ಬುಲೆಟ್ ಪ್ರೂಫ್
ವಿನಯ್ ಖಾನ್
ಅದು 2012 ರ ಡಿಸೆಂಬರ್ 16, ರಾತ್ರಿ 9.30ರ ಸುಮಾರಿಗೆ ‘ಲೈಫ್ ಆಫ್ ಪೈ’ ಚಿತ್ರ ನೋಡಿಕೊಂಡು ದೆಹಲಿಯ ಮುರ್ನಿಕಾ ಏರಿಯಾದಿಂದ ದ್ವಾರಕ ಎನ್ನುವ ಮತ್ತೊಂದು ಏರಿಯಾಗೆ ಹೋಗಲು ಹುಡುಗ-ಹುಡುಗಿ ಕಾಯುತ್ತಿದ್ದರು. ಒಂದು ಬಿಳಿ ಖಾಸಗಿ ಬಸ್ ಅವರ ಎದುರಿಗೆ ಬಂದು ನಿಂತಿತು. ಅದರಿಂದಿ ಇಳಿದ ೧೫-೧೬ ವರ್ಷದ ಹುಡುಗನೊಬ್ಬ ಯುವತಿಯ ಬಳಿ ಬಂದು ‘ಅಕ್ಕಾ, ನೀವ್ ಎಲ್ಲಿಗೆ ಹೋಗ್ಬೇಕು’ ಎಂದು ಕೇಳಿದ.
ಮೊದಲ ಸಲಕ್ಕೆ ಅವಳು ಏನೂ ಉತ್ತರಿಸಲಿಲ್ಲ. ಆದರೆ ೨-೩ ಬಾರಿ ‘ಅಕ್ಕಾ’ ಎಂದು ಸಂಬೋಧಿಸಿದ್ದರಿಂದಲೋ ಏನೋ ಕೊನಡೆಗೊಮ್ಮೆ ‘ದ್ವಾರಕಕ್ಕೆ ಹೋಗಬೇಕು’ ಎಂದಳು. ಅದಕ್ಕವನು, ‘ನಾವೂ ಅದೇ ರೂಟ್‌ನಲ್ಲೇ ಹೊರಟಿದ್ದೇವೆ, ನೀವ್ಯಾಕೆ ನಮ್ಮದೇ ಬಸ್‌ನಲ್ಲಿ ಪಯಣಿಸಬಾರದು?’ ಎಂದ. ಮೊದಲೇ ರಾತ್ರಿ, ಜತೆಗೆ ಮೇಲಿಂದ ಮೇಲೆ ಅಮ್ಮನ ಕರೆಗಳು ಬರುತ್ತಲೇ ಇದ್ದವು. ಹೀಗಾಗಿ ಬೇಗ ಮನೆಗೆ ಹೋಗಬೇಕಿರುವ ದರ್ದು ಅವಳನ್ನು ಆ ಬಸ್ಸಿಗೆ ಹತ್ತುವ ಹಾಗೆ ಪ್ರೇರೇಪಿಸಿತು.
ಅಲ್ಲಿಂದಲೇ ನೋಡಿ ಅವಳ ಕೆಟ್ಟ ಸಮಯ ಶುರುವಾಗಿದ್ದು. ಬಸ್ ಹತ್ತಿ ನೋಡಿದಾಗ ಕೆಲವೇ ಕೆಲವು ಜನರಿದ್ದರು. ತುಸು ಸಂಶಯದೊಂದಿಗೆ ಮುದುಡುತ್ತಾ ಕುಳಿತಿದ್ದವಳಿಗೆ, ಕೆಲವೇ ಕ್ಷಣದಲ್ಲಿ ಪರಿಸ್ಥಿತಿ ಅರಿವಾಗ ತೊಡಗಿತ್ತು. ಒಬ್ಬೊಬ್ಬರೇ ಬಂದು ಕೀಟಲೆ ಕೊಡಲು ಆರಂಭಿಸಿದರು. ಇದ್ದಕ್ಕಿದ್ದಂತೆ ಬಸ್‌ನ ಕಿಡಕಿ ಬಾಗಿಲುಗಳನ್ನು ಮುಚ್ಚಲಾಯಿತು. ಅವರು ಹೋಗಬೇಕಾಗಿದ್ದ ದಾರಿಯನ್ನು ಬಿಟ್ಟು ಮತ್ತೊಂದೆಡೆ ಬಸ್ ಹೋಗುತ್ತಿದ್ದುದು ಅರಿವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಆಗ ಸ್ನೇಹಿತನೂ ಆಕ್ಷೇಪಿಸಲಾರಂಭಿಸಿದ. ಆತನೊಂದಿಗೆ ಜಗಳಕ್ಕಿಳಿದ ಅವರು ಕಬ್ಬಿಣದ ರಾಡ್‌ನಿಂದ ಆತ ಮೇಲೆ ದಾಳಿ ಮಾಡಿದರು.
ಯುವತಿಯ ಮೇಲೂ ಹಲ್ಲೆ ನಡೆಯಿತು. ಅರೆಪ್ರಜ್ಞಾವಸ್ಥೆಗೆ ಜಾರಿದ ಆಕೆಯನ್ನು ಬಸ್ಸಿನ ಮುಂಭಾಗಕ್ಕೆ ಎಳೆದುಕೊಂಡು
ಹೋಗಿ ಚಲಿಸುವ ಬಸ್ಸಿನಲ್ಲಿಯೇ ಅವಳ ಮೇಲೆ ಬರ್ಬರವಾಗಿ ಅತ್ಯಾಚಾರ ಎಸಗಲಾಯಿತು. ಪ್ರತಿಭಟನೆಗೆ ಪ್ರತಿಯಾಗಿ ಮತ್ತೆ
ಕಬ್ಬಿಣದ ಸರಳಿನಿಂದ ಹಲ್ಲೆ. ಸ್ವಲ್ಪವೇ ಸ್ವಲ್ಪ ಸಮಯದ ಅಂತರದಲ್ಲಿ ಅವಳ ಇಡೀ ದೇಹ ರಕ್ತದ ಮಡುವಿನಲ್ಲಿ ಮುಳುಗಿತ್ತು. ಬಸ್ಸಿನಲ್ಲಿದ್ದ ಆರೂ ಜನ ಸೇರಿ ಆ ಹುಡುಗಿಗೆ ಚಲಿಸುವ ಬಸ್ಸಿನಲ್ಲಿಯೇ ನರಕ ತೋರಿಸಿ, ಯಾವುದೋ ರಸ್ತೆಯ ಪಕ್ಕದಲ್ಲಿ ಅವರಿಬ್ಬರನ್ನೂ ಕಸದ ರೀತಿಯಲ್ಲಿ ಎಸೆದು ಜಾಗ ಖಾಲಿ ಮಾಡಿದ್ದರು. ಕೊನೆಗೆ ಸುತ್ತಲಿನ ನಿವಾಸಿಗಳು ಅವರನ್ನು ನೋಡಿ, ಆಸ್ಪತ್ರೆಗೆ ಸಾಗಿಸಿ, ಸುದ್ದಿಯನ್ನು ಮನೆಯವರಿಗೆ ಮುಟ್ಟಿಸಿದ್ದರು.
ತಾಯಿ ಅವಳನ್ನು ನೋಡಿದಾಗ ಅವಳ ಬಾಯಿಂದ ಹೊರಟ ಮೊದಲ ಶಬ್ದ ‘ಸಾರಿ ಅಮ್ಮ’. ನಿಮಗೆ ಗೊತ್ತಾಗಿರಬಹುದು ಇದು
ಪ್ರಪಂಚಾದ್ಯಂತ ಸದ್ದು ಮಾಡಿದ ‘ನಿರ್ಭಯಾ’ ಪ್ರಕರಣ. ಅದಾದ ಸ್ವಲ್ಪ ದಿನಕ್ಕೇ ನಿರ್ಭಯಾ ಕೊನೆಯುಸಿರನ್ನೂ ಎಳೆದಳು. ರಾಷ್ಟ್ರಾದ್ಯಂತ ಜನ ಆಕ್ರೋಷಿತರಾಗಿ ಪ್ರತಿಭಟಿಸಿದರಲ್ಲದೇ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒಕ್ಕೊರಲಿನಿಂದ ಒತ್ತಾಯಿಸಿದರು. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯೂ ಆಯಿತು. ಜತೆಗೆ ಕಾನೂನಿನಲ್ಲೂ ಹಲವಾರು ಬದಲಾವಣೆಗಳು ಆದವು.
ಫಾಸ್ಟ್- ಟ್ರಾಕ್ ಕೋರ್ಟ್ ಗಳೂ ಅಸ್ತಿತ್ವ ಪಡೆದುಕೊಂಡವು. ಅತ್ಯಾಚಾರಿಗಳಿಗೆ ೨೦೨೦ರಲ್ಲಿ ಗಲ್ಲು ಜಾರಿಯೂ ಆಯಿತು. ‘ನಿರ್ಭಯಾ ಹತ್ಯೆ’ಯ ಪ್ರಕರಣದ ಅಪರಾಽಗಳಿಗೆ ತಕ್ಕ ಶಿಕ್ಷೆ ಆಯಿತು ಎಂದು ಜನರೂ ಸಂತಸ, ಸಮಾಧಾನಪಟ್ಟರು. ಆದರೆ ಮುಂದೆ? ಮೊನ್ನೆ ಮೊನ್ನೆಯ ಘಟನೆ ನೋಡಿ, ೧೦ ವರ್ಷದ ಮಗುವಿಗೆ ಟ್ಯೂಷನ್ ಇದೆ ಎಂದು ಅಲ್ಲಿನ ೫೫ ವರ್ಷದ ಶಿಕ್ಷಕನೊಬ್ಬ ಫೋನ್ ಮಾಡಿ ಕರೆಸಿಕೊಂಡು, ಅತ್ಯಾಚಾರ ಎಸಗಿದ. ಕೊನೆಗೆ ನಿರ್ಮಾಣ ಹಂತದಲ್ಲಿದ್ದ ಮನೆಯೊಂದರ ಸಂಪ್‌ನಲ್ಲಿ ಆಕೆಯ ದೇಹ ಎಸೆದುಬಿಟ್ಟಿದ್ದ. ಸಂಜೆಯಾದರೂ ಮನೆಗೆ ಬಾರದ ಮಗುವನ್ನು ಹುಡುಕುತ್ತ ಪೋಷಕರು ಪೊಲೀಸ ರಿಗೆ ದೂರುಕೊಟ್ಟರು.
ಪೊಲೀಸರ ಜತೆಗೂ ಮಗುವನ್ನು ಹುಡುಕುವ ನಾಟಕವಾಡಿದ್ದ ದುರುಳ. ಸತ್ಯಗೊತ್ತಾದ ಮೇಲೆ ಆತನ ಬಂಧನವೇನೋ. ಶಿಕ್ಷೆಯೂ ಆಗಬಹುದು. ಎಲ್ಲೋ ಮಂಡ್ಯದ ಕೆಲವೆಡೆ ಹೋರಾಟಗಳೂ ಆದವು. ಮಂಡ್ಯ ಸಂಸದೆ ಸುಮಲತಾರನ್ನು ಜನ ನಿಂದಿಸಲು ಆರಂಭಿಸಿದ್ದರಿಂದ, ಆಕೆಯೂ ಬಂದು ‘ಅಪರಾಧಿಗೆ ಶಿಕ್ಷೆ ಕೊಡಿಸುವ ತನಕ ನಾನು ಸುಮ್ಮನಿರಲ್ಲ’ ಎಂಬ ವೀರಾವೇಷದ ಮಾತನಾಡಿ, ೧೦ ಲಕ್ಷ ರು . ಸಹಾಯದನ ಕೊಟ್ಟು ಹೋದರು. ಇಲ್ಲಿಗೆ ಮಳವಳ್ಳಿ ಅತ್ಯಾಚಾರದ ಕೇಸ್‌ನ ಕಥೆ ಮುಗೀತು.
ಆದರೆ ಮಗು? ೨೦೧೯ರಲ್ಲಿ ಹೈದರಾಬಾದ್, 2017ರಲ್ಲಿ ಉನ್ನಾವೋ, ಹತ್ರಾಸ್, ಕಥುವಾ, ಬಡೌನ್, ಶಕ್ತಿ ಮಿಲ್ಸ್ ಗ್ಯಾಂಗ್ ರೇಪ್, ಜಿಶಾ…… ಹೀಗೆ (ಇದರಲ್ಲಿ ಕೆಲವು ಊರಿನ ಹೆಸರುಗಳು ಸೇರಿಕೊಂಡಿವೆ. ಏಕೆಂದರೆ ಅತ್ಯಾಚಾರ ಸಂತ್ರಸ್ತೆಯ ಹೆಸರನ್ನು ಬಯಲು ಮಾಡುವುದು ಅಸಂವಿಧಾನಿಕ) ಇದು ದೇಶದ ಗಮನ ಸೆಳೆದ ಅತ್ಯಾಚಾರ ಪ್ರಕರಣಗಳು. ಇದನ್ನು ಬಿಟ್ಟೂ ಲಕ್ಷಾಂತರ ಪ್ರಕರಣಗಳು ಆಗಿವೆ, ಆಗುತ್ತಲೇ ಇವೆ.
ಅತ್ಯಾಚಾರಗಳಾದಗಲೆಲ್ಲ ಜನ ಬೀದಿಗೆ ಇಳಿದು ಹೋರಾಟ ಮಾಡಿ, ಕ್ಯಾಂಡೆಲ್ ಹಿಡಿದು, ಆತ್ಯಾಚಾರಿಗೆ ಹಿಡಿಶಾಪ ಹಾಕಿ,
ಸಂತ್ರಸ್ತೆಯ ಬಗ್ಗೆ ಕರುಣೆಯ ನಾಲ್ಕು ಮಾತುಗಳನ್ನಾಡುತ್ತಾರೆ, ಮುಂದೆ ಹೋರಾಟದ ತೀವ್ರತೆ ಜಾಸ್ತಿ ಆದಾಗ ಸರಕಾರ
ಒಂದಷ್ಟು ಪರಿಹಾರದ ಮೊತ್ತವನ್ನು ಪಾಲಕರಿಗೆ ಕೊಟ್ಟು ಕೈತೊಳೆದುಕೊಳ್ಳುತ್ತದೆ. ಸುದ್ದಿ ಮಾಧ್ಯಮದವರೂ ಬೇರೆ
ಪ್ರಮುಖ (?) ಸುದ್ದಿಗಳಲ್ಲಿ ಇದನ್ನು ಮರೆಯುತ್ತಾರೆ.
ಆರೋಪಿಯನ್ನು ಕೋರ್ಟ್‌ಗೆ ಹಾಜರು ಪಡಿಸಿದ ಬಳಿಕ ಪೊಲೀಸರ ಕರ್ತವ್ಯವೂ ಮುಗಿಯುತ್ತದೆ. ಇಂಥ ಘಟನೆಗಳು ವರ್ಷಕ್ಕೆ ಎಷ್ಟೋ? ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಲ್ಲವೇ. ಎಷ್ಟು ಸಲ ಅಂತ ನಗರಗಳ ಪ್ರಮುಖ ಸರ್ಕಲ್‌ಗಳಲ್ಲಿ ಕ್ಯಾಂಡೆಲ್ ಹಿಡಿದು ಮೌನಾಚರಣೆ ಮಾಡುವುದು? ಸಂಘ ಸಂಸ್ಥೆಗಳು ಬೀದಿಗಿಳಿದು ಹೋರಾಟ ನಡೆಸುವುದೆಷ್ಟು ಸಲ? ಅಪರಾಧಿಗಳನ್ನು ಗಲ್ಲಿಗೇರಿಸಿ ಅಂತ ಕೂಗುವುದು ಎಷ್ಟನೇ ಸಲ? ‘ಈ ಪ್ರಪಂಚಕ್ಕೆ ನೀನು ಬರಲೇ ಬಾರದಿತ್ತು’ ಅಂತ ವಾಟ್ಸಾಪ್ ಗಳಲ್ಲಿ ಸ್ಟೇಟಸ್, ಫೇಸ್‌ಬುಕ್‌ನಲ್ಲಿ ಪೋಸ್ಟ್, ಟ್ವೀಟ್‌ಗಳನ್ನು ಮಾಡುತ್ತೀರಿ? ಎಷ್ಟರವರೆಗೂ ಮಹಿಳಾ ಸಂಘದವರು, ಮಹಿಳಾ- ಮಕ್ಕಳ ಪರ ಹೋರಾಟಗಾರರು, ಟಿವಿ ಡಿಬೇಟ್ ಗಳಲ್ಲಿ ಕೂತು ೪-೫ ನೇ ದಿನಕ್ಕೆ ಆದ ಘಟನೆಯನ್ನು ಮರೆತು ಸುಮ್ಮನಾ ಗುತ್ತೀರಿ? ಎಷ್ಟು ಸಲ ಸರಕಾರ ಅಪರಾಧೀಗೆ ಕಠಿಣ ಶಿಕ್ಷೆ ಕೊಡುತ್ತೇವೆ ಅಂತ ಭರವಸೆ ನೀಡಿ ಸುಮ್ಮನಾಗುವುದು?
2021ರಲ್ಲಿ ೩೧,೬೭೭ ರೇಪ್ ಕೇಸ್‌ಗಳಾಗಿವೆ, ಗೃಹಸಚಿವಾಲಯದ ಪ್ರಕಾರ ಪ್ರತಿ ೧೫ ನಿಮಿಷಗಳಿಗೊಮ್ಮೆ ಭಾರತದಲ್ಲಿ
ಒಂದು ರೇಪ್ ಆಗಿರುತ್ತದೆ.
ಅಂದರೆ, ಈ ಬರಹವನ್ನು ಅನ್ನು ನೀವು ಓದಲು ೧೫ ನಿಮಿಷಗಳಿಗಿಂತ ಜಾಸ್ತಿ ಸಮಯ ತೆಗೆದುಕೊಂಡರೆ, ದೇಶದ ಯಾವುದೇ ಭಾಗದಲ್ಲಿ ಒಂದು ಅತ್ಯಾಚಾರ ನಡೆದಿರುತ್ತದೆ. ಆದರೆ ಅವುಗಳೆಲ್ಲ ನಮ್ಮ ಗಮನಕ್ಕೇ ಬರುವುದಿಲ್ಲ. ಇಂತಹ ಅತ್ಯಾಚಾರ ಗಳಲ್ಲಿ ಬರ್ಬರತೆ ಮೇಲೆ ನಿಂತಿರುವ ಕೆಲವೇ ಕೆಲವೇ ಕೆಲವು ಅತ್ಯಾಚಾರಗಳು ದೊಡ್ಡದಾಗಿ ಸುದ್ದಿ ಮಾಡುತ್ತವೆ. ಜನ ಅದಕ್ಕೆ ಸ್ಪಂದನೆಯನ್ನೂ ನೀಡುತ್ತಾರೆ. ಕೆಲವು ಸಲ, ಅತ್ಯಾಚಾರ ಸಂತ್ರಸ್ತೆಯ ಜಾತಿಯ ಮೇಲೆ, ಅಪರಾಧಿಯ ಧರ್ಮದ ಮೇಲೆ, ಅಪರಾಧಿಯ ಹಿನ್ನೆಲೆಯ ಮೇಲೂ ಪ್ರಕರಣ ಮಹತ್ವ ಪಡೆಯುವುದೂ ಉಂಟು.
ಇನ್ನು ಒಂದು ಅತ್ಯಾಚಾರಕ್ಕೆ ನ್ಯಾಯಾಲಯ ಶಿಕ್ಷೆ ನೀಡಬೇಕಾದರೆ ಅದಕ್ಕೆ ೬-೧೦ ವರ್ಷ ಕಾಯಲೇ ಬೇಕಿದೆ. ಅಂದರೆ ಮೊನ್ನೆ ಅತ್ಯಾಚಾರವಾಗಿದ್ದ ದಿವ್ಯಾ ೧೦ ವರ್ಷದಲ್ಲಿ ತನ್ನ ಪದವಿಯನ್ನೂ ಮುಗಿಸುತ್ತಿದ್ದಳೇನೋ. ನಮ್ಮ ನಾಗರಿಕ ಸಮಾಜ ಇಷ್ಟೊಂದು ನಿಷ್ಕರುಣವಾಯಿತೆ? ಕ್ರೂರತೆಯನ್ನು ಮರೆತು, ಜಾತಿ, ಧರ್ಮ, ರಾಜಕೀಯ ಲಾಭ, ಅಜೆಂಡಾದ ಮೇಲೆ ಅತ್ಯಾಚಾರವನ್ನು ಜನ ವಿರೋಧಿಸಬೇಕೋ, ಬೇಡವೋ ಎಂದು ಯೋಚಿಸುವಷ್ಟು! ಆ ಜನರ ಸಂಖ್ಯೆ, ಹೋರಾಟದ ತೀವ್ರತೆಯ ಮೇಲೆ ರಾಜಕಾರಣಿಗಳು ಮಾತಾಡುವಷ್ಟು.
ಒಂದು ವೇಳೆ ಆ ಸಂತ್ರಸ್ತೆ ಬದುಕುಳಿದಿದ್ದರೆ, ಪೊಲೀಸರ ಪ್ರಶ್ನೆಗಳಿಗೆ, ನೆರೆಹೊರೆಯವವರ ಮಾತುಗಳಿಗೆ, ‘ನಾಯಿ ಮುಟ್ಟಿದ ಎಂಜಲು’ ಎಂಬ ಸಮಾಜದ ಮೂದಿಲಿಕೆಗೆ ಸಾಕ್ಷಿಯಾಗಿ ನಿಲ್ಲುವ ಅವಳ ಪರಿಸ್ಥಿತಿ ಏನಾಗಿರಬೇಡ? ಅತ್ಯಾಚಾರಗಳಿಗೆ ಸಿಲುಕಿ, ನಲುಗಿ ಸಾವನ್ನಪ್ಪಿದಾಗ ಅವಳು ಪಟ್ಟ ನೋವೇನು? ಅತ್ಯಾಚಾರಗಳನ್ನು ನಿರ್ಮೂಲನೆ ಮಾಡಲು ದಾರಿ ಯಾವುದು? ಅತ್ಯಾಚಾರದ ಸಂತ್ರಸ್ತೆ ಹಾಕಿಕೊಂಡ ಬಟ್ಟೆಯ ಮೇಲೆಯೂ ಅವಳನ್ನು ಅಳೀತಾರೆಂದರೆ, ೧೦ ವರ್ಷದ ದಿವ್ಯಾ ಎಂತಹ ಬಟ್ಟೆ ಉಟ್ಟಿರಬಹುದು? ಅದೂ ಅವಳ ಮೇಷ್ಟ್ರ ಕಣ್ಣಿಗೆ ಕುಕ್ಕುವಂಥದ್ದು? ಇದೆಲ್ಲ ಉತ್ತರಗಳಿಲ್ಲದ ಪ್ರಶ್ನೆಗಳೇ.
ಭಾರತದಲ್ಲಿ ಅತೀ ನೆಗ್ಲೆಕ್ಟ್ ಮಾಡುವ ವಿಚಾರ ಏನಾದರೂ ಇದ್ದರೆ ಅದು ಅತ್ಯಾಚಾರ ಮಾತ್ರ! ಇದನ್ನು ನೋಡಿ, ಫೆಬ್ರವರಿ
೨೦೦೨ರಲ್ಲಿ ಗುಜರಾತ್ ಗೋಧ್ರಾದಲ್ಲಿ ಮುಸಲ್ಮಾನರಿಂದ ಹಿಂದೂಗಳ ಮೇಲೆ ಹತ್ಯಾಕಾಂಡ ನಡೆಯಿತು. ಅದಕ್ಕೆ ಪ್ರತಿಕ್ರಿಯೆ ಆಗಿ ಹಿಂದುಗಳೂ ಮುಸಲ್ಮಾನರ ಮೇಲೆ ಎರಗಿಬಿದ್ದರು. ಇದು ನಡೆಯುವಾಗ ಅದೇ ವರ್ಷ ಮಾಚ್ ನಲ್ಲಿ, ಈ ಗಲಭೆಗಳಿಗೆಲ್ಲ ಹೆದರಿ ಮನೆಬಿಟ್ಟು ಓಡುತ್ತಿದ್ದ ಕುಟುಂಬದ ಮೇಲೆ ೩೦ ಜನರ ಗುಂಪು ದಾಳಿ ಮಾಡಿ, ೫ ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು, ಅವಳ ತಾಯಿ ಜತೆಗೆ ಇನ್ನೂ ಮೂರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿಬಿಟ್ಟರು.
ಬಿಲ್ಕಿಸ್‌ನ ೧೪ ಜನ ಕುಟುಂಬಸ್ಥರನ್ನೂ ಕೊಂದು ಹೋದರು. ಈ ಘಟನೆ ನಡೆದು ಎಷ್ಟೋ ಹೊತ್ತು ಆದ ಮೇಲೆ ಎಚ್ಚರ ಬಂದ
ಬಿಲ್ಕಿಸ್, ಅಲ್ಲಿ ಸಮೀಪದಲ್ಲಿದ್ದ ಆದಿವಾಸಿ ಮಹಿಳೆಯ ಹತ್ತಿರ ತುಂಡು ಬಟ್ಟೆಯನ್ನು ಪಡೆದು, ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಾಳೆ. ಅದರಲ್ಲಿ ಪೊಲೀಸರೂ ಶಾಮೀಲಾಗಿರುತ್ತಾರೆ. ಅವರುಗಳಿಗೆ ಶಿಕ್ಷೆಯೂ ಆಗುತ್ತದೆ. ಅವರ ಬಿಡುಗಡೆಯೂ ಆಗುತ್ತದೆ. ಅದನ್ನು ಸಂಭ್ರಮದಿಂದ, ಅದೂ ಸಿಹಿ ಹಂಚಿ, ಅವರಿಗೆಲ್ಲ ಸನ್ಮಾನ ಮಾಡಿ, ಆರತಿ ಬೆಳಗಿ ಸಂಭ್ರಮಿಸಲಾಗುತ್ತದೆ. ಏಕೆಂದರೆ, ಅವರ ಬಿಡುಗಡೆಯ ಹಿಂದಿದ್ದದ್ದು ಬಿಜೆಪಿ; ಒಂದು ರಾಜಕೀಯಪಕ್ಷ!
ಒಬ್ಬ ವೃದ್ಧನ, ವಿಧವೆ ಮಗಳ ಮೇಲೆ ಒಬ್ಬ ಅತ್ಯಾಚಾರ ಆದಾಗ, ಅವನು ಶಿವಾಜಿ ಮಹಾರಾಜರ ಮುಂದೆ ದೂರನ್ನು
ಕೊಡುತ್ತಾರೆ. ಆಗ ಅದಕ್ಕೆ ಮಹಾರಾಜರು ಆ ಅತ್ಯಾಚಾರಿಯ ಕೈಕಾಲನ್ನು ಕತ್ತರಿಸಿ ದೇವಸ್ಥಾನದ ಮುಂದೆ ಭಿಕ್ಷೆ ಬೇಡವ ಶಿಕ್ಷೆ
ಕೊಡುತ್ತಾರೆ. ಶಿವಾಜಿ ಮಹಾರಾಜರ ಉತ್ತರಾಧಿಕಾರಿಗಳು ಎಂದೇ ಬಿಂಬಿಸಿಕೊಳ್ಳುವ ಇಂದಿನ ಬಿಜೆಪಿಗರು ಅತ್ಯಾಚಾರ ವಾದಾಗ ಬಾಯಿ ಮುಚ್ಚಿಕೊಂಡಿರುವುದೇಕೆ? ಆಗ ಗಾಂಧೀಜಿ ಅವರು ರಾಮರಾಜ್ಯದ ಕನಸು ಹೊತ್ತಿದ್ದರು.
ನಡುರಾತ್ರಿಯ ವೇಳೆ ಒಂಟಿ ಮಹಿಳೆ ಯಾವುದೇ ಭಯ, ಭೀತಿಯಿಲ್ಲದೆ ಓಡಾಡುವಂತಾಗುವುದೇ ನಿಜವಾದ ಸ್ವಾತಂತ್ರ್ಯ
ಎಂದು ಹೇಳಿದ್ದರಂತೆ. ಆದರೆ ಈಗ? ಸರಿ ಅತ್ಯಾಚಾರಿಗಳಿಗೇಕೆ ಗಲ್ಲುಶಿಕ್ಷೆಯಾಗುತ್ತಿಲ್ಲ? ರಾಮರಾಜ್ಯದ ಬಗ್ಗೆ ಮಾತಾಡುವ ಬಿಜೆಪಿಯವರಿಗೆ ರಾಮರಾಜ್ಯದ ತುಸು ಕಲ್ಪನೆಯಾದರೂ ಇದೆಯಾ? ರಾಮರಾಜ್ಯದಲ್ಲಿ ಬಡತನ, ಹಸಿವು, ಭ್ರಷ್ಟಾಚಾರ ಗಳಿಲ್ಲದೆ ನಾಗರಿಕರಲ್ಲಿ ನಿರಾತಂಕವಾಗಿದ್ದ ರಾಜ್ಯವಾಗಿತ್ತು.
ಆದರೆ ಈಗ, ಎಲ್ಲ ಸಾಮಾಜಿಕ ಅಸ್ವಸ್ಥತೆಗಳೂ ತಾಂಡವವಾಡುತ್ತಿವೆ. ಅದಕ್ಕೆಲ್ಲ ಕಡಿವಾಣ ಹೇಗೆ? ನಿಮ್ಮೆಲ್ಲರಿಂದ ಪಪ್ಪೂ ಎಂದು ಕರೆಯಿಸಿಕೊಳ್ಳುವ ರಾಹುಲ್ ಗಾಂಧಿ ಸರಿಯಾಗಿಯೇ ಹೇಳಿದ್ದರು, ‘india is the rape capital of world‘ ಅಂತ. ದೇಶದ ಜನರಲ್ಲಿ ರಾಮರಾಜ್ಯದ ಕನಸನ್ನು ಬಿತ್ತಿ ಸುಮ್ಮನೆ ಕೂತರೆ, ಭಾರತ ರಾಮರಾಜ್ಯವಾಗದು. ಎಲ್ಲದಕ್ಕೂ ಮೊದಲು ದೇಶದ ಪ್ರತಿಯೊಂದು ಮಹಿಳೆಗೂ ರಕ್ಷಣೆಕೊಡುವ ಪಣವನ್ನು ತೊಡಲೇ ಬೇಕು.