ಯನ ಆರೋಗ್ಯವನ್ನು ನಿಯಂತ್ರಿಸುತ್ತದೆ. ಈ ಹಿನ್ನೆಲೆಯಲ್ಲಿ ‘ಕಾಯಕವೇ ಕೈಲಾಸ’ ಎಂಬ
ನಾಣ್ಣುಡಿ ಅರ್ಥಗರ್ಭಿತ.
ಮನುಷ್ಯ ಆರೋಗ್ಯವಾಗಿರಲು ಕಾಯಕದಲ್ಲಿ ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳಬೇಕು. ಸೋಮಾರಿತನವು ಕಾಯಿಲೆ ಗಳಿಗೆ ಮೂಲ. ಪ್ರತಿಯೊಬ್ಬರೂ ತಾವು ಹುಟ್ಟಿಬಂದ ಪರಿಸರ, ಪೂರ್ವಜರ ವೃತ್ತಿ ಮತ್ತು ಜನ್ಮದತ್ತ ಗುಣಗಳಿಗೆ ಅನುಗುಣವಾಗಿ ಬದುಕಲು ಅವಶ್ಯವಿರುವ ವೃತ್ತಿ/ ಕಾಯಕಗಳನ್ನು ರೂಢಿಸಿಕೊಳ್ಳುತ್ತಾರೆ. ಪ್ರತಿಯೊಂದು ವೃತ್ತಿಗೂ ಅದರದೇ ಆದ ನೀತಿ ಸಂಹಿತೆಗಳಿದ್ದು, ಅವು ಆಯಾ ಪರಿಸರದ ಪ್ರಭಾವದಿಂದ ಸ್ವಯಂಚಾಲಿತವಾಗಿ ಅನುಕರಣೀಯವಾಗುತ್ತವೆ. ಆದರೆ ಯಾವುದೇ ವೃತ್ತಿಯ ನೀತಿಸಂಹಿತೆಯು ಸೃಷ್ಟಿಯ ಸಮಗ್ರ ಆರೋಗ್ಯಕ್ಕೆ ಮಾರಕವಾಗಿರದೆ ಪೂರಕವಾಗಿರಬೇಕು.
ಸೃಷ್ಟಿಯ ಮುಂದುವರಿಕೆಗೆ ಇದು ಅತ್ಯವಶ್ಯಕ. ವೃತ್ತಿಯ ಆಕರ್ಷಣೆ ಮತ್ತು ಕೌಶಲವು ಪರಿಸರದಿಂದ ಲಭಿಸುವ ಪ್ರಭಾವ ಮತ್ತು ತರಬೇತಿಗಳನ್ನು ಅವಲಂಬಿಸಿದ್ದರೂ, ಆಯಾ ವೃತ್ತಿಯ ಪೂರ್ವಜರಿಂದ ಡಿಎನ್‌ಎ ಮೂಲಕ ಪಡೆಯುವ ಪ್ರಭಾವಳಿಯೂ ಇವುಗಳ ಮೇಲೆ ಗಣನೀಯ ಪ್ರಭಾವವನ್ನು ಬೀರುತ್ತದೆ. ಈ ಹಿನ್ನೆಲೆಯಲ್ಲಿಯೇ ರೈತನ ಮಗ ರೈತ, ಬಡಗಿಯ ಮಗ ಬಡಗಿ,
ವೈದ್ಯನ ಮಗ ವೈದ್ಯ ಎಂಬ ಮಾತುಗಳು ಚಾಲ್ತಿಯಲ್ಲಿರುವುದು. ಮನುಷ್ಯನು ಕೈಗೊಳ್ಳುವ ಕಾರ್ಯಗಳನ್ನು ಪುಣ್ಯ ಮತ್ತು ಪಾಪಕಾರ್ಯಗಳೆಂದು ವರ್ಗೀಕರಿಸಲಾಗಿದೆ.
ಸೃಷ್ಟಿಯ ನಿಯಮಗಳಿಗೆ ಪೂರಕವಾದವನ್ನು ಪುಣ್ಯಕಾರ್ಯಗಳೆಂದೂ, ಮಾರಕವಾದವನ್ನು ಪಾಪಕಾರ್ಯಗಳೆಂದೂ ವಿಂಗಡಿಸಲಾಗಿದೆ. ಆತ್ಮಕ್ಕೆ ಪುಣ್ಯಕಾರ್ಯಗಳಿಂದ ಪದೋನ್ನತಿಯೂ, ಪಾಪಕಾರ್ಯಗಳಿಂದ ಪದಾವನತಿಯೂ ದೊರಕುತ್ತದೆ ಎನ್ನಲಾಗಿದೆ. ಸಾವಿಲ್ಲದ ಆತ್ಮವು ಹಿಂದಿನ ಜನ್ಮದಲ್ಲಿ ಮಾಡಿದ ಕಾಯಕಗಳಿಗನುಗುಣವಾಗಿ, ಮುಂದಿನ ಜನ್ಮದ ಕಾಯಕಗಳು ಮತ್ತು ಲಭಿಸುವ ಯಶಸ್ಸು- ಅಪಯಶಸ್ಸುಗಳು ನಿರ್ಧಾರವಾಗುತ್ತವೆ ಎಂಬ ಆಧ್ಯಾತ್ಮಿಕ ಕರ್ಮಫಲ ಸಿದ್ಧಾಂತವಿದೆ.
ಈ ಕಾರಣಕ್ಕಾಗಿಯೇ ಪ್ರಸಕ್ತ ಜನ್ಮದಲ್ಲಿ ಪುಣ್ಯಕಾರ್ಯಗಳನ್ನು ಮಾಡಿದರೂ, ಪೂರ್ವಜನ್ಮದ ಪಾಪಕಾರ್ಯಗಳ ಪ್ರತಿಫಲಗಳ
ತೀರುವಳಿಗಾಗಿ ನಿರೀಕ್ಷಿತ ಪದೋನ್ನತಿ ಪಡೆಯಲಾಗುವುದಿಲ್ಲ ಎನ್ನಲಾಗಿದೆ. ಮನುಷ್ಯನು ಪ್ರತಿಜನ್ಮದಲ್ಲೂ ಪುಣ್ಯಕಾರ್ಯ ಗಳನ್ನೇ ಮಾಡುತ್ತಿರಲಿ, ಪಾಪಕಾರ್ಯಗಳನ್ನು ತೊರೆಯಲಿ ಎಂಬ ಆಶಯ ಈ ಸಿದ್ಧಾಂತದ ಹಿಂದಿರಬಹುದು.
ಕಾಯಕಗಳನ್ನು ಕೈಗೊಳ್ಳುವ ಆಸಕ್ತಿ, ಚೈತನ್ಯಶೀಲತೆ ಮತ್ತು ಯಶಸ್ಸು ಗಳಿಸುವಿಕೆ ಅವನೊಳಗಿನ ಆತ್ಮಶಕ್ತಿಯನ್ನು
ಅವಲಂಬಿಸಿರುತ್ತದೆ. ಚೈತನ್ಯಶೀಲ ಆತ್ಮವಿದ್ದಲ್ಲಿ ಕೈಗೊಳ್ಳುವ ಕಾಯಕಗಳೂ ಫಲಪ್ರದವಾಗಿದ್ದು ಸಂತೋಷವನ್ನು ಅವು ತಂದುಕೊಡುತ್ತವೆ. ಆತ್ಮ ಮತ್ತು ದೇಹದ ಹೊರಸಲಕರಣೆಯಾಗಿರುವ ಮನಸ್ಸಿನಲ್ಲಿ ನಿರ್ಧಾರವಾಗುವ ಆಲೋಚನೆಗಳಿಗೆ
ಅನುಗುಣವಾಗಿ ಕರ್ಮಗಳು ಸಾಗುವುದರಿಂದ, ಮನಸ್ಸಿನಲ್ಲಿ ಅವರವರ ವೃತ್ತಿಗನುಗುಣವಾಗಿ ಮತ್ತು ಸೃಷ್ಟಿಯ ನಿಯಮಗಳಿ ಗನುಗುಣವಾಗಿ ಆಲೋಚನೆಗಳು ನಿರ್ಧಾರವಾಗಿ ಕಾರ್ಯಗತವಾಗುವುದು ಅತ್ಯವಶ್ಯಕ.
ಇವು ಮನುಷ್ಯನ ಮನಸ್ಸಿನಲ್ಲಿ ಉದ್ಭವವಾಗುವ ಭಾವಗಳು ಮತ್ತು ಆಸಕ್ತಿಗಳನ್ನು ಅವಲಂಬಿಸಿರುವುದರಿಂದ, ಈ ದಿಕ್ಕಿನಲ್ಲಿ
ಮನಸ್ಸನ್ನು ಪೂರ್ವಯೋಜಿತವಾಗಿ ತರಬೇತಿಗೊಳಿಸುವುದು ಅತ್ಯವಶ್ಯಕ. ಕಾಯಕಗಳು ಆತ್ಮದ ಚೈತನ್ಯಶಕ್ತಿ ಮತ್ತು ಮನಸ್ಸಿನ ಆಲೋಚನೆಗಳಿಗನುಗುಣವಾಗಿ ನಿರ್ಧಾರವಾಗಿ ದೇಹದ ಮೂಲಕ ಕಾರ್ಯಗತಗೊಳ್ಳುವುದರಿಂದ ಈ ಮೂರು
ಅಂಗಾಂಗಗಳ ಸಂಘಟಿತ ಸಹಕಾರ ಮತ್ತು ಆರೋಗ್ಯಸ್ಥಿತಿ ಅವಶ್ಯಕ. ಈ ದಿಕ್ಕಿನಲ್ಲಿ ಅನುವಾಗುವುದೇ ಕರ್ಮಯೋಗ. ಭಗವದ್ಗೀತೆಯ ೩ನೇ ಅಧ್ಯಾಯದ ಕರ್ಮಯೋಗದಲ್ಲಿ, ಯಾವ ಬಗೆಯ ಕಾಯಕಗಳನ್ನು ಆಯಾ ವೃತ್ತಿಯವರು ಹೇಗೆ ಕೈಗೊಳ್ಳಬೇಕು, ಒದಗುವ ಲಾಭ-ನಷ್ಟಗಳು, ಮನಸ್ಸಿನ ನಿಯಂತ್ರಣ ಇತ್ಯಾದಿಗಳ ಬಗ್ಗೆ ವಿವರಿಸಿರುವ ಮಾರ್ಗಸೂಚಿಗಳು ಆಧುನಿಕ ವೈದ್ಯವಿಜ್ಞಾನದ ಮಾನಸಿಕ ತಜ್ಞರಿಂದಲೂ ಅನುಮೋದಿತವಾಗಿರುವುದು ಕರ್ಮಯೋಗದ ವೈಜ್ಞಾನಿಕ ನೋಟಕ್ಕೆ ಹಿಡಿದ ಕೈಗನ್ನಡಿ.
ಮನುಷ್ಯನನ್ನೂ ಒಳಗೊಂಡಂತೆ ಸೃಷ್ಟಿಯ ಎಲ್ಲ ಕಾರ್ಯಗಳು, ಸೃಷ್ಟಿಕರ್ತ ಮತ್ತು ನಿಯಂತ್ರಕ ಭಗವಂತನ ಅಧೀನ
ದಲ್ಲಿರುವುದರಿಂದ ಮಾಡುವ ಪ್ರತಿಯೊಂದು ಕಾರ್ಯವನ್ನೂ ಅವನಿಗೆ ಭಕ್ತಿಯಿಂದ ಸಮರ್ಪಿಸುವ ದೃಷ್ಟಿಯಿಂದ ಕೈಗೊಳ್ಳಬೇಕು
ಎಂಬುದು ಕರ್ಮಯೋಗದ ಪ್ರಮುಖ ಸಾರ.
ಇಲ್ಲಿ ಕೆಲವು ಶ್ಲೋಕಗಳಲ್ಲಿನ ಮಾರ್ಗಸೂಚಿಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಲಾಗಿದೆ:
ಕರ್ಮಣ್ಯೇವಾಽಕಾರಸ್ತೇ ಮಾ ಫಲೇಷು ಕದಾಚನ|
ಮಾ ಕರ್ಮ-ಲಹೇತುರ್ಭೂರ್ ಮಾ ತೇ ಸಂಗೋಸ್ತ್ವ ಕರ್ಮಣಿ|| (ಅಧ್ಯಾಯ-೨,
ಶ್ಲೋಕ-೪೭)
ಕರ್ಮಯೋಗಕ್ಕೆ ಸಂಬಂಧಿಸಿದಂತೆ ಅನುಸರಿಸಲೇಬೇಕಾದ ಅತ್ಯಂತ ಜನಪ್ರಿಯ ಮಾರ್ಗಸೂಚಿಗಳನ್ನೊಳಗೊಂಡ ಶ್ಲೋಕವಿದು.
‘ನಿನಗೆ ವಹಿಸಿದ ಕೆಲಸವನ್ನು ಯಾವ ಫಲಾಪೇಕ್ಷೆಯಿಲ್ಲದೆ ನಿಷ್ಠೆಯಿಂದ, ಪ್ರೀತಿಯಿಂದ ಮಾಡು. ನಿನಗಷ್ಟೇ ಅಧಿಕಾರ. ಎಂದಿಗೂ ಕಾಯಕವನ್ನು ಮಾಡದಿರಬೇಡ’ ಎಂಬುದು ಈ ಶ್ಲೋಕದ ಸಾರಾಂಶ. ಪ್ರತಿಯೊಬ್ಬ ಆಧುನಿಕ ಮನುಷ್ಯನೂ
ಕಾರ್ಯಕ್ಕೂ ಮೊದಲು ಫಲಾಪೇಕ್ಷೆಯನ್ನಿಟ್ಟುಕೊಂಡು ಕಾರ್ಯಗಳನ್ನು ರೂಪಿಸುತ್ತಾನೆ. ಅಂತಿಮ ಫಲಾಪೇಕ್ಷೆಯೇ ಅವನ ಕಾಯಕದ ಗುರಿಯಾಗಿರುತ್ತದೆ.
ಅಂತಿಮ ಫಲದ ನಿರೀಕ್ಷೆಯ ಹುಸಿ ಆಸೆಯಲ್ಲಿಯೇ ಪ್ರತಿಕ್ಷಣ ಬದುಕುತ್ತಾನೆಯೇ ವಿನಾ, ತಾನು ಕೈಗೊಳ್ಳಬೇಕಾದ ಕಾರ್ಯಕ್ಕೆ
ನೀಡಬೇಕಾದ ಆಸಕ್ತಿ ಮತ್ತು ಅದರಿಂದ ದಕ್ಕುವ ಸಂತೋಷದಿಂದ ಸಂಪೂರ್ಣ ವಂಚಿತನಾಗುತ್ತಾನೆ. ಯಾವುದೇ ಕಾರ್ಯದ ಪ್ರತಿ ಹಂತವನ್ನೂ ಆಸಕ್ತಿಯಿಂದ ಪ್ರೀತಿಸಿ ಫಲದ ಬಗ್ಗೆ ಚಿಂತಿಸದೆ ಮಾಡಿದಲ್ಲಿ, ಫಲ ಸಿಗುವುದು ಖಚಿತ.
ಭವಿಷ್ಯದ ಫಲದ ಬಗ್ಗೆ ಯೋಚಿಸುತ್ತ, ಫಲ ಸಿಗುವುದಿಲ್ಲ ಎಂಬ ಆತಂಕವಾದಲ್ಲಿ, ವರ್ತಮಾನದಲ್ಲಿ ಕೈಗೊಂಡಿರುವ ಕಾರ್ಯದಲ್ಲೂ ಆಸಕ್ತಿ ಉಂಟಾಗುವುದಿಲ್ಲ. ವರ್ತಮಾನದ ಕಾರ್ಯಕ್ಕೆ ನಾವು ಜವಾಬ್ದಾರರೇ ವಿನಾ, ಭವಿಷ್ಯದ ಸಂಗತಿಗಳು
ನಮ್ಮ ಕೈಯಲ್ಲಿರುವುದಿಲ್ಲ. ಹೀಗೆ ನಮ್ಮ ಕೈಯಲ್ಲಿಲ್ಲದ ಭವಿಷ್ಯದ ಬಗ್ಗೆ ಚಿಂತಿಸಿ, ನಮ್ಮ ಅಽನದಲ್ಲಿರುವ ವರ್ತಮಾನವನ್ನು ವ್ಯರ್ಥ ಮಾಡಬಾರದು ಎಂಬ ವೈಜ್ಞಾನಿಕ ನೋಟ ಇದರಲ್ಲಿದೆ.
ಪ್ರತಿಯೊಬ್ಬರೂ ಬದುಕಿನ ಕಾಯಕದಲ್ಲಿ ತೊಡಗಲೇಬೇಕಾಗಿರುವುದರಿಂದ ಯಾವ ಕಾರಣಕ್ಕೂ ಕಾಯಕವನ್ನು ನಿಲ್ಲಿಸಬಾರದು.
ನ ಕರ್ಮಣಾಮನಾರಮ್ಛಾನ್ ನೈಷ್ಕರ್ಮ್ಯಂ
ಪುರುಷೋಶ್ನುತೇ|
ನ ಚ ಸನ್ನ್ಯಸನಾದೇವ ಸಿದ್ಧಿಂ ಸಮಽಗಚ್ಛತಿ||
(ಅಧ್ಯಾಯ-೩, ಶ್ಲೋಕ ೪)
ಮನುಷ್ಯನಾದ ಮೇಲೆ ಕರ್ತವ್ಯವನ್ನು ಮಾಡಲೇಬೇಕು. ಹಾಗಿಲ್ಲದೆ ಬದುಕಿನಲ್ಲಿ ನಿಷ್ಕ್ರಿಯನಾಗಿರುವುದು ಅನಾರೋಗ್ಯಕ್ಕೆ ನಾಂದಿಯಾಗುತ್ತದೆ. ಲೌಕಿಕ ಜಗತ್ತಿನಲ್ಲಿ ಅವರವರ ಪಾಲಿನ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಮಾತ್ರ
ಸಂತೋಷ ಲಭಿಸುತ್ತದೆ; ಆದರೆ ಕಾರ್ಯಗಳಿಂದ ತಪ್ಪಿಸಿಕೊಂಡು ವೈರಾಗ್ಯ ಹೊಂದುವುದರಿಂದ ಲೌಕಿಕ ಜಗತ್ತಿನಲ್ಲಾಗಲಿ, ಅಲೌಕಿಕ/ಆಧ್ಯಾತ್ಮಿಕ ಜಗತ್ತಿನಲ್ಲಾಗಲಿ ಮನ್ನಣೆ ಲಭಿಸುವುದಿಲ್ಲ.
ಪ್ರತಿಯೊಬ್ಬರೂ ಕಾಯಕದಲ್ಲಿ ತೊಡಗಲೇಬೇಕು, ಹಾಗಿಲ್ಲವಾದಲ್ಲಿ ದೇಹವೂ ಉಳಿಯುವುದಿಲ್ಲ. ಸೃಷ್ಟಿಯಲ್ಲಿನ ಪ್ರತಿಯೊಬ್ಬರೂ ತಮಗೆ ನಿಗದಿತವಾದ ಕಾರ್ಯಗಳನ್ನು ಮಾಡದಿದ್ದಲ್ಲಿ ಸೃಷ್ಟಿಯೂ ಉಳಿಯುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ತಂತಮ್ಮ ನಿಗದಿತ ಕಾರ್ಯಗಳನ್ನು ಮಾಡಲೇಬೇಕು ಎಂಬ ವೈಜ್ಞಾನಿಕ ನೋಟ ಇದರಲ್ಲಿದೆ.
ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ|
ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ|| (ಅಧ್ಯಾಯ-೩, ಶ್ಲೋಕ ೨೨)
ಅತೀತಶಕ್ತಿಯಾದ ಭಗವಂತ ಇಡೀ ಸೃಷ್ಟಿಯನ್ನೇ (ತ್ರಿಲೋಕಗಳನ್ನೇ) ನಿಯಂತ್ರಿಸುವ ಕಾರ್ಯವನ್ನು ಮಾಡುತ್ತಿರುವಾಗ, ಮನುಷ್ಯ ಮಾತ್ರ ಸುಮ್ಮನಿರಲು ಸಾಧ್ಯವಿಲ್ಲ ಎಂಬುದು ಈ ಶ್ಲೋಕದ ಸಾರಾಂಶ. ಇಡೀ ಸೃಷ್ಟಿಯ ಕಾರ್ಯಗಳು ಭಗವಂತನ ನಿಯಂತ್ರಣದಲ್ಲಿವೆ ಎಂಬ ವೈಜ್ಞಾನಿಕ ನೋಟ ಈ ಶ್ಲೋಕದಲ್ಲಿದೆ.
ಜಾತಸ್ಯ ಧ್ರುವೋ ಮೃತ್ಯುರ್ಧ್ರುವಂ ಜನ್ಮ
ಮೃತಸ್ಯ ಚ|
ತಸ್ಮಾದಪರಿಹಾರ್ಯೇರ್ಥೇ ನ ತ್ವಂ
ಶೋತುಮರ್ಹ||(ಅಧ್ಯಾಯ-೨ ಶ್ಲೋಕ ೨೭)
ತನ್ನ ನಿಯೋಜಿತ ಕಾಯಕವನ್ನು ಮಾಡುವಾಗ ಹುಟ್ಟು-ಸಾವುಗಳ ಬಗ್ಗೆ ಚಿಂತಿಸಬಾರದು. ಅನಿವಾರ್ಯವಾದಾಗ ವಧೆ ಮಾಡುವುದು ಅವಶ್ಯಕ, ಅದಕ್ಕಾಗಿ ದುಃಖಿಸಬಾರದು. ಲೋಕದಲ್ಲಿ ಸಜ್ಜನರು ಮತ್ತು ದುರ್ಜನರು ಇಬ್ಬರೂ ಇದ್ದು, ಸೃಷ್ಟಿಯ
ಉಳಿವಿಗೆ ಮಾರಕವಾದವರನ್ನು ದಂಡಿಸುವುದು/ ವಧಿಸುವುದು ಅನಿವಾರ್ಯ.
ಇಲ್ಲವಾದಲ್ಲಿ ದುರ್ಜನರು ಮಾನವಕುಲ ಮತ್ತು ಸೃಷ್ಟಿಯ ನಾಶಕ್ಕೆ ಕಾರಣಕರ್ತರಾಗುತ್ತಾರೆ. ಅಂಥ ಸಂದರ್ಭಗಳಲ್ಲಿ
ಹಿಂಸೆಯೂ ಅವಶ್ಯಕ ಎಂಬ ನೋಟ ಇಲ್ಲಿದೆ. ಮನುಷ್ಯ ಬದುಕಿನಲ್ಲಿ ಕ್ರಿಯಾಶೀಲನಾಗಿರಬೇಕಾಗಿದ್ದು, ಪ್ರತಿನಿತ್ಯದ ಬದುಕಿಗಾಗಿ ಅಥವಾ ಲೌಕಿಕ/ಅಲೌಕಿಕ ಸಾಧನೆಗಾಗಿ ಕಾಯಕಗಳನ್ನು ಮಾಡಲೇಬೇಕಾಗುತ್ತದೆ. ಅವನ್ನು ಸಮಚಿತ್ತದಿಂದ,
ಸದೃಢ ಮನಸ್ಸಿನಿಂದ ಮಾಡಬೇಕಾದ ಮಾರ್ಗೋಪಾಯಗಳು ಭಗವದ್ಗೀತೆಯಲ್ಲಿವೆ. ಮನುಷ್ಯನ ಅಸ್ತಿತ್ವ ಅವನ ಕಾಯಕಗಳಿಂದಲೇ ನಿರ್ಧಾರವಾಗುವುದರಿಂದ, ಕರ್ಮಯೋಗದ ವೈಜ್ಞಾನಿಕ ಅರಿವು ಮತ್ತು ಪಾಲನೆ ಅತ್ಯವಶ್ಯಕ.
(ಮುಂದುವರಿಯುವುದು)