Saturday, 14th December 2024

ಸಪ್ತಸ್ವರ ಹೊಮ್ಮಬೇಕಾದ ಬಾಯಲ್ಲಿ ಅಪಸ್ವರವೇ ?!

Hamsalekha

ತಿರುಗೇಟು

ಲಕ್ಷ್ಮೀಶ್ ಸೋಂದಾ

ಸಾಹಿತಿಗಳು, ಕಲಾವಿದರಿಗೆಲ್ಲ ಜಾತಿಯ ಪರಿಮಿತಿಯೇ ಇರುವುದಿಲ್ಲ. ಕಾರಣ, ಇವರೆಲ್ಲ ಜಾತಿ-ಧರ್ಮಗಳನ್ನು ಮೀರಿದವರಾಗಿರುತ್ತಾರೆ. ಜಾತಿ-ಧರ್ಮಗಳೆಲ್ಲ ಮನುಷ್ಯನ ಸೃಷ್ಟಿ. ZZbಜಿಜ್ಟ್ಠಃಜಞZಜ್ಝಿ.ಟಞ ನಿಜವಾಗಿಯೂ ಜಾತಿಮುಖಿಯಾಗಿ, ಧರ್ಮಮುಖಿಯಾಗಿ ಸಮಸ್ಯೆಗಳು ಉಂಟಾದಾಗ ಆ ಕುರಿತು ಚರ್ಚೆಯೋ, ವಿಮರ್ಶೆಯೋ ನಡೆದರೆ ಅದಕ್ಕೊಂದು ಅರ್ಥವಿರುತ್ತದೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಿನಿಮಾ ಸಂಗೀತ ನಿರ್ದೇಶಕ ಹಂಸಲೇಖಾ ಅವರು, “ಕನ್ನಡದ ಪ್ರಾದೇಶಿಕ ಪಕ್ಷ ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ದೇಶದ ಪ್ರತಿ ಬ್ರಾಹ್ಮಣನ ಮನೆಯಲ್ಲೂ ಭಗವದ್ಗೀತೆಯ ಜತೆಗೆ ಆರೆಸ್ಸೆಸ್‌ನ ‘ಚಿಂತನಗಂಗಾ’ ಪುಸ್ತಕ ಇರುತ್ತೆ. ಅದು ಆರೆಸ್ಸೆಸ್‌ನ ಸಂವಿಧಾನ. ಆ ಪುಸ್ತಕ ಎಷ್ಟು ಕೆಲಸ ಮಾಡುತ್ತೆ ಎಂದರೆ, ರಾಷ್ಟ್ರದಲ್ಲಿ ನಡೆಯುತ್ತಿರುವ ಸಂಗತಿಗಳಿಗೆ ವಿರುದ್ಧವಾದ ಪ್ರತಿದಾಳಿಯನ್ನು ಹೇಗೆ ಮಾಡಬೇಕು ಅಂತ ಆ ‘ಚಿಂತನಗಂಗಾ’ ಮೂಲಕ ಮೆಸೇಜ್ ಕಳುಹಿಸುತ್ತಾರೆ” ಅಂತ ಹೇಳಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಅಲ್ಲಲ್ಲಿ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕನ್ನಡಕ್ಕೆ ಬ್ರಾಹ್ಮಣರ ಕೊಡುಗೆ ಏನಿದೆ ಎಂಬುದನ್ನು ಹಂಸಲೇಖಾರ ಗಮನಕ್ಕೆ ತರಲು ಇಲ್ಲಿ ಯತ್ನಿಸಿರುವೆ.

ಬ್ರಾಹ್ಮಣ-ವಿರೋಧಿ ಭಾವ

ನಾಗರಿಕ ಪ್ರಪಂಚದಲ್ಲಿ ‘ಮಾತು ಮನಸ್ಸಿನ ಕನ್ನಡಿ’ ಎಂಬ ಮಾತೊಂದಿದೆ. ನಾವಾಡುವ ಮಾತು ನಮ್ಮ ಮನಸ್ಸಿನ ಭಾವನೆಯ ಪ್ರತೀಕವಾಗಿರುತ್ತದೆ. ಮನಸ್ಸಿನಲ್ಲಿ ಹುದುಗಿರುವ ಭಾವಗಳೇ ಭಾಷೆಯ ರೂಪ ತಳೆದು ಮಾತಾಗಿ ಬಿಂಬಿಸಲ್ಪಡುತ್ತವೆ. ಇದನ್ನಿಲ್ಲಿ ಹೇಳಲು ಕಾರಣವಾಗಿದ್ದು, ನಾವೆಲ್ಲ ಬಾಲ್ಯದಿಂದ ಒಂದರ್ಥದಲ್ಲಿ ಆರಾಽಸುತ್ತ ಬಂದಿರುವ ಅಪರಿಮಿತ ಪ್ರತಿಭಾಸಂಪನ್ನರೂ, ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಸಂಗೀತ ಸಂಯೋಜನೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿ, ಅದೆಷ್ಟೋ ಮಧುರ ಗೀತೆಗಳನ್ನು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಕೊಡುಗೆಯಾಗಿ ನೀಡಿದವರೂ ಆದ ಹಂಸಲೇಖಾ ಇತ್ತೀಚೆಗೆ ಆಡಿದ, ಮೇಲೆ ಉಲ್ಲೇಖಿಸಲಾಗಿರುವ ಮಾತು.

ಇವರದು ಬಹುಮುಖ ಪ್ರತಿಭೆ ಎಂಬುದು ನಮಗೆಲ್ಲ ಮೊದಲೇ ತಿಳಿದಿದೆ; ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಈ ಬಹುಮುಖಿತ್ವದ ವಿಸ್ತೃತ ಸ್ವರೂಪವಾದ ‘ಬ್ರಾಹ್ಮಣ-ವಿರೋಧಿ’ ಭಾವ ಅನಾವರಣಗೊಳ್ಳುತ್ತಿರುವುದು ಬೇಸರದ ಜತೆಗೆ ಸೋಜಿಗವನ್ನೂ ಉಂಟುಮಾಡಿದೆ. ಬೇಸರ ಏಕೆಂದರೆ, ಸಂಬಂಧವೇ ಇರದ ವಿಷಯವೊಂದನ್ನು ಸಾರ್ವಜನಿಕವಾಗಿ ಪ್ರಕಟ ಪಡಿಸಿ ತಮ್ಮ ಮನಸ್ಸಿನ ಮೂಲೆಯಲ್ಲಿದ್ದ ಬ್ರಾಹ್ಮಣ ದ್ವೇಷವನ್ನು ಕಾರಿಕೊಂಡಿದ್ದಕ್ಕೆ.

ಸೋಜಿಗ ಏಕೆಂದರೆ, ಇಷ್ಟೊಂದು ಅನುಭವವಿದ್ದೂ, ಇಷ್ಟೊಂದು ರಂಜನೀಯ ಸಾಹಿತ್ಯ-ಸಂಗೀತವನ್ನು ನೀಡಿಯೂ, ಇಂಥ ಅಪ್ರಬುದ್ಧ, ಅಸಮಂಜಸ ಹೇಳಿಕೆಯನ್ನು ನೀಡಿಬಿಟ್ಟರಲ್ಲಾ ಎಂಬುದಕ್ಕೆ. ಸನ್ಮಾನ್ಯ ಹಂಸಲೇಖಾ ಅವರೇ, ನಿಮಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಲಿಕ್ಕಿದೆ. ನೀವು ಎಷ್ಟು ಮಂದಿ ಬ್ರಾಹ್ಮಣರ ಮನೆಗೆ ಹೋಗಿ ಅಲ್ಲಿ ಈ ಪುಸ್ತಕಗಳು ಇರುತ್ತ ವೆಯೋ ಇಲ್ಲವೋ ಎಂದು ಸ್ವತಃ ಪರೀಕ್ಷಿಸಿ ದ್ದೀರಿ? ಭಗವದ್ಗೀತೆಯನ್ನು ಮನೆಯಲ್ಲಿಟ್ಟು ಕೊಳ್ಳುವುದು ನಿಮ್ಮ ಪ್ರಕಾರ ಅಪರಾಧವೇ? ಭಗವದ್ಗೀತೆ ಬ್ರಾಹ್ಮಣರ ಗ್ರಂಥವೇ? ಅದನ್ನು ರಚಿಸಿದವರು ಬ್ರಾಹ್ಮಣರೇ? ಎಷ್ಟು ಮಂದಿ ಬ್ರಾಹ್ಮಣರ ಮನೆಯಲ್ಲಿ ಆರೆಸ್ಸೆಸ್‌ನ ‘ಚಿಂತನಗಂಗಾ’ ಕೃತಿ ಇದ್ದುದನ್ನು ನೋಡಿದ್ದೀರಿ? ನೀವೇ ನಂಬುವ ಕಮ್ಯುನಿಸ್ಟ್ ಪಕ್ಷದಲ್ಲಿ ಬ್ರಾಹ್ಮಣರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದು ನಿಮ್ಮ ಗಮನಕ್ಕೆ ಬಂದೇ ಇಲ್ಲವೇ? ಕನ್ನಡ ಭಾಷೆಗೆ ಬ್ರಾಹ್ಮಣರು ನೀಡಿದ ಕೊಡುಗೆಯ ಬಗ್ಗೆ ನಿಮಗೆ ಅರಿವಿಲ್ಲವೇ ಅಥವಾ ಜಾಣ ಕುರುಡೇ? ಕನ್ನಡಕ್ಕೆ ಜ್ಞಾನಪೀಠ ತಂದುಕೊಟ್ಟವರಲ್ಲಿದ್ದ ಬ್ರಾಹ್ಮಣರು ನಿಮಗೆ ಕಂಡೇ ಇಲ್ಲವೇ? ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಬ್ರಾಹ್ಮಣರು ವಹಿಸಿದ ಪಾತ್ರದ ಬಗ್ಗೆ ನಿಮಗೆ ಅರಿವಿಲ್ಲವೇ? ಹೀಗೆ ನಿಮ್ಮ ಅಪದ್ಧ ಹೇಳಿಕೆಯ ವಿರುದ್ಧ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಬಹುದು.

ಸಾಹಿತಿಗಳು, ಕಲಾವಿದರು, ಸಾಧಕರಿಗೆಲ್ಲ ಜಾತಿಯ ಪರಿಮಿತಿಯೇ ಇರುವುದಿಲ್ಲ. ಕಾರಣ, ಇವರೆಲ್ಲ ಜಾತಿ, ಸಮುದಾಯ, ಧರ್ಮಗಳನ್ನು ಮೀರಿದವ-ರಾಗಿರುತ್ತಾರೆ. ಜಾತಿ-ಧರ್ಮ-ಸಮುದಾಯಗಳೆಲ್ಲ ಮನುಷ್ಯನ ಸೃಷ್ಟಿ ಎಂಬ ಅರಿವು ಎಲ್ಲರಿಗೂ ಇದೆ. ನಿಜವಾಗಿಯೂ ಜಾತಿಮುಖಿಯಾಗಿ, ಧರ್ಮಮುಖಿ ಯಾಗಿ ಸಮಸ್ಯೆಗಳು ಉಂಟಾದಾಗ ಆ ಕುರಿತು ಚರ್ಚೆಯೋ, ವಿಮರ್ಶೆಯೋ ನಡೆದರೆ ಅದಕ್ಕೊಂದು ಅರ್ಥವಿರುತ್ತದೆ. ಆದರೆ ಯಾವುದೋ ಒಂದು ಪಕ್ಷದ ಸಂಘಟನೆಗೆ ಸಂಬಂಧಿಸಿದ ವೇದಿಕೆಯಲ್ಲಿ ಬ್ರಾಹ್ಮಣರ ಕುರಿತಾಗಿ ಪೂರ್ವಗ್ರಹದೊಂದಿಗೆ ಮಾತನಾಡುವ, ಕನ್ನಡ ಭಾಷೆ ಮತ್ತು ಕನ್ನಡತನದ ಕುರಿತಾದ ಬ್ರಾಹ್ಮಣರ ಪ್ರೀತಿ- ಅಭಿಮಾನಗಳನ್ನು ಪ್ರಶ್ನಿಸುವ ಅಥವಾ ಕೆಣಕುವುದರ ಹಿಂದೆ ಹಂಸಲೇಖಾರಿಗೆ ಯಾವ ‘ಹಿಡನ್ ಅಜೆಂಡಾ’ ಇದೆ ಎಂಬುದು ಅರ್ಥವಾಗುತ್ತದೆ.

ಶೋಭೆ ತರುವಂಥದ್ದಲ್ಲ
ಹಂಸಲೇಖಾ ಅವರೇ, ನಿಮ್ಮ ಹಿಡನ್ ಅಜೆಂಡಾ ಏನೇ ಇರಲಿ, ಅದಕ್ಕೆಲ್ಲ ಬ್ರಾಹ್ಮಣರು ವಿನಾಕಾರಣ ಆಹಾರವಾಗುತ್ತಾರೆ ಎಂದು ನೀವು ಭಾವಿಸಿದಲ್ಲಿ, ಅದು ನಿಮ್ಮ ಮೂರ್ಖತನವಾದೀತು. ನಿಮ್ಮ ಅದೆಷ್ಟೋ ಹಾಡುಗಳನ್ನು ಸಂಭ್ರಮಿಸಿದವರಲ್ಲಿ ಆರಾಽಸಿದವರಲ್ಲಿ ಬ್ರಾಹ್ಮಣರು ಇದ್ದರಲ್ಲವಾ? ಅವರೆಲ್ಲರೂ ನಿಮ್ಮ ಸಮುದಾಯ ಯಾವುದೆಂದು ನೋಡಿ ಸಂಭ್ರಮಿಸಿದ್ದಾ? ಈ ರೀತಿಯ ಆಲೋಚನೆ ಅದೆಷ್ಟು ‘ಕಳಪೆ’ ಅನಿಸುತ್ತದೆ ಎಂದರೆ,
ಅದು ನಿಮ್ಮಂಥ ಹಿರಿಯ ಸಾಧಕರಿಗೆ ಶೋಭೆ ತರುವುದಿಲ್ಲ.

ನಾವು ಇತಿಹಾಸದಲ್ಲಿ ತುಂಬಾ ಹಿಂದೆ ಹೋಗುವುದು ಬೇಡ. ಕಳೆದ ೧೦೦-೧೫೦ ವರ್ಷಗಳ ಇತಿಹಾಸ ತಿಳಿದುಕೊಂಡರೂ ಸಾಕು, ಕನ್ನಡಕ್ಕೆ ಬ್ರಾಹ್ಮಣರ ಕೊಡುಗೆ ಇದೆಯೋ ಇಲ್ಲವೋ ಎಂಬುದು ತಿಳಿದುಬಿಡುತ್ತದೆ. ಕನ್ನಡವನ್ನು ಆರಾಧಿಸುವ ಬ್ರಾಹ್ಮಣರೂ ಕನ್ನಡಿಗರಲ್ಲವೇ? ಸಿನಿಮಾ ರಂಗವನ್ನೇ ಪರಿಗಣಿಸುವುದಾದರೆ ಡಾ. ವಿಷ್ಣುವರ್ಧನ್, ಶ್ರೀನಾಥ್, ಅನಂತ್‌ನಾಗ್, ಶಂಕರ್ ನಾಗ್, ದ್ವಾರಕೀಶ್, ಶಿವರಾಮಣ್ಣರಂಥ ಕಲಾವಿದರು, ಪುಟ್ಟಣ್ಣ ಕಣಗಾಲ್, ಸುನಿಲ್ ಕುಮಾರ್ ದೇಸಾಯಿ ಯವರಂಥ ನಿರ್ದೇಶಕರು, ಚಿ.ಉದಯಶಂಕರ್, ಆರ್.ಎನ್.ಜಯಗೋಪಾಲ್, ಕೆ.ಕಲ್ಯಾಣ್ ಅವರಂಥ
ಗೀತಸಾಹಿತಿಗಳು ಕನ್ನಡ ಸಿನಿಮಾ ರಂಗಕ್ಕೆ ಕೊಟ್ಟ ಕೊಡುಗೆಗಳನ್ನು ಮರೆತುಬಿಡುವುದು ತರವೇ? ಮಿಕ್ಕಂತೆ, ಸರ್ ಎಂ.ವಿಶ್ವೇಶ್ವರಯ್ಯ, ಇನೋಸಿಸ್‌ನ ನಾರಾಯಣ ಮೂರ್ತಿ-ಸುಧಾಮೂರ್ತಿ ದಂಪತಿ, ಹರಿಜನ ಕನ್ಯಾಮಂದಿರ ಸ್ಥಾಪಿಸಿದ ಗುರು ಗೋವಿಂದ ಭಟ್ಟರು, ಮಹಾನ್ ಗಾಯಕ ಭೀಮಸೇನ್ ಜೋಷಿ, ಸಾಹಿತಿಗಳಾದ ಯು.ಆರ್.ಅನಂತಮೂರ್ತಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತ, ದ.ರಾ.ಬೇಂದ್ರೆ, ವಿ.ಕೃ.ಗೋಕಾಕ್, ಗಿರೀಶ್ ಕಾರ್ನಾಡ್, ಎಸ್.ಎಲ್. ಭೈರಪ್ಪ, ಕರ್ನಾಟಕ ಏಕೀಕರಣದ ಪಿತಾಮಹ ಆಲೂರು ವೆಂಕಟರಾವ್ ಇವರನ್ನೆಲ್ಲಾ ಜಾತಿಮುಖದಿಂದಲೇ ನೋಡಬೇಕೇ ಹಾಗಾದರೆ? ಅಥವಾ ಇವರೆಲ್ಲಾ ತಮ್ಮ ಜಾತಿಯ ಕಾರಣದಿಂದಾಗಿಯೇ ಇಷ್ಟೆಲ್ಲಾ ಸಿದ್ಧಿ- ಸಾಧನೆಗೆ, ಕೊಡುಗೆಗೆ ಕಾರಣರಾದರೇ? ಕಲೆ, ಸಾಹಿತ್ಯ, ಕ್ರೀಡೆ, ಸಮಾಜಸೇವೆ, ರಾಜಕಾರಣ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಂದ ಹೊಮ್ಮಿರುವ ಸಾಧನೆಗೆ ಜಾತಿಯ ಚೌಕಟ್ಟಿಲ್ಲ ಎಂಬ ಅತಿಸಾಮಾನ್ಯ ಸಂಗತಿ
ಹಂಸಲೇಖಾರ ಅರಿವಿಗೆ ಬಾರದೇ ಹೋಯಿತೇ ಅಥವಾ ಅವರೊಳಗಿನ ‘ಬ್ರಾಹ್ಮಣ-ದ್ವೇಷ’ ಮತ್ತು ‘ಪೂರ್ವಗ್ರಹ’ ಈ ಅರಿವನ್ನು ಮರೆಸಿಬಿಟ್ಟಿತೇ?
ಹಂಸಲೇಖಾ ಅವರೇ, ಕೆಲವೇ ದಿನಗಳ ಹಿಂದೆ ನಿಮ್ಮ ಪೂರ್ವಗ್ರಹಪೀಡಿತ ಚಿತ್ತಸ್ಥಿತಿಗೆ ಜೈನರು ಗುರಿಯಾದರೆ, ಇಂದು ಬ್ರಾಹ್ಮಣರ ಸರದಿ ಬಂದಿದೆ ಯಷ್ಟೇ.

ಆದರೆ ನಿಮ್ಮ ಇಂಥ ಪೂರ್ವಗ್ರಹಪೀಡಿತ ಭಾವನೆಗೆ ಉತ್ತರಿಸದೆ ಮೌನವಾಗಿದ್ದರೆ, ‘ನಿಮ್ಮ ಮಾತೇ ಸತ್ಯ’ ಎಂದು ಎಲ್ಲರೂ ಒಪ್ಪಿದಂತಾಗುತ್ತದೆ. ಈ ಕಾರಣಕ್ಕೆ ಈ ಬರಹ ಅನಿವಾರ್ಯವಾಯಿತು. ‘ಸಂಸ್ಕೃತ ಬ್ರಾಹ್ಮಣರ ಭಾಷೆ’ ಎಂಬ ತಪ್ಪುಗ್ರಹಿಕೆಯಿಂದ ಹೊರಬನ್ನಿ, ‘ಕನ್ನಡವೇ ಬ್ರಾಹ್ಮಣರ ಭಾವದ ಭಾಷೆ’ ಎಂಬ ಅರಿವು ನಿಮ್ಮೊಳಗೆ ಸರಿಯಾಗಿ ಮೂಡಲಿ. ಛೇ! ನಿಮ್ಮನ್ನು ತುಂಬಾ ಪ್ರೀತಿಸಿ ದ್ದೆವು, ಆದರೆ ಆ ಪ್ರೀತಿ-ಅಭಿಮಾನಗಳನ್ನು ನೀವೇ
ವಿನಾಕಾರಣ, ಸ್ವಯಂಕೃತ ಅಪರಾಧದಿಂದ ಕಳೆದುಕೊಂಡುಬಿಟ್ಟಿರಿ. ಕನ್ನಡದ ಮೇಲಿನ ಬ್ರಾಹ್ಮಣರ ಪ್ರೀತಿ ಎಷ್ಟಿದೆ ಎಂದರೆ, ನಿಮ್ಮೊಳಗೆ ಮಡುಗಟ್ಟಿ ರುವ ‘ಬ್ರಾಹ್ಮಣ -ದ್ವೇಷ’ ಅಥವಾ ‘ಪೂರ್ವಗ್ರಹಪೀಡಿತ ಭಾವನೆ’ಗಿಂತ ಒಂದು ಕೈ ಹೆಚ್ಚು ಎನ್ನುವಷ್ಟು. ಎಂದೂ ‘ಜಾತಿಯ ಕನ್ನಡಕ’ದಲ್ಲಿ ನಾವು ನೋಡಬಯಸದ ಮಹನೀಯರನ್ನು, ಇಂದು ನಿಮ್ಮ ದೆಸೆಯಿಂದಾಗಿ ಹಾಗೆ ನೋಡುವ ಅನಿವಾರ್ಯತೆ ಉಂಟಾಗಿದ್ದಂತೂ ಖೇದಕರ…!

(ಲೇಖಕರು ಇತಿಹಾಸಕಾರರು)