Saturday, 14th December 2024

ಮರಣೋತ್ತರ ಪ್ರಶಸ್ತಿಯ ಪ್ರವೃತ್ತಿ

ನಾಡಿಮಿಡಿತ
ವಸಂತ ನಾಡಿಗೇರ

ಸತ್ತವರ ಬಗ್ಗೆ ಕೆಟ್ಟ ಮಾತನಾಡಬಾರದು ಅಂತಾರೆ. ಸುಸಂಸ್ಕೃತ ಸಮಾಜದಲ್ಲಿ ಬದುಕುವ ನಾವೆಲ್ಲ ಈ ಮಾತನ್ನು ಒಪ್ಪುತ್ತೇವೆ. ಆದರೆ ಯಾಕೋ ಈ ನಡುವೆ ಗಣ್ಯರು, ಆಪ್ತರು, ಗೆಳೆಯರು ಹೀಗೆ ಸಾಲು ಸಾಲು ಸಾವು ಸಂಭವಿಸುತ್ತಿವೆ. ಇದರಲ್ಲಿ ಕರೋನಾ ಕೊಡುಗೆಯೂ ಸಾಕಷ್ಟು ಇದೆ ಅನ್ನಿ. ಹೀಗೆ ಒಂದೊಂದು ಸಾವು ಸಂಭವಿಸಿದಾಗಲೂ ಅವರ ಗುಣಗಾನ, ಅವರೊಡನೆ ಯ ತಮ್ಮ ಒಡನಾಟ, ಅವರು ಹೀಗಿದ್ದರು, ಹಾಗಿದ್ದರು ಎಂದೆಲ್ಲಾ ಪುಂಖಾನುಪುಂಖವಾಗಿ ಬರೆಯಲಾಗುತ್ತದೆ.

ಈಗಂತೂ ಸಾಮಾಜಿಕ ಜಾಲತಾಣದ ಸೌಲಭ್ಯ ಇರುವಾಗ ಯಾರು, ಎಷ್ಟು ಬೇಕಾದರೂ ಬರೆದುಕೊಳ್ಳ ಬಹುದು. ಅದರಲ್ಲೇನೂ ತಪ್ಪಿಲ್ಲ ಬಿಡಿ. ಆದರೆ ಆ ಬರಹಗಳಲ್ಲಿ, ಸಾವಿನ ಸಂದರ್ಭಗಳಲ್ಲಿ ನಾವು ನಡೆದು ಕೊಳ್ಳುವ ರೀತಿ ಅನೇಕ ಸಾರಿ ಉತ್ತರಗಳಿಲ್ಲದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ‘ಏನ್ರೀ ಹೀಗೆ ಹೇಳುತ್ತೀರಿ.
ಮನುಷ್ಯತ್ವ ಇರುವವರೆಲ್ಲರೂ ಹೀಗೆ ಮಾಡುತ್ತಾರೆ. ಅದರಲ್ಲಿ ತಪ್ಪೇನು’ ಎನ್ನಬಹುದು. ಇದೆಂಥ ಮೂರ್ಖ,
ಸಿನಿಕ ಪ್ರಶ್ನೆ ಎನ್ನಲೂಬಹುದು.

ನಿನ್ನೆ ಎಸ್‌ಪಿ ಬಾಲಸುಬ್ರಹಣ್ಯಂ, ಮೊನ್ನೆ ಶಾಸಕ ನಾರಾಯಣರಾವ್, ಅದರಾಚೆ ಮೊನ್ನೆ ಕೇಂದ್ರ ಸಚಿವ
ಸುರೇಶ್ ಅಂಗಡಿ ಅವರು ನಮ್ಮನ್ನು ಅಗಲಿದರು. ಸುರೇಶ್ ಅಂಗಡಿಯವರ ದೇಹವನ್ನು ಅವರ ಹುಟ್ಟೂರಿಗೆ ತರಲೂ ಆಗಲಿಲ್ಲ. ಅಲ್ಲೇ ಅಂತ್ಯಕ್ರಿಯೆ ನಡೆಸಬೇಕಾಯಿತು. ಕರೋನಾ ಕಾರಣದಿಂದಾಗಿ ಅವರಿಗೆ ಸಿಗಬೇಕಾಗಿದ್ದ ರೀತಿಯ ಅಂತಿಮ ಸಂಸ್ಕಾರ ಸಿಗಲಿಲ್ಲ. ಆಗ ಯಾರೋ ಒಬ್ಬರು; ‘ಸಚಿವರಾದರೇನು, ಯಾರಾದರೇನು, ಎಲ್ಲರೂ ಮಣ್ಣಲ್ಲಿ ಮಣ್ಣಾಗುವವರೇ’ ಎಂದು ಉದ್ಗರಿಸಿದರು. ದಾಸರು ಇದನ್ನು ಸ್ಮಶಾನ ವೈರಾಗ್ಯ ಎಂತಲೂ ಕರೆದಿದ್ದಾರೆ. ಅದರ ಪರಿಣಾಮವೂ ಇರಬಹುದು.

ಬಸವಕಲ್ಯಾಣದ ಶಾಸಕ ನಾರಾಯಣರಾವ್, ಕರೋನಾ ಪಾಸಿಟಿವ್ ಆಗಿ ಆಸ್ಪತ್ರೆ ಸೇರಿದ್ದರು. ಈ ವಿಷಯ ಎಷ್ಟು ಜನರಿಗೆ ಗೊತ್ತಿತ್ತೋ ನಾ ಕಾಣೆ. ಆದರೆ ಅವರು ಮೃತಪಡುತ್ತಲೇ ‘ಮರೆಯದ ಮಾಣಿಕ್ಯ’ ಎಂದೆಲ್ಲ ಹೊಗಳಿಕೆಗಳು ಕೇಳಿಬಂದವು. ಅವರು ವಿಧಾನಸಭೆಯಲ್ಲಿ ಮಾತನಾಡಿದ ವಿಡಿಯೋಗಳು ಹರಿದಾಡಿದವು. ಪ್ರಾಮಾಣಿಕ, ಕೆಳಹಂತದಿಂದ ಬಂದು ಶಾಸಕರಾದ ಜನನಾಯಕ ಎಂದೆಲ್ಲ ಕೊಂಡಾಡಿದರು. ಅದೆಲ್ಲ ನಿಜ ಇರಬಹುದು. ಆದರೆ ಕಳೆದು ನಲವತ್ತು ವರ್ಷಗಳಿಂದ ರಾಜಕೀಯದಲ್ಲಿರುವ, ಜನರ ಪರ ಹೋರಾಟ ಮಾಡುತ್ತಿರುವ ನಾರಾಯಣರಾವ್ ಅವರ ಬಗ್ಗೆ ಇಷ್ಟು ದಿನ ಯಾರೂ ಏನನ್ನೂ ಮಾತನಾಡಲಿಲ್ಲ. ಬರೆಯ ಲಿಲ್ಲ? ಅಸಲಿಗೆ ಇಂಥವರೊಬ್ಬರು ಶಾಸಕರಾಗಿದ್ದಾರೆ ಎಂಬುದಾದರೂ ಎಷ್ಟು ಮಂದಿಗೆ ಗೊತ್ತಿತ್ತು? ಆದರೆ ವ್ಯಕ್ತಿಗಳು ನಿಧನರಾಗುತ್ತಲೇ ಮಹಾನ್ ವ್ಯಕ್ತಿಯಾಗುತ್ತಾರೆ.

ಹಾಗಾದರೆ ಅವರು ಬದುಕಿದ್ದಾಗಲೂ ಹೀಗೆಯೇ ಇರಲಿಲ್ಲವೆ ಎಂದರೆ ಇದ್ದಿರಬಹುದು, ಆದರೆ ನಾವು ಗುರುತಿಸಿರುವುದಿಲ್ಲ. ಅಥವಾ ಅಷ್ಟಾಗಿ ಗಮನ ಹರಿಸಿರುವುದಿಲ್ಲ. ಈ ನಡುವೆ ಕೆಲ ಪತ್ರಕರ್ತ ಮಿತ್ರರೂ ತೀರಿ
ಹೋಗಿದ್ದಾರೆ. ಅದಕ್ಕೆ ಮುನ್ನ ಆ ಪೈಕಿ ಕೆಲವರು ಅನಾರೋಗ್ಯಪೀಡಿತರಾಗಿ, ಅಥವಾ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಈಡಾಗಿರುವುದೂ ಉಂಟು. ಆಗ ಅವರು ನಮಗೆ ನೆನಪಾಗುವುದಿಲ್ಲ. (ನೆನಪಿಸಿ ಕೊಂಡ, ನೆರವು ನೀಡಿದ ಉದಾಹರಣೆಗಳೂ ಇವೆ. ಇಲ್ಲ ಎಂದಲ್ಲ. ಆದರೆ ನಾನಿಲ್ಲಿ ಜನರಲ್ ಆಗಿ
ಹೇಳುತ್ತಿರುವುದು). ಆದರೆ ನಿಧನರಾಗುತ್ತಲೇ ಅವರೊಡನೆಯ ಒಡನಾಟ, ಅವರ ಗುಣಗಾನ ಎಲ್ಲವೂ ನಡೆಯುತ್ತದೆ. ಅದರಾಚೆ ಯೋಚಿಸುವುದು ಕಡಿಮೆಯೇ. ಇನ್ನು ಸತ್ತ ಮೇಲೆ ನಡೆಯುವ ಆಚರಣೆಗಳೂ
ಅಷ್ಟೇ. ಪಾರ್ಥಿವ ಶರೀರದ ಮೆರವಣಿಗೆ, ಅನಂತರ ಆ ಕಾರ‌್ಯಗಳು. ಎಲ್ಲವೂ ನಡೆಯಬೇಕಾದುದೇ. ಅದು
ಅವರವರ ಪ್ರೀತ್ಯಾ0ದರ, ಗೌರವವನ್ನು ಆಧರಿಸಿರುತ್ತದೆ.

ಹಾಗೆಯೇ ಜನಾನುರಾಗಿಯಾಗಿದ್ದು ಸಮಾಜಕ್ಕೆ ಕೊಡುಗೆ ನೀಡಿದಂಥವರು ನಿಧನರಾದಾಗ ಅವರನ್ನು
ನೆನಯುವುದು ಯೋಗ್ಯವೂ ಹೌದು. ಒಂದು ರೀತಿಯಲ್ಲಿ ನಮ್ಮ ನೈತಿಕ ಕರ್ತವ್ಯವೂ ಹೌದು. ‘ಶರಣರ
ಗುಣ ಮರಣದಲ್ಲಿ ಕಾಣು’ ಎಂದು ಹೇಳುತ್ತಾರೆ. ಸತ್ತವರನ್ನು ಸ್ಮರಿಸುವುದು ಉದಾರವಾದ ಗುಣವೇ. ಆದರೆ ಇದ್ದಾಗ ನಿರ್ಲಕ್ಷಿಸಿ ಸತ್ತ ಮೇಲೆ ಹಾಡಿ ಹೊಗಳುವುದು ಬಾಲಿಶ, ಕ್ಲೀಶೆ ಮತ್ತು ಯಾಂತ್ರಿಕ ಎನಿಸುತ್ತದೆ.

ಇತ್ತೀಚೆಗಂತೂ ಅಂತ್ಯಸಂಸ್ಕಾರದ ನೇರಪ್ರಸಾರವನ್ನು ಟಿವಿ ಚಾನೆಲ್‌ಗಳವರು ಗಂಟೆಗಟ್ಟಲೆ ತೋರಿಸುತ್ತಾರೆ.  ಹಾಗೆಯೇ ತಮ್ಮ ಪ್ರೀತಿ ಪಾತ್ರರಾದವರಿಗೆ ಗೌರವ ತೋರಲು ಪುಟಗಟ್ಟಲೆ ಜಾಹೀರಾತು ಕೊಡುವುದೂ ಉಂಟು. ಕೆಲವೊಮ್ಮೆ ಕೃತ್ರಿಮವೂ ಆಗಿರುತ್ತದೆ. ಅದೇ ರೀತಿ ಈ ಆಚರಣೆಗಳು ಹೇಗಿರಬೇಕು ಎಂಬುದನ್ನೂ ಗಮನಿಸಬೇಕು. ವಿದೇಶದಲ್ಲಿ ಗಣ್ಯರು ನಿಧನರಾದಾಗ ಅವರಿಗೆ ಶ್ರದ್ಧಾಾಂಜಲಿ ಸಭೆ ನಡೆಯುತ್ತದೆ. ಅದರಲ್ಲಿ ಎಲ್ಲರೂ ಭಾಗವಹಿಸುತ್ತಾರೆ. ಆದರೆ ಅಂತ್ಯಕ್ರಿಯೆಯಲ್ಲಿ ಮಾತ್ರ ಕುಟುಂಬ ಸದಸ್ಯರು ಮಾತ್ರ ಪಾಲ್ಗೊಳ್ಳು ತ್ತಾರೆ. ಇದು ಅತ್ಯಂತ ಖಾಸಗಿ ಕ್ಷಣ ಹಾಗೂ ವಿಚಾರ. ಖಾಸಗಿತನ ವನ್ನು ಗೌರವಿಸಬೇಕು ಎಂಬುದು ಅಲ್ಲಿನ ನಿಲುವು.

ಇರಲಿ. ಅದು ಅವರ ರೀತಿ. ನಮ್ಮದು ಈ ನೀತಿ ಎನ್ನಬಹುದು. ಆದರೆ ಇವೆರಡರ ನಡುವೆ ಒಂದು ಸಮತೋಲನ ಕಾಯ್ದುಕೊಳ್ಳಬಹುದಲ್ಲವೆ ? ಡಾ.ರಾಜಕುಮಾರ್ ನಿಧನರಾದಾಗ ಅವರ ಪಾರ್ಥಿವ
ಶರೀರದ ಬಳಿ ತೆರಳಿ ಅಂತ್ಯ ಸಂಸ್ಕಾರ ನೆರವೇರಿಸಲು ಕುಟುಂಬ ಸದಸ್ಯರಿಗೇ ಸಾಧ್ಯವಾಗಲಿಲ್ಲ. ಹೀಗೆ
ಆತ್ಮೀಯರು, ನೆಚ್ಚಿನ ನಾಯಕರು, ಗಣ್ಯರು ನಿಧನರಾದಾಗ ಇಷ್ಟೆಲ್ಲ ವಿಜೃಂಭಣೆ ಮಾಡುವಂಥ ಈ ಪ್ರವೃತ್ತಿ
ಇಂದು ನೆನ್ನೆೆಯದೇನೂ ಅಲ್ಲ. ಅದ್ಧೂರಿ ಮೆರವಣಿಗೆ, ವಿಧಿಪೂರ್ವಕ ಅಂತ್ಯಸಂಸ್ಕಾರ, ಭವ್ಯ ಸಮಾಧಿ ಎಲ್ಲವೂ ಸರಿ. ಆದರೆ ತಮ್ಮ ಸಾವನ್ನು ಯಾರೆಲ್ಲ ಹೇಗೆ ಸ್ವೀಕರಿಸಿದರು, ಏನೆಲ್ಲ ಮಾಡಿದರು ಎಂಬುದು
ಸತ್ತವರಿಗಂತೂ ಗೊತ್ತಾಗದು. ಹೇಗೆಲ್ಲ ಮೆರವಣಿಗೆ ನಡೆಯಿತು, ಎಷ್ಟು ಮಂದಿ ಭಾಗವಹಿಸಿದ್ದರು ಎಂದು
ಕೂಡ ತಿಳಿಯುವುದಿಲ್ಲ.

ಪತ್ರಿಕೆಗಳಲ್ಲಿ ನಾನಾ ಬಗೆಯ ವಿಭಾಗಗಳಿರುತ್ತವೆ. ಆದರೆ ಖ್ಯಾತ ಮತ್ತು ದೊಡ್ಡ ಪತ್ರಿಕೆಗಳಲ್ಲಿ ‘ಮಾರ್ಗ್’
(ಅಂದರೆ ಶವಾಗಾರ) ಎಂಬ ವಿಶೇಷ ವಿಭಾಗವೂ ಇರುತ್ತದೆ. ಅಲ್ಲಿ ಸಾಮಾನ್ಯವಾಗಿ ಹಳೆಯ ಘಟನೆಗಳ
ಬಗ್ಗೆ ಮಾಹಿತಿ, ಫೋಟೊಗಳಿರುತ್ತವೆ. ಪ್ರಮುಖ ವ್ಯಕ್ತಿಗಳ ಜೀವನ ಪರಿಚಯ-ಪ್ರೊಫೈಲ್‌ಗಳಿರುತ್ತವೆ.
ಯಾವುದಾದರೂ ಘಟನೆಗಳು ಇದ್ದಕ್ಕಿದ್ದಂತೆ ಘಟಿಸಿದರೆ, ಯಾರಾದರೂ ಹಠಾತ್ತಾಗಿ ನಿಧನರಾದರೆ ಅದರ/ಅವರ ಬಗ್ಗೆ ಬರೆಯಲು ಹೆಚ್ಚಿನ ವಿವರಗಳಿರುವುದಿಲ್ಲ. ಅದಕ್ಕಾಗಿಯೇ ವಿವರಗಳನ್ನು ಮೊದಲೇ ಸಿದ್ಧಪಡಿಸಿ
ಇಟ್ಟಿರುತ್ತಾರೆ. ಇದು ಸಾಮಾನ್ಯವಾಗಿ ನಡೆದುಕೊಂಡು ಬಂದಿರುವ ಪದ್ಧತಿ. ಈಗಲೂ ಚಾಲ್ತಿಯಲ್ಲಿದೆ. ಆದರೆ
ಇಲ್ಲಿ ಒಂದು ಪ್ರಸಂಗ ನೆನಪಿಗೆ ಬರುತ್ತದೆ. ಡೈನಮೈಟ್ ಅನ್ನು ಕಂಡುಹಿಡಿದ ಖ್ಯಾತ ವಿಜ್ಞಾನಿ ಆಲ್ಫ್ರೆೆಡ್ ನೊಬೆಲ್ ಗೆ ಆ ಕಾರಣಕ್ಕಾಗಿ ಅಪಾರ ಹಣ, ಹೆಸರು ಪ್ರಾಪ್ತಿಯಾಯಿತು. ಆದರೆ ಅವರ ಕುರಿತು ಫ್ರೆೆಂಚ್
ಪತ್ರಿಕೆಯ ಮಾರ್ಗ್‌ನಲ್ಲಿ ವಿವರ ಇತ್ತಲ್ಲ. ಅದು ಬಹುಶಃ ಕಣ್ತಪ್ಪಿನಿಂದಾಗಿ, ಅಚಾನಕ್ಕಾಗಿ ನೊಬೆಲ್
ಬದುಕಿದ್ದಾಗಲೇ ಪ್ರಕಟವಾಗಿಬಿಟ್ಟಿತು. ಅದರಲ್ಲಿ ನೊಬೆಲ್ ಅವರನ್ನು ‘ಸಾವಿನ ವ್ಯಾಪಾರಿ’ ಎಂದು ಬಣ್ಣಿಸ ಲಾಗಿತ್ತು. ತಾನು ಸತ್ತ ಮೇಲೆ ಜನರು ತನ್ನನ್ನು ಬಹುಶಃ ಹೀಗೆಯೇ ನೆನಪಿಟ್ಟುಕೊಳ್ಳಬಹುದು ಎಂದು
ಭಾವಿಸಿದ ನೊಬೆಲ್, ಪಶ್ಚಾತ್ತಾಪವಾಗಿ ಅಥವಾ ತಪ್ಪನ್ನು ಸರಿಪಡಿಸುವ ಭಾಗವಾಗಿ ‘ನೊಬೆಲ್’ ಪ್ರಶಸ್ತಿ ಯನ್ನು ಸ್ಥಾಾಪಿಸಿದರು.

ಆದರೆ ಎಲ್ಲರಿಗೂ ಈ ಅವಕಾಶ ಇರುವುದಿಲ್ಲವಲ್ಲ. ಹೀಗಾಗಿ ಈ ಸಂಗತಿಯನ್ನು ನಾವೂ ಗಮನಿಸಬಹುದು.
ಮರಣೋತ್ತರವಾಗಿ ಪ್ರಶಸ್ತಿಗಳನ್ನು ಕೊಡುವ ಸಂಪ್ರದಾಯ ನಮ್ಮಲ್ಲಿದೆಯಲ್ಲ. ಯುದ್ಧದಲ್ಲಿ, ಮತ್ತಿತರ ಕಾರ್ಯಾಚರಣೆಗಳಲ್ಲಿ ಮಡಿದವರಿಗೆ ಮರಣೋತ್ತರ ಪ್ರಶಸ್ತಿ ನೀಡಿ ಗೌರವಿಸುವುದು ಅರ್ಥವಾಗುವಂಥದ್ದು. ಆದರೆ ಉಳಿದವರಿಗೆ ಆವರು ಜೀವಂತವಾಗಿರುವಾಗಲೇ ಅವರ ಕಾರ‌್ಯವನ್ನು, ಕೊಡುಗೆಯನ್ನು ಗುರುತಿಸಿ ಗೌರವಿಸಬಹುದು.

ಅವರಿಗೆ ಸಲ್ಲಬೇಕಾದ ಪ್ರಶಸ್ತಿ ಪುರಸ್ಕಾರಗಳನ್ನು ಕೊಡಮಾಡಿ ನಮ್ಮ ಕೃತಜ್ಞತೆಯನ್ನು ಸಲ್ಲಿಸಬಹುದು.
ಇದರಿಂದ ಅವರಿಗೂ ತೃಪ್ತಿ, ಸಂತಸ, ಧನ್ಯತಾಭಾವ ಇರುತ್ತದೆ. ಅಲ್ಲವೆ? ಇದೇ ಮನೋಭಾವವನ್ನು ನಾವು ಕೂಡ ಯಾಕೆ ಬೆಳೆಸಿಕೊಳ್ಳಬಾರದು? ಇರುವಾಗ ಒಂದು ಒಳ್ಳೆ ಮಾತು ಆಡದೆ, ಅವರ ಕೆಲಸವನ್ನು ಶ್ಲಾಸದೆ, ಒಳ್ಳೆತನವನ್ನು ನೆನೆಸದೆ, ಅವರಿಗೆ ಕೈಲಾದ ನೆರವು ನೀಡದೆ, ಸತ್ತ ಮೇಲೆ ‘ಅವರು ಹಾಗಿದ್ದರು, ಹೀಗಿದ್ದರು, ತುಂಬಲಾರದ ನಷ್ಟ’ ಎಂದರೆ ಏನು ಪ್ರಯೋಜನ ? ‘ನನ್ನ ಅವರ ಒಡನಾಟ ಹೀಗಿತ್ತು, ನನಗೆ ಅವರು ಆತ್ಮೀಯರಾಗಿದ್ದರು’ ಎಂದೆಲ್ಲ ಬರೆದುಕೊಂಡರೆ ಲಾಭವೇನು. ಅದು ನಿಜವೋ                                                                                                                                                                                                                                      ಸುಳ್ಳೋ ಎಂಬುದಕ್ಕೆ ಸರ್ಟಿಫಿಕೇಟ್ ನೀಡಲು ಆ ಜೀವವಂತೂ ಅಲ್ಲಿರುವುದಿಲ್ಲ. ಈಗಾಗಲೇ ತಿಳಿಸಿರುವ ಹಾಗೆ ಸತ್ತಾಗ ಸ್ಮರಿಸಿಕೊಳ್ಳುವುದು ಮನುಷ್ಯ ಸಹಜ ಗುಣ. ಆದರೆ ಇದ್ದಾಗಲೇ ಈ ಕೆಲಸಗಳನ್ನು ನಾವೇಕೆ ಮಾಡಬಾರದು. ಯಾವ ವ್ಯಕ್ತಿ ಸತ್ತಾಗ ಅವರ ಸದ್ಗುಣಗಳನ್ನು ಹೊಗಳುತ್ತಾರೊ, ಅವರೊಡನೆ ತಮ್ಮ ಆತ್ಮೀಯ ಒಡನಾಟವನ್ನು ಸ್ಮರಿಸಿಕೊಳ್ಳುತ್ತಾರೋ ವಾಸ್ತವವಾಗಿ ಆ ವ್ಯಕ್ತಿ ಬದುಕಿದ್ದಾಗ, ಆತನಿಗೆ ಯಾವುದೋ ಪ್ರಶಸ್ತಿಯನ್ನು ತಪ್ಪಿಸಿರಬಹುದು; ಸ್ಥಾನಮಾನಕ್ಕೆ ಕೊಕ್ಕೆ ಹಾಕಿರಬಹುದು. ಅಥವಾ ಅವರಿಗೆ ಸಲ್ಲಬೇಕಾದ ಮಾನ್ಯತೆಯನ್ನು ಗುರುತಿಸಲು ಪ್ರತಿಷ್ಠೆ ಅಡ್ಡಬಂದಿರಬಹುದು. ಅದಕ್ಕೇ ಇಲ್ಲಿ ಒತ್ತಿ ಒತ್ತಿ ಹೇಳುವುದೇನೆಂದರೆ, ಸತ್ತಾಗ ಅತ್ತು ಕರೆಯುವ ಬದಲು ಇದ್ದಾಗ ಒಳ್ಳೆಯವರಾಗಿರಬಹುದು.

ನಮಗೆ ಗೊತ್ತಿರುವ ಒಬ್ಬರಿಗೆ ಪ್ರಶಸ್ತಿ ಬಂದಾಗ, ಯಾವುದಾದರೂ ಸಾಧನೆ ಮಾಡಿದಾಗ ಅದನ್ನು ಮುಕ್ತವಾಗಿ ಹೊಗಳಲು ನಮಗೇನು ಅಡ್ಡಿ? ಅಥವಾ ಅವರನ್ನು ಭೇಟಿಯಾಗಿ ಶುಭಾಶಯಗಳನ್ನು ತಿಳಿಸಬಹುದು. ನಾವು
ನಿರ್ಣಾಯಕ ಅಥವಾ ಜವಾಬ್ದಾರಿಯುತ ಸ್ಥಾನದಲ್ಲಿ, ಅಧಿಕಾರದಲ್ಲಿದ್ದರೆ ಅವರಿಗೆ ಸೂಕ್ತ ಗೌರವಾದರ,
ಸ್ಥಾನಮಾನಗಳನ್ನು ಕೊಡಿಸಲು ಪ್ರಯತ್ನಿಸಬಹುದು. ಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು ನೀಡಬಹುದು.
ಅಗತ್ಯ ಎನಿಸಿದರೆ, ಸಾಧ್ಯವಿದ್ದರೆ ಅವರಿಗೆ ಜೀವನಾಧಾರಕ್ಕೆ ದಾರಿ ಮಾಡಿಕೊಡಲು ಪ್ರಯತ್ನಿಸಬಹುದು.
ಸಾಮಾನ್ಯವಾಗಿ ಜನ್ಮದಿನದ ಸಂದರ್ಭದಲ್ಲಿ ಶುಭಾಶಯ ಹೇಳುವುದು ರೂಢಿ. ಆದರೆ ಸಾಮಾಜಿಕ ಜಾಲತಾಣ ಗಳ ಬಳಕೆ ಅತಿಯಾಗಿರುವ ಈ ದಿನಗಳಲ್ಲಿ ವಾಟ್‌ಸ್‌ ಆಪ್ ಗ್ರೂಪ್‌ಗಳಲ್ಲಿ, ಫೇಸ್‌ಬುಕ್‌ನಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತವೆ.

ನಾವು ಯಾರ ಜನ್ಮದಿನದ ದಿನಾಂಕವನ್ನೂ ನೆನಪಿಡಬೇಕಾದ ಅವಶ್ಯಕತೆ ಕೂಡ ಇರುವುದಿಲ್ಲ. ಜಾಲತಾಣ ಗಳೇ ನೆನಪಿಸುತ್ತವೆ. ಹೀಗಾಗಿ ಇತ್ತಿತ್ತಲಾಗಿ ಇದೊಂದು ವಾರ್ಷಿಕ ವಿಧಿಯಂತಾಗಿದೆ. ‘ಇಂದು ನನ್ನ ಜನ್ಮದಿನ, ನಮ್ಮ ವಿವಾಹ ವಾರ್ಷಿಕೋತ್ಸವ, ನಮಗೆ ನಿಮ್ಮ ಹಾರೈಕೆ ಇರಲಿ’ ಎಂದು ಕೇಳಿ ಶುಭಾಶಯ ಪಡೆಯು ವವರೂ ಇದ್ದಾರೆ. ಆ ಮಾತು ಬೇರೆ. ಆದರೆ ಆತ್ಮೀಯರಾದರೆ, ನಾನು ಸಾಮಾನ್ಯವಾಗಿ ಗ್ರೂಪ್ ಮಾತ್ರವಲ್ಲ ವೈಯಕ್ತಿಕವಾಗಿಯೂ ಮೆಸೇಜು ಮಾಡುತ್ತೇನೆ. ಸಾಧ್ಯವಾದರೆ ಕರೆ ಮಾಡುತ್ತೇನೆ.

ನನ್ನೊಬ್ಬ ಮಿತ್ರ ಸ್ವಲ್ಪ ಹೆಚ್ಚಾಗಿ ಕುಡಿಯುತ್ತಾನೆ. ಪಿತ್ರಾರ್ಜಿತವೋ, ಸ್ವಯಾರ್ಜಿತವೋ ಕೆಲವು ಕಾಯಿಲೆ ಗಳಿವೆ. ಹೀಗಾಗಿ ‘ಈ ಜನ್ಮದಿನದ ಸಂದರ್ಭದಲ್ಲಿ ಕುಡಿಯುವುದನ್ನು ಬಿಡು, ಅಥವಾ ಕಡಿಮೆಯಾದರೂ ಮಾಡು’ ಎಂದು ಹೇಳುತ್ತೇನೆ. ಅಥವಾ ಸಿಗರೇಟ್ ಸೇದುವ ಚಟವಿದ್ದವನಾಗಿದ್ದರೆ, ‘ಸ್ಮೋಕಿಂಗ್ ಅಭ್ಯಾಸವನ್ನು ಬಿಡು ಇಲ್ಲವೆ ಕಡಿಮೆ ಮಾಡು’ ಎಂದು ಹಾರೈಸುತ್ತೇನೆ. ಅದು ಬಿಟ್ಟು, ದುಶ್ಚಟವೂ ಒಂದು ಕಾರಣವಾಗಿ  ಯಾರಾದರೂ ಮೃತಪಟ್ಟರು ಎಂದಿಟ್ಟುಕೊಳ್ಳಿ ಆಗ, ‘ಪಾಪ, ಕುಡಿದು ಕುಡಿದು ಸತ್ತ’ ಎಂದು ನಾಲ್ಕು ಸಾಲು ಬರೆದರೆ ಏನು ಸಾಧಿಸಿದಂತಾಯಿತು ? ಈಚೆಗೆ ಗಣ್ಯರು, ಆಪ್ತರು, ಪರಿಚಯಸ್ಥರನೇಕರು ನಮ್ಮನ್ನು ಅಗಲಿ ದಾಗ ನಾನು ಗಮನಿಸಿದ ಸಂಗತಿಗಳನ್ನು ಅಧರಿಸಿ ಈ ಎಲ್ಲ ವಿಷಯಗಳು ಏಕೋ ನೆನಪಾದವು.

ಹಾಗೆಂದು, ‘ಸತ್ತವರು ಸತ್ತರು, ಅವರೇನು ಎದ್ದು ಬರುತ್ತಾರಾ’ ಎಂದು ಕೇಳುವಂಥ ಕೆಲವರೂ ಇರುತ್ತಾರೆ.
ನಾನು ಅಂಥ ಸಿನಿಕನೇನೂ ಅಲ್ಲ. ಆದರೆ ಮರಣೋತ್ತರ ಗುಣಗಾನಕ್ಕಿಿಂತ ಮರಣ ಪೂರ್ವದಲ್ಲಿ ಹರಸಿ, ಹಾರೈಸಿ, ಶ್ಲಾಸಿ, ಗುರುತಿಸುವ ಗುಣ ದೊಡ್ಡದು ಅಂತ ಏಕೋ ಅನಿಸಿತು. ಒಣ ಸಂತಾಪಕ್ಕಿಿಂತ ಇದು ಉತ್ತಮ.

ನಾಡಿಶಾಸ್ತ್ರ
ಸತ್ತ ಎಮ್ಮೆ ಸೇರು ತುಪ್ಪ ಕೊಡುತಿತ್ತು
ಎಂದು ಅತ್ತರೇನು ಪ್ರಯೋಜನ
ಮರಣದ ಬಳಿಕ ಮರುಗುವುದಕ್ಕಿಿಂತ
ಇದ್ದಾಗ ಇಷ್ಟಪಡುವುದು ಲೇಸು.