Wednesday, 11th December 2024

ಸರಕಾರಿ ಸೇವೆಯಲ್ಲಿ ಕೆಂಪು ಪಟ್ಟಿ ಮತ್ತು ಕೊಕ್ಕೆ ಪುರಾಣ

ಅಭಿಮತ

ಮೋಹನದಾಸ ಕಿಣಿ

ಮೂಗು ಹಿಡಿದು ಬಾಯಿ ಬಿಡಿಸಿದ ಎಂಬ ಆಡುಮಾತಿದೆ. ಯಾರದಾದರೂ ಮೂಗನ್ನು ಗಟ್ಟಿಯಾಗಿ ಒತ್ತಿ ಹಿಡಿದರೆ, ಉಸಿರು
ಕಟ್ಟಿದಂತೆ ಆಗುವುದರಿಂದ ಬಾಯಿ ತೆರೆದುಕೊಳ್ಳುತ್ತದೆ.

ಲಂಚಕ್ಕಾಗಿ ಪೀಡಿಸುವವರು ಅನುಸರಿಸುವ ತಂತ್ರವೂ ಇದೇ. ಯಾವುದೇ ಕೆಲಸಕ್ಕೆ ಲಂಚ ತೆಗೆದುಕೊಳ್ಳುವುದಿಲ್ಲ ಎನ್ನಬಹು ದಾದರೂ, ಕೊಡದೇ ಕೆಲಸ ಮಾಡಿಸಿಕೊಳ್ಳುವುದು ಇಂದಿನ ಕಾಲಘಟ್ಟದಲ್ಲಿ ಸಾಧ್ಯವಿಲ್ಲ. ಆದರೆ ಲಂಚ ನೀಡಬೇಕಾದ ಅನಿವಾರ್ಯತೆಗೆ ಕಾರಣಗಳೇನೇ ಇದ್ದರೂ ನಿವಾರಣೋಪಾಯಗಳೂ ಇವೆ ಎನ್ನುವುದೂ ಅಷ್ಟೇ ಸತ್ಯ. ಸಾಮಾನ್ಯವಾಗಿ ಲಂಚ
ಕೊಡಬೇಕಾದ ಪರಿಸ್ಥಿತಿಯೇಕೆ ಉದ್ಭವಿಸುತ್ತದೆ, ಲಂಚ ಕೊಡುವಂಥ ಅನಿವಾರ್ಯತೆ ಸೃಷ್ಟಿಸಲು ಹೇಗೆಲ್ಲಾ ಬಲೆ ಹೆಣೆಯುತ್ತಾರೆ, ಕೆಂಪು ಪಟ್ಟಿ ಅಥವಾ ಕೊಕ್ಕೆ ಪುರಾಣ ಹೇಗಿರುತ್ತದೆ ಎಂಬಿತರ ವಿಷಯದಲ್ಲಿ ಒಂದಿಷ್ಟು ಮಾಹಿತಿ ನೀಡುವ ಪ್ರಯತ್ನ ಇಲ್ಲಿದೆ.

ಲಂಚಕ್ಕೆ ಕೈಯೊಡ್ಡುವವರೊಂದಿಗೆ ಕೊಡುವವರೂ ಸಮಾನವಾಗಿ ಜವಾಬ್ದಾರರು, ಸಿಕ್ಕಿ ಬಿದ್ದರೂ ರಂಗೋಲಿ ಕೆಳಗೆ ತೂರುವ ಬುದ್ಧಿವಂತರ ಚದುರಂಗದಾಟ ಹೇಗಿರುತ್ತದೆ ಎಂಬೆಲ್ಲದರ ಕುರಿತೊಂದು ಪಕ್ಷಿನೋಟ.

ಓರ್ವ ಅಧಿಕಾರಿಯಿದ್ದರು, ಉದ್ದೇಶಪೂರ್ವಕವೋ ಅಥವಾ ಮಾನಸಿಕ ಸ್ಥಿತಿ ಹಾಗಿತ್ತೋ ಗೊತ್ತಿಲ್ಲ. ತನ್ನ ಮೇಜಿಗೆ ಬಂದ
ಕಡತದಲ್ಲಿ ಪ್ರತೀ ಮೂರನೇ ಕಡತವನ್ನು ತಿರಸ್ಕರಿಸುವುದು ಅವರ ಅಭ್ಯಾಸವಾಗಿತ್ತಂತೆ. ಇದನ್ನು ಅರಿತಿದ್ದ ಅವರ ಅಧೀನ
ನೌಕರರು, ತಮಾಷೆಯಾಗಿ ಅವರಿಗೇ ಸಂಬಂಧಿಸಿದ ಕಡತವೊಂದನ್ನು ಮೂರನೇ ಅನುಕ್ರಮದಲ್ಲಿ ಬರುವಂತೆ ಜೋಡಿಸಿಟ್ಟಿದ್ದ ರಂತೆ. ಎಂದಿನಂತೆ ತಿರಸ್ಕರಿಸಿದರು. ಮುಂದೆ ಬಾಯಿ ಬಾಯಿ ಬಡೆದುಕೊಂಡರು, ಅದು ಬೇರೆ ವಿಷಯ. ಮೇಲ್ನೋಟಕ್ಕೆ ತಮಾಷೆಯೆನಿಸಿದರೂ ಇಂಥವರೂ ಇದ್ದಾರೆ ಎಂಬುದಂತೂ ಸತ್ಯ.

ಸಚಿವರೊಬ್ಬರು ತನ್ನ ಬಳಿ ಬಂದ ಕಡತಕ್ಕೆ ವ್ಯವಹಾರ ಕುದುರಿಸಿದ ನಂತರ Approved ಎಂದು ಬರೆಯುತ್ತಾರೆ. ನಂತರ ಮಾತುಕತೆಯಾದಷ್ಟು ಬಂದಿಲ್ಲವೆಂದು ತಿಳಿದು, ಕಡತವನ್ನು ವಾಪಸ್ಸು ತರಿಸಿ, Approved ಎಂದಿರುವುದನ್ನು Not Approved
ಬದಲಾಯಿಸಿ ಕಳುಹಿಸುತ್ತಾರೆ. ಸಂಬಂಧಿಸಿದವರು ಬಂದು ಬಾಕಿ ಇರುವುದನ್ನು ಸಮರ್ಪಿಸುತ್ತಾರೆ.

ಆದರೆ ಆಗಲೇ Not Approved  ಎಂದು ಬರೆದಾಗಿದೆ, ತಿದ್ದಿದರೆ ನಾಳೆ ಸಮಸ್ಯೆಯಾದರೆ? ಏನೂ ಆಗಲಿಲ್ಲ, Not ಎಂದಿದ್ದುದರ ಎದುರು e ಸೇರಿಸಿ, Note Approved ಎಂದು ಮುಗಿಸುತ್ತಾರೆ. ಹೇಗಿದೆ ಕರಾಮತ್ತು? ಸರಕಾರಿ ನೌಕರರಿಗೆ ಕೆಲವೊಂದು ನಿಯಮಗಳಿ ಗೊಳಪಟ್ಟು ವೈದ್ಯಕೀಯ ವೆಚ್ಚದ ಮರುಪಾವತಿಗೆ ಅವಕಾಶವಿದೆ. ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲದಾಗ ಖಾಸಗಿಯಾಗಿ ಖರೀದಿಸಿದ ನಾಯಿ ಕಡಿತದ ಚುಚ್ಚುಮದ್ದಿನ ಬಾಬ್ತು ಮರುಪಾವತಿ ಪಡೆಯಲು ಅರ್ಜಿ ಸಲ್ಲಿಸಿದರೆ, ಕಚ್ಚಿದ ನಾಯಿಯ ಚಿತ್ರವನ್ನು ಲಗತ್ತಿಸುವಂತೆ ಭೂಪನೊಬ್ಬ ಆಕ್ಷೇಪ ಮಾಡುತ್ತಾನೆ.

ಇನ್ನೊಬ್ಬ, ನೌಕರನ ತಾಯಿಯ ಚಿಕಿತ್ಸೆ, ಔಷಧಿ ಬಾಬ್ತು ಮರುಪಾವತಿಗೆ ಅರ್ಜಿ ಸಲ್ಲಿಸಿದರೆ, ಆಕೆ ಬದುಕಿದ್ದಾರೆಂದು ದಾಖಲೆ ಯನ್ನು ಹಾಜರುಪಡಿಸಲು ಸೂಚಿಸಲಾಗುತ್ತದೆ. ಆಕ್ಷೇಪಣೆ ಹಿಂತೆಗೆಯಲು ಏನು ಮಾಡಬೇಕು ಗೊತ್ತಲ್ಲ? ಪಿಂಚಣಿದಾರರು ಪ್ರತಿ ವರ್ಷದ ನವೆಂಬರ್ ತಿಂಗಳಲ್ಲಿ ಜೀವಂತ ಪ್ರಮಾಣ ಪತ್ರ ನೀಡಬೇಕೆಂಬ ನಿಯಮವಿದೆ. ಖಜಾನೆ, ಬ್ಯಾಂಕ್ ಮೂಲಕ ಪಿಂಚಣಿ ಪಡೆಯುವವರು ಇಂಥ ಪ್ರಮಾಣಪತ್ರ ಕೊಟ್ಟೇ ಕೊಡುತ್ತಾರೆ.

ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಹಳೆಯ ಪ್ರಮಾಣಪತ್ರವೊಂದು ಕಳೆದುಹೋಗಿರುತ್ತದೆ. ನಂತರದ ವರ್ಷಗಳ ಪ್ರಮಾಣಪತ್ರ ಇದ್ದರೆ ಸಾಲದಂತೆ, ಹಿಂದಿನ ವರ್ಷ ಕೂಡಾ ಜೀವಂತ ಇರುವ ಬಗ್ಗೆ ಪ್ರಮಾಣಪತ್ರ ಇಲ್ಲದ ಬಗ್ಗೆ ಆಕ್ಷೇಪಣೆ ಜಡಿದೇ ಬಿಡುತ್ತಾರೆ.
ಕಡತವನ್ನು ವಿಳಂಭಿಸಲೂ ಲಂಚ ಕೊಡುವ ಉದಾಹರಣೆ ಇದೆ. ಹೇಗೆಂದರೆ ಯಾವುದಾದರೂ ಪ್ರಕರಣಗಳಲ್ಲಿ, ನಿಗದಿತ ಅವಧಿಯಲ್ಲಿ ಆರೋಪಪಟ್ಟಿ ದಾಖಲು ಮಾಡದಿದ್ದರೆ ಅಂಥ ಪ್ರಕರಣಗಳನ್ನು ನ್ಯಾಯಾಲಯ ವಜಾ ಮಾಡುತ್ತದೆ. ಉದ್ದೇಶ
ಪೂರ್ವಕ ವಿಳಂಭಿಸಲು ಲಂಚ ಕೊಟ್ಟರಾಯ್ತು. ಕೇಸ್ ಕಥಂ.

ಸಾರ್ವಜನಿಕರು ಬಿಡಿ, ಅಧೀನ ಕಚೇರಿಯ ಕಡತ ಮಂಜೂರು ಮಾಡಬೇಕಾದರೂ ಲಂಚ ಕೇಳಿದ ಉದಾಹರಣೆ ಇದೆಯೆಂದರೆ ನಂಬುತ್ತೀರಾ. ಸರಕಾರಿ ಆಸ್ಪತ್ರೆಯೊಂದರ ಛಾವಣಿಯ ಹೆಂಚುಗಳು ಭಾರೀ ಗಾಳಿ – ಮಳೆಗೆ ಹಾರಿ ಹೋಗಿತ್ತು. ಅದನ್ನು ಸರಿಪಡಿಸಲು ದಾನಿಯೊಬ್ಬರು ಹೆಂಚುಗಳನ್ನು ದಾನವಾಗಿ ನೀಡಿದ್ದರು. ಹೆಂಚುಗಳನ್ನು ಛಾವಣಿಗೆ ಹೊದಿಸಲು ಮಾಡಲಾದ ವೆಚ್ಚದ ಬಿಲ್ಲನ್ನು ಮೇಲಧಿಕಾರಿಗಳಿಗೆ ಅನುಮೋದನೆಗೆ ಕಳುಹಿಸಿದರೆ, ಅಂದಾಜು ಪಟ್ಟಿ ಇತ್ಯಾದಿ ಖರೀದಿ ನಿಯಮಗಳನ್ನು ಪಾಲಿಸಿಲ್ಲವೆಂಬ ಆಕ್ಷೇಪಣೆ ಮಾಡಿ ತಿರಿಸ್ಕರಿಸುತ್ತಾರೆ.

ತುರ್ತು ಪರಿಸ್ಥಿತಿಯಲ್ಲಿ ನಿಯಮ ಪಾಲಿಸಲು ಕುಳಿತರೆ ರೋಗಿಗಳ ಸ್ಥಿತಿ ಏನಾದೀತು ಎಂದು ಯೋಚಿಸಬೇಡವೇ? ಒಂದು ಪ್ರಕರಣದಲ್ಲಿ ಜನನ ಪ್ರಮಾಣಪತ್ರದಲ್ಲಿ ಮಗುವಿನ ಹೆಸರು ಬದಲಾವಣೆ ಮಾಡಬೇಕಿತ್ತು. ಆ ಕುರಿತು ಛಾಪಾ ಕಾಗದದಲ್ಲಿ ಘೋಷಣಾಪತ್ರ ತಯಾರಿಸಿ ತಾಲೂಕು ದಂಡಾಧಿಕಾರಿಯವರ ದೃಢೀಕರಣ ಮಾಡಿಸಿ ಎರಡು ದಿನಗಳ ನಂತರ ನಗರಸಭೆಗೆ ಸಲ್ಲಿಸಲಾಯಿತು. ಘೋಷಣಾಪತ್ರ ಮತ್ತು ತಿದ್ದುಪಡಿಗೆ ಸಲ್ಲಿಸಲಾದ ಅರ್ಜಿ ಸಂಬಂಧಿಸಿದ ಅಧಿಕಾರಿಯ ಮೇಜು ತಲುಪುವಷ್ಟ ರಲ್ಲಿ ತಹಶೀಲ್ದಾರರು ಬೇರೆಡೆಗೆ ವರ್ಗವಾಗಿದ್ದರು.

ಕೊಕ್ಕೆಗೆ ನಗರಸಭೆಯ ಅಧಿಕಾರಿ ನೀಡಿದ ಕಾರಣವೇನೆಂದರೆ, ಅವರು ವರ್ಗಾವಣೆ ಆಗಿರುವುದರಿಂದ ಘೋಷಣಾ ಪತ್ರ ಅಸಿಂಧುವಂತೆ. ಸ್ವಲ್ಪ ಬಿಸಿ ಮುಟ್ಟಿಸಿದ ನಂತರ ತಿದ್ದುಪಡಿಯಾದ ಪ್ರಮಾಣಪತ್ರ ಸಿಕ್ಕಿತೆನ್ನಿ. ಧನದಾಹ ಹೆಚ್ಚಿದರೆ ಮನುಷ್ಯ ಎಷ್ಟೊಂದು ಕ್ರೂರಿಯಾಗಬಲ್ಲ ಎಂಬುದಕ್ಕೆ ಉದಾಹರಣೆ ಇಲ್ಲಿದೆ.

ಮಹಿಳಾ ನೌಕರರಿಗೆ ಎರಡು ಮಕ್ಕಳ ತನಕ ಹೆರಿಗೆ ರಜೆ ಪಡೆಯುವ ಅರ್ಹತೆಯಿದೆ. ಈ ಎರಡು ಮಕ್ಕಳ ಲೆಕ್ಕಾಚಾರ ಹೇಗೆಂದರೆ, ಮೊದಲನೇ ಹೆರಿಗೆಯಲ್ಲಿ ಒಂದು ಮಗುವಿದ್ದರೆ ಎರಡನೇ ಹೆರಿಗೆಯಲ್ಲಿ ಅವಳಿ ಮಕ್ಕಳಾದರೂ ಸೌಲಭ್ಯ ಸಿಗುತ್ತದೆ. ಕರ್ನಾಟಕ
ನಾಗರಿಕ ಸೇವಾ ನಿಯಮ 135ರಲ್ಲಿ ಸ್ಪಷ್ಟವಾಗಿ ವಿವರಣೆಯಿದ್ದು, ಎರಡನೇ ಹೆರಿಗೆಪೂರ್ವ ತನಕ ಒಂದು ಜೀವಂತ ಮಗುವಿದೆ ಎಂದು ಘೋಷಣಾ ಪತ್ರ ನೀಡಿದರೆ ಸಾಕು.

ಒಬ್ಬಾಕೆಗೆ ಎರಡನೇ ಹೆರಿಗೆಯಲ್ಲಿ ಅವಳಿ ಮಕ್ಕಳಾದಾಗ ಒಟ್ಟು ಮೂರು ಮಕ್ಕಳು ಎರಡನೇ ಹೆರಿಗೆ ರಜೆಗೆ ಅರ್ಹತೆ ಇಲ್ಲ ಎಂದು
ಆಕ್ಷೇಪಿಸಿ ರಜೆ ಮಂಜೂರು ಮಾಡುವ ಅಧಿಕಾರಿ ಸುಮಾರು ಆರು ತಿಂಗಳಿಗೂ ಹೆಚ್ಚು ಸತಾಯಿಸಿದ್ದ. ಕೊನೆಗೆ ಕೇಂದ್ರ ಕಚೇರಿಯಿಂದ ಸ್ಪಷ್ಟೀಕರಣ ಬಂತು, ವೇತನ ಸಿಕ್ಕಿತು. ಆದರೆ ಮೂರು ಸಣ್ಣ ಮಕ್ಕಳೊಂದಿಗೆ ಆರು ತಿಂಗಳು ಆಕೆ ಅನುಭವಿಸಿದ ಕಷ್ಟ ಹೇಗಿರಬೇಡ.

ಇಷ್ಟು ತೊಂದರೆ ನಡುವೆಯೂ ಇಲಾಖೆಯ ಅಧಿಕಾರಿಗಳೊಂದಿಗೆ ಹೋರಾಡಿ ಸೌಲಭ್ಯ ಪಡೆದ ಆಕೆಯನ್ನು ಅಭಿನಂದಿಸ ಬೇಕಲ್ಲವೇ. ಇದೆಲ್ಲಾ ಕೆಳ ಹಂತದ ಪ್ರವರಗಳಾದರೆ, ಲಂಚಕ್ಕಾಗಿ ಅಲ್ಲದಿದ್ದರೂ ಕಾನೂನು ಅಂದರೆ ಕಾನೂನೆಂಬ
ಧೋರಣೆಗೆ ಅಂಟಿಕೊಳ್ಳುವವರ ಒಂದು ಕಥೆ ಹೀಗಿದೆ.

ಗುಂಡೂರಾವ್ ಗೃಹಸಚಿವರಾಗಿದ್ದಾಗ ಹೆಚ್ಚುವರಿ ಪೊಲೀಸ್ ಹುದ್ದೆಗಳ ಮಂಜೂರಾತಿಗೆ ಒಂದು ಕಡತ ಸಿದ್ಧಪಡಿಸಲು ಗೃಹ ಕಾರ್ಯದರ್ಶಿಗೆ ಸೂಚನೆ ನೀಡುತ್ತಾರೆ. ಕಡತ ಅನುಮೋದನೆಗೆ ಆರ್ಥಿಕ ಇಲಾಖೆಗೆ ಹೋಗುತ್ತದೆ. ಹಣಕಾಸು ಇಲಾಖೆಯ ಕಾರ್ಯದರ್ಶಿ ಅದನ್ನು ತಿರಸ್ಕರಿಸುತ್ತಾರೆ. ಇದಾದ ಒಂದೇ ವಾರದಲ್ಲಿ ಆರ್ಥಿಕ ಮತ್ತು ಗೃಹ ಕಾರ್ಯದರ್ಶಿ ಪರಸ್ಪರ ವರ್ಗಾವಣೆಯಾಗುತ್ತದೆ.

ಗುಂಡೂರಾಯರು ಮೊದಲಿನ ಕಡತವನ್ನು ಪುನರ್ ಪರಿಶೀಲನೆಗೆ ಆರ್ಥಿಕ ಇಲಾಖೆಗೆ ಕಳುಹಿಸುತ್ತಾರೆ. ಮೊದಲು ಗೃಹ
ಕಾರ್ಯದರ್ಶಿಯಾಗಿದ್ದವರೇ ಈಗ ಆರ್ಥಿಕ ಇಲಾಖೆಯಲ್ಲಿರುವುದರಿಂದ ಅನುಮೋದನೆ ಸಿಗಬಹುದೆಂಬುದು ಗುಂಡೂರಾಯರ ತರ್ಕವಾಗಿತ್ತು. ಆದರೆ ಈಗಲೂ ಆರ್ಥಿಕ ಇಲಾಖೆಯ ಕಾರ್ಯದರ್ಶಿಯವರು ಪುನಃ ಹಳೆಯ ಆಕ್ಷೇಪಣೆ ಹಾಕಿ ವಾಪಸ್ಸು ಕಳುಹಿಸಿದರು.

ಏಕೆಂದರೆ ಜನ ಬದಲಾದರೇನಂತೆ ಕುರ್ಚಿ, ಹುದ್ದೆ ಬದಲಾಗಿಲ್ಲವಲ್ಲ? ದೂರು ಕೊಟ್ಟರೆ ಏನಾಗುತ್ತದೆ? ಕಾನೂನು, ಲೋಕಯುಕ್ತ ದೆಯಲ್ಲ, ದೂರು ನೀಡಿದರೆ ಆಗದೆ ಎಂದು ಪ್ರಶ್ನೆ ಮಾಡುವವರಿಗೊಂದು ಕಿವಿಮಾತು. ಹಳ್ಳಿ ಕಡೆ ಒಂದು ನಂಬಿಕೆಯಿದೆ. ಗುಬ್ಬಚ್ಚಿಗಳನ್ನು ಮನುಷ್ಯ ಮುಟ್ಟಬಾರದಂತೆ. ಅಪ್ಪಿತಪ್ಪಿ ಮುಟ್ಟಿದರೆ ಹಾಗೆ ಮುಟ್ಟಿಸಿಕೊಂಡ ಗುಬ್ಬಚ್ಚಿಗಳನ್ನು ಅವುಗಳ ಪರಿವಾರ ಬಹಿಷ್ಕಾರ ಹಾಕಿ ಗುಂಪಿನಿಂದ ಹೊರಗೆ ಇಡುವುದಂತೆ. ಕಥೆ ಸತ್ಯವೋ ಕಲ್ಪನೆಯೋ ಗೊತ್ತಿಲ್ಲ, ಆದರೆ ಲಂಚ ಕೇಳಿದವರ ಬಗ್ಗೆ ದೂರು ಕೊಟ್ಟರೆ, ಅವರನ್ನು ನೋಡುವ ದೃಷ್ಟಿಯೇ ಬೇರೆ.

ಅವರನ್ನು ಯಾರೂ ಹತ್ತಿರ ಸೇರಿಸುವುದಿಲ್ಲ. ಅವರ ಯಾವುದೇ ಕಡತವನ್ನಾದರೂ ನಾಜೂಕಾಗಿ ನಿಭಾಯಿಸುತ್ತಾರೆ. ಕೊಕ್ಕೆೆ ಹಾಕಿದ್ದು ಗೊತ್ತೇ ಆಗುವುದಿಲ್ಲ. ಇದೆಲ್ಲ ಲಂಚ ಕೊಡುವ / ತೆಗೆದುಕೊಳ್ಳುವವರ ಕಥೆ. ಸಿಕ್ಕಿ ಬಿದ್ದರೂ ತಪ್ಪಿಸಿಕೊಳ್ಳಲು ಕೆಲವೊಂದು ಒಳಕಿಂಡಿಗಳಿವೆ. ಲೋಕಾಯುಕ್ತ ಪ್ರಕರಣಗಳಲ್ಲಿ ದಾಳಿ ನಡೆಸುವ ಮೊದಲು ಕೆಲವು ಕ್ರಮಗಳನ್ನು ಅನುಸರಿಸುತ್ತಾರೆ.

ಯಾವ ಇಲಾಖೆಯ ಮೇಲೆ ದಾಳಿ ಮಾಡಬೇಕಾಗಿದೆಯೋ, ಆ ಇಲಾಖೆಯ ಹೊರತು ಬೇರೆ ಇಲಾಖೆಯ ಮತ್ತು ಯಾವ ಪ್ರದೇಶದಲ್ಲಿ ದಾಳಿ ಮಾಡಲು ಯೋಜಿಸಲಾಗಿದೆಯೋ ಅಲ್ಲಿಂದ ದೂರದಲ್ಲಿರುವ ಬೇರೆ ಊರಿನಿಂದ ಸಿಬ್ಬಂದಿಗಳನ್ನು ಸಾಕ್ಷಿಗೆಂದು ಪಡೆದುಕೊಳ್ಳುತ್ತಾರೆ. ಅವರು  ಲೋಕಾಯುಕ್ತ ಅಧಿಕಾರಿಗಳ ಜತೆಯಲ್ಲಿ ಖೆಡ್ಡಾಸಿದ್ಧವಾಗುವವರೆಗೂ ಇರಬೇಕು. ದಾಳಿಯಾಗುತ್ತದೆ, ಪ್ರಕರಣ ದಾಖಲಾಗುತ್ತದೆ. ಆದರೆ ಒಂದೆರಡು ವರ್ಷಗಳಲ್ಲಿ ಅದು ಮುಗಿಯುವುದಿಲ್ಲ. ಐದೋ ಹತ್ತೋ ವರ್ಷಗಳ ನಂತರ ಸಾಕ್ಷಿಯಾಗಿ ಬಂದವರ ವಿಚಾರಣೆ ನಡೆಯುವಾಗ ಆರೋಪಿಯ ವಕೀಲರು ಹೇಳಿಕೊಡುತ್ತಾರೆ.

ನನಗೆ ಸರಿಯಾಗಿ ನೆನಪಿಲ್ಲ ಇದನ್ನು ಒಪ್ಪಬೇಕಾಗುತ್ತದೆ, ಏಕೆಂದರೆ ಪ್ರಕರಣ ಹಳೆಯದು, ಸಾಕ್ಷಿ ಹೇಳಲು ಬಂದ ವ್ಯಕ್ತಿಗೆ
ವಯಸ್ಸಾಗಿದೆ ಇತ್ಯಾದಿ. ವಿಳಂಬಿತ ನ್ಯಾಯದ ಗತಿ ಏನಾಗುತ್ತದೆ ಗೊತ್ತಾಯಿತಲ್ಲ. ಇಷ್ಟೆಲ್ಲಾ ಓದಿದ ನಂತರ ಇದಕ್ಕೆ ಪರಿಹಾರ ವಿಲ್ಲವೇ, ಭ್ರಷ್ಟ ವ್ಯವಸ್ಥೆೆಗೆ ಒಗ್ಗಿಕೊಳ್ಳುವುದು ಅನಿವಾರ್ಯವೇ ಎಂದೆಲ್ಲಾ ಪ್ರಶ್ನೆಗಳು ಮೂಡಬಹುದು. ಆದರೆ ಅದನ್ನು ಸಾಧಿಸಬೇಕಾದರೆ ಒಂದಿಷ್ಟು ಹೊಂದಾಣಿಕೆ ಬೇಕು. ಅಂದರೆ ಕೊಡುವ – ತೆಗೆದುಕೊಳ್ಳುವುದರಲ್ಲಿ ಅಲ್ಲ, ನಾಗರಿಕ ಪ್ರಜ್ಞೆಯಲ್ಲಿ, ಜನರ ಮನಸ್ಥಿತಿಯಲ್ಲಿ.