ಸ್ಮರಣೆ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
ನಮ್ಮ ಸಮಾಜದಲ್ಲಿ ಶೂನ್ಯದಿಂದ ಶಿಖರಕ್ಕೇರಿದ ಹಲವು ಸಾಧಕರನ್ನು ಕಂಡಿದ್ದೇವೆ. ಇಂಥವರ ಪೈಕಿ ಕಾಸರಗೋಡು ಜಿಲ್ಲೆಯ ಕರ್ನಾಟಕದ ಗಡಿ
ಭಾಗ ವಾದ ಬದಿಯಡ್ಕ ಸಮೀಪದ ಕಿಳಿಂಗಾರು ನಿವಾಸಿ ಗೋಪಾಲಕೃಷ್ಣ ಭಟ್ಟರೂ ಒಬ್ಬರು. ಸಾಯಿಬಾಬಾ ಭಕ್ತರಾಗಿದ್ದ ಕಾರಣಕ್ಕೆ ಊರಮಂದಿಗೆ ಕಿಳಿಂಗಾರು ಸಾಯಿರಾಮ್ ಭಟ್ ಎಂದೇ ಚಿರಪರಿಚಿತ ಹೆಸರು.
ಮಧ್ಯಮವರ್ಗದ ಕೃಷಿಕರಾಗಿದ್ದ ಇವರು ತಮ್ಮ ಸುದೀರ್ಘ 96 ವರ್ಷಗಳ ಕಾಲ ಬಡವರ ಪಾಲಿನ ಆಶಾಕಿರಣ ವಾಗಿ ಮೂಡಿಬಂದಿದ್ದಾರೆ. ಒಬ್ಬ ಶ್ರೇಷ್ಠ ಕೃಷಿಕನಾಗಿ, ಪರಿಸರ ಪ್ರೇಮಿಯಾಗಿ, ನಾಟಿವೈದ್ಯರಾಗಿ, ತಾಲೀಮು ಪಟುವಾಗಿ ಇವರ ಸೇವೆ ಅನನ್ಯ. ಯೋಗ ಧ್ಯಾನಾನುಷ್ಠಾನದ ಜತೆಗೆ ಇವರೊಬ್ಬ ಪುರೋಹಿತರೂ ಹೌದು. ಅದೊಂದು ಬಾರಿ ಸಾಯಿ ರಾಮ್ ಭಟ್ಟರು ಬಹುವರ್ಷಗಳ ಕನಸಿನಂತೆ ಕಾಶಿ ಯಾತ್ರೆಗೆ ಹೊರಡಲು ಸಿದ್ಧತೆ ನಡೆಸಿದ್ದರು. ಆ ಸಂದರ್ಭ ತಮ್ಮದೇ ಊರಿನ ನಿರ್ಗತಿಕನೊಬ್ಬ ಮನೆಯ ಬಾಗಿಲ ಬಳಿ ನಿಂತು ಕಣ್ಣೀರಿಡುತ್ತ ಗಾಳಿ-ಮಳೆಗೆ ತನ್ನ ಮನೆ ಕುಸಿದು ಬಿದ್ದು ತನ್ನ ಮನೆಯ ಶೀಟು ಹಾರಿಹೋಗಿದೆ. ನನಗೆ ತಾತ್ಕಾಲಿಕ ಪ್ಲಾಸ್ಟಿಕ್ ಶೀಟ್‌ನ ಸೂರನ್ನಾದರೂ ಕಲ್ಪಿಸಿಕೊಡಿ ಅಂಎಂದು ಅಂಗಾಲಾಚಿದ. ಸಾಯಿರಾಮ್ ಭಟ್ಟರು ಖುದ್ದು ಆ ಮನೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಆ ನಿರ್ಗತಿಕನ ಇಬ್ಬರು ಪುಟ್ಟ ಮಕ್ಕಳು ಮತ್ತು ಮಡದಿ ಮಳೆ ನೀರಿನಲ್ಲಿ ನೆನೆಯುತ್ತ ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯ ಕಂಡು ಮಮ್ಮಲ ಮರುಗಿ ಹೋದರು.
ತಕ್ಷಣ ನಿರ್ಗತಿಕನಿಗೆ ತಾತ್ಕಾಲಿಕ ಶೆಡ್ಡಿನ ಬದಲಾಗಿ ವಾಸಕ್ಕೆ ಯೋಗ್ಯವಾದ ಸುಸಜ್ಜಿತ ಮನೆಯನ್ನೇ ಭಟ್ಟರು ನಿರ್ಮಿಸಿಕೊಟ್ಟಿದ್ದರು. ಇದು ಅವರ ಮೊದಲ ವಸತಿ ದಾನವೂ ಹೌದು. ಇದರಿಂದ ಭಟ್ಟರ ಕಾಶಿಯಾತ್ರೆಯೂ ಮೊಟಕುಗೊಂಡಿತು. ಇದರೊಂದಿಗೆ ಬಡಜನರ ಕಣ್ಣೀರೊರೆಸುವ ಕಾರ್ಯ ಆರಂಭಿಸಿದರು. ಇತರರಿಗಾಗಿ ಬದುಕುವ ಪರಂಪರೆಗೆ ನಾಂದಿ ಹಾಡಿದ ಭಟ್ಟರು ಪರೋಪಕಾರಕ್ಕಿಂತ ದೊಡ್ಡ ಕಾಶಿಯಾತ್ರೆ ಬೇರೊಂದಿಲ್ಲ ಎಂಬುದನ್ನು ಅಂದೇ ಮನದಟ್ಟು ಮಾಡಿಕೊಂಡರು. ಆನಂತರ ತಮ್ಮ ಸುದೀರ್ಘ ಜೀವನದುದ್ದಕ್ಕೂ ಜತಿ ಧರ್ಮ ಭೇದ ಭಾವ ಮರೆತು ಊರ-ಪರವೂರ ಬಡ ಕುಟುಂಬಗಳಿಗೆ ೨೬೫ ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ ದಾನ ಮಾಡುವ ಮೂಲಕ ತಮ್ಮ ಜೀವನದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ.
ಯಾವುದೇ ಒಬ್ಬ ರಾಜಕಾರಣಿ, ಉದ್ಯಮಿ, ದಾನ ಧರ್ಮ ಮಾಡಿದರೆ ಬಹುದೊಡ್ಡ ಸುದ್ದಿಯಾಗುವ ಈ ಕಾಲಘಟ್ಟದಲ್ಲಿ ಕಿಳಿಂಗಾರು ಸಾಯಿರಾಂ ಭಟ್ಟರ ಸದ್ದಿಲ್ಲದ ಸೇವೆ ಶ್ರೇಷ್ಠವೆನಿಸುತ್ತದೆ. ಆದರೆ ಇವರಿಗೆ ಪ್ರಚಾರ ಬೇಕಿರಲಿಲ್ಲ. ಸದಾ ಪ್ರಚಾರದಿಂದ ಅಂತರ ಕಾಯ್ದುಕೊಂಡವರು. ತಮ್ಮೂರಿನ ಮಂದಿ ಯನ್ನು ಅತೀವವಾಗಿ ಪ್ರೀತಿಸುತ್ತಾ ಸರ್ವ ಧರ್ಮದ ಜನರ ಪ್ರೀತಿಗೆ ಪಾತ್ರರಾಗಿ, ಊರಿನ ಅಭಿವೃದ್ಧಿ, ಮೂಲಭೂತ ಸೌಕರ್ಯಗಳಾದ ನೀರು, ರಸ್ತೆ,
ವಿದ್ಯುತ್ ಸಂಪರ್ಕವನ್ನು ಒದಗಿಸಿದವರು. ಹಲವಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಿ ಪುಸ್ತಕಗಳನ್ನು ಒದಗಿಸಿದವರು. ಪರಿಸರ ಪ್ರೇಮಿಯಾಗಿ ತಮ್ಮ ಮನೆಯಲ್ಲೇ ಬೆಳೆದ ಹಲವು ಬಗೆಯ ಹೂಗಿಡ, ತರಕಾರಿ ಗಿಡ, ಹಣ್ಣಿನ ಮರ, ಗಿಡಮೂಲಿಕೆಗಳ ಬಳ್ಳಿಗಳನ್ನು ಅತಿಥಿಗಳಿಗೆ ಮತ್ತು
ಊರ ಮಂದಿಗೆ ಹಂಚಿ ಪ್ರೇರೇಪಣೆ ನೀಡುತ್ತಿದ್ದವರು. ಪರರಿಗೆ ೨೫೦ಕ್ಕೂ ಮಿಕ್ಕಿ ಮನೆ ನಿರ್ಮಿಸಿ ಕೊಟ್ಟಿದ್ದರೂ ತಾವು ಮಾತ್ರ ಸಾಧಾರಣ ರೀತಿಯ ಮನೆಯ ವಾಸಿಸುತ್ತ ಮನೆ ಮಂದಿಗೂ ಸರಳತೆಯನ್ನು ಬೋಧಿಸಿದವರು.
ಎಲ್ಲರನ್ನೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಿದವರು ಕೂಡ. ಊರಿನ ಜನ ನೀರಿಗಾಗಿ ಬೇಸಿಗೆ ಸಮಯದಲ್ಲಿ ಹಾಹಾಕಾರ ಪಡು ವುದು ಮತ್ತು ಕೊಡಪಾನ ಹಿಡಿದು ದೂರದ ಹತ್ತಾರು ಮೈಲಿ ಸಾಗುವುದನ್ನು ಮನಗಂಡು ಸ್ಥಳೀಯ ಪಂಚಾಯತ್‌ನ ಸಹಕಾರದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಜರಿಗೊಳಿಸಿದರು. ಬಡಜನರಿಗೆ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಊರಿನಲ್ಲಿ ಪ್ರತಿವಾರ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುವ ಮೂಲಕ ನುರಿತ ವೈದ್ಯರಿಂದ ಉಚಿತವಾಗಿ ಔಷಽಯನ್ನು ಒದಗಿಸುತ್ತ ಬಂದಿದ್ದರು.
ಕಿಳಿಂಗಾರು ಸಾಯಿ ಮಂದಿರದಲ್ಲಿ ಹಲವಾರು ಬಡ ಹೆಣ್ಣು ಮಕ್ಕಳ ವಿವಾಹವನ್ನು ನೆರವೇರಿಸಿದ್ದಲ್ಲದೆ ಚಿನ್ನ- ಬಟ್ಟೆ ಊಟೋಪಚಾರ ಸೇರಿದಂತೆ ಎಲ್ಲ
ಖರ್ಚುಗಳನ್ನೂ ಸ್ವತಃ ತಾವೇ ನೋಡಿಕೊಳ್ಳುತ್ತ ಬಂದಿದ್ದರು. ಊರಿನ ಹಲವಾರು ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗದಾತರಾಗಿದ್ದರು. ಸ್ವಾವಲಂಬಿ ಬದುಕಿಗೆ ಯುವಕರಿಗೆ ಆಟೋರಿಕ್ಷಾ, ಯುವತಿಯರಿಗೆ ಹೊಲಿಗೆ ಯಂತ್ರವನ್ನು ನೀಡಿದ್ದರು. ಇಷ್ಟೆಲ್ಲ ಸೇವಾ ಕೈಂಕರ್ಯಗಳನ್ನು ಕೈಗೊಂಡ ಕಿಳಿಂಗಾರು ಗೋಪಾಲಕೃಷ್ಣ ಸಾಯಿರಾಮ್ ಭಟ್ಟರನ್ನು ಸ್ವತಃ ಅಂದಿನ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರು ಮುಕ್ತ ಕಂಠದಿಂದ
ಶ್ಲಾಘಿಸಿರುವುದಲ್ಲದೆ ಇವರ ಮೇರುವ್ಯಕ್ತಿತ್ವದ ಕುರಿತಾಗಿ ಕರ್ನಾಟಕ ಶಾಲಾ ಪಠ್ಯಪುಸ್ತಕದಲ್ಲೂ ದಾಖಲಾಗಿರುವುದು ಉಲ್ಲೇಖನೀಯ.
ಇದೀಗ ೯೬ ರ ಹರೆಯದ ಶ್ರೀಯುತರು ಇತ್ತೀಚೆಗೆ ಅಸ್ತಂಗತರಾಗಿರುವುದು ಅವರ ಅಪಾರ ಅಭಿಮಾನಿ, ಹಿತೈಷಿ ಬಳಗದ ಶೋಕಸಾಗರದಲ್ಲಿ ತೇಲುವಂತೆ ಮಾಡಿದೆ. ರಾಜ್ಯ ಹೊರರಾಜ್ಯ,ಹೊರಜಿಯ ಮಂದಿಗೆ ಕಿಳಿಂಗಾರು ಸಾಯಿರಾಮ್ ಭಟ್ಟರ ಮಾದರಿ ಬದುಕಿನ ಬಗ್ಗೆ ಅವರ ಜೀವಿತಾವಧಿಯಲ್ಲಿ ಅಷ್ಟಾಗಿ ಪ್ರಚಾರ, ಮುನ್ನಲೆಗೆ ಬಾರದಿದ್ದರೂ ಅವರ ನಿಧನದ ಬಳಿಕ ಸಾಮಾಜಿಕ ಮೌಲ್ಯ ಅರಿವಿಗೆ ಬಂದಿದೆ. ಸರಳತೆ, ಆಡಂಬರವಿಲ್ಲದ ಬದುಕು,
ಸೇವಾಚಟುವಟಿಕೆಗಳು ಒಬ್ಬ ವ್ಯಕ್ತಿಯನ್ನು ಯಾವ ಮಟ್ಟಕ್ಕೆ ಒಯ್ಯಬಹುದು ಎಂಬುವುದಕ್ಕೆ ಸ್ವತಃ ಸಾಯಿರಾಮ್ ಭಟ್ಟರೇ ಸ್ಪಷ್ಟ ನಿದರ್ಶನ.