ವಿಶ್ಲೇಷಣೆ
ಬಿ.ಎಸ್.ಶಿವಣ್ಣ
ಒಂದು ಮಾನವೀಯ ವಿಚಾರವನ್ನು ಮೊದಲು ಮಾತಾಡೋಣ, ಆಮೇಲೆ ರಾಜಕೀಯ!
ಒಂದೂರಿನಲ್ಲೊಬ್ಬಳು ತಾಯಿ. ಆಕೆಗೆ ನಾಲ್ವರು ಮಕ್ಕಳು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಅದಾಗಿಯೂ ತಾನು ಹೆತ್ತ ಮಕ್ಕಳು ತನ್ನಂತೆ ಕೂಲಿ ಮಾಡುವಂತಾಗಬಾರದೆಂಬುದು ಆ ಹೆತ್ತೊಡಲ ಬಯಕೆ. ಅದಕ್ಕಾಗಿ ಹೊಟ್ಟೆಬಟ್ಟೆ ಕಟ್ಟಿ, ಹಗಲುರಾತ್ರಿ ಬೆವರು ಸುರಿಸಿ ದುಡಿದು ನಾಲ್ವರಿಗೂ ವಿದ್ಯಾಭ್ಯಾಸ ಕೊಡಿಸುತ್ತಾಳೆ.
ಮಕ್ಕಳೇನೋ ಓದಿ ಪದವಿ ಪಡೆದು ಸರಕಾರಿಯೋ ಅಥವಾ ಖಾಸಗಿ ಸಂಸ್ಥೆಯಲ್ಲೋ ಉದ್ಯೋಗ ಪಡೆದು ಅನುಕೂಲಸ್ಥ ರಾಗಿರುತ್ತಾರೆ. ಈ ರೀತಿ ತಾಯಿಯ ಬೆವರ ಹನಿಯಿಂದ ಮೇಲೆ ಬಂದ ಅದೆಷ್ಟೋ ಮಕ್ಕಳಿಗೆ ತಮ್ಮ ಹೆತ್ತಮ್ಮ ಇನ್ನಾದರೂ ಸುಖವಾಗಿರಲಿ ಎಂಬ ಭಾವನೆ ಇರುವುದಿಲ್ಲ.
ಆಕೆಯ ನಿತ್ಯದ ಖರ್ಚು, ಔಷಧ, ಸಾಮಾಜಿಕ ಅಗತ್ಯಗಳಿಗೆ ಬೇಕಾದ ಹಣವನ್ನು ಪ್ರತಿ ತಿಂಗಳೂ ಕಳುಹಿಸ ಬೇಕೆಂಬ ಪ್ರಜ್ಞೆಯೂ ಇರುವುದಿಲ್ಲ. ಕರುಳು-ಬಳ್ಳಿ ಸಂಬಂಧವೇ ತನ್ನ ಹೊಣೆಗಾರಿಕೆಯನ್ನು ಮರೆತಾಗ ಆ ತಾಯಿಗೆ ಯಾರು ದಿಕ್ಕು? ಇದು ಬಹುವರ್ಷದಿಂದ ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಕಾಡುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರ ರೂಪದಲ್ಲಿ, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜಂಟಿಯಾಗಿ ಚರ್ಚಿಸಿ ತೆಗೆದುಕೊಂಡ ನಿರ್ಣಯವೇ ಈ ರಾಜ್ಯದ ಪ್ರತಿ ಕುಟುಂಬದ ಮನೆ ಯಜಮಾನಿಗೆ ಮಾಸಿಕ ೨೦೦೦ ರುಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆ.
ಈ ಯೋಜನೆ ಉಳ್ಳವರಿಗಾಗಿ ಮಾಡಿದ್ದಲ್ಲ; ಇಲ್ಲದವರಿಗೆ ಅಥವಾ ಎಲ್ಲಾ ಇದ್ದೂ ಏನೂ ಇಲ್ಲದ ಅಸಹಾಯಕರಿಗಾಗಿ ಮಾಡಿದ್ದು. ಹೆತ್ತ ಮಕ್ಕಳು, ಒಡ
ಹುಟ್ಟಿದವರು ತಮ್ಮ ಅಮ್ಮ ಅಥವಾ ಸೋದರಿಯ ಖಾತೆಗೆ ತಿಂಗಳಾಂತ್ಯಕ್ಕೆ ಹಣ ಹಾಕುವುದನ್ನು ಮರೆತರೂ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಾತ್ರ ತನ್ನ ಈ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಿಲ್ಲ. ಬಹುಶಃ ದೇಶದ ಇತಿಹಾಸದಲ್ಲಿ ಯಾವುದೇ ಸರಕಾರ ಪಾಲಿಸದ ವಾಗ್ದಾನ ವನ್ನು ಗೃಹಲಕ್ಷ್ಮಿಯೂ ಸೇರಿದಂತೆ ಪಂಚ ಗ್ಯಾರಂಟಿಯ ಮೂಲಕ ಸಿದ್ದರಾಮಯ್ಯ ಸರಕಾರ ಈಡೇರಿಸಿದೆ.
ನಾಡಿನ ಯಾವುದೇ ಭಾಗಕ್ಕೆ ಹೋಗಿ ಸಾಮಾನ್ಯ ನಾಗರಿಕನನ್ನು ಪ್ರಶ್ನಿಸಿದರೂ ಸರಕಾರದ ಈ ದಿಟ್ಟ ನಿರ್ಧಾರವನ್ನು ಪ್ರಶಂಸಿಸುತ್ತಿದ್ದಾರೆ. ಆದರೆ ಏನು ಮಾಡೋಣ? ಈ ಪ್ರಪಂಚದಲ್ಲಿ ಕಾಡ್ಗಿಚ್ಚನ್ನಾದರೂ ನಿಯಂತ್ರಿಸಬಹುದು, ಆದರೆ ಹೊಟ್ಟೆಯ ಕಿಚ್ಚನ್ನು ಆರಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಜನಪ್ರಿಯತೆ ಗಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಭರದಿಂದ ಮುನ್ನುಗ್ಗುತ್ತಿರುವಾಗ, ‘ಸಿದ್ದರಾಮಯ್ಯ ಸರಕಾರ ಇನ್ನು ಆರು ತಿಂಗಳಲ್ಲಿ ಬಿದ್ದುಹೋಗುತ್ತದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಭವಿಷ್ಯ ನುಡಿದಿದ್ದಾರೆ. ಇದನ್ನು ಬಾಲಿಶತನಕ್ಕೆ ಹೋಲಿಸುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಆ ಶಬ್ದದಲ್ಲೇ ಅದರ ಅರ್ಥವಿದೆ.
ಬಾಲಕರು ಆಡುವ ಅರ್ಥವಿಲ್ಲದ ಮಾತೇ ಬಾಲಿಶ. ಕುಮಾರಸ್ವಾಮಿಯವರು ಅವರ ಹೆತ್ತವರ ದೃಷ್ಟಿಯಲ್ಲಿ ಇನ್ನೂ ಬಾಲಕ. ಹೀಗಾಗಿ ಅವರ ಮಾತಿ ಗೊಂದು ಕ್ಷಮೆ ನೀಡೋಣ ಎಂದು ಹೇಳುವುದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಕುಮಾರಸ್ವಾಮಿ ಎರಡು ಬಾರಿ ಈ ರಾಜ್ಯದ ಮುಖ್ಯಮಂತ್ರಿಯಾದವರು. ಎಷ್ಟೋ ಸಂದರ್ಭದಲ್ಲಿ ಅವರ ಮಾತು ಅವರ ಹೆತ್ತವರನ್ನು ಹೊರತುಪಡಿಸಿ ಉಳಿದವರ ದೃಷ್ಟಿಯಲ್ಲಿ ಬಾಲಿಶವೇ ಆದರೂ, ರಾಜ್ಯದ ಜನತೆಯ ದೃಷ್ಟಿ ಯಿಂದ ಈ ರೀತಿಯಲ್ಲಿ ಗ್ರಹಿಸುವುದಕ್ಕೆ ಸಾಧ್ಯವಿಲ್ಲ.
ಹೀಗಾಗಿ ಇದು ಅಪ್ಪಟ ಮತ್ಸರದ ಮಾತು ಎಂಬುದರಲ್ಲಿ ಅನುಮಾನವೇ ಬೇಡ. ಅಷ್ಟಕ್ಕೂ, ಸಿದ್ದರಾಮಯ್ಯ ಅವರ ಸರಕಾರ ಇನ್ನು ಆರು ತಿಂಗಳಲ್ಲಿ ಬಿದ್ದುಹೋಗುತ್ತದೆ ಎಂದು ಕುಮಾರಸ್ವಾಮಿ ಕನಸು ಕಾಣುವುದಕ್ಕೆ ಅದೇನು ಬಿಡದಿಯ ತೆಂಗಿನ ತೋಟದಲ್ಲಿ ಕುಮಾರಸ್ವಾಮಿ ನೆಟ್ಟು ಬೆಳೆಸಿದ ತೆಂಗಿನ
ಮರದ ಎಳನೀರೇ? ಅಲ್ಲ ತಾನೇ? ಇದು ರಾಜ್ಯದ ಆರು ಕೋಟಿ ಜನರು ಹಲವು ದಶಕಗಳ ಬಳಿಕ ಕೊಟ್ಟ ಭರ್ಜರಿ ಜನಾದೇಶದ ಸರಕಾರ.
ಹೀಗಾಗಿ ಕುಮಾರಸ್ವಾಮಿಯವರ ಈ ಮಾತು ಅಪ್ಪಟ ಅಸೂಯೆಯಿಂದ ಹೊರಹೊಮ್ಮಿದ್ದು ಎನ್ನದೆ ವಿಧಿಯಿಲ್ಲ. ಅಷ್ಟಕ್ಕೂ, ಕುಮಾರಸ್ವಾಮಿಯ
ವರಾಗಲೀ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಾಗಲೀ ತಮ್ಮ ರಾಜಕೀಯ ಜೀವನದಲ್ಲಿ ಒಮ್ಮೆಯೂ ಸಂಪೂರ್ಣ ಜನಾದೇಶದ ಆಧಾರದ ಮೇಲೆ ಅಧಿಕಾರವನ್ನು ಅನುಭವಿಸಿದವರೇ ಅಲ್ಲ. ಕುಮಾರಸ್ವಾಮಿಯವರು ೨ ಬಾರಿ ಮುಖ್ಯಮಂತ್ರಿಯಾಗಿದ್ದೂ ಸಮ್ಮಿಶ್ರ ಸರಕಾರದ ಫಲವೇ.
ಒಮ್ಮೆ ಬಿಜೆಪಿ, ಇನ್ನೊಮ್ಮೆ ಕಾಂಗ್ರೆಸ್ ಜತೆ ಸೇರಿ ಅವರು ಸರಕಾರ ರಚಿಸಿದಾಗ ಜೆಡಿಎಸ್ ಗಳಿಸಿದ್ದ ಶಾಸಕರ ಸಂಖ್ಯೆ ಎಷ್ಟು ಎಂಬುದನ್ನು ಅವರೇ ನೆನಪು ಮಾಡಿಕೊಳ್ಳುವುದು ಉತ್ತಮ. ಅಲ್ಪಮತದಲ್ಲಿ ‘ಲಾಟರಿ ಸಿಎಂ’ ಆದ ಕುಮಾರಸ್ವಾಮಿ ಅವರಿಗೆ ಅವರು ಅಧಿಕಾರದಲ್ಲಿ ಇದ್ದಷ್ಟು ದಿನವೂ ತಮ್ಮ ಸರಕಾರ ಪತನವಾಗುತ್ತದೆ ಎಂಬ ಭೀತಿ ಕಾಡುತ್ತಿತ್ತು. ಹೀಗಾಗಿ ಆ ನೆನಪಿನಲ್ಲಿ ‘ಸಿದ್ದರಾಮಯ್ಯ ಸರಕಾರ ಆರು ತಿಂಗಳಲ್ಲಿ ಪತನವಾಗುತ್ತದೆ’ ಎಂದು ತಮ್ಮ
ಮಾನಸಿಕ ಕ್ಷೋಭೆಯನ್ನು ಹೊರಹಾಕುತ್ತಿದ್ದಾರೆ.
ಇನ್ನು ಮಾಜಿ ಪ್ರಧಾನಿ ದೇವೇಗೌಡರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದು ಕೂಡ ಅವರ ಏಕಮುಖ ಸಾಮರ್ಥ್ಯದಿಂದ ಅಲ್ಲವೇ ಅಲ್ಲ. ಅಂದು ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್, ಸಿದ್ದರಾಮಯ್ಯ ಮತ್ತು ಜಾಲಪ್ಪ ಅವರ ಸಾಥ್ ಇತ್ತು. ಮತ್ತೆ ಹೆಗಡೆಯವರೇ ಮುಖ್ಯ ಮಂತ್ರಿಯಾಗಬೇಕೆಂದು ಜನತಾ ಪರಿವಾರದ ಮನಸುಗಳು ಬಯಸಿದಾಗ, ದೇವೇಗೌಡರ ಜತೆಯಾಗಿ ನಿಂತವರು ಸಿದ್ದರಾಮಯ್ಯ ಮತ್ತು ಜಾಲಪ್ಪ
ಎಂಬುದು ಮರೆತುಹೋಗಿದ್ದರೆ ಕುಮಾರಸ್ವಾಮಿಯವರು ತಮ್ಮ ಪಿತಾಶ್ರೀಯವರಿಂದ ರಾಜಕೀಯ ಇತಿಹಾಸದ ಅವಲೋಕನ ಮಾಡಿಸಿಕೊಳ್ಳುವುದು ಸೂಕ್ತ ಎನ್ನದೆ ವಿಧಿಯಿಲ್ಲ.
ಆದರೆ ಸಿದ್ದರಾಮಯ್ಯನವರು ೨ ಬಾರಿ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೂ ಅತಿಪ್ರಬಲ ಜನಾದೇಶದೊಂದಿಗೆ ಎಂಬುದನ್ನು ಕುಮಾರಸ್ವಾಮಿ ಮರೆಯಕೂಡದು. ೨೦೧೩ರಲ್ಲಿ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಕಾಂಗ್ರೆಸ್ ಗಳಿಸಿದ ಸಂಖ್ಯಾಬಲ ೧೨೦ಕ್ಕೂ ಅಧಿಕ. ಈ
ಬಾರಿಯಂತೂ ೧೩೫ ಶಾಸಕ ಬಲದ ಪ್ರಚಂಡ ಬಹುಮತ. ಕುಮಾರಸ್ವಾಮಿಯವರಾಗಲೀ, ದೇವೇಗೌಡರಾಗಲೀ ಎಂದೂ ಕಾಣದ ಸಂಪೂರ್ಣ ಜನಾ ದೇಶವನ್ನು ಸಿದ್ದರಾಮಯ್ಯ ಅವರು ಎರಡು ಬಾರಿ ಪಡೆದು ಮುಖ್ಯಮಂತ್ರಿಯಾಗಿದ್ದಾರೆ ಎಂಬುದನ್ನು ಈ ಸರಕಾರದ ಪತನ ಬಯಸುವ ಯಾವ ರಾಜಕಾರಣಿಯೂ ಮರೆಯಕೂಡದು. ಹೀಗಿರುವಾಗ ಕುಮಾರಸ್ವಾಮಿಯವರು ರಾಜ್ಯ ಸರಕಾರದ ಪತನದ ಬಗ್ಗೆ ಆಡಿರುವ ಮಾತುಗಳು ಶುದ್ಧ ಹಾಸ್ಯೋ ತ್ಸವದ ಸರಕು ಎನ್ನಬೇಕಷ್ಟೇ!
ಅಂದಹಾಗೆ ಕುಮಾರಸ್ವಾಮಿಯವರೇ, ನೀವು ನಿಮ್ಮ ಅಸ್ತಿತ್ವ ಕಾಪಾಡಿಕೊಳ್ಳುವುದಕ್ಕಾಗಿ ಈಗ ಬಿಜೆಪಿ ಜತೆ ಕೈಜೋಡಿಸಿರಬಹುದು. ಆದರೆ ಹಿಂದೆ
ಇದೇ ಬಿಜೆಪಿಗೆ ಮಾಡಿದ ದ್ರೋಹವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮರೆಯುವುದಕ್ಕೆ ಸಾಧ್ಯವಿಲ್ಲ. ಕಳೆದ ಬಾರಿ ಅಧಿಕಾರ ದಕ್ಕದ
ಕಾರಣಕ್ಕೆ ಬೇಸರಗೊಂಡ ಯಡಿಯೂರಪ್ಪ ವಿಧಾನಸಭೆಯಲ್ಲಿ ನಿಂತು ಘಂಟಾಘೋಷವಾಗಿ ನಿಮ್ಮನ್ನು ‘ವಿಷ ಕಕ್ಕುವ ಸರ್ಪ’ ಎಂದು ಜರೆದಿದ್ದರು. ‘ಇನ್ನು ಮುಂದೆ ನನ್ನ ಹೋರಾಟವೇನಿದ್ದರೂ, ಅಧಿಕಾರಕ್ಕಾಗಿ ಹಪಹಪಿಸುವ ಅಪ್ಪ- ಮಕ್ಕಳ ವಿರುದ್ಧ’ ಎಂದು ಕಿಡಿಕಾರಿದ್ದರು.
ನಿಮ್ಮ ಅನಿವಾರ್ಯಕ್ಕಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಕಾರಣಕ್ಕೆ ಯಡಿಯೂರಪ್ಪ ಆಡಿದ ಮಾತುಗಳನ್ನು ಈ ರಾಜ್ಯದ ಜನತೆ ಮರೆಯಲು ಸಾಧ್ಯವೇ? ಖಂಡಿತ ಇಲ್ಲ. ಅದೇ ರೀತಿ, ಎರಡನೇ ಬಾರಿಗೆ ಸಂಪೂರ್ಣ ಜನಾದೇಶದೊಂದಿಗೆ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರ ಬಗ್ಗೆ ನೀವಾಡುತ್ತಿರುವ ಛದ್ಮವೇಷದ ಆರೋಪದ ಹಿನ್ನೆಲೆ ಏನು ಎಂಬುದನ್ನೂ ಈ ರಾಜ್ಯದ ಮತದಾರರು ಅರಿತುಕೊಂಡಿದ್ದಾರೆ. ಕಳೆದ ವಿಧಾನಸಭಾ
ಚುನಾವಣೆಯಲ್ಲಿ ರಾಜ್ಯದ ಮತದಾರರು ನಿಮ್ಮನ್ನು ಹಾಗೂ ನಿಮ್ಮ ಪಂಚರಂಗಿ ಭರವಸೆಗಳನ್ನು ತಿರಸ್ಕರಿಸಿದ್ದಾರೆ. ಈಗ ಅಸ್ತಿತ್ವ ಉಳಿಸಿಕೊಳ್ಳುವು ದಕ್ಕಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ನಿಮ್ಮ ಗುಳ್ಳೆನರಿ ಬುದ್ಧಿಗೆ ಲೋಕಸಭಾ ಚುನಾವಣೆಯಲ್ಲೂ ರಾಜ್ಯದ ಜನ ಬುದ್ದಿ ಕಲಿಸುತ್ತಾರೆಂಬು ದನ್ನು ಮರೆಯಬೇಡಿ.
ಸರಕಾರದ ಪತನದ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಪತನಗೊಂಡ ನಿಮ್ಮ ಜಾತ್ಯತೀತ ನಿಲುವಿನ ಬಗ್ಗೆ ಕೊಂಚ ಯೋಚಿಸಿ.
(ಲೇಖಕರು ಅಧ್ಯಕ್ಷರು, ಲೋಹಿಯಾ ವಿಚಾರ ವೇದಿಕೆ)