Saturday, 14th December 2024

1991ರಂತೆ ಚಿನ್ನ ಅಡವಿಡುವ ಕಾಲ ದೂರವಿಲ್ಲ

ವೀಕೆಂಡ್ ವಿತ್ ಮೋಹನ್

camohanbn@gmail.com

ಇದೇ ಟ್ರೆಂಡ್ ಮುಂದುವರಿದರೆ ಮತ್ತೊಮ್ಮೆ ೧೯೯೧ರ ಪರಿಸ್ಥಿತಿ ಪುನರಾವರ್ತನೆಯಾಗುವುದರಲ್ಲಿ ಅನುಮಾನವಿಲ್ಲ. ಆ ಪರಿಸ್ಥಿತಿ ಎದುರಾ ದರೆ ಇಂದಿನ ಜನಸಂಖ್ಯೆಗನುಗುಣವಾಗಿ ದೇಶವನ್ನು ಮುನ್ನಡೆಸುವುದು ಕಷ್ಟವಾಗುತ್ತದೆ.

೧೯೯೧ರಂತೆ ಚಿನ್ನ ಅಡವಿಡುವ ಕಾಲ ದೂರವಿಲ್ಲ ವೀಕೆಂಡ್ ವಿತ್ ಮೋಹನ್/ ಮೋಹನ್ ವಿಶ್ವ ೧೯೯೧ರಲ್ಲಿ ಭಾರತದ ಆರ್ಥಿಕ ವ್ಯವಸ್ಥೆ ಯಾವ ಮಟ್ಟಿಗೆ ಹದಗೆಟ್ಟಿತ್ತೆಂದರೆ, ದೇಶದ ವಿದೇಶಿ ವಿನಿಮಯ ಮೀಸಲು ಕೇವಲ ಎರಡು ವಾರಗಳಿಗೆ ಸಾಕಾಗುವಷ್ಟಿತ್ತು. ಪಂಜರದೊಳಗಿನ ಗಿಳಿಯಂತೆ ಭಾರತದ ಆರ್ಥಿಕತೆಯನ್ನು ಒಂದೆಡೆ ಬಂಧಿಸಿ ಹೊರಜಗತ್ತಿನ ಜತೆಗೆ ಅನಾಯಾಸವಾಗಿ ವ್ಯಾಪಾರ ವಿನಿಮಯ ಮಾಡುವ ನೀತಿಗಳ ಬಗ್ಗೆ ಚಿಂತಿಸದೇ, ಸುಮಾರು ೪೦ ವರ್ಷ ಕಾಂಗ್ರೆಸ್ ಆಡಳಿತ ನಡೆಸಿತ್ತು.

ಸ್ವಾತಂತ್ರ್ಯಾ ನಂತರ ೪೦ ವರ್ಷಗಳ ಆಡಳಿತಾವಧಿಯಲ್ಲಿ ದೇಶದ ಮೂಲಭೂತ ಸೌಕರ್ಯಗಳ ಬಗ್ಗೆ ಕಾಂಗ್ರೆಸ್ ಗಮನ ಹರಿಸಿರಲಿಲ್ಲ. ೧೯೭೧ರಲ್ಲಿ ಚುನಾವಣೆ ಎದುರಿಸಿದ ಇಂದಿರಾಗಾಂಧಿ ‘ಗರೀಭಿ ಹಠಾವೋ’  ಘೋಷಣೆ ಯೊಂದಿಗೆ ಜನರಿಂದ ಮತ ಕೇಳಿದ್ದರು. ತನ್ನ ತಂದೆ ನೆಹರು ಸುಮಾರು ೨೦ ವರ್ಷ ಭಾರತದ ಪ್ರಧಾನಿ ಯಾಗಿದ್ದರೂ ಬಡತನ ನಿರ್ಮೂಲನೆ ಮಾಡಲು ವಿಫಲರಾಗಿರುವುದನ್ನು ಅಂದವರು ಒಪ್ಪಿಕೊಂಡಂತಾಗಿತ್ತು. ಇಂದಿರಾ ನಿಧನದ ನಂತರ ಅವರ ಮಗ ರಾಜೀವ್ ಗಾಂಽ ಪ್ರಧಾನಿ ಹುದ್ದೆಗೇರಿದರು.

ಆ ಸಂದರ್ಭದಲ್ಲಿ ದೆಹಲಿಯಿಂದ ನೂರು ರು. ಬಿಡುಗಡೆಯಾದರೆ, ಅದರಲ್ಲಿ ೧೫ ರು.ಮಾತ್ರ ಜನರಿಗೆ ಸಿಗುತ್ತದೆಯೆಂದು ಅವರೇ ಸ್ವತಃ ತಮ್ಮ ವಂಶಪಾರಂಪರಿಕ ಆಡಳಿತದಲ್ಲಿ ದಶಕಗಳಿಂದ ನಡೆದುಕೊಂಡು ಬರುತ್ತಿರುವ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು. ಮಿತಿಮೀರಿದ  ಭ್ರಷ್ಟಾಚಾರ, ಅತಿಯಾದ ಮುಸಲ್ಮಾನರ ಓಲೈಕೆ, ಭವಿಷ್ಯದ ಚಿಂತನೆಯಿಲ್ಲದ ನೀತಿಗಳು, ಬಡವರನ್ನು ಬಡವರನ್ನಾಗಿಸಿಯೇ ಆಳುವ ನೀತಿಗಳು, ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾದದ್ದು, ಭಾರತದ ಮೇಲಿನ ರಷ್ಯಾ- ಅಮೆರಿಕ ನಡುವಣ ಶೀತಲ ಸಮರದ ಪರಿಣಾಮ ಎದುರಿಸುವಲ್ಲಿ ವಿಫಲರಾದದ್ದು, ಜಾಗತಿಕ ಮಟ್ಟದಲ್ಲಿ ಭಾರತ ವ್ಯವಹರಿಸಲು ಇದ್ದಂತಹ ನಿರ್ಬಂಧಗಳು, ಮತಗಳಿಕೆಗಾಗಿ ನೀಡಿದ್ದ ಉಚಿತ ಯೋಜನೆಗಳ ಒಟ್ಟಾರೆ ತಪ್ಪುಗಳ ಪರಿಣಾಮ ಭಾರತದ ಆರ್ಥಿಕತೆ ೧೯೯೧ರ ಹೊತ್ತಿಗೆ ಸಂಪೂರ್ಣ ಹದೆಗೆಟ್ಟಿತ್ತು.

ಮಾತೆತ್ತಿದ್ದರೆ ೧೯೯೧ರ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸಿದ್ದು ಕಾಂಗ್ರೆಸ್‌ನ ಮನಮೋಹನ್ ಸಿಂಗ್ ಎಂದು ಹೇಳುವವರು, ಇಂಥ ಸನ್ನಿವೇಶ ಸೃಷ್ಟಿಗೆ ಕಾರಣವೇ ಕಾಂಗ್ರೆಸ್‌ನ ೪೦ ವರ್ಷಗಳ ಆಡಳಿತ ಎಂದು ಹೇಳುವುದಿಲ್ಲ. ದೇಶದ ಜತೆಗೆ ರಾಜ್ಯಗಳಿಗೂ ಸರಿಯಾದ ಸೂಚನೆಗಳಿಲ್ಲದೆ ಹಲವು ರಾಜ್ಯಗಳೂ ದೂರದೃಷ್ಟಿಯ ಅಭಿವೃದ್ಧಿ ಪೂರಕ ನೀತಿಗಳನ್ನು ರೂಪಿಸುವಲ್ಲಿ ವಿಫಲವಾಗಿದ್ದವು. ಕಾಂಗ್ರೆಸ್ ತನ್ನ ರಾಜಕೀಯ ಎದುರಾಳಿಯನ್ನು ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ಸೋಲಿಸಲು ಸಾಧ್ಯವಿಲ್ಲ.

ಸತತ ಸೋಲುಗಳಿಂದ ಕೆಂಗೆಟ್ಟಿದ್ದ ಪಕ್ಷ ಇದೀಗ ಮತ್ತದೇ ಇಂದಿರಾರ ‘ಗರೀಭಿ ಹಠಾವೋ’ ತಂತ್ರದ ಹೊಸ ರೂಪವನ್ನು, ಉಚಿತ ಘೋಷಣೆಗಳ ಆಮಿಷದ ರೂಪದಲ್ಲಿ ಒಡ್ಡಿ ಚುನಾವಣೆಗಳನ್ನು ಗೆಲ್ಲಲು ಹೊರಟಿದೆ. ತಮ್ಮನ್ನು ತಾವು ಚುನಾವಣಾ ತಂತ್ರಜ್ಞರೆಂದು ಹೇಳಿಕೊಳ್ಳುವ ಒಂದಷ್ಟು ಮಾರ್ಕೆಟಿಂಗ್
ಕಂಪನಿಗಳಿಗೆ ಮೋದಿಯವರನ್ನು ನೇರವಾಗಿ ಅಭಿವೃದ್ಧಿಯ ವಿಷಯದಲ್ಲಿ ಎದುರಿಸಲು ಸಾಧ್ಯವಾಗುತ್ತಿಲ್ಲ.

ತಾವು ಪ್ರತಿನಿಧಿಸುವ ರಾಜ್ಯಗಳಲ್ಲಿ ಉಚಿತ ಘೋಷಣೆಗಳ ಮೂಲಕವಷ್ಟೇ ಚುನಾವಣಾ ತಂತ್ರಗಾರಿಕೆಯನ್ನು ಮಾಡುತ್ತಿದ್ದಾರೆ. ಉಚಿತ ಯೋಜನೆಗಳನ್ನು ಮಾರ್ಕೆಟಿಂಗ್ ಮಾಡಿ ಚುನಾವಣೆ ಗೆಲ್ಲಲು ಇವರೇ ಬೇಕೇ? ದೆಹಲಿಯ ಅರವಿಂದ್ ಕೇಜ್ರಿವಾಲರನ್ನು ಕೇಳಿದರೆ ಸಾಕು ಅಥವಾ ಆಯಾ ಪಕ್ಷದ ಪ್ರಮುಖರೇ ಈ ರೀತಿಯ ತಂತ್ರಗಾರಿಕೆ ಮಾಡಬಹುದು. ಅಲ್ಲಿಗೆ ಅಭಿವೃದ್ಧಿಯ ವಿಚಾರದಲ್ಲಿ ಮೋದಿಯವರನ್ನು ಮಣಿಸುವಲ್ಲಿ ದೊಡ್ಡಮಟ್ಟದಲ್ಲಿ ಇವರುಗಳು
ವಿಫಲರಾದರೆಂಬುದು ಪದೇ ಪದೇ ಸಾಬೀತಾಗುತ್ತಿದೆ.

ದೇಶದ ಆರ್ಥಿಕತೆಯ ಬಗ್ಗೆ ತಲೆಕೆಡಿಸಿಕೊಳ್ಳದೇ ತಮಗೆ ಬರಬೇಕಿರುವ ಹಣ ಬಂದರೆ ಸಾಕೆಂದು ಯೋಚಿಸುವ ಈ ಮಂದಿಯಿಂದ ಭಾರತದ ಒಳಿತನ್ನು ಎಂದಿಗೂ ನಿರೀಕ್ಷಿಸಲು ಸಾಧ್ಯವಿಲ್ಲ. ಭಾರತ ದಿವಾಳಿಯಾದರೆ ತಲೆ ಕೆಡಿಸಿಕೊಳ್ಳದೇ ವಿದೇಶದಲ್ಲಿ ನೆಲೆಸಿ ಐಷಾರಾಮಿ ಜೀವನ ನಡೆಸುತ್ತಾರಷ್ಟೆ. ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಉಚಿತ ಘೋಷಣೆಗಳನ್ನು ತಯಾರು ಮಾಡಿದ್ದ ಸುನಿಲ್ ಕನಗೊಳು ಈಗ ಮುಖ್ಯಮಂತ್ರಿಯವರ ಸಲಹೆಗಾರರಾಗಿದ್ದಾರೆ.

ರಾಜ್ಯವನ್ನು ದೀವಾಳಿ ಮಾಡಲು ದೊಡ್ಡದೊಂದು ತಂಡವನ್ನೇ ಸಿದ್ದರಾಮಯ್ಯನವರು ಕಟ್ಟುತ್ತಿರುವಂತಿದೆ. ಸಮಾಜವಾದದಡಿಯಲ್ಲಿ ಸಂಪತ್ತನ್ನು ಹಂಚಬೇಕಾದರೆ ಸಂಪತ್ತು ಸೃಷ್ಟಿಯಾಗಬೇಕು. ಇರುವ ಸಂಪತ್ತನ್ನು ಸಂಪೂರ್ಣ ಹಂಚಿ, ಜತೆಗೆ ಸಂಪತ್ತನ್ನು ಸೃಷ್ಟಿ ಮಾಡದೆ ಹೋದರೆ ದೀವಾಳಿಯಾಗುವುದು ಖಚಿತ. ಬಂಡವಾಳ ಶಾಹಿವಾದವಿಲ್ಲದೆ ಸಮಾಜವಾದವಿಲ್ಲವೆಂಬ ಸತ್ಯವನ್ನು ಅರಿಯಬೇಕು.‘ವೆನೆಜುಲಾ’ ದೇಶ ಜಗತ್ತಿನಲ್ಲಿ ಅತೀ ಹೆಚ್ಚು ಕಚ್ಚಾ ತೈಲ ನಿಕ್ಷೇಪ ಹೊಂದಿದ್ದ ಶ್ರೀಮಂತ ರಾಷ್ಟ್ರ. ತೈಲ ಮಾರಾಟದಿಂದ ಬರುತ್ತಿದ್ದಂತಹ ಹಣವನ್ನು ತನ್ನ ಪ್ರಜೆಗಳಿಗೆ ಬೇಕಾಬಿಟ್ಟಿ ಹಂಚಿ ಉಚಿತ ಘೋಷಣೆಗಳನ್ನು ಅನುಷ್ಠಾನ ಮಾಡಿ, ಕೊನೆಗೆ ದೀವಾಳಿ ಆಗಿದೆ.

ಆಫ್ರಿಕಾದ ಜಿಂಬಾಬ್ವೆ ದೇಶದ ಹಣದುಬ್ಬರ ದರ ಶೇಕಡಾ ೧,೦೦,೦೦೦% ದಾಟಿತ್ತು. ಇಂದಿಗೂ ಆ ದೇಶ ಚೇತರಿಸಿಕೊಳ್ಳಲಾಗಲಿಲ್ಲ. ಯೂರೋಪಿನ ಗ್ರೀಸ್ ದೇಶ ಹಲವು ಉಚಿತ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರ ಪರಿಣಾಮ ಎರಡು ಬಾರಿ ದಿವಾಳಿಯಾಗಿತ್ತು. ೩೫ ವರ್ಷದ ಯುವಕರು ಕೆಲಸಕ್ಕೆ ಹೋಗದೆ ಸರಕಾರ ನೀಡುವ ಪಿಂಚಣಿಯನ್ನು ನಂಬಿಕೊಂಡು ಮನೆಯಲ್ಲಿ ಕುಳಿತಿದ್ದರು. ಐರೋಪ್ಯ ಒಕ್ಕೂಟದ ಇತರ ದೇಶಗಳು ಗ್ರೀಸ್ ದೇಶಕ್ಕೆ ಸಹಾಯ ಮಾಡಿದ್ದರ ಸಲುವಾಗಿ ಬಚಾವಾಗಿತ್ತು. ಭಾರತದಂತಹ ೧೪೦ ಕೋಟಿ ಜನಸಂಖ್ಯೆ ಹೊಂದಿರುವ ದೇಶ ದಿವಾಳಿಯಾದರೆ ಯಾರೂ ಸಹಾಯಕ್ಕೆ
ಬರುವುದಿಲ್ಲ. ಶ್ರೀಲಂಕಾ ಪರಿಸ್ಥಿತಿ ಕಣ್ಣಮುಂದಿದೆ.

ಜನರಿಗೆ ಒಂದು ಲೀಟರ್ ಪೆಟ್ರೋಲ್ ಸಿಗುತ್ತಿಲ್ಲ. ಪಾಕಿಸ್ತಾನದಲ್ಲಿ ಒಂದು ಕೆ.ಜಿ.ಅಕ್ಕಿ ೧೬೦ ರುಪಾಯಿ ತಲುಪಿದೆ. ಭಾರತದ ಕೆಲವು ರಾಜ್ಯಗಳ ಆರ್ಥಿಕ ಪರಿಸ್ಥಿತಿಯೂ ಇದಕ್ಕೆ ಹೊರತಲ್ಲ, ಪಶ್ಚಿಮ ಬಂಗಾಳವನ್ನು ೩೦ ವರ್ಷಗಳ ಕಾಲ ಆಳಿದ ಜ್ಯೋತಿ ಬಸು ನೇತೃತ್ವದ ಕಮ್ಯುನಿಸ್ಟ್ ಸರಕಾರ ಇಡೀ ರಾಜ್ಯವನ್ನೇ ಗುಡಿಸಿ ಗುಂಡಾಂತರ ಮಾಡಿತ್ತು. ಇಂದಿಗೂ ಪಶ್ಚಿಮ ಬಂಗಾಳದಲ್ಲಿ ಬಂಡವಾಳ ಹೂಡಲು ನೂತನ ಕಂಪನಿಗಳು ಹೆದರುತ್ತವೆ. ಇತ್ತ ಕೇರಳವನ್ನು ದಶಕಗಳ ಕಾಲ ಆಳಿದ ಕಮ್ಯುನಿಸ್ಟರು ರಾಜ್ಯದ ಸಾಲವನ್ನು ಉತ್ತುಂಗಕ್ಕೇರಿಸಿzರೆ. ಕೇರಳ ರಾಜ್ಯ ಸರಕಾರ ‘ಬಾಂಡ್ ’ಗಳನ್ನು ನೀಡಿ ಜನರಿಂದ ಹಣ ಸಂಗ್ರಹಿಸಿ ಸಾಲದ ಹೊರೆಯನ್ನು ಇಳಿಸಬೇಕೆಂಬ ಚಿಂತನೆಯಲ್ಲಿದೆ.

ಉಚಿತ ಘೋಷಣೆಗಳ ಮೂಲಕ ದೆಹಲಿಯ ಗದ್ದುಗೆ ಏರಿದ್ದ ಆಮ್ ಆದ್ಮಿ ಪಕ್ಷ, ದೆಹಲಿಯ ಆರ್ಥಿಕ ಪರಿಸ್ಥಿತಿಯನ್ನು ಹದೆಗೆಡಿಸಿಟ್ಟಿದೆ. ಅಲ್ಲೀಗ ಬಸ್ ಚಾಲಕರು ನಿಲ್ದಾಣಗಳಲ್ಲಿ ಮಹಿಳೆಯರನ್ನು ಕಂಡರೆ ಬಸ್ ನಿಲ್ಲಿಸದ ಪರಿಸ್ಥಿತಿ ಎದುರಾಗಿದೆ. ಉಚಿತ ವಿದ್ಯುತ್ ನೀಡುತ್ತೇವೆಂದು ಹೇಳಿದ್ದ ಆಪ್ ಮುಖ್ಯ
ಮಂತ್ರಿ, ಅದನ್ನು ನಿಲ್ಲಿಸಿ ಜನರಿಗೆ ಶಾಕ್ ನೀಡಿದ್ದಾರೆ. ಪಂಜಾಬಿನಲ್ಲಿಯೂ ಉಚಿತ ಘೋಷಣೆಗಳ ಮಹಾಪೂರವನ್ನೇ ಹರಿಸಿ ಗೆದ್ದಂತಹ ಆಪ್, ಸರಕಾರೀ ನೌಕರರಿಗೆ ಸರಿಯಾದ ಸಮಯದಲ್ಲಿ ಸಂಬಳ ನೀಡಲು ಹಣವಿಲ್ಲದ ಪರಿಸ್ಥಿತಿ ಎದುರಾಗಿದೆ. ಪಂಜಾಬಿನ ಸಾಲ ಅಲ್ಲಿನ ಜಿಡಿಪಿಯ ಶೇ.೪೨ ದಾಟಿದೆ.

ಆಂಧ್ರಪ್ರದೇಶದಲ್ಲಿ ಚುನಾವಣೆ ಗೆಲ್ಲಲು ಮತ್ತದೇ ತಲೆಯಿಲ್ಲದ ಚುನಾವಣಾ ತಂತ್ರಜ್ಞರ ಮೊರೆ ಹೋಗಿದ್ದ ಜಗನ್ ಮೋಹನ್ ರೆಡ್ಡಿ ಉಚಿತ ಯೋಜನೆಗಳ ಮಹಾಪೂರವನ್ನೇ ಹರಿಸಿದ್ದರು. ಗೆದ್ದು ಬಂದ ನಂತರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ. ಹೆಚ್ಚುವರಿ ಹಣಕ್ಕಾಗಿ ಪೆಟ್ರೋಲ್ ಬೆಲೆಯನ್ನು ಲೀಟರಿಗೆ ೧೧೨ ರುಪಾಯಿಗೆ ಏರಿಸಿದ್ದಾರೆ. ಕರ್ನಾಟಕದಲ್ಲಿಯೂ ಚುನಾವಣಾ ತಂತ್ರಜ್ಞರ ಸಲಹೆಯ ಮೇರೆಗೆ ಉಚಿತ ಘೋಷಣೆಗಳನ್ನು ಮಾಡಿರುವ ಕಾಂಗ್ರೆಸ್ ಪಕ್ಷ ಘೋಷಣೆಗಳನ್ನು ಅನುಷ್ಠಾನಗೊಳಿಸ ಬೇಕಾದರೆ ದೊಡ್ಡ ಮಟ್ಟದಲ್ಲಿ ಸಾಲ ಮಾಡುತ್ತಾರೆ ಅಥವಾ ಪೆಟ್ರೋಲ/ಡೀಸೆಲ್ ಬೆಲೆ ಏರಿಸುತ್ತಾರೆ ಅಥವಾ ಆಸ್ತಿ ತೆರಿಗೆಯನ್ನು ಏರಿಸುತ್ತಾರೆ ಅಥವಾ ಅಬಕಾರಿ ಸುಂಕವನ್ನು ಏರಿಸುತ್ತಾರೆ ಅಥವಾ ಯೋಜನಾ ಅನುಮತಿಯ ಶುಲ್ಕ ವನ್ನು ಏರಿಸುತ್ತಾರೆ ಅಥವಾ ಮತ್ಯಾವುದೋ ತೆರಿಗೆಯನ್ನು ಏರಿಸುತ್ತಾರೆ ಅಥವಾ ಹೊಸ ತೆರಿಗೆಯನ್ನೇ ಜಾರಿಗೆ
ತರಬಹುದು.

ಕರ್ನಾಟಕದ ಸಾಲವನ್ನು ಮೊಟ್ಟಮೊದಲ ಬಾರಿಗೆ ಒಂದು ಲಕ್ಷ ಕೋಟಿಗೆ ಏರಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲಬೇಕು. ತನ್ನ ಆಡಳಿತಾವಽಯಲ್ಲಿ ಸಾಲದ ಮೊತ್ತವನ್ನು ಒಂದು ಲಕ್ಷಕ್ಕೆ ಕೊಂಡೊಯ್ದು ನಂತರ ೨೦೧೮ರ ಹೊತ್ತಿಗೆ ಸುಮಾರು ೨,೪೨,೦೦೦ ಕೋಟಿಗೆ ತಲುಪಿಸಿದ್ದರು. ೨೦೧೩ರಿಂದ ೨೦೧೮ರ ನಡುವೆ ಕೋವಿಡ್ ಮಹಾಮಾರಿಯಂತಹ ಪಿಡುಗಿನಿಂದ ಆರ್ಥಿಕತೆ ಹಳ್ಳ ಹಿಡಿದಿರಲಿಲ್ಲ. ಆದರೂ ಈ ಮಟ್ಟದ ಸಾಲ ರಾಜ್ಯದ ಆರ್ಥಿಕತೆಯ
ಹೊರೆಯನ್ನು ಹೆಚ್ಚಿಸಿತ್ತು. ಸದನದಲ್ಲಿ ಮತ್ತು ಮಾಧ್ಯಮಗಳ ಮುಂದೆ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವ ಸಿದ್ದರಾಮಯ್ಯನವರು ಮುಂದಿನ ದಿನಗಳಲ್ಲಿ ಗ್ಯಾರಂಟಿಗಳ ಬಗ್ಗೆ ಅದ್ಯಾವ ರೀತಿಯ ಸುಳ್ಳುಗಳನ್ನು ಹೇಳುತ್ತಾರೋ ನೋಡಬೇಕು.

ಮೋದಿಯವರನ್ನು ಮುನ್ನೆಲೆಗೆ ತಂದು ಕೇಂದ್ರ ಸರಕಾರ ಹಣ ನೀಡಲಿಲ್ಲವೆಂಬ ಸುಳ್ಳನ್ನೂ ಘಂಟಾಘೋಷವಾಗಿ ಹೇಳಿದರೂ ಆಶ್ಚರ್ಯ ಪಡಬೇಕಿಲ್ಲ.
೧೯೯೧ರಲ್ಲಿ ಭಾರತ ದಿವಾಳಿಯ ಅಂಚಿಗೆ ತಲುಪಿದಾಗ ಚಿನ್ನವನ್ನು ಲಂಡನ್ನಿನ ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ತಂದು ಭಾರತವನ್ನು ಮುನ್ನಡೆಸಲಾಗಿತ್ತು. ಅಂದಿನ ಪರಿಸ್ಥಿತಿಗೆ ೪೦ ವರ್ಷಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷವೇ ನೇರ ಹೊಣೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಸತತ ಸೋಲುಗಳಿಂದ ಹತಾಶರಾಗಿರುವ ಕಾಂಗ್ರೆಸ್, ವಿಧಿಯಿಲ್ಲದೆ ತನ್ನ ಹಳೆಯ ಚಾಳಿಯನ್ನೇ ಪುನರಾರಂಭಿಸಿ ಉಚಿತಗಳಿಂದ ಗೆಲ್ಲಲು ಹೊರಟಿದೆ. ಈಗಾಗಲೇ ಮಧ್ಯಪ್ರದೇಶದಲ್ಲಿ ತನ್ನ ಚುನಾವಣಾ ಘೋಷಣೆಯಲ್ಲಿ ಉಚಿತ ವಿದ್ಯುತ್, ಸಾಲ ಮನ್ನಾ, ಯುವಕರಿಗೆ ಹಣದ ಯೋಜನೆಗಳನ್ನು ಘೋಷಣೆ ಮಾಡಿದೆ. ಮನೆಯಲ್ಲಿನ ಹೆಣ್ಣು ಮಕ್ಕಳು ತಮ್ಮ ತವರುಮನೆ, ಗಂಡನಮನೆಯಿಂದ ಕಷ್ಟಪಟ್ಟು ಕೂಡಿಟ್ಟಿರುವ ಚಿನ್ನವನ್ನು ಅಡವಿಟ್ಟು ದೇಶದ
ಸಾಲವನ್ನು ತೀರಿಸುವ ಪರಿಸ್ಥಿತಿ ಎದುರಾದರೂ ಆಶ್ಚರ್ಯ ಪಡಬೇಕಿಲ್ಲ.