Saturday, 14th December 2024

ಆಡಂಬರದ ಮದುವೆ ; ಬೇಕೆ ಅದರ ಗೊಡವೆ ?

ನಾಡಿಮಿಡಿತ

ವಸಂತ ನಾಡಿಗೇರ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು ನೇರ, ನಿಷ್ಠುರ ಮಾತು. ವಿಧಾನಸಭೆಯಲ್ಲಿ, ಹೊರಗೆ ಅವರು ಮಾಡುವ ರಾಜಕೀಯ ಭಾಷಣಗಳು ಬೇರೆ. ಆದರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅನೇಕ ಸಂದರ್ಭಗಳಲ್ಲಿ ಅವರು ಆಡುವ ಮಾತುಗಳು ಅನೇಕ ಬಾರಿ ಮಾರ್ಮಿಕವಾಗಿರುತ್ತವೆ, ಮನಮುಟ್ಟು ವಂತಿರುತ್ತವೆ, ನಮ್ಮನ್ನು ಚಿಂತನೆಗೆ ಹಚ್ಚಿಸು ವಂತಿರುತ್ತವೆ.

ಈಚೆಗೆ ಅಂಥದೇ ಒಂದು ಭಾಷಣದ ವಿಡಿಯೊ ಎಲ್ಲೆಡೆ ಹರಿದಾಡಿದ್ದನ್ನು ಸಾಕಷ್ಟು ಜನರು ಗಮನಿಸಿರುತ್ತಾರೆ. ಆ ಭಾಷಣವನ್ನು ಪೂರ್ತಿಯಾಗಿ ಕೇಳಿದಾಗ, ’ಹೌದಲ್ವೆ’ ? ಎಂಬ ಭಾವನೆ ಯಾರಿಗಾದರೂ ಬರುತ್ತದೆ. ಅದೊಂದು ಸಾಮೂಹಿಕ ವಿವಾಹ ಕಾರ್ಯಕ್ರಮ. ಅಲ್ಲಿ ಸಿದ್ದರಾಮಯ್ಯ ಅವರು ಮಾಡಿದ ಭಾಷಣವದು. ಅಲ್ಲಿ ಅವರು ಆಡಿದ ಮಾತುಗಳ ಸಾರ ಹೇಳುವುದಾದರೆ: ‘ಕರೋನಾ ಬಂದಾಗ ಒಂದು ರೀತಿ ಒಳ್ಳೆಯದಾಗಿತ್ತು.

ಆಗ ಮದುವೆ ಕಾರ್ಯಕ್ರಮಗಳಿಗೆ 50-100ಕ್ಕಿಂತ ಹೆಚ್ಚು ಜನರು ಬರುವಂತಿಲ್ಲ ಎಂಬ ನಿರ್ಬಂಧ ಇತ್ತು. ಅದನ್ನೇ  ಮುಂದು ವರಿಸಬೇಕಿತ್ತು. ಆದರೆ ಈಗ ಮತ್ತೆ ಶುರುವಾಗಿಬಿಟ್ಟಿದೆ. ಸಾವಿರಾರು ಜನರು ಪಾಲ್ಗೊಳ್ಳುತ್ತಾರೆ. ದುಡ್ಡಿರುವ ಗಿರಾಕಿಗಳು ಸಂಪತ್ತಿನ ಪ್ರದರ್ಶನ ಮಾಡ್ತಾರೆ. ಮದುವೆಗೆ ಒಬ್ಬರು 5 ಕೋಟಿ ಖರ್ಚು ಮಾಡಿದರೆ, ಇನ್ನೊಬ್ಬರು 10 ಕೋಟಿ ವೆಚ್ಚ ಮಾಡುತ್ತಾರೆ.

ಅಲ್ಲಿನ ಊಟದ ಮೆನು ನೋಡಬೇಕು. 30 ಥರ ಐಟಮ್ ಮಾಡಿಸಿರುತ್ತಾರೆ. ರುಚಿನೂ ನೋಡಕ್ಕಾಗಲ್ಲ. ದರಿದ್ರ. ಕಾಲುಭಾಗ ವನ್ನು ಕೂಡ ಯಾರೂ ತಿನ್ನಲ್ಲ. 70 ಪರ್ಸೆಂಟ್ ವೇಸ್ಟ್. ನಾನು ನಮ್ಮ ಕುಟುಂಬದಲ್ಲಿ ಸಾಕಷ್ಟು ಮದುವೆ ಮಾಡಿದ್ದೇನೆ. ಆದರೆ ಊರು ಬಿಟ್ಟು ಆಚೆಗೆ ಬಂದು ಮಾಡಿಲ್ಲ. ಹಳೆ ಕಾಲದಲ್ಲಿ ಮನೆ ಮುಂದೆ ಚಪ್ಪರ ಹಾಕಿ ಮದುವೆ ಮಾಡುತ್ತಿದ್ದರಲ್ಲ. ಹಾಗೇ ಮಾಡಿದ್ದು. ಮೊದಲೆಲ್ಲ ಮದುವೆ ಅಂದರೆ ಅನ್ನ ಸಾರು, ಒಂದು ಪಲ್ಯ ಇರೋದು. ಮೇಲೊಂದು ಹಪ್ಪಳ. ಅಲ್ಲಿಗೆ ಮುಗಿದು ಹೋಯಿತು. ಈಗ ಅದೇನು ಆಡಂಬರ, ಅದ್ಧೂರಿ.

ನೋಡಿದರೆ ಬೇಜಾರಾಗುತ್ತದೆ.’ ಸಿದ್ದರಾಮಯ್ಯ ಅವರು ಬಹುಶಃ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಈ ಮಾತುಗಳನ್ನು
ಹೇಳಿದ್ದು. ಪ್ರಾಸಂಗಿಕ ನುಡಿಗಳೂ ಆಗಿರಬಹುದು. ಅಥವಾ ಮನದಾಳದ ಮಾತುಗಳೂ ಅವಾಗಿರಬಹುದು. ಏನಾದರೂ ಆಗಿರಲಿ. ಆದರೆ ಅವರ ಮಾತುಗಳಲ್ಲಿನ ಸತ್ಯವನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು.

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಮಾತೊಂದಿದೆ. ಈ ಗಾದೆ ಮಾತುಗಳನ್ನು ಸುಮ್ಮ ಸುಮ್ಮನೆ ಮಾಡಿದ್ದಲ್ಲ. ಅವು ಅನುಭವದ ಮಾತುಗಳು. ಮನೆ ಕಟ್ಟುವುದು ಹಾಗೂ ಮದುವೆ ಮಾಡುವುದು ಎಷ್ಟು ಕಷ್ಟದ ಕೆಲಸ ಎಂಬುದನ್ನು ಈ ಗಾದೆಯಲ್ಲಿ ಸೂಚ್ಯವಾಗಿ ಹೇಳಲಾಗಿದೆ. ಮನೆ ಕಟ್ಟದೆಯೂ ಇರಬಹುದು. ಕೆಲವರು ಬಾಡಿಗೆ ಮನೆಯಲ್ಲೇ ಜೀವನ ಕಳೆದು ಬಿಡುತ್ತಾರೆ. ಆದರೆ ಮದುವೆ ಮಾಡುವುದು ಮತ್ತು ಮಾಡಿಕೊಳ್ಳುವುದನ್ನು ಬಹುತೇಕವಾಗಿ ತಪ್ಪಿಸಿಕೊಳ್ಳಲಾಗದು. ಕೆಲವರು ಕಾರಣಾಂತರಗಳಿಂದ ಅವಿವಾಹಿತರಾಗಿ ಉಳಿಯುತ್ತಾರೆ. ಅಂಥವರು ಅಪವಾದ.

‘ಕಾರ್ ಕಾರ್ ಎಲ್ನೋಡಿ ಕಾರ್ ಎಂಬ ಹಾಡಿನಲ್ಲಿ, ‘ಸಾಲ ಮಾಡಿ ಮದುವೆ ಆಯ್ತಾರೆ,..’ ಎಂಬ ಸಾಲಿದೆ. ಅದು ನಿಜ. ಆದರೆ ಈ ಪರಿಸ್ಥಿತಿ ಏಕೆ ಬಂತು ಮತ್ತು ಬರುತ್ತದೆ ಎಂಬುದನ್ನು ಸ್ವಲ್ಪವಾದರೂ ಆಲೋಚಿಸಲೇಬೇಕು. ’ಮದುವೆಯ ಈ ಬಂಧ ಎಂಬ
ಹಾಡಿನಲ್ಲೂ ಮದುವೆಯ ಬಗ್ಗೆ ಪ್ರಸ್ತಾಪವಿದೆ. ಏಳೇಳು ಜನುಮದಲಿ ತೀರದ ಸಂಬಂಧ ಎಂದೂ ಅದನ್ನು ಬಣ್ಣಿಸಲಾಗಿದೆ.

ಹೀಗಾಗಿ ಮದುವೆ ಎಂಬುದು ಒಂದು ವಿಶಿಷ್ಟವಾದ ಬಂಧ, ಅನುಬಂಧ. ಅದೇ ಹಾಡಿನಲ್ಲಿ ಮುಂದೆ, ‘ಸೊಗಸಾದ ಮಾತು ಸವಿಯಾದ ಊಟವಿರಲಿ,” ಎಂಬ ಚರಣವಿದೆ. ಹೌದು. ಮದುವೆಯ ತಿರುಳು ಇದೇನೇ. ಅದೊಂದು ಸಾಮಾಜಿಕ ಕಾರ್ಯಕ್ರಮ. ’ಸೋಷಿಯಲ್ ಗ್ಯಾದರಿಂಗ್’ ಎನ್ನುತ್ತಾರಲ್ಲ ಹಾಗೆ. ಹಾಗೆಂದು ಇದು ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ನಡೆದು ಕೊಂಡುಬಂದಿದೆ. ಬಂಧು ಬಾಂಧವರು ಒಟ್ಟಿಗೆ ಸೇರಿ, ನಲಿಯಲು ಅವಕಾಶ ನೀಡುವಂಥ ಕಾರ್ಯಕ್ರಮ. ನಾವು ಚಿಕ್ಕವರಿದ್ದಾಗ ಮದುವೆ ಕಾರ್ಯಕ್ರಮಗಳು ವಾರಗಟ್ಟಲೆ, ತಿಂಗಳುಗಟ್ಟಲೆ ನಡೆಯುತ್ತಿದ್ದವು. ಅದಕ್ಕೆ ಕಾರಣಗಳೂ ಇದ್ದವು. ಆಗೆಲ್ಲ ಈಗಿನಂತೆ ಸಾರಿಗೆ ಸೌಕರ್ಯಗಳಿರಲಿಲ್ಲ.

ಸಾಮಾನು ಸರಂಜಾಮುಗಳ ಸೌಲಭ್ಯವೂ ಅಷ್ಟಾಗಿ ಇರಲಿಲ್ಲ. ಕಲ್ಯಾಣ ಮಂಟಪಗಳೂ ಇತ್ತೀಚಿನ ಕಲ್ಪನೆಗಳೇ. ಮನೆಯಲ್ಲೆ ಮದುವೆಗಳು ನಡೆಯುತ್ತಿದ್ದವು. ಪ್ರತಿದಿನವೂ ನಾನಾ ವಿಧದ ಕಾರ್ಯಕ್ರಮಗಳಿರುತ್ತಿದ್ದವು. ಅವುಗಳಿಗೆಲ್ಲ ತಯಾರಿ ಆಗಬೇಕಿತ್ತು.
ಹೀಗಾಗಿಯೂ ಬಂಧುಗಳು ಸಾಕಷ್ಟು ಮೊದಲೇ ಸೇರುತ್ತಿದ್ದರು. ಎಲ್ಲರೂ ಸೇರಿ ಕೆಲಸಗಳನ್ನು ಹಂಚಿಕೊಂಡು ಮಾಡುತ್ತಿದ್ದರು. ಇದರ ನಡುವೆಯೇ ಹಳೆಯ ನೆನಪುಗಳ ಸುಖ ದುಃಖಗಳ ಮೆಲುಕೂ ನಡೆಯುತ್ತಿದ್ದವು.

ಆದರೆ ಬರಬರುತ್ತ ಕಾಲ ಬದಲಾದಂತೆ ನಮ್ಮ ಮನೋಭಾವವೂ, ಜೀವನಶೈಲಿಯೂ ಬದಲಾಯಿತು. ನಾನಾಬಗೆಯ ಅನುಕೂಲಗಳಾದವು. ಜನರ ಕೈಯಲ್ಲಿ ಕಾಸು ಆಡತೊಡಗಿತು. ಅವಿಭಕ್ತ ಕುಟುಂಬಗಳು ಕ್ಷೀಣಿಸತೊಡಗಿದವು. ಯಾರಿಗೂ ಟೈಮ್
ಇಲ್ಲದಾಯಿತು. ಆಗಲೇ ಈ ಕಲ್ಯಾಣ ಮಂಟಪಗಳು ತಲೆ ಎತ್ತಿದ್ದು. ಅವುಗಳ ಬಾಡಿಗೆಯೇ ಲಕ್ಷಾಂತರ ರುಪಾಯಿ ಆಗುತ್ತದೆ. ಮೊದಲೆಲ್ಲ ಒಳ್ಳೆಯ ಮುಹೂರ್ತದಲ್ಲಿ ಮದುವೆ ಮಾಡುತ್ತಿದ್ದರು. ಆದರೆ ಈಗ ಕಲ್ಯಾಣ ಮಂಟಪ ಸಿಕ್ಕ ದಿನಾಂಕಕ್ಕೆ ಮದುವೆ ಯನ್ನು ಹೊಂದಿಸಿಕೊಳ್ಳಬೇಕಾಗಿದೆ. ಹೀಗಾಗಿ ಎರಡು ದಿನದ ಮಟ್ಟಿಗೆ ಛತ್ರ ಬುಕ್ ಮಾಡುವುದು ಮೊದಲಾಯಿತು.

ಕೊನೆಕೊನೆಗೆ ದುಬಾರಿ ಎಂದು ಒಂದು ದಿನಕ್ಕೇ ಮದುವೆ ಮುಗಿಸುವ ಪದ್ಧತಿ ಶುರುವಾಯಿತು. ಮನೆಯಲ್ಲಿ ಮದುವೆ ಮಾಡಲು
ಅನುಕೂಲ ಇಲ್ಲ ಎಂಬ ಕಾರಣಕ್ಕೆ ಕಲ್ಯಾಣ ಮಂಟಪ ಗಳಲ್ಲಿ ಮದುವೆ ಆರಂಭವಾಗಿದ್ದು, ಬರಬರುತ್ತ ಅದು ಅನಿವಾರ್ಯ ಎನಿಸತೊಡಗಿತು. ಅದರ ಖರ್ಚೇ ಲಕ್ಷಾಂತರ ರುಪಾಯಿ ಆಗುತ್ತದೆ. ಮದುವೆಯಲ್ಲಿ ಹತ್ತಾರು ಶಾಸ್ತ್ರ, ಸಂಪ್ರದಾಯಗಳೆಲ್ಲ
ಇರುತ್ತಿದ್ದವು. ಆದರೆ ಈಗ ಅದೆಲ್ಲ ಗೌಣ. ರಿಸೆಪ್ಷನ್ ಗಷ್ಟೇ ಪ್ರಾಶಸ್ತ್ಯ. ಅಲ್ಲಿನ ವೈಭವ, ಆಡಂಬರ ನೋಡಬೇಕು. ಸೂಟು ಬೂಟು, ಕುರ್ತಾ ಗಿರ್ತಾ ಅಂತ ಏನೇನೋ ಬಟ್ಟೆಗಳು.ಅವೆಲ್ಲ ಬಲು ದುಬಾರಿಯವು.

ಇನ್ನು ಒಡವೆ ಬಗ್ಗೆ ಹೇಳುವುದೇ ಬೇಡ. ಚಿನ್ನ, ವಜ್ರದ ಆಭರಣಗಳು ಮಿರಮಿರ ಮಿಂಚುತ್ತಿರುತ್ತವೆ. ಅದೇ ರೀತಿ ಮಹಿಳೆಯರ ಅಲಂಕಾರಕ್ಕೆ ಕೊನೆಯೇ ಇರುವುದಿಲ್ಲ. ರಿಸೆಪ್ಷನ್ 7 ಗಂಟೆಗೆ ಎಂದು ಹೇಳಿರುತ್ತಾರೆ. 8 ಗಂಟೆಯಾದರೂ ವಧು ವರರೇ
ಬಂದಿರುವುದಿಲ್ಲ. ಕಾರಣ ಅವರು ಪಾರ್ಲರ್‌ಗೆ ಹೋಗಿರುತ್ತಾರೆ. ಈಗೀಗಂತೂ ಪಾರ್ಲರ್‌ನವರೇ ಮದುವೆ ಮಂಟಪಕ್ಕೆ ಬರುತ್ತಾರೆ. ಮೇಕಪ್ ಮುಗಿಯುವ ಹೊತ್ತಿಗೆ ಟೈಮ್ ಅಪ್ ಆಗಿರುತ್ತದೆ. ಜನರು ಕಾದಿದ್ದೇ ಕಾದಿದ್ದು. ಆದರೆ ಇದು ಆರ್ಡರ್
ಆಫ್ ದಿ ಡೇ. ಮದುವೆ ಎಂದರೆ ಹೋಳಿಗೆ ಊಟ ಎನ್ನುವಂತಿತ್ತು.

ಅದನ್ನೂ ಮನೆಯವರೇ ಮಾಡುತ್ತಿದ್ದರು. ಆದರೆ ಈಗ ಹೋಳಿಗೆ ಇರುವುದೇ ಅಪರೂಪ. ಇದ್ದರೂ ಅದರಲ್ಲೂ ಹತ್ತಾರು ಬಗೆ. ಆ ಹೋಳಿಗೆ, ಈ ಹೋಳಿಗೆ ಎಂದು ನಾನಾ ಬಗೆ. ‘ವಿವಾಹ ಭೋಜನಗಳಿವು, ವಿಚಿತ್ರ ಭಕ್ಷ್ಯಗಳಿವು..’ ಎಂಬ ಹಾಡು ಈಗ ನಿಜಾರ್ಥ ಪಡೆದುಕೊಂಡಿದೆ. ಹಾಡಿನಲ್ಲಿರುವಂತೆ ಐಟಂಗಳು ಇರಲಿಕ್ಕಿಲ್ಲ. ಆದರೆ ಅಷ್ಟು ಬಗೆಯ ಮೆನುಗಳಂತೂ ಇರುತ್ತವೆ. ಇವನ್ನೆಲ್ಲ ಮನೆಯಲ್ಲಿ ಮಾಡಲು ಸಾಧ್ಯವೇ? ಅದಕ್ಕಾಗಿಯೇ ಕೇಟರರ್‌ಗಳು ಹುಟ್ಟಿಕೊಂಡರು.

ಕಲ್ಯಾಣ ಮಂಟಪದಲ್ಲಿ ಡೈನಿಂಗ್ ಹಾಲ್ ಇರುತ್ತಿತ್ತು. ಅಲ್ಲಿ ಲಕ್ಷಣವಾಗಿ ಬಾಳೆ ಎಲೆಯಲ್ಲಿ ಊಟ ಬಡಿಸುತ್ತಿದ್ದರು. ಈಗ ಅದೂ ಇದೆ. ಆದರೆ ಅದಕ್ಕಿಂತ ಹೆಚ್ಚಾಗಿ ರಿಸೆಪ್ಷನ್ ಊಟದ ಹಾವಳಿ ಜೋರಾಗಿದೆ. ಅಲ್ಲಿ ಬುಫ್ ವ್ಯವಸ್ಥೆ. ಒಳ್ಳೇ ಹೋಟೆಲ್ ವಾತಾ ವರಣ. ಅಥವಾ ಮಾಲ್‌ಗಳಲ್ಲಿ ಫುಡ್ ಕೋರ್ಟ್ ಇರುತ್ತವಲ್ಲ. ಆ ಥರ. ಅಲ್ಲಿ ಏನುಂಟು ಏನಿಲ್ಲ? ವೆಲ್ ಕಮ್ ಡ್ರಿಂಕ್, ಸೂಪು, ಚಾಟ್ಸ್ ಒಂದೇ ಎರಡೇ? ದೋಸೆಯೂ ಉಂಟು, ರೋಟಿಗಳೂ ಉಂಟು. ಅದಕ್ಕೆ ನಾನಾಥರದ ಕರಿಗಳು ಕೈಬೀಸಿ ಕರೆಯುತ್ತಿರುತ್ತವೆ. ಅನ್ನ ಸಾರಿಗೂ ಸೈ. ಹೊಟ್ಟೆ ಬಿರಿಯ ಬಿರಿಯಾನಿಗಳಿಗೂ ಜೈ.

ನಾಲಿಗೆ ಕಟ್ಟುವಷ್ಟು ಸ್ವೀಟುಗಳು. ಹಣ್ಣು ಹಂಪಲು, ತರಕಾರಿ, ಐಸ್‌ಕ್ರೀಮು, ಡೆಸರ್ಟು, ಪಾನು. ಅಬ್ಬಬ್ಬಾ. ಸಿದ್ದರಾಮಯ್ಯ ಅವರು ಹೇಳಿದಂತೆ ಯಾರು ಏನನ್ನು ತಿನ್ನುತ್ತಾರೋ ಬಿಡುತ್ತಾರೊ ಅವರಿಗೇ ಗೊತ್ತು. ಇಂಥ ಹಾಳು ಮೂಳು ಊಟದಲ್ಲಿ ಹಾಳಾಗುವುದೇ ಹೆಚ್ಚು. ಇದೇ ಕಾರಣಕ್ಕಾಗಿ ಊಟದ ಬಿಲ್ಲೂ ಆಗಸದೆತ್ತರ ಬೆಳೆದಿರುತ್ತದೆ. ಭಾಷೆ ಮತ್ತಿತರ ವಿಚಾರದಲ್ಲಿ ಉತ್ತರ – ದಕ್ಷಿಣ ಎಂದು ಬಡಿದಾಡುತ್ತೇವೆ. ಆದರೆ ಈ ಊಟ,ನೋಟಗಳ ವಿಷಯದಲ್ಲಿ ನಮಗೆ ಯಾವುದೇ ಮಡಿವಂತಿಕೆ ಇಲ್ಲ.

ಈಗಾಗಲೇ ಹೇಳಿರುವಂತೆ ಬಹಳ ಹಿಂದೆ ವಾರಗಟ್ಟಲೆ ಮದುವೆ ಕಾರ್ಯಕ್ರಮಗಳಿರುತ್ತಿದ್ದವು. ಕ್ರಮೇಣ ಅದು ದಿನ, ಅರ್ಧ ದಿನಕ್ಕೆ ಇಳಿಯಿತು. ಆದರೆ ಈಗ ಮತ್ತೆ ದೀರ್ಘಗೊಳ್ಳುತ್ತಿವೆ. ಹೊಸ ಹೊಸ ಸಂಪ್ರದಾಯ ಗಳು ಸೇರಿಕೊಳ್ಳುತ್ತಿವೆ. ಉತ್ತರದ ಕಡೆ ಮೆಹಂದಿ, ಸಂಗೀತ್ ಮುಂತಾದ ಕಾರ್ಯಮಗಳಿರುತ್ತವಲ್ಲ. ಅವೆಲ್ಲ ನಮ್ಮಲ್ಲೂ ಲಗ್ಗೆ ಇಟ್ಟಿವೆ. ಕುದುರೆ ಮೇಲೆ ಕುಳಿತು ಮೆರವಣಿಗೆಯಲ್ಲಿ ಬರುವ ಬಾರಾತ್ ಎಂಬ ಸಂಪ್ರದಾಯವನ್ನೂ ಬರಸೆಳೆದು ಅಪ್ಪಿಕೊಂಡಿದ್ದೇವೆ.

ಮನೆಯಲ್ಲಿ ಅನುಕೂಲ ಇಲ್ಲ ಎಂಬ ಕಾರಣಕ್ಕೆ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡುವ ರೂಢಿ ಬಂದಮೇಲೆ ಅದರಲ್ಲೂ ಸಾಕಷ್ಟು ಸುಧಾರಣೆ, ಬದಲಾವಣೆಗಳಾದವು. ಛತ್ರಗಳು ಕನ್ವೆಷನ್ ಹಾಲ್‌ಗಳಿಗೆ ದಾರಿ ಮಾಡಿಕೊಟ್ಟಿವೆ. ವಿಶಾಲ ಸಭಾಂಗಣ, ಎಸಿ ವ್ಯವಸ್ಥೆ-ಹೀಗೆ ಏನುಂಟು ಏನಿಲ್ಲ. ಆ ಡೆಕೊರೇಶನ್ ನೋಡಿದರೆ ಕಣ್ಣು ಕುಕ್ಕುವಂತಿರುತ್ತದೆ. ಕೆಲವೊಮ್ಮೆ ಹೊಟ್ಟೆ ಉರಿಯುತ್ತದೆ.
ಅಷ್ಟು ಅದ್ಧೂರಿಯಾಗಿರುತ್ತದೆ. ಈಗೀಗ ಮದುವೆಯ ಲೊಕೇಶನ್ ರೆಸಾರ್ಟ್‌ಗೆ ಶಿಫ್ಟ್ ಆಗಿದೆ. ಇನ್ನು, ಮದುವೆಯ ನೆನಪು ಇರಲಿ ಎಂದು ಆಗ ಫೋಟೊ ತೆಗೆಯುತ್ತಿದ್ದರಷ್ಟೆ.

ಕ್ರಮೇಣ ವಿಡಿಯೋ ಶುರುವಾಯಿತು. ಈಗ ಡ್ರೋನ್ ಕ್ಯಾಮೆರಾ, ಪ್ರೀವೆಡ್ಡಿಂಗ್ ಫೋಟೊ ಶೂಟ್‌ವರೆಗೆ ಬಂದು ನಿಂತಿದೆ.
ಉಡುಗೊರೆಯದು ಮತ್ತೊಂದು ಕಥೆ. ಬಂದಿರುವ ಉಡುಗೊರೆಗಳನ್ನು ಸೇರಿಸಿ ಒಂದು ಗಿಫ್ಟ್ ಶಾಪ್ ಓಪನ್ ಮಾಡಬಹುದೇನೊ. ಈಗ ರಿಟರ್ನ್ ಗಿಫ್ಟ್ ಸಂಸ್ಕೃತಿ ಹೊಸ ಸೇರ್ಪಡೆ. ಹೀಗೆ ಎಲ್ಲವೂ ಸಂಕಲನವೇ. ವ್ಯವಕಲನ ಎಂದರೆ ಬಹುಶಃ ಆಚಾರ ವಿಚಾರ, ಸಂಪ್ರದಾಯ, ಪ್ರೀತಿ, ಆದರಾಥಿತ್ಯ ಇರಬಹುದೇನೋ. ಹಾಗೆ ನೋಡಿದರೆ, ಸರಳ ವಿವಾಹ ಪದ್ಧತಿಯೂ ಮೊದಲಿನಿಂದಲೂ ಇದೆ.
ಮಂತ್ರ ಮಾಂಗಲ್ಯ, ಸಾಮೂಹಿಕ ವಿವಾಹ ಇತ್ಯಾದಿ ಗಳೂ ಜಾರಿಯಲ್ಲಿವೆ.

ಆದರೆ ಈಗಿನ ಜಮಾನಾದಲ್ಲಿ ಅವನ್ನೆಲ್ಲ ಮಾಡಿಕೊಳ್ಳುವವರು ಒಂದೋ ಆದರ್ಶವಾದಿಗಳು, ಇಲ್ಲವೇ ಅನುಕೂಲ ಇಲ್ಲದವರು
ಎನ್ನುವಂತಾಗಿದೆ. ಅನುಕೂಲ ಇದ್ದವರೂ ಸರಳ ವಿವಾಹಕ್ಕೆ ಮುಂದಾದರೆ ಆಡಿಕೊಳ್ಳುವ ಮಟ್ಟಕ್ಕೆ ನಾವು ಬಂದು ನಿಂತಿದ್ದೇವೆ.
‘ಆಸ್ತಿ – ಅಂತಸ್ತು ಇದೆ. ನಾವು ಹೇಗೆ ಬೇಕೊ ಹಾಗೆ ಮದುವೆ ಮಾಡುತ್ತೇವೆ. ಅದರಲ್ಲೇನು ತಪ್ಪು’ ಎಂಬ ವಾದವೂ ಬರಬಹುದು. ಅವರ ಹಣ, ಅವರ ಇಷ್ಟ, ಅವರ ಮರ್ಜಿ ಎನ್ನುವುದೇನೋ ಸರಿ. ಎಲ್ಲರೂ ಸರಳ ವಿವಾಹವೇ ಆಗಬೇಕು ಎಂಬ ಕಾನೂನು ಕಡ್ಡಾಯವೇನೂ ಇಲ್ಲ. ಆದರೆ ಇದು ಹೀಗೆಯೇ ಮುಂದುವರಿದರೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನೂ ನಾವು ಗಮನಿಸ ಬೇಕು.

ಹಣವಂತರು ಹೀಗೆ ನೀರಿನಂತೆ ಹಣ ಖರ್ಚು ಮಾಡಿ ವೈಭವೋಪೇತ ಮದುವೆ ಮಾಡಿದರೆ ಅದರ ಪರಿಣಾಮ ಇತರರ ಮೇಲೂ ಆಗುತ್ತದೆ. ಹಣ ಇಲ್ಲದವರು ಕೂಡ, ತಾವೂ ಇದೇ ರೀತಿ ಧೂಂ ಧಾಂ ಎಂದು ಮದುವೆ ಮಾಡಬೇಕು ಎಂಬ ಆಸೆ, ಹುಸಿ ಪ್ರತಿಷ್ಠೆಗೆ ಬೀಳಬಹುದು. ಇದನ್ನು ಈಡೇರಿಸಲು ಅಥವಾ ವರನ ಕಡೆಯವರ ಒತ್ತಾಯಕ್ಕೆ ಬಿದ್ದು ಹೀಗೇ ಮಾಡಲು ಮುಂದಾಗ ಬಹುದು.
ಅಥವಾ ಮದುವೆ ಯಾಗುವ ಮಗಳೇ ಇಂಥದೊಂದು ಡಿಮಾಂಡ್ ಇಡಬಹುದು. ಆಗ ಅನಿವಾರ್ಯವಾಗಿ ಸಾಲ ಸೋಲ ಮಾಡಬೇಕಾಗುತ್ತದೆ. ಹೀಗೆ ಇದು ಅನಿವಾರ್ಯ ಅನಿಷ್ಟ, ಶಾಪ ಎಂಬಂತಾಗಿದೆ.

ಮೇಲರಿಮೆ, ಕೀಳರಿಮೆ ಎಲ್ಲಕ್ಕೂ ಕಾರಣವಾಗುತ್ತಿದೆ. ಹಾಗೆಂದು ಸಕಲ ಅನುಕೂಲ ಇದ್ದಾಗ್ಯೂ ಸಹ ಸರಳವಾಗಿ ಅಥವಾ ಅಷ್ಟೆನೂ ಆಡಂಬರವಿಲ್ಲದೆ ಮದುವೆ ಮಾಡುವಂಥ ಸಾಕಷ್ಟು ಜನರೂ ಇದ್ದಾರೆ. ಮಾಜಿ ಸಚಿವರೊಬ್ಬರು ತಮ್ಮ ಮಕ್ಕಳ
ಮದುವೆಯನ್ನು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲೆ ಮಾಡಿದ ನಿದರ್ಶನ ಇದೆ. ಕಾಯಿದೆ ಕಾನೂನು ಬೇರೆ. ಆದರೆ ಮದುವೆ ನೆಪದಲ್ಲಿ ಶ್ರೀಮಂತಿಕೆಯ ಅಸಹ್ಯ ಪ್ರದರ್ಶನ ಬೇಕೆ ಎಂಬ ಪ್ರಶ್ನೆಯಂತೂ ಈಗ ಎಂದಿಗಿಂತ ಹೆಚ್ಚು ಪ್ರಸ್ತುತವಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಗಂಭೀರ ವಾಗಿ ಯೋಚಿಸಬೇಕಾದ ಕಾಲವಿದು. 

ನಾಡಿಶಾಸ್ತ್ರ
ತಾಳಿಕಟ್ಟಿ ತುಳಿಯಲು ಸಪ್ತಪದಿ
ಏಕೆ ಈ ಪರಿಯ ಅಂಧಾದುಂದಿ
ಇರಲಿ ಪ್ರತಿಷ್ಠೆಯ ಮೇಲೆ ಹಿಡಿತ
ತರವಲ್ಲ ಈ ನಡೆ ಎಂಬ ಸಂಹಿತ