ಮೂರ್ತಿಪೂಜೆ
ಕೆಲ ದಿನಗಳ ಹಿಂದೆ ದಿಲ್ಲಿಗೆ ಹೋಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅನುಸರಿಸಬೇಕಾದ ತಂತ್ರಗಳ ಬಗ್ಗೆ ಈ ಸಂದರ್ಭದಲ್ಲಿ ಉಭಯ ನಾಯಕರು ಚರ್ಚಿಸಿದ್ದಾರೆ. ಈ ವೇಳೆ ಬಿಜೆಪಿ-ಜೆಡಿಎಸ್ ಸೈನ್ಯಗಳ ಮಧ್ಯೆ ಇರಬೇಕಾದ ಹೊಂದಾಣಿಕೆಯ ಬಗ್ಗೆ ಕುಮಾರಸ್ವಾಮಿ
ಪ್ರಸ್ತಾಪಿಸಿ ದ್ದಾರೆ.
ಅವರ ಪ್ರಸ್ತಾಪದ ಇಂಗಿತವನ್ನು ಅರ್ಥಮಾಡಿಕೊಂಡ ಅಮಿತ್ ಶಾ, ‘ಹೌದು ಈ ವಿಷಯದಲ್ಲಿ ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳಲೇಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಕಡ್ಡಿಯಂಥ ಸಮಸ್ಯೆ ಗುಡ್ಡವಾಗಿಬಿಡುತ್ತದೆ. ಹೀಗಾಗಿ ಉಭಯ ಪಕ್ಷಗಳ ಮಧ್ಯದ ಸಮನ್ವಯಕ್ಕಾಗಿ ರಾಧಾ ಮೋಹನದಾಸ್ ಅಗರ್
ವಾಲ್ ಅವರನ್ನು ಕರ್ನಾಟಕಕ್ಕೆ ಕಳಿಸುವ ತೀರ್ಮಾನ ತೆಗೆದುಕೊಂಡಿದ್ದೇವೆ. ಅವರು ಲೋಕಸಭೆ ಚುನಾವಣೆ ಮುಗಿಯುವವರೆಗೂ ಕರ್ನಾಟಕದಲ್ಲಿದ್ದು ಜೆಡಿಎಸ್ ಜತೆಗಿನ ಮೈತ್ರಿಗೆ ಬಿಜೆಪಿ ಕಡೆಯಿಂದ ಹೊಡೆತ ಬೀಳದಂತೆ ನೋಡಿಕೊಳ್ಳುತ್ತಾರೆ’ ಅಂದಿದ್ದಾರೆ.
ಅಂದ ಹಾಗೆ, ಲೋಕಸಭಾ ಚುನಾವಣೆಯನ್ನು ಬಿಜೆಪಿ ಜತೆ ಸೇರಿ ಎದುರಿಸುವುದರಲ್ಲಿ ಜಾತ್ಯತೀತ ಜನತಾದಳಕ್ಕೆ ಎರಡನೇ ಮನಸ್ಸಿಲ್ಲ ಎಂಬುದು ಅಮಿತ್ ಶಾ ಅವರಿಗೆ ಗೊತ್ತು. ಕಾರಣ? ಇವತ್ತು ಕರ್ನಾಟಕದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಬಗ್ಗೆ ಜೆಡಿಎಸ್ ಕುದಿಯುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರಾಗಲೀ, ಕುಮಾರಸ್ವಾಮಿ ಅವರೇ ಆಗಲಿ, ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮೇಲೇಳಲಾಗದಂಥ ಏಟು ಕೊಡಲು
ಕಾಯುತ್ತಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ತಾವು ಜಿದ್ದಾ ಜಿದ್ದಿ ಹೋರಾಟ ಮಾಡುವುದಷ್ಟೇ ಅಲ್ಲ, ಕಾಂಗ್ರೆಸ್ ಕ್ಯಾಂಡಿಡೇಟುಗಳನ್ನು ಸೋಲಿಸಲು ಬಿಜೆಪಿಗೆ ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆ ಎರೆಯುತ್ತಾರೆ.
ಆದರೆ ಸಮಸ್ಯೆ ಇರುವುದು ಕರ್ನಾಟಕದ ಕೆಲ ಬಿಜೆಪಿ ನಾಯಕರಲ್ಲಿ. ಅವರಿಗೆ ಜೆಡಿಎಸ್ ಜತೆ ತಮ್ಮ ಪಕ್ಷ ಮಾಡಿಕೊಂಡಿರುವ ಮೈತ್ರಿಯ ಬಗ್ಗೆ ಒಲವಿಲ್ಲ. ಹೀಗಾಗಿ ಹಾಸನ, ಮಂಡ್ಯ ಸೇರಿದಂತೆ ಜೆಡಿಎಸ್ ಎಲ್ಲೆಲ್ಲಿ ಸ್ಪರ್ಧಿಸಬಹುದೋ ಅಲ್ಲೆಲ್ಲ ಅಡ್ಡೇಟು ಹಾಕುವ ಲೆಕ್ಕಾಚಾರವಿದೆ. ರಾಜ್ಯ ಮಟ್ಟದ ನಾಯಕ ರಲ್ಲಿ ಹೀಗೆ ಜೆಡಿಎಸ್ಗೆ ಅಡ್ಡೇಟು ಹಾಕುವ ಲೆಕ್ಕಾಚಾರ ಇಲ್ಲವಾದರೂ ಸ್ಥಳೀಯ ಮಟ್ಟದಲ್ಲಿ ಬೇರುಬಿಟ್ಟಿರುವ ಕೆಲ ‘ಲೋಕಲ್ ಲೀಡರು’ಗಳು ಇಂಥ ಅಡ್ಡೇಟಿಗೆ ರೆಡಿ ಆಗುತ್ತಿರುವ ಮಾಹಿತಿ ಹಲವು ದಿನಗಳಿಂದ ಅಮಿತ್ ಶಾ ಅವರಿಗೆ ತಲುಪುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಕಿಡಿಕಿಡಿಯಾಗಿರುವ
ಅವರು, ‘ಚುನಾವಣೆಯಲ್ಲಿ ನಮ್ಮವರು ಜೆಡಿಎಸ್ ಪಕ್ಷಕ್ಕೆ ಘಾಸಿ ಮಾಡಿದರೆ ಅದರಿಂದ ಹಾನಿಯಾಗುವುದು ನಮಗೇ.
ಹೀಗಾಗಿ ಈ ವಿಷಯದಲ್ಲಿ ಮೈತ್ರಿಧರ್ಮಕ್ಕೆ ಚ್ಯುತಿಯಾಗದಂತೆ ನೋಡಿಕೊಳ್ಳಿ’ ಅಂತ ರಾಜ್ಯ ನಾಯಕರಿಗೆ ಮೆಸೇಜು ಕಳಿಸಿದ್ದಾರೆ. ಅಷ್ಟೇ ಅಲ್ಲ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪರಮಾಪ್ತರೂ ಆಗಿರುವ ರಾಧಾ ಮೋಹನದಾಸ್ ಅಗರ್ವಾಲ್ ಅವರನ್ನು ಕರ್ನಾಟಕಕ್ಕೆ ಕಳಿಸಿದ್ದಾರೆ. ‘ಅಗರ್ವಾಲ್ ಅವರ ಜತೆ ನಿಮ್ಮ ಪಕ್ಷದ ನಾಯಕರು ಸಂಪರ್ಕದಲ್ಲಿರಲಿ; ಮೈತ್ರಿಗೆ ಧಕ್ಕೆಯಾಗುವ ರೀತಿಯಲ್ಲಿ ಯಾರೇ ನಡೆದುಕೊಂಡರೆ ಅವರ ಬಗ್ಗೆ ಮಾಹಿತಿ ಕೊಡಿ. ಮುಂದಿನದನ್ನು ನಮಗೆ ಬಿಡಿ’ ಅಂತ ಅಮಿತ್ ಶಾ ಅವರು ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ.
ಬಿಜೆಪಿ ವರಿಷ್ಠರ ಚಿಂತೆ ಏನು?: ಅಂದ ಹಾಗೆ, ಕರ್ನಾಟಕದಲ್ಲಿ ಜೆಡಿಎಸ್ ಜತೆಗಿನ ಮೈತ್ರಿಗೆ ತಮ್ಮ ಪಕ್ಷದ ಕೆಲವರು ವಿರುದ್ಧವಾಗಿರುವ ಬೆಳವಣಿಗೆಯನ್ನು ಅಮಿತ್ ಶಾ ಗಂಭೀರವಾಗಿ ಪರಿಗಣಿಸಲು ಮತ್ತೊಂದು ಕಾರಣವಿದೆ. ಅದೆಂದರೆ, ಕರ್ನಾಟಕದ ಚುನಾವಣೆಗೆ ಸಂಬಂಧಿಸಿದಂತೆ ದಿಲ್ಲಿಗೆ ತಲುಪಿರುವ ಲೇಟೆಸ್ಟು ಸರ್ವೆ ರಿಪೋರ್ಟು, ಮೈತ್ರಿಕೂಟದ ಗಳಿಕೆ ಕುಸಿಯುವ ಸಾಧ್ಯತೆಗಳನ್ನು ಗುರುತಿಸಿದೆ. ಅದರ ಪ್ರಕಾರ, ತಕ್ಷಣವೇ ಚುನಾವಣೆ ನಡೆದರೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ೨೧, ಕಾಂಗ್ರೆಸ್ ಪಕ್ಷಕ್ಕೆ ೭ ಸ್ಥಾನಗಳು ಸಿಗಲಿವೆ. ಕಳೆದ ತಿಂಗಳು ಇದೇ ಸರ್ವೇ ಟೀಮು ದಿಲ್ಲಿಗೆ ಕಳಿಸಿದ್ದ ರಿಪೋರ್ಟು, ತಕ್ಷಣ ಚುನಾವಣೆ ನಡೆದರೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ೨೫ ಕ್ಷೇತ್ರಗಳಲ್ಲಿ ಗೆಲುವು ಸಿಗಲಿದೆ ಎಂದಿತ್ತು.
ಆದರೆ ಅದೇ ಟೀಮಿನ ರಿಪೋರ್ಟು ಈಗ ಮೈತ್ರಿಕೂಟದ ಗಳಿಕೆ ಕಡಿಮೆಯಾಗಲಿದೆ ಅಂದಿರುವುದು ಬಿಜೆಪಿ ವರಿಷ್ಠರಲ್ಲಿ ಚಿಂತೆಯನ್ನು ಹುಟ್ಟಿಸಿದೆ. ಹೀಗಾಗಿ ಈ ಸ್ಥಿತಿಗೆ ಏನು ಕಾರಣ ಅಂತ ಪರಿಶೀಲಿಸಿದ ಅವರಿಗೆ ತಮ್ಮ ಪಕ್ಷದ ಕೆಲವರು ಜೆಡಿಎಸ್ಗೆ ಅಡ್ಡೇಟು ಹೊಡೆಯುವ ಲೆಕ್ಕಾಚಾರದಲ್ಲಿರುವುದು ಸ್ಪಷ್ಟವಾಗಿದೆ. ಹಾಗೊಂದು ವೇಳೆ ಇಂಥ ಕಾರಣ ಗಳಿಗಾಗಿ ಕರ್ನಾಟಕದಲ್ಲಿ ತಮ್ಮ ಗಳಿಕೆ ಕಡಿಮೆಯಾದರೆ ರಾಷ್ಟ್ರಮಟ್ಟದಲ್ಲಿ ಅದರ ಪರಿಣಾಮ ಗೋಚರವಾಗಬಹುದು ಎಂಬುದು ಅವರ ಯೋಚನೆ.
ಈ ಮಧ್ಯೆ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ಸಿನ ಗ್ರಾ- ಏರುವ ಲಕ್ಷಣಗಳು ಕಾಣಿಸಿಕೊಂಡಿರುವುದೂ ಅವರ ಆತಂಕಕ್ಕೆ ಕಾರಣ. ಅದರ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಶಕ್ತಿ ಪಡೆದ ಮತದಾರ ವರ್ಗ ಕಾಂಗ್ರೆಸ್ ಕ್ಯಾಂಡಿಡೇಟುಗಳಿಗೆ ಸಾಲಿಡ್ಡು ಶಕ್ತಿ ತುಂಬಲಿದೆ. ಈ ಶಕ್ತಿಯೇ ಕಾಂಗ್ರೆಸ್ಸಿಗೆ ಲಾಭದಾಯಕವಾಗಲಿದ್ದು, ಒಂದು ವೇಳೆ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಅಪಸ್ವರ ಕಂಡರೆ ಕೈ ಪಾಳಯದ ಗಳಿಕೆ
ಎರಡಂಕಿ ದಾಟಬಹುದು. ಸದ್ಯದ ಸ್ಥಿತಿಯಲ್ಲಿ ೨೧:೭ ಇರುವ ಉಭಯ ಶಕ್ತಿಗಳ ಗಳಿಕೆ ಪ್ರಮಾಣ ೧೮:೧೦ ಆದರೂ ಅಚ್ಚರಿಯಿಲ್ಲ ಎಂಬುದು ಬಿಜೆಪಿ ವರಿಷ್ಠರಿಗೆ ದಕ್ಕಿರುವ ಮಾಹಿತಿ.
ಹೀಗಾಗಿ ಎರಡು ತುರ್ತು ಕ್ರಮಗಳಿಗೆ ಮುಂದಾಗಿರುವ ಬಿಜೆಪಿ ನಾಯಕರು, ‘ಮೊದಲನೆಯದಾಗಿ ರಾಜ್ಯ ಬಿಜೆಪಿಯಲ್ಲಿ ನಾಯಕರ ಮಟ್ಟದಲ್ಲಿರುವ ಭಿನ್ನಾಭಿಪ್ರಾಯ ಕೊನೆಯಾಗಿ, ಒಮ್ಮನಸ್ಸಿನ ಹೋರಾಟಕ್ಕೆ ಅಣಿಯಾಬೇಕು. ಎರಡನೆಯದಾಗಿ, ಜೆಡಿಎಸ್ ಜತೆಗಿನ ಮೈತ್ರಿಗೆ ಎಲ್ಲ ರೀತಿಯ ಶಕ್ತಿ ತುಂಬಬೇಕು’ ಅಂತ ರಾಜ್ಯದ ನಾಯಕರಿಗೆ ಸೂಚಿಸಿದ್ದಾರೆ.
ರೆಡಿ ಆಗುತ್ತಿದೆ ಕಾಂಗ್ರೆಸ್ ಟೀಂ: ಈ ಮಧ್ಯೆ ಮೊನ್ನೆ ಮೊನ್ನೆಯವರೆಗೂ ತಣ್ಣಗಿದ್ದ ರಾಜ್ಯ ಕಾಂಗ್ರೆಸ್ ನಾಯಕರು ವಿಧಾನ ಮಂಡಲ ಅಧಿವೇಶನ ಮುಗಿಯುತ್ತಿದ್ದಂತೆಯೇ ಆಕ್ಟೀವ್ ಆಗುತ್ತಿದ್ದಾರೆ. ಅಂದ ಹಾಗೆ ಲೋಕಸಭಾ ಚುನಾವಣೆಯಲ್ಲಿ ಯಾರು ಪಕ್ಷದ ಅಭ್ಯರ್ಥಿಗಳಾಗಬೇಕು ಎಂಬ ವಿಷಯ ದಲ್ಲಿ ಗೊಂದಲ ಇದೆಯಾದರೂ ಅದು ಕ್ರಮೇಣ ಕರಗುತ್ತಿದೆ. ಇನ್ನು ಚುನಾವಣೆಯಲ್ಲಿ ಹಲ ಸಚಿವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ವರಿಷ್ಠರು ಉತ್ಸುಕ ರಾಗಿದ್ದರೂ ಬಹುತೇಕ ಸಚಿವರು ‘ಇಲ್ಲ ಇಲ್ಲ, ನಮಗೆ ಸ್ಪರ್ಧಿಸುವ ಇಚ್ಛೆ ಇಲ್ಲ’ ಎಂದಿದ್ದರು. ಹೀಗೆ ಸ್ಪರ್ಧಿಸುವ ಆಸೆ ಅವರಲ್ಲೇ ಇಲ್ಲ ಎಂದ ಮೇಲೆ ಬಲವಂತದ ಮಾಘಸ್ನಾನ ಏಕೆ? ಎಂಬ ನಿಲುವಿಗೆ ಕಾಂಗ್ರೆಸ್ ವರಿಷ್ಠರು ಬಂದಿದ್ದಾರೆ.
ಪರಿಣಾಮ? ಚಾಮರಾಜನಗರ ಕ್ಷೇತ್ರದಿಂದ ಸಚಿವ ಡಾ.ಎಚ್.ಸಿ.ಮಹದೇಪ್ಪ ಅವರ ಪುತ್ರ ಸುನೀಲ್ ಬೋಸ್ ಕಾಂಗ್ರೆಸ್ ಕ್ಯಾಂಡಿಡೇಟ್ ಆಗುವುದು
ಬಹುತೇಕ ಪಕ್ಕಾ ಆಗಿದೆ. ಇದೇ ರೀತಿ, ಮೊನ್ನೆ ನಡೆದ ಬೆಳಗಾವಿ ಜಿಲ್ಲೆಯ ನಾಯಕರ ಸಭೆಯಲ್ಲಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು, ‘ಬೆಳಗಾವಿಯಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ, ಚಿಕ್ಕೋಡಿಯಿಂದ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ
ಅಭ್ಯರ್ಥಿ ಗಳಾಗಲಿ’ ಅಂತ ಸಲಹೆ ಕೊಟ್ಟಿದ್ದಾರೆ.
ಈ ಮಧ್ಯೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಹಾಲಿ ಶಾಸಕ ರಿಜ್ವಾನ್ ಆರ್ಷದ್ ಇಲ್ಲವೇ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಕ್ಯಾಂಡಿಡೇಟ್ ಆಗುವ ಲಕ್ಷಣಗಳಿವೆ. ಬೀದರ್ನಿಂದ ಸಚಿವ ಈಶ್ವರ ಖಂಡ್ರೆ ಇಲ್ಲವೇ ರಾಜಶೇಖರ ಪಾಟೀಲ್ ಪೈಕಿ ಒಬ್ಬರು ಕ್ಯಾಂಡಿಡೇಟ್ ಆಗಲಿದ್ದರೆ, ಕೊಪ್ಪಳದಿಂದ ರಾಘವೇಂದ್ರ ಇಟ್ನಾಳ್ ಇಲ್ಲವೇ ಸಿಎಂ ಸಿದ್ದರಾಮಯ್ಯ ಹಿಂದಿರುವ ಡಾರ್ಕ್ ಹಾರ್ಸ್ ಅನ್ನಲಾಗುತ್ತಿರುವ ಅಧಿಕಾರಿಯೊಬ್ಬರು ಕ್ಯಾಂಡಿಡೇಟ್ ಆದರೂ ಅಚ್ಚರಿಯಿಲ್ಲ. ಮೈಸೂರು-ಕೊಡಗು ಕ್ಷೇತ್ರದಿಂದ ಲಕ್ಷ್ಮಣ್, ಮಂಡ್ಯದಿಂದ ಸ್ಟಾರ್ ಚಂದ್ರು, ಬೆಂಗಳೂರು ಉತ್ತರ ಕ್ಷೇತ್ರದಿಂದ ಎಸ್.ಟಿ.ಸೋಮಶೇಖರ್ ಇಲ್ಲವೇ ಕುಸುಮ ಕ್ಯಾಂಡಿಡೇಟುಗಳಾಗುವ ಸಾಧ್ಯತೆ ಜಾಸ್ತಿ.
ದಾವಣಗೆರೆಯಿಂದ ಶಾಮನೂರು ಶಿವಶಂಕರಪ್ಪ ಅವರ ಸೊಸೆ ಸ್ಪರ್ಧಿಸುತ್ತಾರೆ ಎಂಬ ಮಾತಿದೆಯಾದರೂ, ಈ ವಿಷಯದಲ್ಲಿ ಶಿವಶಂಕರಪ್ಪ ಅವರೇ ಆಸಕ್ತಿ ತೋರುತ್ತಿಲ್ಲವಾದ್ದರಿಂದ ಸಿದ್ದರಾಮಯ್ಯ ಕ್ಯಾಂಪಿನ ವಿನಯ್ ಕ್ಯಾಂಡಿಡೇಟ್ ಆಗಬಹುದು. ಬಳ್ಳಾರಿಯಿಂದ ವಿ.ಎಸ್.ಉಗ್ರಪ್ಪ, ಚಿತ್ರದುರ್ಗದಿಂದ ಚಂದ್ರಪ್ಪ, ತುಮಕೂರಿನಿಂದ ಮುದ್ದ ಹನುಮೇಗೌಡ, ಶಿವಮೊಗ್ಗದಿಂದ ಗೀತಾ ಶಿವರಾಜ್ ಕುಮಾರ್, ಬಾಗಲಕೋಟೆಯಿಂದ ವೀಣಾ ಕಾಶಪ್ಪನವರ್
ಹೆಸರು ಕೇಳಿಬರುತ್ತಿದ್ದು ಒಟ್ಟಾರೆಯಾಗಿ ಇನ್ನೊಂದು ವಾರದಲ್ಲಿ ಕಾಂಗ್ರೆಸ್ಸಿನ ಮೊದಲ ಕಂತಿನ ಅಭ್ಯರ್ಥಿಗಳ ಪಟ್ಟಿ ರೆಡಿ ಆಗುವ ಸಾಧ್ಯತೆಗಳಿವೆ.
ಅರ್ಥಾತ್, ಲೋಕಸಭಾ ಚುನಾವಣೆಯ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ಸಿನ ನಾಯಕರು ಫುಲ್ ಆಕ್ಟೀವ್ ಆಗಿದ್ದಾರೆ. ಜೆಡಿಎಸ್ಗೆ ನಾಲ್ಕು ಸೀಟು ಫಿಕ್ಸ್: ಇನ್ನು ಕರ್ನಾಟಕದ ನೆಲೆಯಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್ ಪಕ್ಷ ಹಾಸನ, ಮಂಡ್ಯ ಸೇರಿದಂತೆ ೪ ಕ್ಷೇತ್ರಗಳನ್ನು
ಪಡೆಯಲಿದೆ. ಇಂಟರೆಸ್ಟಿಂಗ್ ವಿಷಯವೆಂದರೆ, ಕುಮಾರಸ್ವಾಮಿ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿದರಲ್ಲ? ಆ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ‘ಚುನಾವಣೆ ಯಲ್ಲಿ ನಿಮ್ಮ ಪಕ್ಷ ೫ ಕ್ಷೇತ್ರಗಳಿಂದ ಸ್ಪರ್ಧಿಸಲಿ’ ಎಂದಿದ್ದಾರೆ. ‘ಹಳೆ ಮೈಸೂರು ಭಾಗದಲ್ಲಿ ಮಾತ್ರವಲ್ಲ, ಉತ್ತರ ಕರ್ನಾಟಕದ ವಿಜಯಪುರ ಕ್ಷೇತ್ರವನ್ನೂ ನೀವೇ ತೆಗೆದುಕೊಳ್ಳಿ’ ಎಂದಿದ್ದಾರೆ.
ಆದರೆ ಈ ಆಫರ್ ಅನ್ನು ನಿರಾಕರಿಸಿದ ಕುಮಾರ ಸ್ವಾಮಿ, ‘ನಾವು ಎಲ್ಲಿ ಗೆಲ್ಲುವ ವಿಶ್ವಾಸವಿದೆಯೋ ಅಲ್ಲಿ ಮಾತ್ರ ಸ್ಪರ್ಧಿಸುತ್ತೇವೆ. ಹೀಗಾಗಿ ನಮಗೆ ೪ ಸೀಟು ಸಾಕು’ ಎಂದಿದ್ದಾರೆ.ಈ ಮಧ್ಯೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟು ಕೊಡಬೇಕು ಎಂಬ ಕೂಗು ಬಿಜೆಪಿಯ ಕೆಲವರಿಂದ ಕೇಳುತ್ತಿದೆಯಾದರೂ ಅಮಿತ್ ಶಾ ಮಾತ್ರ ತಪ್ಪಿಯೂ ‘ಮಂಡ್ಯ ನಮಗೆ ಬೇಕು’ ಅಂತ ಕುಮಾರಸ್ವಾಮಿ ಅವರ ಮುಂದೆ ಪ್ರಸ್ತಾಪಿಸಿಲ್ಲ. ಮೂಲಗಳು ಹೇಳುವಂತೆ, ಮಂಡ್ಯ ಕ್ಷೇತ್ರವನ್ನು ಯಾವ ಕಾರಣಕ್ಕಾಗಿ ಜೆಡಿಎಸ್ಗೆ ಬಿಟ್ಟು ಕೊಡಬೇಕು ಎಂಬ ಬಗ್ಗೆ ಅಮಿತ್ ಶಾ ಕೈಗೆ ವರದಿ ಹೋಗಿದೆ. ಅದರ ಪ್ರಕಾರ, ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಜಿಲ್ಲೆಯ ಕ್ಷೇತ್ರಗಳಲ್ಲಿ ಜೆಡಿಎಸ್ ಐದು ಲಕ್ಷದ ಅರವತ್ತು ಸಾವಿರ ಮತಗಳನ್ನು ಗಳಿಸಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಪಡೆದ ಒಟ್ಟು ಮತಗಳ ಸಂಖ್ಯೆ ಎರಡು ಲಕ್ಷದ ಗಡಿತಲುಪಿಲ್ಲ. ಹೀಗಾಗಿ ರಿಪೋರ್ಟು ನೋಡಿದ ಅಮಿತ್ ಶಾ ‘ಇದು ಜೆಡಿಎಸ್ಗೆ ಸಲ್ಲಬೇಕಾದ ಕ್ಷೇತ್ರ. ಅದು ನಮಗೆ ಬೇಕು ಅಂತ ಕ್ಲೇಮು ಮಾಡಲು ಸಾಧ್ಯವಿಲ್ಲ’ ಅಂತ ಸ್ವಪಕ್ಷದ ನಾಯಕರಿಗೆ ಹೇಳಿದ್ದಾರೆ.