Wednesday, 11th December 2024

ಅಮೆರಿಕನ್ ಹಿಂದೂ ದಂಪತಿ ನಡೆಸುವ ಗೋಪಾಲ-ಗೋಶಾಲೆ

ತಿಳಿರು ತೋರಣ

srivathsajoshi@yahoo.com

ಶಾಲಿನಿ-ಮಹೇಶ ಎಂಬ ಅಮೆರಿಕನ್ ಮತಾಂತರಿ ಹಿಂದೂ ದಂಪತಿ, ಗೋಪಾಲ ಗೋಶಾಲೆಯಲ್ಲಿ ಗೌರಿ ಮತ್ತು ವೃಂದಾ ಹೆಸರಿನ ಹಸುಗಳನ್ನು ಸಾಕಿರುವುದು, ಆಸುಪಾಸಿನ ದೈವಭಕ್ತ ಸಂಪ್ರದಾಯಸ್ಥ ಭಾರತೀಯರಿಗೆ ಹಬ್ಬಹರಿದಿನ ಗಳಂದು ಗೋಪೂಜೆಗೆ ಅಥವಾ ಶ್ರಾದ್ಧತಿಥಿಯಂದು ಗೋಗ್ರಾಸ ಕೊಡಲಿಕ್ಕೆ ಅಲ್ಲಿಗೆ ಸ್ವಾಗತ ವಿರುವುದು ಈ ಅನನ್ಯ ವಿವರಗಳು ನಮ್ಮ ಕುತೂಹಲ ಕೆರಳಿಸಿದ್ದುವು.

ಅಮೆರಿಕನ್ ಬೈ ಬರ್ತ್, ಅಂದರೆ ಕ್ರಿಶ್ಚಿಯನ್ ಮತಾನುಯಾಯಿಗಳಾಗಿದ್ದವರು ಎಂದಿಟ್ಟು ಕೊಳ್ಳೋಣ, ಈಗ ಗಂಡ-ಹೆಂಡತಿ ಇಬ್ಬರೂ ಹಿಂದೂ ಧರ್ಮವನ್ನು ಆಲಿಂಗಿಸಿಕೊಂಡಿ ದ್ದಾರೆ. ಸನಾತನ ಭಾರತೀಯ ಸಂಸ್ಕೃತಿಯನ್ನು ಅಪಾರವಾಗಿ ಗೌರವಿಸು ತ್ತಾರೆ. ಸಂಸ್ಕೃತ ಭಾಷೆಯನ್ನಂತೂ ಅರೆದು ಕುಡಿದಿದ್ದಾರೆ. ‘ಗೌರಿ’ ಮತ್ತು ‘ವೃಂದಾ’ ಹೆಸರಿನ ಎರಡು ಗೋವುಗಳನ್ನು ಸಾಕಿದ್ದಾರೆ. ಅವುಗಳನ್ನೇ ದೇವರೆಂದು ಪೂಜಿಸುತ್ತಾರೆ. ತಮ್ಮದೇ ಮಕ್ಕಳೆಂಬಂತೆ ಮುದ್ದಿಸುತ್ತಾರೆ.

ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದಲ್ಲಿರುವ ಎಲ್ವರ್ಸನ್ ಎಂಬ ಪಟ್ಟಣದ ಅಂಚಿನಲ್ಲಿ, ಬಹುಮಟ್ಟಿಗೆ ಅರಣ್ಯಪ್ರದೇಶವೇ ಎನ್ನಬಹುದಾದ ತಪೋವನ ಪರಿಸರದಲ್ಲಿ, ಅಕ್ಷರಶಃ ವಾನಪ್ರಸ್ಥಾಶ್ರಮ ಜೀವನ ನಡೆಸುತ್ತಿರುವ ಶಾಲಿನಿ ಮತ್ತು ಮಹೇಶ ದಂಪತಿಯ ಕಥೆಯಿದು. ಕೇಳಿದರೆ ಅಭಿಮಾನ ಮೂಡಿಸುವಂಥದು. ಶಾಲಿನಿ ಮತ್ತು ಮಹೇಶ- ಇವು ಅವರ ಈಗಿನ ಹೆಸರುಗಳು. ಪೂರ್ವಾಶ್ರಮದಲ್ಲಿ ಏನಿದ್ದುವೋ ಗೊತ್ತಿಲ್ಲ.

ಶಾಲಿನಿ ಹೆಸರಿನೊಂದಿಗೆ ಮಾತ್ರ ‘ಬಾಸ್ಬಿಶೆಲ್’ ಎಂಬ ಉಪನಾಮಧೇಯ ಕೆಲವು ಕಡೆ ದಾಖಲೆಗಳಲ್ಲಿ ಉಳಿದುಕೊಂಡಿದೆ; ಮಹೇಶ ಜೊತೆ ಅದೂ ಇಲ್ಲ. ಸರಿ, ಇಷ್ಟು ಪೀಠಿಕೆ ಸಾಕು ವಿಷಯಪ್ರವೇಶಕ್ಕೆ. ಕಳೆದ ವಾರಾಂತ್ಯದಲ್ಲಿ ನಾನು ಪೆನ್ಸಿಲ್ವೇನಿಯಾದ ಚೆಸ್ಟರ್ ಸ್ಪ್ರಿಂಗ್ಸ್ ಎಂಬಲ್ಲಿರುವ ಸ್ನೇಹಿತ ಪ್ರತಾಪ್ ಕೊಡಂಚ ಅವರ ಮನೆಗೆ ಸೌಹಾರ್ದ ಭೇಟಿ ನೀಡಿದ್ದೆ. ಕಳೆದ ಏಳೆಂಟು ವರ್ಷಗಳಿಂದ ಫೇಸ್ ಬುಕ್‌ನಲ್ಲಿ ಅವರ ಒಡನಾಟ ಇದೆಯಾದರೂ ಫೇಸ್-ಟು-ಫೇಸ್ಇದೇ ಮೊದಲು.

ನಮ್ಮಲ್ಲಿಂದ ಮೂರು ಗಂಟೆ ಕಾರ್ ಡ್ರೈವಿಂಗ್ ನಷ್ಟು ದೂರ ಅವರ ಮನೆ. ನಾನಿರುವ ವರ್ಜೀನಿಯಾದಿಂದ ಪಕ್ಕದ ಮೇರಿ ಲ್ಯಾಂಡ್ ರಾಜ್ಯ, ಅಲ್ಲಿಂದ ‘ಮೇಸನ್-ಡಿಕ್ಸನ್ ಲೈನ್’ ಚಾರಿತ್ರಿಕ ಸುಪ್ರಸಿದ್ಧ ಗಡಿರೇಖೆ ದಾಟಿದರೆ ಪೆನ್ಸಿಲ್ವೇನಿಯಾ ರಾಜ್ಯ.
ಈಗ ಬೇಸಗೆ ಕಾಲದಲ್ಲಿ ಹಸುರು ವನರಾಜಿಯ ನಡುವೆ ಹಾದುಹೋಗುವ ರಸ್ತೆಗಳಲ್ಲಿ ಪಯಣ. ಸೃಷ್ಟಿಸೌಂದರ್ಯದ ಸವಿಯೂಟ. ಸ್ವಲ್ಪ ಬಿಸಿಲು-ಮಳೆ ಕಣ್ಣುಮುಚ್ಚಾಲೆ ಇತ್ತೆಂಬುದನ್ನು ಬಿಟ್ಟರೆ ಖುಷಿ ಕೊಟ್ಟ ಡ್ರೈವ್. ಶನಿವಾರ ಮಧ್ಯಾಹ್ನಕ್ಕೆ ಹೋಗಿ ಭಾನುವಾರ ಸಂಜೆಯೊಳಗೆ ಹಿಂದಿರುಗುವ ಪ್ಲಾನ್ ಹಾಕಿ ಹೋದದ್ದು.

ಲಿಬರ್ಟಿ ಬೆಲ್, ಯುಎಸ್ ಮಿಂಟ್, ಲಾಂಗ್‌ವುಡ್ ಗಾರ್ಡನ್ಸ್ ಮುಂತಾದ ಫಿಲ್ಲಿ ಎಟ್ರ್ಯಾಕ್ಷನ್‌ಗಳನ್ನೆಲ್ಲ ಈಗಾಗಲೇ ನೋಡಿರುವು ದರಿಂದ ಬರೀ ಲೋಕಾಭಿರಾಮ ಹರಟೆಯೊಂದೇ ಟ್ರಿಪ್ ಎಜೆಂಡಾ. ಪ್ರತಾಪ್ ಮತ್ತವರ ಪತ್ನಿ ರಶ್ಮಿ- ಇಬ್ಬರೂ ಮೂಲತಃ ಉಡುಪಿ ಕಡೆಯವರು. ಪುಟ್ಟ ಮಕ್ಕಳು ಪ್ರಗತಿ ಮತ್ತು ದ್ಯುತಿ ಇಲ್ಲಿ ಹುಟ್ಟಿ ಬೆಳೆದವರು. ಮುದ್ದಾಗಿ ಕನ್ನಡ ಮಾತನಾಡುವವರು (ಪ್ರತಾಪ್ ಅಲ್ಲಿನ ಕನ್ನಡ-ಕಲಿ ಶಾಲೆಯ ಸ್ವಯಂಸೇವಕ ಶಿಕ್ಷಕರಲ್ಲೊಬ್ಬರು). ‘ಊರಿನವರು ಬಂದಾಗ ಊರಿನಲ್ಲಿದ್ದಂತೆಯೇ ಭಾಸವಾಗಲಿ’ ಎಂದು ನನಗೆ ಪಕ್ಕಾ ಉಡುಪಿ ಶೈಲಿಯಲ್ಲಿ ಒತ್ತುಶ್ಯಾವಿಗೆ+ತೆಂಗಿನೆಣ್ಣೆ+ಉಪ್ಪಿನಕಾಯಿರಸ, ಸೀಕರಣೆ, ಸಾಸ್ವೆ ಒಗ್ಗರ್ಣೆ ಶ್ಯಾವಿಗೆ ಔತಣ. ಸ್ಪೆಷಲ್ ಏನೂ ಮಾಡ್ಬೇಡಿ ಮಾರಾಯ್ರೆ ಎಂದರೂ ಕೇಳಲಿಲ್ಲ.

ಪತ್ರೊಡೆನೂ ಆಗೋದಿತ್ತಂತೆ, ಪಟೇಲ್ ಬ್ರದರ್ಸ್‌ನಲ್ಲಿ ಕೆಸುವಿನೆಲೆ ಸಿಗದೆ ಅದು ಕೈಗೂಡಲಿಲ್ಲ. ಇರಲಿ, ಅವರ ಆತಿಥ್ಯದ ಪರಿ ಹೇಗಿತ್ತೆಂದು ನಿಮಗೂ ಗೊತ್ತಾಗಲಿಕ್ಕೆ ಇದನ್ನೆಲ್ಲ ಬರೆದೆ. ಶನಿವಾರ ಸಂಜೆ ಚಹ ಕುಡಿಯುತ್ತ ಹೀಗೇ ಏನೋ ಮಾತುಕತೆಯ ನಡುವೆ ‘ಇಲ್ಲೊಂದು ಗೋಶಾಲೆ ಇದೆಯಂತೆ. ನಾನೂ ಇದುವರೆಗೆ ನೋಡಿಲ್ಲ. ಸ್ನೇಹಿತರಿಂದ ಕೇಳಿಯಷ್ಟೇ ಗೊತ್ತು. ನಿಮಗೆ ಆಸಕ್ತಿ ಇದೆಯಾದರೆ ಹೋಗಿಬರೋಣವೇ?’ ಎಂದರು ಪ್ರತಾಪ್. ತಥಾಸ್ತು ಎಂದೆ. ಗೂಗಲ್‌ನಲ್ಲಿ ಹುಡುಕಿ ವಿಳಾಸವನ್ನು ಕಂಡುಕೊಂಡ ಪ್ರತಾಪ್ ಅಲ್ಲಿ ಕೊಟ್ಟಿದ್ದ ಸಂಪರ್ಕ ಸಂಖ್ಯೆಗೆ ಕರೆ ಮಾಡಿದರು. ಆಗ ಮಾತನಾಡಿದವರೇ ಶಾಲಿನಿ.

ತಾನೀಗ ನ್ಯೂಜೆರ್ಸಿಯಿಂದ, ಅನಾರೋಗ್ಯಪೀಡಿತೆ ಅಮ್ಮನನ್ನು ಭೇಟಿಯಾಗಲು ಹೋಗಿದ್ದವಳು ವಾಪಸ್ ಬರ್ತಾ ಇದ್ದೇನೆ. ಗಂಡ ಮನೆಯಲ್ಲೇ ಇದ್ದಾರೆ. ನೀವು ಇಂದೇ ಬರುವುದಾದರೆ ಸಂಜೆ ಏಳೂವರೆಗೆ ಬನ್ನಿ. ಅಷ್ಟೊತ್ತಿಗೆ ನಾನೂ ಮನೆಗೆ ಮರಳಿರುತ್ತೇನೆ. ಆಗಲೇ ನಾವು ಹಸುಗಳನ್ನು ಮೇಯಲಿಕ್ಕೆ ಹೊರಗೆ ಬಿಡುವುದು. ಅವುಗಳನ್ನು ನೋಡಲಿಕ್ಕೆ ಮೈದಡವಿ ಮಾತಾಡಿಸಲಿಕ್ಕೆ ಚೆನ್ನಾಗಿರುತ್ತದೆ. ನಾಳೆ ಬೆಳಗ್ಗೆ ಅಂತಾದರೆ ಕೊಟ್ಟಿಗೆಯೊಳಗಿರುವಾಗಷ್ಟೇ ನೋಡಬೇಕಾಗುತ್ತದೆ. ಹಸುಗಳಿಗೆ ತಿನ್ನಿಸಲಿಕ್ಕೆ ಬೇಕಿದ್ರೆ ಬಾಳೆಹಣ್ಣು ತಗೊಂಬನ್ನಿ ಜಾಸ್ತಿ ತರಬೇಡಿ ಒಂದೆರಡು ಸಾಕು. ಬನ್ನಿ, ಸಿಗೋಣ ಎಂದು ತುಂಬು ಹೃದಯದ ಸ್ವಾಗತ ಕೋರುತ್ತ ಮಾತನಾಡಿದರು.

ಅವರ ಮಾತಿನ ಆಕ್ಸೆಂಟ್‌ನಲ್ಲಷ್ಟೇ ಅಲ್ಲ, ಕರಾರುವಾಕ್ಕಾದ ವಿವರಗಳನ್ನು ತಿಳಿಸುವ ಎಟೆನ್ಷನ್-ಟು-ಡಿಟೇಲ್ಸ್ ಶೈಲಿಯಲ್ಲೂ ಗೊತ್ತಾಗುತ್ತಿತ್ತು ಅವರು ಅಮೆರಿಕದವರೆಂದು. ಗೂಗಲ್ ಮ್ಯಾಪ್‌ನಲ್ಲಿ ನೋಡಿದರೆ ಆ ವಿಳಾಸ ಬರೀ ೧೫-೨೦ ನಿಮಿಷ ಡ್ರೈವಿಂಗ್
ದೂರದಲ್ಲಿರುವುದೆಂದು ತಿಳಿಯಿತು. ಅಮೆರಿಕನ್ನರು ನಡೆಸುವ ಗೋಶಾಲೆ ಎಂದಮೇಲೆ, ಅದೂ ಇಷ್ಟು ಹತ್ತಿರದಲ್ಲಿರುವಾಗ, ಆದರದ ಸ್ವಾಗತವಿರುವಾಗ ನೋಡಲೇಬೇಕು ಎಂದು ತೀರ್ಮಾನಿಸಿದೆವು.

ಹಾಗೆ ನೋಡಿದರೆ ಅಮೆರಿಕದಲ್ಲಿ ಗೋಶಾಲೆ ಎಂಬ ಕಾನ್ಸೆಪ್ಟ್ ನಮಗಿಬ್ಬರಿಗೂ ತೀರ ಹೊಸದೇನಲ್ಲ. ಪೆನ್ಸಿಲ್ವೇನಿಯಾ ರಾಜ್ಯದಲ್ಲೇ, ಸ್ಟ್ರೌಡ್ಸ್‌ಬರ್ಗ್ ಎಂಬಲ್ಲಿ ಶೃಂಗೇರಿ ವಿದ್ಯಾಭಾರತಿ ಫೌಂಡೇಶನ್ ಅಂಗಭಾಗವಾಗಿ ದೊಡ್ಡದೊಂದು ಗೋಶಾಲೆ ಇದೆ. ಅಲ್ಲಿ ಹತ್ತಿಪ್ಪತ್ತು ದನಕರುಗಳಿರುವುದನ್ನು, ದೇವಸ್ಥಾನದ ಹೈನು ಅಗತ್ಯಗಳೆಲ್ಲ ಅವುಗಳಿಂದಲೇ ಪೂರೈಕೆಯಾಗುವುದನ್ನು ನೋಡಿದ್ದೇವೆ.

ಮೇರಿಲ್ಯಾಂಡ್‌ನಲ್ಲಿ ಭಕ್ತ ಆಂಜನೇಯ ದೇವಸ್ಥಾನಕ್ಕೆ ಸೇರಿದ್ದೊಂದು ಗೋಶಾಲೆ ಇದೆ, ಒಂದು ಹಸುವಿನೊಂದಿಗೆ ಆರಂಭ ವಾದದ್ದು ಈಗ ಸಂಖ್ಯೆಯಲ್ಲಿ ಬೆಳೆದಿದೆ. ಇನ್ನೊಂದು, ಟಿಪಿಕಲ್ ಅಮೆರಿಕನ್ ಕೆಟಲ್ ಫಾರ್ಮ್ ಇಲ್ಲಿ ನಮ್ಮನೆಗೆ ಒಂದೆರಡು ಮೈಲುದೂರದಲ್ಲಿದೆ. ಅಲ್ಲಿ ಶಾಲೆಮಕ್ಕಳಿಗೆ ಹೈನುಗಾರಿಕೆ ಪ್ರಾತ್ಯಕ್ಷಿಕೆಗಳನ್ನೆಲ್ಲ ನಡೆಸುತ್ತಾರೆ. ಅದಲ್ಲದೆಯೂ ಗ್ರಾಮೀಣ ಪ್ರದೇಶಗಳ ಮೂಲಕ ಹೆದ್ದಾರಿಯಲ್ಲಿ ಸಾಗುವಾಗ ಅಕ್ಕಪಕ್ಕ ಹುಲ್ಲುಗಾವಲುಗಳಲ್ಲಿ ಹಸುಕರುಗಳು ಮೇಯುತ್ತಿರುವ ದೃಶ್ಯ ತೀರ ಸಾಮಾನ್ಯವೇ.

ಅಷ್ಟೇಕೆ, ಪ್ರತಾಪ್ ಅವರ ಮನೆಗೆ ಕಾಲ್ನಡಿಗೆ ದೂರದಲ್ಲೇ ಮಿಲ್ಕಿ ವೇ ಫಾರ್ಮ್ ಅಂತೊಂದು ದೊಡ್ಡ ಡೈರಿ ಫಾರ್ಮ್, ಅಲ್ಲಿನ
ಹಸುಗಳದೇ ಹಾಲಿನಿಂದ ತಯಾರಿಸಿದ ಐಸ್‌ಕ್ರೀಮ್‌ನದೊಂದು ಪಾರ್ಲರ್ ಸಹ ಇದೆ. ಆದರೆ ಶಾಲಿನಿ-ಮಹೇಶ ಎಂಬ ಅಮೆರಿಕನ್ ಮತಾಂತರಿ ಹಿಂದೂ ದಂಪತಿ, ಗೋಪಾಲ ಗೋಶಾಲೆಯಲ್ಲಿ ಗೌರಿ ಮತ್ತು ವೃಂದಾ ಹೆಸರಿನ ಹಸುಗಳನ್ನು ಸಾಕಿರುವುದು, ಆಸುಪಾಸಿನ ದೈವಭಕ್ತ ಸಂಪ್ರದಾಯಸ್ಥ ಭಾರತೀಯರಿಗೆ ಹಬ್ಬಹರಿದಿನಗಳಂದು ಗೋಪೂಜೆಗೆ ಅಥವಾ ಶ್ರಾದ್ಧ ತಿಥಿಯಂದು ಗೋಗ್ರಾಸ ಕೊಡಲಿಕ್ಕೆ ಅಲ್ಲಿಗೆ ಸ್ವಾಗತವಿರುವುದು ಈ ಅನನ್ಯ ವಿವರಗಳು ನಮ್ಮ ಕುತೂಹಲ ಕೆರಳಿಸಿದ್ದುವು.

ಏಳೂವರೆ ಗಂಟೆಗೆ ಸರಿಯಾಗಿ ತಲುಪುವಂತೆ ನಾವೆಲ್ಲರೂ ಪ್ರತಾಪ್ ಅವರ ಕಾರಿನಲ್ಲಿ ಹೊರಟೆವು. ಸಕಲೇಶಪುರ ಶಿರಾಡಿ ಘಾಟ್ ಮಾರ್ಗ ನೆನಪಿಸುವಂತಿದ್ದ ರಸ್ತೆ. ಹೊರಟ ಐದು ನಿಮಿಷಗಳೊಳಗೇ ‘ಬಂತಾ? ತಲುಪಿದ್ವಾ?’ ಎಂದು ಹಿಂದೆ ಚೈಲ್ಡ್ ಸೀಟ್‌ನಲ್ಲಿ ಕೂತಿದ್ದ ಮಾತಿನಮಲ್ಲಿ ದ್ಯುತಿಯ ಪ್ರಶ್ನೆ. ಈಗ ಇಲ್ಲಿ ಸೂರ್ಯಾಸ್ತವಾಗುವುದೇ ಎಂಟೂವರೆಗೆ ಆದ್ದರಿಂದ ಇನ್ನೂ ಬಿಸಿಲಿತ್ತು. ಮುಖ್ಯರಸ್ತೆಯಿಂದ ಕವಲುದಾರಿ ಹೊರಳುವಲ್ಲಿ ವೇ ಟು ಗೋಶಾಲಾ ಎಂಬ ಚಿಕ್ಕ ಬೋರ್ಡ್ ಇತ್ತು. ಆ ಕವಲು ರಸ್ತೆಯಲ್ಲಿ ಕೊಂಚ ದೂರ ಕ್ರಮಿಸಿದ ಮೇಲೆ ಮತ್ತೊಂದು ಬೋರ್ಡ್. ಅಲ್ಲಿಂದ ಮಾತ್ರ ಟಾರ್ ಇಲ್ಲದ ಕಚ್ಚಾರಸ್ತೆ.

ಟಿಪಿಕಲ್ ನಮ್ಮ ಹಳ್ಳಿಗಳಲ್ಲಿನ ರಸ್ತೆಗಳಂತೆ, ಅದರಲ್ಲೂ ಕಾಡಿನಿಂದ ಮರದ ದಿಮ್ಮಿಗಳನ್ನು ಸಾಗಿಸಲಿಕ್ಕೆ ಲಾರಿಗಳಿಗಾಗಿ ಮಾಡಿರುತ್ತಿದ್ದ ರಸ್ತೆಯಂತೆ. ಜಿಪಿಎಸ್ ಕೈಕೊಡಬಹುದು ದಾರಿತಪ್ಪದಂತೆ ಎಲ್ಲ ತಿರುವುಗಳಲ್ಲಿ ಬೋರ್ಡ್ ಇವೆ ಎಂದು ಶಾಲಿನಿ ಮೊದಲೇ ಹೇಳಿಟ್ಟಿದ್ದರು. ಕೊನೆಗೂ ನಾವು ದೊಡ್ಡದೊಂದು ಪರ್ಣಕುಟೀರ- ಅಥವಾ ಬಹುತೇಕ ಮರದ ಹಲಗೆಗಳಿಂದಲೇ ರಚಿಸಿದ ಕಟ್ಟಡವೊಂದರ ಮುಂದೆ ಬಂದು ನಿಂತೆವು. ಒಂದು ದೊಡ್ಡ ಟ್ರಕ್, ಮತ್ತೆರಡು ಕಾರುಗಳನ್ನು ಪಾರ್ಕ್ ಮಾಡಿದ್ದಿತ್ತು.

ಹ್ಯಾಟ್ ತೊಟ್ಟ ತಲೆಯಿಂದ ಹಿಂದೆ ಇಳಿಬಿಟ್ಟಿದ್ದ ಕೂದಲು, ಕುರುಚಲು ನೆರೆಗಡ್ಡ, ಮೊಣಕಾಲವರೆಗೆ ಬೂಟುಗಳು, ಕಡುನೀಲಿ ಜೀನ್ಸ್ ಪ್ಯಾಂಟ್, ಮೇಲೊಂದು ತಿಳಿನೀಲಿ ಟಿ-ಶರ್ಟ್ ಅದರ ಮೇಲೆ ಆನಂದಾಶ್ರಮ ನ್ಯೂಯಾರ್ಕ್ ಎಂಬ ಓಂ ಲಾಂಛನ, ೬೦ ದಾಟಿರಬಹುದಾದ ಆದರೆ ಕಟ್ಟುಮಸ್ತಾದ ಕಾಯದ ಗಂಡಸು ನಮ್ಮನ್ನು ಎದುರುಗೊಂಡರು. ‘ಐ ಆಮ್ ಮಹೇಶ್. ಪ್ಲೀಸ್ ಕಮ್’ ಎಂದು ಸ್ವಾಗತಿಸಿದರು. ನಾವು ಗೋಶಾಲೆ ನೋಡಲಿಕ್ಕೆ ಬಂದವರೆಂದು ಮೊದಲೇ ಗೊತ್ತಿದ್ದರಿಂದ ನಮ್ಮನ್ನು ಮನೆಯ ಸುತ್ತಲಿಂದ ಹಿಂಭಾ ಗಕ್ಕೇ ನೇರವಾಗಿ ಕರೆದುಕೊಂಡು ಹೋದರು.

ಇದಂತೂ ನಾನು ಹುಟ್ಟಿಬೆಳೆದ ಹಳ್ಳಿಯಲ್ಲಿ ಬೇರೆಬೇರೆ ಮನೆಗಳವರ ಕೊಟ್ಟಿಗೆ ದೃಶ್ಯದ ಪಡಿಯಚ್ಚು. ಅದೇ ಥರ ಬೈಹುಲ್ಲಿನ
ರಾಶಿ, ಅದೇ ಥರ ಮರದ ಬೇಲಿ, ಪ್ರತ್ಯೇಕ ಅಂಕಣಗಳ ಕೊಟ್ಟಿಗೆ. ವ್ಯತ್ಯಾಸವೆಂದರೆ ಹಿತಮಿತವಾಗಿ ವರ್ಣಮಯ ವಿದ್ಯುದ್ದೀಪಾ ಲಂಕಾರ ಇತ್ತು. ಹಿಂದೂ ದೇವತೆಗಳ, ರಮಣ ಮಹರ್ಷಿ ಸಾಯಿಬಾಬಾ ಮುಂತಾದ ಸಂತರ ಪಟಗಳು. ಪ್ಲಾಸ್ಟಿಕ್‌ನ ಮಾವಿನೆಲೆ ತೋರಣ. ಒಟ್ಟಿನಲ್ಲಿ ಪೂಜ್ಯ ಚಿತ್ರಣ. ಅಲ್ಲಿ ಮೊದಲಿಗೆ ಕಂಡದ್ದು ದನಗಳಲ್ಲ ಒಂದು ಕತ್ತೆ! ಇದೇನಿದು ಮೋಸಹೋದೆವಾ ನಾವೇ ಕತ್ತೆಗಳಾದೆವಾ ಎಂದು ಅರೆಕ್ಷಣ ಅನಿಸಿದ್ದು ನಿಜ.

ಆದರೆ ಆಮೇಲೆ ದೊಡ್ಡ ಗಾತ್ರದ ಎರಡು ಹಸುಗಳನ್ನು ಕಂಡಾಗ ಸಮಾಧಾನ. ಮಹೇಶ್ ಆ ಮೂರನ್ನೂ ಕೊಟ್ಟಿಗೆಯಿಂದ ಹುಲ್ಲು ಗಾವಲಿಗೆ ತರಲಿಕ್ಕೆ ಸಿದ್ಧರಾಗಿಯೇ ಬಂದಿದ್ದರು. ಬಗಲಲ್ಲೊಂದು ಚೀಲ, ಅದರಲ್ಲಿ ಬಾಳೆಹಣ್ಣು, ಮಾವಿನಹಣ್ಣಿನ ಒಣಗಿದ ಕೆನ್ನೆಗಳು, ಫಿಗ್(ಅಂಜೂರ)ಬಾರ್‌ಗಳು, ರಾಸ್ಪ್‌ಬೆರ್ರಿ ಕುಕೀಸ್ ಇತ್ಯಾದಿ. ಅದು ಪ್ರೀತಿಯ ಪ್ರಲೋಭನೆ ಟ್ರೀಟ್. ಮಹೇಶರ ಕೈಯಲ್ಲೊಂದು ಚಾಟಿ ಇತ್ತಾದರೂ ಹೊಡೆಯಲಿಕ್ಕಲ್ಲ, ಹಸುಗಳ ಬೆನ್ನಭಾಗ ಕೈಗೆಟುಕದಾದಾಗ ಅವುಗಳನ್ನು ಮೃದುವಾಗಿ ಪ್ರಚೋದಿಸಲಿಕ್ಕಂತೆ. ‘ಯಷ್ಟಿ ಮಧುರಾ…’ ಎಂದು ಅಧರಂ ಮಧುರಂ ಪದ್ಯದ ಸಾಲನ್ನು ಅವರೇ ನೆನಪಿಸಿದರು. ಆ ಗೋಪಾಲಕರ ಸ್ವಭಾವಮೃದುತ್ವಕ್ಕೆ ಬೇರೇನು ಸಾಕ್ಷಿ ಬೇಕು? ಮೊದಲಿಗೆ ಕತ್ತೆಯನ್ನು ಪರಿಚಯಿಸಿದರು.

ಅದರ ಹೆಸರು ಸ್ವಾಮಿ ಶಾಂತಾನಂದ ಮಹಾರಾಜ್ ಎಂದು! ಅದು ನಮ್ಮತ್ತ ಒಮ್ಮೆ ನೋಡಿ ಮಹೇಶರನ್ನು ಹಿಂಬಾಲಿಸಿ ಹುಲ್ಲುಗಾವಲು ತಲುಪಿತು. ಮುಂದಿನ ಸರದಿ ‘ವೃಂದಾವನೇಶ್ವರಿ’ ಹಸುವಿನದು. ಹ್ರಸ್ವ ಹೆಸರು ವೃಂದಾ. ಜರ್ಸಿ ಹೈಫರ್ ತಳಿಯ ಹಸು. ಕೋಡುಗಳಿಲ್ಲ. ೨೦೧೨ರಲ್ಲಿ ಆಮಿಷ್ ಡೈರಿ ಫಾರ್ಮ್‌ನಿಂದ, ಆಗ ತಾನೇ ಹುಟ್ಟಿದ್ದನ್ನು ತಗೊಂಡುಬಂದದ್ದು. ಡೆಲವೇರ್‌ ನ ಮಹಾಲಕ್ಷ್ಮಿ ದೇವಸ್ಥಾನದವರು ಅದನ್ನು ದತ್ತು ತೆಗೆದುಕೊಂಡಿರುವುದಾದರೂ ಅದರ ಪೋಷಣೆ ಈ ಗೋಶಾಲೆಯಲ್ಲಿ. ದೇವಸ್ಥಾನದವರು ಇಟ್ಟ ಹೆಸರು ‘ಶ್ಯಾಮಾ’(ಕಪ್ಪುಬಣ್ಣದ್ದೆಂದು). ಆದರೆ ಇವರು ಕರೆಯುವುದು ನಕ್ಷತ್ರನಾಮ ವೃಂದಾ ಎಂದು. ಬಾಳೆಹಣ್ಣು ತಿನ್ನಿಸುತ್ತ ಅದನ್ನೂ ಕೊಟ್ಟಿಗೆಯಿಂದ ಹೊರತಂದು ಹುಲ್ಲುಗಾವಲಿಗೆ ಬಿಟ್ಟದ್ದಾಯ್ತು.

ಕೊನೆಯದು ಗೌರಿ. ಜರ್ಸಿ ಮಿಶ್ರಿತ ಗ್ವೆಮ್ಸೆ ಎಂಬ ತಳಿ. ಕೋಡುಗಳಿವೆ. ಗೌರ ವರ್ಣದಿಂದಾಗಿ ಮತ್ತು ನಕ್ಷತ್ರನಾಮ ವಾಗಿ ಆ ಹೆಸರು. ೨೦೧೨ರಲ್ಲಿ ಮದರ್ಸ್ ಡೇ ದಿನ ಹುಟ್ಟಿದ್ದನ್ನು ಒಂದು ವಾರದ ಬಳಿಕ ಡೈರಿಯಿಂದ ಇವರು ಕರೆದುಕೊಂಡು ಬಂದಿದ್ದು. (ಅಮೆರಿಕದ ಡೈರಿಗಳಲ್ಲಿ ಗಂಡುಕರುಗಳನ್ನು ಮುಲಾಜಿಲ್ಲದೆ ಕಸಾಯಿಖಾನೆಗೆ ಕಳಿಸುತ್ತಾರೆ. ಹೆಣ್ಣುಕರುಗಳಾದರೆ ಅವಶ್ಯವಿದ್ದರೆ ಉಳಿಸಿಕೊಂಡು ಬೇಡವಾದರೆ ದೂಡುತ್ತಾರೆ). ಗೌರಿಯನ್ನು ಕೊಟ್ಟಿಗೆಯಿಂದ ಹೊರಭಾಗಕ್ಕೆ ತರುವಷ್ಟರಲ್ಲಿ ಶಾಲಿನಿ ಅಲ್ಲಿಗೆ ಬಂದರು. ನ್ಯೂಜೆರ್ಸಿಯಿಂದ ಆಗತಾನೆ ಬಂದಿದ್ದವರು ಬಟ್ಟೆಬದಲಾಯಿಸಿ ಫ್ರೆಷನ್‌ಅಪ್ ಆಗಿ ನಮ್ಮನ್ನು ಎದುರುಗೊಳ್ಳಲು ಸಿದ್ಧರಾಗಿ ಬಂದಿದ್ದರು. ಅವರದೂ ನೀಳ ಕೃಶಕಾಯ. ವಯಸ್ಸು ೬೦ರ ಆಸುಪಾಸು. ನೆರೆತ ಕೂದಲು. ಕೈತುಂಬ ಬಳೆಗಳು. ಕೊರಳಲ್ಲಿ ರುದ್ರಾಕ್ಷಿಮಾಲೆ. ಬಂದವರೇ ಗೌರಿಯ ಮೈದಡವಿದರು.

ಪ್ರೀತಿ ತೋರಿದರು. ಪೈಪ್‌ನಿಂದ ಕಾಲುಗಳಿಗೆ ನೀರು ಬಿಟ್ಟು ಗೊರಸು ಸ್ವಚ್ಛಗೊಳಿಸಿದರು. ನಾವು ಐವರೂ ಕುತೂಹಲದಿಂದ ಅವರೆಲ್ಲ ಚಟುವಟಿಕೆಗಳನ್ನು- ಮುಖ್ಯವಾಗಿ ಶಾಲಿನಿಯವರೊಂದಿಗಂತೂ ಆ ಹಸುಗಳು ಮನುಷ್ಯರಂತೆಯೇ ಸಂಭಾಷಿಸುವು ದನ್ನು- ನೋಡುತ್ತ, ಪ್ರಶ್ನೆಕೇಳುತ್ತ, ವಿವರಗಳನ್ನು ಪಡೆಯುತ್ತ ಕಣ್ತುಂಬಿಸಿಕೊಂಡೆವು. ಫಿಗ್‌ಬಾರ್, ಬಾಳೆಹಣ್ಣು, ಒಂದಿಷ್ಟು ಕುಕ್ಕಿಗಳನ್ನು ನಾವೂ ಅವುಗಳಿಗೆ ತಿನ್ನಿಸಿದೆವು.

ಮಹೇಶರು ಅವುಗಳಿಗೆ ಬಾಲ್ದಿಗಳಲ್ಲಿ ನೀರು ತಂದಿಟ್ಟರು. ಕಳೆದ ಹನ್ನೊಂದು ವರ್ಷಗಳಲ್ಲಿ ವೃಂದಾ ಮತ್ತು ಗೌರಿ ಬೆಳೆದುಬಂದ
ಒಂದೊಂದು ಕ್ಷಣವನ್ನೂ ಸುಂದರ ಫೋಟೊಗಳಲ್ಲಿ ಸೆರೆಹಿಡಿದು ಆಲ್ಬಂ ಮಾಡಿಟ್ಟಿದ್ದಾರೆ ಶಾಲಿನಿ. ಅದನ್ನು ನಮಗೆ ಹೆಮ್ಮೆಯಿಂದ ತೋರಿಸಿದರು. ‘ಮೊತ್ತಮೊದಲು ನಡೆದಾಡಿದ್ದು…’, ‘ಹುಲ್ಲು ಮೇಯತೊಡಗಿದ್ದು…’, ‘ಮೊದಲ ಹಿಮಪಾತ…’ ಕ್ಯಾಪ್ಷನ್‌ಗಳು ಥೇಟ್ ಮಕ್ಕಳ ಫೋಟೊ ಆಲ್ಬಂನಂತೆಯೇ. ತಮ್ಮ ಸೆಲ್‌ಫೋನ್ ನಲ್ಲಿದ್ದ ಒಂದಿಷ್ಟು ಫೋಟೊ ಮತ್ತು ವಿಡಿಯೊಗಳನ್ನೂ ತೋರಿಸಿದರು.

ಟ್ರಕ್‌ನಲ್ಲಿ ನ್ಯೂಯಾರ್ಕ್‌ನ ಆನಂದಾಶ್ರಮಕ್ಕೆ ಕರೆದುಕೊಂಡು ಹೋದದ್ದು, ಡೆಲವೇರ್‌ನ ದೇವಸ್ಥಾನದ ಕುಂಭಾಭಿ ಷೇಕದಲ್ಲಿ ಸಾಲಂಕೃತವಾಗಿ ಭಾಗವಹಿಸಿದ್ದು, ಧೋತಿಯುಟ್ಟ ಮಹೇಶರು, ಸೀರೆಯುಟ್ಟ ಶಾಲಿನಿ, ಕೋವಿಡ್ ಕೈಮಲ್ಲಿ ಝೂಮ್ ಮೂಲಕ ಭಕ್ತಾದಿಗಳಿಂದ ಗೋಪೂಜೆ ಮಾಡಿಸಿಕೊಂಡಿದ್ದು, ಸ್ಥಳೀಯ ಚಿನ್ಮಯ ಮಿಷನ್‌ನ ಮಕ್ಕಳು ಇವರ ಗೋಶಾಲೆಗೆ ಭೇಟಿ ನೀಡಿದ್ದು, ಒಂದಿಬ್ಬರು ಸ್ವಯಂಸೇವಕ ಭಾರತೀಯ ಕುಟುಂಬಗಳು ನಿಯತವಾಗಿ ಬಂದು ಕೊಟ್ಟಿಗೆ ಶುಚಿಗೊಳಿಸಿ ಬೈಹುಲ್ಲು ಹಾಸಿ ನೆರವಾಗುವುದು… ಶಾಲಿನಿ ಪ್ರತಿಯೊಂದನ್ನೂ ಹೆಮ್ಮೆಯಿಂದ ಹೇಳಿದರು.

ಮಹೇಶರದು ಮಾತು ಕಡಿಮೆ. ಅವರು ಭೂಗರ್ಭ ಶಾಸ್ತ್ರದಲ್ಲಿ ಪಿಎಚ್‌ಡಿ. ಈಗ ಫುಲ್‌ಕೈಂ ಗೋಪಾಲನಾ ವೃತ್ತಿ. ಅದರಲ್ಲೇ ಧನ್ಯತೆ. ಶಾಲಿನಿ ಈಹಿಂದೆ ವೆಟರ್ನರಿ ನರ್ಸ್ ಆಗಿದ್ದರು. ಎನಿಮಲ್ ಕಮ್ಯುನಿಕೇಟರ್ ಎಂದರೆ ಹೆಚ್ಚು ಸೂಕ್ತ. ಆಕೆ ಪ್ರಾಣಿ ಗಳೊಂದಿಗೆ ಸಂವಹನ ಮಾಡಬಲ್ಲರು. ಅವುಗಳ ಅಂತರಂಗವನ್ನು, ಭಾವಸಂವೇದನೆಗಳನ್ನು ಅರಿಯಬಲ್ಲರು. ಅವೂ ಇವರ ಮನದಾಳವನ್ನು ಅರ್ಥಮಾಡಿಕೊಳ್ಳಬಲ್ಲವು. ಒಮ್ಮೆ ಯಾರೋ ದೈವಭಕ್ತ ಭಾರತೀಯರು ಶುದ್ಧಾಚರಣೆಗೆ ಗೋಮೂತ್ರ ಬೇಕು ಎಂದು ಕೇಳಿದ್ದರಂತೆ. ಸಾಮಾನ್ಯವಾಗಿ ವೃಂದಾ ಅಥವಾ ಗೌರಿ ಪೈಕಿ ಒಂದಾದರೂ ನಿರ್ದಿಷ್ಟ ವೇಳೆಗೆ ‘ಒಂದಾ’ ಮಾಡುವುದು ನಿಕ್ಕಿ ಗೊತ್ತಿದ್ದ ಶಾಲಿನಿ ಒಪ್ಪಿಕೊಂಡಿದ್ದರು.

ಆದಿನ ಜಪ್ಪಯ್ಯ ಎಂದರೂ ಒಂದರದೂ ಒಂದಾ ಇಲ್ಲ. ನಿರಾಶರಾದರು. ಆದರೆ ಮಧ್ಯಾಹ್ನದ ಹೊತ್ತಿಗೆ ಗೌರಿ ತಾನಾಗಿಯೇ ಅಂಬಾ ಎಂದು ಜೋರಾಗಿ ಕೂಗಿ ಇವರ ಗಮನ ಸೆಳೆಯಿತಂತೆ. ಇವರು ಹತ್ತಿರ ಹೋಗಿ ಮೈದಡವಿದ ಮೇಲೆ ಮೂತ್ರ ಸುರಿಸಿತಂತೆ! ಇಂಥವೇ ಅದೆಷ್ಟೋ ರಸಪ್ರಸಂಗಗಳ ಸ್ಮರಣೆ. ಶಾಲಿನಿ-ಮಹೇಶ್ ಇಬ್ಬರೂ ಬಹುವರ್ಷಗಳ ಕಾಲ ರೇಸ್ ಕುದುರೆಗಳಿಗೆ ಬೌದ್ಧಿಕ/ಮಾನಸಿಕ ಕೌನ್ಸೆಲಿಂಗ್ ಮಾಡುತ್ತಿದ್ದವರು. ಹಾಗಾಗಿ ಮನುಷ್ಯರಿಗಿಂತಲೂ ಹೆಚ್ಚಾಗಿ ಪ್ರಾಣಿಗಳ ಒಡನಾಟ, ಒಳ-ಹೊರ ಅರಿವು. ಪ್ರಾಣಿದಯೆ ಅವರ ಧಮನಿಗಳಲ್ಲೆಲ್ಲ ಹರಿಯುತ್ತದೆ. ಆ ಕತ್ತೆಯನ್ನೂ ಯಾವುದೋ ರೆಸ್ಕ್ಯೂ ಷೆಲ್ಟರ್ ನಿಂದ ತಂದು ಅವರು ಸಾಕುತ್ತಿರುವುದು. ಈಮೊದಲು ತುಳಸಿ ಎಂಬ ಹೆಸರಿನ ಒಂದು ಮೊಲವೂ ಇತ್ತಂತೆ. ಆಮೇಲೇ ಯಾರೋ ಅದನ್ನು ಸಾಕಲಿಕ್ಕೆ ತೆಗೆದುಕೊಂಡುಹೋದರಂತೆ. ಇಷ್ಟೆಲ್ಲ ವಿಚಾರವಿನಿಮಯ ಆಗುವಷ್ಟರಲ್ಲಿ ಅಲ್ಲಿಗೆ ಎರಡು ಜಿಂಕೆಗಳು ಬಂದವು. ಅವುಗಳ ಬರುವಿಕೆಯನ್ನು ನಿರೀಕ್ಷಿಸಿಯೇ ಇದ್ದರೇನೋ ಎಂಬಂತೆ ಮಹೇಶರು ಅವುಗಳಿಗೆ ಒಂದು ಬೋಗುಣಿಯಲ್ಲಿ ಧಾನ್ಯಗಳನ್ನು ಇಟ್ಟು ಅವುಗಳ ಮೈದಡವಿ ಬಂದರು. ಸೂರ್ಯಾಸ್ತವಾಗಿ ಕತ್ತಲು ಆವರಿಸುತ್ತಿದ್ದಂತೆ ರಾಶಿರಾಶಿ ಮಿಂಚುಹುಳಗಳು! ಇದಂತೂ ನಯನಮನೋಹರ ದೃಶ್ಯ.

ಬೇಸಗೆಯಲ್ಲಿ ವೃಂದಾ, ಗೌರಿ, ಶಾಂತಾನಂದ ಮಹಾರಾಜ ಮೂವರೂ ರಾತ್ರಿಯಿಡೀ ಆ ಹುಲ್ಲುಗಾವಲಿನಲ್ಲಿರುತ್ತವೆ. ಬೆಳಗ್ಗೆ ಅವುಗಳನ್ನು ಕೊಟ್ಟಿಗೆಯೊಳಕ್ಕೆ ತರುತ್ತಾರೆ. ಹಗಲಲ್ಲಿ ವಿಪರೀತ ಬಿಸಿಲಿರುವುದರಿಂದ ಈ ಏರ್ಪಾಡು. ಕೊಟ್ಟಿಗೆಯಲ್ಲೂ ಸೆಕೆ
ಆಗದಂತೆ ನಿರಂತರ ಫ್ಯಾನ್ ಚಾಲನೆ. ಚಳಿಗಾಲದಲ್ಲಿ ಹಿಮಪಾತವಿರುವಾಗ ತದ್ವಿರುದ್ಧ. ಹಗಲಿರುಳೂ ಬಹುಮಟ್ಟಿಗೆ ಕೊಟ್ಟಿಗೆ
ಯಲ್ಲೇ ಬೆಚ್ಚಗೆ. ಮಧ್ಯಾಹ್ನ ಸ್ವಲ್ಪಹೊತ್ತು ಹೊರಕ್ಕೆ. ಪ್ರತಿ ಶುಕ್ರವಾರ ಸಂಜೆ ಕೊಟ್ಟಿಗೆಯಲ್ಲಿ ಹಸುಗಳ ಸಮ್ಮುಖದಲ್ಲೇ ಮಹೇಶರಿಂದ ಲಲಿತಾಸಹಸ್ರನಾಮ ಪಠನ. ಅದರದೂ ಒಂದು ವಿಡಿಯೊಕ್ಲಿಪ್ ನಮಗೆ ತೋರಿಸಿದರು.

ಉಳಿದಂತೆ ಬೇಸಗೆಯಲ್ಲಿ ಪ್ರತಿದಿನ ರಾತ್ರಿ ಅವುಗಳನ್ನು ಹುಲ್ಲುಗಾವಲಿನಲ್ಲಿ ಬಿಟ್ಟು ಮರಳುವ ಮೊದಲು ಚಾಮರಸೇವೆ. ಶಾಲಿನಿ-ಮಹೇಶ ಇಬ್ಬರೂ ಕೈಯಲ್ಲೊಂದು ದೀಪ, ಚಾಮರ ಹಿಡಿದುಕೊಂಡು ‘ಯಾ ದೇವಿ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ…’ ಸ್ತೋತ್ರ ಪಠಿಸಿ ಶುಭರಾತ್ರಿ ಹೇಳುತ್ತಾರೆ. ಅಂದು ನಾವೂ ಅವರ ಜೊತೆ ದನಿಗೂಡಿಸಿದೆವು.

ಹೋಗಿ ಬರುತ್ತೇವೆ ಎಂದು ಆ ವೃಂದಾವನವಾಸಿ ದ್ವಿಪದಿ-ಚತುಷ್ಪದಿ ಪುಣ್ಯಜೀವಿಗಳಿಗೆ ವಿದಾಯ ತಿಳಿಸಿ ಸುಂದರ ನೆನಪುಗಳ ಮೂಟೆ ಕಟ್ಟಿಕೊಂಡು ಅಲ್ಲಿಂದ ಹಿಂದಿರುಗಿದೆವು. ‘ಗಾವೋ ವಿಶ್ವಸ್ಯ ಮಾತರಃ’ ಇದು ನಾನು ಅಲ್ಲಿಂದ ಹಿಂದಿರುಗುವಾಗ ಅವರ ಕಾರುಗಳ ನಂಬರ್‌ಪ್ಲೇಟ್ ಮೇಲೆ ಗಮನಿಸಿದ ವೇದವಾಕ್ಯ. ಗೋಶಾಲೆಯ ವೆಬ್ ತಾಣ gopalagoshala.org ಗೆ ಭೇಟಿಯಿತ್ತರೆ ನೀವೂ ವರ್ಚ್ಯುವಲ್ ಆಗಿಯಾದರೂ ಇನ್ನೊಂದಿಷ್ಟನ್ನು ತಿಳಿದುಕೊಳ್ಳಬಹುದು.