Friday, 13th December 2024

ಮುಖ್ಯಮಂತ್ರಿಗಳಿಗೆ ಹಾಗಲಕಾಯಿ ತಿನ್ನಿಸಿದ ರಾಜ್ಯಪಾಲರು

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ರಾಜ್ಯಪಾಲ ವಾಜೂಭಾಯಿ ವಾಲಾ ಅವರು ಕೋವಿಡ್ ನಿಯಂತ್ರಣಕ್ಕಾಗಿ ಸರ್ವಪಕ್ಷ ನಾಯಕರ ಜತೆ ನಡೆಸಿದ ಸಭೆ ಹಲವು
ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ರಾಜ್ಯಪಾಲರು ಸಂವಿಧಾನದ ಪಾಲಕರಾಗಿ ವ್ಯವಹರಿಸಬೇಕೇ ಹೊರತು ಚುನಾಯಿತ ಸರಕಾರವಿದ್ದಾಗ ಮುಖ್ಯಮಂತ್ರಿಗಳ ಪರಮಾಧಿಕಾರದ ಬಗ್ಗೆ ಅನುಮಾನ ತರುವಂತೆ ನಡೆದುಕೊಳ್ಳಕೂಡದು.

ಆದರೆ ವಾಜೂಭಾಯಿ ವಾಲಾ ಅವರು ನಡೆಸಿದ ಸಭೆ, ಕೋವಿಡ್‌ನಂಥ ಸಮಸ್ಯೆಯನ್ನು ನಿಭಾಯಿಸಲು ರಾಜ್ಯ ಸರಕಾರ ವಿಫಲ ವಾಗಿದೆ. ಹೀಗಾಗಿ ಸನ್ನಿವೇಶವನ್ನು ನಿಯಂತ್ರಿಸಲು ಅನಿವಾರ್ಯವಾಗಿ ತಾವು ಮಧ್ಯೆ ಪ್ರವೇಶಿಸಬೇಕಾಯಿತು ಎಂದು ಹೇಳಿ ದಂತಿದೆ.

ಅಂದ ಹಾಗೆ ರಾಜ್ಯಪಾಲರಾದವರು ಜನತಂತ್ರ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದು ಹೊಸತೇನಲ್ಲ. ಆದರೆ ಈ ಹಿಂದೆಲ್ಲ
ಕೇಂದ್ರ ಹಾಗೂ ರಾಜ್ಯದಲ್ಲಿ ಬೇರೆ ಬೇರೆ ಶಕ್ತಿಗಳು ಅಧಿಕಾರ ನಡೆಸುವಾಗ ಇಂತಹ ಹಸ್ತಕ್ಷೇಪಗಳು ನಡೆಯುತ್ತಿದ್ದವು. ಆದರೆ
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರವಿದ್ದಾಗ ರಾಜ್ಯಪಾಲರು ಹಸ್ತಕ್ಷೇಪ ಮಾಡಿದ ಉದಾಹರಣೆ ಇಲ್ಲ. ಹೀಗಾಗಿ
ಈ ವಿಷಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ತೀವ್ರ ಮುಜುಗರಕ್ಕೆ ಒಳಗಾಗಿರುವುದು ಸಹಜ.

ಮತ್ತು ಇದು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಸಲುವಾಗಿ ನಡೆಯುತ್ತಿರುವ ಪೂರ್ವಭಾವಿ ತಯಾರಿ ಎಂಬ ಮಾತು ಕೇಳಿ ಬರುತ್ತಿರುವುದೂ ನಿಜ. ಅಂದ ಹಾಗೆ ರಾಜ್ಯಪಾಲರಾದವರು ಅಧಿಕಾರದಲ್ಲಿರುವವರ ವಿಷಯದಲ್ಲಿ
ಅಸಹನೆಯಿಂದ ನಡೆದುಕೊಂಡ ಹಲವು ಉದಾಹರಣೆಗಳಿವೆ. 1969ರಲ್ಲಿ ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ವಿಭಜನೆಯಾಗಿ
ಕಾಂಗ್ರೆಸ್ (ಆರ್) ಮತ್ತು ಕಾಂಗ್ರೆಸ್ (ಓ) ಎದ್ದು ನಿಂತವಲ್ಲ? ಆ ಸಂದರ್ಭದಲ್ಲಿ ನಿಜಲಿಂಗಪ್ಪ ಕಾಂಗ್ರೆಸ್ (ಓ) ಪರವಾಗಿ ನಿಂತಿದ್ದರೆ, ಕಾಂಗ್ರೆಸ್ (ಆರ್) ಮುಂಚೂಣಿಯಲ್ಲಿ ಖುದ್ದು ಇಂದಿರಾಗಾಂಧಿಯವರೇ ನಿಂತಿದ್ದರು.

ಅವತ್ತು ಇಂದಿರಾಗಾಂಧಿ ಅವರ ಗುಂಪಿನಲ್ಲಿ ದೇವರಾಜ ಅರಸು, ಸಿದ್ಧವೀರಪ್ಪ ಅವರಂತವರಿದ್ದರೆ, ನಿಜಲಿಂಗಪ್ಪ ಅವರ ಗುಂಪಿನಲ್ಲಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರಿದ್ದರು. ಮುಂದೆ 1971ರಲ್ಲಿ ವೀರೇಂದ್ರ ಪಾಟೀಲರ ಸರಕಾರ ಉರುಳಿ ಬಿತ್ತು. ಆ ಸಂದರ್ಭದಲ್ಲಿ ಸಂಖ್ಯಾಬಲ ಹೆಚ್ಚಿದ್ದ  ಜಲಿಂಗಪ್ಪ ಅವರ ಗುಂಪು ಹಲ ಕಾಂಗ್ರೆಸ್ಸೇತರ ಶಕ್ತಿಗಳ ಜತೆಗೂಡಿ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ನೇತೃತ್ವದಲ್ಲಿ ಪರ್ಯಾಯ ಸರಕಾರ ರಚಿಸಲು ಮುಂದಾಯಿತು.

ಇದಕ್ಕೆ ಪ್ರತಿಯಾಗಿ ಇಂದಿರಾಗಾಂಧಿ ಅವರ ಗುಂಪಿನಲ್ಲಿದ್ದವರು ಕೂಡಾ ಸಿದ್ಧವೀರಪ್ಪ ಅವರ ನೇತೃತ್ವದಲ್ಲಿ ಪರ್ಯಾಯ ಸರಕಾರ ರಚಿಸಲು ಬಯಸಿದರು. ಆದರೆ ಈ ಪೈಪೋಟಿಯಲ್ಲಿ ನಿಜಲಿಂಗಪ್ಪ ಗುಂಪಿನ ಶಕ್ತಿ ಹೆಚ್ಚಾಗಿತ್ತು. ಯಾಕೆಂದರೆ ಕಾಂಗ್ರೆಸ್ಸೇ ತರ ಪಕ್ಷಗಳ ಪೈಕಿ ಬಹುತೇಕ ಪಕ್ಷಗಳು ಇಂದಿರಾಗಾಂಧಿ ಅವರ ವಿರುದ್ದ ನಿಂತಿದ್ದವು. ಇಂತಹ ಸಮಯದಲ್ಲಿ ಶಾಂತವೇರಿ ಗೋಪಾಲಗೌಡರು ಬಲವಾಗಿ ನಿಂತಿದ್ದರೆ ಪರ್ಯಾಯ ಸರಕಾರ ರಚನೆಯಾಗುತ್ತಿತ್ತು.

ಆದರೆ ಗೋಪಾಲಗೌಡರು ಗೊಂದಲಕ್ಕೆ ಸಿಲುಕಿಕೊಂಡರು. ಅವರಿಗೆ ಪರ್ಯಾಯ ಸರಕಾರ ರಚಿಸುವ ಇಚ್ಛೆಯೇನೋ ಇತ್ತು. ಆದರೆ ಅದೇ ಕಾಲಕ್ಕೆ ಹಿಂದಿನಿಂದ ತಾವು ಯಾರ ವಿರುದ್ಧ ಹೋರಾಡುತ್ತಾ ಬಂದಿದ್ದೇವೋ? ಅವರ ಜತೆ ಹೋಗುವುದು ಸರಿಯಲ್ಲ ಎಂಬ ಅನಿಸಿಕೆಯೂ ಇತ್ತು. ಇದರ ಮಧ್ಯೆ ಅವರ ಆರೋಗ್ಯ ಕ್ಷೀಣಿಸಿದ್ದರಿಂದ ಅವರು ತ್ವರಿತ ನಿರ್ಧಾರಕ್ಕೆ ಬರಲಿಲ್ಲ. ಮತ್ತು ನಿಜಲಿಂಗಪ್ಪ ಗುಂಪಿಗೆ ಇನ್ನಷ್ಟು ಕಾಲಾವಕಾಶ ನೀಡಿದರೆ ಬೇರೆ ನಾಯಕರನ್ನು ಮುಂದಿಟ್ಟುಕೊಂಡು ಪರ್ಯಾಯ ಸರಕಾರ ರಚಿಸಲು ಅವಕಾಶ ಕೊಟ್ಟಂತಾಗುತ್ತದೆ ಎಂದು ಇಂದಿರಾ ಭಾವಿಸಿದರು.

ಅವರ ಭಾವನೆಗೆ ಪೂರಕವಾಗಿ ವರ್ತಿಸಿದ ರಾಜ್ಯಪಾಲ ಧರ್ಮವೀರ ಕೂಡಾ ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಶಿಫಾರಸು ಮಾಡಿಬಿಟ್ಟರು. ಧರ್ಮವೀರ ಅವರ ಕ್ರಮದ ಬಗ್ಗೆ ಅವತ್ತು ಅಸಮಾಧಾನದ ಧ್ವನಿ ಕೇಳಿ ಬಂತು. ಮತ್ತು ಪರ್ಯಾಯ ಸರಕಾರ ರಚನೆಗೆ ಇನ್ನಷ್ಟು ಕಾಲಾವಕಾಶ ಕೊಡಬೇಕಿತ್ತು ಎಂಬ ಮಾತು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಯಿತು.

ಇದಾದ ನಂತರ ಕರ್ನಾಟಕದಲ್ಲಿ ರಾಜ್ಯಪಾಲರ ನಡೆಯ ಬಗ್ಗೆ ಅಸಮಾಧಾನ ಕಾಣಿಸಿಕೊಂಡಿದ್ದು 1989ರಲ್ಲಿ. ಅವತ್ತು ಇಲ್ಲಿ ಎಸ್.ಆರ್.ಬೊಮ್ಮಾಯಿ ನೇತೃತ್ವದ ಜನತಾದಳ ಸರಕಾರ ಅಸ್ತಿತ್ವದಲ್ಲಿತ್ತು. ಅವತ್ತಿಗಾಗಲೇ ಹೆಗಡೆ ಮತ್ತು ದೇವೇಗೌಡರ
ನಡುವಣ ಸಂಘರ್ಷದಿಂದ ಜನತಾದಳ ಸುಸ್ತಾಗಿ ಹೋಗಿತ್ತು. ಮತ್ತು ಹೆಗಡೆ ಸರಕಾರದ ಪತನದ ನಂತರ ನಡೆದ ಒಂದು
ಬೆಳವಣಿಗೆ ದೇವೇಗೌಡರನ್ನು ಕೆರಳಿಸಿತ್ತು.

ದೂರವಾಣಿ ಕzಲಿಕೆ ಅರೋಪದ ಹಿನ್ನೆಲೆಯಲ್ಲಿ ಹೆಗಡೆ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಮೇಲೆ ಆ ಜಾಗಕ್ಕೆ ಯಾರು ಬರಬೇಕು ಎಂಬುದನ್ನು ನಿರ್ಧರಿಸಲು ಚುನಾವಣೆ ನಡೆಯಿತಲ್ಲ? ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಕಾಣಿಸಿಕೊಂಡವರು ದೇವೇಗೌಡ,ಬಿ.ರಾಚಯ್ಯ ಮತ್ತು ಎಸ್. ಆರ್.ಬೊಮ್ಮಾಯಿ. ಈ ಹಂತದಲ್ಲಿ ದೇವೇಗೌಡರ ಲೆಕ್ಕಾಚಾರ ಕುತೂಹಲಕಾರಿಯಾಗಿತ್ತು. ಚುನಾವಣೆಯಲ್ಲಿ ಹೆಗಡೆ ಗುಂಪಿನ ಶಾಸಕರ ಮತಗಳು ರಾಚಯ್ಯ ಹಾಗೂ ಬೊಮ್ಮಾಯಿ ಅವರ ನಡುವೆ ಹಂಚಿ ಹೋಗುತ್ತವೆ. ಮತ್ತು ಆ ಸರಿಪಡಿಸಿದ ತಾತ ತಾವು ಗೆಲ್ಲುವುದು ಸುಲಭವಾಗುತ್ತದೆ ಎಂಬುದು ಈ ಲೆಕ್ಕಾಚಾರ.

ಆದರೆ ಹೆಗಡೆ ಬೆಂಬಲಿಗರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಬಿ.ರಾಚಯ್ಯ ಅವರ ಮನ ಒಲಿಸತೊಡಗಿದರು. ಯಾವಾಗ ಇದು ಗೊತ್ತಾಹಿತು, ಆಗ ದೇವೇಗೌಡರು ಕೂಡಾ ರಾಚಯ್ಯ ಅವರನ್ನು ಸಂಪರ್ಕಿಸಿದರು. ಯಾವ ಕಾರಣಕ್ಕೂ ನೀವು ಸ್ಪರ್ಧೆ ಯಿಂದ ಹಿಂದೆ ಸರಿಯಬೇಡಿ. ಸ್ಪರ್ಧಿಸಿದರೆ ನೀವು ಗೆಲ್ಲುತ್ತೀರಿ. ಮತ್ತು ಮುಖ್ಯಮಂತ್ರಿಯಾಗುತ್ತೀರಿ ಎಂದರು. ಆದರೆ ರಾಚಯ್ಯ ಅವರು ಕೊನೆಗೂ ಹೆಗಡೆ ಬೆಂಬಲಿಗರ ಒತ್ತಡಕ್ಕೆ ಮಣಿದು ಸ್ಪರ್ಧೆಯಿಂದ ಹಿಂದೆ ಸರಿದರು.

ಇದರಿಂದಾಗಿ ಸ್ಪರ್ಧೆಯಲ್ಲಿ ದೇವೇಗೌಡ ಮತ್ತು ಬೊಮ್ಮಾಯಿ ಅವರಿಬ್ಬರೇ ಉಳಿಯುವಂತಾಗಿ ಚುನಾವಣೆ ನಡೆಯಿತು.ಮತ್ತು
ಸಹಜವಾಗಿಯೇ ಹೆಗಡೆ ಗುಂಪಿನ ಬೆಂಬಲ ಹೊಂದಿದ್ದ ಬೊಮ್ಮಾಯಿ ಗೆದ್ದು ಮುಖ್ಯಮಂತ್ರಿಯಾದರು. ಈ ಬೆಳವಣಿಗೆ ಸಹಜ ವಾಗಿಯೇ ದೇವೇಗೌಡರನ್ನು ಕೆರಳಿಸಿತು. ವಸ್ತು ಸ್ಥಿತಿ ಎಂದರೆ 1983 ರಲ್ಲಿ ಜನತಾ ರಂಗ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿದ್ದವರು ದೇವೇಗೌಡ,ಬೊಮ್ಮಾಯಿ ಹಾಗೂ ಬಂಗಾರಪ್ಪ. ಆದರೆ ಲಿಂಗಾಯತ ಪ್ರಾಬಲ್ಯವನ್ನು ಬೆನ್ನ ಹಿಂದಿಟ್ಟುಕೊಂಡ ಬೊಮ್ಮಾಯಿ ಮುಖ್ಯಮಂತ್ರಿಯಾಗುವುದು ಮತ್ತು ಜನತಾ ಪಕ್ಷಕ್ಕಿಂತ ಕಡಿಮೆ ಶಕ್ತಿಯನ್ನು ಹೊಂದಿದ್ದ ಕ್ರಾಂತಿರಂಗದ ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗುವುದು ದೇವೇಗೌಡರಿಗೆ ಇಷ್ಟವಿರಲಿಲ್ಲ.

ಹೀಗಾಗಿ ಮೂರನೇ ವ್ಯಕ್ತಿ ರಾಮಕೃಷ್ಣ ಹೆಗಡೆ ಮಧ್ಯೆ ಪ್ರವೇಶಿಸಿ ಮುಖ್ಯಮಂತ್ರಿಯಾಗಲು ಅನುವು ಮಾಡಿಕೊಟ್ಟವರೇ ಅವರು.
ಅವರ ಈ ಲೆಕ್ಕಾಚಾರಕ್ಕೆ ಒಂದು ಕಾರಣವೂ ಇತ್ತು. ಎಷ್ಟೇ ಆದರೂ ರಾಮಕೃಷ್ಣ ಹೆಗಡೆ ಅವರು ಜನಸಂಖ್ಯೆಯ ಶೇಕಡಾ
ಎರಡರಷ್ಟಿರುವ ಬ್ರಾಹ್ಮಣ ಸಮುದಾಯದವರು. ಹೀಗಾಗಿ ಅವರು ಬಲಿಷ್ಠವಾಗಿ ನೆಲೆಯೂರಲು ಸಾಧ್ಯವಿಲ್ಲ. ಮತ್ತು ಮುಂದಿನ ದಿನಗಳಲ್ಲಿ ಅನುಕೂಲಕರ ಸನ್ನಿವೇಶ ಎದುರಾಗಿ ತಾವೇ ಸಿಎಂ ಆಗಬಹುದು ಎಂಬುದು ಈ ಲೆಕ್ಕಾಚಾರ. ಆದರೆ ಅವರ
ಲೆಕ್ಕಾಚಾರ ತಲೆ ಕೆಳಗಾಯಿತಲ್ಲದೆ ಅಧಿಕಾರಕ್ಕೆ ಬಂದ ಕೆಲ ಕಾಲದಲ್ಲಿ ಹೆಗಡೆ ಅವರು ದೇವೇಗೌಡರನ್ನೇ ರಾಜಕೀಯವಾಗಿ ಮುಗಿಸಲು ಹೊರಟರು.

ಇದರಿಂದ ಕ್ರುದ್ಧಗೊಂಡ ದೇವೇಗೌಡರು ಟೆಲಿಫೋನ್ ಟ್ಯಾಪಿಂಗ್ ಹಗರಣದಲ್ಲಿ ಹೆಗಡೆ ಅಧಿಕಾರದಿಂದ ಕೆಳಗಿಳಿಯುವಂತೆ ನೋಡಿಕೊಂಡರು. ಆದರೆ ಅವರು ಕೆಳಗಿಳಿದ ಮೇಲೆ ಅವರ ಬೆನ್ನ ಹಿಂದಿದ್ದವರು ಬೊಮ್ಮಾಯಿ ಅವರನ್ನು ಮೇಲೆತ್ತಿದಾಗ, ಅವರನ್ನೂ ಉರುಳಿಸಲು ಮುಂದಾದ ದೇವೇಗೌಡ ಒಳಗಿಂದೊಳಗೇ ತಯಾರಿ ನಡೆಸಿದರು. ಮತ್ತು ಬೊಮ್ಮಾಯಿ ಸರಕಾರದ ವಿರುದ್ಧ ತಮ್ಮ ಬೆಂಬಲಿಗ ಶಾಸಕರಾದ ನಾರಾಯಣರಾವ್, ಹುಂಬರವಾಡಿ, ಬಿ.ಎಂ.ತಿಪ್ಪೇಸ್ವಾಮಿ ಮತ್ತಿತರರು ರಾಜಭವನಕ್ಕೆ ತೆರಳಿ, ಸರಕಾರದ ವಿರುದ್ಧ ನಮಗೆ ವಿಶ್ವಾಸವಿಲ್ಲ ಎಂದು ಹೇಳುವಂತೆ ಮಾಡಿದರು.

ಈ ಹಂತದಲ್ಲಿ ರಾಜ್ಯಪಾಲ ವೆಂಕಟಸುಬ್ಬಯ್ಯ ಎಷ್ಟು ಬೇಗ ಕಾರ್ಯಾಚರಣೆ ಮಾಡಿದರೆಂದರೆ ಬೊಮ್ಮಾಯಿ ಅವರು ತಮಗಿದ್ದ ಬಹುಮತವನ್ನು ಸಾಬೀತು ಪಡಿಸಲೂ ಅವಕಾಶ ನೀಡದೆ ಸರಕಾರವನ್ನು ವಜಾ ಮಾಡಿದರು. ಮುಂದೆ ರಾಜ್ಯಪಾಲರ ನಡೆ ತಪ್ಪು. ಸರಕಾರದ ಬಹುಮತ ಸಾಬೀತಾಗಬೇಕಿರುವುದು ವಿಧಾನಸಭೆಯ ಹೊರತು ರಾಜಭವನದ ಅಂಗಳದಲ್ಲಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿತು. ಆದರೆ ಆಗಬೇಕಾದ ಕಹಿ ಬೆಳವಣಿಗೆ ಆಗಿ ಹೋಗಿತ್ತು.

ಇದಾದ ನಂತರ ಕರ್ನಾಟಕದ ರಾಜಕಾರಣದಲ್ಲಿ ರಾಜ್ಯಪಾಲರ ಆಟ ಶುರುವಾಗಿದ್ದು ಹಂಸರಾಜ್ ಭಾರದ್ವಾಜ್ ಅವರ ಕಾಲ ದಲ್ಲಿ. ಅವತ್ತು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರನ್ನು ಭಾರದ್ವಾಜ್ ಯಾವ ಮಟ್ಟಿಗೆ ಕಾಡಿದರು ಎಂದರೆ ಸರಕಾರದಿಂದ ತಮ್ಮ ಮುಂದೆ ಬರುತ್ತಿದ್ದ ಪ್ರಪೋಸಲ್ಲುಗಳನ್ನು ಪದೇ ಪದೇ ಅವರು ತಡೆ ಹಿಡಿಯುತ್ತಿದ್ದರು.

ಅಷ್ಟು ಮಾತ್ರವಲ್ಲ, ಸರಕಾರ ಶಾಸಕರ ವಿಶ್ವಾಸ ಕಳೆದುಕೊಂಡಿದೆ. ಇದನ್ನು ವಜಾ ಮಾಡಬೇಕು ಎಂದು ದಿಲ್ಲಿಗೆ ಶಿಫಾರಸು ಕಳಿಸಿದ್ದರು. ಆದರೆ ಇಂತಹ ಶಿಫಾರಸಿಗೆ ಕೇಂದ್ರ ಸಚಿವ ಸಂಪುಟದ ಅಂಗೀಕಾರದ ಮುದ್ರೆ ಬೇಕಲ್ಲ? ಹಾಗದು ಸಂಪುಟದ ಮುಂದೆ ಬಂದಾಗ ಯುಪಿಎ ಸರಕಾರದಲ್ಲಿ ಪ್ರಭಾವಿ ಮಂತ್ರಿಯಾಗಿದ್ದ ಪಿ.ಚಿದಂಬರಂ ಅವರು ಇದಕ್ಕೆ ಅಡ್ಡಗಾಲು ಹಾಕಿದ್ದರು.ಇದಾದ ನಂತರ ರಾಜ್ಯದಲ್ಲಿ ಮತ್ತೊಮ್ಮೆ ರಾಜ್ಯಪಾಲರ ಕಿರೀಟಕ್ಕೆ ನವಿಲು ಗರಿಗಳು ಮೂಡಿವೆ.

2018ರ ವಿಧಾನಸಭಾ ಚುನಾವಣೆ ಮುಗಿದು ಫಲಿತಾಂಶ ಹೊರಬಂದಾಗ, ಕಾಂಗ್ರೆಸ್ ಮತ್ತು ಜೆಡಿಎಸ್ ಕೈಗೂಡಿಸಿ ಸರಕಾರ
ರಚಿಸಲು ತಮ್ಮ ಮೈತ್ರಿಕೂಟಕ್ಕೆ ಅನುಮತಿ ಕೊಡಬೇಕು ಎಂದಾಗ ಇದೇ ವಾಜೂಭಾಯಿ ವಾಲಾ ಅದನ್ನು ತಳ್ಳಿ ಹಾಕಿದ್ದರು.
ಅಷ್ಟೇ ಬೇಗ ರಾಜ್ಯ ವಿಧಾನಸಭೆಯಲ್ಲಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದ ಬಿಜೆಪಿಯ ಯಡಿಯೂರಪ್ಪ ಅವರಿಗೆ
ಪ್ರಮಾಣ ವಚನ ಭೋದಿಸಿ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಲು ಅನುವು ಮಾಡಿಕೊಟ್ಟಿದ್ದರು.

ಅಂತಹ ವಾಜೂಭಾಯಿ ಹುದ್ದೆಗಳಲ್ಲಿ ಅವರೇ ಇವತ್ತು ಯಡಿಯೂರಪ್ಪ ನೇತೃತ್ವದ ಸರಕಾರ ಅಸ್ತಿತ್ವದಲ್ಲಿರುವಾಗ ಕೋವಿಡ್ ಸಂಕಟಕ್ಕೆ ಪರಿಹಾರ ಹುಡುಕಲು ಸರ್ವಪಕ್ಷ ನಾಯಕರ ಸಭೆ ನಡೆಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ರಾಜ್ಯಪಾಲರಾದವರು ಸರಕಾರದ ಮುಖ್ಯಸ್ಥರಿಗೆ ಬೇಕೆಂದಾಗ ಮಾರ್ಗದರ್ಶನ ಮಾಡಬಹುದು. ಗಮನಿಸಬೇಕಾದ ಸಂಗತಿ ಎಂದರೆ ತಮ್ಮ ಇಲಾಖೆಯ ಆಡಳಿತದಲ್ಲಿ ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ.

ಇದನ್ನು ಸರಿಪಡಿಸಿ. ಮತ್ತು ಇದಕ್ಕಾಗಿ ತಕ್ಷಣವೇ ನೀವು ಮಧ್ಯೆ ಪ್ರವೇಶಿಸಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ
ಅವರು ರಾಜ್ಯಪಾಲರಿಗೆ ಪತ್ರ ಬರೆದು ಕೋರಿದ್ದರು. ಮುಖ್ಯಮಂತ್ರಿಯಾದವರ ವಿರುದ್ಧ ಅವರ ಸಚಿವ ಸಂಪುಟದ ಸಚಿವ ರಾದವರೊಬ್ಬರು ದೂರು ನೀಡಿದ ಉದಾಹರಣೆ ಕರ್ನಾಟಕದ ಇತಿಹಾಸದ ಇಲ್ಲ. ಹೀಗಾಗಿ ರಾಜ್ಯಪಾಲರು ತಕ್ಷಣವೇ ಈ ವಿಷಯದಲ್ಲಿ ಮಧ್ಯೆ ಪ್ರಮುಖ ಪ್ರವೇಶಿಸಿ ಮುಖ್ಯಮಂತ್ರಿಗಳಿಂದ ವಿವರಣೆ ಪಡೆಯಬೇಕಿತ್ತು. ಆದರೆ ತಪ್ಪಿಯೂ ಇದನ್ನು ಮಾಡದ ರಾಜ್ಯಪಾಲರು ಈಗ ಕೋವಿಡ್ ಸಂಕಟಕ್ಕೆ ಪರಿಹಾರ ಹುಡುಕುವ ನೆಪದಲ್ಲಿ ಸರ್ವ ಪಕ್ಷ ನಾಯಕರ ಸಭೆ ನಡೆಸಿದ್ದಾರೆ. ಮತ್ತು ಸರಕಾರದ ಮೇಲೆ ತಮಗೆ ವಿಶ್ವಾಸವಿಲ್ಲ ಎಂಬ ಸಂದೇಶ ರವಾನೆಯಾಗುವಂತೆ ಮಾಡಿದ್ದಾರೆ.

ಇದು ಯಡಿಯೂರಪ್ಪ ಇನ್ನೆಷ್ಟು ದಿನ ಮುಖ್ಯಮಂತ್ರಿ ಹುದ್ದೆಯಲ್ಲಿರುತ್ತಾರೆ? ಎಂಬ ಅನುಮಾನ ಜನರಲ್ಲಿ ಮೂಡುವಂತೆ ಮಾಡಿದೆ. ಯಾವ ದೃಷ್ಟಿಯಿಂದ ನೋಡಿದರೂ ಇದು ಕುತೂಹಲಕಾರಿ ಬೆಳವಣಿಗೆ.