ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Gururaj Gantihole Column: ಕೆರೆಗಳ ಪುನಶ್ಚೇತನವು ದೇವರ ಸೇವೆ ಇದ್ದಂತೆ !

ಜೀವನದಿ ಕಾವೇರಿ, ಶರಾವತಿ, ಕಾಳಿ, ಪಾಪನಾಶಿನಿ, ಸೌಪರ್ಣಿಕಾ, ಕಬಿನಿ, ಹೇಮಾವತಿ, ತುಂಗಭದ್ರಾ, ನೇತ್ರಾವತಿ, ಕುಮಾರಧಾರಾ, ವಾರಾಹಿ ಹೀಗೆ ಪಟ್ಟಿ ದೊಡ್ಡದಿದೆ. ನದಿಗಳ ಸಂರಕ್ಷಣೆಯ ಕೂಗು ಆಗಾಗ ಕೇಳಿ

Profile Ashok Nayak Dec 5, 2024 10:06 AM
ಗಂಟಾಘೋಷ
ಗುರುರಾಜ್‌ ಗಂಟಿಹೊಳೆ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ನದಿಗಳಿರುವಂತೆ ಸಣ್ಣ-ದೊಡ್ಡ ಕೆರೆಗಳೂ ಹೆಚ್ಚಿವೆ. ಕೃಷಿ ಪಂಪ್‌ಸೆಟ್‌ಗಳನ್ನು ಇಡಲಾಗದಷ್ಟು ಸ್ಥಿತಿಗೆ ಕೆಲವು ಕೆರೆಗಳು ತಲುಪಿದ್ದು, ಅಷ್ಟು ಹೂಳು ತುಂಬಿಕೊಂಡಿದೆ. ಕೆಲವೆಡೆ ಕೃಷಿಕರು, ಸ್ಥಳೀಯರೇ ಕೆರೆಯನ್ನು ಸ್ವಚ್ಛಗೊಳಿಸುವುದುಂಟು; ಆದರೆ ನಿರ್ವಹಣೆಯ ಕೊರತೆ. ನಿರ್ವಹಣಾ ಸಮಿತಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
ನದಿ, ಸರೋವರ ಹಾಗೂ ಕೆರೆಗಳು ಮನುಷ್ಯನ ನಿತ್ಯದ ಬದುಕು, ಕೃಷಿ, ತೋಟಗಾರಿಕೆಯ ಜೀವಸೆಲೆಗಳು. ನೀರಿನ ಮೂಲಗಳನ್ನುಉಳಿಸಿಕೊಳ್ಳದಿದ್ದರೆ ಭವಿಷ್ಯದ ಪೀಳಿಗೆಗೆ ನಾವೇನೇ ನೀಡಿದರೂ ಅದು ಅರ್ಥಹೀನವಾಗುತ್ತದೆ. ನೀರಿಲ್ಲದೆ ಯಾವ ಸಾಧನೆಯನ್ನೂ ಮಾಡಲಾಗದು. ನೀರಿನ ಮೂಲಗಳನ್ನು ಉಳಿಸುವ ಜತೆಗೆ ಸಮೃದ್ಧಗೊಳಿಸುವ ಕಾರ್ಯ ಆಗಲೇಬೇಕು. ಎಷ್ಟೋ ಕೆರೆಗಳು ಈಗ ಕುರುಹಿಲ್ಲ ದಂತೆ ಕಳೆದುಹೋಗಿವೆ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣವೂ ಹಿಂದೊಮ್ಮೆ ಕೆರೆಯೇ ಆಗಿತ್ತು. ಎಷ್ಟೋ ಕೆರೆಗಳು ಆಧುನಿಕ ಭರಾಟೆಯಲ್ಲಿ ಬಡಾವಣೆಗಳಾಗಿಬಿಟ್ಟಿವೆ. ಈಗ ಇರುವ ಕೆರೆಗಳನ್ನಾದರೂ ಉಳಿಸುವ ಸಂಕಲ್ಪದ ಜತೆಗೆ ಕಾರ್ಯಸಾಧನೆಯೂ ಆಗಬೇಕು. ಕರ್ನಾಟಕದಲ್ಲಿ ಸರೋವರಗಳ ಸಂಖ್ಯೆ ತೀರಾ ಕಡಿಮೆ. ನದಿ ಮತ್ತು ಕೆರೆಗಳು ಹೇರಳವಾಗಿವೆ.
ಜೀವನದಿ ಕಾವೇರಿ, ಶರಾವತಿ, ಕಾಳಿ, ಪಾಪನಾಶಿನಿ, ಸೌಪರ್ಣಿಕಾ, ಕಬಿನಿ, ಹೇಮಾವತಿ, ತುಂಗಭದ್ರಾ, ನೇತ್ರಾವತಿ, ಕುಮಾರಧಾರಾ, ವಾರಾಹಿ ಹೀಗೆ ಪಟ್ಟಿ ದೊಡ್ಡದಿದೆ. ನದಿಗಳ ಸಂರಕ್ಷಣೆಯ ಕೂಗು ಆಗಾಗ ಕೇಳಿ ಬರುತ್ತದೆ. ಸರಕಾರಿ ಹಂತದಲ್ಲಿ ವಾರ್ಷಿಕ, ಪಂಚವಾರ್ಷಿಕ ಯೋಜನೆಯ ನೆಲೆಯಲ್ಲಿ, ಅನುದಾನದ ಲಭ್ಯತೆಯ ಆಧಾರದಲ್ಲಿ ನದಿ ಸಂರಕ್ಷಣೆ, ಒಂದಿಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ.
ಚಕ್ರವರ್ತಿ ಸೂಲಿಬೆಲೆಯವರ ಮುಂದಾಳತ್ವದ ‘ಯುವ ಬ್ರಿಗೇಡ್’ನಂಥ ಸಂಘಟನೆಗಳು ಇದನ್ನೇ ಸಂಕಲ್ಪವಾಗಿ ಸ್ವೀಕರಿಸಿ ನದಿ ಸಂರಕ್ಷಣೆಯ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿವೆ. ಕಲ್ಯಾಣಿಗಳ ಸಂರಕ್ಷಣೆ/ಪುನರುಜ್ಜೀವನದಲ್ಲಿ ಯುವ ಬ್ರಿಗೇಡ್‌ನ ಕೊಡುಗೆ ದೊಡ್ಡದಿದೆ ಮತ್ತು ಪ್ರಧಾನಿ ಮೋದಿಯವರಿಂದ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಶಂಸೆಗೊಳಗಾಗಿದೆ ಕೂಡ. ನದಿ ಮಾತ್ರವಲ್ಲದೆ ಕೆರೆ ಅಭಿವೃದ್ಧಿ ವಿಚಾರದಲ್ಲಿ ಸಿರಸಿಯ ಹೆಬ್ಬಾರರ ಸೇವೆಯೂ ಆಡಳಿತ ವ್ಯವಸ್ಥೆಗೇ ಮಾದರಿ.
ಸಣ್ಣ ನೀರಾವರಿ ಇಲಾಖೆಗಳು ಕೃಷಿಪೂರಕ ಕೆರೆಗಳನ್ನು ನಿರ್ವಹಣೆ ಮಾಡುತ್ತವೆ. ಮಿಕ್ಕಂತೆ ಎಲ್ಲ ಕೆರೆಗಳನ್ನು ಆಯಾ ಸ್ಥಳೀಯಾಡಳಿತವೇ ನಿರ್ವಹಣೆ ಮಾಡಬೇಕಾದರೂ ಅದು ಮಾತ್ರ ಸರಿಯಾಗಿ ನಡೆಯುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಬೃಹತ್ ಕೆರೆಗಳು 131 ಹೆಕ್ಟೇರ್ ಪ್ರದೇಶ ದಲ್ಲಿದ್ದರೆ, ಉಡುಪಿ ಜಿಲ್ಲೆಯಲ್ಲಿ 4 ಬೃಹತ್ ಕೆರೆಗಳು 283 ಹೆಕ್ಟೇರ್ ಪ್ರದೇಶದಲ್ಲಿವೆ. ಮಂಗಳೂರು ತಾಲೂಕಿನ ಕಾವೂರು ಕೆರೆ, ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ಕೆರೆ, ಕಾಪು ತಾಲೂಕಿನ ಎಲ್ಲೂರುದಾಳಂತ್ರ ಕೆರೆ, ಬ್ರಹ್ಮಾವರದ ಚಾಂತಾರು ಮದಗ, ಕುಂದಾಪುರ ಗ್ರಾಮದ ಕಂದಾವರಹೇರಿ ಕೆರೆ, ಕಾರ್ಕಳದ ಆನೇಕೆರೆ ಇವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಬೃಹತ್ ಕೆರೆಗಳು.
ಪ್ರಮಾಣದಲ್ಲಿರುವುದರಿಂದ ಆದಾಯ ಬರುವುದಿಲ್ಲ, ಹೀಗಾಗಿ ನಿರ್ವಹಣೆಯೂ ಇಲ್ಲ. ಅಭಿವೃದ್ಧಿಯ ವೇಳೆ ಹೂಳೆತ್ತಿ ಪಾಚಿ ತೆಗೆದ ಮೇಲೆ ಪುನಃ ಒಂದು ವರ್ಷದಲ್ಲಿ ಪಾಚಿ ಕಟ್ಟಿಕೊಳ್ಳುತ್ತದೆ, ಹೂಳು ತುಂಬಿಕೊಳ್ಳುತ್ತದೆ. ಅದನ್ನು ತೆಗೆಯುವವರೇ ಇರುವುದಿಲ್ಲ. ಸರಕಾರ, ಸ್ಥಳೀಯ ಆಡಳಿತ ವಂತೂ ಒಮ್ಮೆ ಅಭಿವೃದ್ಧಿಯಾದ ಕೆರೆಗಳ ಬಗ್ಗೆ ಮರುಗಮನ ಕೊಡುವ ಪದ್ಧತಿಯೇ ಇಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ನದಿಗಳಿರುವಂತೆ ಸಣ್ಣ-ದೊಡ್ಡ ಕೆರೆಗಳೂ ಹೆಚ್ಚಿವೆ. ಕೃಷಿ ಪಂಪ್‌ಸೆಟ್‌ಗಳನ್ನು ಇಡಲಾಗದಷ್ಟು ಸ್ಥಿತಿಗೆ ಕೆಲವು ಕೆರೆಗಳು ತಲುಪಿದ್ದು, ಅಷ್ಟು ಹೂಳು ತುಂಬಿಕೊಂಡಿದೆ. ಕೆಲವೆಡೆ ಕೃಷಿಕರು, ಸ್ಥಳೀಯರೇ ಕೆರೆಯನ್ನು ಸ್ವಚ್ಛಗೊಳಿಸುವುದುಂಟು; ಆದರೆ ನಿರ್ವಹಣೆಯ ಕೊರತೆ. ನಿರ್ವಹಣಾ ಸಮಿತಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜತೆಗೆ, ಕೆರೆಹೂಳು ಎತ್ತಲು ಬೇಸಗೆಯವರೆಗೂ ಕಾಯುತ್ತಾರೆ.
ನೀರು ಪೂರ್ತಿ ಖಾಲಿಯಾದರೂ ಹೂಳನ್ನು ತೆಗೆಯುವುದೇ ಇಲ್ಲ. ಕೆರೆ ಸಂರಕ್ಷಣೆಗೆ ಸರಕಾರಿ ಮಾದರಿಗಿಂತ, ಕರಾವಳಿ ಭಾಗದ ಕಾರ್ಯವನ್ನು ಅನುಸರಿಸುವ ಮೂಲಕ ಸರಕಾರವು ಯಶಸ್ಸನ್ನು ಕಾಣಬಹುದು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳೂ ರಾಜ್ಯಸಭಾ ಸದಸ್ಯರೂ ಆಗಿರುವ ಡಾ. ಡಿ.ವೀರೇಂದ್ರ ಹೆಗ್ಗಡೆಯವರು, “ಜಲಮೂಲಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ" ಎನ್ನುತ್ತಾರೆ.
‘ನಮ್ಮೂರು-ನಮ್ಮ ಕೆರೆ’ ಎಂಬ ಗ್ರಾಮೀಣ ಕೆರೆ ಪುನಶ್ಚೇತನಾ ಕಾರ್ಯಕ್ರಮವನ್ನು ಇವರು ಪ್ರಾರಂಭಿಸಿದರು. ಹೂಳೆತ್ತುವಿಕೆ, ಒಳ ಮತ್ತುಹೊರಹರಿವಿನ ದುರಸ್ತಿ, ಬಂಡಿಗಳ ನಿರ್ಮಾಣ, ರಾಜಕಾಲುವೆಗಳ ತೆರವು ಮುಂತಾದ ಕಾಮಗಾರಿಗಳನ್ನು ಶ್ರೀ ಕ್ಷೇತ್ರದ ಗ್ರಾಮೀಣಾಭಿವೃದ್ಧಿಯೋಜನೆಯಡಿ ಅನುಷ್ಠಾನಗೊಳಿಸಲಾಗಿದೆ. ಈ ಸಂದರ್ಭದಲ್ಲಿ, ಗ್ರಾಮೀಣರು ತಮ್ಮ ಕೃಷಿಭೂಮಿಗೆ ಫಲವತ್ತಾದ ಹೂಳನ್ನು ತೆಗೆದುಕೊಳ್ಳಲೂಅವಕಾಶವುಂಟು. ಹೂಳು ತೆಗೆಯುವ ಯಂತ್ರಗಳ ಬಾಡಿಗೆಯನ್ನು ಶ್ರೀಕ್ಷೇತ್ರವೇ ಭರಿಸುತ್ತದೆ.
ಗ್ರಾಮ ಮಟ್ಟದಲ್ಲಿ ಕೆರೆ ಅಭಿವೃದ್ಧಿ ಸಮಿತಿಗಳನ್ನು ರಚಿಸಲಾಗಿದ್ದು, ಕೆರೆ ಪುನರುಜ್ಜೀವನ ಮತ್ತು ನಂತರದ ನಿರ್ವಹಣೆಯ ಹೊಣೆ ಈ ಸಮಿತಿ ಗಳದ್ದಾಗಿರುತ್ತದೆ. ಹೆಗ್ಗಡೆಯವರ ಮುಂದಾಳತ್ವದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು 2024-25ರಲ್ಲಿ 58 ಕೆರೆಗಳನ್ನು ಯಶಸ್ವಿಯಾಗಿ ಪುನರುಜ್ಜೀವನಗೊಳಿಸಿದ್ದು ಇದುವರೆಗೆ ಒಟ್ಟು 792 ಕೆರೆಗಳಿಗೆ ಈ ಭಾಗ್ಯ ದಕ್ಕಿದೆ. ಕಡಿಮೆ ಮಳೆ ಬೀಳುವ ರಾಜ್ಯದ ಗ್ರಾಮೀಣ ಬಯಲುಸೀಮೆ ಪ್ರದೇಶಗಳಲ್ಲಿ ಜನರು ದೈನಂದಿನ ಅಗತ್ಯಗಳಿಗಾಗಿ ಉಪಮೇಲ್ಮೈ ನೀರಿನ ಮೂಲವನ್ನು ಬಹುತೇಕ ಅವಲಂಬಿಸಿದ್ದಾರೆ. ಖನಿಜಾಂಶಗಳ ಕೊರತೆಯಿಂದಾಗಿ ಅಥವಾ ಆರ್ಸೆನಿಕ್, -ರಿನ್, ಕ್ಲೋರಿನ್, ಕಬ್ಬಿಣ ಇತ್ಯಾದಿ ಅನಗತ್ಯ ಕಣಗಳ ಮಾಲಿನ್ಯದಿಂದಾಗಿ ಇದು ಕುಡಿಯಲು ಯೋಗ್ಯವಾಗಿಲ್ಲ. ಇದರ ನಿಯತ ಸೇವನೆಯು ಅಪಾಯಕಾರಿ. ಇದನ್ನು ಮನಗಂಡ ಶ್ರೀಕ್ಷೇತ್ರವು ತನ್ನ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಶುದ್ಧ, ಆರೋಗ್ಯಕರ ನೀರಿನ ಪೂರೈಕೆಗೆ ಅಗತ್ಯವಿರುವ ಸ್ಥಳಗಳನ್ನು ಗುರುತಿಸಿ, ವಿಭಿನ್ನ ಸಾಮರ್ಥ್ಯದ ‘ಶುದ್ಧ ಗಂಗಾ ಸ್ಥಾವರ’ಗಳೆಂಬ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಳೀಯ ಪಂಚಾಯತ್ ಮತ್ತು ಇತರ ಸಮಾನಮನಸ್ಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ಥಾಪಿಸುತ್ತಿದೆ.
ಕಚ್ಚಾ ನೀರು, ಭೂಮಿ, ಕಟ್ಟಡ, ವಿದ್ಯುಚ್ಛಕ್ತಿ ಮುಂತಾದ ಮೂಲ ಅವಶ್ಯಕತೆಗಳನ್ನು ಸ್ಥಳೀಯ ಆಡಳಿತದಿಂದ ಒದಗಿಸಲಾಗಿದ್ದರೆ, ಯಂತ್ರೋ ಪಕರಣಗಳ ಪೂರೈಕೆ ಮತ್ತು ನಿರ್ವಹಣೆಗಾಗಿ ಹುಬ್ಬಳ್ಳಿಯ ‘ಆಕ್ವಾಸಾಫಿ’, ಬೆಂಗಳೂರಿನ ‘ಆಕ್ವಾಶೈನ್’, ಮೈಸೂರಿನ ‘ಅಗ್ನಿತೀರ್ಥ ಟೆಕ್ನಾಲಜೀಸ್’, ಬೆಂಗಳೂರಿನ ‘ಸುರಕ್ಷಾ ಗ್ರೀನ್‌ಟೆಕ್ ಸಲ್ಯೂಷನ್ಸ್’ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸ್ಥಾವರ ನಿರ್ವಹಣೆ, ಶುದ್ಧ ನೀರಿನ ಉತ್ಪಾದನೆ ಮತ್ತು ವಿತರಣೆಗಾಗಿ ಸ್ಥಳೀಯವಾಗಿ ಒಬ್ಬ ಉಸ್ತುವಾರಿಯನ್ನು ನೇಮಿಸಲಾಗಿದೆ.
ರಿವರ್ಸ್ ಆಸ್ಮಾಸಿಸ್ ವಿಧಾನದಿಂದ ಉತ್ಪತ್ತಿಯಾಗುವ ಶುದ್ಧ ನೀರನ್ನು ಪ್ರತಿ ಲೀಟರ್‌ಗೆ 15 ಪೈಸೆ ದರದಲ್ಲಿ 20 ಲೀಟರ್ ಪ್ರಮಾಣದಲ್ಲಿ ಗ್ರಾಹಕರಿಗೆ ವಿತರಿಸಲಾಗುತ್ತದೆ. ಮಾಸಿಕ ಚಂದಾದಾರಿಕೆಯ ಸೌಲಭ್ಯವನ್ನು ಪರಿಚಯಿಸುವ ಮೂಲಕ ಈ ವ್ಯವಸ್ಥೆಯನ್ನು ಸರಳಗೊಳಿಸಲಾಗಿದೆ. ರಾಜ್ಯದ 31 ಜಿಲ್ಲೆಯ 86 ತಾಲೂಕುಗಳಲ್ಲಿ ಇಲ್ಲಿಯವರೆಗೆ ಇಂಥ ಒಟ್ಟು 459 ಘಟಕಗಳನ್ನು ಸ್ಥಾಪಿಸಲಾಗಿದ್ದು ಸುಮಾರು 5.18 ಲಕ್ಷ ಸದಸ್ಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇದೇ ರೀತಿಯಲ್ಲಿ ಶ್ರೀಕ್ಷೇತ್ರವು ಕೆರೆಗಳ ವಿಚಾರದಲ್ಲೂ ಒಂದು ದೊಡ್ಡ ಜವಾಬ್ದಾರಿಯನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಿಸುತ್ತಿದೆ. ಅದು ಇಲ್ಲಿಯವರೆಗೆ ಕರಾವಳಿ ಭಾಗದ 600ಕ್ಕೂ ಅಧಿಕ ಕೆರೆಗಳನ್ನು ಪುನರುಜ್ಜೀವನ ಗೊಳಿಸಿದೆ ಮತ್ತು ಇವುಗಳ ಸಂರಕ್ಷಣೆಗೆ ಸ್ಥಳೀಯ ಸ್ವಸಹಾಯ ಗುಂಪಿನ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ.
ಶ್ರೀಕ್ಷೇತ್ರದ ಯೋಜನೆಯ ಅಧಿಕಾರಿಗಳು ಇದರ ಮೇಲ್ವಿಚಾರಣೆ ಮಾಡುತ್ತಾರೆ. ಈ ಮಾದರಿಯನ್ನು ಸರಕಾರವೂ ಅನುಸರಿಸಬೇಕು. ಅದೆಷ್ಟೋ ಕೆರೆಗಳು ಅಭಿವೃದ್ಧಿಯಿಲ್ಲದೆ ಪಾಳುಬಿದ್ದಿವೆ, ಮತ್ತೆ ಕೆಲವು ಅಭಿವೃದ್ಧಿ ಕಂಡರೂ ನಿರ್ವಹಣೆಯಿಲ್ಲದೆ ಸೊರಗುತ್ತಿವೆ. ಕೆರೆಗಳ ಪುನರುಜ್ಜೀವನ ಆಗಲೇಬೇಕು, ನೀರಿನ ಮೂಲಗಳನ್ನು ಉಳಿಸಿಕೊಳ್ಳಲೇಬೇಕು. ಮಳೆನೀರು ಸಮುದ್ರ ಸೇರುವುದನ್ನು ಸಂಪೂರ್ಣ ತಡೆಯಲಾಗದಿದ್ದರೂ, ಅಲ್ಪವಾದರೂ ಕೆರೆಗಳ ಸಂರಕ್ಷಣೆಯ ಮೂಲಕ ಆಗಬೇಕು. ಕೆರೆಯು ಜೀವನಸೆಲೆಯಾಗಿ ಉಳಿಯಬೇಕು.
ಸರಕಾರ, ಆಡಳಿತಯಂತ್ರ, ಇಲಾಖೆಗಳಿಗಿಂತಲೂ ಖಾಸಗಿಯಾಗಿ, ವ್ಯಕ್ತಿಗತವಾಗಿ ಜಲಮೂಲಗಳನ್ನು ಸಂಪನ್ಮೂಲಗಳನ್ನಾಗಿ ಉಳಿಸಿ ಬೆಳೆಸುವವರ ಉತ್ಸಾಹ, ಪರಿಶ್ರಮ ನಿಜಕ್ಕೂ ಅಪರೂಪದ್ದು. ಇಂದಿನ ಸಮಾಜವೂ ಸರಕಾರಿ ಯೋಜನೆಗಳಿಗಾಗಿ ಕಾಯದೆ ಇಂಥವರನ್ನು ಬೆಂಬಲಿಸುತ್ತಿದೆ. ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆ ಈ ನಿಟ್ಟಿನಲ್ಲಿ ಸರಕಾರಕ್ಕೆ ಮಾದರಿಯಾಗಲಿ. ತನ್ಮೂಲಕ, ಅಂದುಕೊಂಡ ಯೋಜನೆಗಳನ್ನು ಕಾಲಮಿತಿಯಲ್ಲಿ ಮುಗಿಸಿಕೊಡುವ ಸೂರ್ತಿಯು ನಮ್ಮ ಚುನಾಯಿತ ಸರಕಾರಕ್ಕೆ, ಆಡಳಿತ ವ್ಯವಸ್ಥೆಗೆ ದಕ್ಕುವಂತಾಗಲಿ.
ಇದನ್ನೂ ಓದಿ: Gururaj Gantihole Column: ಕರ್ನಾಟಕದ ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಕಾಯಕಲ್ಪವೆಂದು ?