Saturday, 14th December 2024

ಅಷ್ಟಕ್ಕೂ ದಲಿತರ ಉದ್ಧಾರಕ್ಕೆ ಹಂಸಲೇಖರ ಕೊಡುಗೆ ಏನು ?

ಅಭ್ಯಾಗತ

ನಾಡು, ನುಡಿ, ಸಮಾಜಕ್ಕೆ ಅವರು ಮಾಡಿದ ಹೋರಾಟಗಳೇನು?

ನಾದಬ್ರಹ್ಮ ಎನಿಸಿಕೊಳ್ಳುವಲ್ಲಿ ಪೇಜಾವರರ ಭಕ್ತರ ಪಾಲೂ ಇಲ್ಲವೇ?

ಎಲ್ಲ ರೀತಿಯ ಮಾಂಸ ಭಕ್ಷಣೆಗೆ ತಾವು ಸಿದ್ಧರಿದ್ದೀರೇ?

ದಲಿತ ಮಠಾಧೀಶರು ಮಾಂಸ ತಿನ್ನುತ್ತಾರೆಯೇ?

ಪತ್ನಿಯಲ್ಲಿ ಇದ್ದಿರಬಹುದಾದ ಔಚಿತ್ಯಪ್ರಜ್ಞೆಯೂ ನಿಮಗಿಲ್ಲವೇ?

ತಾಳ್ಮೆಗೂ ಮಿತಿ ಇರುತ್ತದೆ. ಮಾತ್ರವಲ್ಲ, ನಿಮ್ಮ ಬೆಳವಣಿಗೆಯಲ್ಲಿ ಕೇವಲ ಕುರಿ-ಕೋಳಿ ತಿಂದವರ, ದಲಿತರ ಪಾತ್ರ ವಷ್ಟೇ ಇಲ್ಲ. ನೀವು ಈ ಮಟ್ಟಿಗೆ ಬೆಳೆಯವಲ್ಲಿ ಪೇಜಾವರರ ಫೋಟೋವನ್ನು ದೇವರ ಮನೆಯಲ್ಲಿ ಇಟ್ಟು ಪೂಜಿಸುವ ಅದೆಷ್ಟೋ ಲಕ್ಷಾಂತರ ಅವರ ಅನುಯಾಯಿಗಳ ಪಾಲೂ ಇದೆ ಎಂಬುದನ್ನು ಮರೆಯಬೇಡಿ ‘ಹಿಂಸಲೋಕ’ರೇ!

ಅಭ್ಯಾಗತ

ಅಷ್ಟಕ್ಕೂ ಹಂಸಲೇಖ ಅನ್ನೋ ವ್ಯಕ್ತಿ ಯಾವ ಜಾತಿಯವರು ಎಂಬುದೇ ಗೊತ್ತಿಲ್ಲ. ನಮಗೆ ಅವರ ಜಾತಿ ಮುಖ್ಯವಾಗಿರಲೇ ಇಲ್ಲ. ಅವರೊಬ್ಬ ಒಳ್ಳೆಯ ಸಂಗೀತ ನಿರ್ದೇಶಕ, ಉತ್ತಮ ಗೀತ ರಚನೆಕಾರ, ಪ್ರತಿಭಾವಂತ ಎಂಬುದಷ್ಟೆ ಕಾರಣಕ್ಕೆ ನಾವವರನ್ನು
ಒಪ್ಪಿಕೊಂಡದ್ದು, ಅಪ್ಪಿಕೊಂಡದ್ದು, ಇಷ್ಟರವರೆಗೆ ಗೌರವಿಸಿದ್ದು, ಆದರಿಸಿದ್ದು, ಮೆರೆಸಿದ್ದು. ಅಪ್ಪಟ ಕನ್ನಡಿಗ (ಹಾಗೆ ನೋಡಿ ದರೆ, ರಾಜು ಸಮುದಾಯ ಆಂಧ್ರ ಮೂಲದ್ದು. ಅವರ ಮೂಲ ಹೆಸರು ಗಂಗರಾಜು) ಎಂಬ ಭ್ರಮೆಯಷ್ಟೇ ಅವರ ಬಗೆಗಿನ
ಅಭಿಮಾನಕ್ಕೂ ಕಾರಣವಾಗಿತ್ತು. ಅವರನ್ನು ‘ನಾದಬ್ರಹ್ಮ’ ಎಂದು ಯಾವಾಗ, ಯಾರು ಕರೆದರೋ ಗೊತ್ತಿಲ್ಲ.

ಹಾಗಂತ ಗುರುತಿಸಿ ಗೌರವಿಸುವಾಗ ಯಾರೂ ನಿಮ್ಮ ಜಾತಿ ಯಾವುದು, ನೀವು ಕುರಿ-ಕೋಳಿ ತಿನ್ನುತ್ತೀರಾ? ದಲಿತರ ಮನೆಯಲ್ಲಿ ಊಟ ಮಾಡಿದ್ದೀರಾ, ಮಲಗೆದ್ದಿದ್ದೀರಾ ಅಂತ ಕೇಳಿರಲಿಕ್ಕೆ ಸಾಧ್ಯವೇ ಇಲ್ಲ. ಯಾವತ್ತೂ ಎಲ್ಲಿ ತಿಂದುಂಡು ಬಂದು ಪದ್ಯ ಬರೆದಿರಿ? ನೀವು ದಲಿತರ ಮನೆಯಲ್ಲಿ ಕುಳಿತು ಕಂಪೋಸ್ ಮಾಡಿದ್ದೋ, ಬಲಿತರ ಮನೆಯಲ್ಲಿ ಬರೆದದ್ದೋ ಅಂತ ಕೇಳುವ ಪ್ರಮೇಯವೇ ಬರಲಿಲ್ಲ.

ಇಂದು ಅವರು ಕನ್ನಡನಾಡಿಗೆ ಸೇರಿದವರು ಎಂಬ ಅಭಿಮಾನವೇ ಹೆಚ್ಚಾಗಿದೆ. ಅವರನ್ನು ಇನ್ನಿಲ್ಲದಂತೆ ಹಾಡಿ ಹೊಗಳಿದ್ದೇ ಈ ಪರಿ ತಲೆಗೇರಿದೆ ಎಂದು ಗೊತ್ತಿರಲಿಲ್ಲ, ಅಥವಾ ಅವರ ತಲೆಯೊಳಗೆ ಇಂಥದ್ದೊಂದು ಕುತ್ಸಿತ ಬುದ್ಧಿ ಮನೆ ಮಾಡಿದೆ ಎಂಬುದೂ ಗೊತ್ತಾಗಿರಲೇ ಇಲ್ಲ. ಏಲ್ಲೋ ಆಗಾಗ ‘ಸಮಾನ ಅತೃಪ್ತ ಆತ್ಮ’ರ ಗುಂಪಿನಲ್ಲಿ ಒಳಗೊಳಗೇ ತಮ್ಮ ಬ್ರಹ್ಮದ್ವೇಷ ಹೊರಹಾಕು ತ್ತಿದ್ದು ಇತ್ತು. ಬಿಟ್ಟರೆ,  ಅದು ಈ ಮಟ್ಟಿಗೆ ವಿಕೃತಿಯಾಗಿ ಅವರನ್ನು ಕಾಡುತ್ತಿದೆ ಎಂಬುದು ಹೊರಜಗತ್ತಿಗೆ ಗೊತ್ತಾಗಲೇ ಇಲ್ಲ.

ಅಷ್ಟಕ್ಕೂ ಈ ಮನುಷ್ಯನಿಗೆ ಜಾತಿ ಹೆಸರಲ್ಲಿ, ಆಹಾರ ಸಂಸ್ಕೃತಿಯನ್ನು ಹಿಡಿದು ಜಗ್ಗಾಡಿ, ಬೇಳೆ ಬೇಯಿಸಿ ಕೊಳ್ಳಲು, ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಪೇಜಾವರ ರಂಥ ರಾಷ್ಟ್ರಸಂನ್ಯಾಸಿಗಳ ಹೆಸರೇ ಬೇಕಿತ್ತೇ?

ಹೌದು, ಒಂದು ಕಾಲದಲ್ಲಿ ನಮ್ಮ ಸಮಾಜದಲ್ಲಿ ಅಸ್ಪೃಶ್ಯತೆ ಹೆಸರಿನಲ್ಲಿ ಇಂಥದ್ದೊಂದು ಸಮಸ್ಯೆ ಅತಿಯಾಗಿ ಕಾಡಿದ್ದು ನಿಜ. ಬುದ್ಧ, ಬಸವ, ಸಂತ ಜ್ಞಾನೇಶ್ವರರ ಕಾಲದಲ್ಲೂ ಅಂಥ ಜಾತಿ ಸಂಘರ್ಷದ ಕಿಡಿ ಉರಿಯುತ್ತಲೇ ಇತ್ತು. ಸ್ವಾತಂತ್ರ್ಯದ ಹಿಂದೆ ಮುಂದೆಯೂ ಜೀವಂತವಾಗಿದ್ದ ಈ ಪಿಡುಗಿನ ವಿರುದ್ಧ ಸ್ವಾಮಿ ವಿವೇಕಾನಂದ, ಅಂಬೇಡ್ಕರ್, ದಯಾನಂದ ಸರಸ್ವತಿ, ರಾಜಾ ರಾಮ್ ಮೋಹನ ರಾಯ, ಮಹಾತ್ಮ ಗಾಂಧಿ ಮುಂತಾದವರೆಲ್ಲ ಚಿಂತಿಸಿದವರೇ, ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟವರೇ.

ಅದೇ ಪರಂಪರೆಯನ್ನು ಆಧುನಿಕ ಭಾರತದ ಸನ್ನಿವೇಶದಲ್ಲೂ ಮುಂದುವರಿಸಿಕೊಂಡು ಬಂದವರು ಪೇಜಾವರ ಅಧೋಕ್ಷ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದಂಗಳವರು. ತೀರಾ ಕಳೆದ ಶತಮಾನದ 70ರ ದಶಕದಲ್ಲೇ ಶ್ರೀಗಳು, ಕಡು ಸಂಪ್ರದಾಯಸ್ಥ
ಮಾಧ್ವ ಪರಂಪರೆಯ ಮಠದ ಭಕ್ತಗಣದ ವಿರೋಧವನ್ನೂ ಲೆಕ್ಕಿಸದೇ ದಲಿತರ ಕೇರಿಗಳಲ್ಲಿ ನಡೆದಾಡಿ ಪಾದಪೂಜೆ ಸ್ವೀಕರಿಸಿ ದವರು.

ಸ್ವತಃ ತಮ್ಮ ಸಮಾಜವನ್ನೇ ಹಾಕಿಕೊಂಡು ದತಲಿಕೇರಿಗೆ ಹೋಗಿ ಜನ ಜಾಗೃತಿಗಾಗಿ ಶ್ರಮಿಸಿದವರು. ಆಗಿನ್ನೂ ಹಂಸಲೇಖ ಹೆಸರೇ ಕನ್ನಡಿಗರಿಗೆ ಸರಿಯಾಗಿ ಗೊತ್ತಿರಲಿಲ್ಲ. ಈಶ್ವರಿ ಪ್ರೊಡಕ್ಷನ್, 1985ರಲ್ಲಿ ನಿರ್ಮಿಸಿದ ರವಿಚಂದ್ರನ್ ಅವರ  ‘ಪ್ರೇಮ ಲೋಕ’ ಚಿತ್ರದಿಂದಲೇ ಈ ಗಂಗರಾಜು ಎಂಬ ವ್ಯಕ್ತಿ ಅವತರಿಸಿದ್ದು. ಆಮೇಲೆ ಹಂಸಲೇಖ ಆಗಿದ್ದು. ರವಿಚಂದ್ರನ್ ಹಾಗೂ ಅವರ ತಂದೆ ವೀರಾಸ್ವಾಮಿಯವರ ಕೃಪಾಕಟಾಕ್ಷದಿಂದಲೇ ಬೆಳೆದ ಈ ಮನುಷ್ಯ, ಕೊನೆಗೆ ಉಂಡ ಎಲೆಯಮೇಲೇ ಉಚ್ಛಿಷ್ಟ ವಿಸರ್ಜಿಸಿ ಬಂದದ್ದು ಕನ್ನಡಿಗರಿಗೆ ಗೊತ್ತಿಲ್ಲದ ಸತ್ಯವೇನಲ್ಲ. ಇವರ ಇಂಥ ವಿಕೃತವನ್ನು ಸಹಿಸಲಾಗದೇ ಕ್ರೇಜಿ ಸ್ಟಾರ್ ತಮ್ಮ ಸಂಸ್ಥೆಯಿಂದ ಹೊರಗಟ್ಟಿದ್ದರೇನೋ!? ಮೊನ್ನೆ ಮೊನ್ನೆಯವರೆಗೂ ಕಾಸಿನ ಕಿಮ್ಮತ್ತಿಗೂ ಬಾಳದಾಗಿದ್ದ, ಬಹುತೇಕ ಚಿತ್ರರಂಗದವರು
ಸುಳಿದುಬಿಟ್ಟಿದ್ದ ಹಂಸಲೇಖ ಈಗ ಇದ್ದಕ್ಕಿದ್ದಂತೆ ‘ಮಹಾಗುರು’ ಎಂದು ಕರೆಸಿಕೊಳ್ಳುತ್ತ, ಹಿಂದೂ ಸಮಾಜದ ಐಕ್ಯಮತ್ಯಕ್ಕೆ ಹಗಲಿರುಳೂ ಶ್ರಮಿಸಿದ, ಇಪ್ಪತ್ತೊಂದನೇ ಶತಮಾನದ ಕಂಡ ಶ್ರೇಷ್ಠ ಸಂತ ಪೇಜಾವರ ಶ್ರೀಗಳ ಬಗೆಗೆ, ಅದೂ ಅವರು
ಸಮಾಧಿಸ್ಥರಾದ ಬಳಿಕ ಹಗುರವಾಗಿ ಮಾತನಾಡಿದ್ದರ ಹಿಂದೆ ಕೇವಲ ಮನೋವೈಕಲ್ಯವಷ್ಟೇ ಅಲ್ಲ, ತೀವ್ರ ಅಸೂಯೆ, ಅಸಹಾಕತೆಗಳೊಂದಿಗೆ ಮಹತ್ತರ ಕ್ರೈಸ್ತ ಮಿಷನರಿಗಳ ಮತಾಂತರ ಪ್ರಚೋದನೆಯಂಥ ಹುನ್ನಾರವೂ ಕೆಲಸಮಾಡಿದೆ
ಎಂಬ ಅನುಮಾನ ಕಾಡುತ್ತಿದೆ.

ಅದಿಲ್ಲದಿದ್ದರೆ, ಅದೇ ಸಮಾರಂಭದಲ್ಲಿ ಬುಡಕಟ್ಟುಜನಾಂಗದವರ ದೈವಾಚರಣೆಯ ಬಗ್ಗೆಯೂ ಹೀಗೆಯೇ ಅವರು ನಾಲಗೆ ಹರಿಬಿಡುತ್ತಿರಲಿಲ್ಲ. ಮೈಸೂರು, ಚಾಮರಾಜನಗರ ಭಾಗದಲ್ಲಿ ಮತಾಂತರಕ್ಕೆ ಪ್ರಮುಖ ಅಡ್ಡಿಯಾಗಿದ್ದೇ ಪೇಜಾವರರ ದಲಿತರ
ಕೇರಿಗಳ ಭೇಟಿ. ಹಾಗಿದ್ದರೆ ಹಂಸಲೇಖರ ‘ದೇಸಿತ್ವ’ ಸಹ ಇಂಥ ಮಿಷನರಿಗಳ ಕೃಪಾಪೋಷಿತವೇ? ಇಲ್ಲದಿದ್ದರೆ ಇದ್ದಕ್ಕಿದ್ದಂತೆ ‘ದಲಿತರ ಮನೆಗೆ ಹೋಗುವುದಲ್ಲ, ಅವರ ಮನೆಯಲ್ಲಿ ಮಾಂಸ, ರಕ್ತದ – ಊಟ ಮಾಡಲಿ’ ಎಂದು ಬಾಲಿಶವಾಗಿ ಹೇಳುತ್ತ ಬೇರೊಂದು ಜನಾಂಗದ ಆಹಾರ ಸ್ವಾತಂತ್ರ್ಯ, ಹಕ್ಕನ್ನು ಪ್ರಶ್ನಿಸುವ ಔಚಿತ್ಯವಾದರೂ ಏನಿತ್ತು? ಇಷ್ಟಕ್ಕೂ ಒಂದು ದಿನವಾದರೂ ನಿಜಕ್ಕೂ ದಲಿತರ ಕೇರಿಗೆ ಹೋಗಿ ಕುಳಿತು ಹಂಸಲೇಖ ಊಟ ಮಾಡಿ ಬಂದ ಉದಾಹರಣೆ ಇದೆಯೇ? ಅವರು ಅದು ತಿನ್ನಲಿ, ಇವರು ಇದನ್ನೇಕೆ ತಿನ್ನುವುದಿಲ್ಲ ಎಂದು ಪ್ರಶ್ನಿಸುತ್ತ ಸಮಾನತೆಯ ಉಪದೇಶ ಮಾಡುವ ಹಂಸಲೇಖ, ಕೆಲ ಸಮುದಾಯದವರು ತಿನ್ನುವಂತೆ ಸತ್ತ ಎಮ್ಮೆಯ ಮಾಂಸ ಭಕ್ಷಣೆಗೆ ತಾವು ಸಿದ್ಧರಿದ್ದಾರೆಯೇ? ಚೀನಾ, ರಷ್ಯನ್ ರಾಷ್ಟ್ರಗಳಲ್ಲಿಯ ಕಪ್ಪೆ, ಹಾವು,
ಹಲ್ಲಿ, ಜಿರಲೆಗಳನ್ನು ಇವರು ತಿನ್ನಬಲ್ಲರೇ? ಆಹಾರ ಹಕ್ಕು, ಮಾನವ ಹಕ್ಕು ಎಂದೆಲ್ಲ ಬೊಬ್ಬಿರಿಯುವ ಸೋ ಕಾಲ್ಡ್ ಬುದ್ಧಿಜೀವಿ ಗಳು ಹಂಸಲೇಖರ ಇಂಥ ಮಾನವ ಹಕ್ಕುಗಳ ವಿರುದ್ಧದ ಹೇಳಿಕೆಯನ್ನು ಖಂಡಿಸುತ್ತಿಲ್ಲವೇಕೆ? ಸ್ವಾಮಿ ಹಂಸಲೇಖರೇ, ಒಂದು ಅರ್ಥ ಮಾಡಿಕೊಳ್ಳಿ.

ಸಂನ್ಯಾಸ ಆಶ್ರಮವೆಂದರೆ ಹಲವು ಕಟ್ಟುಪಾಡುಗಳುಳ್ಳದ್ದು. ಅವರಿಗೆ ಅವರದ್ದೇ ಆದ ಜೀವನ ಕ್ರಮಗಳಿರುತ್ತವೆ. ಅತ್ಯಂತ ಕಠಿಣ
ಕಟ್ಟುಪಾಡುಗಳಿರುತ್ತವೆ. ಜನಸಾಮಾನ್ಯರ ಜೀವನ ಕ್ರಮಕ್ಕೂ, ಅವರ ದಿನಚರಿಗೂ ಸಾಕಷ್ಟು ವ್ಯತ್ಯಾಸ ಗಳಿರುತ್ತವೆ. ಆಹಾರ ವಿಚಾರ ದಲ್ಲೂ ಅವರಿಗೆ ನಿರ್ಬಂಧ ಗಳಿರುತ್ತವೆ. ಮಾಂಸಾಹಾರವಿರಲಿ, ಸಾಮಾನ್ಯ ರಂತೆ ಹಸಿವಾದಾ ಗೆಲ್ಲ ತಿನ್ನುವ, ಹೇಲು ಬಂದಾಗೆಲ್ಲ ಹಕ್ಕಲು ಹತ್ತುವ ಕನಿಷ್ಠ ಮಾನವೀಯ ಸ್ವಾತಂತ್ರವೂ ಸಂನ್ಯಾಸಿಗಳಿಗೆ ಇರುವುದಿಲ್ಲ.

ಯಾರದೋ ಜೀವನ ಕ್ರಮಗಳನ್ನು ಪ್ರಶ್ನಿಸಿವ, ಇನ್ಯಾರದೋ ಆಹಾರ ಪದ್ಧತಿಗಳನ್ನು ಇಟ್ಟುಕೊಂಡು ಸವಾಲೆಸೆಯುವಂತೆ
ಮಾತನಾಡುವ, ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿದ ಮಾತ್ರಕ್ಕೆ ನೀವು ಸಮಾಜದಲ್ಲಿ ದೊಡ್ಡವರೆನಿಸಿಕೊಳ್ಳುವುದಿಲ್ಲ. ಎಲ್ಲರ ಸಾಂವಿಧಾನಿಕ ಆಶಯಗಳ್ನು, ಧಾರ್ಮಿಕ ಭಾವನೆಗಳನ್ನು ಗೌರವಿಸುವುದು ಹಾಗಿರಲಿ, ಕೊನೇ ಪಕ್ಷ ಕೀಳಾಗಿ ಕಾಣುವ ವಿಕೃತಿಯನ್ನು ಮೊದಲು ಬಿಡಿ. ‘ನಾದಬ್ರಹ್ಮ’ ಎನಿಸಿಕೊಂಡ ಮಾತ್ರಕ್ಕೆ ಎಲ್ಲದರ ಬಗ್ಗೆ, ಎಲ್ಲರ ಬಗ್ಗೆ ಮಾತನಾಡ ಬಲ್ಲ ಬ್ರಹ್ಮಜ್ಞಾನಿಯಾಗಿ ಬಿಡುವುದಿಲ್ಲ ನೀವು.

ಅನುಮಾನವೇ ಇಲ್ಲ. ಸಮಾಜದ ಸ್ವಾಸ್ಥ್ಯ ಹಾಳುವ ಉದ್ದೇಶದಿಂದಲೇ ಹಂಸಲೇಖ ಇಂಥ ಹಗುರ ಮಾತುಗಳನ್ನಾಡಿರುವುದು.
ಅದಿಲ್ಲದಿದ್ದರೆ, ಈಗ ಇದ್ದಕ್ಕಿದ್ದಂತೆ ಆಗಿಹೋದ ಸಂತರೊಬ್ಬರ ಕ್ರಾಂತಿಕಾರಕ ಹೆಜ್ಜೆಯನ್ನು ಉದಾಹರಿಸಿ ಇಷ್ಟು ಕೀಳುಮಟ್ಟದಲ್ಲಿ
ಮಾತನಾಡುವ ಅಗತ್ಯವಾದರೂ ಏನಿತ್ತು. ಯಾರ ಬಗ್ಗೆ ಟೀಕೆ ಮಾಡುತ್ತಿದ್ದೇನೆ ಎಂಬ ಕನಿಷ್ಠ ಪ್ರಜ್ಞೆಯಾದರೂ ಅವರಿಗಿರ ಬೇಕಲ್ಲವೇ? ಹೋಗಲಿ, ಅವರ ಪತ್ನಿಯಲ್ಲಿ ಇದ್ದಿರಬಹುದಾದ ಔಚಿತ್ಯಪ್ರಜ್ಞೆಯೂ ಇವರಿಗಿಲ್ಲವೇ? ಕೊನೆಗೆ ಅವರೇ ಹೇಳಿ ಕೊಂಡಂತೆ ಪತ್ನಿಯ ಒತ್ತಡಕ್ಕೆ ಕ್ಷಮೆ ಕೇಳಿದರೂ ಆ ಮಾತುಗಳಲ್ಲಿ ಒಂದಿನಿತೂ ಪಶ್ಚಾತ್ತಾಪವಿಲ್ಲ.

ಬಹಿರಂಗ ಸ್ಥಳದಲ್ಲಿ ಆಡಬಾರದ್ದು, ನಾಲಗೆಯಿಂದ ಸ್ಖಲಿಸಿ ಹೋಯಿತೆಂಬ ಅಪರಾಧ ಪ್ರಜ್ಞೆಯಂತೂ ಇಲ್ಲವೇ ಇಲ್ಲ. ನಾಲ್ಕು ಗೋಡೆಗಳ ನಡುವೆ ಕುಳಿತು ಕ್ಷಮೆಯ ಮಾತುಗಳನ್ನಾಡಿದರೂ, ಅದರಲ್ಲಿ ಸಮರ್ಥನೆಯ ಧಾಟಿಯೇ ಹೆಚ್ಚಿದ್ದುದು ಗುರುತಿಸ ಲಾಗದ್ದೇನಲ್ಲ. ಹಂಸಲೇಖ ಟೀಕಿಸಿದ್ದು ಕೇವಲ ಒಬ್ಬ ಯತಿಗಗಳನ್ನಲ್ಲ. ಇಡೀ ವ್ಯವಸ್ಥೆಯನ್ನು ಎಂಬ ಅರಿವು ಅವರಿಗಿದ್ದಂತಿಲ್ಲ. ಹಾಗೆಂದು ಜಾತಿ ಪದ್ಧತಿ ಆಹಾರವನ್ನಷ್ಟೇ ಅವಲಂಬಿಸಿಲ್ಲ. ಮಾಂಸಾಹಾರ ತಿನ್ನುವವರೆಲ್ಲರೂ ಜಾತ್ಯತೀತರಲ್ಲ. ಅಥವಾ
ಶುದ್ಧ ಜಾತಿವಾದಿಗಳೆನಿಸಿಕೊಂಡವರು ಯಾವತ್ತೂ ಕೋಳಿ ಮಾಂಸವನ್ನಾಗಲೀ, ಕುರಿ ರಕ್ತದ – ಅನ್ನಾಗಲೀ ತಿಂದೂ ಇಲ್ಲ, ದಲಿತರ ಕೇರಿಯಲ್ಲಿ ಓಡಾಡಿಯೂ ಇಲ್ಲ.

ಇಂಥ ಮುಖವಾಡದ ಜಾತ್ಯತೀತೆ ಯಿಂದ ಸಮಾಜದಲ್ಲಿ ಎಷ್ಟು ಬದಲಾವಣೆಗಳಾಗಿವೆ ಹೇಳಿ ಸ್ವಾಮಿ? ಹಾಗಿದ್ದರೆ ಇಷ್ಟರಲ್ಲಿ
ಸಮಾಜದಲ್ಲಿ ಇಂಥ ತಾರತಮ್ಯವೇ ಇಲ್ಲದಾಗಿ ಬಿಡಬೇಕಿತ್ತಲ್ಲವೇ? ಇಂದು ಜಾತಿ ಯಿಂದ ಮೇಲ್ವರ್ಗದವರೆನಿಸಿ ಕೊಂಡವರಲ್ಲೂ ಆರ್ಥಿಕವಾಗಿ ದಲಿತರಾಗುಳಿದವರಿದ್ದಾರೆ. ದಲಿತ ರೆನಿಸಿಕೊಂಡ ಅದೆಷ್ಟೋ ಮಂದಿ ಸಮಾಜದಲ್ಲಿ ಗಣ್ಯ ರೆನಿಸಿಕೊಂಡು ಸ್ವತಃ
ಬೇರೆಯವರನ್ನು ತುಳಿಯುತ್ತಿಲ್ಲವೇ? ಆಧುನಿಕ ಯುಗ ದಲ್ಲಿ ಆಹಾರ ಮಾನದಂಡವಾಗಿ ಉಳಿದೇ ಇಲ್ಲ. ಅಥವಾ ಅದು ಜಾತಿ, ಶೋಷಣೆಗಳಿಗೆ ಪ್ರಮಾಣವೂ ಅಲ್ಲ. ಕೆಳವರ್ಗದಲ್ಲೂ ಶುದ್ಧ ಸಸ್ಯಾಹಾರಿಗಳಿದ್ದಾರೆ.

ಮೇಲ್ವರ್ಗದವರಲ್ಲೂ ರಾಜಾರೋಷವಾಗಿ ಮಾಂಸ ಸೇವಿಸುತ್ತಿದ್ದಾರೆ. ಅಷ್ಟಕ್ಕೂ ಪೇಜಾವರ ಶ್ರೀಗಳು ಮಾಂಸ ತಿಂದ ಮಾತ್ರಕ್ಕೆ ಸಮಾನತೆಯ ಪ್ರತಿಪಾದಕರೆಂದು ಒಪ್ಪಿಕೊಳ್ಳುವುದಾದರೆ, ಅಂಥ ನಿಮ್ಮ ಮೂರ್ಖತನಕ್ಕೆ ತೀವ್ರ ಅನುಕಂಪವಿದೆ. ಈಗಂತೂ
ಜಾತಿಗೊಂದು, ಪಂಗಡಕ್ಕೊಂದು ಮಠಗಳಿವೆಯಲ್ಲ? ಅದೆಷ್ಟೋ ದಲಿತಪೀಠಗಳೂ ನಮ್ಮಲ್ಲಿವೆ ಎಂಬುದು ನಿಮಗೆ ಗೊತ್ತಿರ ಬೇಕಲ್ಲ? ಅಲ್ಲಿನ ಮಠಾಧೀಶರನ್ನೊಮ್ಮೆ ಕೇಳಿನೋಡಿ,  ‘ಸ್ವಾಮೀಜಿಗಳೆನಿಸಿಕೊಂಡವರಿಗೆ ಮಾಂಸಾಹಾರ ಸಮ್ಮತವೇ’ ಎಂದು.

ಇಲ್ಲ ಎಂದಾದರೆ, ಅವರೆಲ್ಲರೂ ಬಲಿತರ ಪರ, ದಲಿತರ ವಿರೋಧಿಗಳು ಎಂಬುದು ನಿಮ್ಮ ಪ್ರತಿಪಾದನೆಯೇ? ಹಾಗಲ್ಲದಿದ್ದರೆ, ನೀವು ಟೀಕಿಸಿದ್ದು ಇಡೀ ಸಂನ್ಯಾಸ ಪರಂಪರೆಯನ್ನಲ್ಲವೇ? ನಿಮಗೆ ಇಂಥ ಅಧಿಕಾರವನ್ನು ಕೊಟ್ಟವರ‍್ಯಾರು? ಏನೋ
ದೇಸಿ- ಜಾನಪದ ಎಂದಿರಿ ಒಪ್ಪೋಣ, ಕದ್ದದ್ದೋ, ಸ್ವಂತದ್ದೋ ಅಂತೂ ಒಂದಷ್ಟು ಸಂಗೀತದ ಕೆಲಸ ಮಾಡುತ್ತಿದ್ದೀರಿ. ಕೆಲವು ಚೆನ್ನಾಗಿಯೂ ಇತ್ತು.

ಗೌರವಿಸೋಣ. ಏನೋ, ಎಳೆ ನಿಂಬೆ ಹಣ್ಣು, ಬಾಲು, ಮಾಲು ಅಂತೆಲ್ಲ ಹಾಡು ಕಟ್ಟಿದಿರಿ. ನಿಮ್ಮ ಹಂಬಲ ಹಾಡಾಗಿದೆ ಎಂದುಕೊಂಡು ಹೈಕಳೂ ಎಂಜಾಯ್ ಮಾಡಿದರು. ‘ಯಾರೋ ಹೆತ್ತವರು ನಿನ್ನ, ಮೂತಿ ಮುಸುಡಿಯನ್ನ..’ ಎಂದೆಲ್ಲ
ದೇವರನ್ನೇ ನಿಂದಿಸಿದರಿ. ಹೋಗಲಿ ಪಾತ್ರಕ್ಕಾಗಿನ ಸೃಷ್ಟಿ ಅಂದಕೊಂಡಾಯಿತು. ಖಾಸಗಿ ಚಾನೆಲ್‌ನ ರಿಯಾಲಿಟಿ ಶೋನಲ್ಲಿ ದಿನಕ್ಕೊಂದು ಜರಿ ಶಾಲುಹೊದ್ದು ಬಂದು ಸಂತನಂತೆ, ತತ್ವಜ್ಞಾನಿಯಂತೆ ಮಾತಾಡಿ -ಸುಕೊಟ್ಟಿರಿ. ಅದನ್ನೂ ಸಹಿಸಿ ಕೊಂಡಾಯಿತು. ಇಷ್ಟೇ ಮಾಡಿಕೊಂಡು ಇದ್ದಿದ್ದರೆ ಸಾಕಿತ್ತು.

ಅದು ಬಿಟ್ಟು ಇದೆಲ್ಲ ಬೇಕಿತ್ತ? ಹೋಗಲಿ, ಈ ಸಮಾಜಕ್ಕಾಗಿ ಎಷ್ಟು ಹೋರಾಟ ಮಾಡಿದ್ದಾರೆ ಹಂಸಲೇಖ ಅವರು? ಎಷ್ಟು ದಲಿತ
ಚಳವಳಿಯನ್ನು ಸಂಘಟಿಸಿದ್ದಾರೆ? ಎಷ್ಟು ದಲಿತರನ್ನು ಉದ್ಧಾರ ಮಾಡಿದ್ದಾರೆ? ಪೇಜಾವರ ಶ್ರೀಗಳ ಎದುರು ಹಂಸಲೇಖ ಯಾವೂರ ತೊಪ್ಪಲು ಎಂದು ಕೇಳುತ್ತಿದ್ದಾರೆ ಜನ. ಯಾಕೆಂದರ ಪೇಜಾವರರು ಕೇವಲ ಒಂದು ವ್ಯಕ್ತಿಯಾಗಿರಲಿಲ್ಲ. ಅದೊಂದು ರಾಷ್ಟ್ರ ಶಕ್ತಿ. ಅವರ ಬದುಕೇ ಹೋರಾಟವಾಗಿತ್ತು. ರೈತರು, ಬಡವರು, ದಲಿತರು, ನಿರ್ಗತಿಕರ ಪಾಲಿನ ಧ್ವನಿಯಾಗಿದ್ದವರು. ಕೇವಲ ಅಷ್ಟೇ ಅಲ್ಲ, ಕನ್ನಡದ ಸಮಗ್ರತೆ, ನಾಡು-ನುಡಿ, ನೀರು-ನೆಲ ಹೀಗೆ ಎಲ್ಲ ಚಳವಳಿಗಳ ಮುಂಚೂಣಿಯಲ್ಲಿ ಒಂದೇ ಅವರಿರುತ್ತಿದ್ದರು ಅಥವಾ ಅವರು ದನಿಯೆತ್ತುತ್ತಿದ್ದರು.

ಹಂಸಲೇಖ ಸ್ವಹಿತಾಸಕ್ತಿ, ವೈಯಕ್ತಿಕ ಬೆಳವಣಿಗೆ, ಪ್ರಲೋಭನೆಗಳಿಗೆ ಒಳಗಾಗಿದ್ದು ಬಿಟ್ಟರೆ ಈವರೆಗೆ ಒಂದೇ ಒಂದು ಹೋರಾಟಕ್ಕೆ ಟೊಂಕ ಕಟ್ಟಿದ ಉದಾಹರಣೆ ಇತಿಹಾಸದಲ್ಲಿ ಇದೆಯೇ? ಸ್ವತಃ ಕೃಷ್ಣ ಮಠದಲ್ಲಿ ಮುಸಲ್ಮಾನರಿಗಾಗಿ ಇಫ್ತಾರ್ ಕೂಟ
ಆಯೋಜಿಸಿದ್ದವರು ಶ್ರೀಗಳು. ಒಬ್ಬ ದಲಿತ, ಒಬ್ಬ ಮುಸ್ಲೀಮನನ್ನುಕರೆದು ಹಂಸಲೇಖ ಊಟ ಹಾಕಿದ್ದಾರೆಯೇ? ಕೇವಲ ಕಾರ್ಯಕ್ರಮ ವೊಂದರಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳಲು, ತಮ್ಮ ಪ್ರೌಢಿಮೆ ಮೆರೆಯಲು ಪೇಜಾವರರಂಥ ಸಂತವರೇಣ್ಯರನ್ನು ಟೀಕಿಸುತ್ತಾರೆಂದರೆ ಅವರನ್ನು ಕೇಳಲೇಬೇಕು ‘ಸ್ವಾಮಿ, ನೀವು ಹೊಟ್ಟೆಗೆ ಅನ್ನವನ್ನೇ ತಿಂತೀರೋ ಅಥವಾ ಕೋಳಿ ಕುರಿಯ
ಹಿಕ್ಕೆಯನ್ನು ತಿಂತಾ ಇದೀರೋ?’ ನಿಜವಾಗಿಯೂ ಹಂಸಲೇಖರಿಗೆ ದಲಿತರ ಬಗೆಗೆ ಕಾಳಜಿ ಇದ್ದರೆ, ಅಸ್ಪೃಶ್ಯತೆಯ ಕಲ್ಮಶ
ಕಿತ್ತೊಗೆಯಬೇಕೆಂಬ ಕಳಕಳಿ ಇದ್ದರೆ, ಹೀಗೆ ಮನಸಿಗೆ ಬಂದದ್ದನ್ನೆಲ್ಲ ಕಾರುವ ಬದಲು, ಸಮಗ್ರ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕುವ ಆಂದೋಲನ ರೂಪಿಸಲಿ. ಎಲ್ಲ ವರ್ಗದ ಜನರ ಒಟ್ಟಿಗೆ ಕರೆದೊಯ್ಯುವ ಕಾರ್ಯಕ್ರಮಗಳನ್ನು ಮಾಡಲಿ.

ಪೇಜಾವರರು ಆರಂಭಿಸಿದ ಪರಂಪರೆಯಲ್ಲಿ ನಡೆದು, ಹಳ್ಳಿಗಳಲ್ಲಿ ಇಂದಿಗೂ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ದಲಿತರ ಮಕ್ಕಳನ್ನು ತಂದು ಶಿಕ್ಷಣ ಕೊಡಲಿ. ಅದು ಬಿಟ್ಟು ಮಾನಸಿಕ ವಿಕೃತಿ ಪ್ರದರ್ಶನಕ್ಕೆ ಮುಂದಾದರೆ, ಹೀಗೆಯೇ ಪ್ರಾಸಕ್ಕಾಗಿ ಗೂರಲು ಸ್ವರದಲ್ಲಿ ಏನೇನೋ ಒದರಿ ಸಣ್ಣತನ ತೋರಿದರೆ ‘ನಾದಬ್ರಹ್ಮ’ನೆಂಬ ಹೆಸರಿಟ್ಟುಕೊಂಡ ಮಾತ್ರಕ್ಕೆ ನಿಮ್ಮನ್ನು ನಾದದೇ ಉಳಿಯುವುದಿಲ್ಲ ಜನ, ನೆನಪಿರಲಿ.

ಸನಾತನ ಧರ್ಮದ, ಧರ್ಮಗುರುಗಳ ಬಗ್ಗೆ ಏನು ಹೇಳಿದರೂ ನಡೆಯುತ್ತದೆ, ಪ್ರಚಾರ ಗಿಟ್ಟಿಸಿಕೊಳ್ಳಬಹುದು ಎಂದುಕೊಳ್ಳುವ
ಅಗತ್ಯವಿಲ್ಲ. ತಾಳ್ಮೆಗೂ ಮಿತಿ ಇರುತ್ತದೆ. ಮಾತ್ರವಲ್ಲ, ನಿಮ್ಮ ಬೆಳವಣಿಗೆಯಲ್ಲಿ ಕೇವಲ ಕುರಿ-ಕೋಳಿ ತಿಂದವರ, ದಲಿತರ ಪಾತ್ರವಷ್ಟೇ ಇಲ್ಲ. ನೀವು ಈ ಮಟ್ಟಿಗೆ ಬೆಳೆಯವಲ್ಲಿ ಪೇಜಾವರರ ಫೋಟೋವನ್ನು ದೇವರ ಮನೆಯಲ್ಲಿ ಇಟ್ಟು ಪೂಜಿಸುವ ಅದೆಷ್ಟೋ ಲಕ್ಷಾಂತರ ಅವರ ಅನುಯಾಯಿಗಳ ಪಾಲೂ ಇದೆ ಎಂಬುದನ್ನು ಮರೆಯಬೇಡಿ ‘ಹಿಂಸಲೋಕ’ರೇ!

***

ಹಂಸಲೇಖ ಪೇಜಾವರ ಶ್ರೀಗಳ ಮೂಲ ಆಸೆಯನ್ನು ಅರ್ಥ ಮಾಡಿಕೊಳ್ಳಲಿಲ್ಲ. ಶಾಖಾಹಾರಿಗಳಾಗಿದ್ದ ಪೇಜಾವರ ಶ್ರೀಗಳು
ಮಾಂಸಹಾರವನ್ನು ಸೇವಿಸಲು ಸಾಧ್ಯವೇ? ದಲಿತರ ಬಗೆಗಿನ ಅಸಮಾನತೆ ಹೋಗಲಾಡಿಸಿ ಸಮಾನತೆ ಸಾರುವುದಕ್ಕಾಗಿ ದಲಿತರ
ಮನೆಗಳಿಗೆ ಭೇಟಿ ನೀಡುತ್ತಿದ್ದರು. ಪೇಜಾವರ ಶ್ರೀಗಳು ಸಮಾಜದಲ್ಲಿನ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣುತ್ತಿದ್ದರು. ಸಮಾಜದಲ್ಲಿ ಸಮಾನತೆ ಸಾರುವುದು ಅವರ ಮೂಲ ಉದ್ಧೇಶವಾಗಿತ್ತು. ಹಂಸಲೇಖ ಅವರು ಪೇಜಾವರರ ಬಗ್ಗೆ ಮಾತನಾಡಿರುವುದು ತಪ್ಪು.
– ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ
ಮೂರುಸಾವಿರ ಮಠ ಹುಬ್ಬಳ್ಳಿ

ಹಂಸಲೇಖ ಬಗ್ಗೆ ನಾನು ಮಾತನಾಡುವುದಕ್ಕೂ ಆತ ಲಾಯಕ್ಕಿಲ್ಲ. ನಾನು ಏನನ್ನೂ ಮಾತನಾಡುವುದಿಲ್ಲ.
– ಎಸ್.ಎಲ್.ಭೈರಪ್ಪ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರು

ಸಂಗೀತ ನಿರ್ದೇಶಕ ಹಂಸಲೇಖ ಅವರ ಬಗ್ಗೆ ವೈಯಕ್ತಿಕವಾಗಿ ಗೌರವವಿದೆ. ಅವರೊಬ್ಬ ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ
ಸಮಾಜದಲ್ಲಿ ಸಮಾನತೆ ಬೀಜ ಬಿತ್ತಿದ ಪೇಜಾವರ ಶ್ರೀಗಳ ಬಗ್ಗೆ ಲಘುವಾಗಿ ಮಾತನಾಡಿರುವುದು ಆಶ್ಚರ್ಯವನ್ನುಂಟು
ಮಾಡಿದೆ. ಹಂಸಲೇಖ ಅವರು ಆ ರೀತಿ ಹೇಳಿಕೆ ನೀಡಿರುವುದು ತಪ್ಪು. ಹಂಸಲೇಖ ಅವರ ಹೇಳಿಕೆ ಖಂಡನಾರ್ಹವಾದದ್ದು.
– ಜಗದೀಶ ಶೆಟ್ಟರ್ ಮಾಜಿ ಮುಖ್ಯಮಂತ್ರಿ

ದಲಿತರನ್ನು ಮೆಚ್ಚಿಸೋಕೆ ಆಡುವ ಮಾತೇನೋ ಸರಿ. ಆದರೆ ಇನ್ನೊಂದು ಸಮುದಾಯವನ್ನು ಮೆಚ್ಚಿಸೋ ಬರದಲ್ಲಿ ಉನ್ನತ ಸ್ಥಾನದಲ್ಲಿರೋರನ್ನು ತೇಜೋವಧೆ ಮಾಡೋದು ಎಷ್ಟು ಸರಿ? ಶ್ರೀಗಳಿಗೆ ಅವರದ್ದೇ ಆದ ನೀತಿ, ನಿಯಮ, ಧಾರ್ಮಿಕ, ಸಾಮಾಜಿಕ ಜವಾಬ್ದಾರಿಗಳಿರುತ್ತವೆ. ಹಾಡಿನಿಂದಲೇ ಸರಿಪಡಿಸೋಕೆ ಆಗುತ್ತಾ? ಮಾತಿಗೂ ಮೊದಲೇ ಯೋಚಿಸಬೇಕಿತ್ತು. -ಸಿ.ಎಸ್.ಪುಟ್ಟರಾಜು ಶಾಸಕರು,ಮಾಜಿ ಸಚಿವ

ಕನ್ನಡ ಸಿನಿಮಾಗೆ ಹಲವು ಸೂಪರ್ ಹಿಟ್ ಗೀತೆಗಳನ್ನು ನೀಡಿರುವ ಗಂಗಾರಾಜು, ಹಂಸಲೇಖ ಆಗಿ, ಕನ್ನಡಿಗರ ಮನಸಿನಲ್ಲಿ ಉಳಿದು ಬೆಳೆದಿದ್ದಾರೆ. ಇಂಥ ವ್ಯಕ್ತಿ, ದಲಿತ ಕೇರಿಗಳಿಗೆ ಹೋಗಿ ಸಮಾನತೆ ಸಾರಿದ್ದ ಪೇಜಾವರ ಶ್ರೀಗಳಂಥ ಯತಿಶ್ರೇಷ್ಠರ ಬಗ್ಗೆ
ಹಗುರವಾಗಿ ಮಾತನಾಡಿದ್ದು ರಾಜ್ಯಾದ್ಯಂತ ಭಾರಿ ಟೀಕೆಗೆ ಕಾರಣವಾಗಿದೆ. ನಾಡಿನ ಗಣ್ಯರು, ಸಾಹಿತಿಗಳು, ವಿವಿಧ ಮಠದ
ಸ್ವಾಮೀಜಿಗಳು ಹಂಸಲೇಖ ಅವರ ಹೇಳಿಕೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.