Tuesday, 30th May 2023

ಗ್ಯಾರೆಂಟಿ 2ಎ, ಬೆಲೆ ಇಳಿಕೆ, 0% ಸರಕಾರ !

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಕರ್ನಾಟಕದ ಚುನಾವಣೆ ಪ್ರಚಾರದ ಎಲ್ಲ ವೇದಿಕೆಗಳಲ್ಲೂ ಪ್ರಧಾನಿ ಮೋದಿಯವರು ‘ಕರ್ನಾಟಕವನ್ನು ನಂಬರ್ ಒನ್ ರಾಜ್ಯ ವನ್ನಾಗಿ ಮಾಡುತ್ತೇವೆ’ ಎಂದು ಸಾರಿಸಾರಿ ಹೇಳಿದ್ದರು. ಆದರೆ ಮತದಾರರಿಗೆ ರಾಜ್ಯ-ದೇಶದ ಅಭಿವೃದ್ಧಿಗಿಂತ ದಿಢೀರ್ ಗ್ಯಾರೆಂಟಿಗಳೇ ಅನಿವಾರ್ಯ ಗಳಾಗಿ ಕಂಡವು. ಇರಲಿ ಜನಾದೇಶವೆಂಬುದು ಯಾರಪ್ಪನ ಸ್ವತ್ತಲ್ಲ.

ಅದು ಮತದಾರ ಪಡೆದಿರುವ ಹಕ್ಕು. ಶ್ರೀಲಂಕಾ, ಪಾಕಿಸ್ತಾನದಂಥ ದೇಶಗಳಲ್ಲದೇ, ದೇಶದೊಳಗಿರುವ ಉಚಿತ ಘೋಷಣೆಯ ರಾಜ್ಯಗಳ ಆರ್ಥಿಕ ಪರಿಸ್ಥಿತಿಗಳೇನಾಗುತ್ತಿದೆ, ಏನಾಗಲಿದೆ ಎಂಬುದು ಭವಿಷ್ಯದ ಬಗ್ಗೆ ಆಲೋಚಿಸುವ ನಾಯಕರಿಗೆ ಗೊತ್ತೇ ವಿನಃ ಕೇವಲ ಅಧಿಕಾರ, ಸ್ವಪ್ರತಿಷ್ಠೆ, ತೆವಲುಗಳಿಗಾಗಿ ಏನುಬೇಕಾದರೂ ಮಾಡಿಬಿಡುವಂಥ ಅಪಾಯಕಾರಿ ರಾಜಕಾರಣಿಗಳೇಗೇನು ಗೊತ್ತು? ಅದು ಎಲ್ಲ ಮತದಾರರಿಗೂ ಗೊತ್ತಾಗುವುದಿಲ್ಲ ಬಿಡಿ! ಜನಾದೇಶದ ಮುಂದೆ ಎಲ್ಲರೂ ಸೋಲನ್ನು ಸ್ವೀಕರಿಸಲೇಬೇಕು.

ಇಡೀ ದೇಶ ಮೋದಿಯವರಿಗೂ ಜನಾದೇಶ ಕೊಟ್ಟಾಗ ‘ಮೋದಿ ಪ್ರಧಾನಿ ಯಾದರೆ ದೇಶ ಬಿಡುತ್ತೇನೆ, ಮನೆ ಬಿಡುತ್ತೇನೆ,ಊಟ ಬಿಡುತ್ತೇನೆ…’ ಎಂದವರೆಲ್ಲ ಕೇವಲ ಭೌತಿಕ ಪ್ರಶಸ್ತಿ ವಾಪಸು ಮಾಡಿ ‘ಆರ್ಥಿಕ ಪ್ರಶಸ್ತಿ’ ಗಳನ್ನು ಜೋಪಾನ ಮಾಡಿಕೊಂಡರು. ಇಂಥವರ ವಿರುದ್ಧ ಇನ್ನು ಕೆಲವರು ಅಯೋಗ್ಯನೊಬ್ಬ ಪ್ರಧಾನಿಯಾದರೆ ದೇಶ ಸರ್ಕಸ್ ಕಂಪನಿಯಾಗುತ್ತದೆ ಎಂದೂ ಎಚ್ಚರಿಸಿದ್ದರು. ಸದ್ಯ ಅಂಥ ಕಾಲವೂ ಬರದಿದ್ದರೇ ಸಾಕು!

ಇನ್ನು ಕರ್ನಾಟದ ರಾಜಕೀಯದ ವಿಷಯಕ್ಕೆ ಬರುವುದಾದರೆ ಈ ಬಾರಿಯ ಚುನಾವಣೆಯಲ್ಲಿ ನಾಡಿನ ಸಾಂಸ್ಕೃತಿಕ ಪ್ರeಯಂತಿರುವ ವೀರಶೈವ- ಲಿಂಗಾಯತ ಮಠಗಳು ಬಹಳ ನೊಂದಿದ್ದವು. ಯಡಿಯೂರಪ್ಪನವರ ರಾಜೀನಾಮೆ ವಿಚಾರ
ಗಮನಕ್ಕೆ ಬಂದಕೂಡಲೇ ಸಮಸ್ತ ಮಠಾಧೀಶರು, ಮಠದಿಂದ ಹೊರಬಂದು ಯಡಿಯೂರಪ್ಪನವರನ್ನು ಸುತ್ತುವರಿದು ಅವರ ಪರ ನಿಂತರು.

ಆಗಲಾದರೂ ಕೇಂದ್ರ ಬಿಜೆಪಿ ಮುಂದಿನ ದುಷ್ಪರಿಣಾಮವನ್ನು ಊಹಿಸಬೇಕಿತ್ತು. ಹಿಂದೆ ಭೂಹಗರಣದಲ್ಲಿ ಸಿಲುಕಿ ಯಡಿಯೂ ರಪ್ಪನವರು ಜೈಲುಸೇರಿ ಅನಾರೋಗ್ಯಗೊಂಡಾಗ ಸಾಕ್ಷಾತ್ ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿಯವರೇ ಭೇಟಿ ನೀಡಿ ಯಡಿಯೂರಪ್ಪನವರನ್ನು ಸಂತೈಸಿ ಬಂದಿದ್ದರು. ಅದು ಯಡಿಯೂರಪ್ಪನವರಿಗಿದ್ದ ಶಕ್ತಿ ಮತ್ತು ವ್ಯಾಪ್ತಿ ಎಂಬುದನ್ನಾದರೂ ಕೇಂದ್ರ ಬಿಜೆಪಿ ಜ್ಞಾಪಿಸಿಕೊಳ್ಳಬೇಕಿತ್ತು. ಆದರೆ ಹಾಗಾಗದೇ ಯಡಿಯೂರಪ್ಪನವರನ್ನು ಮುಲಾಜಿಲ್ಲದೆ ಕಣ್ಣೀರು ಸುರಿಸುತ್ತ ರಾಜೀನಾಮೆ ನೀಡುವಂತೆ ಮಾಡಿದ್ದು ರಾಜ್ಯ ಬಿಜೆಪಿ ಗೋಹತ್ಯೆಯಂಥ ಮಹಾ ಪಾಪಕ್ಕೆ ಗುರಿಯಾಯಿತು. ಪಾಪ ಲಿಂಗಾಯತರಲ್ಲದೇ, ಯಡಿಯೂರಪ್ಪನವರನ್ನು ಒಪ್ಪಿಕೊಳ್ಳುವ ಎಲ್ಲ ಧರ್ಮ ಜಾತಿಗಳವರೂ ಅಂದು ಮರುಗಿದ್ದರು.

ಹೇಳಿಕೇಳಿ ಕರ್ನಾಟಕದಲ್ಲಿ ಬಿಜೆಪಿಗೆ ಇರುವ ತಾಕತ್ತೇ ವೀರಶೈವ-ಲಿಂಗಾಯತ ಸಮುದಾಯ. ಅಂಥ ಸಮುದಾಯದ ಯಡಿಯೂರಪ್ಪನವರೊಂದಿಗೆ ಬಿಜೆಪಿ ನಡೆದುಕೊಂಡ ರೀತಿ ಅದಕ್ಕೇ ಋಣಾತ್ಮಕವಾಗಿ ಪರಿಣಮಿಸಿತು. ಇಂಥ ಶಾಪದ
ತಾಕತ್ತು ಎಷ್ಟಿತ್ತೆಂದರೆ ಮೊನ್ನೆಯಷ್ಟೇ ವಿ.ಸೋಮಣ್ಣ ಸುತ್ತೂರು ಮಠಕ್ಕೆ ಹೋಗಿ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡು ಬಂದು ತಾನೊಬ್ಬ ಲಿಂಗಾಯಿತ ನಾಯಕ ಮತ್ತು ಮುಂದಿನ ಮುಖ್ಯ ಮಂತ್ರಿ ಆಕೃತಿ ಎನಿಸಿದರೂ ಎರಡೂ ಕ್ಷೇತ್ರಗಳಲ್ಲಿ
ಹೀನಾಯ ಸೋಲನುಭವಿಸಿದರು.

ಒಂದೊಮ್ಮೆ ಬಿಜೆಪಿ ಈ ಚುನಾವಣೆಯಲ್ಲಿ ೧೧೫ ಕ್ಷೇತ್ರಗಳನ್ನು ಗೆದ್ದಿದ್ದರೂ ಲಿಂಗಾಯತ ಮಠಗಳು ಸಹಜವಾಗಿ ಆ ಸಮು ದಾಯದ ನಾಯಕನನ್ನೇ ಮುಖ್ಯಮಂತ್ರಿ ಮಾಡಬೇಕೆಂದು ಆಗ್ರಹಿಸುತ್ತಿದ್ದರು. ಏಕೆಂದರೆ ಬಿಜೆಪಿ ಇಡುಗಂಟು ಇರುವುದೇ ಆ ಸಮುದಾಯದಲ್ಲಿ. ಹೀಗಾಗಿ ಅದು ಅವರ ಹಕ್ಕು. ಅಥವಾ ಬಿಜೆಪಿ ೧೩೫ ಕ್ಷೇತ್ರಗಳನ್ನು ಗೆದ್ದಿದ್ದೇ ಆಗಿದ್ದರೂ ಆಗ ಆ ಸಂಖ್ಯೆಯಲ್ಲಿಯೂ ೫೦ ಕ್ಕೂ ಹೆಚ್ಚು ಮಂದಿ ಲಿಂಗಾಯತ ಶಾಸಕರೇ ಇರುತ್ತಿದ್ದರು.

ಆಗಲೂ ಲಿಂಗಾಯತ ಸಮುದಾಯದ ಮಠಗಳ ಬೇಡಿಕೆ ಅದೇ ಆಗಿರುತಿತ್ತು. ಒಂದು ಸಾಧನೆಯಲ್ಲಿ ತಮ್ಮವರ ಪಾಲು ಹೆಚ್ಚಿದ್ದಾಗ ಅವರಿಗೇ ಪ್ರಾಶಸ್ತ್ಯ ನೀಡುವುದು ಲೋಕರೂಢಿಯಲ್ಲವೇ? ಬಿಜೆಪಿಯ ಜೀವಾಳವಾಗಿರುವ ಬಹುಸಂಖ್ಯಾತ ಲಿಂಗಾಯತ ಶಾಸಕರ ಬಲವಿರುವಾಗ ಸಹಜವಾಗಿಯೇ ಅದೇ ಸಮುದಾಯದ ಮುಖ್ಯ ಮಂತ್ರಿ ಬೇಡಿಕೆಯಾಗಿರುತ್ತದೆ. ಏಕೆಂದರೆ ಲಿಂಗಾಯತರು ಮತ್ತು ಬಿಜೆಪಿಯ ಒಡನಾಟ-ಅನ್ಯೋನ್ಯತೆ ಇರುವುದರಿಂದಲೇ ಲಿಂಗಾಯತ ಮಠಗಳು
ಬಿಜೆಪಿಯನ್ನು ಪ್ರೀತಿಸಲು-ಶಿಕ್ಷಿಸಲು ಸಾಧ್ಯ.

ಇಂಥ ಪ್ರೀತಿ ಯಡಿಯೂರಪ್ಪನವರ ರಾಜೀನಾಮೆ ಪ್ರಕರಣದಿಂದಾಗಿ ಹಳಸಿದ್ದರಿಂದಲೇ ಈ ಬಾರಿಯ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ದೊಡ್ಡಮಟ್ಟದಲ್ಲಿ ಬಿಜೆಪಿಯನ್ನು ಶಿಕ್ಷಿಸಿದೆ. ಹಾಗಂತ ಬಿಜೆಪಿ ಹೊರತುಪಡಿಸಿ ಅನ್ಯ ಪಕ್ಷಗಳ
ಆಡಳಿತದಲ್ಲೂ ಒಂದು ಸಮುದಾಯದ ಶಾಸಕರ ಸಂಖ್ಯೆ ಹೆಚ್ಚಿದ್ದಾಗ ಅವರಿಗೆ ದನಿಯಾಗಿ ನಿಲ್ಲುವುದು ಹೊಸತೇನಲ್ಲ. ಹೇಳಿಕೊಳ್ಳಲು ಮಾತ್ರ ನಮ್ಮ ದೇಶ ಜಾತ್ಯತೀತ ದೇಶ. ಇಲ್ಲಿ ಮಾತೆತ್ತಿದರೆ ಬ್ರಾಹ್ಮಣರನ್ನು ಜಾತಿವಾದಿಗಳೆಂದು ಜರಿಯುತ್ತಾರೆ.

ಲಿಂಗಾಯಿತ ಸಿಎಂ ಬೇಕು, ಕುರುಬ ಸಿಎಂ ಬೇಕು, ಒಕ್ಕಲಿಗ ಸಿಎಂ ಬೇಕು, ದಲಿತ ಸಿಎಂ ಬೇಕೆನ್ನುವ ಪಕ್ಕಾ ಜಾತಿ ಆಧರಿತ, ಜಾತಿ ಬೆಂಬಲಿತ ರಾಜಕಾರಣ- ಸಮಾಜ-ಜಾತಿಪ್ರಭುತ್ವ ಜಾರಿಯಲ್ಲಿದೆ. ಇಂಥ ಜಾತಿಗಳ ಮೇಲಾಟದಿಂದಾಗಿ ಸಂವಿಧಾನದ
ಆಶಯಗಳಿಗೂ ಆದ್ಯತೆಗಳಿಲ್ಲದಂತ್ತಾಗಿದೆ. ಹೀಗಿರುವಾಗ ಇಂದಿನ ಕಾಂಗ್ರೆಸ್ ಸರಕಾರದಲ್ಲಿ ಕುರುಬ ಶಾಸಕರ ಸಂಖ್ಯೆ ೮, ಒಕ್ಕಲಿಗೆ ಶಾಸಕರ ಸಂಖ್ಯೆ ೨೧, ಲಿಂಗಾಯತ ಶಾಸಕರ ಸಂಖ್ಯೆ ಎಲ್ಲ ಸಮುದಾಯಕ್ಕಿಂತ ಗರಿಷ್ಠ ೩೯ ಆಗಿದ್ದರೂ ಕಾಂಗ್ರೆಸ್ ಸರಕಾರದಲ್ಲಿ ಕರುಬ ಸಮುದಾಯದ ಮುಖ್ಯಮಂತ್ರಿ, ಒಕ್ಕಲಿಗ ಸಮುದಾಯದ ಉಪಮುಖ್ಯಮಂತ್ರಿ ಆಗಿದ್ದಾರೆ.

ಇದು ಜಾತಿ ಸಮತೋಲದನಲ್ಲಿ ಲಿಂಗಾಯತ ಸಮುದಾಯಕ್ಕೆ ಆದ ಹಿನ್ನಡೆಯಾಗಿದ್ದರೂ ಸಮಸ್ತ ಲಿಂಗಾಯತ ಮಠಗಳ ಸ್ವಾಮೀಜಿಗಳು ವಿಷಕಂಠನಂತೆ ನುಂಗಿಕೊಂಡು ಸುಮ್ಮನಿರುವುದು ನಿಜಕ್ಕೂ ತಲೆದೂಗುವಂಥ ವಿಚಾರ!! ಹೀಗೆ ಲಿಂಗಾ ಯತರ ಕೆಂಗೆಣ್ಣಿಗೆ ಗುರಿಯಾಗಿದ್ದ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಈಗ ಆ ಸಮುದಾಯದ ನಂಬಿಕೆಯನ್ನು ಗಳಿಸಿರುವ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇನ್ನು ಆ ಸಮುದಾಯದ ಬೇಡಿಕೆಗಳೆಲ್ಲವೂ ನೆರವೇರುವುದರಲ್ಲಿ ಸಂಶಯವಿಲ್ಲ. ಪಾಪ, ಪೂಜ್ಯ ಜಯಮೃತ್ಯುಂಜಯ ಸ್ವಾಮೀಜಿಗಳು ತಮ್ಮ ಪಂಚಮಸಾಲಿ ವರ್ಗಕ್ಕೆ ೨ಎ ಮೀಸಲು ಕಲ್ಪಿಸುವುದಕ್ಕಾಗಿ ಎಷ್ಟೆ ಹೋರಾಟ ಮಾಡಿದರು.

ಈಗ ಅವರ ಹೋರಾಟಕ್ಕೆ ತಕ್ಕ ಫಲ ಗ್ಯಾರೆಂಟಿಗಳಂತೆಯೇ ಪ್ರಥಮ ಪ್ರಾಶಸ್ತ್ಯದಲ್ಲಿ ನೆರವೇರಲೇಬೇಕು. ಆ ಮೂಲಕ ಸ್ವಾಮೀಜಿಗಳ ಹೋರಾಟಕ್ಕೆ ತಾರ್ಕಿಕ ಅಂತ್ಯನೀಡಿ ಅವರನ್ನು ಗೌರವಿಸುವಂತಾಗಲಿ. ಆ ಮೂಲಕ ಸ್ವಾಮೀಜಿಗಳು
ಮುಂದೆ ಇಂಥ ವಿಷಯಕ್ಕೆಲ್ಲ ಬೀದಿಗಿಳಿಯದಂತೆ ನೋಡಿಕೊಳ್ಳಲಿ. ಇದಕ್ಕಾಗಿ ಆ ಸಮುದಾಯದ ಶಾಸಕರಾದ ವಿನಯ್ ಕುಲಕರ್ಣಿ, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆಯಂಥ ನಾಯಕರು ಪಕ್ಷಾತೀತವಾಗಿ ಹೋರಾಡುತ್ತಾರೆಂಬ ನಂಬಿಕೆಯಿ
ದೆ. ಇನ್ನು ಬಿಜೆಪಿ ಸರಕಾರದಲ್ಲಿ ನಡೆದ ೪೦% ಕಮಿಷನ್ ಗಿರಾಕಿಗಳು ಅದೆಷ್ಟು ಮಂದಿ ಹೆದರಿ ಆತ್ಮಹತ್ಯೆ ಮಾಡಿಕೊ ಳ್ಳುತ್ತಾರೋ, ಅದೆಷ್ಟು ಮಂದಿ ಜೈಲು ಸೇರುತ್ತಾರೋ ಒಟ್ಟಿನಲ್ಲಿ ಕಾಂಗ್ರೆಸ್ ಇಂಥವರನ್ನು ಜೈಲ್‌ಭರೋ ಚಳುವಳಿಗೆ ಒಳಪಡಿಸಿ ೦% ಸರಕಾರವೆಂಬ ವಿಶ್ವದಾಖಲೆಗೆ ಪಾತ್ರವಾಗುತ್ತದೆ ನೋಡಿ!

ಇನ್ನು ಈ ಮಠ-ಜಾತಿ ರಾಜಕಾರಣದಿಂದ ಹೊರಬಂದರೆ ಸಾಮಾನ್ಯ ಜನ ಬೆಲೆ ಏರಿಕೆಯಿಂದ ರೋಸಿ ಹೋಗಿದ್ದಾರೆ. ಇದನ್ನೇ ಮುನ್ನಲೆಗೆ ತಂದು ಪ್ರಚಾರಕ್ಕೆ ಬಳಸಿಕೊಂಡ ಕಾಂಗ್ರೆಸ್‌ಗೆ ಅಭೂತ ಪೂರ್ವ ಬಹುಮತ ನೀಡಿದ್ದಾರೆ. ಇದಕ್ಕೆ ಫಲವಾಗಿ
ಎಲ್ಲ ಗ್ಯಾರೆಂಟಿಗಳನ್ನು ಜಾರಿಗೆ ತರುವುದರೊಂದಿಗೆ ಪೆಟ್ರೋಲ್ ಮೇಲಿನ ರಾಜ್ಯದ ಪಾಲಿನ ತೆರಿಗೆಯನ್ನೇನಾದರು ಇಳಿಸಿದರೆ ಬಹುಶಃ ಲೀಟರ್ ಗೆ ಹತ್ತರಿಂದ ಇಪ್ಪತ್ತು ರುಪಾಯಿ ಕಡಿಮೆಮಾಡ ಬಹುದಾದ ಸಾಧ್ಯತೆ ಇದೆ. ಜತೆಗೆ ರಾಜ್ಯ ಸಂಗ್ರಹಿಸುವ ಸ್ವಂತ ತೆರಿಗೆ ಹಣವನ್ನು ವಿನಿಯೋಗಿಸಿಕೊಂಡು ವಿಶೇಷ ಬದಲಾವಣೆ ತಂದು ಎಲ್ಲ ಮತದಾರರ ಮನೆಗಳ ಸಿಲಿಂಡರ್ ಸಹ ಕಡಿಮೆ ಬೆಲೆಯಲ್ಲಿ ಸಿಗುವಂಥ ದಿಟ್ಟ ಕ್ರಮವನ್ನು ಕೈಗೊಳ್ಳಬಹುದಾದ ಮಾರ್ಗಗಳಿವೆ.

ಆ ಮೂಲಕ ಇತರೆ ರಾಜ್ಯಗಳಿಗೂ ಮಾದರಿಯಾದರೆ ಚುನಾವಣಾ ಪೂರ್ವದಲ್ಲಿ ತೋರಿಸಿದ ಜಾಹೀರಾತುಗಳು ಸಾರ್ಥಕವಾ ದಂತೆ ಆಗುತ್ತದೆ.

ಕೊನೆಗೆ: ಇಂದು ಗೂಬೆ ಮರಿಹಾಕಿದೆ ಆ ಮರಿ ಇನ್ನು ಕೆಲವೇ ದಿನಗಳಲ್ಲಿ ಬೆಳೆದು ರಾಜ್ಯದಿಂದ ಹಾರಿಕೊಂಡು ಹೋಗಿ ಕೇಂದ್ರ ಸರಕಾರದ ಮೇಲೆ ಏರಿ ಕೂರುತ್ತದೆ. ಆ ಗೂಬೆ ಹೆಸರು ‘ಗ್ಯಾರೆಂಟಿ’!.

error: Content is protected !!