ತನ್ನಿಮಿತ್ತ
ವೈ.ಜಿ.ಅಶೋಕ್ ಕುಮಾರ್
1989ರ ಚುನಾವಣೆಯಲ್ಲಿ ನಲವತ್ತೈದು ಸಾವಿರ ಕುರುಬ ಮತದಾರರಿರುವ ಪಕ್ಕದ ಹೊಳೆನರಸಿಪುರ ಕ್ಷೇತ್ರದಲ್ಲಿ ಅಮೋಘ ಭಾಷಣದ ಮೂಲಕ ಸಮಾಜವಾದಿ ಜನತಾ ಪಕ್ಷದ ಅಭ್ಯರ್ಥಿ ದೇವೇಗೌಡರಿಗೆ ಮೊದಲ ಬಾರಿಗೆ ಸೋಲಿನ ರುಚಿ ತೋರಿಸುತ್ತಾರೆ. ಅಲ್ಲಿಂದ ಹೊಳೆನರಸಿಪುರ ಕ್ಷೇತ್ರ ತೊರೆಯುವ ದೇವೇಗೌಡರು ರಾಮನಗರಕ್ಕೆ ವಲಸೆ ಹೋಗುತ್ತಾರೆ.
ಮಾಧ್ಯಮಗಳ ಮಿತ್ರ ಅಡಗೂರು ಹುಚ್ಚೇಗೌಡ ವಿಶ್ವನಾಥ್ ಅವರಿಗೆ, ಅವರ ರಾಜಕೀಯ ಗುರು ದೇವರಾಜ ಅರಸರ ಹೆಸರಿನ ಪ್ರಶಸ್ತಿ ಸಂದಿದೆ. ಎಪ್ಪತ್ತೈದರ ಈ ಸಂಧ್ಯಾಕಾಲ ದಲ್ಲೂ ದಣಿವರಿಯದ ಚಿಂತಕರೆನಿಸಿಕೊಂಡಿರುವ ವಿಶ್ವನಾಥರಿಗೆ, ಅವರ ಐವತ್ತು ವರ್ಷಗಳ ಸುದೀರ್ಘ ರಾಜಕೀಯ ಜೀವನಕ್ಕೆ ಈ ಪ್ರಶಸ್ತಿ ಮುಕುಟಮಣಿಯಂತೆ ಒದಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಹೀಗಾಗಿ ಈ ಪುರಸ್ಕಾರ ಅವರಿಂದ ಮತ್ತಷ್ಟು ಹುಮ್ಮಸ್ಸು ಹೊಮ್ಮುವುದಕ್ಕೆ ಕಾರಣ ವಾಗಿದೆ. ಸಾರ್ಥಕತೆಯ ಭಾವದಲ್ಲಿ ತೇಲುತ್ತಿದ್ದಾರೆ ಎಚ್.ವಿಶ್ವನಾಥ್. 1978ರ ಫೆಬ್ರವರಿ ಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣರಾಜನಗರದಿಂದ ಉದಯಿಸಿದ ಈ ಸೂರ್ಯ, ರಾಜಕೀಯ ಮತ್ತು ವೈಯಕ್ತಿಕ ಬದುಕಿನ ಏಳುಬೀಳುಗಳಲ್ಲಿ ತಮ್ಮ ಪಾಸಿಟಿವ್ ನಡೆಯಿಂದ ಎಲ್ಲ ಕಾಲಕ್ಕೂ ಎಡೆಯೂ ಸಲ್ಲುತ್ತಾ ಮೂರು ಸಲ ಶಾಸಕರಾಗಿ ಸಂಸದರಾಗಿ ಪ್ರಸ್ತುತ ಚಿಂತಕರ ಚಾವಡಿಯಲ್ಲಿ ಕಂಗೊಳಿಸುತ್ತಿದ್ದಾರೆ.
1975ರಲ್ಲಿ ಪಕ್ಕದ ಹುಣಸೂರು ಕ್ಷೇತ್ರದ ದೇವರಾಜ ಅರಸರು ಹುಡುಕಿ ಹೆಕ್ಕಿದ ಈ ಮುತ್ತು ಮುಂದೆ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಾಯಿಸುವಷ್ಟು ಶಕ್ತಿಶಾಲಿಯಾಗಿದ್ದು ಒಂದು ಸೋಜಿಗವೇ ಸರಿ. ಕೆ.ಆರ್. ನಗರದ ಈ ಬಡ ವಕೀಲ ‘ಫ್ರೀ ಲೀಗಲ್’ ಸೇವೆ ಮಾಡಿಕೊಂಡು ಆಗ ತಾನೆ ಉದಯಿಸಿದ ಕಾವೇರಿ ಗ್ರಾಮೀಣ ಬ್ಯಾಂಕ್, ಗೇಣಿದಾರರ ಸಂಘ ಕಟ್ಟುವ ಮೂಲಕ ಜಾತಿ ವ್ಯಕ್ತಿ ಗಳ ಮೀರಿ ಜನಸಾಮಾನ್ಯರ ಮನಸಿನಲ್ಲಿ ಬೇರೂರಿದ ಪರಿಣಾಮವೇ ಇವತ್ತು ನಾವು ಕುತೂಹಲ ದಿಂದ ಕಾಣುತ್ತಿರುವ ‘ಹಳ್ಳಿಹಕ್ಕಿ’ ಅಡಗೂರು ವಿಶ್ವನಾಥ್ ಎನಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ.
ಮೊದಲ ಚುನಾವಣೆಯ ಹತ್ತು ಸಾವಿರ ಮತಗಳ ಅಂತರದಿಂದ ಗೆದ್ದು ಪಕ್ಕದ ಹೊಳೆನರಸಿಪುರದ ದೇವೇಗೌಡರ ಕೆಂಗಣ್ಣಿಗೆ
ಬೀಳುತ್ತಾರೆ. ಒಕ್ಕಲುತನದ ಪ್ರಭಾವ, ಹಿಂದುಳಿದ, ಅಲ್ಪಸಂಖ್ಯಾತರ ಬೆಂಬಲದಿಂದ ಗೆದ್ದು ಬೀಗುತ್ತಾರೆ. ಡಾ.ಮೆಹಬೂಬ್ ಖಾನ್ ಹಾಗೂ ಲಿಂಗಾಯತ ಗುತ್ತಿಗೆದಾರ ಸ್ನೇಹಹಸ್ತದಿಂದ ಜನರೇ ಹಣ ಸಂಗ್ರಹಿಸಿ ಚುನಾವಣೆ ನಡೆಸುತ್ತಾರೆ. ಮುರುಕುಲು ಮಣ್ಣಿನ ಮನೆಯನ್ನು ಜನರೇ ಹಣಹಾಕಿ ರಿಪೇರಿ ಮಾಡಿಸಿಕೊಡುತ್ತಾರೆ.
ಮೊದಲ ಸಲ ಶಾಸನಸಭೆ ಪ್ರವೇಶಿಸಿದ ಮರುದಿನವೇ ಅರಸರು ನೀರಿನ ಆಣೆ ಮಾಡಿಸುವ ಮೂಲಕ ಶಾಸಕರು ಎಲ್ಲ ಮತದಾರ ರನ್ನು ರಾಗ ದ್ವೇಷ ಮಾತ್ಸರ್ಯವಿಲ್ಲದೆ ಪಕ್ಷಾತೀತವಾಗಿ ಕಾಣಬೇಕೆಂಬ ತತ್ವವನ್ನು ಬೋಧಿಸುತ್ತಾರೆ. ಆದರೆ, ಅರಸರ ಗ್ರಹಚಾ ರಕ್ಕೆ ಕೇಂದ್ರ ಸರಕಾರ ಉರುಳಿ, ಪಾರ್ಲಿಮೆಂಟ್ ಚುನಾವಣೆಯಲ್ಲಿ ಪರಾಭವ ಹೊಂದಿದ ನೈತಿಕ ಹೊಣೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ ಬೇಕಾದ ಸಂದರ್ಭದಲ್ಲಿ ಕಾಂಗ್ರೆಸ್ ಇಬ್ಭಾಗವಾಗಿ ಇಂದಿರಾ ಕಾಂಗ್ರೆಸ್ನಲ್ಲಿ ಗುಂಡೂರಾವ್ ಮುಖ್ಯಮಂತ್ರಿಯಾಗಲು ತಾಲೀಮು ನಡೆಸುತ್ತಿರುವಾಗ, ಅರಸರ ಪ್ರಭಾವದಿಂದ ಗೆದ್ದು ಬಂದ ಯುವ ಶಾಸಕರು ಗೊಂದಲಕ್ಕೆ ಒಳಗಾಗುತ್ತಾರೆ.
ಆಗ ಅರಸರು ಯುವ ಶಾಸಕರನ್ನು ಬಾಲಬ್ರೂಯಿಗೆ ಕರೆಸಿಕೊಂಡು, ‘ನೀವೆಲ್ಲ ಹಾದಿ ತಪ್ಪುವುದು ಬೇಡ. ನನ್ನ ಹಡಗು ಮುಳು ಗುತ್ತಿದೆ. ಮುಳುಗುತ್ತಿರುವ ಹಡಗಿನ ಕ್ಯಾಪ್ಟನ್ಗೆ ಸ್ವಲ್ಪ ಕಾಲವಕಾಶ ಬೇಕು. ನೀವೆಲ್ಲರೂ ಗುಂಡೂರಾವ್ ಜತೆಗೆ ಸೇರಿಕೊಂಡು ಸರ್ಕಾರದ ಪಾಲುದಾರರಾಗಿ ನಿಮ್ಮ ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು’ ಎಂದು ಭಾರವಾದ ಮನಸ್ಸಿನಿಂದ ತಮ್ಮ ಯುವ ಶಾಸಕ ಸಮೂಹವನ್ನು ಬೀಳ್ಕೊಡುತ್ತಾರೆ.
ಅಡಗೂರು ವಿಶ್ವನಾಥ್, ರಮೇಶ್ ಕುಮಾರ್, ಕುಷ್ಟಗಿಯ ಗಂಗಣ್ಣ, ಬೀದರ್ನ ಮದನ್ ಮುಂತಾದವರು ಅರಸರ ನೆನೆದು ಕಣ್ಣೀರು ಸುರಿಸುತ್ತ ಹೊರ ಬೀಳುತ್ತಾರೆ. ಶೇವಿಂಗ್ ಇಲ್ಲದ ಬಿಳಿ ಕುರುಚಲು ಗಡ್ಡದ ಅರಸರು ಎಡಗೈನಲ್ಲಿ ಪೈಪ್ ಹಿಡಿದು ಹೊಗೆ
ಉಗುಳುತ್ತಿದ್ದ ಆ ದೃಶ್ಯವನ್ನು ಕಣ್ತುಂಬಿಕೊಂಡ ವಿಶ್ವನಾಥ್, ಅರಸರ ಆಜ್ಞೆಯಂತೆ ಗುಂಡೂರಾವ್ ಪರವಾಗಿ ಐವತ್ತೊಂದನೆ ಯವರಾಗಿ ಸಹಿ ಮಾಡುತ್ತಾರೆ. ಪಕ್ಕದ ಹೊಳೆನರಸಿಪುರ ಕ್ಷೇತ್ರದ ವಿರೋಧ ಪಕ್ಷದ ನಾಯಕ ಎಚ್.ಡಿ. ದೇವೇಗೌಡರು ತಮ್ಮ ಕ್ಷೇತ್ರಕ್ಕೆ ಅಂಟಿಕೊಂಡಿದ್ದ ಕೆ.ಆರ್. ನಗರದಲ್ಲಿ ಮುಂದಿನ ಚುನಾವಣೆಯಲ್ಲಿ ವಿಶ್ವನಾಥರನ್ನು ಪರಾಭವಗೊಳಿಸುತ್ತಾರೆ.
ಅದೇ ಚಾಲೆಂಜ್ನಲ್ಲಿ ಮತ್ತೆ ಕ್ಷೇತ್ರದ ಜನರ ವಿಶ್ವಾಸ ಗಳಿಸುವ ವಿಶ್ವನಾಥ್, ವೀರೇಂದ್ರ ಪಾಟೀಲರ ಅಧ್ಯಕ್ಷತೆಯಲ್ಲಿ ವೀರಪ್ಪ ಮೊಯ್ಲಿ ಮಾರ್ಗದರ್ಶನದಲ್ಲಿ ಬಂಗಾರಪ್ಪನವರ ಉಮೇದಿನಲ್ಲಿ ಗೆದ್ದು ಬಂದು ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಸಂಸ್ಕೃತಿ ಮಂತ್ರಿಯಾಗುತ್ತಾರೆ. ಕನ್ನಡ ಸೇರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪುಗೊಳ್ಳುತ್ತದೆ. ಆ ಇಲಾಖೆಗೊಂದು ಸೆಕ್ರೆಟರಿಯೇಟ್ ಮಾಡಿಸುತ್ತಾರೆ, ಐಎಎಸ್ ಅಕಾರಿ ಚಿರಂಜೀವಿ ಸಿಂಗ್ ಮಾರ್ಗದರ್ಶನ ಅದಕ್ಕೆ ಸಿಗುತ್ತದೆ.
ನಂತರ ಮುಖ್ಯಮಂತ್ರಿಯವರ ಒತ್ತಾಯದ ಮೇರೆಗೆ ಅರಣ್ಯಮಂತ್ರಿಯಾಗಿ ವೀರಪ್ಪನ್ ಹತ್ತಿಕ್ಕುವ ಕಾಯಕಕ್ಕೆ ಒಡ್ಡಿಕೊಳ್ಳುತ್ತಾರೆ.
೧೯೮೯ರ ಚುನಾವಣೆಯಲ್ಲಿ ನಲವತ್ತೈದು ಸಾವಿರ ಕುರುಬ ಮತದಾರರಿರುವ ಪಕ್ಕದ ಹೊಳೆನರಸಿಪುರ ಕ್ಷೇತ್ರದಲ್ಲಿ ಅಮೋಘ ಭಾಷಣದ ಮೂಲಕ ಸಮಾಜವಾದಿ ಜನತಾ ಪಕ್ಷದ ಅಭ್ಯರ್ಥಿ ದೇವೇಗೌಡರಿಗೆ ಮೊದಲ ಬಾರಿಗೆ ಸೋಲಿನ ರುಚಿ ತೋರಿಸುತ್ತಾರೆ. ಅಲ್ಲಿಂದ ಹೊಳೆನರಸಿಪುರ ಕ್ಷೇತ್ರ ತೊರೆಯುವ ದೇವೇಗೌಡರು ರಾಮನಗರಕ್ಕೆ ವಲಸೆ ಹೋಗುತ್ತಾರೆ.
1994ರಲ್ಲಿ ಕೇವಲ 145 ಮತಗಳ ಅಂತರದಲ್ಲಿ ಗೆದ್ದು ಶಾಸಕರಾಗುವ ರೇವಣ್ಣ, 1999ರ ಚುನಾವಣೆಯಲ್ಲಿ ಅಣ್ಣೆಚಾಕನಹಳ್ಳಿ ದೊಡ್ಡಗೌಡರಿಗೆ ಶರಣಾಗುವಂತೆ ಮಾಡುವ ಹಿನ್ನೆಲೆಯಲ್ಲಿ ವಿಶ್ವನಾಥರ ಪ್ಲಾನ್ ಕೆಲಸ ಮಾಡುತ್ತದೆ. ಈಗ ಆ ಕ್ಷೇತ್ರದ ಕುರುಬ ಮತದಾರರು ಅರಕಲಗೂಡು ಕ್ಷೇತ್ರ ಸೇರಿಕೊಂಡಿದ್ದಾರೆ. ಸಿದ್ದರಾಮಯ್ಯನವರನ್ನು ಕಾಂಗ್ರೆಸ್ಸಿನ ಅಂಗಳಕ್ಕೆ ಕರೆ ತರುವ ವಿಶ್ವನಾಥ್, ಎಸ್.ಎಂ. ಕೃಷ್ಣರ ಮೂಲಕ ಸೋನಿಯಾ ಗಾಂಧಿಯವರ ಬಳಿ ’Siddaramaiah is un polished diamond’ ಎಂದು ಹೇಳಿಸಿ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಪರ್ವಕ್ಕೆ ನಾಂದಿ ಹಾಡುವ ವಿಶ್ವನಾಥ್ ಅಲ್ಲಿಂದ ಹೊರಬಿದ್ದು ದೇವೇಗೌಡರ ಜೆಡಿಎಸ್ ನಿಂದ ಅದೇ ತಮ್ಮ ಗುರುವಿನ ಹುಣಸೂರು ಕ್ಷೇತ್ರದಲ್ಲಿ 7800 ಮತಗಳ ಅಂತರದಲ್ಲಿ ಗೆದ್ದು ಸಿದ್ದರಾಮಯ್ಯ ಶಿಷ್ಯ ಮಂಜು ನಾಥರನ್ನು ಪರಾಭವಗೊಳಿಸಿ ಜೆಡಿಎಸ್ ಅಧ್ಯಕ್ಷರೂ ಆಗುತ್ತಾರೆ.
ತರುವಾಯದಲ್ಲಿ, ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮೇಲೆ ರೆಸಾರ್ಟ್, ಹೋಟೆಲ್ ರಾಜಕಾರಣದ ಆರೋಪ ಹೊರಿಸಿ ಸ್ಥಾನ ಪಲ್ಲಟಗೊಳಿಸಲು ‘ಬಾಂಬೆ ಡೇಸ್’ಗೆ ತೆರಳಿದ ಹದಿನೇಳು ಶಾಸಕರ ಮುಂದಾಳತ್ವ ವಹಿಸುತ್ತಾರೆ. ಮತ್ತೆ ಉಪ ಚುನಾವಣೆಯಲ್ಲಿ ಭಾರಿ ಅಂತರದಿಂದ ಹುಣಸೂರಿನಲ್ಲಿ ಪರಾಭವ ಅನುಭವಿಸಿ, ತರುವಾಯ ಮೇಲ್ಮನೆಗೆ ನಾಮಕರಣ ವಾಗುವ ಮೂಲಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ತಾವೇ ತಂದ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪದಚ್ಯುತ ಗೊಳಿಸುವಲ್ಲಿ ಪ್ರಮುಖ ಪಾತ್ರದಾರಿಯಾಗುತ್ತಾರೆ ಎಂಬಲ್ಲಿಗೆ ಈ ‘ಹಳ್ಳಿಹಕ್ಕಿ’ಯ ಪುರಾಣ ಕಥನ ಬಂದು ನಿಂತಿದೆ.
ಈಗಲೂ ಬೊಮ್ಮಾಯಿ ಸರಕಾರದ ನಿರ್ಧಾರಗಳು ವಿಶ್ವನಾಥರನ್ನು ಕೆರಳಿಸಿವೆ. ಯಾವ ಮುಲಾಜೂ ಇಲ್ಲದೆ ತಮ್ಮ ಸರಕಾರ ವನ್ನು ಟೀಕಿಸುವ ವಿಶ್ವನಾಥರ ಮುಂದಿನ ನಡೆ ಏನಿರಬಹುದೆಂಬ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಮೊನ್ನೆ ಮಠ ವೊಂದರ ಕಾರ್ಯಕ್ರಮದಲ್ಲಿ ಮುಖಾಮುಖಿಯಾದ ಭವಾನಿ ರೇವಣ್ಣ ತುಂಬಾ ಆಪ್ತತೆ ತೋರಿದ್ದಾರೆ. ಪಕ್ಷಕ್ಕೆ ಮರಳುವಂತೆ ಡಿ.ಕೆ. ಶಿವಕುಮಾರ್ ಮನವಿ ಇಟ್ಟಿzರೆ. ಸಿದ್ದರಾಮಣ್ಣ ಮತ್ತೊಂದು ಅವಧಿಗೆ ಮುಖ್ಯಮಂತ್ರಿ ಆಗಲಿ ಎನ್ನುವ ವಿಶ್ವನಾಥ್ ಹುಣಸೂರು ಕ್ಷೇತ್ರಕ್ಕೆ ಆಹ್ವಾನಿಸಿದ್ದಾರೆ.
ಸಕಾಲದಲ್ಲಿ ಪ್ರವಹಿಸುವ ವಿಶ್ವನಾಥ್ ನಿರ್ಣಯ ಏನೇ ಇರಲಿ, ಅರಸರ ಜನ್ಮದಿನವಾದ ಇಂದು ತಮ್ಮ ಗುರುವಿನ ಹೆಸರಿನ ಪ್ರಶಸ್ತಿಗೆ ಭಾಜನರಾಗಿ ಧನ್ಯತೆ ಅನುಭವಿಸುತ್ತಿzರೆ ಎಂಬುದರಲ್ಲಿ ಎರಡು ಮಾತಿಲ್ಲ.