Wednesday, 11th December 2024

ಆದಾಯಕ್ಕಾಗಿ ಆಗಾಗ ಕುಡಿಸುವ ಸರಕಾರ

ಓರೆ ನೋಟ

ಪ್ರವೀಣ ವಿವೇಕ

ಈ ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಅಬಕಾರಿ ಸಚಿವರಾಗಿದ್ದ ಆರ್ .ಬಿ.ತಿಮ್ಮಾಪುರ್ ಈ ವರ್ಷ ಅಬಕಾರಿ ಇಲಾಖೆ 12000 ಕೋಟಿ ರು. ಆದಾಯ ಗಳಿಸಿದೆ.
ಇದನ್ನು ಮುಂದಿನ ವರ್ಷ 14000 ಕೋಟಿಗೆ ಏರಿಕೆ ಮಾಡುವುದು ನನ್ನ ಗುರಿಯಾಗಿದೆ ಎಂದಿದ್ದರು. ಬಹುಶಃ ಈ ಮಾತು ತಿಮ್ಮಾಪುರ್ ಅವರದ್ದು ಮಾತ್ರವಲ್ಲ! ಪ್ರತಿ ಸರಕಾರದಲ್ಲಿ ಅಬಕಾರಿ ಸಚಿವರಾಗುವ ಎಲ್ಲರ ಮಾತು ಹಾಗೂ ಮನೋಸ್ಥಿತಿ.

ಕಾರಣ ಬಹಳ ಸರಳ ಸರ್ಕಾರಕ್ಕೆ ಅತೀ ಹೆಚ್ಚು ಆದಾಯ ತಂದುಕೊಡುವ ಇಲಾಖೆ ಇದೆಯಲ್ಲವೇ? ಒಂದು ಕಡೆ ಸರಕಾರ ಈ ರೀತಿ ಅಬಕಾರಿ ಇಲಾಖೆಯಿಂದ ಹೆಚ್ಚು ಗಳಿಸಲು ಮುಂದಾಗುತ್ತಿದ್ದರೆ, ಇದರ ಬೆಂಬಲಕ್ಕೆ ಎಂಬಂತೆ ಜನರು ಕೂಡಾ ವಿಪರೀತ ಕುಡಿತದ ಚಟವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಮದ್ಯದ ಬಳಕೆ ಇಂದು ನಿನ್ನೆಯದಲ್ಲ, ಬದಲಾಗಿ ಶತ ಶತಮಾನಗಳಿಂದಲೂ ಚಾಲ್ತಿಯಲ್ಲಿದೆ. ಪುರಾಣಗಳಲ್ಲಿಯೂ ಸುರಾಪಾನ ಚಾಲ್ತಿಯಲ್ಲಿರುವುದನ್ನು ನಾವು ಗಮನಿಸಿದ್ದೇವೆ. ಆದರೆ ಯಾವ ಧರ್ಮ ಗ್ರಂಥವೂ, ಪುರಾಣ ಪುಣ್ಯ ಕಥೆಗಳು ಸುರಾಪಾನ ಒಳ್ಳೆಯದು ಎಂದು ಹೇಳಿಲ್ಲ. ಬದಲಾಗಿ ಸುರಾಪಾನದಿಂದ ಉಂಟಾಗುವ ಅನೇಕ ಹೀನಾಯ ಸೋಲಿನ ಕಥೆಗಳನ್ನು ನಮಗೆ ತಿಳಿಸುತ್ತವೆ.

ಸರ್ವಜ್ಞ ಮದ್ಯಪಾನ ಮಾಡುವವನ ಸಹವಾಸ ಹಂದಿಯೊಡನೆ ವಾಸ ಮಾಡುವುದಕ್ಕಿಂತಲೂ ಕೀಳು ಎಂದು ಹೇಳಿದ್ದನು. ಮಾನವನ ಜನ್ಮ ಬಲು ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿರಿ ಎಂದು ಪುರಂದರ ದಾಸರು ಕೂಡಾ ಎಚ್ಚರಿಸಿದ್ದರು, ನಾರಾಯಣ ಗುರುಗಳು ಮದ್ಯ ಎನ್ನುವುದು ವಿಷ ಅದನ್ನು ಉತ್ಪಾದಿಸ ಬೇಡಿ, ಮಾರಬೇಡಿ ಹಾಗೂ ಕುಡಿಯಬೇಡಿ ಎಂದಿದ್ದರು. ಜೈನ ಸನ್ಯಾಸಿ ತರುಣ್‌ಸಾಗರ್ ಅವರು ಕೂಡಾ ಹೆಂಡ, ಮಾಂಸ ಹಾಗೂ ಬಡ್ಡಿ ಹಣದಲ್ಲಿ ಗಳಿಸಿದ ಸಂಪತ್ತು ಯಾವುತ್ತೂ ಶಾಶ್ವತವಲ್ಲ. ಅದನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದಿದ್ದರು.

ನಿತ್ಯವೂ ಸ್ವಲ್ಪ ಮದ್ಯ ಸೇವಿಸಿದರೆ ಅಸ್ತಮಾದಿಂದ ಗುಣಮುಖರಾಗಬಹುದು, ವಾರದಲ್ಲಿ ೨೧ಯುನಿಟ್ ಆಲ್ಕೋಹಾಲ್ ಕುಡಿದರೆ ಹಾರ್ಟ್ ಅಟ್ಯಾಕ್ ಆಗುವು
ದಿಲ್ಲ, ಪೆಗ್ ಎ ಡೇ ಕೀಪ್ಸ್ ದ ಡಾಕ್ಟರ‍್ಸ್ ಅವೇ ಎಂಬಂತಹ ಅರ್ಥಹೀನ ಮಾತುಗಳು ಕುಡಿತಕ್ಕೆ ಪ್ರೇರಣೆ ನೀಡಬಹುದು ವಿನಃ ಅದರಿಂದ ರಕ್ಷಿಸಿಕೊಳ್ಳಲು ಅಲ್ಲ. ಲಾಕ್ ಡೌನ್ ಸಮಯದಲ್ಲಿ ಎಲ್ಲ ಮಧ್ಯದ ಅಂಗಡಿಗಳನ್ನು ಬಂದ್ ಮಾಡಿದ್ದಾಗ ಮದ್ಯ ಸಿಗದಿದ್ದ ಕಾರಣಕ್ಕೆ ವಿಷ ಕುಡಿದ ಸಾವನ್ನಪ್ಪಿದ ಪ್ರಕರಣಗಳು ವರದಿ ಯಾದವು.

ಸಮಾಜದ ಮುಖ್ಯ ವಾಹಿನಿಲ್ಲಿರುವ ಹಲವರು ಅನೇಕ ಬಾರೀ ರಾತ್ರಿ ಕುಡಿದು ಪೊಲೀಸರೊಂದಿಗೆ, ಸಾಮಾನ್ಯ ಜನರೊಂದಿಗೆ ಜಗಳ ಮಾಡುವುದನ್ನು ನೋಡಿ ದ್ದೇವೆ. ಇಂದಿನ ಪರಿಸ್ಥಿತಿ ಹೇಗಿದೆ ಎಂದರೇ ಹುಟ್ಟಿದರೂ ಮದ್ಯ, ಸತ್ತರೂ ಮದ್ಯ, ಮದುವೆಗೂ ಮದ್ಯ, ಸಣ್ಣ ಪುಟ್ಟ ಕಾರ್ಯಕ್ರಮಗಳಿಗೂ ಮದ್ಯ. ಅದು ಅಲ್ಲದೇ ತಲೆಗೆ ಮದ್ಯದಿಂದ ಅಮಲು ಎರಿಸಿಕೊಳ್ಳಲು ಉದ್ದೇಶ ದಿಂದಲೇ ಸಮಾನ ವಯಸ್ಕರ ಪ್ರವಾಸಗಳು ಬೇರೆ. ಈ ಹಿಂದೆ ಬಡವರು ಮಾತ್ರ ಕುಡಿಯುತ್ತಾರೆ ಎಂಬ ಮಾತುಗಳಿದ್ದವು, ಇಂದು ಬದಲಾದ ಸ್ಥಿತಿಯಲ್ಲಿ ಎಲ್ಲರೂ ಮದ್ಯದ ಅಮಲಿಗೆ ಬಲಿಯಾಗಿದ್ದಾರೆ. ಇಂದು ಕುಡಿತದ ಮಾರ್ಗಗಳು ಹಾಗೂ ಸ್ಥಳಗಳು ಬದಲಾಗಿವೆ, ನಗರ ಪ್ರದೇಶಗಳಲ್ಲಿ ಬಾರ್, ಕ್ಲಬ್, ಪಬ್ ಸೇರಿದಂತೆ ನಾನಾ ಬಗೆಯ ಪಾಶ್ಚಾತ್ಯ ಸಂಸ್ಕೃತಿಗಳ ಹಾವಳಿ ಹೆಚ್ಚಾಗಿದ್ದು ಯುವಕರು ಹಾಗೂ ಯವತಿಯರು ಈ ಸಂಸ್ಕೃತಿಗೆ ಹೆಚ್ಚು ಮಾರು ಹೋಗುತ್ತಿದ್ದಾರೆ.

ಸರಕಾರವೇ ಮದ್ಯದ ಅಂಗಡಿಗಳನ್ನು ತೆರೆದು ಮಾರಾಟ ಮಾಡುತ್ತಿರುವುದು ಕೂಡಾ ಜನರಿಗೆ ದ್ರೋಹ ಬಗೆದ ಹಾಗೆಯೇ! ಒಂದು ಕಡೆ ಸರಕಾರಿ ಬಸ್‌ಗಳು
ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಕೋಟಿ ಕೋಟಿ ಹಣದ ಮೂಲಕ ಜಾಹೀರಾತು ನೀಡುವ ಸರಕಾರ ಮತ್ತೊಂದು ಕಡೆಗೆ ಹಳ್ಳಿ ಹಳ್ಳಿಗಳಲ್ಲಿ ಸರಕಾರಿ ಸ್ವಾಮ್ಯದ ಮದ್ಯದ ಅಂಗಡಿಗಳನ್ನು ತೆರೆಯುತ್ತದೆ.

ಮದ್ಯದ ಚಟದಿಂದ ಕೆಲಸಕ್ಕೆ ಗೈರಾಗುವುದು, ಅಪಘಾತಗಳು, ಕ್ಯಾನ್ಸ್‌ರ್‌ನಂತಹ ಅನೇಕ ಕಾಯಿಲೆಗಳು ಕುಟುಂಬದ ಆರ್ಥಿಕ ಮುಗ್ಗಟ್ಟು, ಕುಟುಂಬ ಕಲಹಗಳು,
ಈ ಕಲಹಗಳಿಂದ ವಿಚ್ಛೇಧನ ಪ್ರಕರಣಗಳು, ಇದರಿಂದ ಮಕ್ಕಳ ಶಿಕ್ಷಣ ಹಾಳಾಗಿ ದುಡಿತಕ್ಕೆ ಹೋಗುವುದು ಅಲ್ಲಿ ಬಾಲ ಕಾರ್ಮಿಕ ಪದ್ದತಿ ಹಾಗೂ ಬಾಲ್ಯ ವಿವಾಹ ದಂತಹ ಸಾಮಾಜಿಕ ಸಮಸ್ಯೆಗಳು ಉದ್ಭವವಾಗುವವು. ಇವುಗಳ ಪರಿಹಾರಕ್ಕಾಗಿ ಸರಕಾರ ಹಣ ವ್ಯಯಿಸುತ್ತಿದೆ ಎನ್ನುವುದನ್ನು ನಾವು ಗಮನಿಸಬೇಕು.
ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಮದ್ಯಪಾನ ಮಾಡುವವರಲ್ಲಿ ಶೇ.೫೦ ರಷ್ಟು ಮದ್ಯಪಾನಿಗಳು ಅಪಾಯಕಾರಿ ಮದ್ಯಪಾನಿಗಳಾಗಿ ಬದಲಾಗಿರುವುದು
ದೇಶದ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸುತ್ತಿದೆ.

ಇಂದು ಅನೇಕರು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವುದರಿಂದ ಮದ್ಯವು ಬದಲಾಗುತ್ತಿರುವ ಆಧುನಿಕ ಜೀವನ ಶೈಲಿಯ ಎಲ್ಲ ಮಜಲುಗಳಿಗೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ದೇಶಾದ್ಯಂತ ಶೇ.21ರಷ್ಟು ಪುರುಷರು ಹಾಗೂ ಶೇ.2ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಕುಡಿಯುವ ವಯಸ್ಸಿನಲ್ಲಿ ಅನೇಕ ಬದಲಾವಣೆಗಳಾಗಿದ್ದು, ಹಿಂದೆ ಸರಾಸರಿ 21ನೇ ವಯಸ್ಸಿಗೆ ಮದ್ಯದ ಪ್ರಥಮ ಗುಟುಕನ್ನು ಸವಿಯುತ್ತಿದ್ದರು, ಹಲವು ವರ್ಷಗಳ ಹಿಂದೆ ಅದು 19 ವರ್ಷಕ್ಕೆ ಇಳಿಯಿತು. ಪ್ರಸ್ತುತವಾಗಿ 13ನೇ ವಯಸ್ಸಿಗೆ ಮದ್ಯದ ಪ್ರಥಮ ಗುಟುಕನ್ನು ಕುಡಿಯುತ್ತಿದ್ದಾರೆ ಎಂಬ ವರದಿಗಳು ಬಂದಿವೆ.

ಕೆಲವು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಹಣದ ಬದಲಾಗಿ ಮದ್ಯ ನೀಡುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ಡಬ್ಲ್ಯೂ.ಎಚ್.ಒ ಪ್ರಕಾರ
ಶೇ.೮೦ರಷ್ಟು ಕೌಟುಂಬಿಕ ಕಲಹಗಳು, ಮಹಿಳಾ ದೌರ್ಜನ್ಯಗಳು, ಅತ್ಯಾಚಾರ ಹಾಗೂ ಶೇ.೪೦ರಷ್ಟು ಅಪಘಾತಗಳು ಮದ್ಯದ ಅಮಲಿನಲ್ಲಿಯೇ ನಡೆಯುತ್ತವೆ. ವಿದೇಶಗಳಲ್ಲಿ ಬಿಯರ್ ಗಾಗಲ್ಸ್ ಎಂಬ ಒಂದು ಪದವಿದೆ. ಇದರ ಪ್ರಕಾರ ಮದ್ಯವ್ಯಸನ ತೀವ್ರವಾದಾಗ ಅದರಿಂದಾಗಿ ಮದ್ಯವಸ್ಯನಿಗೆ ಲೈಂಗಿಕ ಆಸೆ ಅತಿಯಾಗಿ
ಕೆಲವೊಮ್ಮೆ ತಾವು ಕುಡಿಯದಿದ್ದಾಗ ಯಾವ ಹೆಣ್ಣಿನ ಬಗ್ಗೆ ಹೆಚ್ಚು ಆಸಕ್ತಿ ಇರಲಿಲ್ಲವೋ ಅಂತಂಹ ಹೆಣ್ಣಿನೊಂದಿಗೆ ಲೈಂಗಿಕ ಕಾಮನೆ ಬಯಸುವಂತೆ ಮಾಡುತ್ತದೆ.
ಆಗಾಗ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯಮಾರಾಟವನ್ನು ನಿಷೇಧಿಸಬೇಕೆಂಬ ಧ್ವನಿ ಸೀ ಸಂಘಗಳು, ಒಕ್ಕೂಟಗಳಿಂದ ಬಲವಾಗಿ ಕೇಳಿ ಬರುತ್ತದೆ, ಆದರೆ ಈ
ಸಮಸ್ಯೆಗೆ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ.

ಇತ್ತೀಚೆಗೆ ನಮ್ಮೂರಿನ ಕೆಲ ಮಹಿಳಾ ಸಂಘಗಳು ಸೇರಿ ಊರಿನಲ್ಲಿರುವ ಸಾರಾಯಿ ಅಂಗಡಿಗಳನ್ನು ಬಂದ್ ಮಾಡಬೇಕು ಎಂಬ ಉದ್ದೇಶದಿಂದ ಊರಿನ ಪ್ರಮುಖರೊಂದಿಗೆ ಸಭೆ ಮಾಡಿ ಊರಿನಲ್ಲಿ ಮದ್ಯ ಮಾರಾಟ ಮಾಡಬಾರದು, ಒಂದು ವೇಳೆ ಮಾರಾಟ ಮಾಡಿದರೆ ಅವರಿಗೆ ದಂಡ ಎಂಬ ತೀರ್ಮಾನಕ್ಕೆ ಬಂದರು. ಈ ನಿಯಮ ಅದೆಷ್ಟು ಕಟ್ಟು ನಿಟ್ಟಾಗಿ ಪಾಲನೆ ಆಯಿತು ಎಂದರೆ ವೇಗವಾಗಿ ಬಂದ ರೈಲು ಒಂದು ಕ್ಷಣ ನಿಂತು ಅಷ್ಟೇ ಅವಸರದಲ್ಲಿ ಹೋದ ಹಾಗೆ! ಕುಡಿಯಲೆಬೇಕು ಎಂಬುವವರು ಪರ ಊರಿನಿಂದ ತರಸಿಕೊಂಡು ಕುಡಿಯಲು ಆರಂಭಿಸಿದರು.

ಕಳೆದ ಬಾರಿ ಲಾಕ್‌ಡೌನ್ ನಂತರ ಮದ್ಯದ ಅಂಗಡಿಗಳನ್ನು ತೆರೆದಾಗ ವಯಸ್ಸು, ಹೆಣ್ಣು ಗಂಡು ಎಂಬ ಬೇದ ಭಾವವಿಲ್ಲದೇ ದಿನಗಟ್ಟಲೇ ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡಿದರು. ಹೊಸ ವರ್ಷದಂದು ರಾಜ್ಯದಲ್ಲಿ ೨.೩೯ ಲಕ್ಷ ಕಾರ್ಟನ್ ಬಾಕ್ ಗಳ ಒಟ್ಟು ೧೭೦ ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಮದ್ಯ ಸೇವಿಸುವವರ ಸಂಖ್ಯೆ೨೦೦೫ ರಲ್ಲಿ ೨೧.೯ ಕೋಟಿ ಇತ್ತು, ಅದು ೨೦೧೮ಕ್ಕೆ ೨೯.೩ ಕೋಟಿಗೆ ಏರಿಕೆಯಾಗಿದ್ದು ೨೦೩೦ರ ವೇಳೆಗೆ ೩೮.೬ ಕೋಟಿಗೆ ಏರಿಕೆ
ಆಗುತ್ತದೆ ಎಂದು ವರದಿಗಳು ಹೇಳುತ್ತಿವೆ. ಅದು ಅಲ್ಲದೇ ಬಡ ಹಾಗೂ ಮಧ್ಯಮ ವರ್ಗದವರು ಮಧ್ಯ ಖರೀದಿಸುವುದರಲ್ಲಿ ಶೇ.೭ರಿಂದ ಶೇ.೨೧ಕ್ಕೆ ಏರಿಕೆ ಯಾಗಿದ್ದು, ಅದು ಕೂಡಾ ೨೦೩೦ಕ್ಕೆ ಶೇ ೪೪ರಷ್ಟಾಗುವ ಸಂಭವವಿದೆ. ವರ್ಷದಿಂದ ವರ್ಷಕ್ಕೆ ಸರಕಾರಕ್ಕೆ ಹಣ ಬರುತ್ತಿದೆ ಹಾಗೂ ಮನುಷ್ಯನ ಗುಣ
ಹೋಗುತ್ತಲಿದೆ ಎಂದೇ ಅರ್ಥ.

ಸಂಡೇ ಮಾತ್ರ ಕುಡಿಯುತ್ತೇನೆ ಎಂದು ಕುಡಿತ ಆರಂಭಿಸುವ ಕೆಲವರು ನಂತರ ಅದನ್ನು ಸಂಜೆ ಕುಡಿತವಾಗಿ ಬದಲಾಯಿಸಿಕೊಂಡು, ಇನ್ನೂ ಕೆಲ ದಿನಗಳ
ನಂತರ ದಿನವೀಡಿ ಕುಡಿತವನ್ನಾಗಿ ಮಾಡಿಕೊಂಡು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುವುದು ದುರ್ದೈವದ ಸಂಗತಿ.