Wednesday, 11th December 2024

ಗಂಭೀರವಾಗಿ ಪರಿಗಣಿಸಿ

ಪ್ರತಿಸ್ಪಂದನ

ಬೆಳ್ಳಿ ಚಂದ್ರಶೇಖರ ಶೆಟ್ಟಿ

ಪತ್ತಂಗಿ ಎಸ್.ಮುರಳಿಯವರು ‘ಓದುಗರ ಓಣಿ’ ವಿಭಾಗದಲ್ಲಿ (ವಿಶ್ವವಾಣಿ ಮಾ.೨), ಸರಕಾರಿ ಉದ್ಯೋಗ ಬಯಸುವವರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವಂತಿಲ್ಲ ಎಂಬುದಾಗಿ ರಾಜಸ್ಥಾನ ಸರಕಾರ ರೂಪಿಸಿರುವ ನಿಯಮವನ್ನು ಸರಕಾರಿ ಉದ್ಯೋಗಗಳ ಆಕಾಂಕ್ಷಿಗಳಿಗೆ ಮಾತ್ರವಲ್ಲದೆ ಎಲ್ಲೆಡೆ ಜಾರಿಗೆ ತರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾರತದ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವಲ್ಲಿ ಈ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

ಪ್ರಸ್ತುತ, ಕೇಂದ್ರ ಮತ್ತು ಹಲವು ರಾಜ್ಯಗಳ ಮಹಿಳಾ ಸರಕಾರಿ ಉದ್ಯೋಗಿಗಳಿಗೆ ಎರಡು ಮಕ್ಕಳನ್ನು ಪಡೆಯುವವರೆಗೆ ಮಾತ್ರ ಪೂರ್ಣ ವೇತನ ಸಹಿತ ೬ ತಿಂಗಳ ಹೆರಿಗೆ ರಜದ ಸೌಲಭ್ಯವಿದ್ದು, ನಂತರದ ಹೆರಿಗೆಗೆ ಅದು ಅನ್ವಯವಾಗುವುದಿಲ್ಲ. ಮಾತ್ರವಲ್ಲದೆ, ೧ ಅಥವಾ ೨ ಮಕ್ಕಳನ್ನು ಹೊಂದಿದ್ದು ಮುಂದೆ
ಮಕ್ಕಳು ಬೇಡವೆಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರಿಗೆ, ಕಿರುಕುಟುಂಬವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಒಂದು ವೇತನ ಬಡ್ತಿಯನ್ನೂ ಮಂಜೂರು ಮಾಡಲಾಗುತ್ತದೆ.

ದೇಶದ ಒಟ್ಟು ಜನಸಂಖ್ಯೆಯನ್ನು ಗಮನಿಸಿದಾಗ, ಸರಕಾರಿ ಉದ್ಯೋಗಿಗಳ ಸಂಖ್ಯೆ ಗೌಣ; ಆದರೆ ಇತರೆ ಖಾಸಗಿ ಸಂಸ್ಥೆಗಳಲ್ಲಿನ ಉದ್ಯೋಗಿಗಳ ಸಂಖ್ಯೆ ಗಣನೀಯವಾಗಿದೆ. ವಿಚಿತ್ರವೆಂದರೆ, ೨೦೧೭ರಲ್ಲಿ ತಿದ್ದುಪಡಿಯಾದ ಹೆರಿಗೆ ಕಾಯ್ದೆಯನುಸಾರ, ಮೊದಲ ಎರಡು ಮಕ್ಕಳ ಹೆರಿಗೆಗೆ ಆರು ತಿಂಗಳ ರಜೆ ಸೌಲಭ್ಯವಲ್ಲದೆ, ನಂತರದ ಎಲ್ಲ ಹೆರಿಗೆಗಳಿಗೂ ೧೨ ತಿಂಗಳ ಪೂರ್ಣವೇತನ ಸೌಲಭ್ಯಕ್ಕೆ ಮಹಿಳೆಯರು ಅರ್ಹರಾಗುತ್ತಾರೆ! ಅಲ್ಲದೆ, ಗರ್ಭಾವಸ್ಥೆ ಆರೋಗ್ಯಕ್ಕೆ ಅಗತ್ಯವೆಂದು ಕಂಡುಬಂದಲ್ಲಿ ಇನ್ನೂ ಒಂದು ತಿಂಗಳ ವೇತನ ಸಹಿತ ರಜೆಗೂ ಅವಕಾಶವಿದೆ. ಈ ರಜಾ ಅವಧಿ ಮುಗಿದ ನಂತರವೂ ಸಾಧ್ಯವಾದಷ್ಟು ಮಟ್ಟಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸುವ ಸಲಹೆಯೂ ಕಾಯ್ದೆಯಲ್ಲಿದೆ.

ಅಲ್ಲದೆ, ಪುರುಷ-ಸ್ತ್ರೀಯರು ಸೇರಿದಂತೆ ೫೦ ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಒಳಗೊಂಡಿರುವ ಸಂಸ್ಥೆಯ ಮಾಲೀಕರು, ಸದರಿ ನೌಕರರ ಮಕ್ಕಳಿಗಾಗಿ ನಿಗದಿತ ಸೌಲಭ್ಯ ಗಳನ್ನೊಳಗೊಂಡ ಶಿಶುಕೇಂದ್ರವನ್ನೂ ಒದಗಿಸಬೇಕು. ಇಷ್ಟೆಲ್ಲಾ ಸೌಲಭ್ಯ ಪುಕ್ಕಟೆ ಸಿಗುವಾಗ, ಸಹಜವಾಗಿಯೇ ಅದನ್ನು ಉಪಯೋಗಿಸಿಕೊಳ್ಳುವ ಮನಸ್ಥಿತಿಯವರೂ ಇರುತ್ತಾರೆ. ಜನಸಂಖ್ಯಾ ನಿಯಂತ್ರಣದ ದೃಷ್ಟಿಯಿಂದಲಾದರೂ ಇಂಥ ಸೌಲಭ್ಯಗಳನ್ನು ಗರಿಷ್ಠ ಎರಡು
ಹೆರಿಗೆಗಳಿಗೆ ಸೀಮಿತಗೊಳಿಸುವ ಅಗತ್ಯವಿದೆ. ಹೆರಿಗೆ ಸೌಲಭ್ಯ ಕಾಯ್ದೆಗೆ ತಂದ ತಿದ್ದುಪಡಿಯು ಖಾಸಗಿ ಉದ್ಯಮಗಳಿಗೆ ಹೊರೆಯಾಗಿದೆ.

ಇದು ಸ್ತ್ರೀಯರ ನೇಮಕಾತಿಯ ಅವಕಾಶಕ್ಕೂ ಕುತ್ತು ತರುವ ಸಂಭವವಿದೆ ಹಾಗೂ ಈಗಾಗಲೇ ಅವರ ನೇಮಕಾತಿಯ ವಿಷಯದಲ್ಲಿ ಮಾಲೀಕರು ಹತ್ತು ಸಲ ಯೋಚಿಸುವಂತೆ ಅದು ಮಾಡಿದೆ. ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆಯೆಂದರೆ, ಈ ಸೌಲಭ್ಯ ನೀಡಿಕೆಯ ಭಾರದಿಂದ ಬಚಾವಾಗಲು, ಮಹಿಳಾ ಅಭ್ಯರ್ಥಿಗಳು ನೌಕರಿ ಪಡೆಯಲು ಭರ್ತಿಮಾಡಬೇಕಾಗಿ ಬರುವ ಅರ್ಜಿಗಳಲ್ಲಿ, ಕೊನೆಯದಾಗಿ ಮುಟ್ಟಾಗಿರುವ ದಿನಾಂಕದ ವಿವರವನ್ನೂ ಕೆಲವೆಡೆ ಕೇಳಲಾಗು ತ್ತದೆಯಂತೆ!

ಯಾವುದೇ ಸೂಕ್ತ ವಿಮಾ ಯೋಜನೆ ಅಥವಾ ಸರಕಾರದ ನೆರವು ಇಲ್ಲದ, ಮಾಲೀಕರ ಮೇಲೆ ಸಂಪೂರ್ಣ ಭಾರ ಹೇರುವ ಈ ಹೆರಿಗೆ ಸೌಲಭ್ಯದ ನಿಯಮವು ಅಭಿವೃದ್ಧಿ ಹೊಂದಿದ ಎಲ್ಲ ರಾಷ್ಟ್ರಗಳಲ್ಲಿಲ್ಲ. ಆದ್ದರಿಂದ, ಇಂಥ ಸೌಲಭ್ಯಗಳನ್ನು ಒಂದು ಮಗುವಿನ ಹೆರಿಗೆಗೆ ಸೀಮಿತಗೊಳಿಸುವ ಬಗ್ಗೆ ಸರಕಾರ ಸೂಕ್ತ ತಿದ್ದುಪಡಿ ತರಬೇಕು ಹಾಗೂ ಈ ಮಿತಿ ಮೀರಿದವರಿಗೆ ಸರಕಾರ ಯಾವುದೇ ವಿನಾಯಿತಿ/ಸೌಲಭ್ಯ ನೀಡಬಾರದು. ಮಾತ್ರವಲ್ಲ, ನಿಗದಿತ ಸಂಖ್ಯೆ ಮೀರಿದ ಮಕ್ಕಳಿರುವ ಯಾವ ವ್ಯಕ್ತಿಗೂ ಪಂಚಾಯಿತಿಯಿಂದ ಲೋಕಸಭೆವರೆಗೆ ಸದಸ್ಯತ್ವ ಹೊಂದಲು ಅವಕಾಶ ಕಲ್ಪಿಸಬಾರದು; ಒಂದೊಮ್ಮೆ ಮಿತಿ ಉಲ್ಲಂಸಿದಲ್ಲಿ ಸದಸ್ಯತ್ವ ರದ್ದಾಗುವಂಥ ಹಾಗೂ ಅದು ಯಾವ ಭೇದಭಾವವಿಲ್ಲದೆ ಎಲ್ಲ ವರ್ಗಕ್ಕೂ ಅನ್ವಯಿಸುವಂಥ ಕಾನೂನು ತರಬೇಕು. ಇದು ನಮ್ಮ ದೇಶದಲ್ಲಿ ಸಾಧ್ಯವೇ?

(ಲೇಖಕರು ಹವ್ಯಾಸಿ ಬರಹಗಾರರು)