Saturday, 9th December 2023

ಕಂಡೆ ನಾ…ಜರ್ಮನಿಯಲ್ಲಿ ಕನ್ನಡವನ್ನ!

ವಿದೇಶವಾಸಿ

dhyapaa@gmail.com

ಜರ್ಮನಿಗೂ, ಕರ್ನಾಟಕಕ್ಕೂ ಯಾವ ಜನ್ಮದ ಸಂಬಂಧವೋ ಗೊತ್ತಿಲ್ಲ. ರಾಜ್ಯೋತ್ಸವದ ಸಂದರ್ಭದಲ್ಲಿ ಇಂತಹ ಒಂದು ಪ್ರಶ್ನೆ ಮೂಡಿದರೆ ಅದು ಸಹಜವೇ, ಸಾಧುವೇ. ಪ್ರಪಂಚದ ಯಾವುದೇ ದೇಶದವರಾದರೂ ‘ಭಾರತ’ ಎಂದೊಡನೆ ಒಮ್ಮೆಯಾದರೂ ಬೆರಗುಗಣ್ಣಿನಿಂದ ನೋಡುತ್ತಾರೆ.

ನಮ್ಮಲ್ಲಿರುವ ವೈವಿಧ್ಯ, ಕಲೆ, ಸಂಸ್ಕೃತಿ, ಪ್ರಜಾಪ್ರಭುತ್ವ, ಹಬ್ಬಗಳ ಆಚರಣೆ, ಪ್ರಕೃತಿ ಸೌಂದರ್ಯ, ಹೀಗೆ ಕಾರಣಗಳು ಅನೇಕ. ಆದರೆ ಕೆಲವು ವಿದೇಶಿಯ  ರನ್ನು ಕಂಡು, ವಿದೇಶದಲ್ಲಿರುವ ಕೆಲವು ಕನ್ನಡಿಗರನ್ನು ಕಂಡು ನಾವೂ ಬೆರಗಾಗುತ್ತೇವೆ. ನಾನು ನೋಡಿದಂತೆ, ವಿದೇಶಿಯರ ಪೈಕಿ ಜರ್ಮನ್ ದೇಶದ ಪ್ರಜೆಗಳು ಭಾರತಕ್ಕೆ ಅಥವಾ ಕರ್ನಾಟಕಕ್ಕೆ ಸ್ವಲ್ಪ ಹೆಚ್ಚೇ ಹತ್ತಿರ. ಕನ್ನಡಕ್ಕೆ ಜರ್ಮನ್ನರಷ್ಟು ಕೊಡುಗೆಯನ್ನು ಬೇರೆ ಯಾವ ದೇಶದವರೂ ಕೊಟ್ಟಿರ ಲಿಕ್ಕಿಲ್ಲ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ‘ಮನ್-ಕಿ-ಬಾತ್’ ಕಾರ್ಯಕ್ರಮದಲ್ಲಿ ಜರ್ಮನ್ ಪ್ರಜೆಯೊಬ್ಬಳ ಕನ್ನಡ ಪ್ರೀತಿಯ ಕುರಿತು ಪ್ರಸ್ತಾಪಿ ಸಿದ್ದು ನಿಮಗೆ ತಿಳಿದಿರಬಹುದು. ‘ಯಾರಿಗೇ ಆದರೂ, ಅಪರಿಚಿತ ಭಾಷೆಯ ಎರಡು-ಮೂರು ಸಾಲು ಮಾತನಾಡಲು ಎಷ್ಟು ಕಷ್ಟಪಡಬೇಕಾಗುತ್ತದೆ ಎಂದು ನಾವು ಊಹಿಸಿಕೊಳ್ಳಬಹುದು. ಆದರೆ, ಜರ್ಮನಿಯ ಈ ಹುಡುಗಿಗೆ ಇದು ಸುಲಭವಾಗಿ ಆಡುವ ಆಟದಂತಿದೆ. ನಿಮಗಾಗಿ ನಾನು ಅವಳು ಕನ್ನಡದಲ್ಲಿ ಹಾಡಿದ ಹಾಡು ಕೇಳಿಸುತ್ತೇನೆ. ಅವಳಲ್ಲಿರುವ ಈ ಉತ್ಸಾಹವನ್ನು ನಾನು ಹೃದಯದಿಂದ ಪ್ರಶಂಸಿಸುತ್ತೇನೆ. ಅವಳ ಈ ಪ್ರಯತ್ನ, ಸಾಧನೆ, ಪ್ರತಿಯೊಬ್ಬ ಭಾರತೀಯನ ಮನಸ್ಸನ್ನು ಗೆಲ್ಲುವಂಥದ್ದು.’ ಎಂದು ಹೇಳಿ, ಅವಳು ಹಾಡಿದ ಹಾಡು ಕೇಳಿಸಿದರು.

ಆ ಜರ್ಮನ್ ಮಹಿಳೆಯ ಹೆಸರು ಕೈಸಮಿ. ಅಂದು ಪ್ರಧಾನಿಯವರು ಕೈಸಮಿ ಹಾಡಿದ ‘ನಮ್ಮ ವಚನ ಬಹುವಚನ, ನುಡಿಯಿರೋ ಕನ್ನಡ, ನಡೆಯಿರೋ ಕನ್ನಡ… ’ ಹಾಡನ್ನು ಕೇಳಿಸಿದ್ದರು. ಕನ್ನಡಿಗರ ಪ್ರೀತಿಯ ಗೀತರಚನೆಕಾರರಬ್ಬರಾದ ಜಯಂತ್ ಕಾಯ್ಕಿಣಿಯವರು ರಚಿಸಿದ, ಅಭಿಜಿತ್ ಶೈಲನಾಥ್ ಸಂಗೀತ ನೀಡಿದ ಗೀತೆ ಅದು. ಕನ್ನಡ, ಕರ್ನಾಟಕದ ಹಿರಿಮೆಯೇ ಆ ಪದ್ಯದ ಜೀವಾಳ. ‘ಕನ್ನಡ ಜೀವಸ್ವರ’ ಹೆಸರಿನ ಈ ಗೀತೆ ಜನಪ್ರಿಯ ಹೌದಾದರೂ,
ಯಾವುದೇ ಚಲನಚಿತ್ರದ ಸುಪರ್‌ಹಿಟ್ ಹಾಡಂತೂ ಅಲ್ಲ.

ಅದನ್ನು ಬೇಕಾದರೆ ಕನ್ನಡದ ‘ಮಿಲೇ ಸುರ್ ಮೇರಾ ತುಮ್ಹಾರಾ…’ ಅನ್ನಬಹುದು. ಅಂಥ ಒಂದು ಹಾಡನ್ನು ಜರ್ಮನಿಯ ಹುಟ್ಟಿ ಬೆಳೆದ ಕೈಸಮಿ ಹಾಡುತ್ತಾಳೆ ಎಂದರೆ, ಸ್ವಲ್ಪ ಮಟ್ಟಿಗಲ್ಲ, ಹದವಾಗೇ ಕನ್ನಡದ, ಕರ್ನಾಟಕದ ಕುರಿತು ತಿಳಿದುಕೊಳ್ಳುವ ಪ್ರಯತ್ನ ಮಾಡಿzಳೆ ಎಂದೇ ಹೇಳಬಹುದು.
ಯಾರೇ ಆಗಲಿ, ಒಂದು ಭಾಷೆಯ ಒಂದೋ-ಎರಡೋ ಹಾಡು ಕಲಿಯಬೇಕೆಂದಿದ್ದರೆ, ಆ ಭಾಷೆಯ ಜನಪ್ರಿಯ ಹಾಡಿಗೆ ಆದ್ಯತೆ ನೀಡುತ್ತಾರೆ, ಅದನ್ನೇ ಕಲಿತು ಸುಮ್ಮನಾಗುತ್ತಾರೆ. ಸ್ಪಷ್ಟ ಕನ್ನಡದ ಉಚ್ಚಾರದೊಂದಿಗೆ ಕೈಸಮಿ ಬಾಯಿಂದ ಬಂದ ಹಾಡು ಕೇಳಿದಾಗ, ಅವಳು ಆ ಹಂತವನ್ನು ಮೀರಿ
ಕನ್ನಡವನ್ನು ಕಲಿತಿದ್ದಾಳೆ, ಪ್ರೀತಿಸುತ್ತಿದ್ದಾಳೆ ಎಂದು ಹೇಳಬಹುದು.

ನಿಮಗೆ ಇನ್ನೊಬ್ಬ ಮಹಿಳೆಯ ಕುರಿತು ಹೇಳುತ್ತೇನೆ, ಅಥವಾ ನೆನಪಿಸುತ್ತೇನೆ. ನಮ್ಮ ದೇಶದಲ್ಲಿ ಭಾರತಶಾಸ್ತ್ರ (Indology) ಎಂಬ ಒಂದು ವಿಷಯವಿದೆ ಎನ್ನುವುದು ಎಷ್ಟು ಜನರಿಗೆ ತಿಳಿದಿದಿಯೋ ಗೊತ್ತಿಲ್ಲ. ಒಂದು ವೇಳೆ ತಿಳಿದಿದ್ದರೂ ಆ ವಿಷಯವನ್ನು ಓದಲು ಆಸಕ್ತಿ ತೋರಿಸುವವರು ಕಡಿಮೆ ಎಂದೇ ಹೇಳಬಹುದು. ಅಸಲಿಗೆ ಅದು ಭಾರತದ ಇತಿಹಾಸ, ಕಲೆ, ಸಂಸ್ಕೃತಿಯ ಕುರಿತಾದ ಅಧ್ಯಯನದ ವಿಷಯ. ಅಂತಹ ಒಂದು ಅಜ್ಞಾತ ವಿಷಯವನ್ನು ಓದಲು ಒಬ್ಬ ಜರ್ಮನ್ ಮಹಿಳೆ ಆಸಕ್ತಿ ತೋರಿಸುತ್ತಾಳೆ, ಕಾಲಾನಂತರ ಭಾರತೀಯಳಾಗುತ್ತಾಳೆ, ಅದರಲ್ಲೂ ಕನ್ನಡಿಗಳೇ ಆಗುತ್ತಾಳೆ ಎಂದರೆ ನಂಬು ತ್ತೀರಾ? ಸುಮಾರು ಒಂದು ದಶಕದ ಹಿಂದೆ ಸುವರ್ಣ ಸುದ್ದಿ ವಾಹಿನಿಯವರು ಅವಳ ಕುರಿತು ‘ಜರ್ಮನ್ ಯಕ್ಷಗಾನ’ ಶೀರ್ಷಿಕೆಯಲ್ಲಿ ಒಂದು ವಿಶೇಷ ಕಾರ್ಯಕ್ರಮವನ್ನೇ ಮಾಡಿದ್ದರು.

ಅವಳ ಹೆಸರು ಕ್ಯಾಥರಿನ್, ವೃತ್ತಿಯಲ್ಲಿ ಉಪನ್ಯಾಸಕಿ. ಕ್ಯಾಥರಿನ್‌ಗೆ ಚಿಕ್ಕ ವಯಸ್ಸಿನಿಂದಲೂ ಸಂಗೀತ, ನಾಟಕ ಇತ್ಯಾದಿಗಳ ಕಡೆ ಒಲವು ಇತ್ತು. ಅದರಲ್ಲೂ ಭಾರತದ ಸಂಗೀತ ಮತ್ತು ನಾಟ್ಯ ಪ್ರಭೇದಗಳು ಅವಳನ್ನು ಹೆಚ್ಚು ಆಕರ್ಷಿಸಿದ್ದವು. ಹೇಳಿ ಕೇಳಿ, ಜರ್ಮನಿ ಎಂದರೆ ಗ್ರಂಥಾಲಯಗಳ ದೇಶ. ಕ್ಯಾಥರೀನ್ ತಂದೆ ಗ್ರಂಥಪಾಲಕರಾಗಿದ್ದವರು. ಆದ್ದರಿಂದ ಭಾರತದ ಕುರಿತಾಗಿಯೂ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದರು. ಮಗಳ ಅಭಿಲಾಷೆ ಈಡೇರಲಿ ಎಂದು ಹರಸಿ ಕಳುಹಿಸಿಕೊಟ್ಟಿದ್ದರು.

ಭಾರತಕ್ಕೆ ಬಂದಾಗ ಕ್ಯಾಥರಿನ್ಳ ಮನ ಸೆಳೆದದ್ದು ಕಡಲ ತೀರದ ದಿವ್ಯ ಕಲೆ ಯಕ್ಷಗಾನ. ಅದಕ್ಕಾಗಿ ಉಡುಪಿಯ ಯಕ್ಷಗಾನ ಕೇಂದ್ರವನ್ನು ಸಂಪರ್ಕಿಸಿ ದಳು. ಕಡಲ ತೀರದ ಭಾರ್ಗವ ಎಂದೇ ಹೆಸರಾಗಿದ್ದ ಡಾ. ಶಿವರಾಮ ಕಾರಂತರ ಶಿಷ್ಯ, ಸಾವಿರಾರು ಜನರಿಗೆ ಯಕ್ಷಗಾನದ ಪಾಠ ಹೇಳಿದ ಸಂಜೀವ ಸುವರ್ಣ ಆಗ ಅಲ್ಲಿ ಗುರುವಾಗಿದ್ದರು. ಬಹುಶಃ ಕನ್ನಡ ಕಲಾಲೋಕದಲ್ಲಿ ಅತ್ಯಂತ ಕಠಿಣವಾದ ಕಲೆ ಯಕ್ಷಗಾನ. ಗಾಯನ, ನಾಟ್ಯ, ಅಭಿನಯ, ಮಾತು ಎಲ್ಲವನ್ನೂ ಒಳಗೊಂಡ ಕಲೆಯಲ್ಲಿ ಕನ್ನಡದ ಹೊರತಾಗಿ ಬೇರೆ ಯಾವ ಭಾಷೆಯನ್ನೂ ಬಳಸುವಂತಿಲ್ಲ.

ರಂಗಸ್ಥಳದಲ್ಲಿ ಏನೇ ಮಾತಾಡಬೇಕೆಂದರೂ ಕೊನೇ ಪಕ್ಷ ಕನ್ನಡದಲ್ಲಿರುವ ಪದ್ಯವಾದರೂ ಅರ್ಥವಾಗಬೇಕು. ಅದಕ್ಕಾಗಿ ಕ್ಯಾಥರಿನ್‌ಗೆ ಕನ್ನಡ
ಕಲಿಯುವುದು ಅವಶ್ಯವಷ್ಟೇ ಅಲ್ಲ ಅನಿವಾರ್ಯವೂ ಆಗಿತ್ತು. ಕ್ಯಾಥರಿನ್ ಮಂಗಳೂರು ವಿಶ್ವವಿದ್ಯಾಲಯ ಸೇರಿಕೊಂಡಳು. ಹಗಲು ರಾತ್ರಿ ಎನ್ನದೇ ಕನ್ನಡ ಅಭ್ಯಾಸ ಮಾಡಿದಳು. ಆರು ತಿಂಗಳ ಅವಧಿಯಲ್ಲಿ, ಅವಳ ಕನ್ನಡ ಕಲಿಕೆಯನ್ನು ಕಂಡು ಗುರು ಸುವರ್ಣರೇ ದಂಗಾಗಿದ್ದರು. ಭಾಗವತಿಕೆ,
ಮದ್ದಳೆ, ಚೆಂಡೆ, ನಾಟ್ಯ ಹೀಗೆ ಯಕ್ಷಗಾನದ ಎಲ್ಲ ವಿಭಾಗದಲ್ಲಿಯೂ ತರಬೇತಿ ಪಡೆದಳು. ಸಾಲದು ಎಂಬಂತೆ, ಯಕ್ಷಗಾನವನ್ನೇ ತನ್ನ ಸಂಶೋಧನೆಯ ವಿಷಯವನ್ನಾಗಿ ಆಯ್ದುಕೊಂಡು, ಅದರಲ್ಲಿ ಡಾಕ್ಟರೇಟನ್ನೂ ಪಡೆದಳು.

ಸುಮಾರು ನಾಲ್ಕು-ಐದು ವರ್ಷಗಳ ಕಾಲ ಕ್ಯಾಥರಿನ್ ರಜೆಗೆ ಎಂದು ಬರುತ್ತಿದ್ದದ್ದು ಉಡುಪಿ-ಮಂಗಳೂರಿಗೆ, ಯಕ್ಷಗಾನದ ಹೆಚ್ಚಿನ ಅಭ್ಯಾಸಕ್ಕೆ.
ಕ್ಯಾಥರಿನ್ ಕನ್ನಡ ಸೇವೆ ಇಂದಿಗೂ ನಿಂತಿಲ್ಲ. ಇಂದಿಗೂ ಅವರು ಜರ್ಮನಿಯಲ್ಲಿರುವ ಅಸಕ್ತರಿಗೆ ಕನ್ನಡವನ್ನೂ, ಯಕ್ಷಗಾನವನ್ನೂ ಕಲಿಸುತ್ತಿದ್ದಾರೆ. ‘ಅಭಿಮನ್ಯು ಕಾಳಗ’ ಯಕ್ಷಗಾನವನ್ನು ಜರ್ಮನ್ ಭಾಷೆಗೆ ಅನುವಾದ ಮಾಡಿದ್ದಾರೆ. ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸಿ, ಶಿಷ್ಯಂದಿರ
ಜತೆಗೆ ತಾವೂ ಪಾತ್ರಮಾಡುತ್ತಾರೆ. ಭಾರತೀಯತೆ, ಕನ್ನಡ, ಯಕ್ಷಗಾನ ಮುಂತಾದವುಗಳನ್ನು ಅಭ್ಯಾಸ ಮಾಡುತ್ತ, ಭಾರತೀಯ ಜೀವನ ಪದ್ಧತಿ ಕ್ಯಾಥರಿನ್‌ರ ಜೀವನ ಪದ್ಧತಿಯೂ ಆಗಿದೆ. ಕ್ಯಾಥರಿನ್ ಅವರ ಗಂಡ ವೃತ್ತಿಯಲ್ಲಿ ಮನಃಶಾಸ್ತ್ರಜ್ಞ.

ಅವರೂ ಜರ್ಮನ್ ಪ್ರಜೆ. ಆದರೆ ಅವರಿಬ್ಬರೂ ಮದುವೆಯಾದದ್ದು ಮಾತ್ರ ಭಾರತೀಯ ಪದ್ಧತಿಯಲ್ಲಿ! ಕ್ಯಾಥರಿನ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಅವರ ಹೆಸರು ಏನು ಗೊತ್ತೇ? ಒಬ್ಬಳು ಯಶೋಧರಾ, ಇನ್ನೊಬ್ಬಳು ಉಷಾ! ಹಾಗಾದರೆ ಜರ್ಮನಿಯಿಂದ ಕರ್ನಾಟಕಕ್ಕೆ ಬಂದವರಲ್ಲಿ ಕ್ಯಾಥರಿನ್ ಮೊದಲಿಗರೇ? ಖಂಡಿತ ಅಲ್ಲ. ಜರ್ಮನಿ ಮತ್ತು ಕನ್ನಡದ ಸಂಬಂಧ ನಿನ್ನೆ-ಮೊನ್ನೆಯದ್ದಲ್ಲ. ಇದು ಶತಮಾನಕ್ಕೂ ಹಿಂದಿನದು. ಜರ್ಮನಿಯ ಮೂವರನ್ನು ಕನ್ನಡಿಗರು ಮರೆಯುವಂತೆಯೇ ಇಲ್ಲ. ಅವರಲ್ಲಿ ಒಬ್ಬರು, ಸುಮಾರು ನೂರ ಎಂಬತ್ತು ವರ್ಷಗಳ ಮೊದಲು ಕನ್ನಡದ ಮೊದಲ ಪತ್ರಿಕೆ
‘ಮಂಗಳೂರ ಸಮಾಚಾರ’ವನ್ನು ಪ್ರಕಟಿಸಿದ, ಜತೆಗೆ ಕನ್ನಡದ ಮೂವತ್ತಾರು ಸಾಹಿತ್ಯ ಕೃತಿಗಳನ್ನು ಭಾಷಾಂತರಿಸಿದ ಹರ್ಮನ್ ಮೋಗ್ಲಿಂಗ್.

ಅಷ್ಟೇ ಅಲ್ಲದೆ, ಮೋಗ್ಲಿಂಗ್ ಆ ಕಾಲದಲ್ಲಿಯೇ ಕನ್ನಡದ ಮೂರು ಸಾವಿರ ಗಾದೆಗಳನ್ನೂ ಪಟ್ಟಿ ಮಾಡಿ ಪ್ರಕಟಿಸಿದ್ದರು. ಇನ್ನೊಬ್ಬರು ಅವರ ಸಂಬಂಧಿ ಗಾಟ್ -ಡ್ ವೇಗಲ. ಅವರು ಬೈಬಲ ಅನ್ನು ಮೊದಲು ಕನ್ನಡಕ್ಕೆ ಅನುವಾದಿಸಿದವರು. ಮತ್ತೊಬ್ಬರು, ಇಂದಿಗೆ ಸುಮಾರು ನೂರ ಎಪ್ಪತ್ತು ವರ್ಷದ ಹಿಂದೆ ಎಪ್ಪತ್ತು ಸಾವಿರ ಕನ್ನಡ ಪದಗಳ ಮೊದಲ ನಿಘಂಟನ್ನು ರಚಿಸಿದ ರೆವರೆಂಡ್ ಫರ್ಡಿನಂಡ್ಕಿಟೆಲ. ಮಂಗಳೂರಿಗೆ ಬಂದು ಒಂಬತ್ತು ವರ್ಷದಲ್ಲಿ ತಮ್ಮ ಮೊದಲ ಪದ್ಯ ರಚಿಸಿದ ಕಿಟೆಲ, ತದನಂತರ ಕನ್ನಡದಲ್ಲಿ ಹಲವಾರು ಪದ್ಯಗಳನ್ನೂ ರಚಿಸಿದ್ದಾರೆ.

ಇವರೆಲ್ಲ ಜರ್ಮನಿಯ ಟ್ಯೂಬಿಂಗನ್ ಪಟ್ಟಣದಲ್ಲಿದ್ದ ‘ಬಾಸೆಲ್ ಮಿಷನ್’ನಿಂದ ಧರ್ಮ ಪ್ರಚಾರಕ್ಕೆಂದು ಬಂದವರು. ಕನ್ನಡದ ಸೊಗಡಿಗೆ ಸೋತು, ಕನ್ನಡವನ್ನು ಜರ್ಮನಿಗೆ ಕೊಂಡು ಹೋದವರು. ಇದೆಲ್ಲ ಒಂದು ಕಡೆ ಇರಲಿ. ನಾನು ಕಳೆದ ವರ್ಷ ಜರ್ಮನಿಗೆ ಹೋದಾಗ ಕಂಡ ಒಂದು ವಿಷಯ ನಿಮಗೆ ಹೇಳಬೇಕು. ಮೊದಲೇ ಸ್ಪಷ್ಟಪಡಿಸುತ್ತೇನೆ, ಇದನ್ನು ಜರ್ಮನಿಯ ಹ್ಯಾಂಬರ್ಗ್ ನಗರ ನಿವಾಸಿಯಾಗಿರುವ ಶ್ರೀಕಾಂತ್ ಭಟ್ ನನ್ನ ಸ್ನೇಹಿತರು ಎಂಬ ಕಾರಣಕ್ಕೆ ಹೇಳುತ್ತಿಲ್ಲ. ಅವರು ಕನ್ನಡದ ಮೇಲೆ ಇನ್ನೂ ಗಟ್ಟಿಯಾಗಿ ಇಟ್ಟಿರುವ ಪ್ರೀತಿಗಾಗಿ ಹೇಳುತ್ತಿದ್ದೇನೆ. ಇಲ್ಲವಾದರೆ, ಎಲ್ಲಿಯ ಜರ್ಮನಿಯ
ಪ್ರಯೋಗಾಲಯ, ಎಲ್ಲಿಯ ಕರ್ನಾಟಕದ ಕನ್ನಡ? ಶ್ರೀಕಾಂತ್ ಅವರದ್ದು ವಿeನಿಯ ಕಾಯಕ.

ಜರ್ಮನಿಯ ಅತಿ ದೊಡ್ಡ ಪ್ರಯೋಗಾಲಯ DESY (Deutsches Elektronen-Synchrotron)ನಲ್ಲಿ ಅವರು ಸಂಶೋಧಕ. ಅವರು ಕೆಲಸ ಮಾಡುವ ಆ ಪ್ರಯೋಗಾಲಯದ ವಾರ್ಷಿಕ ಬಜೆಟ್ ಸುಮಾರು ಇನ್ನೂರೈವತ್ತು ಮಿಲಿಯನ್ ಯುರೋ, ಅಂದರೆ ಹೆಚ್ಚು ಕಮ್ಮಿ ಇಪ್ಪತ್ತಮೂರು ಸಾವಿರ ಕೋಟಿ ರುಪಾಯಿ, ಅಂದರೆ ಹತ್ತಿರ ಹತ್ತಿರ ಕರ್ನಾಟಕ ರಾಜ್ಯದ ಒಂದು ತಿಂಗಳ ಬಜೆಟ್. ಇರಲಿ, ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನಲ್ಲಿರುವ ಸಣ್ಣ ಗ್ರಾಮವಾದ ಹೇರೂರಿನಿಂದ ಜರ್ಮನಿಯ ಹ್ಯಾಂಬರ್ಗ್ ತಲುಪಿರುವ ಶ್ರೀಕಾಂತ್, ತಾವು ಸಂಶೋಧನೆ ಮಾಡುವುದಲ್ಲದೆ ದೇಶ-ವಿದೇಶಗಳಿಂದ ಬರುವ
ಸಂಶೋಧಕರಿಗೆ ಮಾರ್ಗದರ್ಶನವನ್ನೂ ಮಾಡುತ್ತಾರೆ.

ಅವರಿಗೆ ಪ್ರಯೋಗಾಲಯದಲ್ಲಿ ಮಾಡಲು ಕೈತುಂಬ ಮಾತ್ರವಲ್ಲ, ಮೈತುಂಬ ಕೆಲಸವಿದೆ. ನಾನು ಹ್ಯಾಂಬರ್ಗ್ ನಗರಕ್ಕೆ ಶ್ರೀಕಾಂತ್ ಅವರ ಭೇಟಿಗೆ
ಹೋದಾಗ, ಅವರು ತಾವು ಕೆಲಸ ಮಾಡುವ ಪ್ರಯೋಗಾಲಯಕ್ಕೆ ಕರೆದುಕೊಂಡು ಹೋಗಿದ್ದರು. ಜತೆಯಲ್ಲಿ ಅವರ ಮಡದಿ ಶೋಭಾ ಮತ್ತು ಮಗ ಓಂಕಾರ ಕೂಡ ಇದ್ದರು. ಶ್ರೀಕಾಂತ್ ಶೋಭಾ ದಂಪತಿ ಜರ್ಮನಿಯಲ್ಲಿ ಒಂದು ದಶಕಕ್ಕೂ ಹೆಚ್ಚು ಸಮಯ ಕಳೆದವರು. ಇಂಗ್ಲಿಷ್, ಜರ್ಮನ್ ಭಾಷೆ ಯಲ್ಲಿ ನಿರರ್ಗಳವಾಗಿ ಮಾತಾಡಬಲ್ಲವರು. ಅಲ್ಲಿ ಅವರು ಕನ್ನಡ ಮಾತಾಡಿದರೆ ಹೆಚ್ಚು ಸಂಬಳ ಸಿಗುವುದಿಲ್ಲ, ಮಾತಾಡದಿದ್ದರೆ ಕಮ್ಮಿಯೂ ಆಗುವು ದಿಲ್ಲ. ಆದರೂ ಅವರ ಕನ್ನಡದ ಪ್ರೀತಿ ಕಿಂಚಿತ್ತೂ ಕಮ್ಮಿಯಾಗಲಿಲ್ಲ.

ಅವರ ಉತ್ಕಟ ಕನ್ನಡ ಪ್ರೀತಿ ನನಗೆ ತಿಳಿದದ್ದು ಅವರ ಪ್ರಯೋಗಾಲಯದಲ್ಲಿ. ಅಂದು ತಮ್ಮ ಪ್ರಯೋಗಾಲಯವನ್ನು ತೋರಿಸಿ, ತಾವು ಮಾಡುವ ಕೆಲಸವನ್ನೆಲ್ಲ ವಿವರಿಸಿದ ನಂತರ, ಅವರ ಕಚೇರಿಗೆ ಹಿಂತಿರುಗಿದೆವು. ಬಂದು ನೋಡಿದರೆ ಅವರ ಕಚೇರಿಯಲ್ಲಿದ್ದ ಬೋರ್ಡಿನ ಮೇಲೆ ಕನ್ನಡದ ಕಾಗುಣಿತಗಳು ಕುಣಿಯುತ್ತಿದ್ದವು. ಅದು ಅವರ ಮಗ ಓಂಕಾರನೇ ಬರೆದದ್ದು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿರಲಿಲ್ಲ. ನನಗೆ ಸೋಜಿಗ ಅನಿಸಿದ್ದು, ಆ ವಯಸ್ಸಿನ ಮಕ್ಕಳು ಸ್ವಲ್ಪ ಬಿಡುವು ಸಿಕ್ಕರೂ, ಆಟದ ಕಡೆಗೆ, ಮೊಬೈಲ್ ಫೋನ್ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ.

ಆದರೆ ಏಳು ವರ್ಷದ ಓಂಕಾರ ಅಪ್ಪನ ಪ್ರಯೋಗಾಲಯದಲ್ಲಿ ತನಗೆ ಸಿಕ್ಕ ಸಮಯದಲ್ಲಿ ಕನ್ನಡ ಬರೆಯುತ್ತಿದ್ದ. ಆ ಕ್ಷಣದಲ್ಲಿ ನನಗೆ ಓಂಕಾರ ಪಕ್ಕಾ ಕನ್ನಡದ ಕುವರನಾಗಿ ಕಾಣುತ್ತಿದ್ದ. ಆ ದೇಶದಲ್ಲಿ ಕನ್ನಡ ಬಿಡಿ, ಇಂಗ್ಲಿಷನ್ನೂ ಸರಿಯಾಗಿ ಕೇಳಿಸಿಕೊಳ್ಳದೇ ಕೆಲವು ದಿನಗಳಾಗಿದ್ದರಿಂದ, ಕನ್ನಡ ಅಕ್ಷರ ಕಂಡಾಗ ನನಗೆ ಸ್ವಾಭಾವಿಕವಾಗಿಯೇ ಖುಷಿಯಾಗಿತ್ತು. ಕುತೂಹಲ ತಡೆಯಲಾಗದೇ ಶ್ರೀಕಾಂತ್ ಅವರಲ್ಲಿ ಕೇಳಿದಾಗ ತಿಳಿದದ್ದೇನೆಂದರೆ, ಅವರ ಮನೆಯಲ್ಲಿ ಪ್ರತಿನಿತ್ಯ ಅರ್ಧ ಗಂಟೆ ಕನ್ನಡದ ಪಾಠವಾಗುತ್ತದೆ.

ಕಾಗುಣಿತ, ಒತ್ತಕ್ಷರ, ಒಂದಷ್ಟು ಕನ್ನಡದ ಪದಗಳನ್ನು, ಸಾಲುಗಳನ್ನು ಬರೆಯುವುದನ್ನು ಶ್ರೀಕಾಂತ್ ರೂಢಿ ಮಾಡಿಸಿದ್ದಾರೆ. ಜರ್ಮನ್ ಭಾಷೆ ಕಲಿಸು ವುದಕ್ಕೂ ಮೊದಲೇ ಕನ್ನಡ ಕಲಿಸಿದ್ದಾರೆ. ಮನೆಯಲ್ಲಿ ಇಂದಿಗೂ ಎಲ್ಲರೂ ಕನ್ನಡ ಮಾತಾಡುತ್ತಾರೆ. ಕಿಟೆಲ, ಮೋಗ್ಲಿಂಗ್ ಮತ್ತು ವೇಗಲ್ ಅವರ ಊರು ಟ್ಯೂಬಿಂಗನ್ ಎಂದು ಹೇಳಿದೆನಲ್ಲ, ಅದು ಶ್ರೀಕಾಂತ್ ನೆಲೆಸಿರುವ ಹ್ಯಾಂಬರ್ಗ್‌ನಿಂದ ಸುಮಾರು ಏಳುನೂರು ಕಿಲೋಮೀಟರ್ ದೂರ. ಟ್ಯೂಬಿಂಗನ್ ಅಕ್ಕ-ಪಕ್ಕದಲ್ಲಿ ನೆಲೆಸಿರುವ ಕೆಲವು ಕನ್ನಡಿಗರೂ ಅಲ್ಲಿ ಭೇಟಿ ಕೊಟ್ಟಿರಲಿಕ್ಕಿಲ್ಲ, ಶ್ರೀಕಾಂತ್ ಅಲ್ಲಿ ಹೋಗಿ ಕಿಟೆಲ್ ಕುರಿತು ಸಂಶೋಧನೆ ಮಾಡಿದ್ದಾರೆ. ಕಿಟೆಲ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹುಡುಕಾಡಿದ್ದಾರೆ.

ಅಷ್ಟೇ ಅಲ್ಲ, ಸ್ನೇಹಿತರು ಭೇಟಿ ಕೊಟ್ಟಾಗ ಅವರನ್ನು ಟ್ಯೂಬಿಂಗನ್ಗೆ ಕರೆದುಕೊಂಡು ಹೋಗುತ್ತಾರೆ. ಕನ್ನಡದ ಬಗ್ಗೆ ಇಷ್ಟು ಪ್ರೀತಿ ಇದ್ದರೆ ಬೇಕಾದಷ್ಟಾ ಯಿತು. ಇಲ್ಲಿ ಎರಡು ಬಗೆಯ ಜನರ ಕುರಿತು ಹೇಳಿದ್ದೇನೆ. ಎರಡೂ ರೀತಿಯ ಜನರಲ್ಲಿ ಕಾಣುವುದು ಕನ್ನಡದ ಕುರಿತಾದ ಪ್ರೀತಿ. ಇಲ್ಲಿ ಅವರು ಹೆಚ್ಚು, ಇವರು ಹೆಚ್ಚು ಎಂಬ ಲೆಕ್ಕಾಚಾರವಿಲ್ಲ. ಇನಿದ್ದರೂ ಕನ್ನಡವೇ ಹೆಚ್ಚು. ವಿದೇಶಿಯರು ನಮ್ಮಲ್ಲಿ ಬಂದು ಕನ್ನಡ ಕಲಿಯಲಿ ಅಥವಾ ವಿದೇಶದಲ್ಲಿ ನೆಲೆಸಿದ ಕನ್ನಡಿಗರು ತಮ್ಮ ಮುಂದಿನ ಪೀಳಿಗೆಗೆ ಕನ್ನಡ ಕಲಿಸಲಿ, ಒಟ್ಟಿನಲ್ಲಿ ಅಂಥವರೂ ಬೆಳೆಯಲಿ, ಅಂಥವರ ಸಂತತಿಯೂ ಬೆಳೆಯಲಿ.

Leave a Reply

Your email address will not be published. Required fields are marked *

error: Content is protected !!