Sunday, 13th October 2024

ಆಧುನಿಕ ವೈದ್ಯಕೀಯದಲ್ಲಿ ಹಸ್ತಸಾಮುದ್ರಿಕ !

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಮನುಷ್ಯನ ವಿಕಾಸದ ಜತೆಯಲ್ಲಿ ವಿಜ್ಞಾನ ಮತ್ತು ಹುಸಿ ವಿಜ್ಞಾನಗಳೆರಡೂ ಒಟ್ಟಿಗೆ ಬೆಳೆದುಬಂದವು. ಹಸ್ತಸಾಮುದ್ರಿಕವು ವಿಜ್ಞಾನವಲ್ಲ; ಅದು ಹುಸಿ ವಿಜ್ಞಾನಗಳಲ್ಲಿ ಒಂದು ಎಂದು ಆಧುನಿಕ ವಿಜ್ಞಾನದ ಅಭಿಮತ. ಹಾಗಿದ್ದಲ್ಲಿ ಹಸ್ತಸಾಮುದ್ರಿಕವು ಕ್ರಿ.ಪೂ.5000 ವರ್ಷಗಳಿಂದ ಇಂದಿನವರೆಗೆ ಉಳಿದು ಬರುವುದು ಅಸಾಧ್ಯ ವಾಗುತ್ತಿತ್ತು ಎನ್ನುವುದು ಗಮನೀಯ ವಿಚಾರ.

ಹಸ್ತರೇಖೆಗಳ ಅಧ್ಯಯನವು ಸಂಪೂರ್ಣವಾಗಿ ಅನುಪಯುಕ್ತ ಹಾಗೂ ಅವೈಜ್ಞಾನಿಕ ಎನ್ನಲು ಸಾಧ್ಯವಿಲ್ಲ ಎನ್ನುವುದಕ್ಕೆ ಇಂದಿನ ದಿನಗಳಲ್ಲಿ ಕೆಲವು ಆಧಾರಗಳು ದೊರೆಯುತ್ತಿದೆ. ಹಸ್ತಸಾಮುದ್ರಿಕವು ಎಂದು ಆರಂಭ ವಾಯಿತು ಹಾಗೂ ಎಲ್ಲಿ ಆರಂಭವಾಯಿತು ಎನ್ನುವುದರ ಬಗ್ಗೆ ನಿಖರ ದಾಖಲೆಗಳಿಲ್ಲ. ಆದರೂ ಅದರ ಅಸ್ತಿತ್ವ ಇತಿಹಾಸ ಪೂರ್ವ ಕಾಲದಲ್ಲಿಯೇ ಇತ್ತು ಎನ್ನಲಾಗಿದೆ. ಹಸ್ತರೇಖೆಗಳು ವ್ಯಕ್ತಿ ವಿಶೇಷವಾದವು. ಹಾಗಾಗಿ ಅವುಗಳ ಬಗ್ಗೆ ಕುತೂಹಲವು ಬಹುಶಃ ಪ್ರಾಚೀನ
ಭಾರತ ಅಥವ ಚೀನಾದಲ್ಲಿ ಆರಂಭವಾಗಿರಬಹುದು.

ಅಲ್ಲಿಂದ ವಿಶ್ವದಾದ್ಯಂತ ವ್ಯಾಪಿಸಿ, ಚೀನಾ, ಟಿಬೆಟ್, ಪರ್ಷಿಯ, ಮೆಸಪೊಟೋಮಿಯ ಹಾಗೂ ಈಜಿಪ್ಟ್ ದೇಶಗಳಲ್ಲಿ ಹಸ್ತಸಾಮುದ್ರಿಕವು ಜನಪ್ರಿಯವಾಯಿತು. ಪ್ರಾಚೀನ ಗ್ರೀಸ್ ದೇಶದಲ್ಲಿ ಹಸ್ತಸಾಮುದ್ರಕವನ್ನು ಜಿಪ್ಸಿಗಳು ಕರಗತಗೊಳಿಸಿಕೊಂಡಿದ್ದರು. ಇವರ ಮೂಲ ಬಹುಶಃ ಭಾರತ. ಇವರ ರೊಮಾನಿ ಭಾಷೆಯಲ್ಲಿ ಸಾಕಷ್ಟು ಭಾರತೀಯ ಮೂಲದ ಶಬ್ದಗಳಿವೆ. ಇಂದು ಜಿಪ್ಸಿಗಳನ್ನು ಇಡೀ ಯೋರೋಪಿನಲ್ಲಿ, ಉತ್ತರ ಮತ್ತು ದಕ್ಷಿಣ ಅಮೆರಿಕದಲ್ಲಿ ನೋಡಬಹುದು. ಇವರು ಮೂಲತಃ ಅಲೆಮಾರಿಗಳು.

ಹಸ್ತಸಾಮುದ್ರಿಕ ಹಿನ್ನೆಲೆಯಲ್ಲಿ ಕೆಲವು ಪರಿಕಲ್ಪನೆಗಳಿವೆ. ಹಸ್ತರೇಖೆಗಳು ಒಬ್ಬ ವ್ಯಕ್ತಿಯ ಕೈಗನ್ನಡಿ ಇದ್ದ ಹಾಗೆ. ಭೌತಿಕ, ಮಾನಸಿಕ ಹಾಗೂ ಅಧ್ಯಾತ್ಮಿಕ ಆಯಾಮಗಳು ಹಸ್ತದಲ್ಲಿ ಅಡಗಿವೆ. ಸೌರಮಂಡಲದ ಪ್ರಧಾನ ಗ್ರಹಗಳಿಗೆ ಹಸ್ತದಲ್ಲಿ ಸ್ಥಾನಗಳಿವೆ. ಅವುಗಳ ರಚನೆ ಹಾಗೂ ಅವುಗಳ ಮೇಲಿರುವ ವಿವಿಧ ರೇಖೆಗಳ ನಿಖರ ಅಧ್ಯಯನದಿಂದ, ಆ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಭವಿಷ್ಯವನ್ನು ತಿಳಿಯಬಹುದು ಎನ್ನಲಾಗಿದೆ. ಇದೊಂದು ಪರಂಪರಾನುಗತವಾಗಿ ಬಂದಿರುವ ನಂಬಿಕೆ. ಹಸ್ತಸಾಮುದ್ರಿಕವು ರೇಖೆಗಳ ಸ್ವರೂಪ ಹಾಗೂ ಅವು ಸೂಚಿಸುವ ಫಲಿತಾಂಶಗಳಿಗೆ ಯಾವುದೇ ವೈಜ್ಞಾನಿಕ ಪುರಾವೆಯಿಲ್ಲ.

ಜ್ಯೋತಿಷದ ಎರಡನೆಯ ಭಾಗವಾದ ಫಲ ಜ್ಯೋತಿಷದಂತೆ, ರೇಖೆಗಳ ಲಕ್ಷಣ ಮತ್ತು ಫಲಗಳ ಬಗ್ಗೆ, ಪ್ರಾಚೀನ ಗ್ರಂಥಗಳಲ್ಲಿ ಹೇಳಿರುವುದನ್ನು ನಂಬ ಬೇಕಾಗು ತ್ತದೆ. ಅಷ್ಟೇ. ಅವನ್ನು ಆಧುನಿಕ ವಿಜ್ಞಾನದ ನಿಕೃಷ್ಟಕ್ಕೆ ಒಡ್ಡುವುದು ಕಷ್ಟ. ಆದರೆ ಮಾನವ ಜನಾಂಗಕ್ಕೆ ಹಸ್ತಸಾಮುದ್ರಿಕದಿಂದ ಒಂದು ಉಪಯೋಗವಾ ಗಿದ್ದನ್ನು ಒಪ್ಪಬೇಕು. ಬ್ರಹ್ಮಾಂಡದಲ್ಲಿ ಮನುಷ್ಯನ ಸ್ಥಾನ, ಮನುಷ್ಯನ ಮೇಲೆ ಸೂರ್ಯ, ಚಂದ್ರ, ಗ್ರಹ, ನಕ್ಷತ್ರಗಳ ಪ್ರಭಾವ ಇತ್ಯಾದಿಗಳ ಬಗ್ಗೆ ಆಲೋಚಿಸಲು ಇಂಬನ್ನು ಕೊಟ್ಟಿತು. ಅತ್ಯಂತ ಕಚ್ಚಾ ಮನಃಶಾಸ್ತ್ರಕ್ಕೆ ಬುನಾದಿಯನ್ನು ಹಾಕಿದ್ದಲ್ಲದೆ, ಅಧ್ಯಾತ್ಮದ ಮೂಲ ಬೀಜಗಳು ಬಿತ್ತಲು ಅನುವು ಮಾಡಿಕೊಟ್ಟಿತು.

ಅಂಗೈ ಹಿಡಿತ

ಪ್ರಕೃತಿಯು ಮೂಲತಃ ನಮ್ಮ ಅಂಗೈಯಲ್ಲಿ ರೇಖೆಗಳನ್ನು ಏಕೆ ಸೃಜಿಸಿತು ಎನ್ನುವ ಪ್ರಶ್ನೆಯನ್ನು ಕೇಳಿದರೆ, ಅದಕ್ಕೆ ಅಧುನಿಕ ವಿಜ್ಞಾನವು ವಿವರಣೆಯನ್ನು ನೀಡುತ್ತದೆ. ನಮ್ಮ ಅಂಗೈ ಚರ್ಮವನ್ನು ಗಮನಿಸಿ. ಅದು ಮೃದುವಾಗಿದೆ ಹಾಗೂ ನಮ್ಯತೆಯನ್ನು ಉಳಿಸಿಕೊಂಡಿದೆ. ಒಂದು ವೇಳೆ ನಮ್ಮ ಅಂಗೈಯಲ್ಲಿ ರೇಖೆಗಳೇ ಇರದಿದ್ದಲ್ಲಿ, ಇಡೀ ಅಂಗೈ ಮೃದುವಾಗಿರುತ್ತಿತ್ತು. ಮುಷ್ಟಿಯನ್ನು ಕಟ್ಟಿ ಯಾವುದೇ ವಸ್ತುವನ್ನು ಬಿಗಿಯಾಗಿ ಹಿಡಿದುಕೊಳ್ಳುವುದು ಕಷ್ಟವಾಗುತ್ತಿತ್ತು.

ಹಾಗಾಗಿ ನಾವು ನಮ್ಮ ಅಂಗೈಯನ್ನು ಮಡಚಿದಾಗ ಎಲ್ಲೆಲ್ಲಿ ಮಡಿಕೆಗಳು ಮೂಡುತ್ತವೆಯೋ, ಅಲ್ಲಲ್ಲಿರುವ ಚರ್ಮವು ಕೆಳಗಿರುವ ಸ್ನಾಯುಗಳಿಗೆ ಅಥವ ಮೂಳೆ ಗಳಿಗೆ ಬಿಗಿಯಾಗಿ ಅಂಟಿಕೊಂಡವು. ಅಂಗೈಯಲ್ಲಿ ಪ್ರಧಾನವಾಗಿ ನಾಲ್ಕು ರೇಖೆಗಳು ಚರ್ಮವನ್ನು ಸ್ನಾಯುಗಳಿಗೆ ಬಿಗಿದಿದ್ದರೆ, ಬೆರಳುಗಳಲ್ಲಿರುವ ಗೆರೆಗಳು
ಚರ್ಮವನ್ನು ಬೆರಳ ಕೀಲುಗಳಿಗೆ ಬಿಗಿದಿವೆ. ಹಾಗಾಗಿ ಬೆರಳುಗಳನ್ನು ಸರಾಗವಾಗಿ ಚಲಿಸಿ, ಸೂಕ್ಷ್ಮತರವಾದ ನಾನಾ ಕುಸುರಿ ಕೆಲಸಗಳನ್ನು ಮಾಡಲು ಸಾಧ್ಯ ವಾಗಿದೆ.

ಅಂಗೈ ತನ್ನ ಮೃದುತ್ವ ಹಾಗೂ ನಮ್ಯತೆಯನ್ನು ಉಳಿಸಿಕೊಳ್ಳುವುದರ ಜತೆಯಲ್ಲಿ ದೃಢತೆಯನ್ನೂ ಕೊಟ್ಟಿವೆ. ಹಾಗಾಗಿ ಮನುಷ್ಯನ ಎಲ್ಲ ಸಾಧನೆಗಳ ಹಿಂದೆ ನಮ್ಮ ಅಂಗೈ ರೇಖೆಗಳ ಗಣನೀಯ ಪಾಲಿದೆ. ಈ ರೇಖೆಗಳು ಅಂಗೈ ಮತ್ತು ಬೆರಳುಗಳನ್ನು ಮಡಚುವ ಕಡೆ ಸ್ಥಿರವಾಗಿರುವ ಕಾರಣ ಇವುಗಳಿಗೆ ಅಂಗೈ ಮಡಚು ರೇಖೆಗಳು (ಪಾಮಾರ್ ಫ್ಲೆಕ್ಷನ್ ಕ್ರೀಸಸ್) ಎಂಬ ಹೆಸರು ಬಂದಿದೆ. ನಮ್ಮ ಸನಿಹ ಸಂಬಂಧಿಗಳಾದ ಮಂಗಗಳು ಮತ್ತು ಚಿಂಪಾಂಜ಼ಿಗಳ ಅಂಗೈಯಲ್ಲೂ ಕೆಲವು ರೇಖೆಗಳು ಇರುವುದುಂಟು.

ಏಕೆಂದರೆ ಅವು ರೆಂಬೆ ಕೊಂಬೆಗಳನ್ನು ಹಿಡಿದು ಮರದಿಂದ ಮರಕ್ಕೆ ಜಿಗಿಯಬೇಕಾದರೆ, ಅವುಗಳ ಅಂಗೈ ಹಿಡಿತವೂ ಬಿಗಿಯಾಗಿರಬೇಕಾಗುತ್ತದೆ. ಆದರೆ ಮನುಷ್ಯರ ಅಂಗೈಯಲ್ಲಿ ಕಾಣುವಷ್ಟು ಸಂಕೀರ್ಣವಾದ ರೇಖೆಗಳು ಅವುಗಳ ಅಂಗೈಯಲ್ಲಿ ಇಲ್ಲ. ಏಕೆಂದರೆ ಅವು ಮರವನ್ನು ಹತ್ತುವುದನ್ನು, ಕೊಂಬೆ ಕೊಂಬೆ ಯಿಂದ ಕೊಂಬೆಗೆ ಜಿಗಿಯುವುದನ್ನು ಬಿಟ್ಟು ಕಂಪ್ಯೂಟರಿನಲ್ಲಿ ಟೈಪ್ ಮಾಡುವಂತಹ ಸೂಕ್ಷ್ಮಕೆಲಸಗಳನ್ನು ಮಾಡಬೇಕಾಗಿಲ್ಲವಲ್ಲ!

ಗರ್ಭಜನಿತ
ಅಂಗೈ ರೇಖೆಗಳು ತಾಯಿಯ ಗರ್ಭದಲ್ಲಿಯೇ ಮೂಡುತ್ತವೆ. ಪಿಂಡಗೂಸಿಗೆ ೧೨ ವಾರಗಳಾಗುವ ಹೊತ್ತಿಗೆ, ಅದರ ಅಂಗೈಯಲ್ಲಿರುವ ಎಲ್ಲ ರೇಖೆಗಳು ಮೂಡು ತ್ತವೆ. ಹಾಗಾಗಿ ಗರ್ಭದಲ್ಲಿರುವ ಪಿಂಡಗೂಸು ಮುಷ್ಟಿ ಕಟ್ಟುವುದನ್ನು ಸ್ಕ್ಯಾನ್ ಮೂಲಕ ನಾವು ನೋಡಬಹುದಾಗಿದೆ. ಆಧುನಿಕ ವೈದ್ಯಕೀಯದಲ್ಲಿ ಅಂಗೈರೇಖೆಗಳ (ಅಂಗೈ, ಅಂಗಾಲು ಮತ್ತು ಬೆರಳುಗಳ ಮೇಲಿರುವ ರೇಖೆಗಳು) ಅಧ್ಯಯನಕ್ಕೆ ಚರ್ಮರೇಖಾಧ್ಯಯನ (ಡರ್ಮೋಗ್ಲೈಫಿಕ್ಸ್) ಎಂಬ ಹೆಸರಿದೆ. ಮಾನವಶಾಸ್ತ್ರ (ಆಂಥ್ರೋಪಾಲಜಿ), ಅಪರಾಧ ಶಾಸ್ತ್ರ (ಕ್ರಿಮಿನಾಲಜಿ) ಹಾಗೂ ವೈದ್ಯಕೀಯದಲ್ಲಿ ಈ ಅಧ್ಯಯನವು ಹೆಚ್ಚು ಉಪಯುಕ್ತ.

1892ರಲ್ಲಿ ಫ್ರಾನ್ಸಿಸ್ ಗಾಲ್ಟನ್ (ಚಾರ್ಲ್ಸ್ ಡಾರ್ವಿನ್ ಸಂಬಂಧಿ) ವ್ಯಕ್ತಿಯ ಅಂಗೈ ಮತ್ತು ಬೆರಳಚ್ಚುಗಳು ಆಯಾ ವ್ಯಕ್ತಿಗೆ ವಿಶೇಷವಾಗಿರುತ್ತವೆ ಎಂಬ ಅಂಶವನ್ನು ಪುರಾವೆ ಸಹಿತ ವಿವರಿಸಿದ. ಅಂದಿನಿಂದ ಇಂದಿನವರೆಗೆ ಅಪರಾಧ ಶಾಸ್ತ್ರದಲ್ಲಿ ಕೈಬೆರಳಚ್ಚುಗಳ ಅಧ್ಯಯನವು ಪ್ರಧಾನ ಪಾತ್ರವನ್ನು ವಹಿಸುತ್ತಿದೆ. ವೈದ್ಯಕೀಯ ದಲ್ಲಿ ಈ ರೇಖೆಗಳ ಅಧ್ಯಯನದ ಮಹತ್ವವನ್ನು ತಿಳಿಯಬೇಕಾದರೆ, ರೇಖೆಗಳ ಹೆಸರುಗಳ ಪರಿಚಯವಿರಬೇಕಾಗುತ್ತದೆ. ಅದಕ್ಕಾಗಿ ಹಸ್ತ ಸಾಮುದ್ರಿಕದ ಪರಿಭಾಷೆ ಯನ್ನೇ ಬಳಸಬಹುದು. ನಮ್ಮ ಅಂಗೈಯಲ್ಲಿ ಪ್ರಧಾನವಾಗಿ ನಾಲ್ಕು ರೇಖೆಗಳಿವೆ.

ಎರಡು ರೇಖೆಗಳು ಕಿರುಬೆರಳ ಬುಡದಿಂದ ಅಂಗೈಯಾದ್ಯಂತ ಸಾಗಿ, ತೋರು ಬೆರಳು ಮತ್ತು ಹೆಬ್ಬೆರಳ ನಡುವೆ ಕೊನೆಗೊಳ್ಳುತ್ತವೆ. ಮೇಲುಗಡೆಯ ರೇಖೆಯನ್ನು ಹೃದಯರೇಖೆ (ಹಾರ್ಟ್ ಲೈನ್) ಹಾಗೂ ಕೆಳಗಿನ ರೇಖೆಯನ್ನು ಶಿರೋರೇಖೆ (ಹೆಡ್ ಲೈನ್) ಎಂದು ಕರೆಯುವುದುಂಟು. ಹೆಬ್ಬೆರಳ ಬುಡವನ್ನು ಬಳಸಿಕೊಂಡು ಸಾಗುವ ರೇಖೆಯೇ ಜೀವನರೇಖೆ (ಲೈಫ್ ಲೈನ್). ಮಣಿಕಟ್ಟಿನಿಂದ ಹಿಡಿದು ಸರಿಸುಮಾರು ನಡುಬೆರಳ ಬುಡದವರೆಗೆ ಸಾಗುವ ರೇಖೆಯೇ ವಿಧಿ ರೇಖೆ (ಫ್ರಂಟ್
ಲೈನ್). ಇವಲ್ಲದೇ ಇನ್ನೂ ಅನೇಕ ಚಿಕ್ಕಪುಟ್ಟ ರೇಖೆಗಳುಂಟು. ಆಧುನಿಕ ವೈದ್ಯಕೀಯವು ಅಂಗೈರೇಖೆಗಳು ಕೆಲವು ಅನಾರೋಗ್ಯಗಳ ಸೂಚಕ ಎನ್ನುವುದಕ್ಕೆ
ಪುರಾವೆಯನ್ನು ಒದಗಿಸುತ್ತದೆ. ಹಾಗಾಗಿ ವೈದ್ಯರು ರೋಗಿಯ ಕೈಗಳನ್ನು, ವಿಶೇಷವಾಗಿ ಉಗುರುಗಳನ್ನು ಗಮನಿಸಿ, ಆತನ ಸಮಗ್ರ ಆರೋಗ್ಯದ ಬಗ್ಗೆ ಒಂದು
ಪಕ್ಷಿನೋಟವನ್ನು ಪಡೆಯುವುದುಂಟು.

ರಕ್ತಹೀನತೆ, ಕ್ಯಾಲ್ಷಿಯಂ ಕೊರತೆ, ಶಿಲೀಂಧ್ರರೋಗಗಳ ಉಪಸ್ಥಿತಿ ಇತ್ಯಾದಿಗಳನ್ನು ತಿಳಿಯಬಹುದು. ಹಾಗೆಯೇ ಅಂಗೈಯನ್ನು ಗಮನಿಸಿದಾಗ, ಅಲ್ಲಿರುವ ಪ್ರಧಾನ ರೇಖೆಗಳ ರಚನೆ ಮತ್ತು ಸ್ಥಾನಗಳು ಕೆಲವು ಆನುವಂಶಿಕ ರೋಗಗಳನ್ನು ಸೂಚಿಸುವುದುಂಟು. ಅಂಗೈಯಲ್ಲಿ ಹೃದಯ ಮತ್ತು ಶಿರೋರೇಖೆಗಳ ಬದಲು ಒಂದೇ ಒಂದು ರೇಖೆಯು ಕಂಡಬರಬಹುದು. ಇದುವೇ ವಾನರರೇಖೆ (ಸಿಮಿಯನ್ ಲೈನ್). ವಾನರರೇಖೆಯು ಡೌನ್ ಲಕ್ಷಣಾವಳಿ (ಡೌನ್ ಸಿಂಡ್ರೋಮ್) ಯನ್ನು ಸೂಚಿಸಬಲ್ಲುದು ಅಥವಾ ಭ್ರೂಣ ಆಲ್ಕೋಹಾಲ್ ಲಕ್ಷಣಾವಳಿಯನ್ನು (ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್) ಸೂಚಿಸಬಹುದು. ಡೌನ್ ಲಕ್ಷಣಾವಳಿ ಯನ್ನು ಹೊಂದಿರುವ ಮಗುವಿಗೆ ಬುದ್ಧಿಮಾಂದ್ಯತೆಯಿರುತ್ತದೆ.

ಜನ್ಮದತ್ತ ಹೃದಯ ವೈಪರೀತ್ಯಗಳಿರುತ್ತದೆ. ತುಂಬಾ ಮುದ್ದಾಗಿ ವರ್ತಿಸುವ ಹಾಗೂ ಸಂಗೀತವನ್ನು ಅಪಾರವಾಗಿ ಪ್ರೀತಿಸುವ ಈ ಮಗುವು ಹೆಚ್ಚು ವರ್ಷಗಳ ಕಾಲ ಬದುಕಲಾರದು. ಇನ್ನು ಭ್ರೂಣ ಆಲ್ಕೋಹಾಲ್ ಲಕ್ಷಣಾವಳಿ. ಹೆಸರೇ ಸೂಚಿಸುವ ಹಾಗೆ ಇದು ತಾಯಿಯು ಗರ್ಭವತಿಯಾಗಿದ್ದಾಗ ಮಧ್ಯಪಾನವನ್ನು ಮಾಡಿದುದರ ಫಲ. ಇಂತಹ ಮಕ್ಕಳ ಮಿದುಳು ಪೂರ್ಣ ಬೆಳೆದಿರುವುದಿಲ್ಲ. ಕೈ, ಕಾಲು, ಬೆರಳು, ಕೀಲುಗಳು ಅಸಹಜವಾಗಿರಬಹುದು. ಕಣ್ಣು ಸರಿಯಾಗಿ
ಕಾಣಿಸದು. ಕಿವಿಯು ಸರಿಯಾಗಿ ಕೇಳಿಸದು. ಜನ್ಮದತ್ತ ಹೃದಯ ಮತ್ತು ಮೂತ್ರಪಿಂಡಗಳ ವೈಪರೀತ್ಯಗಳಿರಬಹುದು. ಸಹಜ ಬೆಳವಣಿಗೆ ಅಸಾಧ್ಯ.

ಈ ಎರಡೂ ಲಕ್ಷಣಾವಳಿಯಿರುವ 100 ಮಕ್ಕಳ ಅಂಗೈಯನ್ನು ಗಮನಿಸಿದರೆ, ಅವುಗಳಲ್ಲಿ ಶೇ.50 ಮಕ್ಕಳಲ್ಲಿ ವಾನರರೇಖೆ ಇರುವುದನ್ನು ಗಮನಿಸಬಹುದು. ವೈದ್ಯರು ಕೇವಲ ವಾನರರೇಖೆಯನ್ನು ನೋಡಿ ರೋಗ ನಿಧಾನವನ್ನು ಮಾಡುವುದಿಲ್ಲ. ಸೂಕ್ತ ಕ್ರೋಮೋಸೋಮ್ ಅಧ್ಯಯನವನ್ನು ಕೈಗೊಂಡ ನಂತರವೇ ನಿಖರ ನಿದಾನವನ್ನು ಮಾಡುವುದು. ಕೆಲವರಲ್ಲಿ ಹೃದಯ ಮತ್ತು ಶಿರೋರೇಖೆಗಳು, ಸಮಾನಾಂತರವಾಗಿ ತೋರುಬೆರಳ ಬುಡದಿಂದ ಕಿರುಬೆರಳ ಬುಡದತ್ತ ಸಾಗುತ್ತವೆ. ಇವಕ್ಕೆ ಸಿಡ್ನಿರೇಖೆಗಳೆಂದು ಹೆಸರು. ಸಿಡ್ನಿ ರೇಖೆಗಳಿರುವ ಶೇ.50 ಮಕ್ಕಳಲ್ಲಿ ರಕ್ತಕ್ಯಾನ್ಸರ್ ಅಥವ ಕ್ಯಾನ್ಸರ್ ಗಂಥಿಗಳು ಬೆಳೆಯಬಹುದು. ಹೀಗೆ ಹಲವು ಆನುವಂಶಿಕ ರೋಗಗಳ ಅಸ್ತಿತ್ವವನ್ನು ಹಾಗೂ ಕ್ಯಾನ್ಸರ್ ಬರಬಹುದಾದ ಸಾಧ್ಯತೆಗಳನ್ನು ಊಹಿಸಿ, ಸೂಕ್ತ ತಪಾಸಣೆಗಳಿಂದ ಅವನ್ನು ಖಚಿತ ಪಡಿಸಿಕೊಂಡು ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಆಧುನಿಕ ವೈದ್ಯಕೀಯದಲ್ಲಿ ಹಾಗೂ ಅಪರಾಧ ಶಾಸ್ತ್ರದಲ್ಲಿ ಅಂಗೈರೇಖೆಗಳ ಅಧ್ಯಯನವು ಉಪಯುಕ್ತವಾಗಿರುವ ಕಾರಣ, ಹಸ್ತಸಾಮುದ್ರಿಕದ ಬಗ್ಗೆ ನಾವು ತಿಳಿಯಬೇಕಾದದ್ದು ಇನ್ನೂ ಇದೆ ಎನ್ನಲೂಬಹುದು.