Sunday, 13th October 2024

ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಹಾಜಬ್ಬರ ಬದುಕೇ ಆಕರ ಗ್ರಂಥ

-ದಿಲೀಪ್ ಕುಮಾರ್ ಸಂಪಡ್ಕ

ಅಕ್ಷರ ಸಂತ ಹರೇಕಳ ಹಾಜಬ್ಬ ದೊಡ್ಡ ಸ್ಟಾರ್ ಅಲ್ಲ, ಒಳ್ಳೆಯ ಜಗಜಗಿಸುವ ಬಟ್ಟೆಗಳನ್ನು ಧರಿಸಿಲ್ಲ, ಐಷಾರಾಮಿ ಜೀವನ ನಡೆಸುತ್ತಿಲ್ಲ, ದೊಡ್ಡ ಉದ್ಯಮಿಯಲ್ಲ, ಕೊನೆ ಪಕ್ಷ ಅಕ್ಷರಸ್ಥರು ಅಲ್ಲ. ಆದರೆ ಆ ವ್ಯಕ್ತಿಯ ಸೇವೆ ಮತ್ತು ಸಾಧನೆ ಮಾತ್ರ ಅದ್ಬುತ.

ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀಯನ್ನು ರಾಷ್ಟ್ರಪತಿ ರಾಮ ನಾಥ್ ಕೊವಿಂದ್ ಅವರಿಂದ ಪಡೆದು ಕೊಂಡ ದೃಶ್ಯ ಅತ್ಯಾಕರ್ಷಕ. ಅತ್ಯಂತ ಮುಗ್ಧತೆ, ನಿರ್ಲಿಪ್ತ ಭಾವದಿಂದ ಸ್ವೀಕರಿಸಿದ ರೀತಿಗೆ ಎಲ್ಲ ಮನಸೋತಿದ್ದಾರೆ. ಹಾಜಬ್ಬ ಕಿತ್ತಳೆ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಎದುರಿಸಿದ ಒಂದು ಘಟನೆ ಅವರ ಮೇಲೆ ಭಾರಿ ಪರಿಣಾಮವನ್ನು ಬೀರಿತು.

ಒಂದು ದಿನ ವಿದೇಶಿ ಮಹಿಳೆಯೊಬ್ಬರು ಇಂಗ್ಲಿಷ್‌ನಲ್ಲಿ “How much for oranges?’ ಎಂದು ಕೇಳಿದರು. ಆದರೆ ಹಾಜಬ್ಬ ರಿಗೆ ಉತ್ತರಿಸಲಾಗಲಿಲ್ಲ. ಶಿಕ್ಷಣವಿಲ್ಲದಿದ್ದರೆ ಏನಾಗು ತ್ತದೆ ಎಂಬುವುದನ್ನು ಸ್ವತಃ ತಾವೇ ಅನುಭವಿಸಿ ಸಂಕಟ ಪಟ್ಟುಕೊಂಡರು.

ಇಂದು ತನಗಾದ ಮುಜುಗರ ತನ್ನ ಹಳ್ಳಿಯ ಮುಂದಿನ ಪೀಳಿಗೆಗೆ ಆಗಲೇಕೂಡದು ಎಂದು ನಿರ್ಧರಿಸಿದ್ದು, ಹಳ್ಳಿಗೊಂದು ಶಾಲೆ ಆಗಬೇಕೆಂಬ ಕನಸಿನ ಬೆನ್ನೇರಿದ್ದು, ಹೊಟ್ಟೆ ಬಟ್ಟೆಕಟ್ಟಿ, ಊರೂರು ಅಲೆದು ವಂತಿಗೆ ಸಂಗ್ರಹಿಸಿ, ಸರಕಾರಿ ಕಚೇರಿಗಳಿಗೆ ಅಲೆದು ಕೊನೆಗಂತೂ ಹಠತೊಟ್ಟು ಹರೇಕಳಕ್ಕೆ ಪ್ರೌಢಶಾಲೆ ತಂದದ್ದು ಇತಿಹಾಸ.

2002ರ ಸೆಪ್ಟೆಂಬರ್ 16ರಂದು ಹಾಜಬ್ಬ ಎಂಬ ಅಪ್ರತಿಮ ಸಮಾಜ ಸೇವಕ ರಾಜ್ಯಕ್ಕೆ ಪರಿಚಯವಾದ ದಿನ. ಹಾಜಬ್ಬರ ಯಶೋ ಗಾಥೆ ದೇಶದಾದ್ಯಂತ ಮನೆಮಾತಾಯಿತು. ಸಿಎನ್‌ಎನ್, ಐಬಿಎನ್, ರಿಲಯನ್ಸ್ ಮೊದಲಾದ ಸಂಸ್ಥೆಗಳು ಇವರಿಗೆ ‘ದಿ ರಿಯಲ್ ಹೀರೊ’ ಎಂಬ ಪ್ರಶಸ್ತಿ ನೀಡಿದವು. ಪ್ರಶಸ್ತಿಯೊಂದಿಗೆ 5 ಲಕ್ಷ ರೂಪಾಯಿ ನಗದು ಬಹುಮಾನವೂ ಬಂತು. ಅವರ ವ್ಯಕ್ತಿತ್ವಕ್ಕೆ ಮೆರುಗೂ ಬಂತು. ಎಲ್ಲವನ್ನೂ ಶಾಲೆಗೆ ಸಮರ್ಪಿಸಿಬಿಟ್ಟರು.

ಸಮ್ಮಾನದೊಂದಿಗೆ ಸಿಕ್ಕ ಪೈಸೆಪೈಸೆಯನ್ನೂ ಅವರು ಶಾಲಾಭಿವೃದ್ಧಿಗೆ ವಿನಿಯೋಗಿಸಿದರು. ಆದರೆ ಇಂದಿಗೂ ಕಿತ್ತಳೆ ಹಣ್ಣಿನ ತಲೆಹೊರೆ ವ್ಯಾಪಾರವನ್ನು ಮಾಡುತ್ತಿದ್ದಾರೆ. ಇದೀಗ ಹಾಜಬ್ಬರ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಸಂದಿವೆ. ಹಲವು ವಿಶ್ವವಿದ್ಯಾಲಯಗಳು ಹಾಜಬ್ಬರ ಸಾಧನೆಯನ್ನು ಪಾಠವಾಗಿ ಅಳವಡಿಸಿದೆ. ಕೇರಳದಲ್ಲಿ 8ನೇ ತರಗತಿಯ ಕನ್ನಡ ಪ್ರೇರಕ ಶಕ್ತಿಗಳು ಎಂಬ ವಿಭಾಗದ ಅಡಿಯಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬ ಎಂಬ ಪಾಠವಿದೆ.

ಅದೇ ರೀತಿ ಅಲ್ಲಿನ 10 ನೇ ತರಗತಿಯ ಸಮಾಜ ವಿಜ್ಞಾನದ ಪೌರಪ್ರಜ್ಞೆ ಎಂಬ ಪಾಠದಲ್ಲಿ ಹಾಜಬ್ಬರವರ ಸಾಧನೆಯ ಬಗ್ಗೆ
ತಿಳಿಸಲಾಗಿದೆ. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಹಾಜಬ್ಬ ಸಾಧನೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ. ಶಾಲೆಗಾಗಿ ಇಷ್ಟೆಲ್ಲ ಶ್ರಮವಹಿಸಿದರೂ ಅಲ್ಲಿನ ನಾಮ-ಲಕದಲ್ಲಿ ಅವರ ಹೆಸರು ಹಾಕಿಸಲಿಲ್ಲ. ಅವರು ಯಾವತ್ತು ಪ್ರಚಾರವನ್ನು ಬಯಸ ಲಿಲ್ಲ.

ಹಾಜಬ್ಬರ ಸಾಧನೆಯಿಂದ ನಾವು ತಿಳಿದುಕೊಳ್ಳಬೇಕಾದ ಹಲವು ಸ್ಪೂರ್ತಿದಾಯಕ ಅಂಶಗಳಿವೆ. ಅವರದು ಸಾಮಾನ್ಯನೊಬ್ಬನ
ಅಸಾಮಾನ್ಯ ಸಾಧನೆಯ ಕಥೆ. ಶ್ರದ್ಧೆ ಮತ್ತು ಪ್ರಾಮಾಣಿಕತೆಗೆ ಹಾಜಬ್ಬನವರ ಬದುಕು ಮತ್ತು ಸಾಧನೆ ಇಂದು ಜೀವಂತ ನಿದರ್ಶನವಾಗಿದೆ. ಒಬ್ಬ ಶಿಕ್ಷಣ ವಂಚಿತನಾದ ವ್ಯಕ್ತಿ ಮುಂದಿನ ಜನಾಂಗವು ನನ್ನಂತೆ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹೋರಾಟ ಮಾಡಿದ ರೋಚಕ ಕಥೆ. ಮನಸ್ಸಿದ್ದರೆ ಮಾರ್ಗವಿದೆ ಎಂಬ ಮಾತನ್ನು ಜಗತ್ತಿಗೆ ಮಾದರಿಯಾಗಿ ತೊರಿಸಿದ ಅಕ್ಷರ ಸಂತ ಇವರು. ಜೀವನದಲ್ಲಿ ಯಶಸ್ಸಿನ ಗುರಿ ಎಂಬುದು ದಾರಿ ತೋರುವ ಗುರುವಿನಂತೆ.

ಸಾಧಿಸುವ ಛಲವೊಂದಿದ್ದರೆ ಗುರಿಯನ್ನು ಸುಲಭವಾಗಿ ಮುಟ್ಟಬಹುದು. ಆದರೆ ಗುರಿ ಸಾಧನೆಗೆ ತೊಡಕುಗಳು ಇದ್ದೇ ಇರುತ್ತದೆ. ಗೆಲುವು ಎಂದು ಸುಲಭವಾಗಿ ದೊರೆಯುವುದಿಲ್ಲ. ಹಂತ ಹಂತವಾಗಿ ಸೋಲಿನ ಸವಾಲನ್ನು ಸ್ವೀಕರಿಸಿದರೆ ಮಾತ್ರವೇ ಗೆಲುವಿನ ಸಿಹಿ ನಮ್ಮದಾಗುತ್ತದೆ. ನಾವು ಏನು ಸಾಧಿಸಬೇಕೋ ಅದಕ್ಕಾಗಿ ಪರಿಶ್ರಮವನ್ನು ಪಡಬೇಕಾಗುತ್ತದೆ ಎನ್ನುವ ದೊಡ್ಡ ಹಾಜಬ್ಬರ ಜೀವನದಿಂದ ನಮಗೆ ತಿಳಿಯುತ್ತದೆ.

ಒಬ್ಬ ಅನಕ್ಷರಸ್ಥ ನಾಗರಿಕ ಉತ್ತಮ ಪ್ರಜೆಯಾಗಿ, ಉತ್ತಮ ಜೀವನವನ್ನು ನಡೆಸಲು ಮತ್ತು ಸಮಾಜದಲ್ಲಿ ವ್ಯವಹರಿಸಲು
ಶಿಕ್ಷಣದ ಪ್ರಾಮುಖ್ಯ ಏನು ಎಂಬುದನ್ನು ತಿಳಿಸಿ, ಒಂದು ವೇಳೆ ಸರಿಯಾದ ಶಿಕ್ಷಣ ದೊರೆಯದಿದ್ದರೂ ಸ್ಪಷ್ಟ ಗುರಿಯೂ ಒಬ್ಬ
ವ್ಯಕ್ತಿಯ ಜೀವನವನ್ನು ಹೇಗೆ ಉಜ್ವಲವಾಗಿಸುತ್ತದೆ ಎನ್ನುವುದಕ್ಕೆ ಸ್ವತಃ ಹಾಜಬ್ಬರವರೇ ಉದಾಹರಣೆಯಾಗಿದ್ದಾರೆ. ಒಬ್ಬ ವ್ತಕ್ತಿ
ಸಮಾಜಕ್ಕೆ ಏನಾದರೂ ಒಳ್ಳೆಯ ಕೆಲಸ ಮಾಡಬೇಕೆಂದರೆ ಶ್ರೀಮಂತನಾಗಿರಬೇಕೆಂದಿಲ್ಲ ಬಡತನ, ಶಿಕ್ಷಣ ಅಡ್ಡಿಯಾಗುವುದಿಲ್ಲ ಎನ್ನುವ ವಿಚಾರವನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ನಮ್ಮ ಜೀವನದಲ್ಲಿ ನಡೆಯುವ ಕೆಲವು ಘಟನೆಗಳೇ ನಮ್ಮ ಗುರಿ ನಿರ್ಧಾರಕಗಳು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ನಾವು ಎಷ್ಟು ಎತ್ತರಕ್ಕೆ ಬೆಳೆದರು ಅಹಂ ಅನ್ನು ನಮ್ಮ ಬಳಿ ಸುಳಿಯುವಂತೆ ಮಾಡಿಕೊಳ್ಳಬಾರದು.

ನಾಗರಿಕ ಪ್ರಜ್ಞೆಯನ್ನು ಪರೋಕ್ಷವಾಗಿ ಇಡೀ ಸಮಾಜಕ್ಕೆ ಒತ್ತಿ ಹೇಳಿದ್ದಾರೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ಕೆಲಸ ಮಾಡಿದರೆ ನಾವು ಅದರಲ್ಲಿ ಗೆದ್ದೆ ಗೆಲ್ಲುತ್ತೇವೆ ಮತ್ತು ಸಮಾಜವು ನಮ್ಮ ಕೈಹಿಡಿಯುತ್ತದೆ ಎನ್ನುವುದಕ್ಕೆ ಹಾಜಬ್ಬರವರೇ ಸಾಕ್ಷಿ. ನೂರಾರು ಪ್ರಶಸ್ತಿಗಳು ಒಲಿದರೂ ಹಾಜಬ್ಬರವರು ಬದಲಾಗಲಿಲ್ಲ. ತನ್ನ ತನವನ್ನು ಯಾವಾಗಲೂ ಬಿಟ್ಟು ಕೊಡಬಾರದು ಎಂಬ ಸಂದೇಶ ಇದರಿಂದ ತಿಳಿಯುತ್ತದೆ. ತನಗೆ ಬಂದ ಬಹುಮಾನದ ಮೊತ್ತವನ್ನು ಶಾಲೆಗೆ ನೀಡಿ ಶಾಲೆಯನ್ನು ಅಭಿವೃದ್ಧಿ ಮಾಡುವ
ಕಾರ್ಯಕ್ಕೆ ವಿನಿಯೋಗಿಸಿದರು. ಇದರಿಂದ ಮೊದಲು ತಾನು ಮಾದರಿಯಾದರೆ ಸಮಾಜ ನಮ್ಮ ನೆರವಿಗೆ ಬರುತ್ತದೆ ಎಂಬುವು ದನ್ನು ತಿಳಿಸಿಕೊಟ್ಟರು. ಹೀಗೆ ಹಾಜಬ್ಬರು ತನ್ನ ಪ್ರತಿ ಹೆಜ್ಜೆಯಲ್ಲೂ ಬೇರೆ ಬೇರೆ ರೀತಿಯ ಸಂದೇಶವನ್ನು ಸಮಾಜಕ್ಕೆ ಪರೋಕ್ಷ ವಾಗಿ ನೀಡುತ್ತಾ ಹೋಗಿದ್ದಾರೆ. ಇವುಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ನಮ್ಮಿಲ್ಲಿರಬೇಕು.

ಒಟ್ಟಾರೆಯಾಗಿ, ಇಂದಿನ ಶಿಕ್ಷಿತರು ಎಂದು ಹೇಳಿಕೊಳ್ಳುವ ನಾವು ಸರಕಾರಿ ಶಾಲೆಗಳ ಸಬಲೀಕರಣದ ಬಗ್ಗೆ ಮಾತಾಡುತ್ತೇವೆ.
ಆದರೆ ಅದಕ್ಕೆ ಬೇಕಾದ ಕಾರ್ಯರೂಪಗಳು, ಕ್ರಿಯಾ ಯೋಜನೆಗಳನ್ನು ಮಾಡುತ್ತಿಲ್ಲ. ಒಬ್ಬ ಬಡ ಕುಟುಂಬದಿಂದ ಬಂದ
ಹಾಜಬ್ಬರವರು ಶಿಕ್ಷಿತರು ನಾಚಿಕೊಳ್ಳುವಂತೆ ತಮ್ಮ ಕಾರ್ಯದ ಮೂಲಕ ಸರಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡಿ ತೋರಿಸಿ ಮಾದರಿಯಾಗಿದ್ದಾರೆ. ಇವರ ಜೀವನ ನಮಗೆಲ್ಲ ಸ್ಪೂರ್ತಿಯಾಗಬೇಕು. ಇವರ ನಡೆಯನ್ನು ನೆನೆಸಿಕೊಂಡು ಪ್ರತಿ
ಸರಕಾರಿ ಶಾಲೆಗಳನ್ನು ಉಳಿಸಲು ನಾವು ಶ್ರಮವಹಿಸಬೇಕು.

ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಹಾಜಬ್ಬರವರ ಜೀವನವೇ ಒಂದು ಆಕರ ಗ್ರಂಥ ಎನ್ನಬಹುದು. ಅದನ್ನು ಮುಕ್ತ ಮನಸ್ಸಿ ನಿಂದ ಓದುವ ಕೆಲಸವಾಗಲಿ.