Tuesday, 10th December 2024

Harish Kera Column: ಏಲಿಯನ್‌ಗಳು ಬಂದರೆ ಭಾರತಕ್ಕೇ ಬರಬೇಕು!

harish kera

ಕಾಡುದಾರಿ ಅಂಕಣ
ಹರೀಶ್‌ ಕೇರ

ಪರಲೋಕದ ಜೀವಿಗಳು (Aliens)‌ ಭೂಮಿಗೆ ಬಂದು ಇಳಿಯುವುದಾದರೆ, ಯಾವ ದೇಶವನ್ನು ಆರಿಸಿಕೊಳ್ತವೆ? ಭಾರತ (India) ದೇಶವನ್ನೇ ಹೊರತು ಬೇರೆಯದನ್ನಲ್ಲ. ಅದಕ್ಕೆ ಕಾರಣಗಳಿವೆ: ಮೊದಲನೆಯದಾಗಿ, ಭಾರತೀಯರು ʼಅತಿಥಿ ದೇವೋ ಭವʼ ಎಂಬ ಸಂಸ್ಕೃತಿಯವರು. ಯಾರೇ ಬಂದರೂ ಬೇಡ ಅನ್ನೊಲ್ಲ, ಕೈಕಾಲಿಗೆ ನೀರು ಕವಳ ಕೊಟ್ಟು ಸತ್ಕರಿಸುತ್ತಾರೆ. ಎರಡನೆಯದು, ಭಾರತೀಯರಿಗೆ ಫಾರಿನರ್ಸ್‌ ಎಂದರೆ ಭಯಪೂರಿತ ಗೌರವ. ಅವರಿಂದ ಆಳಿಸಿಕೊಳ್ಳಲೂ ನಾವು ಸಿದ್ಧ. ಬ್ರಿಟಿಷರು- ಪೋರ್ಚುಗೀಸರು- ಸ್ಪೇನಿಗರನ್ನು ನಾವು ಕಂಡ ರೀತಿಯೇ ಇದಕ್ಕೆ ದೃಷ್ಟಾಂತ. ಮೂರನೆಯದು, ನಮ್ಮ ಅಳತೆಗೆ ಮೀರದ್ದನ್ನೆಲ್ಲಾ ನಾವು ದೇವತ್ವಕ್ಕೆ ಏರಿಸಿ ಪೂಜಿಸುವವರು. ಹೀಗಾಗಿ ಏಲಿಯನ್ಸ್‌ ಬಂದರೆ ಒಂದೇ ವರ್ಷದಲ್ಲಿ ಅವರಿಗೆ ನಾವು ದೇವಾಲಯ ಕಟ್ಟಿಸುವುದು ಖಂಡಿತ. ನಾಲ್ಕನೆಯದು, ಹಿಮಾಲಯದ ತಂಪು ತಾಣಗಳಿಂದ ಹಿಡಿದು ಗೋವಾದ ಬೀಚುಗಳವರೆಗೆ ಏಲಿಯನ್‌ಗಳಿಗೆ ರಜಾದ ಮಜಾ ಉಡಾಯಿಸಲು ವೈವಿಧ್ಯಮಯ ತಾಣಗಳಿವೆ. ಐದನೆಯದು, ಇಲ್ಲಿ ಕ್ರೈಂ ಮಾಡಿ ಸುಲಭವಾಗಿ ಶಿಕ್ಷೆಯಿಲ್ಲದೆ ಪಾರಾಗಬಹುದು. ಭೋಪಾಲ್‌ ಗ್ಯಾಸ್‌ ದುರಂತದ ರೂವಾರಿಯಂತೆ ವಿಮಾನ ಹತ್ತಿ ಭಾರತ ದಾಟಿ ಹೋಗಿಬಿಡಬಹುದು!

ಇದು ಇಂಟರ್‌ನೆಟ್‌ನಲ್ಲಿ ಇತ್ತೀಚೆಗೆ ಓದಿದ ಒಂದು ತಮಾಷೆ. ತಮಾಷೆ ಎಂಬುದೇ ಅಸಂಗತತೆಯ ತಳಹದಿಯ ಮೇಲೆ ನಿಂತಿದೆ. ಆದ್ದರಿಂದ ಇದರ ವಿಶ್ಲೇಷಣೆ ಅನಗತ್ಯ. ಆದರೂ ಪರಲೋಕ ಜೀವಿಗಳ ಬಗ್ಗೆ ಈಗ ಬರೆಯಲು ಒಂದು ಕಾರಣ- ನಮ್ಮ ಹೆಮ್ಮೆಯ ಇಸ್ರೋದ ಅಧ್ಯಕ್ಷ ಎಸ್.‌ ಸೋಮನಾಥ್‌ ಇತ್ತೀಚೆಗೆ ಏಲಿಯನ್ಸ್‌ ಬಗ್ಗೆ ನೀಡಿದ ಒಂದು ಹೇಳಿಕೆ. “ಏಲಿಯನ್ಸ್‌ ನಮ್ಮ ನಡುವೆಯೇ ಇರಬಹುದು, ಇದ್ದಾರೆ. ಊಹಿಸಿಕೊಳ್ಳಿ, ಇಷ್ಟು ದೊಡ್ಡ ವಿಶ್ವದಲ್ಲಿ ನಮಗಿಂತ ತಂತ್ರಜ್ಞಾನದಲ್ಲಿ 200 ವರ್ಷ ಹಿಂದಿರುವ ಜೀವಿಗಳಿರುವಂತೆ, 1000 ವರ್ಷ ಮುಂದಿರುವ ಜೀವಿಗಳೂ ಇರಬಹುದಲ್ಲ? ಅಂಥ ಹಲವು ಜನಾಂಗಗಳು ಮನುಷ್ಯನ ರೇಡಾರನ್ನೂ ಮೀರಿ ಪರಸ್ಪರ ಸಂಪರ್ಕಿಸಿಕೊಂಡು ಇರಬಹುದು.” ಇದು ರಣವೀರ್‌ ಅಲಹಾಬಾದಿಯಾ ಎಂಬ ಜನಪ್ರಿಯ ಯುಟ್ಯೂಬ್‌ ಸಂದರ್ಶನಕಾರನಿಗೆ ಅವರು ಹೇಳಿದ ಮಾತು. ಹಾಗಾದರೆ ಅಂಥ ಪರಜೀವಿಗಳಿದ್ದರೆ ಮನುಷ್ಯರು ಅವರನ್ನು ಸಂಪರ್ಕಿಸಲಿ ಎಂದು ಸೋಮನಾಥ್‌ ಬಯಸುತ್ತಾರೆಯೆ? “ಖಂಡಿತ ಇಲ್ಲ. ಯಾಕೆಂದರೆ ಅವರ ಜೀನೋಮ್‌ಗಳು, ಪ್ರೊಟೀನ್‌ ವ್ಯವಸ್ಥೆಗಳು, ಎಲ್ಲವೂ ಮನುಷ್ಯನಿಗಿಂತ ಪೂರ್ಣ ಭಿನ್ನವಾಗಿರಬಹುದು. ಒಂದು ಜನಾಂಗ ಇನ್ನೊಂದನ್ನು ಹತ್ತಿಕ್ಕಲು ಮುಂದಾದರೆ ಅಪಾಯ ಖಚಿತ.”

ಸೋಮನಾಥ್‌ ಅವರು ಏರೋಸ್ಪೇಸ್‌ ಇಂಜಿನಿಯರ್‌. ಪರಲೋಕಜೀವಿಗಳ ಬಗ್ಗೆ ಭೌತವಿಜ್ಞಾನಿಗಳೋ ಬಾಹ್ಯಾಕಾಶ ತಜ್ಞರೋ ಹೇಳಬೇಕಲ್ಲವೇ ಎಂದು ನೀವು ಲಾ ಪಾಯಿಂಟ್‌ ಎತ್ತಿದರೆ ನಾನು ಏನೂ ಹೇಳಲಾರೆ. ಆದರೆ ಏಲಿಯನ್ಸ್‌ ಎಂದಾಗ ಯಾವಾಗಲೂ ನಮ್ಮ ಕಿವಿ ಚುರುಕಾಗುತ್ತದೆ. ನೂರಾರು ಕಲ್ಪನೆಗಳೂ ಆತಂಕಗಳೂ ಹಾದುಹೋಗುತ್ತವೆ. ನಮ್ಮ ಸೈನ್ಸ್‌ ಪಿಕ್ಷನ್‌ಗಳೂ ಸೈಫೈ ಮೂವಿಗಳೂ ಏಲಿಯನ್‌ಗಳ ಬಗ್ಗೆ ಬಲು ಭಯಾನಕವಾದ ಚಿತ್ರಣವನ್ನು ಕಟ್ಟಿಕೊಟ್ಟು ಭೀತಿಯ ಬೀಜವನ್ನು ನಮ್ಮಲ್ಲಿ ಬಿತ್ತಿವೆ. ಹೀಗಾಗಿ ಪರಲೋಕಜೀವಿಗಳು ಎಂದರೆ ಅವರ ಆಕ್ರಮಣದ ಸಾಧ್ಯತೆಯೇ ಮೊದಲು ತಲೆಗೆ ಬರುತ್ತದೆ. ಅದನ್ನು ಮೀರಿಯೂ ಈ ವಿಷಯದ ಸುತ್ತಮುತ್ತ ಅನೇಕ ಸ್ವಾರಸ್ಯಗಳಿವೆ. ಹಾಗೂ ಇದಕ್ಕೆ ಸಂಬಂಧಿಸಿದ ಅನೇಕ ರೋಚಕ ಸುದ್ದಿಗಳು ಆಗಾಗ ಅಪ್‌ಡೇಟ್‌ ಆಗುತ್ತಿರುತ್ತವೆ.

ಇತ್ತೀಚಿನ ಅಂಥದೊಂದು ಸುದ್ದಿಯೆಂದರೆ ಪ್ರಭಾವಿ ಹಾಲಿವುಡ್‌ ಫಿಲಂ ನಿರ್ಮಾಪಕನೊಬ್ಬ ಹೇಳಿದ್ದು- “ಅನ್ಯಗ್ರಹ ಜೀವಿಗಳಿವೆ. ಸಾಕ್ಷ್ಯ ದೊರೆತಿದೆ. ಇನ್ನೊಂದು ತಿಂಗಳಲ್ಲಿ ಅದನ್ನು ಹೊರಗೆಡಹಲಾಗುತ್ತದೆ.” ಸಿಮೋನ್‌ ಹಾಲಂಡ್‌ ಎಂಬ ಹೆಸರಿನ ಇವನು ನಾಸಾ, ಬಿಬಿಸಿಗಳಿಗೆಲ್ಲ ಡಾಕ್ಯುಮೆಂಟರಿ ಮಾಡಿಕೊಟ್ಟವನು. ಅವನ ಪ್ರಕಾರ ನಾಲ್ಕು ಗಂಟೆಗಳ ತಡೆರಹಿತ ರೇಡಿಯೋ ಅಲೆಯೊಂದು ನಾಸಾಗೆ ದೊರೆತಿದೆ. ಇದು ಭೂಮಿಯಿಂದ 4.2 ಬೆಳಕಿನ ವರ್ಷಗಳಷ್ಟು ದೂರದ ಪ್ರಾಕ್ಸಿಮಾ ಸೆಂಟಾರಿ ನಕ್ಷತ್ರದ ಬಳಿಯಿಂದ ಬಂದಿದೆ. ಆಕ್ಸ್‌ಫರ್ಡ್‌ನ ವಿಜ್ಞಾನಿಗಳ ಒಂದು ತಂಡ ಈ ಕೋಡ್‌ ಅನ್ನು ಡಿಕೋಡ್‌ ಮಾಡಲು ಯತ್ನಿಸುತ್ತಿದೆ.

ಅಮೆರಿಕನ್ನರಿಗೆ ಹಾರುವ ತಟ್ಟೆಗಳೆಂದರೆ ವಿಪರೀತ ಗೀಳು; ಅನ್ಯಗ್ರಹ ಜೀವಿಗಳೆಂದರೆ ತೀರದ ಮೋಹ. ವರ್ಷಕ್ಕೆ ಹತ್ತಾದರೂ ಹಾಲಿವುಡ್‌ ಸಿನೆಮಾಗಳು ಏಲಿಯನ್‌ಗಳ ಬಗ್ಗೆ ಬರುತ್ತಿರುತ್ತವೆ. ವಾಸ್ತವವಾಗಿ ಅಮೆರಿಕನ್ನರೇ ಬೇರೆ ಬೇರೆಡೆಗಳಿಂದ ಆ ನೆಲಕ್ಕೆ ಹೋಗಿ ನಿಂತ ಏಲಿಯನ್‌ಗಳು! ಹಾಲಿವುಡ್‌ ಸಿನಿಮಾಗಳ ಪ್ರಕಾರ ಏಲಿಯನ್‌ಗಳು ಅಮೆರಿಕದಲ್ಲೇ ಬಂದಿಳಿಯುವುದು ರೂಢಿ. ಅವರಿಂದ ಮನುಕುಲಕ್ಕೆ ಏನಾದರೂ ಗಂಡಾಂತರ ಒದಗಿದರೆ ರಕ್ಷಿಸುವ ಕೆಲಸವನ್ನೂ ಅಮೆರಿಕನ್ನರೇ ಮಾಡಬೇಕು. ಬಹುಶಃ ಹಾಲಿವುಡ್‌ ಲಾಸ್‌ ಏಂಜಲೀಸ್‌ನಲ್ಲಲ್ಲದೆ ಬೀಜಿಂಗ್‌ನಲ್ಲಿ ಇದ್ದಿದ್ದರೆ ಚೀನೀಯರು ಈ ಹೀರೋಗಳಾಗಿರುತ್ತಿದ್ದರೋ ಏನೋ. ಇರಲಿ, ಏಲಿಯನ್‌ಗಳ ಬಗ್ಗೆ ಅಮೆರಿಕನ್ನರ ಈ ಗೀಳಿಗೆ ಕಾರಣವೇನು? 1947ರಲ್ಲಿ ಕೆನ್ನೆತ್‌ ಆರ್ನಾಲ್ಡ್‌ ಎಂಬ ಇಡಾಹೋದ ಪೈಲಟ್‌, ತಟ್ಟೆಯಂತಹ ಒಂಬತ್ತು ಹಾರುವ ವಸ್ತುಗಳನ್ನು ಕಂಡು, ಅವುಗಳನ್ನು ಹಿಂಬಾಲಿಸಿಕೊಂಡ ಹೋದ. ಅವು ಎಲ್ಲೋ ಮಾಯವಾದವು. ಅದನ್ನಾತ ಸುದ್ದಿ ಮಾಡಿದ. ನಂತರ ಈ ‘ಹಾರುವ ತಟ್ಟೆಗಳು’ (ಯುಎಫ್‌ಒ) ಎಂಬ ಪರಿಕಲ್ಪನೆ ಜನಪ್ರಿಯವಾಯಿತು. ಆರ್ನಾಲ್ಡ್‌ ಹೇಳಿದ್ದನ್ನೆಲ್ಲ ಜನ ನಂಬಿದರು. ಅಮೆರಿಕದ ಎಲ್ಲೆಡೆ ಜನ ತಾವೂ ಇಂಥದನ್ನು ಕಂಡೆವು ಎಂದು ಹೇಳತೊಡಗಿದರು. ವೈಮಾನಿಕ ಪರಿಭಾಷೆಯಲ್ಲಿ ಇದನ್ನು ‘ಫ್ಲ್ಯಾಪ್‌’ ಎನ್ನುತ್ತಾರೆ. ಅಂದರೆ ಸಾಮೂಹಿಕ ಭ್ರಮೆ.

ಹಾಗೆ ನೋಡಿದರೆ, ಏಲಿಯನ್‌ಗಳು ಇಲ್ಲ ಎನ್ನುವುದಕ್ಕಿಂತಲೂ, ಇದ್ದಾರೆ ಎನ್ನುವುದಕ್ಕೇ ಹೆಚ್ಚು ವೈಜ್ಞಾನಿಕ ʼತರ್ಕʼಗಳು ಹುಟ್ಟಿಕೊಂಡಿವೆ. ಆದರೆ ʼಸಾಕ್ಷಿʼಗಳು ಸಿಗುವುದಿಲ್ಲ. ಪರಲೋಕಜೀವಿಗಳ ಇರುವಿಕೆಯ ಸಾಧ್ಯತೆಯ ಬಗ್ಗೆ ವಿಜ್ಞಾನ ಲೋಕದಲ್ಲಿ ಹೆಚ್ಚಿನ ನಕಾರವಿಲ್ಲ. ಯಾಕೆಂದರೆ ಈ ಅಗಾಧ ವಿಶ್ವದಲ್ಲಿ ಲೆಕ್ಕಕ್ಕೆ ಮೀರಿದ ಗ್ಯಾಲಕ್ಸಿಗಳೂ, ಅವುಗಳಲ್ಲೆಲ್ಲ ಅಳತೆಗೇ ಸಿಗದಷ್ಟು ನಕ್ಷತ್ರಗಳೂ, ಆ ನಕ್ಷತ್ರಗಳಿಗೆಲ್ಲ ಸೌರವ್ಯೂಹದಂಥ ಗ್ರಹಗಳ ವ್ಯೂಹವೂ ಇರಲು ಸಾಧ್ಯ; ಹಾಗಿದ್ದ ಮೇಲೆ ಇಂಥ ಅಗಾಧ ವಿಶ್ವದಲ್ಲಿ ಭೂಮಿಯಂಥ ಇನ್ನೊಂದು ವಾಸಯೋಗ್ಯ ಗ್ರಹ ಇರುವುದು ಖಂಡಿತ ಸಾಧ್ಯ. ಒಂದೆರಡೇನು, ನೂರಾರು ಇದ್ದರೂ ಇರಬಹುದು. ಇವುಗಳಿಂದ ಬರಬಹುದಾದ ಸಿಗ್ನಲ್‌ಗಳಿಗಾಗಿಯೇ ಹತ್ತಾರು ವರ್ಷಗಳಿಂದ ಆಕಾಶದತ್ತ ಕಣ್ಣು ನೆಟ್ಟು ಕೂತಿರುವ ಬೃಹತ್‌ ಡಿಶ್‌ಗಳೂ ಇವೆ. ಸ್ಯಾನ್‌ಫ್ರಾನ್ಸಿಸ್ಕೋ ಬಳಿ ಒಂದು ಗ್ರಾಮದಷ್ಟಗಲದ ಲ್ಯಾಬೊರೇಟರಿ ಇದಕ್ಕಾಗಿಯೇ ಮೀಸಲಾಗಿದೆ.

ಹಾಗಾದರೆ ಅವುಗಳಲ್ಲಿ ಒಂದು ಗ್ರಹದ ಜೀವಿಯಾದರೂ ನಮ್ಮನ್ನು ಸಂಪರ್ಕಿಸಬೇಕಿತ್ತಲ್ಲವೆ? ಯಾಕೆ ಇದುವರೆಗೂ ಸಂಪರ್ಕಿಸಿಲ್ಲ? ಇದೇ ಪ್ರಶ್ನೆಯನ್ನೇ 1950ರಲ್ಲಿ ಎನ್ರಿಕೋ ಫರ್ಮಿ ಎಂಬ ವಿಜ್ಞಾನಿ ಕೇಳಿದ. ಮುಂದೆ ಇದನ್ನೇ ʼಫರ್ಮಿ ವಿರೋಧಾಭಾಸʼ (Fermi paradox) ಎಂದು ಕರೆಯಲಾಯಿತು.
ಯಾಕೀ ಕಾಲಕಾಲಾಂತರದ ನಿಗೂಢ ಮೌನ? ಈ ಮೌನವನ್ನೇ ʼಗ್ರೇಟ್‌ ಸೈಲೆನ್ಸ್‌ʼ ಎಂದು ವಿಜ್ಞಾನಿಗಳು ಕರೆದರು. ಇದಕ್ಕೆ ಉತ್ತರವಾಗಿ ಫರ್ಮಿಯೇ ಮೂರು ಸಾಧ್ಯತೆಗಳನ್ನೂ ಮುಂದಿಡುತ್ತಾನೆ: 1. ಇಂಟರ್‌ಸ್ಟೆಲ್ಲಾರ್‌ (ತಾರಾವ್ಯೂಹಗಳ ನಡುವಿನ) ಪ್ರಯಾಣ ಸಾಧ್ಯವಿಲ್ಲ. ಬೆಳಕಿನ ವೇಗವನ್ನೇ ಸಾಧಿಸಿದರೂ ಲಕ್ಷಗಟ್ಟಲೆ ವರ್ಷಗಳು ತಗುಲುತ್ತವೆ. 2. ಒಂದೇ ವೇಳೆ ಇದು ಸಾಧ್ಯವಾದರೂ, ಇದರಿಂದ ಪ್ರಯೋಜನವಿಲ್ಲ ಎಂದು ಏಲಿಯನ್‌ಗಳು ಸುಮ್ಮನಾಗಿರಬೇಕು. 3. ತಂತ್ರಜ್ಞಾನ ಆಧಾರಿತ ನಾಗರಿಕತೆಗಳು ಬಹಳ ಕಾಲ ಹಾಗೇ ಉಳಿಯುವುದಿಲ್ಲ.

ಈ ಭೂಮಿ ಕಂಡ ಬಲು ಬುದ್ಧಿವಂತ ವಿಜ್ಞಾನಿ ಎನಿಸಿಕೊಂಡ ಸ್ಟೀಫನ್‌ ಹಾಕಿಂಗ್‌ ಕೂಡ ನಮ್ಮ ಇಸ್ರೋ ಅಧ್ಯಕ್ಷ ಹೇಳಿದಂತೆಯೇ ಹೇಳಿದ್ದ- ನಾವು ಏಲಿಯನ್‌ಗಳನ್ನು ಭೇಟಿ ಮಾಡೋದು ಬೇಡ ಅಂತಲೇ ಹಾರೈಸಬೇಕು. ಯಾಕೆಂದರೆ ಅದು ಕೊಲಂಬಸ್‌ ಅಮೆರಿಕಾದ ಮೂಲನಿವಾಸಗಳನ್ನು ಭೇಟಿ ಮಾಡಿದಂತಾದೀತು. ಮೂಲನಿವಾಸಿಗಳ ಕತೆ ಏನಾಗಿದೆ ನೋಡಿ! ಇಲ್ಲಿ ಕೊಲಂಬಸ್‌ನ ಜಾಗದಲ್ಲಿ ಏಲಿಯನ್‌ಗಳನ್ನು ನಾವು ಊಹಿಸಿಕೊಳ್ಳಬೇಕು. ಮಾರ್ಕ್‌ ಬುಕಾನನ್‌ ಎಂಬ ವಿಜ್ಞಾನಿ, “ಅನ್ಯಜೀವಿಗಳು ನಮ್ಮನ್ನು ಸಂಪರ್ಕಿಸಬೇಕಿದ್ದರೆ ಅವರು ನಮಗಿಂತ ತಾಂತ್ರಿಕವಾಗಿ ಬಹಳ ಮುಂದುವರಿದಿರಲೇಬೇಕು. ಅವರು ಅಷ್ಟೆಲ್ಲ ಮುಂದುವರಿದವರಾದರೆ ನಮ್ಮನ್ನು ವಿನಯಪೂರ್ವಕವಾಗಿ ನಡೆಸಿಕೊಳ್ಳಬೇಕು ಎಂದು ನಾವು ನಿರೀಕ್ಷಿಸಲು ಹೇಗೆ ಸಾಧ್ಯ?” ಎಂದು ಕೇಳಿದ.

ಬಹುಶಃ ನಾವು ಈಗಾಗಲೇ ಅಪಾಯದ ಅಂಚನ್ನು ತಲುಪಿದ್ದೇವೆ. ಪರಿಸ್ಥಿತಿ ನಮ್ಮ ಕೈಮೀರಿ ಹೋಗಿಬಿಟ್ಟಿದೆ. ಯಾಕೆಂದರೆ ನಾವು ಈಗಾಗಲೇ ಬ್ರಹ್ಮಾಂಡದ ಎಲ್ಲೆಡೆ ʼನಾವಿದ್ದೇವೆʼ ಎಂಬ ರೇಡಿಯೋ ಸಿಗ್ನಲ್‌ಗಳನ್ನು, ದೃಶ್ಯಾವಳಿಗಳನ್ನು ಕಳಿಸಿದ್ದೇವೆ. ಅನ್ಯಗ್ರಹಜೀವಿಗಳು ನಮ್ಮ ಮೇಲೆ ದಾಳಿ ಮಾಡುವುದಾದರೆ ಇದೀಗ ಅವರಿಗೆ ಸುಸಮಯ; ಬಹುಶಃ ದಾಳಿ ಈಗಾಗಲೇ ನಾವು ಊಹಿಸಲಸಾಧ್ಯವಾದ ರೀತಿಯಲ್ಲಿ ಆರಂಭವಾಗಿರಲೂಬಹುದು. ಕೋವಿಡ್‌ ಅಂಥದೊಂದು ದಾಳಿಯಾಗಿರಬಹುದು- ಎಂದು ಹೇಳಿ ಹೆದರಿಸುವ ವಿಜ್ಞಾನಿಗಳೂ ಇದ್ದಾರೆ.

ಇದಕ್ಕಿಂತಲೂ ಭಯಗೊಳಿಸುವ ಅಧ್ಯಯನವೊಂದನ್ನು ಕೆಲವು ವಿಜ್ಞಾನಿಗಳು ಇತ್ತೀಚೆಗೆ ಮಾಡಿದ್ದಾರೆ. ಅದರ ಪ್ರಕಾರ, ಯಾವ ಆಧುನಿಕ ತಂತ್ರಜ್ಞಾನವೂ, ಅದರ ಅತ್ಯುಚ್ಚ ಸ್ಥಿತಿ ತಲುಪಿದ ಹಂತದಲ್ಲಿ 1000 ವರ್ಷಗಳಿಗಿಂತ ಹೆಚ್ಚು ಕಾಲ ಉಳಿಯಲಾರದು; ಅಂದರೆ ಅದರ ತಂತ್ರಜ್ಞಾನದ ಉನ್ನತಿಯೇ ಅದನ್ನು ಸರ್ವನಾಶದತ್ತ ಒಯ್ಯುತ್ತದೆ. ಬಹುಶಃ ನಮ್ಮ ಹಿಂದಿನ ಏಲಿಯನ್‌ ನಾಗರಿಕತೆಗಳು ಹಾಗೆ ಆಗಿರಬಹುದು; ಅಥವಾ ಯಾವುದಾದರೂ ಅನ್ಯಗ್ರಹಜೀವಿಗಳು ನಮ್ಮನ್ನು ಸಂಪರ್ಕಿಸಲು ಯತ್ನಿಸಿದವು ಎಂದಾದರೆ ಅವುಗಳು ಈಗ ಅಳಿವಿನಂಚಿನಲ್ಲಿರಬಹುದು. ಹೊಸ ನೆಲೆಯನ್ನು ಹುಡುಕಿ ಅವು ಹೊರಟಿರಬಹುದು. ಈ ಪ್ರಮೇಯದ ಹಿನ್ನೆಲೆಯಲ್ಲಿ ಇರುವುದು ಭೂಮಿಯದೇ ಸ್ಥಿತಿಗತಿ. ಯಾಕೆಂದರೆ 1800ರ ನಂತರ ಭೂಮಿಯ ಮೇಲೆ ಮನುಷ್ಯ ಬಳಸುತ್ತಿರುವ ಶಕ್ತಿಯ (ಇಂಧನ) ಪ್ರಮಾಣ, ಇಂದು ಇಡೀ ಗ್ರಹವನ್ನೇ ನಾಶದಂಚಿಗೆ ತಂದು ನಿಲ್ಲಿಸಿದೆ. ನಾವು ಅನಿಲ ಮತ್ತು ಕಲ್ಲಿದ್ದಲಿನಿಂದ ಸೃಷ್ಟಿಸಿದ ಶಾಖ ಈ ಗ್ರಹವನ್ನು ಕೊಲ್ಲುವಷ್ಟಿದೆ. ಇದು ಬಾತ್‌ಟಬ್‌ ಲೀಕ್‌ ಆದಂತೆ. ಬಾತ್‌ಟಬ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ನೀರಿದ್ದಾಗ ಸೋರಿಕೆ ಕಡಿಮೆ ಇರುತ್ತದೆ. ಟಬ್‌ ತುಂಬಿದಾಗ ಸೋರಿಕೆ ಹೆಚ್ಚಿ ಒಮ್ಮೆಲೇ ಒಡೆದುಹೋಗಲೂಬಹುದು.

ಅಂದಹಾಗೆ ಈ ಮೇಲಿನ ಅಧ್ಯಯನವನ್ನು ಮಾಡಿದ ತಂಡದಲ್ಲಿ ಭಾರತೀಯ ಯುವ ವಿಜ್ಞಾನಿಯೊಬ್ಬರಿದ್ದಾರೆ. ಮನಸ್ವಿ ಲಿಂಗಂ ಎಂಬ ಹೆಸರಿನ ಇವರು ಬಾಂಬೆ ಐಐಟಯಲ್ಲಿ ಕಲಿತು ಇದೀಗ ಫ್ಲೋರಿಡಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಆಸ್ಟ್ರೋಫಿಸಿಸಿಸ್ಟ್‌ ಆಗಿದ್ದಾರೆ. ಅವರ ಪ್ರಕಾರ ಭೂಮಿಯಾಗಲೀ ಬೇರಿನ್ನೊಂದು ಗ್ರಹವಾಗಲೀ ಬದುಕುಳಿಯಲು ಒಂದೇ ದಾರಿ- ಪ್ರಗತಿಯ ವೇಗ ಕಡಿಮೆ ಮಾಡುವುದು, ಭೂಮಿಯನ್ನು ಬಿಸಿ ಮಾಡುವ ಎಲ್ಲ ಕೈವಾಡಗಳನ್ನು ನಿಲ್ಲಿಸುವುದು.

ಏಲಿಯನ್‌ಗಳು ದೇವರು ಇದ್ದ ಹಾಗೆ. ದೇವರು ಇದ್ದಾನೆ ಎಂದು ಸಾಬೀತುಪಡಿಸಿದರೂ ನಾವು ನಂಬುವುದಿಲ್ಲ; ಇಲ್ಲ ಎಂದು ಸಾಬೀತುಪಡಿಸಿದರೂ ನಂಬುವುದಿಲ್ಲ. ಅದೊಂದು ಸದಾ ಚರ್ಚೆಯ ಸಂಗತಿ. ಯುಎಫ್‌ಒಗಳ ಕತೆಯನ್ನು ಜೀವಂತವಾಗಿ ಇಡುವುದರಲ್ಲಿ ಹಲವರಿಗೆ ಲಾಭವಿದೆ; ಸರಕಾರಕ್ಕೆ ಜನರ ಗಮನ ಇನ್ನೊಂದು ಕಡೆ ಸೆಳೆಯಬಹುದು. ಮಿಲಿಟರಿಗೆ ಜನರನ್ನು ನಿಯಂತ್ರಣದಲ್ಲಿಡಲು ಇದೊಂದು ಮಾಧ್ಯಮ. ಮೀಡಿಯಾಗಳಿಗೂ ರೋಚಕವಾದ ಒಂದು ಸರಕು ಆಗಾಗ ಸಿಗುತ್ತಿರುತ್ತದೆ. ಅಂತೂ ನಮಗೊಂದು ನಿಗೂಢತೆ ಬೇಕು. ಉತ್ತರ ಸಿಗುವವರೆಗೂ ʼಗ್ರೇಟ್‌ ಸೈಲೆನ್ಸ್‌ʼ ಮಾತ್ರ ಸತ್ಯ. ಬುದ್ಧನ ʼಮಹಾಮೌನʼದಂತೆ.

ಇದನ್ನೂ ಓದಿ: Harish Kera Column: ಮನುಕುಲದ ಕಳವಳಕ್ಕೆ ನೊಬೆಲ್‌ ತಂದವನು