Wednesday, 11th December 2024

ಸುಳ್ಳಿನ ಗೋಪುರದಲ್ಲಿ ಕುಳಿತು ಗೂಗಲ್‌ ಮರೆತರೆ ?!

ವಿಶ್ಲೇಷಣೆ

ಸಂದೀಪ ಪಟಗಾರ

ತಪ್ಪಿಗೆ ಕ್ಷಮೆ ಕೋರುವುದು ಹಾಗೂ ಸುಳ್ಳಿಗೆ ಸಮರ್ಥನೆ ಕೊಡುವುದು ಕೆಲ ಸಮಯದವರೆಗೆ ಮಾತ್ರ ಉಳಿಯಲು ಸಾಧ್ಯ. ದಿನ ತಪ್ಪು ಮಾಡಿ ಕ್ಷಮೆ ಕೋರುವವರನ್ನು ಹಾಗೂ ಪ್ರತಿ ಬಾರಿ ಸುಳ್ಳು ಹೇಳಿಸಮರ್ಥನೆ ಮಾಡಿಕೊಳ್ಳುವವರನ್ನು ಸಮಾಜ ಒಪ್ಪಲು ಸಾಧ್ಯವಿಲ್ಲ.

ವಿಶ್ವ ಕಂಡ ಖ್ಯಾತ ಬರಹಗಾರರಬ್ಬರಾದ ಲಿಯೋ ಟಾಲ್ಸ್ಟಾಯ್ ಅವರು ತಮ್ಮ Anna Karenina ಎಂಬ ಕಾದಂಬರಿಯಲ್ಲಿ Anything is better than lies and deceit! ಎಂಬ ಪದಬಳಕೆ ಮಾಡಿದ್ದಾರೆ. ಕಾದಂಬರಿಯುದ್ದಕ್ಕೂ ಮಾನವನ ಬದುಕಿನ ಕುರಿತಾಗಿ ಅರ್ಥಪೂರ್ಣ ವಾಗಿ ಬರೆದಿದ್ದಾರೆ. ಇದು ಹೆಸರಾಂತ ಲೇಖಕರಾದ ಜವರೇಗೌಡ ಅವರಿಂದ ಕನ್ನಡಾನುವಾದಗೊಂಡಿದೆ.

ಇತ್ತೀಚೆಗೆ ಜ.ನಾ. ತೇಜಶ್ರೀ ಅವರೂ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದಾಗ ‘ಸುಳ್ಳು ಮತ್ತು ವಂಚನೆ’ ಎಂಬೆರಡು ಪದಗಳು ನಮ್ಮನ್ನು ಬಹುವಾಗಿ ಕಾಡುತ್ತವೆ. ದಿನಪತ್ರಿಕೆಯೊಂದು ಈ ಎರಡು ಶಬ್ಧಗಳನ್ನು ಬಳಸದೇ ಪತ್ರಿಕೆಯನ್ನು ಹೊರಡಿಸಿದ ದಿನ ಬಹುಶಃ ವಿಶ್ವದಾಖಲೆ ಯಾಗಬಹುದೇನೋ ಎನ್ನುವಷ್ಟರ ಮಟ್ಟಿಗೆ ಬಳಕೆಯಾಗುತ್ತಿವೆ. ಮೊನ್ನೆ ಶಿವಮೊಗ್ಗದ ಕಾಲೇಜೊಂದರಲ್ಲಿ ತ್ರಿವರ್ಣ ಧ್ವಜವನ್ನು ತೆಗೆದು ಅಲ್ಲಿ ಕೇಸರಿ ಬಾವುಟ ಹಾರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದು ಕೊಂಡಿದ್ದು ಭಾರೀ ಸಂಚಲನ ಮೂಡಿಸಿತ್ತು.

ಆ ಒಂದು ಸುಳ್ಳು ಟ್ವೀಟ್‌ಗೆ 9000+ ಲೈಕ್‌ಗಳು ಹಾಗೂ 2400+ ರೀ ಟ್ವೀಟ್‌ಗಳು ಬಂದಿವೆ ಎಂದರೆ ಒಂದು ಸುಳ್ಳನ್ನು ನಂಬುವವರು ಹಾಗೂ ಸುಳ್ಳನ್ನು ಹಂಚುವವರು ಎಷ್ಟು ಜನರಿರಬಹುದು! ಆಮೇಲೆ ಆ ಸ್ಥಳದಲ್ಲಿ ಕೇಸರಿ ಬಾವುಟ ಹಾರಿಸುವ ಮೊದಲು ಕಂಬದಲ್ಲಿ ರಾಷ್ಟ್ರ ಧ್ವಜ ಇರಲಿಲ್ಲ ಎಂಬುದನ್ನು ಪೊಲೀಸ್ ವರಿಷ್ಠಾಧಿ ಕಾರಿ ಬಿ.ಎಂ.ಲಕ್ಷ್ಮೀ ಪ್ರಸಾದ್ ಅವರು ಸ್ಪಷ್ಟಪಡಿಸಿರುವುದು ಬೇರೆ ವಿಚಾರ. ಅಷ್ಟಕ್ಕೂ ಸುಳ್ಳು ತಲುಪಿದಷ್ಟು ವೇಗವಾಗಿ ಸತ್ಯ ತಲುಪುವುದಿಲ್ಲ ಎನ್ನುವುದು ಅಷ್ಟೇ ಪ್ರಸ್ತುತ.

ಇನ್ನು ಸುಳ್ಳು ಸುದ್ದಿಯ ಇನ್ನೊಂದು ಅವತರಣಿಕೆಯಾದ ಫೋಟೋ ಮಾ-ಗಳನ್ನ ಅಸಲಿಯೆಂದು ನಂಬಿ ಟ್ವಿಟ್ಟರ್ ಗಳಲ್ಲಿ ಉದ್ದುದ್ದ ಬರೆದುಕೊಳ್ಳು ವವರ ಸಾಲಿನಲ್ಲಿ ರಾಜಕೀಯ ಪಕ್ಷಗಳ ಐಟಿ ಸೆಲ್ ವಕ್ತಾರರೇ ಆರಂಭದ ಕುರಿಗಳು. 2019ರಲ್ಲಿ ಭಾರತಕ್ಕೆ ಆಗಮಿಸಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಮಲ್ಲಪುರಂನಲ್ಲಿ ಕಳೆದ ಫೋಟೋವೊಂದಕ್ಕೆ 2014ರಲ್ಲಿ ತುಮಕೂರಿಗೆ ಆಗಮಿಸಿದ್ದ ನರೇಂದ್ರ ಮೋದಿಯವರು ತುಮಕೂರು ಮಹಾನಗರ ಪಾಲಿಕೆಯ ಮೇಯರ್‌ ಗೀತಾ ರುದ್ರೇಶ್ ಅವರಿಗೆ ತಲೆಬಾಗಿ ನಮಸ್ಕರಿಸಿದ ಫೋಟೋವನ್ನು ಸೇರಿಸಿ ಮೋದಿ ಚೀನಾ ಅಧ್ಯಕ್ಷರಿಗೆ ಶಿರಬಾಗಿ ನಮಸ್ಕರಿಸಿದ್ದಾರೆ ಎಂಬ ರೀತಿಯಲ್ಲಿ ಬಿಂಬಿಸಿ ಒಂದಿಷ್ಟು ದಿನ ಕಾಂಗ್ರೆಸ್ ಸಹಿತ ವಿವಿಧ ಪಕ್ಷಗಳ ಐಟಿ ಸೆಲ್ನವರು ತಮಗೆ ಬೇಕಾದ ರೀತಿಯಲ್ಲಿ ಬರೆದುಕೊಂಡು ಹಂಚಿಕೊಂಡಿದ್ದರು.

ಆಮೇಲೆ ಅದು ಎಡಿಟೆಡ್ ಪೋಟೋ ಎಂದು ಗೊತ್ತಾಗುತ್ತಿದ್ದಂತೆ ಮೇಲೆ ತೆಪ್ಪಗಾದರು. ವಾಟ್ಸಪ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಆರಂಭಿಸಿದ ದಿನದಿಂದ ಈ ಸುಳ್ಳು ಸುದ್ದಿ ಹಂಚುವವರನ್ನು ‘ವಾಟ್ಸಪ್ ಯುನಿವರ್ಸಿಟಿ’ಯಲ್ಲಿ ಓದಿದವರು ಎಂದು ಹೇಳುವುದು ಸಾಮಾನ್ಯವಾಗಿದೆ. ನಮಗೆ ಬಂದ ಯಾವುದೇ ವಿಷಯವನ್ನು ಪರಾಮರ್ಶಿಸದೇ ಎಲ್ಲರಿಗಿಂತ ಬೇಗ ಇನ್ನೊಬ್ಬರಿಗೆ ತಿಳಿಸಬೇಕೆಂಬ ಆತುರದಿಂದ ಇಂತಹ ಅಚಾತುರ್ಯ ಹೆಚ್ಚುತ್ತಿವೆ.
ಕೆಲವೊಮ್ಮೆ ತಿಳಿಯದೇ ತಪ್ಪಾಗುತ್ತವೆ ಒಪ್ಪೋಣ. ಆದರೆ, ಗೊತ್ತಿದ್ದೂ ಅದನ್ನ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದಿದೆಯಲ್ಲ ಅದಕ್ಕಿಂತ ವಂಚನೆ ಇನ್ನೊಂದಿಲ್ಲ. ಅದಕ್ಕಾಗಿ ಕೆಲವರು ಸಮರ್ಥನೆಯನ್ನೂ ಕೊಡಬಹುದು. ರಾಜಕೀಯ ವ್ಯಕ್ತಿಗಳು ಮಾಡುವುದೂ ಅದನ್ನೇ ಅಲ್ಲವೇ?! ತಾವು ಹೇಳಿದ ಸುಳ್ಳನ್ನು ಸಮರ್ಥಿಸಿಕೊಳ್ಳಲು ಅವರು ಬಳಸುವ ಪದವೇ ಮಾಧ್ಯಮಗಳು ನಮ್ಮ ಹೇಳಿಕೆಯನ್ನು ತಿರುಚಿ ವರದಿ ಮಾಡಿವೆ!

ತಮ್ಮ ತಪ್ಪು ಹೇಳಿಕೆಯನ್ನು ಒಪ್ಪಿ ಕ್ಷಮೆ ಕೇಳಿದವರು ಅತ್ಯಂತ ವಿರಳ. ಇದು ರಾಜಕೀಯ ವಿಷಯವಾದರೆ ಕಳೆದ ವರ್ಷದವರೆಗೂ ಕಾಗೆ ಹಾರಿಸಿ ಕೊಂಡಿದ್ದ ‘ಡ್ರೋನ್ ಪ್ರತಾಪ’ನ Motivational Speech ಕೇಳಿ ತಾವೂ ಅವರಂತೆಯೇ ಆಗಬೇಕೆಂಬ ಆಶಾ ಗೋಪುರ ಕಟ್ಟಿಕೊಂಡು ಆಮೇಲೆ ಆತ ಹಾರಿಸಿದ್ದೆಲ್ಲ ಕಾಗೆ ಎಂದು ತಿಳಿದು ಕೈ-ಕೈ ಹಿಸುಕಿಕೊಂಡವರನ್ನು ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ. ಸುಳ್ಳುಗಳು ಹಾಗೆಯೇ, ಕೇಳಲು ತುಂಬಾ ಹಿತವಾಗಿರುತ್ತದೆ. ಅವರು ನಮ್ಮನ್ನು ಸುಳ್ಳಿನ ಗೋಪುರದ ತುತ್ತ ತುದಿಯಲ್ಲಿ ಕುಳಿಸಿ ಕೈಬಿಟ್ಟು ಹೋಗುತ್ತಾರೆ. ನಾವು ಕನಿಷ್ಠ ಪಕ್ಷ ಗೂಗಲ್‌ ನಲ್ಲೂ ಹುಡುಕುವ ಗೋಜಿಗೆ ಹೋಗುವುದಿಲ್ಲ. ಕೊನೆಗೊಂದು ದಿನ ಯಾವುದೇ ಪತ್ರಿಕೆಯ ಅಥವಾ ಟಿವಿ ಮಾಧ್ಯಮದ ನೋಡಿ ಹಣೆ ಹಣೆ ಚಚ್ಚಿಕೊಳ್ಳುತ್ತೇ ವಷ್ಟೇ.

ಕಳೆದ ವರ್ಷ ಸದನದಲ್ಲಿ ಮಾತನಾಡುತ್ತಾ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು 2001ರಲ್ಲಿ 83.86% ಇದ್ದ ಹಿಂದೂಗಳ ಜನಸಂಖ್ಯೆ 84% ಆಗಿದೆ ಎಂದು ಹೇಳಿದ್ದರು. ಅದನ್ನು ಗಮನಿಸಿದ ಕುಡಚಿ ಶಾಸಕರಾದ ಪಿ.ರಾಜೀವ್ ಅವರು Point of order ಎತ್ತುವ ಮೂಲಕ 2011ರಲ್ಲಿ ಹಿಂದೂ ಗಳ ಜನಸಂಖ್ಯೆ 79.80% ಆಗಿದೆ ಸದನದಲ್ಲಿ ತಪ್ಪು ಮಾಹಿತಿ ಹೋಗಬಾರದು ಎಂದು ಮನವರಿಕೆ ಮಾಡಿಕೊಟ್ಟರು. ಸಿದ್ದರಾಮಯ್ಯ ಅವರ ಅತ್ಯಾಪ್ತ ರಾದ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಸಹ ಸಿದ್ದರಾಮಯ್ಯ ಅವರು ಹೇಳಿದ್ದು ತಪ್ಪು ಸರಿಪಡಿಸಿದ ಪಿ. ರಾಜೀವ್ ಅವರನ್ನು ಪ್ರಶಂಸಿಸಿ Point of order ಎತ್ತುವವರ ಸಂಖ್ಯೆ ಹೆಚ್ಚಾಗಬೇಕೆಂಬ ಆಶಯಯವನ್ನು ವ್ಯಕ್ತಪಡಿಸಿದ್ದರು.

ಇಲ್ಲಿ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆಂದು ನಾನು ಹೇಳುತ್ತಿಲ್ಲ. ಅವರ ಅರಿವಿಗೆ ಬಾರದೇ ಅಂಕಿ ಅಂಶಗಳಲ್ಲಿ ತಪ್ಪಾಗಿರಬಹುದು, ಆದರೆ ಅದನ್ನು ತಕ್ಷಣ ಖಂಡಿಸುವುದಿದೆಯಲ್ಲ ಅದು ಎಲ್ಲರಿಗೂ ಬರುವಂಥದ್ದಲ್ಲ. ಸಮಯಕ್ಕೆ ತಕ್ಕಂತೆ ಅಪ್‌ಡೇಟ್ ಇಲ್ಲದೇ ಇದ್ದರೆ ಇಂತಹ ಸನ್ನಿವೇಶಗಳಲ್ಲಿ ತಪ್ಪು ಮಾಹಿತಿಗಳು ರವಾನೆಯಾಗುವುದನ್ನು ತಡೆಯಲು ಸಾಧ್ಯವಿಲ್ಲ. ರಮೇಶ್ ಕುರ್ಮಾ ಅವರ ಮಾತು ಸದನಕ್ಕಷ್ಟೇ ಸೀಮಿತವಾಗಿದೆ ಎಂದುಕೊಂಡರೆ ಇನ್ಯಾರೋ ಹಂಚಿದ ಸುಳ್ಳುಸುದ್ದಿ ನಮ್ಮ ಕೈಯ್ಯಾರೆ ಇನ್ನೊಬ್ಬರಿಗೆ ಫಾರ್ವರ್ಡ್ ಆಗುವುದರಲ್ಲಿ ಆಶ್ಚರ್ಯವೇ ಇಲ್ಲ.

ನಮಗೆ ಬಂದ ಸುದ್ದಿಯನ್ನು ಇನ್ನೊಬ್ಬರಿಗೆ ಕಳುಹಿಸುವ ಮುನ್ನ ಎಷ್ಟು ಸತ್ಯ- ಎಷ್ಟು ಸುಳ್ಳು ಎಂದು ಪರಿಶೀಲಿಸಲೇಬೇಕು. ಇದಕ್ಕಾಗಿ ಕೆಲವು ವಿಧಾನ ಗಳಿವೆ. ಫೋಟೋವಾದರೆ ಗೂಗಲ್ ಲೆನ್ಸ್, ರಿವರ್ಸ್ ಇಮೇಜ್ ಸರ್ಚ್‌ನಂತಹ ಟೂಲ್ ಬಳಕೆ ಮಾಡಬಹುದು. ಅಕ್ಷರ ರೂಪದಲ್ಲಿದ್ದರೆ ಅದಕ್ಕೆ ಸಂಬಂಧ ಪಟ್ಟ ಕೆಲವೊಂದು ಕೀ ವರ್ಡ್ ಬಳಸಿ ಗೂಗಲ್‌ನಲ್ಲಿ ಹುಡುಕಬಹುದು. ತಪ್ಪಿಗೆ ಕ್ಷಮೆ ಕೋರುವುದು ಹಾಗೂ ಸುಳ್ಳಿಗೆ ಸಮರ್ಥನೆ ಕೊಡುವುದು ಕೆಲ ಸಮಯದವರೆಗೆ ಮಾತ್ರ ಉಳಿಯಲು ಸಾಧ್ಯ. ಹಳ್ಳಿ ಭಾಷೆಯಲ್ಲಿ ದಿನ ಸಾಯೋರಿಗೆ ಅಳೋರ್ಯಾರು? ಎಂಬ ಮಾತಿದೆ. ಹಾಗೆಯೇ ದಿನ ತಪ್ಪು ಮಾಡಿ ಕ್ಷಮೆ ಕೋರುವವರನ್ನು ಹಾಗೂ ಪ್ರತಿ ಬಾರಿ ಸುಳ್ಳು ಹೇಳಿಸಮರ್ಥನೆ ಮಾಡಿಕೊಳ್ಳುವವರನ್ನು ಸಮಾಜ ಒಪ್ಪಲು ಸಾಧ್ಯವಿಲ್ಲ.