Thursday, 12th December 2024

Gururaj Gantihole Column: ಓದಲೇಬೇಕಾದ ಪುಸ್ತಕ-ʼಸಂವಿಧಾನ ಬದಲಾಯಿಸಿದ್ದು ಯಾರು ?ʼ

ಗಂಟಾಘೋಷ

ಗುರುರಾಜ್‌ ಗಂಟಿಹೊಳೆ

ಈ ಪುಸ್ತಕವನ್ನು ಸುಮ್ಮನೆ ಕೈಗೆತ್ತಿಕೊಂಡರೂ ಸಾಕು, ಮುಗಿಯುವವರೆಗೆ ಕೆಳಗಿಡಲ ಮನಸಾಗದು! ಪ್ರತಿಭಾವಂತರನ್ನು ತುಳಿ
ಯುವುದರಿಂದ ದೇಶಕ್ಕೆ ಅದೆಷ್ಟು ನಷ್ಟವಾಗುತ್ತದೆ ಎಂಬುದನ್ನು ಓದುಗರಿಗೆ ಮನವರಿಕೆ ಮಾಡಿಕೊಡುವ ಕಲೆ ಕೃತಿಕಾರ ವಿಕಾಸ್ ಕುಮಾರ್‌ರಿಗೆ ಸಿದ್ಧಿಸಿದೆ.

ಚುನಾವಣೆ ಬರುತ್ತಿದ್ದಂತೆ ವಿಪಕ್ಷಗಳನ್ನು ಹಣಿಯಲು ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಈ ಬಗ್ಗೆ ಪ್ರಧಾನಿ ಮೋದಿ ಹಲವು ಬಾರಿ ಹೇಳಿದ್ದಾರೆ, ಜೋಗೇಂದ್ರನಾಥ ಮಂಡಲ್ ಬಗ್ಗೆ ಉಲ್ಲೇಖಿಸಿದ್ದಾರೆ. 1934ರಲ್ಲಿಯೇ ಕಾನೂನು ಪಂಡಿತ
ರಾಗಿ ಹೆಸರಾಗಿದ್ದ ಇವರು ಸ್ವಾತಂತ್ರ್ಯಾನಂತರದ ಘಟನೆಗಳಲ್ಲಿ ವಹಿಸಿದ ಪಾತ್ರ ಮಹತ್ತರವಾದುದು. ಪಾಕಿಸ್ತಾನಕ್ಕೆ ಆಡಳಿತಾತ್ಮಕ ರೂಪುರೇಷೆ ಬರಲು ಕಾರಣರಾಗಿದ್ದ ಜೋಗೇಂದ್ರನಾಥ್, ಸುಭಾಸ್‌ಚಂದ್ರ ಬೋಸರ ನಾಯಕತ್ವಕ್ಕೆ ಮಾರುಹೋಗಿದ್ದರು. ಬಂಗಾಳದ ವಿಭಜನೆಯನ್ನು ವಿರೋಧಿಸಿದ್ದ ಇವರು, ಕಾಂಗ್ರೆಸ್ ನಿಂದ ಬೋಸರ ಉಚ್ಚಾಟನೆಯಾದಾಗ ಮನನೊಂದು ಮುಸ್ಲಿಂ ಲೀಗ್‌ನೊಂದಿಗೆ ತಮ್ಮ ರಾಜಕೀಯ ಜೀವನ
ವನ್ನು ಬೆಸೆದುಕೊಂಡರು. ಇಲ್ಲಿಂದ ಇವರ ನಿರ್ಧಾರ ಗಳೆಲ್ಲ ಅಸಮಂಜಸವಾಗುತ್ತಾ ಹೋದವು. ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಹಂಗಾಮಿ ಸರಕಾರ ರಚನೆಯಾದಾಗ, ಕಿಂಗ್ ಜಾರ್ಜ್ ಮೂಲಕ ಅಧಿಕಾರ ಸ್ವೀಕರಿಸಿ ಕಾನೂನು ಸಲಹಾ ಸಮಿತಿಯ ಮುಖ್ಯಸ್ಥ ರಾಗಿದ್ದ ಜೋಗೇಂದ್ರರು, ಬಾಂಬೆಯ ಚುನಾವಣೆಯಲ್ಲಿ ಅಂಬೇಡ್ಕರರು ಕಾಂಗ್ರೆಸ್‌ನಿಂದ ಕಠಿಣ ಪರಿಸ್ಥಿತಿ ಎದುರಿಸಿದಾಗ ಅವರಿಗೆ ನೆರವಾದರು.

ಸಂವಿಧಾನದ ರಚನೆಯ ವೇಳೆ ಅಂಬೇಡ್ಕರರು ಇವರೊಂದಿಗೆ ಪ್ರಮುಖ ವಿಚಾರಗಳನ್ನು ಚರ್ಚಿಸಿ ನಿರ್ಧರಿಸಿದ್ದರ ಬಗ್ಗೆ ಉಲ್ಲೇಖವಿದೆ. ದೇಶ ವಿಭಜನೆಯಾಗಿ ಪಾಕಿಸ್ತಾನವು ಅಸ್ತಿತ್ವಕ್ಕೆ ಬರುವಾಗ ನಡೆದ ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು ಜೋಗೇಂದ್ರರೇ ವಹಿಸಲೆಂದು ಜಿನ್ನಾ ಹಠ ಹಿಡಿದಿದ್ದರಂತೆ! ಸ್ವತಂತ್ರಗೊಂಡ ಪಾಕ್‌ನ ಜಿನ್ನಾ ಸರಕಾರದಲ್ಲಿ ಮೊಟ್ಟಮೊದಲ ಕಾನೂನು ಮತ್ತು ಕಾರ್ಮಿಕ ಸಚಿವರಾಗಿ ಮಹತ್ವದ ಪಾತ್ರ ವಹಿಸಿದ ಜೋಗೇಂದ್ರರು, ಕಾಲಾನಂತರದಲ್ಲಿ ದಲಿತರ ಮೇಲಿನ ಅತ್ಯಾಚಾರ, ಹಲ್ಲೆ, ಹಿಂದೂಗಳ ಕಗ್ಗೊಲೆಗಳನ್ನು ಬಹಿರಂಗವಾಗಿ ವಿರೋ ಧಿಸಿದ್ದರಿಂದ, ಲಿಯಾಖತ್ ಖಾನ್‌ನಿಂದ ದೇಶ ತೊರೆಯುವಂತೆ ಬೆದರಿಕೆ ಬಂತು, ಹತ್ಯೆಯ ಯತ್ನವೂ ಆಯಿತು.

ಹೀಗಾಗಿ ಪಾಕಿಸ್ತಾನವನ್ನು ತೊರೆದು ಕೋಲ್ಕತಾ ಸಮೀಪದ ಬೋಂಗಾವ್ ಗ್ರಾಮದಲ್ಲಿ ಅಪರಿಚಿತರಂತೆ ಬದುಕುತ್ತ, 1968ರಲ್ಲಿ ತೀರಿಕೊಂಡರು. “ಈ ದೇಶವು ದಲಿತರನ್ನು ಸರಿಯಾಗಿ ನಡೆಸಿಕೊಂಡಿಲ್ಲ” ಎನ್ನುತ್ತ ಧರ್ಮ, ಜಾತಿಯಾಧಾರಿತ ರಾಜಕಾರಣ ಮಾಡುತ್ತ ಮತಬೇಟೆಗಿಳಿಯುವ ಕಾಂಗ್ರೆಸ್‌ಗೆ ಮಾರುತ್ತರವಾಗಿ ಮೋದಿಯವರು, “ಕಾಂಗ್ರೆಸ್‌ನವರು ಮತ್ತು ಪಾಕಿಸ್ತಾನದವರು ಹಿಂದೂಗಳನ್ನು, ದಲಿತರನ್ನು ಹೇಗೆ ನಡೆಸಿ ಕೊಂಡಿದ್ದಾರೆ ಹಾಗೂ ನಾವು ಅಂಬೇಡ್ಕರ್ ರನ್ನು ಹೇಗೆ ನಡೆಸಿಕೊಂಡಿದ್ದೇವೆ, ಅವರಿಗೆ ಸಲ್ಲಬೇಕಾದ ಸ್ಥಾನಮಾನವನ್ನು ಹೇಗೆ ಸಮರ್ಪಿಸಿದ್ದೇವೆ ಎಂಬುದನ್ನು ಪ್ರತಿ ಭಾರತೀಯರೂ ಇತಿಹಾಸದ ಸತ್ಯಪುಟಗಳನ್ನು ಓದುವ ಮೂಲಕ ತಿಳಿಯುತ್ತಾರೆ” ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಅಂಬೇಡ್ಕರರ ವಿಷಯದಲ್ಲಿ ನೆಹರು ಬಗೆದ ದ್ರೋಹವನ್ನು ದೇಶದ ಹಿಂದುಳಿದ, ದಲಿತ ನಾಯಕರಾರೂ ಮರೆಯಲಾಗದು. ಅಂಬೇಡ್ಕರ್
೨ ಅವಽಗೆ ಬಾಂಬೆ ಸ್ಟೇಟ್ ಪ್ರತಿನಿಧಿಯಾಗಿ ರಾಜ್ಯಸಭಾ ಸದಸ್ಯರಾಗಿದ್ದರು, ೨ನೇ ಅವಽ ಪೂರ್ಣಗೊಳ್ಳುವ ಮುನ್ನವೇ ನಿಧನರಾದರು. ಶ್ರೇಷ್ಠ ಸಂಸದೀಯ ಪಟು ವಾಗಿದ್ದ ಅಂಬೇಡ್ಕರ್, ಸ್ವಾತಂತ್ರ್ಯಾ ನಂತರದ ಕಾಂಗ್ರೆಸ್ ಸರಕಾರದಲ್ಲಿ ಕಾನೂನು ಮಂತ್ರಿಯಾಗಿದ್ದರು. ಸಂವಿಧಾನ ರಚನೆಯಲ್ಲಿ ಅಪಾರ ಶ್ರಮ ವಹಿಸಿ, ದಲಿತರು-ದಮನಿತರ ಹಕ್ಕುಗಳಿಗಾಗಿ ದುಡಿದ ಅವರು 1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲುಣ್ಣ ಬೇಕಾಯಿತು. ಈ ಚುನಾವಣೆ ಯಲ್ಲಿ ಅಂಬೇಡ್ಕರ್ ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧೀಸಿದ್ದರು. ಇವರ ವಿರುದ್ಧ ದಲಿತನಾಯಕ ಎಂದು ಗುರುತಿಸಿ ಕೊಂಡಿದ್ದ ನಾರಾಯಣ ಸದೋಬ ಕಜ್ರೋಲ್ಕರ್ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಅಂಬೇಡ್ಕರರನ್ನು
ಸೋಲಿಸಿದರು. ಅಚ್ಚರಿಯೆಂದರೆ, ಇವರು ಹಲವು ವರ್ಷಗಳವರೆಗೆ ಅಂಬೇಡ್ಕರರ ಆಪ್ತಸಹಾಯಕರಾಗಿದ್ದವರು.

ಚುನಾವಣೆಯಲ್ಲಿ ಸೋತರೂ ಅಂಬೇಡ್ಕರ ರನ್ನು ರಾಜ್ಯಸಭಾ ಸದಸ್ಯರಾಗಿ ಆಯ್ಕೆಮಾಡಲಾಯಿತು. ಅವರು 1956ರಲ್ಲಿ ದಿವಂಗತ ರಾದ ಮರುವರ್ಷವೇ ಸಾರ್ವತ್ರಿಕ ಚುನಾವಣೆ ನಡೆಯಿತು. ಅಂಬೇಡ್ಕರರನ್ನು ರಾಜಕೀಯವಾಗಿ ಮೂಲೆಗುಂಪಾಗಿಸಿದ್ದಕ್ಕೆ ಋಣಸಂದಾಯವೆಂಬಂತೆ, ಅಽಕಾರಕ್ಕೆ ಬಂದ ಇಂದಿರಾ ಸರಕಾರ ಕಜ್ರೋಲ್ಕರ್‌ರಿಗೆ 1970ರಲ್ಲಿ ‘ಪದ್ಮಭೂಷಣ’ ಪ್ರಶಸ್ತಿ ನೀಡಿತು! ಚುನಾವಣಾ ಸೋಲು ಅಂಬೇಡ್ಕರರಿಗೆ ನೋವು ತಂದಿತ್ತು, ಏಕೆಂದರೆ ಮಹಾರಾಷ್ಟ್ರ ಅವರ ಕರ್ಮಭೂಮಿ ಯಾಗಿತ್ತು. ಹೀಗಾಗಿ ಅಂಬೇಡ್ಕರ್ ಸುದ್ದಿ ಸಂಸ್ಥೆ ಯೊಂದರ ಜತೆ ಮಾತನಾಡುತ್ತಾ, “ಬಾಂಬೆಯ ಜನರ ಅಗಾಧ ಬೆಂಬಲವನ್ನು ಇಷ್ಟು ಕೆಟ್ಟದಾಗಿ ಹೇಗೆ ನಿರಾಕರಿಸಲಾಯಿತು? ಇದು ಚುನಾವಣಾ ಆಯುಕ್ತರು ತನಿಖೆ ನಡೆಸಬೇಕಾದ ವಿಷಯವಾಗಿದೆ” ಎನ್ನುವ ಮೂಲಕ ಮತ ಎಣಿಕೆಯ ವಿಷಯದಲ್ಲಿ ಆಗಿರಬಹು ದಾದ ಅಕ್ರಮದ ಬಗ್ಗೆ ಸಂಶಯದ ದನಿಯೆತ್ತಿದ್ದರು.

ಚುನಾವಣಾ ಫಲಿತಾಂಶವನ್ನು ಅಸಿಂಧು ಎಂದು ಘೋಷಿಸುವಂತೆ ಕೋರಿ ಅಂಬೇಡ್ಕರರು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದ್ದರು. “74333 ಮತಪತ್ರಗಳನ್ನು ತಿರಸ್ಕರಿಸಲಾಗಿದೆ ಮತ್ತು ಎಣಿಕೆ ಮಾಡಲಾಗಿಲ್ಲ” ಎಂದು ಅವರು ಅದರಲ್ಲಿ ಉಲ್ಲೇಖಿಸಿದ್ದರು. ಆದರೆ ಈ ದೂರಿನ ಬಗ್ಗೆ ಚುನಾವಣಾ ಆಯೋಗ ಕೈಗೊಂಡ ಕ್ರಮವೇನು ಎಂಬುದು ಬಹಿರಂಗವಾಗಲಿಲ್ಲ. ಈ ಹಿನ್ನಡೆಯ ನಂತರ ಅಂಬೇಡ್ಕರರು 1954ರಲ್ಲಿ
ಮಹಾರಾಷ್ಟ್ರದ ಭಂಡಾರಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿದರೂ, ಕಾಂಗ್ರೆಸ್‌ನವರಿಂದ ಸೋತರು.

ಈ ಘಟ್ಟದಲ್ಲಿ ಅಂಬೇಡ್ಕರರು ನೆಹರುರ ವಿದೇಶಾಂಗ ನೀತಿಯನ್ನು ಟೀಕಿಸಿದರು. ಅಂಬೇಡ್ಕರರನ್ನು ಮುಖ್ಯವಾಹಿನಿ ರಾಜಕೀಯದಿಂದ ದೂರವಿಟ್ಟು ಅವರ ಪ್ರಭಾವ ವನ್ನು ಕುಗ್ಗಿಸಲು ನೆಹರು ಯತ್ನಿಸಿದ್ದು ಹೌದು. ಅಂಬೇಡ್ಕರ್-ನೆಹರು ನಡುವಿನ ಮುಖಾಮುಖಿಯು, ಸಿದ್ಧಾಂತ ಗಳ ಮತ್ತು ಆಕಾಂಕ್ಷೆಗಳ ವೈರುದ್ಧ್ಯವನ್ನು ತೋರಿಸಿತು. ಸ್ವಾತಂತ್ರ್ಯಾನಂತರದ ನೆಹರು ನೇತೃತ್ವದ ಮಧ್ಯಂತರ ಸರಕಾರದಲ್ಲಿ ಅಂಬೇಡ್ಕರ್ ಕಾನೂನು ಸಚಿವ ರಾಗಿದ್ದು ಹೌದಾದರೂ ಅವರ ಅಧಿಕಾರಾವಧಿ ಅಲ್ಪಕಾಲಿಕ ವಾಗಿತ್ತು.

ಹಿಂದೂಗಳಿಗೆ ತಾರತಮ್ಯ ವೆಸಗುವಂತಿದ್ದ ‘ಹಿಂದೂ ಕೋಡ್ ಬಿಲ್’ ವಿಷಯದಲ್ಲಿನ ನೆಹರು ನೀತಿ ಯನ್ನು ಕಟುವಾಗಿ ವಿರೋಧಿಸಿದ ಅಂಬೇಡ್ಕರ್
1951ರ ಸೆಪ್ಟೆಂಬರ್ 27ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಯಿತ್ತರು. ಅವರ ಮತ್ತು ನೆಹರು ನಡುವಿನ ಭಿನ್ನಾಭಿಪ್ರಾಯಕ್ಕೆ ಇದು ಸಾಕ್ಷಿ.
ನೆಹರು ಸಂಪುಟದಿಂದ ಶ್ಯಾಮಪ್ರಸಾದ್ ಮುಖರ್ಜಿ ಯವರ ನಿರ್ಗಮನ ಮತ್ತು ಭಾರತೀಯ ಜನಸಂಘದ ಸ್ಥಾಪನೆ ದೇಶದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ಕಾರಣ ವಾದವು. ಚುನಾವಣೆಯಲ್ಲಿ ಅಂಬೇಡ್ಕರರ ಸ್ಪರ್ಧೆಯನ್ನು ಬೆಂಬಲಿಸಿದವರಲ್ಲಿ ಶ್ಯಾಮಪ್ರಸಾದ್ ಮುಖರ್ಜಿ ಅವರಿದ್ದುದು ನೆಹರು ಕೋಪಕ್ಕೆ ಕಾರಣವಾಗಿತ್ತಂತೆ!

ಸ್ವತಂತ್ರ ಭಾರತದ ಮೊದಲ ಸರಕಾರದಲ್ಲಿ ಕೈಗಾರಿಕಾ ಮಂತ್ರಿಯಾಗಿದ್ದ ಮುಖರ್ಜಿಯವರು, ನೆಹರು ಮತ್ತು ಲಿಯಾಖತ್ ಖಾನ್ ನಡುವೆ
ನಡೆದ ಒಪ್ಪಂದವನ್ನು ಕಟುವಾಗಿ ವಿರೋದಿಸಿ, ರಾಜೀನಾಮೆಯಿತ್ತು ನೆಹರು ಸಂಪುಟದಿಂದ ಹೊರಬಂದಿದ್ದರು. ‘ಒಂದು ದೇಶ, ಎರಡು ಸಂವಿಧಾನ’ದಂಥ ಮಾರಕ ಕಾನೂನನ್ನು (ಕಲಂ 370) ವಿರೋಧಿಸಿ ಮುಖರ್ಜಿಯವರು ನೆಹರು ವಿರೋಧದ ನಡುವೆಯೂ ಕಾಶ್ಮೀರವನ್ನು ಪ್ರವೇಶಿಸಿದಾಗ, ಶ್ರೀನಗರದ ಪೊಲೀಸರು ಅವರನ್ನು ಬಂಧಿಸಿ ಪ್ರಶಸ್ತವಲ್ಲದ ಗುಡಿಸಲಿನಲ್ಲಿ ಇರಿಸಿದರು. ಜ್ವರದ ಕಾರಣ ನೀಡಿ, ಮುಖರ್ಜಿಯವರ
ದೇಹಪ್ರಕೃತಿಗೆ ವಿರುದ್ಧವಾಗಿದ್ದ ಸೆಪ್ರೋಮೈಸಿನ್ ಎಂಬ ಔಷಧವನ್ನು ಚುಚ್ಚುಮದ್ದಿನ ರೂಪದಲ್ಲಿ ನೀಡಲಾಯಿತು.

ಇದಾಗಿ 3 ದಿನಗಳ ನಂತರ ಮುಖರ್ಜಿಯವರ ಶವ ದೊರಕಿತು ಎಂದು ದಾಖಲಿಸಲಾಗಿದೆ. ಹೀಗೆ ಅಂದಿನ ನೆಹರುರಿಂದ ಮೊದಲ್ಗೊಂಡು
ಇಂದಿನವರವರೆಗೆ ಕಾಂಗ್ರೆಸ್ಸಿಗರನೇಕರು ತಮ್ಮ ವಿರೋಧಿಗಳನ್ನು ಯಾವ ವಿಧಾನದಲ್ಲಾದರೂ ಸೋಲಿಸುವ ದಾರಿ ಹುಡುಕುತ್ತ, ಈ ದೇಶದ ಜನರಲ್ಲಿ ಜಾತಿ-ಧರ್ಮದ ಒಡಕಿನ ಬೀಜ ಬಿತ್ತುತ್ತ ರಾಜಕೀಯ ಮಾಡುತ್ತಲೇ ಬಂದಿದ್ದಾರೆ. ಇದೂ ಸೇರಿದಂತೆ, ಪ್ರತ್ಯೇಕ ಕಾಶ್ಮೀರವನ್ನು
ಅಂಬೇಡ್ಕರರು ವಿರೋಧಿಸಿದ್ದು, ಸಂವಿಧಾನದ ಮೂಲ ಪ್ರಸ್ತಾವನೆಯನ್ನೇ ಕಾಂಗ್ರೆಸ್ ಬದಲಿಸಿದ್ದು, ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದು ಇತ್ಯಾದಿಗಳನ್ನು ಕೃತಿಕಾರರು ಈ ಪುಸ್ತಕದಲ್ಲಿ ಮನಮುಟ್ಟುವಂತೆ ತೆರೆದಿಟ್ಟಿದ್ದಾರೆ.

ಸ್ವತಂತ್ರ ಭಾರತದ ಇಂದಿನ ನವತರುಣರು ವಾಸ್ತವಿಕತೆಯನ್ನು, ಜಾಗತಿಕ ವಿದ್ಯಮಾನಗಳನ್ನು ಸರಿಯಾಗಿ ಅರಿತು ದೇಶದ ಭವಿಷ್ಯತ್ತನ್ನು ನಿರ್ಧರಿಸಬಲ್ಲಷ್ಟು ಜಾಣ್ಮೆ ಹೊಂದಿದ್ದಾರೆ. ಇಂದಿನ ಜಾಗೃತ ಸಮಾಜವು ಕೂಡ, ರಾಜಕಾರಣಿಗಳ ಬಲವಂತದ ಮಾಘಸ್ನಾನವನ್ನು
ತುಂಬಾ ವರ್ಷಗಳ ಕಾಲ ಸಹಿಸಿಕೊಳ್ಳುವುದಿಲ್ಲ. ಇದಕ್ಕೆ ಕಾಲಘಟ್ಟವೇ ಉತ್ತರಿಸಬಲ್ಲದು! ‘ಸಂವಿಧಾನದ ಬದಲಾವಣೆ’ ಎಂಬ ಮಾತು ಭಾರತದಲ್ಲಿ ಆಗಿಂದಾಗ್ಗೆ ಸದ್ದುಮಾಡುತ್ತಲೇ ಇರುತ್ತದೆ. ಕಳೆದ ಲೋಕಸಭಾ ಚುನಾವಣೆಯಲ್ಲಂತೂ ಈ ವಿಚಾರ ಸಾಕಷ್ಟು ಚರ್ಚೆಗೆ ಬಂದಿತ್ತು ಮತ್ತು ಅದನ್ನೂ ಕಾಂಗ್ರೆಸ್ ಪ್ರಧಾನ ಅಜೆಂಡಾ ಆಗಿ ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡಿತ್ತು. ಸಂವಿಧಾನ ಬದಲಾವಣೆ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಬಿಜೆಪಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಬಿಟ್ಟಿವೆ.

ಆದರೆ ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ 75 ಬಾರಿ ಸಂವಿಧಾನದ ತಿದ್ದುಪಡಿಯಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ 14 ಬಾರಿ, ಈಗಿನ ಪ್ರಧಾನಿ ಮೋದಿಯವರ ಅವಧಿಯಲ್ಲಿ 8 ಬಾರಿ ತಿದ್ದುಪಡಿ ಮಾಡಲಾಗಿದೆ. ಆದರೆ ಎಲ್ಲಿಯೂ ಸಂವಿಧಾನದ ಆಶಯಕ್ಕೆ ಧಕ್ಕೆ ತರುವಂಥ ತಿದ್ದುಪಡಿಯಾಗಿಲ್ಲ. ಹಾಗಾದರೆ ಸಂವಿಧಾನವನ್ನು ನಿಜವಾಗಿಯೂ ತಿದ್ದುಪಡಿ ಮಾಡಿದ್ದು ಯಾರು? ಅಂಬೇಡ್ಕರರ ಮೂಲ ಆಶಯ ಏನಾಗಿತ್ತು? ಕಾಂಗ್ರೆಸ್ ಹಾಗೂ ಎಡಪಕ್ಷಗಳು ಈ ವಿಚಾರದಲ್ಲಿ ಹೆಣೆದ ರಾಜಕೀಯ ಸಂಕಥನಗಳೇನು? ಎಂಬೆಲ್ಲದರ ಕುರಿತಾದ ಸಮಗ್ರ ಚಿತ್ರಣವನ್ನು ‘ಸಂವಿಧಾನ ಬದಲಾಯಿಸಿದ್ದು ಯಾರು?’ ಎಂಬ ಈ ಕೃತಿಯಲ್ಲಿ ವಿಕಾಸ್ ಕುಮಾರ್ ಅರ್ಥವತ್ತಾಗಿ ನೀಡಿದ್ದಾರೆ. ವಾಸ್ತವವನ್ನು
ಅರಿಯಬಯಸುವವರು ಇದನ್ನೊಮ್ಮೆ ಓದಲೇಬೇಕು. ಈ ಪುಸ್ತಕವನ್ನು ಓದಿದಾಗ ನನಗೆ ಅನಿಸಿದ್ದಿಷ್ಟು. ನಿಮಗೂ ಇನ್ನಷ್ಟು ಹೊಳಹುಗಳು ಸಿಗಬಹುದು, ವಾಸ್ತವತೆಯ ಅರಿವು ಮೂಡಬಹುದು…

ಇದನ್ನೂ ಓದಿ: Gururaj Gantihole Column: ಸರ್ವರ್‌ ಸಮಸ್ಯೆ: ನಂಗೂ ಫ್ರೀ, ನಿಂಗೂ ಫ್ರೀ…!