Thursday, 14th November 2024

ಹೆಚ್‌ಡಿಕೆಯವರೇ ಹತಾಶೆಯ ಶೃಂಗದಿಂದ ನಿಧಾನಕ್ಕೆ ಇಳಿಯಿರಿ !

ಸಮಾಲೋಚನೆ

ಬಿ.ಎಸ್.ಶಿವಣ್ಣ ಮಳವಳ್ಳಿ

sprakashbjp@gmail.com

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಕಳೆದ ಕೆಲ ದಿನಗಳಿಂದ ಜೇಬು ತಡವಿಕೊಳ್ಳುತ್ತಿದ್ದಾರೆ. ನನ್ನ ಬಳಿ ಪೆನ್ ಡ್ರೈವ್ ಇದೆ. ಅದನ್ನು ಬಹಿರಂಗಪಡಿಸಿದರೆ ಈ ಸರಕಾರದ ಸಚಿವ ಸಂಪುಟದ ಪ್ರಭಾವಿ ಸಚಿವರೊಬ್ಬರು ಅಧಿಕಾರದಿಂದ ಪತನ ಗೊಳ್ಳುತ್ತಾರೆ ಎಂದು ವಿಧಾನಸಭೆಯಲ್ಲಿ ಹಾಗೂ ಮಾಧ್ಯಮದ ಎದುರು ಹೂಂಕರಿಸುತ್ತಿದ್ದಾರೆ.

ಇಷ್ಟು ದಿನ ಶಾಸನ ಸಭೆಯಲ್ಲಿ ಕಡತ ತೋರಿಸಿ ‘ಇದರಲ್ಲಿ ಎಲ್ಲ ಇದೆ. ಬಿಚ್ಚಿಡುತ್ತೇನೆ’ ಎಂದು ಬೆದರಿಕೆ ತಂತ್ರ ಪ್ರದರ್ಶನ ಮಾಡುತ್ತಿದ್ದ ಅವರು ಈಗ ತುಸು ಅಪ್ಡೇಟ್ ಆಗಿದ್ದಾರೆ. ಕಾಗದದಿಂದ ಪೆನ್‌ಡ್ರೈವ್‌ಗೆ ತಮ್ಮ ತಾಂತ್ರಿಕತೆಯನ್ನು ವೃದ್ಧಿಸಿ ಕೊಂಡಿದ್ದಾರೆ. ಅದನ್ನು ಬಿಟ್ಟರೆ ಇಲ್ಲಿಯವರೆಗೆ ನಡೆದುಕೊಂಡಂತೆ ಎಲ್ಲವೂ ಠುಸ್ ಪಟಾಕಿ. ನನ್ನ ಬಳಿ ದಾಖಲೆ ಇದೆ ಎಂದು ಕುಮಾರಸ್ವಾಮಿಯವರು ರಾಜಕೀಯ ವಿರೋಧಿಗಳನ್ನು ಬೆದರಿಸುವುದು ಇದೇ ಮೊದಲೇನಲ್ಲ.

ಹಲವಾರು ಸಂದರ್ಭದಲ್ಲಿ ಅವರು ಈ ರೀತಿ ನಡೆದುಕೊಂಡು ‘ನಿಗೂಢ’ ರೀತಿಯಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಕುಮಾರಸ್ವಾಮಿ ಯವರ ದಾಖಲೆ ಪ್ರದರ್ಶನದ ಅಸಲಿಯತ್ತೇ ನೆಂದು ಹುಡುಕುತ್ತಾ ಹೋದರೆ ಅದೇ ಒಂದು ವಿಸ್ತಾರವಾದ ಸಂಶೋಧನ  ಪ್ರಬಂಧ ವಾಗಬಹುದು. ಹಾಗೆ ನೋಡಿದರೆ ಕಡತ ತೋರಿಸಿ ರಾಜಕೀಯ ವಿರೋಧಿಗಳನ್ನು ಹಣಿಯುವ ತಂತ್ರಗಾರಿಕೆ ಅವರ ಪಿತ್ರಾರ್ಜಿತ ಆಸ್ತಿಯಲ್ಲಿ ಒಂದೆಂದರೆ ತಪ್ಪಾಗಲಾರದು. ಏಕೆಂದರೆ ಕುಮಾರಸ್ವಾಮಿಯವರ ದಾಖಲೆ ಪ್ರದರ್ಶನ ದಿಂದ ಇದುವರೆಗೆ ಯಾವ ಸರಕಾರವೂ ಪತನವಾಗಿಲ್ಲ, ಯಾವ ಸಚಿವರೂ ರಾಜೀನಾಮೆ ನೀಡಿಲ್ಲ.

ಅಷ್ಟಕ್ಕೂ ಕುಮಾರಸ್ವಾಮಿ ಪೆನ್‌ಡ್ರೈವ್ ಇದೆ ಎಂದು ಜೇಬು ದಡವಿ ಕೊಂಡ ತಕ್ಷಣ ಕ್ಯಾಬಿನೆಟ್‌ನ ವಿಕೆಟ್ ಪತನವಾಗುವುದಕ್ಕೆ
ಅದೇನು ಅವರ ತೋಟದ ಮನೆಯ ಸಪೋಟ ಹಣ್ಣುಅಲ್ಲವಲ್ಲ?! ಆದರೂ ಕುಮಾರಸ್ವಾಮಿ ಈ ಬೆದರಿಕೆ‘ಪೊಲಿಟಿಕ್ಸ್’ ಪ್ರದರ್ಶನ ಮಾಡುವುದಕ್ಕೆ ಕಾರಣ ಹತಾಶೆ. ಮೇ ೧೩ರಂದು ಪ್ರಕಟವಾದ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಅವರನ್ನು ಸಂಪೂರ್ಣವಾಗಿ ಧೃತಿಗೆಡಿಸಿದೆ. ಸಿದ್ದರಾಮಯ್ಯನವರು ದಾಖಲೆಯ ಬಹುಮತದೊಂದಿಗೆ ಮತ್ತೆ ಮುಖ್ಯಮಂತ್ರಿಯಾಗಿರುವುದು ಅವರ ನಂಬಿಕೆಯ ಗೋಪುರವನ್ನು ಧ್ವಂಸ ಮಾಡಿದ್ದು, ರಾಜಕೀಯವಾಗಿ ನಿರುದ್ಯೋಗಿಯಾಗಿರುವ ಅವರೀಗ ಬ್ಲ್ಯಾಕ್ ಮೇಲ್ ಪೊಲಿಟಿಕ್ಸ್‌ಗೆ ಇಳಿದಿದ್ದಾರೆಂದರೆ ತಪ್ಪಾಗಲಾರದು.

ಅಂದಹಾಗೆ ಕಳೆದ ಸರಕಾರದ ಅವಧಿಯಲ್ಲಿ ಕುಮಾರ ಸ್ವಾಮಿ ವಿಧಾನಸಭೆಗೆ ಬಂದು ಜನಪರ ವಿಚಾರದ ಬಗ್ಗೆ ಶಾಸನಸಭೆಯ ಗಮನ ಸೆಳೆಯುವುದನ್ನೇ ಮರೆತು ಬಿಟ್ಟಿದ್ದರು. ಕಳೆದ ವರ್ಷ ನಡೆದ ಬೆಳಗಾವಿ ಅಽವೇಶನಕ್ಕೆ ಗೈರು ಹಾಜರಾಗಿದ್ದು ಮಾತ್ರವಲ್ಲ, ಅಧಿವೇಶನಕ್ಕೆ ಬಂದು ಮಾತನಾಡಿ ಏನನ್ನು ಸಾಽಸುವುದಿದೆ. ಯಾವ ಪುರುಷಾ ರ್ಥಕ್ಕೆ ಕಲಾಪ ನಡೆಸುತ್ತೀರಿ ಎಂದು ಪ್ರಶ್ನಿಸಿದ್ದರು. ಆದರೆ ತಮ್ಮ ರಾಜಕೀಯ ಎದುರಾಳಿಗಳ ಚಾರಿತ್ರ್ಯ ಹರಣ ಮಾಡುವುದಕ್ಕೆ ಸಣ್ಣ ಕಾಗದದ ತುಂಡು ಸಿಕ್ಕರೂ ಸದನದಲ್ಲಿ ಪ್ರತ್ಯಕ್ಷರಾಗಿ ರಣರಂಗ ಸೃಷ್ಟಿಸುವ ಪ್ರಯತ್ನ ನಡೆಸಿದ್ದನ್ನು ನಾವೆಲ್ಲ ಕಂಡಿದ್ದೇವೆ. ಈಗ ಮತ್ತೆ ತಮ್ಮ ಹಳೆಯ
ಚಾಳಿಯನ್ನು ಮುಂದುವರಿಸಿದ್ದು, ಸದನದ ನಿಯಮಾವಳಿಗಳನ್ನು ತಮ್ಮ ರಾಜಕೀಯ ಹತಾಶೆ ಪ್ರದರ್ಶನಕ್ಕೆ ದುರ್ಬಳಕೆ
ಮಾಡಿ ಕೊಳ್ಳುತ್ತಿದ್ದಾರೆ.

ಮಾತ್ರವಲ್ಲ ಸದನವನ್ನು ತಮ್ಮ ಖಾಸಗಿ ಸ್ವತ್ತೆಂಬಂತೆ ಬಳಸಿಕೊಳ್ಳುತ್ತಿದ್ದು, ಎಲ ದಕ್ಕೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರಿನ ರಕ್ಷಣೆ ಪಡೆಯಲು ಯತ್ನಿಸಿದಂತೆ ಕಾಣುತ್ತಿದೆ. ಇದರ್ಥ ಕುಮಾರ ಸ್ವಾಮಿ ರಾಜಕೀಯವಾಗಿ ಅಪ್ರಸ್ತುತರಾಗುತ್ತಿರುವುದು
ಮಾತ್ರವಲ್ಲ, ಅವರ ವಿಚಾರಧಾರೆಗಳಿಗೆ ಈ ರಾಜ್ಯದ ಜನ ಸೊಪ್ಪು ಹಾಕುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಹೀಗಾಗಿ ಕುಮಾರ ಸ್ವಾಮಿ ಯವರ ಪೆನ್ ಡ್ರೈವ್ ಪ್ರದರ್ಶನ ಅವರು ಇದುವರೆಗೆ ನಡೆಸಿದ ರಾಜಕೀಯ ಪ್ರಹಸನಗ ಇನ್ನೊಂದು ಅಧ್ಯಾಯವಷ್ಟೇ. ಅದಕ್ಕೆ ಮೂರು ಕಾಸಿನ ಪ್ರಯೋಜನವಿಲ್ಲ.

ರಾಜ್ಯ ರಾಜಕಾರಣದಲ್ಲಿ ‘ಕೊಟ್ಟ ಕುದುರೆಯ ಕಾಲು ಕತ್ತರಿಸುವ’ ರಾಜಕಾರಣಿ ಯಾರಾದರೂ ಇದ್ದರೆ ಅದು ಕುಮಾರಸ್ವಾಮಿ. ಅದಕ್ಕೆ ಹಲವು ಉದಾಹರಣೆಗಳನ್ನು ನೀಡ ಬಹುದು. ಈ ಹಿಂದೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ನೇತೃತ್ವದಲ್ಲಿ ರಚನೆಯಾದ ‘ಕಾಂಗ್ರೆಸ್-ಜೆಡಿಎಸ್’ ಮೈತ್ರಿ ಸರಕಾರವನ್ನು ಕೆಡವಿ ಬಿಜೆಪಿ ಜತೆ ಕೈ ಜೋಡಿಸಿ ಮುಖ್ಯ ಮಂತ್ರಿಯಾಗುವ ಮೂಲಕ ರಾಜಕಾರಣದ ಮುಂಚೂಣಿಗೆಬಂದ ಅವರು, ತಮ್ಮ ೨೦ ತಿಂಗಳು ಅಧಿಕಾರಾವಧಿ ಮುಕ್ತಾಯವಾಗುತ್ತಿದ್ದಂತೆ ಯಡಿಯೂರಪ್ಪ ಹಾಗೂ ಬಿಜೆಪಿಗೆ ಕೈ ಕೊಟ್ಟು ವಿಶ್ವಾಸದ್ರೋಹದ ರಾಜಕಾರಣಕ್ಕೆ ಮುನ್ನುಡಿ ಇಟ್ಟರು. ಆ ಬಳಿಕ ನಡೆದ ಚುನಾವಣೆಯಲ್ಲಿ ಜೆಡಿಎಸ್ ೨೦ ಸೀಟಿಗೆ ಇಳಿದಿದ್ದು ಮಾತ್ರವಲ್ಲ ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬರುವುದಕ್ಕೂ ಕಾರಣೀಭೂತರಾದರು.

ಇದಾದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ  ಬಂದಾಗ ದಾಖಲೆ ಪ್ರದರ್ಶನದ ಕೆಟ್ಟ ರಾಜಕಾರಣಕ್ಕೆ ಕೈ ಹಾಕಿದರು. ೨೦೧೮ರಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಿ ಕಾಂಗ್ರೆಸ್‌ನ ದಯೆಯೊಂದಿಗೆ ಮತ್ತೆ ಮುಖ್ಯಮಂತ್ರಿಯಾದ ಅವರು ಆಡಳಿತ ಕೇಂದ್ರವನ್ನು ಖಾಸಗಿ ಹೊಟೇಲ್‌ಗೆ ಸ್ಥಳಾಂತರಿಸಿದ ವಿಕಾರ ರಾಜಕಾರಣದ ಪ್ರವೃತ್ತಕರಾದರು. ನಾನ್ನೊಂದು ಸಾಂದರ್ಭಿಕ ಶಿಶು, ಪುಣ್ಯಾತ್ಮ ರಾಹುಲ್ ಗಾಂಧಿಯ ಕೃಪೆಯಿಂದ ಮುಖ್ಯಮಂತ್ರಿಯಾದೆ ಎಂದು ಬಹಿರಂಗ ಹೇಳಿಕೆ ಕೊಟ್ಟ ಅವರು ಅಧಿಕಾರ ಭಿಕ್ಷೆಯನ್ನು ಕೊಟ್ಟ ಕಾಂಗ್ರೆಸ್ ಬಗ್ಗೆ ಒಂದು ದಿನವೂ ಋಣಿಯಾಗಿರಲಿಲ್ಲ.

ಮುಖ್ಯಮಂತ್ರಿಯಾಗಿದ್ದಷ್ಟು ದಿನವೂ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಸಲತ್ತು ರೂಪಿಸುವ, ದ್ವೇಷ ಕಕ್ಕುವ ಮೂಲಕ ನಿಜವಾದ ಅರ್ಥದಲ್ಲಿ ರಾಜಕಾರಣದ ವಿಷಕಂಠನಾದರು. ರಾಜ್ಯದಲ್ಲಿ ಕೋಮು ವಾದಿ ಸರಕಾರ ಮತ್ತೆ ಅಽಕಾರಕ್ಕೆ ಬರಬಾರದು ಎಂಬ ಏಕಮಾತ್ರ ಕಾರಣಕ್ಕೆ ಸಿದ್ದರಾಮಯ್ಯ, ಕುಮಾರಸ್ವಾಮಿ ಯವರ ಎಲ್ಲ ಕುತ್ಸಿತ ನಡೆಗಳನ್ನು ಸಹಿಸಿಕೊಂಡರು. ಆದರೆ ಇವರ ವೆಸ್ಟ್‌ಎಂಡ್ ಪಾಲಿಟಿಕ್ಸ್‌ನಿಂದ ನೊಂದು ಉಭಯ ಪಕ್ಷದ ಶಾಸಕರು ಪಕ್ಷ ತೊರೆದಾಗ ಸರಕಾರ ಪತನ ಗೊಂಡಿತು.

ಆದರೆ ಈ ಹದಿನಾಲ್ಕು ತಿಂಗಳ ಅವಧಿಯಲ್ಲಿ ಕುಮಾರಸ್ವಾಮಿ ನಡೆಸಿದ ಟ್ರಾನ್ಸ್ ಫರ್ ದಂಧೆಗಳು, ತನಿಖಾ ಪೊಲಿಟಿಕ್ಸ್ ಬಗ್ಗೆ ಅವರು ಎಂದಾದರೂ ಮಾತನಾಡಿದ್ದಾರೆಯೇ? ಬಹಿರಂಗವಾಗಿ ಮಾತನಾಡಲು ಮುಜುಗರ ವಾದರೆ ಅಂತಮುರ್ಖಿಯಾಗಿ ಅವಲೋಕನ ನಡೆಸಿದರೂ ತಾನೆಂತ ಕೆಟ್ಟ ವ್ಯವಸ್ಥೆಯ ಜನಕನಾಗಿದ್ದೇನೆಂಬ ಜ್ಞಾನೋದಯ ಅವರಿಗಾಗುತ್ತಿತ್ತು. ಆದರೆ ಆತ್ಮವಿಮರ್ಶೆ ಎಂಬುದು ಕುಮಾರಸ್ವಾಮಿಯವರ ಪದಕೋಶದಲ್ಲೇ ಇಲ್ಲ. ಅವರದ್ದೇನಿದ್ದರೂ ಪರನಿಂದನೆ ಹಾಗೂ ಸ್ವಾರ್ಥದ ರಾಜಕಾರಣ.
Read E-Paper click here

 

ಈ ಕಾರಣಕ್ಕಾಗಿಯೇ ಕುಮಾರಸ್ವಾಮಿಯವರಿಗೆ ಒಂದು ಕಾಲದಲ್ಲಿ ಆತ್ಮೀಯರಾಗಿದ್ದವರೆಲ್ಲ ಇಂದು ಅವರನ್ನು ತೊರೆದಿದ್ದಾರೆ. ಚಲುವರಾಯಸ್ವಾಮಿ, ಜಮೀರ್ ಅಹ್ಮದ್ ಖಾನ್, ಮಾಗಡಿ ಬಾಲಕೃಷ್ಣ, ಇಕ್ಬಾಲ್ ಅಹ್ಮದ್ ಅನ್ಸಾರಿ, ಗುಬ್ಬಿ ಶ್ರೀನಿವಾಸ್, ಎ.ಟಿ.ರಾಮಸ್ವಾಮಿ, ಶಿವಲಿಂಗೇಗೌಡ ಹೀಗೆ ಬರೆಯುತ್ತಾ ಹೋದರೆ ಪಟ್ಟಿ ದೊಡ್ಡದಾಗಬಹುದು. ಅಷ್ಟಕ್ಕೂ ಕುಮಾರಸ್ವಾಮಿ ಯವರನ್ನು ಇವರೆಲ್ಲ ತೊರೆಯುವುದಕ್ಕೆ ಕಾರಣ ಏನಾಗಿರಬಹುದು? ಮತ್ತದೆ ಸ್ವಾರ್ಥ ಹಾಗೂ ಕುಟುಂಬ ಕೇಂದ್ರಿತ ಬದುಕಲ್ಲವೇ? ಕುಮಾರಸ್ವಾಮಿಯವರ ನಡವಳಿಕೆಯಿಂದ ಬೇಸತ್ತು ದೂರಾದವರೆಲ್ಲರೂ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ ಇದ್ದಾರೆ.

ಅವರೆಲ್ಲ ಜೆಡಿಎಸ್ ಪಾಳಯ ಬದಲಿಸಿ ದಶಕಗಳೇ ಕಳೆದು ಹೋಗಿವೆ. ಆದರೆ ಅವರ್ಯಾರೂ ಸಿದ್ದರಾಮಯ್ಯನವರ ಮೇಲೆ ಚಕಾರ ಎತ್ತದ್ದೇ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆಂದರೆ ನಿಮ್ಮಲ್ಲಿ ಇಲ್ಲದ ಒಳ್ಳೆಯತನ, ಸ್ವಾರ್ಥ ರಹಿತ ನಾಯಕತ್ವ ಕ್ಕಾಗಿಯಲ್ಲವೇ? ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕುಮಾರ ಸ್ವಾಮಿ ಮತ್ತೆ ಅತಂತ್ರ ವಿಧಾನಸಭೆಯ ಕನಸು ಕಂಡಿ ದ್ದರು. ಸಿದ್ದರಾಮಯ್ಯ ಯಾವ ಕಾರಣಕ್ಕೂ ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಭ್ರಮಿಸಿದ್ದರು. ಈ ಬಾರಿ ಬಿಜೆಪಿ ಜತೆ ಸೇರಿ ಅಧಿಕಾರ ಹಿಡಿಯಬೇಕೆಂಬ ದೂರಾಲಾಚನೆ ಅವರದ್ದಾಗಿತ್ತು.

ಹೀಗಾಗಿ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ, ಕಮಿಷನ್ ಹಾವಳಿ, ಕೋಮು ಧ್ರುವೀಕರಣದ ಬಗ್ಗೆ ಅವರು ತುಟಿ
ಬಿಚ್ಚಲೇ ಇಲ್ಲ. ಅವರ ಟ್ವೀಟರ್ ಖಾತೆಯಲ್ಲಿ ಸಮಯ ಸಿಕ್ಕಾಗಲೆಲ್ಲ ಸಿದ್ದರಾಮಯ್ಯನವರನ್ನು ಟೀಕಿಸುವುದು ಮಾತ್ರ ನಡೆದಿತ್ತು. ಕಾಂಗ್ರೆಸ್ ಬಹುಮತ ಪಡೆಯಾರದು, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬಾರದೆಂದು ಇನ್ನಿಲ್ಲದ ಒಳ ರಾಜಕಾರಣ ವನ್ನು ಅವರು ನಡೆಸಿದರು. ನೀನು ಹೊಡೆದಂತೆ ಮಾಡು, ನಾನು ಅತ್ತಂತೆ ಮಾಡುತ್ತೇನೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಡೆದು ಕೊಂಡರು. ಆದರೆ ರಾಜ್ಯದ ಪ್ರಬುದ್ಧ ಮತದಾರ ಈ ಎಲ್ಲ ನಾಟಕಗಳಿಗೆ ಫಲಿತಾಂಶದ ಮೂಲಕ ಉತ್ತರ ನೀಡಿದ್ದಾನೆ.

ಅವರು ನಿಂತ ನೆಲವೇ ಕುಸಿದಿದೆ. ಹಳೆ ಮೈಸೂರು ಭಾಗ ದಲ್ಲಿ ನನ್ನನ್ನು ಮಣಿಸುವುದಕ್ಕೆ ಸಾಧ್ಯವೇ ಇಲ್ಲ ಎಂಬ ಅವರ ಭ್ರಮೆ ಕಳಚಿದೆ. ಬಹುಶಃ ಜೆಡಿಎಸ್ ಜನ್ಮತಾಳಿದ ಬಳಿಕ ಅತಿ ಕಡಿಮೆ ಸ್ಥಾನವನ್ನು ಮತದಾರ ಅವರಿಗೆ ಕರುಣಿಸಿದ್ದಾನೆ. ಈ ಹತಾಶೆ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ದಿನದಿಂದಲೇ ಮತ್ತೆ ದ್ವೇಷದ ರಾಜಕಾರಣ ಪ್ರಾರಂಭಿಸಿದ್ದಾರೆ. ಚುನಾವಣೆಯ ಸೋಲಿನ ನೋವಿನ ಜತೆಗೆ ಅವರನ್ನು ದ್ವೇಷ ಆವರಿಸಿಕೊಂಡಿದೆ. ಸಿದ್ದರಾಮಯ್ಯ,
ಡಿ.ಕೆ.ಶಿವಕುಮಾರ್, ಚಲುವರಾಯ ಸ್ವಾಮಿ, ಜಮೀರ್ ಅಹ್ಮದ್ ರಂಥವರು ಅಧಿಕಾರಕ್ಕೆ ಬಂದಿದ್ದನ್ನು ಜೀರ್ಣಿಸಿಕೊಳ್ಳುವುದು ಅವರಿಗೆ ಸಾಧ್ಯವಾಗುತ್ತಿಲ್ಲ.

ಅದರ ಫಲವೇ ಈಗ ಅವರು ನಡೆಸುತ್ತಿರುವ ಪೆನ್‌ಡ್ರೈವ್ ಪಾಲಿಟಿಕ್ಸ್. ಏನಾದರಾಗಲಿ ಮುಂದಿನ ಐದು ವರ್ಷಗಳ ಕಾಲ ಸಿದ್ದ
ರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಮೇಲೆ ಕೆಸರೆರಚುಮದಕ್ಕೆ ಅವರು ಪ್ರಯತ್ನ ನಡೆಸುತ್ತಿದ್ದರೆ, ಕಾಂಗ್ರೆಸ್ ಸರಕಾರ ತಾನು ಮತದಾರ ಪ್ರಭುಗಳಿಗೆ ಕೊಟ್ಟ ವಾಗ್ದಾನ ವನ್ನು ಮೊದಲ ಬಜೆಟ್‌ನಲ್ಲೇ ಈಡೇರಿಸುವ ಮೂಲಕ ನುಡಿದಂತೆ ನಡೆಯುವ ಸರಕಾರ ಎಂದು ಸಾಬೀತು ಪಡಿಸಿದೆ. ತಮ್ಮ ಅಪಾರವಾದ ಆಡಳಿತಾತ್ಮಕ ಜ್ಞಾನದ ಮೂಲಕ ಸಿದ್ದರಾಮಯ್ಯ ರಾಜ್ಯದ ಸಂಪತ್ತು ರಕ್ಷಣೆಯ ಕೈಂಕರ್ಯವನ್ನು ತೊಟ್ಟಿದ್ದಾರೆ. ಇದ್ಯಾವುದೂ ಕುಮಾರ ಮಿಯವರಿಗೆ ಸಹ್ಯವಾಗುತ್ತಿಲ್ಲ. ಹೊಟ್ಟೆಕಿಚ್ಚಿನ ಕಿಡಿ
ಅವರ ಒಡಲನ್ನೇ ಸುಡುತ್ತಿದೆ. ಕುಮಾರಸ್ವಾಮಿಯವರೇ ಸೈರಿಸಿಕೊಳ್ಳಿ, ಹತಾಶೆಯ ಶೃಂಗದಿಂದ ನಿಧಾನವಾಗಿ ಕೆಳಗಿಳಿಯಿರಿ. ಜಗತ್ತು ಸುಂದರವಾಗಿ ಕಾಣಬಹುದು.