ಗಂಟಾಘೋಷ
ಗುರುರಾಜ್ ಗಂಟಿಹೊಳೆ
ತಂದೆಯಿಂದ ಪ್ರಭಾವಿತರಾಗಿದ್ದ ಮೊಸಾಬ್ ತಾವೂ ಸಮಾಜಕ್ಕೆ ಆದರ್ಶವಾಗಿರಬೇಕೆಂದು ಆಶಿಸಿದ್ದರು. ಆದರೆ ಕಾಲಾನಂತರದಲ್ಲಿ ತಂದೆಯ ಭಯೋತ್ಪಾದಕ ಚಟುವಟಿಕೆ ಬೆಳಕಿಗೆ ಬಂದಾಗ ನೊಂದ ಮೊಸಾಬ್ ಎಲ್ಲವನ್ನೂ ಬಿಟ್ಟು ಕ್ರೈಸ್ತ ಮತಕ್ಕೆ ಮತಾಂತರವಾದರು. ಬಳಿಕ ಇಸ್ರೇಲ್ ಬಿಟ್ಟು ಅಮೆರಿಕದಲ್ಲಿ ನೆಲೆಸಿದರು. ಹಮಾಸ್ ಸಂಘಟನೆಯ ಅನ್ಯಾಯದ ವಿರುದ್ಧ ಮೊಸಾಬ್ ಧ್ವನಿ ಎತ್ತುತ್ತಿದ್ದರು, ಅದರ ಸಂಚುಗಳ ಬಗ್ಗೆ ಇಸ್ರೇಲ್‌ಗೆ ತಿಳಿಸುತ್ತಿದ್ದರು.
ಇಸ್ರೇಲ್-ಹಮಾಸ್ ಸಂಘರ್ಷ ಇಂದಿಗೂ ನಡೆಯುತ್ತಲೇ ಇದ್ದು ಅದೆಷ್ಟೋ ಸಾವಿರ ಅಮಾಯಕರ ಹತ್ಯೆಯಾಗಿದೆ. ಈಗಾಗಲೇ ಹಮಾಸ್ ದಾಳಿಯಿಂದಾಗಿ ೧೦,೮೦೦ ಮಂದಿಯ ರಕ್ತದ ಕೋಡಿ ಹರಿದಿದೆ. ಇನ್ನು ಇಸ್ರೇಲ್‌ನ ೧,೪೦೦ ಮಂದಿಯನ್ನು ಕೊಂದಿರುವ ಹಮಾಸ್ ಉಗ್ರರು ಸುಮಾರು ೨೩೯ ಮಕ್ಕಳು, ವೃದ್ಧರನ್ನು ಸೇರಿದಂತೆ ಹಲವರನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದಾರೆ ಎಂದು ವರದಿ ತಿಳಿಸುತ್ತದೆ. ಸುಮಾರು ೮ ಲಕ್ಷ ಮಂದಿ ಉತ್ತರ ಗಾಜಾದಲ್ಲಿ ನೆಲೆಸಿದ್ದಾರೆ.
ಇಸ್ರೇಲ್ ಮತ್ತು ಹಮಾಸಿನ ನಡುವಿನ ದಾಳಿಯಿಂದಾಗಿ ತತ್ತರಿಸಿ ಹೋಗಿರುವ ಪ್ಯಾಲೆಸ್ತೀನಿಯರು ಈಗ ಶಾಂತಿಯನ್ನು ಬಯಸುತ್ತಿದ್ದಾರೆ. ಅಮಾಯಕರ ರಕ್ತದ ಕೋಡಿ ಹರಿಯುವುದು ಬೇಡವಾಗಿದೆ. ಆದರೆ ಪರಿಸ್ಥಿತಿ ಅದಕ್ಕೆ ಅವಕಾಶ ಕೊಡುತ್ತಿಲ್ಲ. ಅಕ್ಟೋಬರ್ ೭ರಂದು ಪ್ರಾರಂಭವಾದ ಇಸ್ರೇಲ್ -ಹಮಾಸ್ ಯುದ್ಧಕ್ಕೆ ಕೊಂಚ ವಿರಾಮ ನೀಡಲು ಇಸ್ರೇಲ್ ಇದೀಗ ಒಪ್ಪಿದೆ. ದಿನದಲ್ಲಿ ೨೦ ಗಂಟೆ ಯುದ್ಧ ನಡೆದರೆ ೪ ಗಂಟೆ ದಾಳಿ ನಡೆಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೃಢಪಡಿಸಿದ್ದಾರೆ.
ಗಾಜಾದ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲ್, ಯುದ್ಧದ ವಲಯದಲ್ಲಿ ನೆಲೆಸಿರುವ ನಾಗರಿಕರನ್ನು ಸುರಕ್ಷಿತ ಪ್ರದೇ ಶಕ್ಕೆ ತೆರಳಲು ಅನುವು ಮಾಡಿ ಕೊಡುವ ಸಲುವಾಗಿ ಹೀಗೆ ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಯುದ್ಧಕ್ಕೆ ಪೂರ್ಣ ವಿರಾಮವಿಲ್ಲವೆಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ‘ಉತ್ತರ ಗಾಜಾದಲ್ಲಿ ನಡೆಸುತ್ತಿರುವ ದಾಳಿಗೆ ತಾತ್ಕಾಲಿಕ ವಿರಾಮವನ್ನಷ್ಟೇ ಕೊಟ್ಟಿದ್ದೇವೆ; ಆದರೆ ನಾವು ಹಮಾಸ್‌ಗೆ ಶರಣಾಗಿದ್ದೇವೆ ಎಂದು ಭಾವಿಸಬೇಡಿ. ಹಮಾಸ್‌ನೊಂದಿಗೆ ಕದನ ವಿರಾಮ ಎಂದರೆ, ಹಮಾಸ್‌ಗೆ, ಉಗ್ರವಾದಕ್ಕೆ ಶರಣಾದಂತೆ. ಇಸ್ರೇಲಿಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ ದನವಿರಾಮ ವಿಲ್ಲ.
ಗಾಜಾಪಟ್ಟಿ ವಶಪಡಿಸಿಕೊಳ್ಳುವ ಯಾವುದೇ ಉದ್ದೇಶವಿಲ್ಲ, ಅದನ್ನು ಆಳಲೂ ನಾವು ಬಯಸುವುದಿಲ್ಲ. ನಮಗೆ ಮತ್ತು ಗಾಜಾಕ್ಕೆ ಉತ್ತಮ ಭವಿಷ್ಯ ನೀಡಲು ಯತ್ನಿಸುತ್ತೇವೆ’ ಎಂದಿದ್ದಾರೆ ನೆತನ್ಯಾಹು. ಈ ಎಲ್ಲ ಘಟನಾವಳಿ ನಡುವೆ ರೋಚಕ ಮಾಹಿತಿ ಗಳನ್ನೊಳಗೊಂಡ ಪುಸ್ತಕವೊಂದು ಸದ್ದು ಮಾಡುತ್ತಿದೆ. ಅದರ ಹೆಸರು ‘ಸನ್ ಆ- ಹಮಾಸ್’. ಇದರ ಲೇಖಕ ಮೊಸಾಬ್ ಹಸನ್ ಯೂಸುಫ್, ಭಯೋತ್ಪಾದನಾ ಸಂಘಟನೆ ಹಮಾಸ್ ನ ಸಂಸ್ಥಾಪಕ ರಲ್ಲೊಬ್ಬರಾದ ಶೇಖ್ ಹಸನ್ ಯೂಸುಫನ ಮಗ. ಈತ ತಂದೆಯ ಭಯೋತ್ಪಾದಕ ಕೃತ್ಯಗಳನ್ನು, ಹಮಾಸ್‌ನ ವಿಕೃತಿಗಳನ್ನು ಹತ್ತಿರದಿಂದ ನೋಡಿ ಸಂಘಟನೆಯ ಕರಾಳಮುಖವನ್ನು ಆತ್ಮಕಥೆ ‘ಸನ್ ಆಫ್ ಹಮಾಸ್’ನಲ್ಲಿ ಬಿಚ್ಚಿಡುತ್ತಾರೆ.
ಇದನ್ನು ಖ್ಯಾತ ಪತ್ರಕರ್ತ ಅಜಿತ್ ಹನುಮಕ್ಕನವರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಈಗ ನಡೆಯುತ್ತಿರುವ ಯುದ್ಧ ಹಮಾಸ್ ಕಾರಣದಿಂದಲೇ
ನಡೆಯುತ್ತಿದೆ ಎಂದು ಮೊಸಾಬ್ ಪುಸ್ತಕದಲ್ಲಿ ಹೇಳುತ್ತಾರೆ. ಇದರಿಂದ ಅಮಾಯಕ ಪ್ಯಾಲೆಸ್ತೀನಿಯರ ಮಾರಣಹೋಮ ನಡೆಯುತ್ತಿದ್ದು ಇದನ್ನು ತಡೆಯಬೇಕಾಗಿರುವುದು ಎಲ್ಲರ ಜವಾಬ್ದಾರಿ ಎನ್ನುತ್ತಾರೆ.
ಈಗಾಗಲೇ ಪರಿಸ್ಥಿತಿ ಕೈಮೀರಿದ್ದು ಗಾಜಾದ ಜನ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಇದೆ. ಶೇಖ್ ಹಸನ್ ಯೂಸುಫ್ ನ ಮಗ ಮೊಸಾಬ್, ಕಟ್ಟರ್ ಮುಸ್ಲಿಂ ಕುಟುಂಬದಲ್ಲಿ ಮೇ ೫, ೧೯೭೮ರಂದು ಜನಿಸಿದವರು. ಒಟ್ಟು ಏಳು ಮಂದಿ ಮಕ್ಕಳಲ್ಲಿ ಇವರೇ ಹಿರಿಯರು. ಹಮಾಸ್‌ನ ಸಂಸ್ಥಾಪಕರಲ್ಲೊಬ್ಬರಾದ ಶೇಖ್ ಹಸನ್ ಯೂಸುಫ್ ಮೊದಲು ಧಾರ್ಮಿಕ ನಾಯಕನಾಗಿದ್ದರು, ಎಲ್ಲರಿಗೂ ಆದರ್ಶಪ್ರಾಯ ನಾಗಿದ್ದು ಸಮಾಜದ ಕಣ್ಣಲ್ಲಿ ಸಮಾಜಸೇವಕನಾಗಿದ್ದರು. ಇದರಿಂದ ಮೊಸಾಬ್ ಕೂಡ ಸಹಜವಾಗಿಯೇ ಪ್ರಭಾವಿತರಾಗಿದ್ದರು.
ತಾವು ಕೂಡ ಸಮಾಜಕ್ಕೆ ಆದರ್ಶವಾಗಿರಬೇಕೆಂಬ ಅಭಿಲಾಷೆ ಇಟ್ಟುಕೊಂಡಿದ್ದರು. ಆದರೆ ಅವರು ಪ್ರಬುದ್ಧ ವಯಸ್ಸಿಗೆ ಬಂದಾಗ ತಂದೆಯ ಭಯೋತ್ಪಾದಕ ಚಟುವಟಿಕೆ ಬೆಳಕಿಗೆ ಬಂತು. ಇದರಿಂದ ನೊಂದ ಮೊಸಾಬ್ ಎಲ್ಲವನ್ನೂ ಬಿಟ್ಟು ಕ್ರೈಸ್ತ ಮತಕ್ಕೆ ಮತಾಂತರವಾದರು. ಬಳಿಕ ಇಸ್ರೇಲ್ ಬಿಟ್ಟು ಅಮೆರಿಕದಲ್ಲಿ ನೆಲೆಸಿದರು. ಹಮಾಸ್ ಸಂಘಟನೆಯ ಅನ್ಯಾಯದ ವಿರುದ್ಧ ಮೊಸಾಬ್ ಧ್ವನಿ ಎತ್ತುತ್ತಿದ್ದರು. ಅಲ್ಲದೆ ಅವರ ಸಂಚುಗಳ ಬಗ್ಗೆ ಇಸ್ರೇಲ್‌ಗೆ ತಿಳಿಸುತ್ತಿದ್ದರು. ‘ಹಮಾಸ್ ಸ್ಥಾಪನೆಯಾದಾಗಿನಿಂದಲೂ ಇಸ್ರೇಲ್ ಅನ್ನು ನಾಶಮಾಡುವ ಗುರಿ ಹೊಂದಿದೆ.
ಇಸ್ರೇಲನ್ನು ಸ್ವೀಕರಿಸಲು ಅಥವಾ ಇಸ್ರೇಲ್‌ನ ಅಸ್ತಿತ್ವದ ಹಕ್ಕನ್ನು ಒಪ್ಪಿಕೊಳ್ಳಲು ಅದು ಸಿದ್ಧವಿಲ್ಲ’ ಎಂದು ಮೊಸಾಬ್ ಹೇಳಿದ್ದರು. ನಂತರ ಇಸ್ರೇಲ್
ಮೇಲಿನ ಭಯೋತ್ಪಾದಕ ದಾಳಿ ತಡೆಯಲು ನೆರವಾಗುವ ಪ್ರಯತ್ನಗಳಿಗಾಗಿ ಅವರನ್ನು ‘ಗ್ರೀನ್ ಪ್ರಿನ್ಸ್’ ಎಂದು ಕರೆಯಲಾಯಿತು. ಮೊಸಾಬ್ ಹೇಳು ವಂತೆ, ಮಾನವೀಯ ನೆಲೆಯಲ್ಲಿ ಪ್ಯಾಲೆಸ್ತೀನಿಯರ ಪರಿಹಾರಕ್ಕಾಗಿ ವಿದೇಶದಿಂದ ಬರುವ ಹಣವನ್ನು ಹಮಾಸ್ ತನ್ನ ಭಯೋತ್ಪಾದಕ ಬಂಕರ್‌ಗಳ
ಸದೃಢೀಕರಣ, ಟನೆಲ್ ನಿರ್ಮಾಣ, ರಾಕೆಟ್ ತಯಾರಿಕೆಗೆ ಬಳಸಿಕೊಂಡಿದೆ. ಸುಮಾರು ೨ ಮಿಲಿಯನ್ ಡಾಲರ್‌ನಷ್ಟು ಹಣ ಕತಾರ್, ಇರಾನ್, ಟರ್ಕಿಯಿಂದ ಪ್ರತಿವರ್ಷ ಬರುತ್ತಿದೆ. ಗಾಜಾದಲ್ಲಿ ೧೨ ಲಕ್ಷ ಮಂದಿಗೆ ಕೇವಲ ೧೧ ಆಸ್ಪತ್ರೆಗಳು ಇವೆಯಂತೆ.
ಅದರಲ್ಲೂ ಶೇ.೮೦ರಷ್ಟು ಮಂದಿ ಬಡತನ ಮಟ್ಟಕ್ಕಿಂತ ಕೆಳಗಿನವರಿದ್ದಾರೆ. ಮೊಸಾಬ್ ಒಟ್ಟಾರೆ ೨೭ ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದರು. ಇವರ ತಂದೆ ಹಮಾಸ್‌ನ ಸಂಸ್ಥಾಪಕರಲ್ಲೊಬ್ಬರು ಎಂದಾದಾಗ ಹಮಾಸ್‌ನ ಭಯೋತ್ಪಾದಕ ಚಟುವಟಿಕೆ ಮತ್ತು ಅದರ ಯೋಜನೆಯ ಬಗ್ಗೆ ಮಾಹಿತಿ ತಿಳಿಯಲು ಇಸ್ರೇಲ್‌ನ ಜೈಲಿನಲ್ಲಿ ಅತ್ಯಂತ ಕಠಿಣಶಿಕ್ಷೆಗೆ ಒಳಗಾಗಿದ್ದರು. ಅಲ್ಲಿ ಇಸ್ರೇಲ್‌ನ ಓರ್ವ ಆಂತರಿಕ ಏಜೆಂಟ್ ಆಗಿದ್ದ ಬೆನ್ ಶಿಟ್ ಎಂಬಾತನ ಸಂಪರ್ಕವಾಗಿ ಮೊಸಾಬ್‌ನ ಜೀವನದ ಚಿತ್ರಣ ಸಂಪೂರ್ಣ ಬದಲಾಯಿತು.
ತನ್ನ ತಂದೆ ಹಸನ್ ಯೂಸುಫ್ ಗೆ ಗಾಜಾ, ವೆಸ್ಟ್ ಬ್ಯಾಂಕ್ ಮತ್ತು ಸಿರಿಯದ ಮಧ್ಯೆ ಆಂತರಿಕ ಮಾಹಿತಿ ಕೊಡಬಹುದಾಗಿದ್ದ ಏಕೈಕ ಸಂಪರ್ಕ ಕೊಂಡಿಯಾಗಿದ್ದರು. ಹಾಗಾಗಿ ಶಿನ್ ಬೆಟ್ ಆಫರ್ ಮಾಡಿದ್ದ ಬೇಹುಗಾರಿಕೆ ಕೆಲಸ ವನ್ನು ಒಪ್ಪಿಕೊಂಡರು. ಶಿನ್ ಬೆಟ್ ಎಂದಿಗೂ ಮೊಸಾಬ್ ಮೇಲೆ ಒತ್ತಡ ಹೇರಲಿಲ್ಲ, ಬದಲಾಗಿ ಅರ್ಧಕ್ಕೆ ನಿಂತಿದ್ದ ಅವರ ವ್ಯಾಸಂಗವನ್ನು ಪೂರ್ಣಗೊಳಿಸಲು ಆರ್ಥಿಕ ಸಹಾಯ ನೀಡಿದರು. ಹೀಗೆ ಸುಮಾರು ಹತ್ತು ವರ್ಷಗಳ ಕಾಲ ಇವರ ಸಂಬಂಧ ಮುಂದುವರಿಯಿತು. ಮೊಸಾಬ್ ಶಿನ್ ಬೆಟ್‌ಗೆ ಹಮಾಸ್ ಕುರಿತ ಅಮೂಲ್ಯ ಮಾಹಿತಿಗಳನ್ನು ಒದಗಿಸುತ್ತಿದ್ದರು. ಅದರ ನೆರವಿನಿಂದಲೇ ಹತ್ತಾರು ಆತ್ಮಹತ್ಯಾ ದಾಳಿ ಗಳನ್ನು ಮತ್ತು ಇಸ್ರೇಲಿಗಳ ಹತ್ಯೆಗಳನ್ನು ತಡೆಯಲಾಯಿತು.
ಇಸ್ರೇಲ್ ಅನೇಕ ಉಗ್ರಗಾಮಿಗಳನ್ನು ಪತ್ತೆಹಚ್ಚಿ ಬೇಟೆ ಯಾಡಲು ಸಹ ಮೊಸಾಬ್‌ರ ಮಾಹಿತಿಗಳು ನೆರವಾದವು. ನಂತರ ಮೊಸಾಬ್ ತಮ್ಮ ಬೇಹುಗಾರಿಕಾ ಕೆಲಸದಿಂದ ನಿವೃತ್ತಿ ಹೊಂದಿ ವೈಯಕ್ತಿಕ ಬದುಕಿನತ್ತ ಹೆಜ್ಜೆಯಿಟ್ಟರು. ದೇಶದ ಯುವಕರಲ್ಲಿ ಮತಾಂಧತೆ ಬೆಳೆಸಿ ಜಿಹಾದಿಗಳಾಗಲು ಇಂಥ ಸಂಘಟನೆಗಳು ಪ್ರೇರಣೆ ನೀಡುತ್ತಿವೆ. ‘ಇಂಥ ಕೆಲಸಗಳಲ್ಲಿ ತೊಡಗುವ ಮೂಲಕ ತಮ್ಮ ಜೀವನವನ್ನು ‘ಧರ್ಮಕ್ಕಾಗಿ’ ತ್ಯಾಗ ಮಾಡಬೇಕು, ಆಗ ಸ್ವರ್ಗ ಪ್ರಾಪ್ತಿಯಾಗುತ್ತದೆ’ ಎಂಬ ಭ್ರಮಾಲೋಕವನ್ನು ಸೃಷ್ಟಿಸಿ ಅಮಾಯಕರು ಈ ಕೂಪಕ್ಕೆ ಬೀಳುವಂತೆ ಮಾಡಲಾಗುತ್ತಿದೆ.
ಇಂಥ ಅಪಾಯದ ಬಲೆಗೆ ಸಿಕ್ಕಿ ಬೀಳುವುದು ಬಡವರ ಮಕ್ಕಳೇ. ಈ ಆಟವನ್ನು ನೋಡಿ ಸಂತೋಷಪಡುತ್ತಿರುವ ಹಮಾಸ್ ಮುಖ್ಯಸ್ಥ ಎನಿಸಿಕೊಂಡವ ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ವಿದ್ಯಾವಂತರನ್ನಾಗಿ ಮಾಡುತ್ತಾನೆ ಎಂಬ ಮೊಸಾಬ್‌ರ ಅಭಿಪ್ರಾಯ ಸತ್ಯ ಕೂಡ ಹೌದು. ಒಬ್ಬ ಭಯೋತ್ಪಾದಕನ ಮಗನಾಗಿ ಜನಿಸಿದರೂ ಕುರಾನ್ ಮತ್ತು ಬೈಬಲ್ ಗ್ರಂಥಗಳನ್ನು ಅಭ್ಯಾಸ ಮಾಡಿ, ಸರಿ-ತಪ್ಪು ವಿವೇಚನೆಗಳನ್ನು ಅರಿತು, ಎಲ್ಲ ದುಷ್ಟ ಕೆಲಸಗಳಿಂದ ಹೊರಬಂದು ಉತ್ತಮ ಜೀವನ ಕಟ್ಟಿಕೊಂಡ ಮೊಸಾಬ್, ಮತಾಂಧತೆಯಲ್ಲಿ ಮುಳುಗಿ ಬದುಕನ್ನು ಕೊನೆಗೊಳಿಸಿಕೊಳ್ಳುತ್ತಿರುವವರಿಗೆ ಉತ್ತಮ ಪಾಠವಾಗಿ ನಿಲ್ಲುತ್ತಾರೆ.
ವ್ಯಕ್ತಿಯೊಬ್ಬನು ತನ್ನ ಧರ್ಮ ಏನು ಹೇಳುತ್ತದೆ? ಯಾವುದು ಸತ್ಯ ಯಾವುದು ಮಿಥ್ಯ? ನಿಜವಾದ ಧರ್ಮ ಅಂದರೆ ಏನು? ದೇವರನ್ನು ಹೇಗೆ ಕಾಣಬಹುದು? ಎಂಬುದನ್ನು ಅರಿಯುವುದು ಮುಖ್ಯ. ಆ ಅರಿವು ಮೂಡಿದಾಗ ಧರ್ಮದ ಹೆಸರಿನಲ್ಲಿ ಕ್ರೌರ್ಯ ಮೆರೆಯುವವರ ಮುಖವಾಡಗಳು
ಕಳಚಿ ಬೀಳುತ್ತವೆ. ಮತಾಂಧತೆಯ ವಿಷ ತಮ್ಮನ್ನೇ ಕೊಲ್ಲುತ್ತದೆ ಎಂಬ ಸತ್ಯ ಅರಿವಿಗೆ ಬರುತ್ತದೆ. ಮತಾಂಧತೆ, ಕ್ರೌರ್ಯ, ಭಯೋತ್ಪಾದನೆಗಳನ್ನು ಮೈ ತುಂಬಿಕೊಂಡ ದೇಶ ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ. ಹಾಗಾಗಿ ಯುವ ಜನಾಂಗಕ್ಕೆ ಶಿಕ್ಷಣ ನೀಡುವುದು ಬಹಳ ಮುಖ್ಯ.