Thursday, 12th December 2024

Harish Kera Column: ಬಂಡೀಪುರದ ಆನೆ ಮತ್ತು ಲಾರೆನ್ಸನ ಹಾವು

ಕಾಡುದಾರಿ

ಹರೀಶ್‌ ಕೇರ

ಒಂದು ಸಲ ಬಂಡೀಪುರದ ಮೂಲಕ ಊಟಿಗೆ ಹೊರಟಿದ್ದೆ. ಬೆಳಗಿನ ಜಾವ, ಒಂದೆರಡು ನವಿಲುಗಳೂ ಕಾಡುಕೋಣಗಳೂ ಯಥೇಚ್ಛ
ಜಿಂಕೆಗಳೂ ದಾರಿ ಬದಿಯಲ್ಲಿ ದರ್ಶನ ನೀಡಿದವು. ಮುಂದೆ ಒಂದು ತಿರುವಿನಲ್ಲಿ ತಿರುಗಿದಾಗ, ಎಡಬದಿಯಲ್ಲಿ ಒಂಟಿ ಆನೆ ನಿಂತದ್ದು ಕಾಣಿಸಿತು. ಮುಂದಿದ್ದ ಕಾರಿನ ಚಾಲಕ ನಿಧಾನ ಮಾಡಿದ. ನಾನೂ ನಿಧಾನಿಸಿದೆ. ಇದ್ದಕ್ಕಿದ್ದಂತೆ ಆನೆ ರಸ್ತೆ ಕಡೆಗೆ ಬಂದುಬಿಟ್ಟಿತು. ಮುಂದಿನ ಕಾರಿನವನು
ಕೂಡಲೇ ವೇಗ ಹೆಚ್ಚಿಸಿ ಅಲ್ಲಿಂದ ಪರಾರಿಯಾಗಿಬಿಟ್ಟ. ಆನೆ ನನ್ನ ಕಾರಿನ ಮುಂದೆ ಹತ್ತಡಿ ದೂರದಲ್ಲಿ ಬಂದು ನಿಂತುಬಿಟ್ಟಿತು. ಮುಂದೆ ಹೋಗುವಂತಿಲ್ಲ. ಹಿಂದೆ ಇನ್ನೆರಡು ಕಾರಿನವರು ಬಂದು ನಿಂತಿದ್ದಾರೆ, ಹಿಂದಕ್ಕೂ ಚಲಿಸುವಂತಿಲ್ಲ.

ಹಾರನ್ ಮಾಡುವಂತಿಲ್ಲ (ಕಾನೂನಿನ ಪ್ರಕಾರವೂ ಸಲ್ಲದು, ಆನೆಗೂ ಅದು ಕಿರಿಕಿರಿ). ಎದೆ ಢವಢವ ಎನ್ನತೊಡಗಿತು. ಹೀಗೇ ಕೆಲವು ನಿಮಿಷ ಸರಿದವು. ಆನೆ ಹಿಂದಕ್ಕೂ ಹೋಗುತ್ತಿಲ್ಲ, ಮುಂದಕ್ಕೂ ಹೋಗುತ್ತಿಲ್ಲ. ಕಾರಿನೊಳಗಿದ್ದವರ ಕೈಕಾಲುಗಳು ಆಗಲೇ ಬೆವರಿ ತಣ್ಣಗಾಗಿದ್ದವು.
ಅಷ್ಟರಲ್ಲಿ ಆನೆಯ ಎದುರುಗಡೆಯಿಂದಲೂ ಕೆಲವು ಕಾರುಗಳು ಸ್ವಲ್ಪ ದೂರದಲ್ಲಿ ಬಂದು ನಿಂತವು. ಆ ಕಡೆ ಮೊದಲಿಗನಾಗಿ ನಿಂತವನದೂ ನನ್ನದೇ ಪರಿಸ್ಥಿತಿ ಇದ್ದಿರಬಹುದು. ಯಾಕೆಂದರೆ ಆನೆ ರೋಷಕ್ಕೆ ತುತ್ತಾದರೆ ಮೊದಲ ಬಲಿ ನಾವೇ ತಾನೆ. ಅದು ಒಮ್ಮೆ ಜೋರಾಗಿ ಬಾಲ
ಬೀಸಿದರೂ ಸಾಕು, ಕಾರಿಗೆ ಡೆಂಟ್ ಬೀಳುತ್ತದೆ. ಇನ್ನು ಆ ಬೃಹತ್ ಹೆಜ್ಜೆಗಳನ್ನು ನಮ್ಮ ಮೇಲೆ ಊರಿದರೆ, ಆಮೇಲೆ ನಮ್ಮ ಅವಶೇಷಗಳನ್ನು ರಸ್ತೆಯಿಂದ ಕೆರೆದು ಕೆರೆದೇ ತೆಗೆಯಬೇಕಷ್ಟೆ. ಇದನ್ನೆಲ್ಲ ಚಿತ್ರವತ್ತಾಗಿ ಕಲ್ಪಿಸಿಕೊಳ್ಳುತ್ತ ಮತ್ತೆ ಕೈಕಾಲು, ಬೆನ್ನುಹುರಿ ನಡುಗತೊಡಗಿದವು.
ಅಷ್ಟರಲ್ಲಿ ಯಾರೋ ದೂರದ ಕಾರಿನಿಂದ ‘ಹೋಯ್’ ಎಂದರು.

ಇನ್ಯಾರೋ ವಿಶಲ್ ಹಾಕಿದರು. ಜೋರುಜೋರಾಗಿ ಆನೆಯನ್ನು ತೋರಿಸಿ ಮಾತನಾಡತೊಡಗಿದರು. ಅವರಿಗೇನು, ಸುರಕ್ಷಿತ ದೂರದಲ್ಲಿ ಇದ್ದರಷ್ಟೆ. ಆನೆಗೆ ಕಿರಿಕಿರಿಯಾಯಿತು. ನಮ್ಮ ಹೃದಯಗಳು ಬಾಯಿಗೇ ಬಂದುಬಿಟ್ಟವು. ಆನೆ ತಿರುಗಿ ನನ್ನ ಕಾರಿನ ಕಡೆಗೇ ಮುಖ ಮಾಡಿತು. ಅದರ ಊದ್ದ ದಂತಗಳು ಇರಿಯುವಂತೆ ನಮ್ಮ ಕಡೆಗೇ ನೋಡಿದವು. ಇನ್ನೇನು ಅದು ನಾಲ್ಕು ಹೆಜ್ಜೆ ಹಾಕಿ ಸೊಂಡಿಲು ಚಾಚಿದರೆ ನಾವು ಸಿಕ್ಕಿ ಬಿಡುತ್ತೇವೆ. ಆ ಸೊಂಡಿಲು ಯಮಪಾಶದಂತೆಯೇ ಕಾಣಿಸತೊಡಗಿತು. ನಮ್ಮ ಅದೃಷ್ಟ, ಆನೆ ನಮ್ಮನ್ನು ಕ್ಷುಲ್ಲಕವಾಗಿ ನೋಡಿ ನಿಧಾನವಾಗಿ ರಸ್ತೆಯ ಇನ್ನೊಂದು ಬದಿಗೆ ಸರಿದು ಹೊರಟುಹೋಯಿತು. ಹೊರಟಿದ್ದ ನಮ್ಮ ಜೀವ ಮರಳಿ ಬಂತು. ನನಗೆ ಶಿಕ್ಷಿಸುವ ಅಧಿಕಾರ ಇದ್ದಿದ್ದರೆ, ಅಂದು ಅಲ್ಲಿ ಗಲಾಟೆ ಮಾಡಿದವರಿಗೆ ಖಂಡಿತವಾಗಿಯೂ ಮರಣದಂಡನೆ ವಿಧಿಸುತ್ತಿದ್ದೆ ಎಂಬುದು ಖಾತ್ರಿ.

ವನ್ಯಜೀವಿಗಳು, ಇತರ ಪ್ರಾಣಿಗಳ ಜತೆಗೆ ಹೇಗೆ ನಡೆದುಕೊಳ್ಳಬೇಕು ಎಂಬುದೇ ನಮಗೆ ಗೊತ್ತಿಲ್ಲ. ಮನುಷ್ಯನಿಗೆ ಇರುವಂತೆಯೇ ಅವುಗಳಿಗೂ ಘನತೆ ಇದೆ ಎಂಬ ಸೂಕ್ಷ್ಮ ಹೆಚ್ಚಿನವರಿಗೆ ಇಲ್ಲ. ಹೀಗಾಗಿಯೇ ಇಂಥ ಸನ್ನಿವೇಶಗಳಲ್ಲಿ ನಾವು ಮೈಮೇಲೆ ಅಪಾಯ ಎಳೆದುಕೊಳ್ಳುತ್ತೇವೆ.
ಕಾಡಿನಲ್ಲಿ, ಕಾಡುಪ್ರಾಣಿಗಳ ಸಮ್ಮುಖದಲ್ಲಿ ಮೌನವಾಗಿರಬೇಕು, ಹಾರನ್ ಹಾಕಕೂಡದು, ಮಾತನಾಡದಿದ್ದರೆ ಒಳ್ಳೆಯದು, ಸಡನ್ ಮೂವ್‌ ಮೆಂಟ್‌ಗಳು ಇರಬಾರದು, ಅವುಗಳ ದಾರಿಗೆ ಅಡ್ಡ ನಿಲ್ಲಕೂಡದು, ಕಾಡಿನಲ್ಲಿ ಢಾಳಾದ ಬಣ್ಣದ ಬಟ್ಟೆ ಧರಿಸುವಂತಿಲ್ಲ, ಹತ್ತಿರ ಹೋಗಬಾರದು, ಅವುಗಳಿಗೆ ಆಹಾರ ಕೊಡಕೂಡದು, ಅಭಯಾರಣ್ಯದಲ್ಲಿ ವಾಹನ ಇಳಿಯುವಂತಿಲ್ಲ- ಇಂಥದನ್ನೆಲ್ಲ ಸಣ್ಣ ಪ್ರಾಯದಿಂದಲೇ ಮಕ್ಕಳಿಗೆ ಗೊತ್ತು ಮಾಡಿಸಿರುವುದಿಲ್ಲ.

ಇಂದು ಕಾಡಿನ ಸ-ರಿಗೆ ಭೇಟಿ ಕೊಡುವವರಲ್ಲಿ ನೂರಕ್ಕೆ ತೊಂಬತ್ತು ಭಾಗ ವನ್ಯ-ಅಶಿಕ್ಷಿತರು ಹಾಗೂ ಮೂರ್ಖರು. ಗಾರ್ಡುಗಳು ಎಷ್ಟು ತಿಳಿಸಿಹೇಳಿದರೂ ಕೂಗಾಡುವುದು, ಕಿರಿಚಾಡುವುದು ಮಾಡಿ ಆ ಪ್ರಾಣಿಗಳ ನೆಮ್ಮದಿ ಕೆಡಿಸುತ್ತಾರೆ. ಮೌನವಾಗಿ ಅವುಗಳನ್ನು ವೀಕ್ಷಿಸುವುದರಲ್ಲಿ ಆನಂದವಿದೆ ಎಂಬುದು ಇವರಿಗೆ ಅರ್ಥವಾಗದು. ಹೀಗೆ ಮನುಷ್ಯ ವನ್ಯಜೀವಿಗಳಿಗೆ ತೊಂದರೆ ಕೊಡದೇ ಇರುವುದನ್ನು ಕಲಿಯುವವರೆಗೂ ಆತನನ್ನೇ ಕಾಡುಪ್ರಾಣಿಗಳಿಂದ ದೂರ ಇಡುವುದು ಒಳ್ಳೆಯದು. ಹೀಗಾಗಿಯೇ, ಬಂಡಿಪುರ, ನಾಗರಹೊಳೆ ಹುಲಿಧಾಮದ ಮೂಲಕ
ಹಾದುಹೋಗುವ ರಸ್ತೆಯಲ್ಲಿ ರಾತ್ರಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಕೂಡದು ಎನ್ನುವುದು. ಇದು ಮನುಷ್ಯನಿಗೂ ಮೃಗಗಳಿಗೂ ಏಕಕಾಲಕ್ಕೆ ಒಳ್ಳೆಯದು. ಆದರೆ ರಾಜಕೀಯವು ಮನುಷ್ಯನಿಂದ ಮಾಡಬಾರದ್ದನ್ನು ಮಾಡಿಸುತ್ತದೆ.

ಇತ್ತೀಚೆಗೆ ವಯನಾಡಿನಲ್ಲಿ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಗಾಂಧಿ “ಬಂಡೀಪುರ ಹುಲಿ ವನ್ಯಧಾಮದಲ್ಲಿ ಕರ್ನಾಟಕ ಹಾಗೂ ಕೇರಳ ನಡುವೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗಿರುವ ವಾಹನಗಳ ರಾತ್ರಿ ಸಂಚಾರ ನಿಷೇಧ ತೆರವು ಮಾಡುವಂತೆ
ಕರ್ನಾಟಕ ಸರಕಾರಕ್ಕೆ ಸೂಚಿಸುತ್ತೇನೆ” ಎಂದು ಭರವಸೆ ನೀಡಿ ಚಪ್ಪಾಳೆ ಗಿಟ್ಟಿಸಿದರು. ಇದರಿಂದ ಕೇರಳದ ವಯನಾಡು ಭಾಗದವರಿಗೆ ಕರ್ನಾಟಕಕ್ಕೆ ರಾತ್ರಿ ಸಂಚಾರಕ್ಕೆ ತೊಂದರೆಯಾಗುತ್ತದಂತೆ. ಇದಕ್ಕೆ ಪರಿಹಾರ ಕೊಡಿಸುತ್ತಾರಂತೆ. ಇದನ್ನು ಕರ್ನಾಟಕದ ಆಡಳಿತಗಾರರೂ
ಗಂಭೀರವಾಗಿ ತೆಗೆದುಕೊಂಡು ರಾತ್ರಿ ಸಂಚಾರ ಮುಕ್ತಗೊಳಿಸಿದರೆ ಗತಿಯೇನು? ಇಲ್ಲಿ ರಾತ್ರಿ ಸಂಚಾರ ಮುಕ್ತಗೊಳಿಸುವುದು ಎಂದರೆ
ವನ್ಯಜೀವಿಗಳಿಗೆ ಮರಣಶಾಸನ ಬರೆದಂತೆಯೇ ಸರಿ. ಈ ರಾಷ್ಟ್ರೀಯ ಹೆದ್ದಾರಿ 766, ಕರ್ನಾಟಕದ ಕೊಳ್ಳೇಗಾಲದಿಂದ ಕೇರಳದ ಕೋಝಿ ಕ್ಕೋಡ್‌ಗೆ ಸಂಪರ್ಕ ಒದಗಿಸುತ್ತದೆ.

ಬಂಡೀಪುರದ ಸುಮಾರು 21 ಕಿಲೋಮೀಟರ್ ದಟ್ಟ ಕಾಡಿನಲ್ಲಿ ಇದು ಹಾದುಹೋಗುತ್ತದೆ. ಜತೆಗೆ ವಯನಾಡ್ ವನ್ಯಜೀವಿ ಅಭಯಾರಣ್ಯದಲ್ಲೂ. ರಾತ್ರಿ ವಾಹನ ಸಂಚಾರವಿದ್ದಾಗ ಇಲ್ಲಿ ವಾಹನಕ್ಕೆ ಸಿಕ್ಕಿ ಸತ್ತ ಚಿರತೆಗಳು, ಜಿಂಕೆಗಳು, ಹಾವುಗಳು ಮತ್ತಿತರ ಸಣ್ಣ ಪ್ರಾಣಿಗಳಿಗೆ ಲೆಕ್ಕವೇ
ಇಲ್ಲ. ಕೊನೆಗೂ ಕರ್ನಾಟಕದ ಬಂಡೀಪುರ ಹಾಗೂ ನಾಗರಹೊಳೆ ಭಾಗದ ಐದು ರಸ್ತೆಗಳಲ್ಲಿ 2009ರಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸ ಲಾಯಿತು. ಬಂಡೀಪುರದಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6, ನಾಗರಹೊಳೆಯಲ್ಲಿ ಸಂಜೆ 6 ರಿಂದ ಬೆಳಗಿನ 6ವರೆಗೆ ಈ ಸಂಚಾರ ನಿಷೇಧವಿದೆ. 2010ರಲ್ಲಿ ಕರ್ನಾಟಕ ಹೈಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿದಿತ್ತು. ಅತ್ತ ಕೇರಳದವರು ಇದನ್ನು ತೆಗೆಸಿಹಾಕಲು ಯತ್ನಿಸುತ್ತಲೇ ಇದ್ದಾರೆ.

ಕನಿಷ್ಠ ಪಕ್ಷ, ರಾತ್ರಿಯಾದರೂ ಈ ಜೀವಿಗಳಿಗೆ ವಾಹನಗಳ ಓಡಾಟ, ಜನಗಳ ಗದ್ದಲವಿಲ್ಲದ ನೆಮ್ಮದಿಯ ಸಮಯವನ್ನು ಕಲ್ಪಿಸಿಕೊಡಬೇಕು ಎಂಬುದನ್ನು ಇವರಿಗೆ ಮನದಟ್ಟು ಮಾಡಿಕೊಡುವವರಾದರೂ ಯಾರು? ಇದನ್ನೆಲ್ಲ ನೋಡುವಾಗ, ಇಂಗ್ಲಿಷ್‌ನ ಖ್ಯಾತ ಸಾಹಿತಿ ಡಿ.ಎಚ್ ಲಾರೆ ಬರೆದ ಪದ್ಯವೊಂದು ನೆನಪಾಗುತ್ತದೆ. ‘ಸ್ನೇಕ್’ ಎಂಬುದು ಪದ್ಯದ ಹೆಸರು.

ಮನುಷ್ಯ ಹಾಗೂ ಹಾವೊಂದರ ಮುಖಾಮುಖಿಯ ಈ ಪದ್ಯ, ಮನುಷ್ಯ ಹಾಗೂ ಮೃಗದ ಮುಖಾಮುಖಿಯ ನಡುವೆ ಎದ್ದು ನಿಲ್ಲುವ ಸೂಕ್ಷ್ಮಗಳನ್ನು ನಮ್ಮ ಗಮನಕ್ಕೆ ತರುತ್ತದೆ. ಕವನದ ನಿರೂಪಕ ಕುಡಿಯುವ ನೀರು ತರಲೆಂದು ಸಣ್ಣ ಕೊಳವೊಂದರ ಬಳಿ ಹೋಗುತ್ತಾನೆ: ‘A snake came
to my water-trough On a hot, hot day, and I in pyjamas for the heat, To drink there ʼ ಎಂದು ಪದ್ಯ ಆರಂಭ ವಾಗುತ್ತದೆ. ಹಳದಿ-ಕಂದು ಬಣ್ಣದ ಮಿಶ್ರಣದ ತನ್ನ ಮೈಯನ್ನು ಮೃದುವಾಗಿ ಜಾರಿಸುತ್ತ ಈ ಹಾವು ಕೊಳದ ಮಣ್ಣಿನ ಗೋಡೆಯ ಸಣ್ಣ ಬಿಲದಿಂದ ಹೊರಗೆ ಬಂದು, ಇಳಿದು ನೀರು ಕುಡಿಯಲೆಂದು ಮೂತಿ ಚಾಚುತ್ತದೆ. ಕೊಳದಿಂದ ನೀರು ತುಂಬಿಸಿಕೊಳ್ಳಲೆಂದು ಕೊಡಪಾನ ಹಿಡಿದು ಹೆಜ್ಜೆ ಹಾಕುತ್ತಿದ್ದ ನಿರೂಪಕ ಹಾವನ್ನು ನೋಡಿ ಹಾಗೇ ಥಟ್ಟನೆ ನಿಂತುಬಿಡುತ್ತಾನೆ.

ಹಾವು ನೀರು ಕುಡಿಯುತ್ತಿರುವುದನ್ನು ನೋಡುತ್ತಾನೆ. ಅವನ ಮನಸ್ಸಿನಲ್ಲಿ ಮೊದಲು ಹಾದು ಹೋಗುವ ಭಾವ- ‘ನನಗಿಂತ ಮೊದಲು ಇದು ಬಂದಿದೆ, ನಾನು ಎರಡನೆಯವನು, ನಾನೀಗ ನನ್ನ ಸರದಿಗೆ ಕಾಯಬೇಕು’ ಎನ್ನುವುದು. ಹಾವು ನೀರು ಕುಡಿಯುವುದರ ನಡುವೆ ಒಮ್ಮೆ ತಲೆ ಎತ್ತಿ ಮನುಷ್ಯನತ್ತ ನೋಡಿ ಸೀಳುನಾಲಗೆಯನ್ನು ಒಮ್ಮೆ ಹೊರಚಾಚಿ, ಮತ್ತೆ ನೀರಿನತ್ತ ತಲೆ ಚಾಚುತ್ತದೆ. ನಿರೂಪಕನ ಶಿಕ್ಷಿತ ಬುದ್ಧಿ ಆತನಿಗೆ ‘ಇದು ವಿಷದ ಹಾವು, ಇದನ್ನು ಕೊಲ್ಲು’ ಎಂದು ಎಚ್ಚರಿಸುತ್ತದೆ. ‘ನೀನು ಗಂಡಸಾಗಿದ್ದರೆ ಒಂದು ಕೋಲು ತೆಗೆದುಕೊಂಡು ಅದನ್ನು ಹೊಡೆದು ಹಾಕು’ ಎಂದು ಆತನೊಳಗಿನ ‘ಮೃಗ’ ಎಚ್ಚರಿಸುತ್ತದೆ.

ಆದರೆ ‘ಉರಿವ ಭೂಮಿಯ ಗರ್ಭದಿಂದ’ ಎದ್ದು ತನ್ನ ಕೊಳದ ಅತಿಥಿಯಾಗಿ ಬಂದಿರುವ ಆ ಹಾವನ್ನು ನೋಡುತ್ತಾ ನಿಂತಿರುವ ಆತನಿಗೆ, ಅದನ್ನು ಹೊಡೆದುಹಾಕಲು ಮನಸ್ಸಿಲ್ಲ. ಆದರೆ ತನ್ನ ಈ ನಡೆ ಹೇಡಿತನವೋ, ಔದಾರ್ಯವೋ, ಮಾನವೀಯತೆಯೋ ಎಂಬುದೂ ಅವನಿಗೆ ಗೊತ್ತಾಗು ತ್ತಿಲ್ಲ. ನಿರೂಪಕ ಒಳಗೇ ಅಂಜಿದ್ದಾನೆ. ಆದರೆ ನೆಲದ ನಿಗೂಢ ಗರ್ಭದಿಂದ ಬಂದಿರುವ ಈ ಅತಿಥಿಗೆ ಆತಿಥ್ಯ ನೀಡುವ ಯೋಚನೆ ಕೂಡ ಅವನಲ್ಲಿದೆ. ಒಂದು ಹಂತದಲ್ಲಿ ಹಾವು ನೀರು ಕುಡಿದು ಸಂತೃಪ್ತಗೊಂಡು ಮತ್ತೊಮ್ಮೆ ತಲೆಯೆತ್ತಿ ಸೀಳುನಾಲಗೆ ಚಾಚಿ, ತಲೆ ತಿರುಗಿಸಿ ತಾನು ಬಂದ ಬಿಲದೆಡೆಗೇ ಮರಳಿ ಹೋಗಲು ಅಣಿಯಾಗುತ್ತದೆ. ಬಿಲದಲ್ಲಿ ತಲೆತೂರಿಸಿ ಅರ್ಧಭಾಗ ಹೋಗುತ್ತಿದ್ದಂತೆಯೇ ಆತನಲ್ಲಿ ಭಯ, ಆತಂಕ, ಸಿಟ್ಟು, ಪ್ರತಿಭಟನೆ ಎಲ್ಲವೂ ಎಚ್ಚೆತ್ತುಕೊಳ್ಳುತ್ತವೆ. ಅ ಬಿದ್ದಿದ್ದ ಕೋಲೊಂದನ್ನು ಎತ್ತಿಕೊಂಡು ಅದರೆಡೆಗೆ ಬೀಸಿ ಎಸೆಯುತ್ತಾನೆ.

ಹಾವು ಬಿಲದೊಳಗೆ ಮಿಂಚಿನಂತೆ ಮಾಯವಾಗುತ್ತದೆ. ಹಾವಿನ ಬಾಲಕ್ಕೆ ಈ ಕೋಲು ತಾಗಿರಬಹುದು, ಇಲ್ಲದಿರಬಹುದು. ನಿರೂಪಕನಿಗೂ ಗೊತ್ತಿಲ್ಲ. ಆದರೆ ಆ ಕ್ಷಣದಿಂದ ನಿರೂಪಕನನ್ನು ಪಶ್ಚಾತ್ತಾಪವೊಂದು ಆವರಿಸುತ್ತದೆ. ತನ್ನ ಕೃತ್ಯ ಎಷ್ಟು ಅಸಹ್ಯದ್ದು, ಸಣ್ಣತನದ್ದು ಎಂದು ನಾಚಿಕೆಯೆನಿ ಸುತ್ತದೆ. ‘ಮನುಷ್ಯ ಶಿಕ್ಷಣ’ದಿಂದ ತಾನು ರೂಢಿಸಿಕೊಂಡ ಕೆಲವು ಕ್ಷುಲ್ಲಕ ಗುಣಗಳನ್ನು ಮೀರಿ ನಿಲ್ಲದುದಕ್ಕಾಗಿ ತನ್ನ ಬಗ್ಗೆಯೇ ಆತನಿಗೆ ಅಸಹ್ಯವೆನಿಸುತ್ತದೆ. ‘ಕಿರೀಟವಿಲ್ಲದ, ಪದಚ್ಯುತ ರಾಜ’ನಂತಿದ್ದ ಆ ಹಾವನ್ನು ತಾನು ನಡೆಸಿಕೊಂಡ ಬಗೆಯನ್ನು ನೆನೆದು ಆತ ಕೊರಗುತ್ತಾನೆ. ಜೀವನದಲ್ಲಿ ಕೆಲವೊಮ್ಮೆ ಮಾತ್ರ ಬರಬಹುದಾದ, ರಾಜನ ಜತೆಗಿನ ಮುಖಾಮುಖಿಯನ್ನು ಸರಿಯಾಗಿ ನಡೆಸಲಾಗದಿದ್ದಕ್ಕಾಗಿ
ವಿಷಾದಿಸುತ್ತಾನೆ.

ಲಾರೆನ್ಸನ ಈ ಕವನಕ್ಕೆ ಇನ್ನೂ ಬೇರೆ ತಾತ್ವಿಕ ಅರ್ಥಗಳೂ ಇವೆ. ಆದರೆ ಸದ್ಯ ನಮಗೆ ಈ ಆಯಾಮ ಸಾಕು. ನಾವು ಇಲ್ಲಿ ಎರಡನೆಯವರಾಗಿ ಬಂದವರು. ವನ್ಯಜೀವಿಗಳು ನಮಗಿಂತ ಮೊದಲೇ ಇದ್ದವು. ಅರಣ್ಯಗಳು ಮೊದಲೇ ಇದ್ದವು, ನಾವು ನಗರಗಳನ್ನೂ ಹೆದ್ದಾರಿಗಳನ್ನೂ ಕಟ್ಟಿದೆವು.
ಹೀಗಾಗಿ ವನ್ಯಜೀವಿಗಳು ಇಲ್ಲಿನ ಸಹಜ ಹಕ್ಕುದಾರರು, ನಾವು ಎರಡನೇ ದರ್ಜೆಯ ಪ್ರಜೆಗಳು ಎಂಬುದು ನಮ್ಮ ಅರಿವಿನಲ್ಲಿದ್ದರೆ ಸಾಕು, ಉಳಿದ ಘನತೆ ಸಭ್ಯತೆಗಳು ನಮ್ಮ ನಡತೆಗೆ ತಾನೇತಾನಾಗಿ ದಕ್ಕುತ್ತವೆ.

ಇದನ್ನೂ ಓದಿ: harish kera