ಅಭಿಪ್ರಾಯ
ಡಾ.ಕೆ.ಪಿ.ಪುತ್ತೂರಾಯ
drputhuraya@gmail.com
ಪಂಚಾಯತಿ ಚುನಾವಣೆಯಿಂದ ಹಿಡಿದು ರಾಷ್ಟ್ರಪತಿ ಹುದ್ದೆಯವರೆಗೆ, ರಾಜಕೀಯ ವ್ಯವಸ್ಥೆ ಹಾಗೂ ಅದಕ್ಕೆ ಅಂಟಿ ಕೊಂಡ ರಾಜಕಾರಣ, ಪ್ರಜಾಪ್ರಭುತ್ವ ಪದ್ಧತಿಯ ಅವಿಭಾಜ್ಯ ಅಂಗ. ರಾಜಕಾರಣಿಗಳಿಲ್ಲದೆ ರಾಜ್ಯಭಾರ ನಡೆಯದು. ಆದರೆ, ನಮಗೆ ಮೌಲ್ಯಾಧಾರಿತ ರಾಜಕಾರಣವನ್ನು ಮಾಡುವ ಒಳ್ಳೆಯ ರಾಜಕಾರಣಿಗಳು ಬೇಕು.
‘ನ ರಾಜ ರಾಜ್ಯಂ, ಕುರಾಜ ರಾಜ್ಯಂ’ಎಂಬ ಚಾಣಕ್ಯನ ನೀತಿಯಂತೆ, ಕೆಟ್ಟ ರಾಜಕಾರಣಿಗಳು ಇಲ್ಲದಿರೋದೇ ಲೇಸು. ವೇದಾಂತ ಕೇಳುವ, ಸಿದ್ಧಾಂತ ಹೇಳುವ ಆದರೆ ರಾದ್ಧಾಂತ ಮಾಡುವ ರಾಜಕಾರಣಿಗಳು ಬೇಡ. ಇವರಿಗೆ ಕೋಟಿ ಕೋಟಿ ಜನರಿಗೆ ಲಂಗೋಟಿ- ಇಂತಹವರಂತೂ ಬೇಡವೇ ಬೇಡ. ‘ಅವರು ಹೇಳಿದಂತೆ ನಡೆಯಿರಿ, ಇವರು ಹೇಳಿದಂತೆ ನಡೆಯಿರಿ’ ಎಂದು ಹೇಳುವ ರಾಜಕಾರಣಿಗಳ ಬದಲು ‘ಇದ್ದರೆ ಇರಬೇಕು ಇವರಂತಹ ರಾಜಕಾರಿಣಿ’ ಎಂಬಂತಹವರು ಬೇಕು. ಹಿಂದಿನ ಕಾಲದಲ್ಲಿ ರಾಜರುಗಳು ರಾಜ್ಯಭಾರ ನಡೆಸುತ್ತಿದ್ದರು. ಈಗ ಮಂತ್ರಿಗಳದ್ದೇ ಕಾರುಬಾರು. ಆ ರಾಜರು ಗಳಿಗೂ ಈ ಮಂತ್ರಿಗಳಿಗೂ ಅಂತಹ ದೊಡ್ಡ ವ್ಯತ್ಯಾಸವೇನೂ ಇಲ್ಲ. ಅದೇ ದೌಲತ್ತು-ಗಮ್ಮತ್ತು-ಸವಲತ್ತು- ಎಲ್ಲವೂ ಸರಕಾರದ ಖರ್ಚಿನಲ್ಲಿ.
ಇರಲು ಆಗಾಗ ನವೀಕರಗೊಳ್ಳುವ ದೊಡ್ಡ ಬಂಗಲೆ, ಕೈಗೊಂದು ಕಾಲಿಗೊಂದು ಕೆಲಸ ದಾಳುಗಳು, ಸಹಾಯ ಕರು, ಓಡಾಡಲು ಹಿಂದೆ ಮುಂದೆ ಕೆಂಪು ದೀಪದ ಕಾರುಗಳು, ಹೋದಲ್ಲಿ ಬಂದಲ್ಲಿ ಹಾರ ತುರಾಯಿಗಳು, ಜಯ ಘೋಷಗಳು. ಇವರ ನಡೆನುಡಿಯಲ್ಲಿ ಏನೋ ಒಂದು ಗತ್ತು. ಕೈಯಲ್ಲೊಂದು ನಮಸ್ಕಾರ, ಮುಖದಲ್ಲೊಂದು ಒಂದು ದೇಶಾವರಿ ನಗೆ, ಬಾಯಿಯಲ್ಲಿ ಮಾತ್ರ ಜನಸೇವಕನೆಂಬ ಹೇಳಿಕೆ; ಒಳಗೊಳಗೆ ಏನೇನೋ ಲೆಕ್ಕಾಚಾರಗಳು; ಯಾರಿಗೂ ತಿಳಿಯದ ಸಮಾಚಾರಗಳು.
ಮೀಟಿಂಗ್ನಲ್ಲಿಡುವ ಅಜೆಂಡಾಗಳು ಬೇರೆ; ಇದರ ಹಿಂದೆ ಇರುವ Hidden Agenda ಗಳೇ ಬೇರೆ! ಸಾಮಾನ್ಯರಿಗೆ ಇವರನ್ನು ಮಾತನಾಡಿಸೋದೇ ಕಷ್ಟ. ಈ ಸತ್ಯವನ್ನೇ ಜೆ.ಎಚ್. ಪಟೇಲರು ಹೀಗೆ ಹೇಳಿದ್ದರು. ‘ರಾಜಕಾರಣಿಗಳನ್ನು ಭೇಟಿಯಾಗುವ ಸೂಕ್ತ ಸಮಯವೆಂದರೆ, ಅವರು ಅಧಿಕಾರದಲ್ಲಿ ಇಲ್ಲದಾಗ’. ಜನ ಕಿರುಚಿ ಕೂಗಾಡಿದರೂ ಜಗ್ಗುವವರು, ಸತ್ತು ಹೋದರೂ ತಲೆಕೆಡಿಸಿಕೊಳ್ಳುವವರು ಇವರಲ್ಲ. ಚಾಲೂ ರಾಜಕಾರಣಿ ಎಂದರೆ ‘ದೇಶದಲ್ಲಿ ಇದುವರೆಗೆ ಏನಾಗ ಬೇಕಿತ್ತು; ಏನಾಗಲಿಲ್ಲ; ಈಗ ಏನಾಗುತ್ತಿದೆ; ಹೀಗೆಯೇ ಮುಂದುವರಿದರೆ ಮುಂದೇನಾಗಬಹುದು?’ ಎಂಬುದನ್ನು ರಂಗುರಂಗಾಗಿ ನಕರಾತ್ಮಕವಾಗಿ ವಿವರಿಸುತ್ತಾ ‘ನನಗೊಂದು ಅವಕಾಶವನ್ನು ಕೊಟ್ಟು ನೋಡಿ’ ಎನ್ನುತ್ತಾ ಜನರನ್ನು ಮೆತ್ತಗೆ ಮೋಡಿ ಮಾಡುವವರು.
ಇದು ಎಲ್ಲಾ ರಾಜಕಾರಣಿಗಳ ಚಿತ್ರಣವಲ್ಲ. ಕೆಲವರ ಚಿತ್ರಣ ಅಷ್ಟೆ. ಆದುದರಿಂದಲೇ ಇಂತಹವರ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯವಿಲ್ಲ. ಆದರೂ ಜನ ಇವರ ಜತೆ ಚೆನ್ನಾಗಿ ಮಾತನಾಡಿ, ಹಾಡಿ ಹೊಗಳಿ ನಮಸ್ಕಾರ ಮಾಡುತ್ತಾರೆ. (ಕೆಲವೊಮ್ಮೆ ಅವರ ಕಾಲಿಗೂ ಬೀಳುತ್ತಾರೆ!) ಅಂದ ಮಾತ್ರಕ್ಕೆ ಜನರಿಗೆ ಇವರ ಮೇಲೆ ಅಪಾರವಾದ ಪ್ರೀತಿ, ಗೌರವ, ನಂಬಿಕೆ ಇದೆ ಎಂಬ ಅರ್ಥವಲ್ಲ. ಹೀಗೆಲ್ಲಾ ಮಾಡಲೇಬೇಕಾಗುತ್ತದೆ. ಇದು ಅಧಿಕಾರದ ತಾಕತ್ತು! ಮೇಲಾಗಿ ಇವರನ್ನು ಎದುರು ಹಾಕಿಕೊಂಡು, ಸಮಸ್ಯೆಗಳಿಗೆ ಒಳಗಾಗೋದು ಯಾರಿಗೆ ಬೇಕು? ಇಷ್ಟಕ್ಕೂ ಈ ಸ್ಥಾನಮಾನ ಬಂದಿದ್ದು ತಮಗಲ್ಲ; ತಮ್ಮ ಕುರ್ಚಿಗೆ ಎಂಬ ಕಟು ಸತ್ಯ ಹೆಚ್ಚಿನ ರಾಜಕಾರಿಣಿಗಳಿಗೆ ತಿಳಿಯದು. ಬೆಲ್ಲ ಇದ್ದಲ್ಲಿ ಮಾತ್ರ ಇರುವೆಗಳ ದಂಡು; ಬೆಲ್ಲ ಖಾಲಿಯಾದಾಗ, ಇರುವೆಗಳೂ ಜಾಗ ಖಾಲಿ ಮಾಡುತ್ತವೆ. ಅಂತೆಯೇ ಅಧಿಕಾರ, ಐಶ್ವರ್ಯವಿದ್ದಾಗ ಮಾತ್ರ ಜನ ನಮ್ಮ ಸುತ್ತಮುತ್ತ ಇಲ್ಲವಾದಾಗ ಸುಳಿಯುವವರಿಲ್ಲ ಯಾರೂ ನಮ್ಮತ್ತ!
ಹಾಗೆಂದು, ರಾಜಕೀಯ ಕ್ಷೇತ್ರದ ಎಲ್ಲಾ ರಾಜಕಾರಿಣಿಗಳು ಕೆಟ್ಟವರಲ್ಲ. ಮೌಲ್ಯಾಧಾರಿತ ರಾಜಕಾರಣವನ್ನು ಮಾಡಿ ಮಾದರೀ ರಾಜಕಾರಿಣಿಗಳಾಗಿ ಜನಸೇವೆ ಮಾಡಿದ ದಿ.ಅಟಲ್ ಬಿಹಾರಿ ವಾಜಪೇಯಿ, ಲಾಲ್ಬಹದ್ದೂರ್ಶಾಸ್ತ್ರಿ, ಕಾಮರಾಜ ನಾಡಾರ್, ನಿಜಲಿಂಗಪ್ಪನವರು, ಗೋವಿಂದೇಗೌಡರು, ನಜೀರ್ಸಾಬ್ರಂತಹ ಸಹ ಅನೇಕ ಉತ್ತಮ ರಾಜಕಾರಿಣಿಗಳನ್ನೂ ಕಂಡಿದ್ದೇವೆ. ಈಗಲೂ ಇಂತಹ ಶುದ್ಧ ಹಸ್ತದ ಒಳ್ಳೆಯ ರಾಜಕಾರಣಿಗಳು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇದ್ದಾರೆ. ಆದರೆ ಇಂತಹವರ ಸಂಖ್ಯೆ ಬೆರಳೆಣಿಕೆಯಷ್ಟು. ಬಹುಸಂಖ್ಯಾತ ಅನರ್ಹ, ಅಪ್ರಾಮಾಣಿಕ, ಭ್ರಷ್ಠ ರಾಜಕಾರಣಿಗಳ ನಡುವೆ, ಮಿತ ಸಂಖ್ಯಾತ ಒಳ್ಳೆಯ ರಾಜ ಕಾರಣಿಗಳ ಆಟ ಅಷ್ಟಾಗಿ ನಡೆಯದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಗೇಗೋ ಆರಿಸಿ ಬಂದವರನ್ನು ಸಹಿಸಿಕೊಂಡು, ಸಂತೈಸಿಕೊಂಡು, ಸಂಭಾಳಿಸಿ ಕೊಂಡು ಸರಕಾರ ನಡೆಸಬೇಕಾದುದು ಅನಿವಾರ್ಯ.
ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳ ಸರ್ವೇಸಾಮಾನ್ಯವಾದ ನಡೆ-ನುಡಿ, ಗುಣ-ಸ್ವಭಾವ, ಯೋಚನೆ- ಯೋಜನೆ ಕಾರ್ಯಸೂಚಿ-ಕಾರ್ಯತಂತ್ರ ಒಂದೇ ಆಗಿರುತ್ತದೆ. ಸಹಜ ಸ್ವಾಭಾವಿಕವಾಗಿ ಇವರೆಲ್ಲರ ಮೂಲ ಸಿದ್ಧಾಂತವೆಂದರೆ: *ಹೇಗಾದರೂ ಮಾಡಿ ಒಮ್ಮೆ ಅಧಿಕಾರವನ್ನು ಗಳಿಸಿಕೊಳ್ಳೋದು. ಇದಕ್ಕೆ ಯಾವುದೇ ನೀತಿ ನಿಯಮಗಳ ನ್ಯಾಯ ಧರ್ಮಗಳ ಹಂಗಿಲ್ಲ. ಇವರಿಗೆ ಗುರಿ ಮುಖ್ಯ, ಅದನ್ನು ತಲುಪುವ ಮಾರ್ಗವಲ್ಲ! ಚುನಾವಣೆಗಳನ್ನು ಗೆಲ್ಲುವುದೊಂದೇ ಗುರಿಯಾಗಿರುವ ಇವರುಗಳು ಯಾವುದೇ ರೀತಿಯ ವಾಮ ಮಾರ್ಗಗಳನ್ನು ಅನುಸರಿಸಲು ಸದಾ ಸಿದ್ಧ.
*ಮುಂದೆ ಗಳಿಸಿಕೊಂಡ ಅಽಕಾರವನ್ನು ಉಳಿಸಿ ಕೊಳ್ಳೋದು ಕೂಡಾ ಅಷ್ಟೇ ಮುಖ್ಯ. ಇಲ್ಲವಾದರೆ ಅದು ಅನ್ಯರ ಪಾಲಾಗಬಹುದು ಎಂಬ ಭಯ ಮೇಲಾಗಿ ‘ಅಧಿಕಾರಂಚ, ಗರ್ಭಂಚ, ಆಗಮನೇ ಆನಂದಂ, ನಿರ್ಗಮನೇ ಪ್ರಾಣಸಂಕಟಂ’ ಎಂಬ ಸತ್ಯ ಇವರಿಗೆ ಚೆನ್ನಾಗಿ ಗೊತ್ತು. ಒಮ್ಮೆ ಅಧಿಕಾರವನ್ನು ಸವಿದವರು ಅಧಿಕಾರವಿಲ್ಲದಾಗ ಹಲ್ಲಿಲ್ಲದ ಹುಲಿಗಳಂತಾಗುತ್ತಾರೆ; ನೀರಿಲ್ಲದ ಮೀನಿನಂತೆ ಚಡಪಡಿಸುತ್ತಾರೆ.
*ಅಂತೆಯೇ ಉಳಿಸಿಕೊಂಡ ಅಧಿಕಾರವನ್ನು ಬೆಳೆಸಿಕೊಳ್ಳೋದು. Corporator ಆದವನಿಗೆ ಎಂಎಲ್ಎ ಆಗುವ ಆಸೆ. ಎಂಎಲ್ಎ ಆದವನಿಗೆ ಸಚಿವ ನಾಗುವ ಕನಸು. ಸಚಿವನಾದ ಮೇಲೆ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣು. ಅಧಿಕಾರ ವೆನ್ನುವುದು ಉಪ್ಪು ನೀರು ಕುಡಿದಂತೆ, ಒಮ್ಮೆ ಕುಡಿದರೆ ಇನ್ನಷ್ಟು ಕುಡಿಯಬೇಕೆನ್ನುವ ದಾಹ. ಇವೆಲ್ಲಾ ಸಹಜ ಸ್ವಾಭಾವಿಕವಾದರೂ ತಮ್ಮ ಅರ್ಹತೆ ಯೋಗ್ಯತೆಗಳನ್ನೂ ಮೀರಿ ಕಾಡಬಾರದಲ್ಲ.
*ಚುನಾವಣೆಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳಿಗೆ ಯಾವ ಆಧಾರದ ಮೇಲೆ ಟಿಕೆಟನ್ನು ನೀಡಲಾಗುತ್ತದೆ? ಜಾತಿ ಬಲವೇ? ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಲೆಕ್ಕಾಚಾರ ಸಂವಿಧಾನ ವಿರುದ್ಧವಲ್ಲವೇ? ಇದಕ್ಕೆ ಸಾಥ್ ನೀಡೋದು ಯಾವ ಮಠಾಧೀಶರಿಗೂ ಶೋಭೆ ತರಲಾರದು. ಇನ್ನು ಹಣ ಬಲವೆಂದಾದರೆ, ಅದು ಬಂಡವಾಳ ಹೂಡಿದಂತೆ. ಧನ ಸಹಾಯ ಮಾಡಿದವರಿಗೆ ಪ್ರತ್ಯುಪಕಾರ ಮಾಡಲೇಬೇಕಲ್ಲ! ಚುನಾವಣಾ ಪ್ರಚಾರ ಸಮಯದಲ್ಲಿ ಬಡ ಮತದಾರರಿಗೆ ಹಂಚುವ ಸೀರೆ, ಪಂಚೆ, ತಿಂಡಿ, ತೀರ್ಥ, ಹೆಂಡ ವಸ್ತುಗಳಿಗಾಗಿ, ಕಾರ್ಯಕರ್ತರಿಗೆ, ರ್ಯಾಲಿಗಳಿಗೆ ತಂದ ಬಾಡಿಗೆ ಜನರಿಗೆ ತಗಲುವ ಒಟ್ಟಾರೆ ಕೋಟ್ಯಂತರ ರುಪಾಯಿ ಗಳನ್ನು ರಿಕವರಿ ಮಾಡಬೇಕಾದರೆ ಭ್ರಷ್ಠರಾಗಬೇಕಾದುದು ಅನಿವಾರ್ಯವಾಗುತ್ತದೆ.
ಬದಲಾಗಿ, ಅಭ್ಯರ್ಥಿಯ ಅರ್ಹತೆ-ಯೋಗ್ಯತೆಯನ್ನಾಧರಿಸಿ ಟಿಕೆಟ್ ನೀಡೋದು ಸಮಂಜಸವಲ್ಲವೇ? criminal case ಇದ್ದವರೂ ಶಾಸಕ/ಸಂಸದರಾಗೋದು ಪ್ರಜಾಪ್ರಭುತ್ವ ಪದ್ಧತಿಗೆ ಒಂದು ಕಳಂಕವಲ್ಲವೇ? ಆದರೆ ಇದೆಲ್ಲಾ ಬರೀ ಸಿದ್ಧಾಂತ. ಎಲ್ಲಾ ಪಕ್ಷದವರಿಗೂ ಗೆಲ್ಲುವ ಕುದುರೆಯೇ ಬೇಕು. *ಒಂದು ಜವಾನನ ಹುದ್ದೆಗೂ ಕನಿಷ್ಠ ವಿದ್ಯಾರ್ಹತೆ ನಿಗದಿಯಾಗಿರುವಾಗ, ಶಾಸಕ/ಸಂಸದ/ಸಚಿವರಾಗುವವರಿಗೆ ಇದು ಬೇಡವೇ? ಅವರಿಗೆ ಸಂವಿಧಾನ ತಿಳಿದಿರಬೇಡವೇ? ಎಲ್ಲಾ ವೃತ್ತಿಗಳಿಗೂ ನಿವೃತ್ತಿ ಎಂಬುದಿದೆ.
ಆದರೆ ಕೆಲವು ಪಕ್ಷಗಳನ್ನು ಹೊರತು ಪಡಿಸಿ ರಾಜಕಾರಿಣಿಗಳಿಗೇಕೆ ಇಲ್ಲ? ಮುದುಕರಾದ ಮೇಲೂ ಏಕೆ ಬೇಕು ಈ ಅಧಿಕಾರದ ಲಾಲಸೆ? ಅದೆಷ್ಟು ಬಾರಿ ಒಬ್ಬರಿಗೇ ಅವಕಾಶ? ಎರಡು ಬಾರಿಯ ಅವಕಾಶಗಳು ಸಾಕಲ್ಲ! ಇತರ ಯುವ ಕಾರ್ಯಕರ್ತರನ್ನು ಅವಕಾಶ ವಂಚಿತರನ್ನಾಗಿಸೋದು ತರವೇ?
*ರಾಜಕೀಯವಾಗಿ ಒಂದು ಪಕ್ಷದಲ್ಲಿ ಗುರುತಿಸಿಕೊಂಡು, ಬೆಳೆದು, ಪಕ್ಷ ನೀಡಿದ ಎಲ್ಲಾ ಸ್ಥಾನಮಾನಗಳನ್ನು ಅನುಭವಿಸಿ ಮತ್ತೆ ವೈಯುಕ್ತಿಕ ಲಾಭಕ್ಕಾಗಿ ನಂಬಿದ ಅನುಯಾಯಿಗಳಿಗೂ ಕೈಕೊಟ್ಟು ಮಾಡುವ ಪಕ್ಷಾಂತರ ಸರಿಯೇ?
*ಅಂತೆಯೇ ರಾಜವೈಭವ, ಬೃಹತ್ ಸನ್ಮಾನಗಳು ವ್ಯಕ್ತಿಪೂಜೆ, ವಂಶರಾಜಕಾರಣ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಎಷ್ಟು ಸಮಂಜಸ?
*ರಾಜಕಾರಣಕ್ಕೆ ಬರುವ ಮುನ್ನ ಕಡುಬಡವರಾಗಿದ್ದವರು, ಅಧಿಕಾರ ಬಂದಮೇಲೆ ಹೇಗೆ ಕೋಟ್ಯಾಧಿಪತಿಗಳಾದರು?
*ಕೆಲ ರಾಜಕಾರಣಿಗಳಿಗೆ ಸದಾ ಸುದ್ದಿಯಲ್ಲಿರಬೇಕೆಂಬ ಹಂಬಲ. ಪ್ರಚಾರ ಪ್ರಿಯರಾಗೋ ಬದಲು, ಜನಸೇವೆಯನ್ನು ಮಾಡಿ ಜನಪ್ರಿಯರಾಗೋದು ಶ್ರೇಷ್ಠ ವಲ್ಲವೇ? ಸಾಧನೆಗಳೇ ಪ್ರಚಾರವಾಗಬೇಕೇ ಹೊರತು, ಪ್ರಚಾರಗಳೇ ಸಾಧನೆಗಳಾಗಬಾರದಲ್ಲ!
*ರಾಜಕಾರಣಿಗಳ ಅಭಿನಂದನಾ ಸಮಾರಂಭಗಳಿಗೆ, ಜಾಹೀರಾತುಗಳಿಗೆ, ಹುಟ್ಟುಹಬ್ಬಗಳಿಗೆ, cutout ಗಳಿಗೆ ಲಕ್ಷಾಂತರ ರೂಗಳು ಖರ್ಚಾಗಲೇ ಬೇಕೇ? ಇದೇ ಹಣವನ್ನು ಜನೋಪಯೋಗಿ ಕಾರ್ಯಕ್ರಮಗಳಿಗೆ ಬಳಸಿ ಕೊಳ್ಳಬಹುದಲ್ಲ!
*ಕೆಲ ರಾಜಕಾರಣಿಗಳು ಆಮಂತ್ರಿಸಲ್ಪಟ್ಟ ಎಲ್ಲಾ ಸಭೆ ಸಮಾರಂಭಗಳಿಗೂ ಮುಖ್ಯ ಅತಿಥಿಯಾಗಿ ಬರಲು ಒಪ್ಪಿ ಕೊಳ್ಳುತ್ತಾರೆ. ಮೂತ್ರಾಲಯದಿಂದ ಹಿಡಿದು ಎಲ್ಲಾ ಶಂಕುಸ್ಥಾಪನೆ, ಉದ್ಘಾಟನಾ ಸಮಾರಂಭಗಳಿಗೂ ಇವರೇ ಬರಬೇಕಾದುದು ಅವಶ್ಯವೇ? ಒಪ್ಪಿಕೊಂಡ ಮೇಲೂ ಕಾರ್ಯಕ್ರಮಗಳಿಗೆ ಬರದೇ ಇರುವ ರಾಜಕಾರಿಣಿಗಳು
ಎಷ್ಟಿಲ್ಲ? ಬಂದರೂ ಸಭಿಕರನ್ನು ತಾಸುಗಟ್ಟಲೆ ಕಾಯಿಸಿ ತಡವಾಗಿ ಬಂದು ಇತರರ ಮಾತುಗಳನ್ನು ಕೇಳದೇನೇ ಬೇಗನೆ ಹೊರಟು ಹೋಗುತ್ತಾರೆ. ಇದು ಸಭ್ಯತೆಯೇ? ಅಂತೆಯೇ ಸುದೀರ್ಘ ಅಪ್ರಸ್ತುತ ಪೊಳ್ಳು ಆಶ್ವಾಸನೆಗಳು ತುಂಬಿದ ಭಾಷಣವನ್ನು ಬಿಗಿಯುತ್ತಾರೆ. ತಪ್ಪದೇ ಪ್ರತಿಪಕ್ಷದವನ್ನು ಜರೆಯುತ್ತಾರೆ; if you cannot convince people confuse them ಎಂಬಂತೆ ಜನರ ದಾರಿ ತಪ್ಪಿಸುತ್ತಾರೆ.
*ಪ್ರವಾಸಕ್ಕೆ ಹೊರಟಾಗ ತಮ್ಮನ್ನು ಬೀಳ್ಕೊಡಲು ಮತ್ತೆ ಹಿಂತಿರುಗಿದಾಗ ಸ್ವಾಗತಿಸಲು ಹಾರ ತುರಾಯಿಗಳೊಂದಿಗೆ, ಅಧಿಕಾರಿಗಳು ಕಾರ್ಯಕರ್ತರು ಇರಬೇಕೆಂದು ಆಶಿಸುತ್ತಾರೆ. ಎಲ್ಲರ ಸಮಯ ವ್ಯರ್ಥ ಮಾಡುವ ಈ ಜಾತ್ರೆ ಬೇಕೇ?
*ದೇಶದ ಹಲವಾರು ಹಳ್ಳಿಗಳಲ್ಲಿ; ಬೀದಿ ದೀಪಗಳಿಲ್ಲ; ಕುಡಿಯಲು ನೀರಿಲ್ಲ. ಆದರೆ ಇವರ ಹಾರಾಟಕ್ಕೆ ಹೆಲಿಪ್ಯಾಡು ಗಳನ್ನು ನಿರ್ಮಿಸಲಾಗುತ್ತದೆ. ಇವರಿಗೆಂದೇ ತಯಾರಿಸಿದ ವಿಶೇಷ ಊಟವನ್ನು ಬಡವರ ಮನೆಯಲ್ಲಿ ಉಂಡು ಗ್ರಾಮ ವಾಸ್ತವ್ಯವೆಂಬ ಪ್ರಹಸನವನ್ನಾಡುತ್ತಾರೆ. ಇದರಿಂದ ಬಡವರ ಉದ್ಧಾರ ಸಾಧ್ಯವೇ?
*ಬರಗಾಲ ಬಂದಾಗ, ನೆರೆಹಾವಳಿಗಳುಂಟಾದಾಗ, ಅದನ್ನು ವೀಕ್ಷಿಸಿ ಖಚಿತಪಡಿಸಿಕೊಳ್ಳಲು ಹೆಲಿಕಾಪ್ಟರ್ಗಳಲ್ಲಿ ಹಾರಾಡುತ್ತಾರೆ. ಸ್ಥಳೀಯ ಅಽಕಾರಿಗಳ ವರದಿ ಸಾಲದೇ? ಇದೇ ಹಣವನ್ನು ಪರಿಹಾರ ಕಾರ್ಯಗಳಿಗೆ ಬಳಸಿದರೆ ಸೂಕ್ತವಲ್ಲವೇ? ಸತ್ತವರ ಕುಟುಂಬಕ್ಕೆ ಪರಿಹಾರ ಧನವನ್ನು ನೀಡುವುದರ ಜತೆ ಸುರಕ್ಷತಾ ಮುಂಜಾಗ್ರತಾ ಕ್ರಮಗಳು ಸೂಕ್ತವಲ್ಲವೇ!
*ಸಾಮಾನ್ಯ ಜನರ ಜೀವನ ಅರ್ಥವಾಗಬೇಕಿದ್ದರೆ, ಕೆಲವೊಮ್ಮೆಯಾದರೂ ಸರಕಾರಿ ಬಸ್ಸಲ್ಲಿ ಓಡಾಡಬೇಕು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು, ಅಲ್ಲಿಯ ಊಟವನ್ನು ಉಣ್ಣಬೇಕು, ಸರಕಾರಿ ಶಾಲೆಗಳಲ್ಲೇ ತಮ್ಮ ಮಕ್ಕಳನ್ನು ಓದಿಸಬೇಕು. ರಾತ್ರಿಯೆಲ್ಲಾ ಮಾರ್ಗದ ಬದಿಯ ಕಲ್ಲುಬೆಂಚಲ್ಲಿ ಮಲಗುವ, ದಿನ ಬೆಳಗಾದರೆ ಕಸದ ರಾಶಿಯನ್ನು ಹುಡುಕುವ ಬಡವರ ಕಷ್ಟವನ್ನು ಅರಿತುಕೊಳ್ಳಬೇಕು. ಈ ಕೆಲಸವನ್ನು ಮಾಡುವವರೆಲ್ಲಿ?
*ಆಡಳಿತದ ಎಲ್ಲಾ ಇಲಾಖೆಗಳಲ್ಲಿ ಇವರ ಹಸ್ತಕ್ಷೇಪ ಸರ್ವೇ ಸಾಮಾನ್ಯ. ಇವರ ಒತ್ತಡ ಶಿಫಾರಸ್ಸುಗಳಿಲ್ಲದ ಇಲಾಖೆಗಳೇ ಇಲ್ಲ. ಎಷ್ಟೋ ಬಾರಿ ನಿಷ್ಠಾವಂತ ಅಽಕಾರಿಗಳನ್ನು ವರ್ಗ ಮಾಡುತ್ತಾರೆ. ಇವರು ಹೇಳಿದಂತೆ ಕುಣಿಯುವ ಇವರ tOwh ತುಂಬಲು ಸಹಕರಿಸುವವರನ್ನು ಮಾತ್ರ ತಮ್ಮ ಜತೆ ಇಟ್ಟುಕೊಳ್ಳುತ್ತಾರೆ. ಇದು ಅಧಿಕಾರದ ದುರುಪಯೋಗವಲ್ಲವೇ?
*ಅಭಿನಂದನೀಯ ಕೆಲಸಗಳನ್ನು ಮಾಡಿದಾಗ ಅಭಿನಂದಿಸಿ, ತಪ್ಪು ಕೆಲಸಗಳನ್ನು ಮಾಡಿದಾಗ ತೆಗಳಿ ತಿದ್ದಬೇಕಾದುದು ಉತ್ತಮ ರಾಜಕಾರಣಿಗಳ ಕಾರ್ಯ ಶೈಲಿ. ಆದರೆ ವಿರೋಧ ಪಕ್ಷದಲ್ಲಿರುವಾಗ ಆಡಳಿತ ಪಕ್ಷದಲ್ಲಿರುವವರನ್ನು ದೂಷಿಸು ವುದೊಂದೇ ಅಜೆಂಡಾವಾಗಬಾರದಲ್ಲವೇ? ದೇಶದ ಹಿತದೃಷ್ಟಿಯ ವಿಚಾರ ಗಳು ಬಂದಾಗ ಪಕ್ಷಭೇದ ಮರೆತು, ಎಲ್ಲರೂ ಒಟ್ಟಾಗಿ ಶ್ರಮಿಸಬೇಕಾದುದು ದೇಶಪ್ರೇಮಿ ರಾಜಕಾರಣಿಯ ಕರ್ತವ್ಯವಲ್ಲವೇ?
*ಅದೆಷ್ಟೋ ರಾಜಕಾರಣಿಗಳಿಗೆ ಬದ್ಧತೆ, ತತ್ವ ಸಿದ್ಧಾಂತಗಳಿರೋದಿಲ್ಲ. ಇಂತಹವರು ಇಂದು ಹೀಗೆ ಹೇಳಿದರೆ ಅದು ಸರಿ, ನಾಳೆ ಹಾಗೆ ಹೇಳಿದರೆ ಅದೂ ಸರಿ? ನಾಡಿದ್ದು ಹಾಗೇನೂ ಹೇಳಿಲ್ಲವೆಂದರೂ ಅದೂ ಸರೀನೇ? ವಿಧಾನಸಭೆ/ಲೋಕಸಭೆಗಳಲ್ಲಿ ಗಂಭೀರ ವಿಷಯಗಳ ಮೇಲಿನ ಚರ್ಚೆ ಇದ್ದಾಗಲೂ ಎಷ್ಟೋ ರಾಜಕಾರಣಿಗಳೂ ಗೈರು ಹಾಜರು. ಬಂದರೂ ಚರ್ಚೆಯಲ್ಲಿ ಭಾಗವಹಿಸದೆ, ನಿದ್ದೆ ಮಾಡುವ ಇಲ್ಲವೇ ನೀಲಿ ಚಿತ್ರಗಳನ್ನು ನೋಡುವವರೂ ಅಪರೂಪವೇನಲ್ಲ.
*ಮೇಲ್ಮನೆಗಳಾದ ವಿಧಾನ ಪರಿಷತ್ತು ಮತ್ತು ರಾಜ್ಯ ಸಭೆಗಳಿಗೆ ತಜ್ಞರನ್ನು, ಮೇಧಾವಿಗಳನ್ನು, ಪ್ರಜ್ಞಾವಂತರನ್ನು ಆಯ್ಕೆ ಮಾಡೋದು ಪದ್ಧತಿ. ಮತ್ತೆ ಇದನ್ನು ಮಾರಾಟಕ್ಕಿಡೋದು ಇಲ್ಲವೇ ಜಾತಿ, ಲಾಭ ನಷ್ಟಗಳ ಲೆಕ್ಕಾಚಾರಗಳಲ್ಲಿ ನಡೆಸುವುದು ತರವೇ?
*ರಾಜಕಾರಣದಲ್ಲಿ ಯಾರೂ ಉದ್ಭವ ಮೂರ್ತಿಗಳಲ್ಲ. ಎಲ್ಲರೂ ತಮ್ಮ ಹಿತೈಷಿಗಳ/ಬೆಂಬಲಿಗರ/ಗಾಡ್ ಫಾದರ್ಗಳ ಸಹಾಯ ಕೃಪಕಟಾಕ್ಷಗಳ ಮೂಲಕವೇ ಮೇಲೆ ಬಂದವರು. ಆದರೆ, ಒಮ್ಮೆ ಏರಿದ ಮೇಲೆ ಏರಲು ಸಹಾಯಕ ರಾದವರನ್ನು ಮರೆತು ಬಿಡುವುದೇ ಇವರ ಜಾಯಮಾನ. ರಾಜಕೀಯದಲ್ಲಿ ತಮಗಿಂತ ಹೆಚ್ಚು ಬುದ್ಧಿವಂತರಿಗೆ, ಅರ್ಹತೆ, ಯೋಗ್ಯತೆ ಇದ್ದವರಿಗೆ ಪ್ರಾಮಾಣಿಕರಿಗೆ ಅವಕಾಶವನ್ನು ತಪ್ಪಿಸೋದೇ ಕೆಟ್ಟ ರಾಜಕಾರಣದ ಕಾರ್ಯತಂತ್ರ; ಕುತಂತ್ರ.
*ಸಮಾಜ ಸುಧಾರಕರು, ‘ಈ ದೇಶ/ಜಗತ್ತು ಅಭಿವೃದ್ದಿಯಾಗಬೇಕು; ಸಮಾಜ ಸುಖ, ಶಾಂತಿ, ನೆಮ್ಮದಿ ಸಾಮರಸ್ಯ ದಿಂದ ಬದುಕುವಂತಾಗಬೇಕು’ ಎಂದು ಯೋಚಿಸಿದರೆ ಕೆಲವು ರಾಜಕಾರಿಣಿಗಳು ಯೋಚಿಸುವ ರೀತಿಯೇ ಭಿನ್ನ. ‘ಸಮಾಜದಲ್ಲಿ ಅನಕ್ಷರತೆ-ಅಸಮಾನತೆ, ಬಡತನ, ನಿರುದ್ಯೋಗ ಸಮಸ್ಯೆ, ಕೋಮು ಗಲಭೆಗಳು ಜೀವಂತ ವಾಗಿರದಿದ್ದರೆ ಸಮಸ್ಯೆಗಳೇ ಇಲ್ಲವಾದರೆ, ನಮಗೇನು ಕೆಲಸ? ಚುನಾವಣೆಗಳನ್ನು ಗೆಲ್ಲುವುದಾದರೂ ಹೇಗೆ?’ ಎಂಬುದು ಇವರ ಕೆಟ್ಟ ಲೆಕ್ಕಾಚಾರ.!
ದೇಶದಲ್ಲಿ statesmen think of next generation, but politicians think of next election”. .
ಒಟ್ಟಿನಲ್ಲಿ ರಕ್ಷಕರೇ ಭಕ್ಷಕರಾದರೆ, ಈ ದೇಶವನ್ನು ರಕ್ಷಿಸುವವರು ಯಾರು? ಈ ನಿಟ್ಟಿನಲ್ಲಿ ಭೃಷ್ಟ ರಾಜಕಾರಣಿಗಳ ಡೊಂಬರಾಟವನ್ನು ನೋಡಿ ಬೇಸತ್ತ ಜನಸಾಮಾನ್ಯನ ಕೂಗು-ಕೋರಿಕೆ ಏನೆಂದರೆ ‘ರಾಜಕಾರಣಿಗಳೇ ಬೇಡ ನಿಮ್ಮ ಹಾರಿಕೆಯ ಮಾತು; ತೋರಿಕೆಯ ಪ್ರೀತಿ, ಜಾರಿಕೆಯ ನೀತಿ; ಹೊಲಸು ರಾಜಕಾರಣದ ರೀತಿ. ಅನ್ನವನು ಕೊಡಿ ಉಣಲು; ಬಟ್ಟೆಯನ್ನು ಕೊಡಿ ಉಡಲು; ಕಟ್ಟಿಕೊಡಿ ಮನೆಯೊಂದನು ಇರಲು, ಅಕ್ಷರ-ಆರೋಗ್ಯ-ಆದಾಯವನು ಕೊಡಿ ಇಷ್ಟು ಸಾಕು ಬದುಕಿ ಬಾಳಲು ಮರೆಯದಿರಿ ಸಾರ್. ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಮತದಾರನು’.