ನಾಡಿಮಿಡಿತ
ವಸಂತ ನಾಡಿಗೇರ
ಅದೊಂದು ರೆಸ್ಟೊರೆಂಟ್. ಕಾಫಿ ಕುಡಿಯಲೆಂದು ಗೆಳೆಯರಿಬ್ಬರು ಬಂದಿರುತ್ತಾರೆ. ತಮ್ಮ ಆರ್ಡರ್‌ಗಾಗಿ ಕಾಯುತ್ತ ಅದು ಇದು ಮಾತನಾಡುತ್ತಿದ್ದರು. ಹಾಗೆಯೇ ಅತ್ತಿತ್ತ ಕಣ್ಣು ಹಾಯಿಸಿದಾಗ ಒಂದು ವಿದ್ಯಮಾನ ಅವರ ಗಮನ ಸೆಳೆಯಿತು. ಒಬ್ಬ ಮಹಿಳೆ ಬಂದು ಕ್ಯಾಷ್ ಕೌಂಟರ್‌ನಲ್ಲಿ ‘ಒಂದು ಕಾಫಿ, ಒಂದು ಸಸ್ಪೆನ್ಷನ್’ ಅನ್ನುತ್ತಾಳೆ. ಅದಾಗಿ ಕೆಲ ಸಮಯಕ್ಕೆ ಇಬ್ಬರು ಬಂದು ‘ಎರಡು ಬ್ರೆಡ್, ಎರಡು ಸಸ್ಪೆನ್ಷನ್ ಎನ್ನುತ್ತಾರೆ.
ಮತ್ತೆ ಕೆಲಹೊತ್ತಿನ ಬಳಿಕ ಆರು ಜನ ಬಂದವರೇ ’ನಾಲ್ಕು ಊಟ ಎರಡು ಸಸ್ಪೆನ್ಷನ್’ಎಂದು ತಿಳಿಸುತ್ತಾರೆ. ಇದೆಲ್ಲ ನಡೆಯುತ್ತಿರು ವಂತೆಯೇ ಕೆದರಿದ ಕೂದಲಿನ, ಹರಕು ಬಟ್ಟೆ ಧರಿಸಿದ್ದ, ವಯಸ್ಸಾದ ವ್ಯಕ್ತಿಯೊಬ್ಬನ ಆಗಮನ ಆಗುತ್ತದೆ. ಅವನು ನೇರ ಕೌಂಟರ್‌ಗೆ ಹೋಗಿ ‘ಸಸ್ಪೆೆನ್ಷನ್ ಇದೆಯೇ’ ಎಂದು ಕೇಳಲಾಗಿ, ಅವರು, ‘ಇದೆ’ ಎನ್ನುತ್ತ ಅವನ ಕೈಗೆ ಚೀಟಿಯೊಂದನ್ನು ಕೊಡು ತ್ತಾರೆ. ಕೌಂಟರ್‌ಗೆ ಹೋಗಿ ಚೀಟಿ ಕೊಟ್ಟಾಗ ಅವನಿಗೊಂದು ಊಟದ ಪ್ಯಾಕೆಟ್ ಕೊಡುತ್ತಾರೆ. ಆತ ಊಟ ಮಾಡಿ ನಿರಾಳ ಹಾಗೂ ಧನ್ಯತಾಭಾವದಿಂದ ಹೊರಹೋಗುತ್ತಾನೆ.
ಇದನ್ನೆಲ್ಲ ಮೌನವಾಗಿ ಗಮನಿಸುತ್ತಿದ್ದ ಆ ಇಬ್ಬರು, ಕುತೂಹಲ ತಡೆಯಲಾರದೆ ಕ್ಯಾಷ್ ಕೌಂಟರ್ ಬಳಿ ಹೋಗಿ ಕೇಳಿದಾಗ ಅವರಿಗೆ ತಿಳಿದುಬಂದ ವಿಷಯ ವಿದು: ರೆಸ್ಟೊರೆಂಟ್‌ಗೆ ಬರುವ ಜನರು ತಮಗೆ ಮಾತ್ರ ಆಹಾರ ತೆಗೆದುಕೊಳ್ಳದೆ ಮತ್ತೆ ಒಂದೋ ಎರಡೋ -ಹೀಗೆ ತಮ್ಮ ಶಕ್ತಿ ಸಾಮರ್ಥ್ಯ ಹಾಗೂ ಖುಷಿ ಅನುಸಾರ ಹೆಚ್ಚಿನ ಆರ್ಡರ್ ಮಾಡುತ್ತಾರೆ. ಅದಕ್ಕೆ ಹಣ ಕೊಡುತ್ತಾರಾ ದರೂ ಅದನ್ನು ತೆಗೆದುಕೊಳ್ಳುವುದಿಲ್ಲ. ಅದು ‘ಸಸ್ಪೆನ್ಷನ್’ ಅಕೌಂಟ್‌ಗೆ ಹೋಗುತ್ತದೆ. ಅಗತ್ಯ ಇದ್ದವರು ಬಂದು ‘ಸಸ್ಪೆನ್ಷನ್ ಇದೆಯಾ’ ಎಂದು ವಿಚಾರಿಸಿ, ಇದ್ದರೆ ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ಅದರಿಂದ ಪಡೆದು ಕೊಳ್ಳುತ್ತಾರೆ. ಒಂದು ಕಾಫಿ,ತಿಂಡಿ ಮತ್ತು ಊಟಕ್ಕೆ ಪರದಾಡುವ ಗತಿ ಇಲ್ಲದ ಅದೆಷ್ಟೋ ನತದೃಷ್ಟರು ಇರುತ್ತಾರೆ. ಇಂಥ ಬಡವರು, ಅಸಹಾಯಕರಿಗೆ ಸಹಾಯ ಮಾಡುವುದೇ ‘ಸಸ್ಪೆನ್ಷನ್’ ಉದ್ದೇಶ.
ನಾರ್ವೆ ದೇಶದ ರೆಸ್ಟೊರೆಂಟ್‌ಗಳಲ್ಲಿ ಕಂಡುಬರುವ ಪದ್ಧತಿ ಮತ್ತು ವ್ಯವಸ್ಥೆ ಇದು. ಸಾಕಷ್ಟು ಸಮಯದಿಂದ ಈ ವಿಷಯ ಫೇಸ್‌ಬುಕ್, ವಾಟ್ಸ್ ಆ್ಯಪ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾಗೆಂದು ಇದು ತೀರ ಹೊಸ ಸಂಗತಿ ಏನೂ ಅಲ್ಲ. ನಾರ್ವೆ ದೇಶಕ್ಕೆ ಸೀಮಿತವಾದುದೂ ಅಲ್ಲ. ಯುರೋಪಿನ ಹಲವು ದೇಶಗಳಲ್ಲೂ ಇದೆ. ಟರ್ಕಿಯಲ್ಲಿ ಅಸ್ಕಿಡಾ ಎಕ್
ಮರ್ಕ್ (ಬ್ರೆಡ್ ಆನ್ ದಿ ಹ್ಯಾಂಗರ್) ; ಇಟಲಿಯಲ್ಲಿ ಪೆಂಡಿಂಗ್ ಕಾಫ್ಫೆ (ಕಾಫಿ ಸಸ್ಪೆಂಡೆಡ್); ದುಬೈನಲ್ಲಿ ‘ಪೆಂಡಿಂಗ್ ಮೀಲ್’ ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿದೆ.
ತೈವಾನ್, ಹಾಂಗ್‌ಕಾಂಗ್, ಉಕ್ರೇನ್ ಹೀಗೆ ಹಲವು ದೇಶಗಳಲ್ಲಿ ಬಗೆ ಬಗೆಯ ಹೆಸರಿನಲ್ಲಿ ಜಾರಿಯಲ್ಲಿದೆ. ಆದರೆ ನಾರ್ವೆ ಯಲ್ಲಿ ಇಂಥ ರೆಸ್ಟೊರೆಂಟ್‌ಗಳ ಸಂಖ್ಯೆ ಹೆಚ್ಚು. ಹೆಸರು ಬೇರೆ ಬೇರೆ ಆದರೂ ಉದ್ದೇಶ ಒಂದೇ. ಬೇರು ಒಂದೇ. ಅದು- ಇನ್ನೊಬ್ಬರಿಗೆ ನೆರವಾಗುವುದು. ಹಸಿದವರಿಗೆ ಆಹಾರ ನೀಡಿ ಅವರ ಹಸಿವು ನೀಗಿಸುವುದು. ಇದು ಮಾತ್ರವಲ್ಲದೆ, ನಾರ್ವೆ ಸೇರಿದಂತೆ ಇತರ
ದೇಶಗಳಲ್ಲಿ ಮತ್ತೊಂದು ವ್ಯವಸ್ಥೆಯೂ ಇದೆ. ಅದೇ ಫುಡ್ ಬ್ಯಾಂಕ್. ಬ್ಲಡ್ ಬ್ಯಾಂಕ್ ಮತ್ತಿತರ ನಾನಾ ಬಗೆಯ ಬ್ಯಾಂಕು ಗಳಂತೆಯೇ ಇದೂ ಒಂದು ಎನ್ನಬಹುದು. ಅಂದರೆ ಮುಖ್ಯವಾಗಿ ರೆಸ್ಟೊರೆಂಟ್‌ಗಳು ತಮ್ಮಲ್ಲಿ ಉಳಿದ ಆಹಾರಗಳನ್ನು ಈ ಬ್ಯಾಂಕ್‌ಗಳಿಗೆ ನೀಡುತ್ತವೆ. ಅಲ್ಲಿ ಸಂಗ್ರಹವಾದ ಆಹಾರವನ್ನು ಅಗತ್ಯ ಇರುವವವರಿಗೆ ವಿತರಿಸಲಾಗುತ್ತದೆ.
ಇದರಿಂದ ಎರಡು ಉದ್ದೇಶ ಈಡೇರುತ್ತದೆ. ಆಹಾರ ವ್ಯರ್ಥ ವಾಗುವುದನ್ನು ತಪ್ಪಿಸುವುದು ಒಂದು. ಎರಡನೆಯದು ಈ ಆಹಾರ ವನ್ನು ಅಗತ್ಯ ಇರುವವವರೆಗೆ ಕೊಡುವುದು. ಒಬ್ಬರಿಂದ ಪಡೆದು ಇನ್ನೊಬ್ಬರಿಗೆ ನೀಡುವುದು. ಕೊಡುವವರಿಗೆ ಅದರ ಅಗತ್ಯ ಇರುವುದಿಲ್ಲ ಇಲ್ಲವೆ ಹೆಚ್ಚಾಗಿರುತ್ತದೆ. ತೆಗೆದುಕೊಳ್ಳುವವರ ಬಳಿ ಅದು ಇರುವುದಿಲ್ಲ ಹಾಗೂ ಅದರ ಅಗತ್ಯ ಅವರಿಗೆ ಇರುತ್ತದೆ. ಹೀಗೆ ಇದ್ದವರು ಮತ್ತು ಇಲ್ಲದವರ ನಡುವಿನ ಸೇತುವೆ ಈ ಫುಡ್ ಬ್ಯಾಂಕ್ ಎನ್ನಬಹುದು.
ಇದನ್ನೆಲ್ಲ ಈಗ ಪ್ರಸ್ತಾಪಿಸುವ ಹಾಗೂ ನೆನಪಿಸಿಕೊಳ್ಳುವುದಕ್ಕೆ ಕಾರಣವಿದೆ. ಇದೀಗ ಬೆಂಗಳೂರಿನಲ್ಲೂ ಇಂಥದೊಂದು ಶ್ಲಾಘನೀಯ ವ್ಯವಸ್ಥೆ ಜಾರಿಗೆ ಬಂದಿದೆ. ‘ಸಂಚಿಗೊಂದು’ ಎನ್ನುವ ಹೆಸರಿನ ಈ ಕಾರ‌್ಯಕ್ರಮಕ್ಕೆ ಗಾಂಧಿ ಜಯಂತಿಯ ದಿನ ಚಾಲನೆ ದೊರೆತಿದೆ. ಬೆಂಗಳೂರು ಹೋಟೆಲ್‌ಗಳ ಸಂಘ ಮತ್ತು ರೋಟರಿ ಸಂಸ್ಥೆಗಳು ಜತೆಗೂಡಿ ಇದನ್ನು ಪ್ರಾರಂಭಿಸಿವೆ. ಇದು
ಕೂಡ ‘ಸಸ್ಪೆನ್ಷನ್’ ಅಥವಾ ‘ಒನ್ ಫಾರ್ ದಿ ವಾಲ್’ ನಂಥ ಕಲ್ಪನೆಯೇ. ಹೋಟೆ ಲ್‌ಗೆ ಬರುವವರು ತಮಗೆ ಬೇಕಾದ ತಿಂಡಿ ಕಾಫಿ ಊಟದ ಜತೆಗೆ ಒಂದೋ ಎರಡೋ ಹೆಚ್ಚಿಗೆ ಆರ್ಡರ್ ಮಾಡಿ ಅದನ್ನು ‘ಸಂಚಿ’ಗೆ ಎಂದು ಹೇಳಬಹುದು. ಇಲ್ಲಿ ಸಂಚಿ ಎಂದರೆ ಚೀಲ ಎಂದರ್ಥ. ಗ್ರಾಹಕರು ಹೀಗೆ ಹೆಚ್ಚುವರಿಯಾಗಿ ಪಡೆದ ಚೀಟಿಯನ್ನು ಅಲ್ಲಿರುವ ಸಂಚಿ ಅಥವಾ ಡಬ್ಬದಲ್ಲಿ ಹಾಕಲಾಗು ವುದು. ಅಗತ್ಯ ಇರುವವವರು ಈ ಟೋಕನ್ ಉಪಯೋಗಿಸಿ ಉಚಿತವಾಗಿ ಆಹಾರ ಪಡೆಯಬಹುದು.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈಗಾಗಲೇ ಇರುವ ಇಂಥದೊಂದು ಕಾರ‌್ಯಕ್ರಮ ನಮ್ಮ ಬೆಂಗಳೂರಿನಲ್ಲೂ ಜಾರಿಗೆ ಬರುತ್ತಿರುವುದು ಪ್ರಶಂಸನೀಯ. ಪ್ರಾರಂಭದಲ್ಲಿ 25 ಪ್ರಮುಖ ಹೋಟೆಲ್‌ಗಳು ಇದಕ್ಕೆ ಕೈಜೋಡಿಸಿವೆ. ‘ಕೊಡುವಲ್ಲೂ ಘನತೆ; ಪಡೆಯುವಲ್ಲೂ ಘನತೆ’ ಎಂಬುದು ಇದರ ಘೋಷ ವಾಕ್ಯ. ಹಾಗೆ ನೋಡಿದರೆ ಹಸಿದವರಿಗೆ ಅನ್ನ ನೀಡುವುದು ನಮಗೆ ಹೊಸದೇನೂ ಅಲ್ಲ. ದಾಸೋಹ ಸಂಸ್ಕೃತಿ ನಮ್ಮ ಭಾರತೀಯರಲ್ಲಿ ಹಾಸುಹೊಕ್ಕಾಗಿದೆ. ಧಾರ್ಮಿಕ ಕ್ಷೇತ್ರ, ಸ್ಥಳಗಳಲ್ಲಿ ನಿತ್ಯವೂ ದಾಸೋಹ ನಡೆ ಯುವುದು ನಮಗೆಲ್ಲ ಗೊತ್ತು. ಅನೇಕ ಮಠ ಮಾನ್ಯ ಸಂಸ್ಥೆಗಳಲ್ಲಿ ತ್ರಿವಿಧ ದಾಸೋಹ ಅಂದರೆ ಅನ್ನ, ಶಿಕ್ಷಣ, ವಸತಿ ಅನತಿ
ಕಾಲದಿಂದಲೂ ನಡೆದುಕೊಂಡು ಬರುವಂಥದ್ದೇ. ಇದು ಮಾತ್ರವಲ್ಲದೆ ಬಡಬಗ್ಗರಿಗೆ ಪ್ರತಿದಿನ ಉಚಿತವಾಗಿ ತಿಂಡಿ, ಊಟದ ವ್ಯವಸ್ಥೆ ಮಾಡುತ್ತಿರುವ ಸಮಾಜ ಸೇವಾ ಸಂಸ್ಥೆಗಳ ಸಂಖ್ಯೆಯೂ ಸಾಕಷ್ಟಿದೆ. ಅದಮ್ಯ ಚೇತನ, ಇಸ್ಕಾನ್‌ನಂಥ ಸಂಸ್ಥೆಗಳು ದಿನವೂ ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಊಟ ಪೂರೈಕೆ ಮಾಡುತ್ತಿವೆ.
ಸಾಕಷ್ಟು ಹಿಂದಿನಿಂದಲೂ ಸರಕಾರಗಳು ಕೂಡ ಹಸಿದವರಿಗೆ ಅನ್ನ ನೀಡುವ ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡಿವೆ. ಮಕ್ಕಳು ಊಟವಿಲ್ಲದ ಕಾರಣ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಯನ್ನು ಜಾರಿಗೆ ತರಲಾಗಿದೆ. ಇದೀಗ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಪೋಷಣ್ ಎಂಬ ಕಾರ‌್ಯಕ್ರಮವೂ ಜಾರಿಯಲ್ಲಿದೆ.
ಸಿದ್ದರಾಮಯ್ಯ ಅವರ ಸರ ಕಾರದಲ್ಲಿ ಜಾರಿಗೆ ಬಂದ ಅನ್ನಭಾಗ್ಯವೂ ಇಂಥ ದೊಂದು ಪ್ರಮುಖ ಯೋಜನೆಯೇ. ಇಂದಿರಾ ಕ್ಯಾಂಟೀನ್ ಕೂಡ ಬಡವರ ಹಸಿವು ತಣಿಸುವ ನಿಟ್ಟಿನ ಯೋಜನೆಯೇ.
ಇತ್ತೀಚಿನ ಕರೋನಾ ಸಂಕಷ್ಟ ಕಾಲದಲ್ಲೂ ಈ ರೀತಿಯ ಕಾರ‌್ಯಕ್ರಮಗಳು ಸಾಕಷ್ಟು ನಡೆದಿವೆ. ಬಡವರಿಗೆ ಆಹಾರ ಕಿಟ್ ವಿತರಣೆಯಂಥ ಸಾಮೂಹಿಕ ಕಾರ‌್ಯಕ್ರಮಗಳು ಹೇರಳವಾಗಿ ನಡೆದಿರುವುದು ನಮ್ಮ ಕಣ್ಣೆದುರಿಗೇ ಇದೆ. ಹೀಗೆ ಸರಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಇಂಥ ಯೋಜನೆಗಳನ್ನು ಸಾಕಷ್ಟು ಹಾಕಿಕೊಂಡು ಮುನ್ನಡೆಸಿಕೊಂಡು ಹೋಗುತ್ತಿವೆ. ಆ ನಿಟ್ಟಿನಲ್ಲಿ ನೋಡಿದರೆ ಸಸ್ಪೆನ್ಷನ್ ಅಥವಾ ಸಂಚಿಗೊಂದು ಯೋಜನೆಗಳು ತೀರ ಮಹತ್ತರ ಎಂದೇನೂ ಅನಿಸುವುದಿಲ್ಲ. ಆದರೆ ಇವೆರಡ ರಲ್ಲಿ ಇರುವ ಪ್ರಮುಖ ವ್ಯತ್ಯಾಸವನ್ನು ನಾವು ಗಮನಿಸಬೇಕು. ಬಿಸಿಯೂಟ, ದಾಸೋಹ ಮತ್ತಿತರ ಹೆಸರಿನವು ಸಾರ್ವತ್ರಿಕ ಯೋಜನೆಗಳು. ಅಂದರೆ ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಹೋದರೆ ಪ್ರಸಾದವೆಂದು ಊಟಮಾಡಿ ಬರುವವರೇ ಹೆಚ್ಚು. ಹೊರತು ಅವರಿಗೆ ಅನಿವಾರ್ಯ ಅಥವಾ ಅಗತ್ಯ ಇರಲಿಕ್ಕಿಲ್ಲ.
ಹಾಗೆಯೇ, ಪಡಿತರ, ಊಟ ನೀಡುವ ಸರಕಾರದ ಕಾರ‌್ಯಕ್ರಮಗಳು ಸಾಮಾಜಿಕ ಸುರಕ್ಷತಾ ಯೋಜನಾ ಕ್ರಮಗಳು. ಇದರಿಂದ ಲಾಭವಾಗಿಲ್ಲ ಎಂದಲ್ಲ. ಆದರೆ ಸರಕಾರಿ ಕಾರ‌್ಯಕ್ರಮಗಳಾದ್ದರಿಂದ ಅವುಗಳ ಸಮರ್ಪಕ ಅನುಷ್ಠಾನ ಎಷ್ಟರಮಟ್ಟಿಗೆ ಆಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ. ಸೋರಿಕೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇಂಥವೂ ಇರುತ್ತವೆ. ‘ಸರಕಾರಿ ಕೆಲಸಗಳು ಹಳಿ ಹಾಗೂ ಹಾದಿ ತಪ್ಪುವ ಸಾಧ್ಯತೆ ಹೆಚ್ಚು. ಆದರೆ ಸಸ್ಪೆನ್ಷನ್, ಸಂಚಿಗೊಂದು ಕಾರ್ಯಕ್ರಮಗಳು ವೈಯಕ್ತಿಕ ಮಟ್ಟದಲ್ಲಿರುತ್ತವೆ.
ಮತ್ತೊಬ್ಬರಿಗಾಗಿ, ಮತ್ತೊಬ್ಬರ ಕಷ್ಟ ಅರಿತು, ಅವರಿಗೆ ನೆರವಾಗುವ ಭಾವ ಅದರಲ್ಲಿರುತ್ತದೆ. ದಾಸೋಹದಂಥ ಕಾರ‍್ಯಕ್ರಮಗಳಲ್ಲಿ ಅಗತ್ಯ ಇರುವವರಾರು, ಇಲ್ಲದವರಾರು ಎಂಬುದೇ ಗೊತ್ತಾಗದು. ಆದರೆ ಇದು ನಿರ್ದಿಷ್ಟವಾಗಿರುತ್ತದೆ. ಹಸಿವಿದ್ದವರು, ಅಗತ್ಯ ಇರುವವವರು, ಅಸಹಾಯಕರು, ನಿರ್ಗತಿಕರು- ಈ ಥರದವರು ಬಂದು ಇದರ ಉಪಯೋಗ ಪಡೆಯುತ್ತಾರೆ. ಅಲ್ಲದೆ ಇಂಥವರು ಇಂಥರಿಗೇ ಕೊಟ್ಟರು ಎಂಬುದು ಇಲ್ಲಿ ಇರುವುದಿಲ್ಲ. ಆಸಕ್ತರು ಒಂದೋ ಎರಡೋ ಅಥವಾ ತಮಗೆ ಇಷ್ಟವಾಗುವಷ್ಟು ಹೆಚ್ಚಿನ ಆರ್ಡರ್‌ಗೆ ಹಣ ಕೊಟ್ಟು ಹೋಗುತ್ತಾರೆಯೇ ಹೊರತು ಅದರ ಫಲಾನುಭವಿಗಳು ಯಾರು ಎಂಬುದು ಗೊತ್ತಾಗದು. ಹಾಗೆಯೇ
ಚೀಟಿಯ ಲಾಭ ಪಡೆವರಿಗೆ ಯಾರಿಂದ ಪಡೆದದ್ದು ಎಂಬುದು ಗೊತ್ತಾಗದು. ಹೀಗಾಗಿ ಇದು ಗೊತ್ತಿಲ್ಲದವರಿಗೆ, ಗೊತ್ತಿಲ್ಲದೆ ಮಾಡುವ ಸಹಾಯ.
ಆದರೆ ಅಗತ್ಯ ಇರುವ ಯಾರೋ ಒಬ್ಬರಿಗೆ ನೆರವಾಗಿದ್ದಂತೂ ಹೌದು. ಅದೇ ರೀತಿ ನೆರವು ಪಡೆದವರಿಗೂ ಇಂಥವರಿಂದಲೇ ಎಂದಿಲ್ಲದಿರುವ ಕಾರಣ ಅವರಿಗೂ ಕೊಂಚ ನಿರಾಳ. ಇಲ್ಲವಾದರೆ ನೆರವು ನೀಡಿದವರಿಗೆ ಮೇಲರಿಮೆ, ಪಡೆದವರಿಗೆ ಕೀಳರಿಮೆ ಕಾಡುವ ಸಂಭವ ಇರುತ್ತದೆ. ಆದರೆ ಇಬ್ಬರ ಮನಸಿನಲ್ಲೂ ಅವ್ಯಕ್ತವಾದ ಆನಂದ, ಧನ್ಯತಾಭಾವ ಇರುವುದಂತೂ ಹೌದು.
ಇಲ್ಲಿ ಇನ್ನೊಂದು ವಿಷಯವನ್ನು ಹೇಳಬೇಕು. ಕೆಲವು ಸಮಯದ ಹಿಂದೆ ಮತ್ತೊಂದು ಸುದ್ದಿ ಹರಿದಾಡುತ್ತಿತ್ತು. ಅದೆಂದರೆ ಹೋಟೆಲ್ ಅಥವಾ ಅಂಗಡಿ, ಇಲ್ಲವೆ ಯಾವುದಾದರೂ ಸಾರ್ವಜನಿಕ ಸ್ಥಳದಲ್ಲಿ ಒಂದು ಫ್ರಿಜ್ ಇರುತ್ತದೆ. ಅಲ್ಲಿ ಕೆಲವು ಆಹಾರ ವಸ್ತುಗಳಿರುತ್ತವೆ. ಅಗತ್ಯ ಇರುವವರು ಅದರಲ್ಲಿ ಬೇಕಾದುದನ್ನು ತೆಗೆದುಕೊಂಡು ಹೋಗಬಹುದು. ಹಾಗೆಯೇ ಯಾರು ಬೇಕಾ
ದರೂ ಆಹಾರವನ್ನು ತಂದು ಫ್ರಿಜ್‌ನಲ್ಲಿ ಇಡಬಹುದು. ಇದೂ ಒಂದು ರೀತಿಯಲ್ಲಿ, ಇರುವವವರು ಇಲ್ಲದವರಿಗೆ ಕೊಡುವ, ತನ್ಮೂಲಕ ನೆರವಾಗುವ ವ್ಯವಸ್ಥೆ. ಜತೆಗೆ ಆಹಾರ ಮತ್ತಿತರ ವಸ್ತುಗಳು ವ್ಯರ್ಥವಾಗುವುದ್ನು ತಡೆಗಟ್ಟುವ ಕ್ರಮ ಆಹಾರವನ್ನು ಮೀರಿದ ಮತ್ತೊಂದು ವ್ಯವಸ್ಥೆಯೂ ಕೆಲಕಾಲದ ಹಿಂದೆ ಸದ್ದು ಮಾಡಿತ್ತು.
ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ತಲೆಎತ್ತಿದ ಇವನ್ನು ವಾಲ್ ಆಫ್ ಕೈಂಡ್‌ನೆಸ್ ಅಂದರೆ ಕರುಣಾ ಗೋಡೆ ಎಂದು ಕರೆಯುತ್ತಾರೆ. ಇಲ್ಲೂ ಅಷ್ಟೇ. ವ್ಯರ್ಥವಾದ, ಅನಗತ್ಯವಾದ, ಬೇಡವಾದ ಇಲ್ಲವೆ ಹೆಚ್ಚಾಗಿರುವ ವಸ್ತುಗಳನ್ನು ಈ
ಸ್ಥಳದಲ್ಲಿ ತಂದು ಇಡಬಹುದು. ಬಟ್ಟೆಬರೆ, ಪಾತ್ರೆ, ಆಟಿಕೆ ಸಾಮಾನು, ಪುಸ್ತಕ – ಏನೇ ಆಗಿರಬಹುದು. ಹೊರಗೆ ಬಿಸಾಕುವ ಬದಲು ಇಲ್ಲಿ ತಂದಿಟ್ಟರೆ ಆಯಿತು. ಅಗತ್ಯ ಇರುವವವರು, ಆದರೆ ಅವುಗಳನ್ನು ಳ್ಳುವ ಸಾಮರ್ಥ್ಯ ಇಲ್ಲದವರು ಇಲ್ಲಿಗೆ ಬಂದು ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು- ಉಚಿತವಾಗಿ.
ಇವೆಲ್ಲ ಒಬ್ಬರಿಗೊಬ್ಬರು ನೆರವಾಗುವಂಥ ಮನುಷ್ಯನ ಮೂಲಸ್ವಭಾವದ ನಿದರ್ಶನಗಳು. ತಿನ್ನುವುದು ಎಂದರೆ ಆಹಾರಕ್ಕೆ ಸಂಬಂಧಿಸಿದ್ದು ಮಾತ್ರವೇ ಅಲ್ಲ. ಅದಕ್ಕೆ ಈಚಿನ ದಿನಗಳಲ್ಲಿ ಲಂಚ ಹೊಡೆಯುವುದು ಎಂಬಂಥ ಕೆಟ್ಟ ಅರ್ಥವೂ ಸೇರಿಕೊಂಡಿದೆ. ಅಂದರೆ ತಮ್ಮದಲ್ಲದ್ದನ್ನು, ತಮಗೆ ಅಗತ್ಯವಿಲ್ಲದಿದ್ದರೂ ಪಡೆಯುವುದು ಎಂದೇ ತಾನೆ ಇದರ ಅರ್ಥ? ಮಾಮೂಲು ತಿನ್ನುವ ವಿಚಾರಕ್ಕೂ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ.
ನಾವು ಅನೇಕರು, ಅನೇಕ ಸಲ ಹಸಿವಿಲ್ಲದಿದ್ದರೂ ತಿನ್ನುತ್ತೇವೆ. ಬೇಡದಿರುವುದನ್ನು ಬೇಡವಾದ ಸಮಯದಲ್ಲಿ ತಿನ್ನುತ್ತೇವೆ. ಈ ಸಂದರ್ಭದಲ್ಲಿ ಬಹಳಷ್ಟನ್ನು ವ್ಯರ್ಥ ಮಾಡುತ್ತೇವೆ. ತುತ್ತುಕೂಳಿಗೂ ಪರದಾಡುತ್ತಿರುವವರು ಒಂದು ಕಡೆಯಾದರೆ, ಹೀಗೆ ಸುಮ್ ಸುಮ್ನೆ ತಿನ್ನುವ ಇನ್ನೊಂದು ವರ್ಗ. ಹೊಟ್ಟೆ ತುಂಬಿದ ಈ ಜನರಿಗೆ ಹಸಿದವರ ಈ ಸಮಸ್ಯೆ, ಸಂಕಟ, ಮುಜುಗರ, ಅವಮಾನ ಇವೆಲ್ಲ ಅರ್ಥವಾಗುವುದಿಲ್ಲ. ಆದರೆ ’ಸಂಚಿಗೊಂದು’, ’ಸಸ್ಪೆನ್ಷನ್’ ನಂಥ ಕಾರ‌್ಯಕ್ರಮಗಳು ಇನ್ನೊಬ್ಬರ ಕಷ್ಟಕ್ಕಾ ಗುವ ಗುಣವನ್ನು ನಮ್ಮಲ್ಲಿ ಬೆಳೆಸಲು ನೆರವಾಗುತ್ತವೆ. ಅದೇ ಇದರ ಹೆಗ್ಗಳಿಕೆ. ಅಲ್ಲವೆ ?
ನಾಡಿಶಾಸ್ತ್ರ
ಬರಿ ಬೆಟ್ಟದಷ್ಟು ಕೂಡಿಟ್ಟರೇನು ಚೆನ್ನ
ಹಸಿದವರಿಗೆ ಕೊಡಬೇಕು ಹಿಡಿ ಅನ್ನ
ಅದರಲ್ಲೇ ಕಾಣಬೇಕು ಧನ್ಯತೆಯನ್ನ
ಇಲ್ಲೇ ಕಾಣೋಣ ಮಾನವೀಯ ಗುಣವನ್ನ