Friday, 13th December 2024

ಹಾಯ್‌ ಮಿಸ್ಟರರ ಖೇಮು, ನೀವೇನಿಲ್ಲಿ ?

 ತುಂಟರಗಾಳಿ

ಹರಿ ಪರಾಕ್

ಲೂಸ್ ಟಾಕ್
ಅಮೂಲ್ಯ  ಏನ್ರೀ, ನಿಮ್ಮ ಪ್ರೆಗ್ನೆನ್ಸಿ ವಿಷಯ ವರ್ಲ್ಡ್‌ ‌ಫೇಮಸ್ ಆಗಿಬಿಟ್ಟಿದೆಯಲ್ಲ.
ಏನೋಪ್ಪಾ, ಈ ಟಿವಿ ಚಾನೆಲ್ ನವರು ಔಟ್ ಆಫ್ ದಿ ವರ್ಲ್ಡ್‌ ಸುದ್ದಿ ಅನ್ನೋ ಥರ ಪ್ರಚಾರ ಕೊಡ್ತಾ ಇದ್ದಾರೆ.
ಅಂದಹಾಗೆ, ನೀವು ಪ್ರೆಗ್ನೆಂಟ್ ಆಗಿದ್ದೀರಾ ಅಂತ ನಿಮಗೆ ಯಾರು ಹೇಳಿದ್ದು 
ಅದೇ, ಟಿವಿ ಚಾನೆಲ್ ನೋರು, ಅವ್ರ ಹೇಳಿದ್ ಮೇಲೇನೇ ನಂಗೂ ಗೊತ್ತಾಗಿದ್ದು
ಹುಟ್ಟೋ ನಿಮ್ಮ ಮಗು ದೊಡ್ಡದಾದ ಮೇಲೆ ಏನಾಗಬೇಕು ಅಂತ ನಿಮ್ಮ ಆಸೆ? 

ಟಿವಿ ಜರ್ನಲಿಸ್ಟ್ ಮಾಡಿ ಋಣ ತೀರಿಸೋಣ ಅಂತಿದ್ದೀನಿ.

ನೀವು ಗರ್ಭಿಣಿ ಆಗಿರೋದು ನೋಡಿ ಇಡೀ ರಾಜ್ಯನೇ ಸಂಭ್ರಮ ಪಡ್ತಾ ಇದೆಯಂತೆ?
ಯಾರ್ ಸಂಭ್ರಮ ಪಟ್ರೆ ಏನು, ಪಾಪ ನಮ್ ಮಾದೇಶ ಮಾತ್ರ ಇನ್ನೂ ಪರಪರ ಅಂತ ತಲೆ ಕೆರ್ಕೊಂಡೇ ಓಡಾಡ್ತಾ ಇದ್ದಾನೆ.
ಸರಿ ಈ ಸೆನ್ಸೇಶನಲ್ ಸುದ್ದಿ ಕೇಳಿ ನಿಮ್ಮ ಮನೆಯವರು ಏನಂದ್ರು?
ಆ ಟಿವಿ ಚಾನೆಲ್‌ನವರು ಸೀಮಂತ ಕ್ರಾರ್ಯಕ್ರಮನಾ ಲೈವ್ ಕೊಡ್ತಾರಾ ಕೇಳು ಅಂದ್ರು.
(ಕಾಲ್ಪನಿಕ ಸಂದರ್ಶನ)

ಸಿನಿಗನ್ನಡ
ಕೆಲವರು ಅವರನ್ನ ಶರಪಂಜರ ಶಿವರಾಂ ಅಂತಾರೆ, ಕೆಲವರು ಶುಭಮಂಗಳ ಶಿವರಾಂ ಅಂತಾರೆ, ಇನ್ನು ಕೆಲವರು ನಾಗರಹಾವು ಶಿವರಾಂ ಅಂತಾರೆ. ನಾಗರಹಾವು ಚಿತ್ರದ ಶಿವರಾಂ ಅವರ ಮಾತಿನ ಶೈಲಿಯ ಹೇಳೋದಾದ್ರೆ, ‘ಇದು ಹಿರಿಯ ನಟ ಶಿವರಾಂ ಅವರ ಸ್ಪೆಷಾಲಿಟಿ’. ಇಂಥ ಹಿರಿಯ ನಟ ಈಗ ನಮ್ಮನ್ನ ಅಗಲಿದ್ದಾರೆ. ವಯಸ್ಸಾಗಿದ್ದರೂ ಗಟ್ಟಿ ಮುಟ್ಟಾಗಿದ್ದ, ಸಿನಿಮಾ ರಂಗ ದಲ್ಲಿ ಇನ್ನೂ ಲವಲವಿಕೆಯಿಂದಲೇ ಓಡಾಡಿಕೊಂಡಿದ್ದ ಶಿವರಾಂ, ಮನೆಯಲ್ಲಿ ದೇವರ ಪೂಜೆ ಮಾಡುವಾಗ ಜಾರಿ ಬಿದ್ದು, ತಲೆಗೆ ಏಟು ಬಿದ್ದು ಆಕಸ್ಮಿಕವಾಗಿ ನಿಧನರಾಗಿರುವ ಸುದ್ದಿ ಸಿನಿ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.

ಶಿವರಾಂ ಜನಪ್ರಿಯ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಪೋಷಕ ಪಾತ್ರಗಳ ಮಿಂಚಿದ್ದರಿಂದ ಅವರಿಗೆ ಸ್ಟಾರ್‌ಗಳಿಗೆ ಸಿಕ್ಕಷ್ಟು ಬೆಲೆ ಸಿಗೊಲ್ಲ ಅನ್ನೋದು ಸತ್ಯ. ಅದರ ಬಗ್ಗೆ ಅವರಿಗೆ ಅಸಮಾಧಾನ ಇತ್ತು ಅನ್ಸುತ್ತೆ. ಅದಕ್ಕೇ ಡಿಸೆಂಬರ್ ಬಂತು ಅಂದ್ರೆ ಜನವರಿ ೨೮ಕ್ಕೆ ಇರುವ ಅವರ ಹುಟ್ಟುಹಬ್ಬವನ್ನು ಆತ್ಮೀಯ ಪತ್ರಕರ್ತರಿಗೆ ಜ್ಞಾಪಿಸಿ, ದಯವಿಟ್ಟು ನಿಮ್ಮ ಪತ್ರಿಕೆಯ ಜನ್ಮದಿನ ಕಾಲಂನಲ್ಲಿ ಹಾಕಿ ಅಂತ ಕೇಳುತ್ತಿದ್ದರು.

ಸ್ಟಾರುಗಳ ಹುಟ್ಟುಹಬ್ಬವನ್ನ ಅವರ ಅಭಿಮಾನಿಗಳು ಧೂಂ ಧಾಂ ಅಂತ ಆಚರಿಸಿದರೆ, ಇಂತಹ ಪೋಷಕ ನಟರಿಗೆ ಎಷ್ಟೇ ಜನ ಅಭಿಮಾನಿಗಳಿದ್ದರೂ ಅವರ ಹುಟ್ಟುಹಬ್ಬ ಯಾವಾಗ ಅನ್ನೋದೇ ಬಹುತೇಕರಿಗೆ ಗೊತ್ತಿರೊಲ್ಲ. ಆದರೆ, ತುಂಬು ಜೀವನ ನಡೆಸಿ, ಅತ್ಯುತ್ತಮ ಕಲಾವಿದ ಎಂದು ಸಾಕಷ್ಟು ಬಾರಿ ನಿರೂಪಿಸಿರುವ ಎಲ್ಲರ ಪ್ರೀತಿಯ ಶಿವರಾಮಣ್ಣ ಈಗ ತಮ್ಮ ಹುಟ್ಟು ಹಬ್ಬ ಹತ್ತಿರ ಇರೋ ಸಮಯದ ತೀರಿಕೊಂಡಿದ್ದಾರೆ. ಈ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಜನ್ಮದಿನ ಕಾಲಂನಲ್ಲಿ ನನ್ನ ಫೋಟೋ ಹಾಕಿ ಅಂತ ಕೇಳೋಕೆ ಅವರಿಲ್ಲ. ಆದರೆ ಅವರು ಇನ್ನು ಮುಂದೆ ಜನ್ಮದಿನ ಕಾಲಂ ಅಷ್ಟೇ ಅಲ್ಲ, ಪುಣ್ಯ ತಿಥಿ ಕಾಲಂನಲ್ಲೂ ಕಾಣಿಸುತ್ತಾರೆ ಅನ್ನೋದು ಬೇಸರದ ಸಂಗತಿ.

ನೆಟ್ ಪಿಕ್ಸ್
ಖೇಮು ಹೆಂಡತಿಗೆ ಗಿಳಿ ತಗೋಬೇಕು ಅಂತ ಆಸೆ ಆಯ್ತು. ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕೇಳಿದಾಗ ಅವರೂ ಕೂಡ ‘ಹೌದು, ಅಮ್ಮ ಗಿಳಿ ತರೋಣ. ಆದ್ರೆ ಅಪ್ಪಂಗೆ ಹೇಳೋದ್ ಬೇಡ, ಸರ್‌ಪ್ರೈಸ್ ಕೊಡೋಣ’ ಅಂತ ಡಿಸೈಡ್ ಮಾಡಿದ್ರು. ಕೊನೆಗೆ, ಮಾಮೂಲಿ ಗಿಳಿ ಬೇಡ, ಮಾತಾಡೋ ಗಿಳಿ ತಗೊಂಡ್ ಬರೋದು ಅಂತಾಯ್ತು. ಸರಿ, ಮಕ್ಕಳಿಬ್ಬರು ಕಾಲೇಜಿಗೆ ಹೋದಾಗ, ಗಿಳಿ ತರೋಕೆ ಅಂತ ಖೇಮು ಹೆಂಡತಿ ಹೋದ್ಳು. ಅಲ್ಲಿ ಗಿಳಿಗಳ ಅಂಗಡಿಯಲ್ಲಿ ಹತ್ತಾರು ಗಿಳಿಗಳನ್ನ ಪಂಜರದಲ್ಲಿ ಹಾಕಿ ಇಟ್ಟಿದ್ರು. ಖೇಮುಶ್ರೀ ಎಲ್ಲ ಗಿಳಿಗಳನ್ನೂ ನೋಡಿದಳು.

ಕೆಲವು ಮಾತಾಡೋ ಗಿಳಿಗಳು ಸರಿಯಾಗಿ ಮಾತಾಡ್ತಾನೇ ಇರಲಿಲ್ಲ. ಖೇಮುಶ್ರೀಗೆ ಯಾಕೋ ಆ ಗಿಳಿಗಳು ಮಾತಾಡೋ ಶೈಲಿ ಇಷ್ಟ ಆಗಲಿಲ್ಲ. ಅಂಗಡಿ ಓನರ್‌ನ ಕರೆದು ‘ಇಷ್ಟೇನಾ ಇರೋದು’ ಅಂತ ಕೇಳಿದ್ಳು. ಅದಕ್ಕೆ ಆತ ‘ಹೌದು ಮೇಡಂ’ ಅಂದ. ಅಲ್ಲಿ ಮೂಲೆಯಲ್ಲಿ ಒಂದು ಗಿಳಿಯನ್ನು ಒಂಟಿಯಾಗಿ ನೇತು ಹಾಕಲಾಗಿತ್ತು. ಅದರ ಬಗ್ಗೆ ಕೇಳಿದಾಗ ಅಂಗಡಿ ಓನರ್, ‘ಬೇಡ ಮೇಡಂ, ಅದು ಮೊದಲು ವೇಶ್ಯಾವಾಟಿಕೆಯಲ್ಲಿದ್ದ ಗಿಳಿ, ಅಲ್ಲಿ ಹೋಗಿ ಬರೋರನ್ನ ನೋಡಿ ಪೋಲಿ ಮಾತಾಡೋದ್ ಕಲಿತಿದೆ.

ನಿಮಗೆ ಸರಿ ಹೋಗಲ್ಲ’ ಅಂದ. ಆದರೂ ಖೇಮುಶ್ರೀ ಅದರ ಹತ್ರ ಹೋಗಿ, ‘ಹಾಯ್’ ಅಂದ್ಳು. ಆ ಗಿಳಿ, ‘ಹಾಯ, ವಾಟ್ ಎ ಫಿಗರ್, ವಯಸ್ಸಾದ್ರೂ ಬಾಡಿ ಶೇಪ್ ಚೆನ್ನಾಗಿ ಮೈನ್ಟೇನ್ ಮಾಡಿದ್ದೀಯ’ ಅಂತು. ಖೇಮುಶ್ರೀಗೆ ಒಂಥರಾ ಖುಷಿ ಆಯ್ತು. ‘ಸರಿ ನಂಗೆ ಇದೇ ಇರ್ಲಿ ಇದಕ್ಕೆ ನಾನು ಒಳ್ಳೆ ಮಾತು ಕಲಿಸ್ತೀನಿ’ ಅಂತ ಅದನ್ನೇ ಕೊಂಡುಕೊಂಡಳು. ಮನೆಗೆ ತಗೊಂಡು ಹೋದಳು. ಕಾಲೇಜಿಗೆ ಹೋಗಿದ್ದ ಇಬ್ಬರೂ ಹೆಣ್ಣಮಕ್ಕಳು ಮನೆಗೆ ಬಂದರು.

ಖೇಮುಶ್ರೀ ಅವರಿಗೆ ಗಿಳಿ ತೋರಿಸಿದಳು. ಅವರನ್ನು ನೋಡಿದ ಗಿಳಿ, ‘ಓ ಇನ್ನೂ ಎರಡ್ ಫಿಗರ್ ಸಾಕ್ಕೊಂಡಿದ್ದೀಯ’ ಅಂತು. ಮಕ್ಕಳಿಗೆ ಇರುಸು ಮುರುಸಾದ್ರೂ ಹೋಗ್ಲಿ ಬಿಡು, ಸರಿ ಹೋಗುತ್ತೆ ಅಂತ ಸುಮ್ಮನಾದ್ರು. ಸಂಜೆ ಖೇಮು ಮನೆಗೆ ಬಂದ. ಗಂಡನಿಗೆ ಸರ್‌ಪ್ರೈಸ್ ಅಂತ ಗಿಳಿ ತೋರಿಸಿದ್ರು ಖೇಮುಶ್ರೀ ಮತ್ತು ಮಕ್ಕಳು. ಖೇಮುವನ್ನು ನೋಡಿದ ಗಿಳಿ ಅಂತು ‘ಅರೇ, ಮಿಸ್ಟರ್ ಖೇಮು
ನೀವೇನಿಲ್ಲಿ?’

ಲೈನ್ ಮ್ಯಾನ್
ಅಮೂಲ್ಯ ಸುದ್ದಿ ಪ್ರಸಾರ ಮಾಡೋ ಟಿವಿ ಚಾನೆಲ್ ಗಳಿಗೆ ಒಂದೆರಡು ಲೈನ್ಸ್
-ಗರ್ಭಿಣಿಯಾದ ಶ್ರಾವಣಿ, ಸುಬ್ರಮಣ್ಯ ಫುಲ್ ಖುಷ್
– ಹುಟ್ಟುವ ಮಗುವಿನ ಆರೋಗ್ಯಕ್ಕಾಗಿ ‘ಮಾಸ್ತಿ ಗುಡಿ’ಯಲ್ಲಿ ಪೂಜೆ, ಹೋಮ,
ಹವನ
-‘ಗಜ ಕೇಸರಿ’ ಯೋಗದಲ್ಲಿ ಆಗಲಿದೆ ಮಗುವಿನ ಜನನ
-ಗರ್ಭದಲ್ಲಿರುವ ಮಗುವಿನೊಂದಿಗೆ ‘ಏನು? ಯಾಕೆ?’ ಎಂದು ಸಂಭಾಷಣೆ
ನಡೆಸುತ್ತಿರುವ ಅಮೂಲ್ಯ.
-ಹೆರಿಗೆ ಸಮಯದಲ್ಲಿ ಹುಟ್ಟಲಿರುವ ಅಮೂಲ್ಯ ಅವರ ಮಗುವಿನ ‘ಪುಟ್ಟ ಪುಟ್ಟ
ಕೈ, ಪುಟ್ಟ ಪುಟ್ಟ ಕಾಲ’ ಗಳ ದೃಶ್ಯ ನಮ್ಮ ಮೊದಲು

ಗೆಳೆಯರ ಮಾತುಕತೆ
‘ನೀನಿಷ್ಟೊತ್ತಿಗೆ ಒಂದ್ ಕಾರ್ ತಗೊಂಡಿರಬೇಕಿತ್ತು ಕಣೋ’
‘ಏನ್ ಕಿಂಡಲ್ ಮಾಡ್ತಾ ಇದ್ದಿಯಾ?’
‘ಒಳ್ಳೇದ್ ಹೇಳಿದ್ರೆ ಹಿಂಗಂತೀಯ ನೋಡು, ಹೇಳೋದನ್ನ ಸ್ಪೋರ್ಟಿವ್ ಆಗಿ
ತಗೋಳ್ಳೋ’
’ಸ್ಪೋರ್ಟಿವ್ ಆಗಿ ತಗೊಳ್ಳೋದಾದ್ರೆ ಸ್ಪೋರ್ಟ್ಸ್ ಕಾರೇ ತಗೋಬೇಕಿತ್ತು,
ಅಲ್ವಾ?’
ಅಸಾಮಾನ್ಯ ಕನ್ನಡ ಜ್ಞಾನವನ್ನು ಹೆಚ್ಚಿಸಿದ್ದು ವೆಂಕಟಸುಬ್ಬಯ್ಯನವರ
-‘ಇಗೋ ಕನ್ನಡ’.
ಸಾಮಾನ್ಯ ಜ್ಞಾನವಿಲ್ಲದೆ, ಕನ್ನಡ ಮಾತನಾಡಿದರೆ ಬೆಲೆ ಕಡಿಮೆ ಎಂದುಕೊಳ್ಳುವವರಿಗೆ ಇರೋದು
-‘ಛಿಜಟ ಕನ್ನಡ’.
ಮಾಡರ್ನ್ ಸುಭಾಷಿತ
ಹೊಟ್ಟೆ ಉರುಕರ ಬಗ್ಗೆ ‘ಲೈಟ್’ ಆಗಿ ಮಾತಾಡಬಾರದು. ತಾನು ‘ಉರ್ಕೊಂಡು’
ಜಗತ್ತಿಗೆ ಬೆಳಕು ಕೊಡುವ ದೀಪದಂತೆ ಅವರು.
ಎಲ್ಲ ಕಡೆ ಜನ ‘ಡಿಸೆಂಬರ್ ೨೪ಕ್ಕೆ ಬಡವ ರಾಸ್ಕಲ್ ಬಿಡುಗಡೆ’ ಅಂತ ‘ಸ್ಲೇಟ್
ಹಿಡ್ಕೊಂಡಿರೋದ್’ ನೋಡಿದಾಗಿಂದ ಒಂದೇ ಡೌಟು.
ಈ ಬಡವ ರಾಸ್ಕಲ್ ನ ಯಾಕ್ ಜೈಲಿಗೆ ಹಾಕಿದ್ರು?
ಮೊಟ್ಟೆ ಮಾತು
ಸ್ಕೂಲಲ್ಲಿ ಮಕ್ಕಳಿಗೆ ಕೊಡೋ ಆಹಾರದಲ್ಲಿ ಮೊಟ್ಟೆ ಇರಬಾರದು ಅನ್ನೋದು
-‘ಎಗ್ಗಿಲ್ಲದ’ ಮಾತು.
ಮೊಟ್ಟೆ ನಮ್ಮ ಸಂಸ್ಕೃತಿ ಹಾಳು ಮಾಡುತ್ತೆ ಅನ್ನೋ ಮೂಢ ನಂಬಿಕೆ
-‘ಅಂಡ’ ಶ್ರದ್ಧೆ
ಮಕ್ಕಳಿಗೆ ಮೊಟ್ಟೆ ಕೊಡಬಾರದು ಅನ್ನೋದು ಅವರ ಸಣ್ಣ ಬುದ್ಧಿಗೆ
-‘ಎಗ್’ಸಾಂಪಲ್