ಸವಿ ನೆನಪು
ವಾಗೀಶ ಕಟ್ಟಿ
ಹಾಗೇ ಸುಮ್ಮನೆ ಆಗ ತಾನೇ ಮಳೆ ಬಂದು ನಿಂತಿತ್ತು. ಒಂದು ರೀತಿಯ ವಿಚಿತ್ರ ಮಾನಸಿಕ ತೊಳಲಾಟ. ಕಚೇರಿಯಲ್ಲಿ ಮ್ಯಾನೇಜರ್ ಜತೆ ಸಣ್ಣ ವಾಗ್ವಾದ. ನಮ್ಮ ಕೆಲಸಗಳ ಮೇಲೆ ನಂಬಿಕೆಯೇ ಇರದ ವ್ಯಕ್ತಿಗಳೆಂದರೆ ಈ ಮ್ಯಾನೇಜರ್ ಮತ್ತು ಲೈಫ್ ಪಾರ್ಟ್‌ನರ್. ‘ಇತ್ತೀಚೆಗೆ ಈ ಮ್ಯಾನೇಜರ್ ನನ್ನನ್ನು ಒಂದು
ಬೊಂಬೆಯ ರೀತಿ ಆಡಿಸುತ್ತಿದ್ದಾನಲ್ಲಾ’ ಎಂದು ಒಳಮನಸ್ಸಿನ ದನಿ ಹೊರಬರದಂತೆ ತಡೆದು, ತಳಮಳದಿಂದ ಎದ್ದು ನಡೆದೆ ಕಚೇರಿಯ ಪಾರ್ಕಿಂಗ್ ಲಾಟ್ ಕಡೆಗೆ. ಕೆಲವೊಮ್ಮೆ ಜಗಳ ವನ್ನು ನಿಲ್ಲಿಸಲು, ಮಾತು ನಿಲ್ಲಿಸುವುದೇ ಉತ್ತಮ.
ಏಕೆಂದರೆ ಆವೇಶಗಳು ಕೇವಲ ಆವೇಶಗಳಷ್ಟೇ ಅಲ್ಲ, ಅವು ನಮ್ಮ ಆದರ್ಶಗಳನ್ನೇ ಕೊಂದುಬಿಡುವ ಬಲಹೀನತೆಗಳು. ಇವೆಲ್ಲಾ ಒಂಥರಾ ಪ್ರಾಣಿಹಿಂಸೆ ಯಂತೆಯೇ. ಜೀವನ ಎಷ್ಟೊಂದು ವಿಚಿತ್ರ ಅಲ್ವಾ? ಯಾರೋ ಹಾಕುವ ತಾಳಕ್ಕೆ ನಾವು ಹೆಜ್ಜೆ ಹಾಕುತ್ತಿರುತ್ತೇವೆ. ಮೇ ೧ರಂದು ಮಾತ್ರ ನೆನಪಾಗುವವ ಕಾರ್ಮಿಕ, ಮಿಕ್ಕೆಲ್ಲಾ ದಿನ ಕಾಲ ಮೇಲೆ ಕಾಲುಹಾಕಿ ಕೂರುವವ ಮಾಲೀಕ. ಇಷ್ಟವೋ ಕಷ್ಟವೋ. ‘ಉದ್ಯೋಗಂ ಪುರುಷ ಲಕ್ಷಣಂ’ ಎನ್ನುತ್ತಾ ಕಾರ್ ಕೀ ತೆಗೆದು ಸ್ಟಾರ್ಟ್ ಮಾಡಿದೆ.
‘ಆಫೀಸ್‌ನಿಂದ ಹೊರಟಿದ್ದೀಯಾ?’ ಮನೆಯಿಂದ ಫೋನ್ ಕಾಲ್ ಬಂದಿತ್ತು. ಹೇಳಿದ್ದನ್ನು ಕೇಳುವವನು ನೌಕರ ಮತ್ತು ಪ್ರಿಯಕರ ಮಾತ್ರ. ಮೂಡ್ ಆಫ್ ಆಗಿದ್ದರಿಂದ ‘ಹೂಂ’ ಅಂದೆ ಅಷ್ಟೇ. ನನ್ನ ಮಾತಿನಲ್ಲಿನ ನಿರ್ಭಾವುಕತೆಯನ್ನು ಕೇಳಿಸಿಕೊಂಡೇ ಫೋನ್ ಕಟ್ ಮಾಡಿದ್ದಳು. ಸಾಯಂಕಾಲದ ಏಕತಾನತೆ ಕಳೆಯಲು ಎಫ್ಎಂ ರೇಡಿಯೋ ಆನ್ ಮಾಡಿದೆ. ಹಾಡಿಗೂ ಬದುಕಿಗೂ ಒಂಥರಾ ಸುಮಧುರ ಸಂಬಂಧವಿದೆ. ಹಾಡಿಗೆ ಶ್ರುತಿ, ಬದುಕಿಗೆ ತಾಳ್ಮೆ ತುಂಬಾ
ಮುಖ್ಯ. ಈ ಬದುಕೂ ಒಂದು ಕಲೆ ಅನ್ನುವುದಂತೂ ಸತ್ಯ. ರೇಡಿಯೋದಲ್ಲಿ ‘ಬೊಂಬೆಯಾಟವಯ್ಯ… ನೀ ಸೂತ್ರಧಾರಿ ನಾ ಪಾತ್ರಧಾರಿ’ ಹಾಡು ಬರುತ್ತಿತ್ತು.
ಕಾರನ್ನು ಚಾಲಿಸುತ್ತಲೇ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಹೊರಟೆ. ಹೊರಗೆ ಮಳೆ ಮುದ್ದಿಸಿಹೋದ ಭೂಮಿ ತಂಪಾಗಿತ್ತು, ಆಗ ತಾನೇ ಕತ್ತಲು ಆವರಿಸು ತ್ತಿತ್ತು. ಅಂಗಡಿ-ಮುಂಗಟ್ಟುಗಳು ಜಗಮಗಿಸುವ ದೀಪಗಳಿಂದ ಸಿಂಗಾರಗೊಂಡಿದ್ದವು. ಒಂದೆಡೆ ಮುಗಿಲು ಮುಟ್ಟಿದ್ದ ಬೆಳಕಿನ ವೈಭವಕ್ಕೆ ನನ್ನ ಕಣ್ಣು ಒಡ್ಡಿಕೊಂಡಿದ್ದರೆ, ಮತ್ತೊಂದೆಡೆ ‘ಜಗದಕಣ್ಣು’ ಸೂರ್ಯ ನಿಧಾನಕ್ಕೆ ಅಸ್ತಂಗತ ನಾಗುತ್ತಿದ್ದ, ಗೂಡು ಸೇರಲು ತವಕಿಸಿ ಹಾರುತ್ತಿದ್ದ ಹಕ್ಕಿಗಳ ರಂಗೋಲಿ ಆಗಸದಲ್ಲಿ ಮೂಡಿತ್ತು.
ಹಾಗೇ ಸುಮ್ಮನೆ ಸುತ್ತಲೂ ಕಣ್ಣುಹಾಯಿಸಿದೆ. ದಸರಾ ಬೊಂಬೆಗಳ ತರಹ ರಂಗುರಂಗಿನ ತರಹೇವಾರಿ ಉಡುಪು ಧರಿಸಿ ಬೀಗುತ್ತ ನವರಾತ್ರಿಯ ಬೆಡಗಿ ಯರು ನಡೆದಾಡುತ್ತಿದ್ದರು. ಕಾರೊಳಗಿನ ಎಫ್ ಎಂ ರೇಡಿಯೋದಲ್ಲಿ, ‘ಹತ್ತು ತಲೆ ಇಪ್ಪತ್ತು ಕಣ್ಣಿದ್ದರೂ ಆ ರಾವಣ ನೋಡಿದ್ದು ಒಬ್ಬಳನ್ನೇ.
ರಾಮಾಯಣದಲ್ಲಿ ಆ ರಾವಣ ಪರ್ಮನೆಂಟ್ ವಿಲನ್… ಆದರೂ ತಪ್ಪಿಸಲಾಗದು ಈ ಕಣ್ಣನ್ನು, ಹಾಗೇ ಸುಮ್ಮನೆ ಮಾಡ್ತಾರಲ್ಲ ಫ್ಯಾಷನ್’ ಎಂದು ಕಿರುಚಿ ಹೇಳುತ್ತಿದ್ದ.
ಹಿಂದೆಯೇ ‘ದಸರಾ ಬೊಂಬೆ ನಿನ್ನನು ನೋಡಲು ನಮ್ಮೂರಿಂದ ಬಂದೆ ಕಣೇ’ ಎಂಬ ಎಫ್ಎಂ ಹಾಡು… ನೆನಪುಗಳು ನಮ್ಮ ಬಾಲ್ಯದೆಡೆಗೆ ಹೊರಳಿ, ನಮ್ಮೂರಿನ ದಸರಾ ಮೆರವಣಿಗೆಯ ಕಡೆಗೆ ಹೊರಟಿತ್ತು. ನೆನಪಿನ ಅಲೆಗಳಲ್ಲಿ ಮೌನಪಯಣ. ಹೌದಲ್ವಾ, ಆ ೯ ದಿನಗಳು ಬೊಂಬೆ ಗಳ ಉತ್ಸವ. ಅದರ ಜತೆಗೆ ಶಾಲೆಯ ದಸರಾ ರಜಾದಿನಗಳು. ಬಹುತೇಕ ಎಲ್ಲರ ಮನೆಯಲ್ಲಿಯೂ ದಸರಾ ಉತ್ಸವದ ಆಚರಣೆ. ಹಬ್ಬಕ್ಕೆ ಬೇಕಾದ ತಯಾರಿಗಳೆಲ್ಲವನ್ನೂ ನಮ್ಮ ನಮ್ಮ ಮನೆಗಳಲ್ಲಿ ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ ಎಲ್ಲರೂ ಜತೆಗೂಡಿ ಸಿದ್ಧಪಡಿಸುತ್ತಿದ್ದೆವು. ಅಟ್ಟದ ಮೇಲಿದ್ದ ಪೆಟ್ಟಿಗೆಗಳಲ್ಲಿ ಬಟ್ಟೆ, ಪೇಪರ್ ಇತ್ಯಾದಿಗಳನ್ನು ಸುತ್ತಿಕೊಂಡು ಬೆಚ್ಚಗೆ ಮಲಗಿದ್ದ ಬೊಂಬೆಗಳನ್ನೆಲ್ಲ ಕೆಳಗಿಳಿಸಿ, ಹೊರತೆಗೆದು ಮೈದಡವಿ ಅವಕ್ಕೆ ಮತ್ತೆ ಜೀವ ತುಂಬಿಸುತ್ತಿ ದ್ದೆವು.
ನವರಾತ್ರಿ ಶುರುವಾಗುವ ೨-೩ ದಿನಗಳ ಮುಂಚೆಯೇ ಪಾರ್ಕು, ತಿರುಪತಿ ಬೆಟ್ಟ, ಅಲ್ಲಿ ಕಾಣುವಂತೆಯೇ ಬೆಟ್ಟ-ಗುಡ್ಡಗಳ ನೋಟ, ಸರೋವರ, ನದಿ, ರಾಗಿ ಪೈರುಗಳು, ಮರಗಳು ಹೀಗೆ ಎಲ್ಲವನ್ನೂ ಒಳಗೊಂಡ ಒಂದು ಅಮ್ಯೂಸ್‌ಮೆಂಟ್ ಪಾರ್ಕ್ ತರಹ ಸಜ್ಜುಗೊಳಿಸುತ್ತಿದ್ದೆವು. ಹಬ್ಬದ ಅಂಗವಾಗಿ
ಮನೆಯಲ್ಲಿ ನಿತ್ಯವೂ ನಡೆಯುತ್ತಿದ್ದ ಆ ಸಾಂಪ್ರದಾಯಿಕ ಪೂಜೆ-ಪುನಸ್ಕಾರಗಳು, ಹಿರಿಯರಿಂದ ಸಂಸ್ಕೃತದ ‘ಶ್ರೀನಿವಾಸ ಕಲ್ಯಾಣ’ ಪಠಣ. ನಾವು
ಮಕ್ಕಳು ಕಣ್ಣು-ಕಿವಿ ಕೊಟ್ಟು ಕೇಳಿಸಿಕೊಳ್ಳುವುದು ಒಂದೆಡೆಯಾದರೆ, ಮತ್ತೊಂದೆಡೆ ಹೊಟ್ಟೆಯ ಕರೆ, ಗೆಳೆಯರ ಆಟದ ಮೊರೆ.
ಪ್ರತಿನಿತ್ಯ ಸಂಜೆಯಾದೊಡನೆ ಯಾವ ಹಮ್ಮು -ಬಿಮ್ಮು ಇಲ್ಲದೆ ಮನೆಮನೆಗಳಿಗೆ ನುಗ್ಗಿ ಬೊಂಬೆಗಳ ನೋಡಿ, ತರು ವಾಯದಲ್ಲಿ ಅವುಗಳ ವಿಮರ್ಶೆ ಮಾಡುತ್ತಿದ್ದೆವು. ಅಷ್ಟು ದಿನಗಳವರೆಗೆ ಮನೆಯ ಯಾವುದೋ ಮೂಲೆಯಲ್ಲೋ ಅಟ್ಟ ದಲ್ಲೋ ಅವಿತಿದ್ದ ಇವುಗಳ ಕಡೆಗೆ ಗಮನ ಕೊಡದಿದ್ದ ನಾವು, ಈಗ ಜೀವ ಮರುಕಳಿಸಿದಂತೆ ಕಾಣುವ ಕಣ್ಣೆದುರಿನ ಬೊಂಬೆಗಳ ಕುರಿತೇ ಮಾತಾಡುತ್ತಿದ್ದೆವು. ಜತೆಗೆ ತಿಂಡಿಪ್ರಿಯರಿ ಗಂತೂ ಅವು ಹೇಳಿಮಾಡಿಸಿದ
ಸಂಜೆಗಳು. ಪ್ರತಿ ಸಂಜೆಯೂ ಅವರಿವರ ಮನೆಗಳಲ್ಲಿ ಬಗೆಬಗೆಯ ಪ್ರಸಾದ, ಕುರುಕಲು ತಿಂಡಿಗಳು; ಒಂದೊಮ್ಮೆ ತುಂಬಾ ರುಚಿಕಟ್ಟಾಗಿತ್ತು ಎನಿಸಿದರೆ ತಿರುಗಿ ಆ ಮನೆಗಳಿಗೇ ಭೇಟಿಕೊಡುವುದು, ಆಹಾ ಅವೆಂಥಾ ದಿನಗಳು! ಹಾಗೆ ಕೇಳಿ ಪಡೆದು ತಿನ್ನುವಾಗ ಇಲ್ಲದ ನಾಚಿಕೆ, ಈಗ ಅದನ್ನು ನೆನೆದಾಗ
ಬರುವುದೇಕೋ?! ಇನ್ನು ವಿಜಯದಶಮಿಯ ದಿನವಂತೂ, ಕಿರಿಯರೆಲ್ಲ ಹಿರಿಯರಿಗೆ ಬನ್ನಿಪತ್ರೆಯನ್ನು ನೀಡಿ ಅವರ ಆಶೀರ್ವಾದ ಪಡೆಯುತ್ತಿದ್ದುದನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದೆ. ಆ ಪತ್ರೆಯ ಚಮತ್ಕಾರವೇನೆಂದು ತಿಳಿಯುವ ಕುತೂಹಲ.
ಮುಂದೆ ತಿಳಿಯಿತು- ಪಾಂಡವರು ತಮ್ಮ ಶಸ್ತ್ರಗಳನ್ನು ಇಟ್ಟಿದ್ದು ಇದೇ ಬನ್ನಿಮರದಲ್ಲಿ, ಇದರ ಶಕ್ತಿಯಿಂದಲೇ ಅಂದು ಅವರು ಯುದ್ಧದಲ್ಲಿ ಜಯಶಾಲಿ ಗಳಾದರು, ಈ ಮರವು ಶಕ್ತಿ ಮತ್ತು ವಿಜಯದ ಸಂಕೇತ ಅಂತ. ವಿಜಯ ದಶಮಿಯಂದು ಎಲ್ಲರೂ ಬನ್ನಿಪತ್ರೆಯನ್ನು ವಿನಿಮಯ ಮಾಡಿಕೊಂಡು ಅದರ ಶಕ್ತಿ ಮತ್ತು ವಿಜಯ ಎಲ್ಲರಿಗೂ ಲಭಿಸುವಂತಾಗಲೆಂದು ಪರಸ್ಪರರಿಗೆ ಶುಭಾಶಯವನ್ನು ಕೋರುತ್ತಾರೆ ಎಂಬುದು ಅಂದು ನಮಗೆ ಅರಿವಾಗಿತ್ತು. ವಿಜಯ ದಶಮಿಯ ಆ ದಿನದಂದು ಮೈಸೂರಿನ ಅರಮನೆಯಲ್ಲಿ ಕಾಣಬರುವ ಸಡಗರ, ಆನೆಯ ಮೇಲಿನ ಅಂಬಾರಿಯ ಮೆರವಣಿಗೆಯನ್ನು ಟಿವಿ ದೃಶ್ಯಗಳಲ್ಲಿ ಕಣ್ತುಂಬಿ ಕೊಳ್ಳುವುದೇ ಒಂದು ಆನಂದ. ಹಬ್ಬದ ಈ ಗುಂಗಿನ ಜತೆಜತೆ ಯಲ್ಲೇ, ಮಧ್ಯಂತರದ ರಜಾವಧಿ ಮುಗಿದ ನಂತರ ಶುರು ವಾಗುವ ಶಾಲಾ ದಿನಗಳನ್ನು ನೆನೆದು ಪಠ್ಯಪುಸ್ತಕಗಳು ಮತ್ತು ಪಾಟಿ ಚೀಲವನ್ನು ಒಪ್ಪ ಮಾಡಿಟ್ಟುಕೊಳ್ಳುವ ತಯಾರಿಯೂ ನಡೆಯುತ್ತಿತ್ತು….
ಸವಿನೆನಪಿನ ಗುಂಗಲ್ಲಿದ್ದವನನ್ನು ಮೊಬೈಲ್ ರಿಂಗಣ ಎಚ್ಚರಿಸಿತು. ‘ಮನೆ ಸೇರಿಕೊಂಡ ಮೇಲೆ ಕಾಲ್ ಮಾಡು, ಅರ್ಜೆಂಟ್ ಕೆಲಸವಿದೆ’ ಎಂದರು ನನ್ನ ಮ್ಯಾನೇಜರ್! ಇವತ್ತಿನ ಪರಿಸ್ಥಿತಿ ಹೇಗಿದೆಯೆಂದರೆ, ಬೇಕಿದ್ದರೆ ಹೃದಯವನ್ನು ಅರೆಕ್ಷಣ ಆಫ್ ಮಾಡಿಬಿಡಬಹುದೇನೋ, ಆದರೆ ಮೊಬೈಲ್ ಆಫ್ ಮಾಡುವ ಹಾಗಿಲ್ಲ. ಮೊಬೈಲ್‌ನಲ್ಲೇ ಹಾಡು-ಹಸೆ, ರಾಗ-ಉತ್ಸವ ಸಕಲವೂ; ಮೊಬೈಲ್ ಗಾಗಿಯೇ ಜೀನವತ್ಯಾಗ ಕೂಡ. ಬೇಕೋ ಬೇಡವೋ,
ಹೊಟ್ಟೆಪಾಡಿಗಾಗಿ ಹಲವು ಅನಿವಾರ್ಯಗಳಿಗೆ ಒಡ್ಡಿಕೊಂಡ ಬದುಕು ನಮ್ಮದು. ಹೀಗಾಗಿ ಪ್ರತಿಯೊಬ್ಬರೂ ಇಲ್ಲಿ ಸಮಯದ ಬೊಂಬೆಗಳೇ.
ಕಾಕತಾಳೀಯವೆಂಬಂತೆ ಕಾರೊಳಗಿನ ಎಫ್ಎಂ ಕೂಡ ‘ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ, ಆಡುವ ಸಮಯದಬೊಂಬೆ ಮಾನವ, ಆಡುವ ಸಮಯದ ಬೊಂಬೆ’ ಎಂಬ ಹಾಡನ್ನು ಉಲಿಯುತ್ತಿತ್ತು. ಸಿಲ್ಕ್ ಬೋರ್ಡ್ ಜಂಕ್ಷನ್‌ನ ಟ್ರಾಫಿಕ್‌ನಲ್ಲಿ ಸಿಲುಕಿ ನರಳುತ್ತಿದ್ದ ನನ್ನನ್ನೇ ಹಂಗಿಸಿ ನಡೆಯು ತ್ತಿದ್ದಂತಿತ್ತು ರಂಗುರಂಗಿನ ಬೊಂಬೆ ಗಳ ದಂಡು; ಆ ಬೊಂಬೆಗಳ ನೋಟ ಮತ್ತು ‘ಕ್ಯಾಟ್ ವಾಕ್’ ನಡಿಗೆ, ನನ್ನ ‘ಕಾರ್ ವಾಕ್’ ನಡಿಗೆಯನ್ನೇ ಅಣಕಿಸು ವಂತಿತ್ತು. ಚಾಕರಿಯ ಹಂಗಿನಲ್ಲಿ ಸಿಲುಕಿ ಹಬ್ಬಗಳ ಸಂಭ್ರಮ ವನ್ನು ಕಳೆದುಕೊಳ್ಳುವಂತಾಗುತ್ತಿದೆಯಲ್ಲಾ ಎಂಬ ಸಣ್ಣ ನೋವಿನಲ್ಲೇ, ಸಂಚಾರ ದಟ್ಟಣೆಯ ನಡುವೆಯೇ ದಸರೆ ಯನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಾ ಮನೆಯೆಡೆಗೆ ಸಾಗಿದೆ…
(ಲೇಖಕರು ರಂಗಭೂಮಿ ಕಲಾವಿದರು)