Friday, 13th December 2024

ಗ್ರಾಪಂ ಚುನಾವಣೆ ತಂದಿತ್ತ ಪಂಚಾಯ್ತಿ

ನಾಡಿಮಿಡಿತ

ವಸಂತ ನಾಡಿಗೇರ – vasanth.nadiger@gmail.com

ಅದು ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರು ಎಂಬ ಗ್ರಾಮ.

ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಬಹುತೇಕ ಕಡೆಗಳಲ್ಲಿರುವಂತೆ ಮೂಲ ಸೌಲಭ್ಯಗಳು ಇಲ್ಲದಿರುವಂಥ ಈ ಹಳ್ಳಿಯಲ್ಲಿ ನೀರಿಗೂ ತತ್ವಾರ. ಇಂತಿಪ್ಪ ಗ್ರಾಮದಲ್ಲಿ ರಮೇಶ್‌ಗೌಡ ಪೇಟ್ ಪಾಟೀಲ್ ಎಂಬುವವರಿದ್ದಾರೆ. ಹೊಲಗದ್ದೆ ಹೊಂದಿ ರುವಂಥವರು. ಅವರ ಹೊಲದಲ್ಲಿ ಬೋರ್‌ವೆಲ್ ಇದ್ದು ಸಾಕಷ್ಟು ನೀರಿದೆ. ಊರಲ್ಲಿ ಹೇಗೂ ನೀರಿನ ಸಮಸ್ಯೆ. ಅದಕ್ಕಾಗಿ ಗ್ರಾಮಸ್ಥರು ನೀರಿಗಾಗಿ ಇವರ ಹೊಲದ ಕೊಳವೆ ಬಾವಿಯನ್ನು ಆಶ್ರಯಿಸಿದ್ದರು.

ಆ ವಿಚಾರದಲ್ಲಿ ಪಾಟಿಲ್ ಕುಟುಂಬವೂ ಉದಾರಿ. ಕಳೆದ 35 ವರ್ಷಗಳ ಕಾಲ ಜನರಿಗೆ ಇಲ್ಲ ಎನ್ನದೆ, ಬೇಸರಿಸಿಕೊಳ್ಳದೆ ನೀರು
ಕೊಟ್ಟರು. ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಯಾವಾಗ ಗ್ರಾಮ ಪಂಚಾಯ್ತಿ ಚುನಾವಣೆ ಬಂತೋ, ಗ್ರಾಮದ ನೆಮ್ಮದಿ, ಸೌಹಾರ್ದವೇ ಹಾಳಾಯಿತು. ಆಗಿದ್ದೇನಂದರೆ, ಈ ಚುನಾವಣೆಯಲ್ಲಿ ಪೇಟ ಪಾಟಿಲರು ತಮ್ಮ ಪತ್ನಿಯನ್ನು ಕಣಕ್ಕಿಳಿಸಿ ದ್ದರು.

ಅವರ ನಸೀಬು ಕೆಟ್ಟಿತ್ತೋ ಅಥವಾ ಗ್ರಾಮಸ್ಥರ ದುರದೃಷ್ಟವೋ ಗೊತ್ತಿಲ್ಲ. ಚುನಾವಣೆಯಲ್ಲಿ ಪಾಟೀಲರ ಪತ್ನಿ ಸೋತು ಹೋದರು. ಇದರಿಂದ ಅವರು ಬಹಳ ಬೇಸರಗೊಂಡರು. ಮನನೊಂದರು. ಸತತ ಮೂರು ದಶಕಗಳ ಕಾಲ ನೀರು ಕೊಟ್ಟರೂ
ಗ್ರಾಮದ ಜನರು ತಮ್ಮ ಕೈಹಿಡಿಯಲಿಲ್ಲವಲ್ಲ ಎಂದು ನೊಂದುಕೊಂಡರು. ಕೊರಗಿದರು. ಆ ಕೊರಗು ಕೊನೆಗೆ ಛಲವಾಗಿ ಮಾರ್ಪಟ್ಟಿತು. ಪ್ರತೀಕಾರ ಭಾವವನ್ನು ಹುಟ್ಟುಹಾಕಿತು. ಆ ಕ್ಷಣದಲ್ಲಿ ಒಂದು ನಿರ್ಧಾರ ತೆಗೆದುಕೊಂಡೇ ಬಿಟ್ಟರು.

ಗ್ರಾಮಸ್ಥರು ಪಶ್ಚಾತ್ತಾಪ ಪಡುಬಹುದಾದಂಥ, ಮುಟ್ಟಿನೋಡಿಕೊಳ್ಳುವಂಥ ನಿರ್ಧಾರವದು. ಹಳ್ಳಿಯ ಜನರಿಗೆ ನೀರು ಸರಬ ರಾಜನ್ನು ನಿಲ್ಲಿಸಿಬಿಟ್ಟರು. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ನಡೆದಿರುವ ಈ ರೀತಿಯ ಘಟನೆಗಳು ಒಂದೆರಡಲ್ಲ. ಈ ಚುನಾವಣೆ ಉಂಟುಮಾಡಿರುವ ಕೋಲಾಹಲ, ಅಪಸವ್ಯಗಳು ಒಂದೆರಡಲ್ಲ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನಲ್ಲಿ ತುಕ್ಕಾನಟ್ಟಿ ಎಂಬುದೊಂದು ಗ್ರಾಮ.

ಅಲ್ಲಿನ ವಾರ್ಡ್ ಒಂದರಲ್ಲಿ ಒಂದೇ ಬೀದಿಯ ಇಬ್ಬರು ಮಹಿಳೆಯರು ಚುನಾವಣೆಗೆ ಸ್ಪರ್ಧಿಸಿದ್ದರು. ಯಾರಾದರೂ ಒಬ್ಬರು ಗೆಲ್ಲಬೇಕು. ಮತ್ತೊಬ್ಬರು ಸೋಲುತ್ತಾರೆ. ಆದರೆ ಪರಾಭವಗೊಂಡ ಅಭ್ಯರ್ಥಿಯ ಕಡೆಯವರು ಆ ರಸ್ತೆಗೆ ಕುಡಿಯವ ನೀರಿನ ನಲ್ಲಿ ಬಂದ್ ಮಾಡಿಸಿದ್ದರಂತೆ. ಇದರಿಂದ ರೊಚ್ಚಿಗೆದ್ದ ಇನ್ನೊಂದು ಗುಂಪಿನವರು ಪ್ರತಿಭಟನೆ ನಡೆಸಿದರು. ಎರಡೂ ಕಡೆಯವರಿಗೆ ಮಾರಾಮಾರಿ ಶುರುವಾಯಿತು. ಅದೂ ಅಂತಿಂಥದ್ದಲ್ಲ. ಅದು ನಾರಿಯರ ಮಾರಾಮಾರಿ.

ಹೌದು ಎರಡು ಕುಟುಂಬಗಳು ಹಾಗೂ ಅವರ ಬೆಂಬಲಿಗರು ಬಡಿದಾಟಕ್ಕಿಳಿದರು. ಪರಸ್ಪರ ಕಲ್ಲು ತೂರಿದರು. ಬಡಿಗೆಗಳಿಂದ ಹೊಡೆದಾಡಿದರು. ನೂತನ ಗ್ರಾಪಂ ಸದಸ್ಯೆಯೂ ಸೇರಿ ಅನೇಕರು ಗಾಯಗೊಂಡರು. ಯಥಾಪ್ರಕಾರ ಎರಡೂ ಕಡೆಯವರ ಮೇಲೆ ದೂರು ದಾಖಲಾಗಿದೆ. ಆದರೆ ಇದರಿಂದ ಆ ಬೀದಿ ಹಾಗೂ ಗ್ರಾಮದ ನೆಮ್ಮದಿಯಂತೂ ಹಾಳಾಗಿದೆ. ಮಾನ ಮುಕ್ಕಾಗಿದೆ.

ಈ ಪಂಚಾಯ್ತಿಯಲ್ಲಿ ಮತ್ತೊಂದು ವಿಷಯ ಭಾರಿ ಸದ್ದು ಮಾಡಿತು. ಅದೆಂದರೆ ಗಂಗಮ್ಮ ಎಂಬ ಮಹಿಳೆಯ ಸ್ಪರ್ಧೆ. ಅವರು ತುಮಕೂರು ತಾಲೂಕಿನ ಹೆಬ್ಬೂರು ಗ್ರಾಮ ಪಂಚಾಯಿತಿಯ ಕಲ್ಕೆರೆ ಮತ್ತು ದೊಡ್ಡಗುಣಿ ಎಂಬ ಎರಡು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅದೇನೂ ದೊಡ್ಡ ವಿಷಯವಲ್ಲ. ಆದರೆ ಎಲ್ಲರ ಗಮನ ಸೆಳೆದಿದ್ದು ಆಕೆ ಹೊರಡಿಸಿದ್ದ ಕರಪತ್ರ.
ಗೆದ್ದರೆ ಏನು ಮಾಡುವೆ ಎಂಬ ವಿಷಯಗಳು ಅದರಲ್ಲಿದ್ದವು. ಇದನ್ನು ಎಲ್ಲರೂ ಮಾಡುವಂಥದ್ದೇ ಬಿಡಿ.

ರಾಜಕೀಯ ಪಕ್ಷಗಳು ಇದನ್ನು ಚುನಾವಣೆ ಪ್ರಣಾಳಿಕೆಯ ರೂಪದಲ್ಲಿ ಬಿಡುಗಡೆ ಮಾಡುತ್ತವೆ. ಆದರೆ ಇವರ ಕರಪತ್ರದಲ್ಲಿ ಗೆದ್ದರೆ ಮಾತ್ರವಲ್ಲದೆ ಸೋತರೂ ಏನು ಮಾಡುತ್ತೇನೆ ಎಂದು ತಿಳಿಸುವ ಕೆಲವು ಕೆಲಸಗಳ ಪಟ್ಟಿ ಇತ್ತು. ಹೀಗಾಗಿ ಈ ವಿಷಯ ಎಲ್ಲರ
ಗಮನ ಸೆಳೆಯಿತು. ಇದು ಎಲ್ಲೆಡೆ ವೈರಲ್ ಆಯಿತು. ಆದರೆ ಕೊನೆಗೆ ಆಗಿದ್ದೇನು ಗೊತ್ತೆ? ಆಕೆಗೆ ದೊರೆತ ಮತಗಳು – ಒಂದು ಕಡೆ 2 ಮತ್ತು ಇನ್ನೊಂದು ಕಡೆ 6 !

ಇವರ ಪತಿ ಕೂಡ ಪ್ರತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತ ಬಂದಿದ್ದಾರೆ. ಹಾಗೆಯೇ ಸೋಲುತ್ತಲೂ ಇದ್ದಾರಂತೆ. ಚುನಾವಣೆಯಲ್ಲಿ ಸ್ಪರ್ಧೆ ಮುಖ್ಯ. ಸೋಲು ಗೆಲುವು ಇದ್ದದ್ದೇ ಎಂದು ಈಗ ಗಂಗಮ್ಮ ಹೇಳಿದ್ದಾರೆ. ಆದರೆ ಇಂಥ ಉದಾಹರಣೆಗಳು ಕಡಿಮೆ. ಅಹಿತಕರ ಘಟನೆಗಳೇ ಜಾಸ್ತಿ. ಪಂಚಾಯ್ತಿ ಚುನಾವಣೆಯಲ್ಲಿ ಇನ್ನೂ ಕೆಲವು ಸಂಗತಿಗಳು ನಡೆದಿವೆ. ಅಕ್ಕ – ತಂಗಿ ಸ್ಪರ್ಧೆ. ಅದರಲ್ಲಿ ಯಾರಾದರೂ ಒಬ್ಬರು ಗೆಲ್ಲುತ್ತಾರೆ. ಅಲ್ಲಿಗೆ ಈ ಫಲಿತಾಂಶದ ನೆನಪು ಮತ್ತು ಜಿದ್ದು ಇನ್ನು ಕಾಯಂ.

ಅದೇ ರೀತಿ ಅಣ್ಣ ತಮ್ಮಂದಿರ ಸ್ಪರ್ಧೆ, ಮಾವ – ಸೊಸೆ ಹೀಗೆ ಕುಟುಂಬದಲ್ಲೇ ಅಥವಾ ದಾಯಾದಿಗಳೇ ಚುನಾವಣಾ ಜಿದ್ದಿಗಾಗಿ ಸಂಬಂಧ ಕಳಕೊಂಡಿದ್ದಾರೆ, ಹಾಳುಮಾಡಿಕೊಂಡಿದ್ದಾರೆ. ಹಾಗಾದರೆ ಪಂಚಾಯ್ತಿ ಚುನಾವಣೆಯಲ್ಲಿ ಯಾಕಿಷ್ಟು ಜಿದ್ದು? ಯಾಕೆ
ಇಷ್ಟೊಂದು ಫೈಟು ಎಂಬ ಪ್ರಶ್ನೆ ಏಳುವುದು ಸಹಜ. ವಾಸ್ತವವಾಗಿ ಪಂಚಾಯತ್ ರಾಜ್ ವ್ಯವಸ್ಥೆಯ ವಿಚಾರದಲ್ಲಿ ದೇಶಕ್ಕೆ ರಾಜ್ಯದ ಕೊಡುಗೆಯೂ ಇದೆ.

ಕರ್ನಾಟಕದಲ್ಲಿ ಮೂರು ಹಂತದ ಪಂಚಾಯ್ತಿ ವ್ಯವಸ್ಥೆಯ ಬೀಜ ಬಿತ್ತಿದ್ದು ರಾಮಕೃಷ್ಣ ಹೆಗಡೆ ಅವರ ಸರಕಾರದ ಅವಧಿಯಲ್ಲಿ. ಆಗಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ನಜೀರ್ ಸಾಬ್ ಅವರ ಕನಸಿನ ಕೂಸಿದು ಎಂದರೂ ತಪ್ಪಲ್ಲ. ಅದಕ್ಕೆ ಹೆಗಡೆಯವರು ನೀರೆರೆದರು. 1983ರಲ್ಲಿ ರಾಜ್ಯದಲ್ಲಿ ಪಂಚಾಯತ್ ರಾಜ್ ಕಾಯಿದೆಯನ್ನು ರೂಪಿಸಲಾಯಿತು. 1985 ರಲ್ಲಿ ಅದು ಜಾರಿಗೆ ಬಂದಿತು. ಇದಕ್ಕೆ ಸಮಾನಾಂತರವಾಗಿ ಕೇಂದ್ರದಲ್ಲೂ ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಿತು.

ಅಧಿಕಾರ ವಿಕೇಂದ್ರೀಕರಣದ ಉದ್ದೇಶದಿಂದ ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ವಿಧೆಯಕವನ್ನು ತರಲಾಯಿತು. ಆಗಿನ ವಿ.ಪಿ. ಸಿಂಗ್ ಸರಕಾರದ ಸಮಯದಲ್ಲಿ ಲೋಕಸಭೆಯಲ್ಲಿ ಈ ವಿಧೇಯಕ ಪಾಸಾಯಿತಾದರೂ ರಾಜ್ಯಸಭೆಯಲ್ಲಿ ಒಂದು ಮತದ ಕೊರತೆಯಿಂದ ಅನುಮೋದನೆ ಸಿಗಲಿಲ್ಲ. ಅಷ್ಟೊತ್ತಿಗೆ ಸಿಂಗ್ ಅಧಿಕಾರ ಕಳೆದುಕೊಂಡರು. ಬಳಿಕ ಪಿ.ವಿ.ನರಸಿಂಹರಾವ್
ಸರಕಾರ ಬಂದಾಗ ಮತ್ತೆ ಇದಕ್ಕೆ ಜೀವ ಬಂದು, ಎರಡೂ ಸದನಗಳಲ್ಲಿ ಅಂಗೀಕಾರವಾಯಿತು. ಪಂಚಾಯತ್ ರಾಜ್ ಕಾಯಿದೆ ಜಾರಿಗೆ ಬಂದಿದ್ದು ಹೀಗೆ.

ಪಂಚಾಯತ್ ರಾಜ್, ಅಂದರೆ ಸ್ಥಳೀಯ ಮಟ್ಟದ ಆಡಳಿತದ ವಿಚಾರದಲ್ಲಿ ಸ್ಪಷ್ಟ ನಿಯಮಗಳು, ಮಾರ್ಗಸೂಚಿಗಳು ಇರಲಿಲ್ಲ. ಈ ಸಂಸ್ಥೆಗಳು ಬಹುತೇಕವಾಗಿ ರಾಜ್ಯ ಸರಕಾರಗಳ ಹಿಡಿತ ಮತ್ತು ಮರ್ಜಿಯಲ್ಲಿದ್ದವು. ಕಾಲಕಾಲಕ್ಕೆ ಚುನಾವಣೆಗಳು ನಡೆಯು ತ್ತಿರಲಿಲ್ಲ. ಅಥವಾ ಅವಧಿ ಮುಗಿದ ಬಳಿಕವೂ ಆಡಳಿತಾಧಿಕಾರಿಗಳ ಮೂಲಕ ಪರೋಕ್ಷವಾಗಿ ರಾಜ್ಯ ಸರಕಾರಗಳೇ ಅವುಗಳನ್ನು ನಿಯಂತ್ರಿಸುತ್ತಿದ್ದವು. ಆದರೆ ಒಂದೊಮ್ಮೆ ಪಂಚಾಯತ್ ರಾಜ್ ಕಾಯಿದೆ ಜಾರಿಗೆ ಬಂದ ಕೂಡಲೇ ಅವು ಒಂದು ಶಾಸನಬದ್ಧ, ವ್ಯವಸ್ಥಿತ ಸಂಸ್ಥೆಯಾದವು.

ಸರಕಾರದ ಹತೋಟಿ ಸಾಕಷ್ಟು ಕಡಿಮೆಯಾಗಿದೆ. ಅಥವಾ ಬೇರೆ ಮಾತಿನಲ್ಲಿ ಹೇಳಬೇಕಂದರೆ ಪಂಚಾಯ್ತಿಗಳಿಗೆ ಸ್ವತಂತ್ರ ಆಡಳಿತ ಹಾಗೂ ಆರ್ಥಿಕ ಅಧಿಕಾರ ಸಿಕ್ಕಿತು. ಈಗ ಕೇಂದ್ರದಿಂದ ಅವುಗಳಿಗೆ ನೇರವಾಗಿ ಆರ್ಥಿಕ ನೆರವು ಸಿಗುತ್ತದೆ. ಇದರ ಒಟ್ಟಾರೆ
ಅರ್ಥ ಮತ್ತು ಉದ್ದೇಶ ಅಧಿಕಾರ ಮತ್ತು ಆರ್ಥಿಕ ವಿಕೇಂದ್ರೀಕರಣ. ಸ್ವತಂತ್ರ ಆಡಳಿತ ಮತ್ತು ಆರ್ಥಿಕ ನೆರವಿನಿಂದ ಯಾರದೇ ಮರ್ಜಿಗೆ ಕಾಯದೆ ಪಂಚಾಯ್ತಿ ಮಟ್ಟದಲ್ಲಿ ಆಡಳಿತ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿಕೊಂಡು ಹೋಗಬಹು ದಾಗಿದೆ.

ಈಗಿನ ಲೆಕ್ಕದಲ್ಲಿ ರಾಜ್ಯದಲ್ಲಿ ಒಟ್ಟು 5762 ಗ್ರಾಮ ಪಂಚಾಯ್ತಿಗಳಿವೆ. 35,884 ಸದಸ್ಯರು ಚುನಾಯಿತರಾಗಿ ಅವುಗಳ
ಆಡಳಿತವನ್ನು ನಡೆಸಿಕೊಂಡು ಹೋಗುತ್ತಾರೆ. ಈಗಿನ ಅಂದಾಜಿನಲ್ಲಿ ಪ್ರತಿ ಗ್ರಾಮ ಪಂಚಾಯ್ತಿಗೆ ಕನಿಷ್ಠ 35-40 ಲಕ್ಷ ಆದಾಯ ಬರುತ್ತದೆ. ಈ ಹಣದಿಂದ ಆಡಳಿತ ನಡೆಸಬಹುದಾಗಿದೆ. ನಿಜ ಹೇಳಬೇಕೆಂದರೆ ಪಂಚಾಯ್ತಿ ಚುನಾವಣೆಗಳು ಪಕ್ಷಾತೀತವಾಗಿರ ಬೇಕು. ಆದರೆ ವಾಸ್ತವದಲ್ಲಿ ಹಾಗೆ ಆಗುತ್ತಿಲ್ಲ. ನಾನಾ ಪಕ್ಷಗಳ ಬೆಂಬಲಿತರು ಕಣಕ್ಕಿಳಿಯುತ್ತಾರೆ. ಪಕ್ಷದ ಚಿಹ್ನೆ ಇರುವುದಿಲ್ಲ. ಮಿಕ್ಕಂತೆ ಪಕ್ಷಗಳ ನಡುವಿನ ಜಿದ್ದಾಜಿದ್ದಿಇದ್ದೇ ಇರುತ್ತದೆ.

ಈಗಾಗಲೇ ತಿಳಿಸಿರುವಂತೆ ಒಂದು ಪಂಚಾಯ್ತಿಗೆ ಏನಿಲ್ಲವೆಂದರೂ 45 ಲಕ್ಷ ರು. ಅನುದಾನ ಬರುತ್ತದೆ. ಇದರ ಜತೆಗೆ ಕರ ಮತ್ತಿತರ ಮೂಲಗಳಿಂದ ಸಾಕಷ್ಟು ಆದಾಯವೂ ಬರುತ್ತದೆ. ಬಿಡದಿ ಬಳಿಯ ಗ್ರಾಮ ಪಂಚಾಯ್ತಿಯ ಆದಾಯ ಬರೋಬ್ಬರಿ 7 ಕೋಟಿ ರು. ಅಂತೆ. ಇಷ್ಟು ಆದಾಯ ಇರುವ ಗ್ರಾಮ ಪಂಚಾಯ್ತಿಯ ಸದಸ್ಯ, ಅಧ್ಯಕ್ಷ ಸ್ಥಾನ ಯಾರಿಗೆ ಬೇಡ ಹೇಳಿ. ಸಾಕಷ್ಟು ಕಾಮಗಾರಿ ಗಳಿರುತ್ತವೆ. ಬೇಕಾದರೆ (ಬೇಡ ಅನ್ನೋರು ಉಂಟೆ ?!) ಇದರಲ್ಲಿ ಸಾಕಷ್ಟು ಕಮಾಯಿ ಉಂಟು. ಹೀಗಾಗಿಯೇ ಈ ಅಧಿಕಾರದ ಮೇಲೆ ಸಹಜವಾಗಿ ಎಲ್ಲರ ಕಣ್ಣು. ಶಾಸಕರಿಗೆ, ಮಿನಿಸ್ಟರ್‌ಳಿಗೆ ಇಲ್ಲದಿರಬಹುದಾದ ಮರ್ಯಾದೆ ಇವರಿಗೆ ಇರುತ್ತೆ. ಆ ಗ್ರಾಮ, ಗ್ರಾಮ ಪಂಚಾಯ್ತಿಯಲ್ಲಿ ಇವರೇ ರಾಜ – ರಾಣಿ. ಹಣ, ಅಧಿಕಾರ, ದರ್ಪ, ಪ್ರತಿಷ್ಠೆ ಎಲ್ಲಕ್ಕೂ ಇಲ್ಲಿ ಅವಕಾಶಗಳಿವೆ.

ಇವುಗಳನ್ನು ಪಡೆಯಲು ದಾರಿಗಳಿವೆ. ಈ ಭಾಗ್ಯವನ್ನು ಯಾರು ತಾನೇ ಬೇಡ ಎನ್ನುತ್ತಾರೆ ಹೇಳಿ? ಈ ಕಾರಣಕ್ಕಾಗಿಯೇ ತಮ್ಮೆಲ್ಲ ಪ್ರತಿಷ್ಠೆಗಳನ್ನು ಪಣಕ್ಕಿಟ್ಟು ಚುನಾವಣೆಗೆ ಸ್ಪರ್ಧಿಸುತ್ತಾರೆ. ಹಣ, ಶ್ರಮ ಎಲ್ಲವನ್ನೂ ತೊಡಗಿಸಿದ್ದಾರೆ. ಮೇಲೆ ವಿವರಿಸಿದ ಬಿಡದಿ
ಬಳಿಯ ಪಂಚಾಯ್ತಿಗೆ ಸೇರಿದ ಕ್ಷೇತ್ರದಲ್ಲಿ ಪ್ರತಿ ಮತದಾರನಿಗೆ 20 ಸಾವಿರ ರುಪಾಯಿಯಷ್ಟು ಹಣ ನೀಡಲಾಗಿದೆಯಂತೆ. ಅಂದರೆ ಒಬ್ಬೊಬ್ಬ ಅಭ್ಯರ್ಥಿ ಹತ್ತಿರ ಹತ್ತಿರ 1 ಕೋಟಿ ರು. ಇನ್ವೆಸ್ಟ್ ಮಾಡಿದ್ದಾರೆ ಅಂದ ಹಾಗಾಯಿತು.

ಯಾಕೆ ಈ ಇನ್ವೆಸ್ಟ್‌ಮೆಂಟು ಅಂದರೆ ಮುಂದೆ ಬರುವ ರಿಟರ್ನು ಅಂತ. ಉತ್ತರ ಸರಳ, ಸ್ಪಷ್ಟ ಮತ್ತು ನೇರ. ನಾನು ಆರಂಭದಲ್ಲಿ ತಿಳಿಸಿದ ಉದಾಹರಣೆ ಅನ್ನಿ ಅಥವಾ ಘಟನೆ ಎನ್ನಿ – ನಡೆದಿರುವುದು ಈ ಕಾರಣಗಳಿಂದಾಗಿಯೇ. ಫಲಿತಾಂಶದ ಬಳಿಕ ಈ ಪರಿಯ ನೋವು, ಸಂಕಟ, ಬೇಸರ, ಹತಾಶೆ ಆಗುವುದು ಯಾಕೆ ಎಂದು ಗೊತ್ತಾಯಿತಲ್ಲವೆ? ಹಾಗೆಂದು ಎಲ್ಲರೂ ಹೀಗೇ ಇರುತ್ತಾರೆ ಎಂದೇನೂ ಅಲ್ಲ. ಏಕೆಂದರೆ ಅನೇಕ ಕಡೆಗಳಲ್ಲಿ ನಿಜವಾಗಿ ಪಕ್ಷೇತರರು ನಿಂತು ಗೆದ್ದಿದ್ದಾರೆ.

ಸೋತಿರುವವರೂ ಉಂಟು ಬಿಡಿ. ಅಭ್ಯರ್ಥಿಯೊಬ್ಬರು ಸೋತರೂ ಗ್ರಾಮದ ಮನೆ ಮನೆಗಳಿಗೆ ತೆರಳಿ, ‘ಏನಾದರೂ ಸಮಸ್ಯೆ ಇದ್ದರೆ ಹೇಳಿ. ಪರಿಹರಿಸಲು ಪ್ರಯತ್ನಿಸುವೆ’ ಎಂದು ಹೇಳಿದ್ದಾರೆ. ಯಾವುದೋ ಹಳ್ಳಿಯವರು ಒಬ್ಬ ಭಿಕ್ಷುಕನನ್ನು ಕರೆತಂದು ತಾವೇ ಚುನಾವಣೆಗೆ ನಿಲ್ಲಿಸಿದ್ದರು. ಮತ್ತೊಂದು ಹಳ್ಳಿಯಲ್ಲಿ ಎರಡು ಪಕ್ಷದವರೂ ಒಪ್ಪಿ ಏಕೈಕ ಅಭ್ಯರ್ಥಿಯನ್ನು ನಿಲ್ಲಿಸಿದ್ದರು.
ಇವೆಲ್ಲ ಒಳ್ಳೆಯ ಬೆಳವಣಿಗೆಗಳು. ನಿಜವಾದ ಪ್ರಜಾಪ್ರಭುತ್ವದ ಲಕ್ಷಣಗಳು. ಆದರೆ ಇಂಥವು ಬಹಳ ವಿರಳ. ವಿರಸ, ಜಗಳ, ಕದನ, ಹಲ್ಲೆ, ಕೊಲೆ ಹತಾಶೆ ಇವುಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಅಂದರೆ ಸುಸೂತ್ರವಾಗಿ ಆಡಳಿತ ನಡೆಯಲಿ, ಅಧಿಕಾರ ವಿಕೇಂದ್ರೀಕರಣವಾಗಲಿ, ಆಡಳಿತ ಸುಗಮವಾಗಲಿ ಎಂಬ ಉದ್ದೇಶದಿಂದ ಜಾರಿಗೆ ತಂದಿರುವ ಪಂಚಾಯ್ತಿ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬುದನ್ನು ನಾವು ಚಿಂತಿಸಬೇಕಿದೆ. ಇದು ಅಧಿಕಾರಕ್ಕಾಗಿ ಮೇಲಾಟ, ಕಚ್ಚಾಟ, ಹೋರಾಟ ಮಾತ್ರವಲ್ಲದೆ, ಇನ್ನೂ ಆಳವಾದ ಪರಿಣಾಮವನ್ನು ಬೀರುತ್ತಿರುವುದು ಸುಳ್ಳಲ್ಲ. ಇದಕ್ಕೆ ಮೇಲೆ ವಿವರಿಸಿದ ಪ್ರಸಂಗಗಳೇ ಸಾಕ್ಷಿ.

ವಿಧಾನಸಭೆ, ಲೋಕಸಭೆ ಚುನಾವಣೆಗಳಾದರೆ ಅವುಗಳ ವ್ಯಾಪ್ತಿ ದೊಡ್ಡದಾಗಿರುತ್ತದೆ. ಹೀಗಾಗಿ ಸೋಲು ಗೆಲುವಿನಿಂದ ಈ ಪರಿಯ ಪರಿಣಾಮ ಬೀರಲಿಕ್ಕಿಲ್ಲ. ಆದರೆ ಗ್ರಾಮ ಪಂಚಾಯ್ತಿಯಂಥ ಸ್ಥಳೀಯ ಚುನಾವಣೆಯಲ್ಲಿ ಎಲ್ಲರೂ ಎಲ್ಲರನ್ನೂ ಹತ್ತಿರ ದಿಂದ ಬಲ್ಲವರಾಗಿರುತ್ತಾರೆ. ಹೀಗಾಗಿ ಹಗೆತನ, ದುರುಳತನ ಹೆಚ್ಚಾಗಲು ಅವಕಾಶವಿದೆ. ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದಲ್ಲಿ ಆಗಿದ್ದೇನು ನೋಡಿ. ಚುನಾವಣಾ ಫಲಿತಾಂಶದ ಬಳಿಕ ಅದು ಒಂದು ರೀತಿ ಕೊಳಕೂರು ಆಗಿದೆ.

ಏಕೆಂದರೆ ಫಲಿತಾಂಶವು ಗ್ರಾಮಸ್ಥರ ಮನಸ್ಸನ್ನು ಕೊಳಕು ಮಾಡಿದೆ. ಇಲ್ಲಿ ಹಲವು ಪ್ರಶ್ನೆಗಳು ಅಡಗಿವೆ. ಮೂರು ದಶಕಗಳ ಕಾಲ ಊರಿಗೆಲ್ಲ ನೀರುಕೊಟ್ಟ ಆ ನೀರೆಯನ್ನು ಗ್ರಾಮಸ್ಥರು ಸೋಲಿಸಬಹುದೆ ಎಂಬುದು ಆ ಪ್ರಶ್ನೆ. ಹಾಗಾದರೆ ಆ ಸೋಲಿಗೆ ಕಾರಣ ವಾದ ಕಾಣದ ಕೈ ಅಥವಾ ಸಂಗತಿ ಯಾವುದು ? ಹಣವೇ ? ಪ್ರತಿಷ್ಠೆಯೇ ? ಎಂಬುದು ಮತ್ತೊಂದು ಪ್ರಶ್ನೆ. ಒಳ್ಳೆಯವರು ಆಯ್ಕೆ ಯಾದರೆ ಊರಿನ ಜನರ ಸೇವೆ ಮಾಡುತ್ತಾರೆ, ಅಭಿವೃದ್ಧಿ ಮಾಡುತ್ತಾರೆ ಎಂಬುದು ಸಹಜ ನಿರೀಕ್ಷೆ.

ಇವರು ಇಷ್ಟು ಸಮಯದವರೆಗೆ ಹಳ್ಳಿಗೆ ಪುಕ್ಕಟೆಯಾಗಿ, ಕೇಳಿದಷ್ಟು ನೀರು ಕೊಟ್ಟರೆ ಅದಕ್ಕೆ ಪ್ರತಿಯಾಗಿ ಅವರನ್ನು ಜನರು ಆರಿಸಿ ತರಬಾರದಿತ್ತೇ? ಅಷ್ಟು ಕೃತಘ್ನರಾಗಿ ಬಿಟ್ಟರೆ? ಹೋಗಲಿ. ಇತ್ತ ಕಡೆಯಿಂದಲೂ ನೋಡೋಣ. ಹಾಗಾದರೆ ಇಷ್ಟು ವರ್ಷ ನೀರು
ಪೂರೈಸಿದ್ದೇವೆ ಎಂಬ ಕಾರಣಕ್ಕೇನೆ ಅವರನ್ನು ಗೆಲ್ಲಿಸಬೇಕೆ? ಇದೂ ಒಂದು ರೀತಿಯ ಲಂಚ, ಆಮಿಷ ಎನಿಸಲಿಲ್ಲವೆ? ಆಯಿತು. ಒಂದೊಮ್ಮೆ ಸೋಲಾಯಿತು ಎಂದ ಮಾತ್ರಕ್ಕೆ ಅದನ್ನು ಮನಸ್ಸಿನಲ್ಲಿಟ್ಟುಕೊಂಡು ನೀರು ನಿಲ್ಲಿಸುವಷ್ಟರ ಮಟ್ಟಿನ ಹಗೆತನ ಸಾಧಿಸಬಹುದೆ? ಅಥವಾ ಇದು, ‘ನಮಗಾದವರಿಗೆ ನಾವ್ಯಾಕೆ ಆಗಬೇಕು’ ಎಂಬ ಮಾನವ ಸಹಜ ಗುಣವೇ? ಗ್ರಾಮ ಪಂಚಾಯ್ತಿ ಚುನಾವಣೆಗಳು ಈ ರೀತಿ ದ್ವೇಷಾಸೂಯೆ, ಹಗೆತನ, ಹೊಡೆದಾಟ, ಸಂಬಂಧ ಕಡಿತ ಮೊದಲಾದ ಅಪ್ರಿಯ, ಅನಪೇಕ್ಷಿತ, ಅಶಾಂತಿ
ಯ ವಾತಾವರಣ ಸೃಷ್ಟಿಸುವುದೆಂದರೆ ಏನರ್ಥ? ಉತ್ತರವಿಲ್ಲದ ಪ್ರಶ್ನೆಗಳಿವು.

ಆದರೆ ಉತ್ತರ ಹುಡುಕ ಬೇಕಾದ ಪ್ರಶ್ನೆಗಳೂ ಹೌದು. ಇಲ್ಲದಿದ್ದರೆ ಗ್ರಾಮ ಗ್ರಾಮಗಳೂ ಕುರುಕ್ಷೇತ್ರವಾದರೆ, ಅಭಿವೃದ್ಧಿಗೆ
ಮಾರಕ ವಾದರೆ ಗತಿ ಏನು?

ನಾಡಿಶಾಸ್ತ್ರ
ಚುನಾವಣೆಯಿಂದಾಗಬೇಕು ಗ್ರಾಮಮಂಗಳ
ಅವು ಮಾರ್ಪಟ್ಟರೆ ಹೇಗೆ ಕದನದಂಗಳ
ಆಗಲಿ ಅಽಕಾರ, ಪ್ರಗತಿಯ ವಿಕೇಂದ್ರೀಕರಣ
ಆಗದಿರಲಿ ಪ್ರತಿಷ್ಠೆ, ಅಶಾಂತಿಯ ತಾಣ.