ಶಶಾಂಕಣ
ಶಶಿಧರ ಹಾಲಾಡಿ
ಕೇವಲ 18 ವರ್ಷದ ಖುದಿರಾಮ್ ಬೋಸ್ನನ್ನು ಬ್ರಿಟಿಷರು 1908ರಲ್ಲಿ ಗಲ್ಲಿಗೇರಿಸಿದ ವಿಚಾರದ ಕುರಿತು ಕಳೆದ ವಾರ ಇದೇ ಅಂಕಣದಲ್ಲಿ ಬರೆದಿದ್ದೆ. ಅದನ್ನು ಓದಿದ ಹಲವರು ಆ ಕಥನವನ್ನು ಮೆಚ್ಚಿದ್ದು ಮಾತ್ರವಲ್ಲ, ಖುದಿರಾಮ್ ಬೋಸ್ ಮತ್ತು ಇತರರು ಅಂತಹ ಒಂದು ಹೋರಾಟವನ್ನು ನಡೆಸಲು ಪಡೆದ ಸ್ಫೂರ್ತಿ
ಎಲ್ಲಿಯದು ಎಂದು ತಿಳಿದುಕೊಳ್ಳುವ ಆಸೆಯನ್ನೂ ವ್ಯಕ್ತಪಡಿಸಿ, ಆ ಕುರಿತು ಇನ್ನಷ್ಟು ತಿಳಿದುಕೊಳ್ಳುವ ಅಭಿಲಾಷೆ ವ್ಯಕ್ತಪಡಿಸಿದರು.
ಖುದಿರಾಮ್ ಬೋಸ್ ಮತ್ತು ಪ್ರಫುಲ್ಲ ಚಾಕಿ ಎಂಬ ಇಬ್ಬರು ಹಾಲುಗಲ್ಲದ ತರುಣರು ಬಾಂಬ್ ಎಸೆದು, ಬ್ರಿಟಿಷರ ವಿರುದ್ಧ ತಮ್ಮ ಹೋರಾಟವನ್ನು ಚಾಲೂ ಇಟ್ಟಿದ್ದರು. ಅವರಿಗೆ ಬಾಂಬ್ ಸರಬರಾಜು ಮಾಡುವ ತಂಡವೇ ಬಂಗಾಳದಲ್ಲಿತ್ತು. ಬಂಗಾಳದ ಕೊಲ್ಕೊತ್ತಾ ಆಗ ಬ್ರಿಟಿಷರ ರಾಜಧಾನಿಯಾಗಿದ್ದರಿಂದ, ರಾಜಧಾನಿಯ ಪಕ್ಕದಲ್ಲೇ ಸಿಡಿದ ಈ ಬಾಂಬ್ ಬ್ರಿಟಿಷರನ್ನು ಸಣ್ಣಗೆ ನಡುಗಿಸಿರಲೇಬೇಕು. ಆಗಿನ್ನೂ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸು ಬಂದಿರಲಿಲ್ಲ.
ಅವರು ದೂರದ ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷರ ವಿರುದ್ಧ ಸತ್ಯಾಗ್ರಹವನ್ನು ನಡೆಸುತ್ತಾ, ಜನರನ್ನು ಸಂಘಟಿಸು ತ್ತಿದ್ದರು. ಸಶಸ ಹೋರಾಟದ ಬದಲು ಅಹಿಂಸೆಯಿಂದ ಬ್ರಿಟಿಷರನ್ನು ಎದುರಿಸಬೇಕು ಎಂಬ ತತ್ವವನ್ನು ದಕ್ಷಿಣ ಆಫ್ರಿಕಾದಲ್ಲಿ ಪಾಲಿಸುತ್ತಾ, ಅದನ್ನೇ ಬೋಧಿಸುತ್ತಿದ್ದರು. ಅವರು ಭಾರತಕ್ಕೆ ಬಂದದ್ದು 1915ರಲ್ಲಿ. ಈ ಸಮಯದಲ್ಲಿ ಬಂಗಾಳದಲ್ಲಿ ಕ್ರಾಂತಿಕಾರಿಗಳು ಬ್ರಿಟಿಷರ ವಿರುದ್ಧ ತಮ್ಮದೇ ರೀತಿಯ ಹೋರಾಟವನ್ನು ನಡೆಸಿ, ಬ್ರಿಟಿಷ್ ಅಧಿಕಾರಿಗಳನ್ನು ಸಾಯಿಸಲು ಸಹ ಯತ್ನಿಸುತ್ತಿದ್ದರು. ಖುದಿರಾಮ್ ಬೋಸ್ ಮಾಡಿದ ಕೆಲಸವೆಂದರೆ, ಬಾಂಬ್ ಎಸೆದು ಇಬ್ಬರು ಬ್ರಿಟಿಷರನ್ನು ಸಾಯಿಸಿದ್ದು. ಅವನನ್ನು ಅತ್ಯಂತ ತ್ವರಿತವಾಗಿ ವಿಚಾರಣೆಗೆ ಗುರಿಪಡಿಸಿ, ನಾಲ್ಕೇ ತಿಂಗಳುಗಳಲ್ಲಿ ಅವನಿಗೆ ನ್ಯಾಯದಾನ ನೀಡಿ, ಗಲ್ಲಿಗೆ ಏರಿಸಿದ ಬ್ರಿಟಿಷರ ಕೃತ್ಯದ ಕುರಿತು ಸಹ ಕಳೆದ ವಾರ ಇದೇ ಅಂಕಣದಲ್ಲಿ ಬರೆದಿದ್ದೆ. ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಎಲ್ಲರ ಕೊಡುಗೆ ಯನ್ನೂ ಗುರುತಿಸುವುದು ಸಮಂಜಸ ಎಂದು ತಿಳಿಯುವುದಾದರೆ, ಖುದಿರಾಮ್ ಬೋಸ್, ಅರವಿಂದರು, ಭಗತ್ ಸಿಂಗ್ ಮೊದಲಾದವರ ಹೋರಾಟದ ಹಾದಿ ಯನ್ನು ಗುರುತಿಸಲೇಬೇಕು.
ಖುದಿರಾಮ್ ಬೋಸ್ ಆ ದಿನ ತನ್ನ ಕೈಯಾರೆ ಬಾಂಬ್ ಎಸೆದು, ಕುಖ್ಯಾತ ಎನಿಸಿದ್ದ ಬ್ರಿಟಿಷ್ ನ್ಯಾಯಾಧೀಶ ಕಿಂಗ್ಸ್ ಫೋರ್ಡ್ನನ್ನು ಸಾಯಿಸಲು ಯತ್ನಿಸಿದಾಗ, ಬಾಂಬ್ ಹೋಗಿ ಪಕ್ಕದ ಸಾರೋಟಿಗೆ ಬಿದ್ದಾಗ ಇಬ್ಬರು ಬ್ರಿಟಿಷ್ ಮಹಿಳೆಯರು ಸತ್ತರಲ್ಲಾ, ಆ ಘಟನೆಯನ್ನು ಅನುಸರಿಸುತ್ತಾ ಹೋದರೆ, ನಾವು ಅರವಿಂದರನ್ನು ತಲುಪುತ್ತೇವೆ! ನಿಜ, ಮುಂದೆ ಅಧ್ಯಾತ್ಮ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ, ಪಾಂಡಿಚೇರಿಯಲ್ಲಿ ಆಶ್ರಮ ಸ್ಥಾಪಿಸಿ, ದೇಶ ವಿದೇಶದ ಜಿಜ್ಞಾಸುಗಳನ್ನು ಸೆಳೆದು, ಅವರೆಲ್ಲರಿಗೂ ಅಧ್ಯಾತ್ಮ ಪಥದ ಪರಿಚಯ ಮಾಡಿಕೊಟ್ಟ ಮಹರ್ಷಿ ಅರವಿಂದರು, ಖುದಿರಾಮ್ ಬೋಸ್ನ ಬಾಂಬ್ ಎಸೆತಕ್ಕೆ ಸೂರ್ತಿಯಾಗಿದ್ದರು!
ಇಂದು ಈ ವಿಚಾರಗಳನ್ನೆಲ್ಲಾ ಯೋಚಿಸುತ್ತಾ ಹೋದರೆ ವಿಸ್ಮಯ ಎನಿಸುತ್ತದೆ, ದಿಗ್ಭ್ರಮೆಯೂ ಹುಟ್ಟುತ್ತದೆ. ಅರವಿಂದರು ತರುಣರಾಗಿದ್ದಾಗ ನಡೆಸಿದ ಬ್ರಿಟಿಷರ ವಿರುದ್ಧದ ಸಂಘಟನೆಯ ವಿವರಗಳನ್ನು ತಿಳಿಯುತ್ತಾ ಹೋದರೆ, ಮನಸ್ಸಿನಲ್ಲಿ ಮೂಡುವುದು ಒಂದೇ ಶಬ್ದ – ಅಭೂತಪೂರ್ವ. ಅರವಿಂದರು ಅಥವಾ ಅರಬಿಂದೋ ಘೋಷ್ ಅವರು 15.8.1972ರಂದು ಬಂಗಾಳದಲ್ಲಿ ಜನಿಸಿದರು. ಮುಂದೆ ಇದೇ ದಿನಾಂಕವನ್ನು ನಾವು ಸ್ವಾಂತಂತ್ರ್ಯ ದೊರೆತ ದಿನ ಎಂದು ಆಚರಿಸುತ್ತಿರುವುದು ಕೇವಲ ಆಕಸ್ಮಿಕವೇ ಇರಬಹುದು. ಏಕೆಂದರೆ, ಅರವಿಂದರು ಜನಿಸಿದ ಆ ಕಾಲಘಟ್ಟ, ಅವರ ಕೌಟುಂಬಿಕ ಹಿನ್ನೆಲೆ, ಅವರ ಬಾಲ್ಯ
ಮೊದಲಾದವುಗಳನ್ನು ಕಂಡರೆ, ಅವರ ಕೌಟುಂಬಿಕ ಹಿನ್ನೆಲೆಗೂ, ದಾಸ್ಯ ವಿಮೋಚನೆಗೂ ಸಂಬಂಧ ಕಲ್ಪಿಸಲು ಸಾಧ್ಯವೇ ಇಲ್ಲ.
ಬಂಗಾಳದ ಸ್ಥಿತಿವಂತ ಕುಟುಂಬದಲ್ಲಿ ಜನಿಸಿದ ಅರವಿಂದರು ತಮ್ಮ ಬಾಲ್ಯವನ್ನು ಕಳೆದಿದ್ದು ಇಂಗ್ಲೆಂಡಿನಲ್ಲಿ! ಅವರ ತಂದೆಯು ಬ್ರಿಟಿಷ್ ಸರಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಸಿಸ್ಟಂಟ್ ಸರ್ಜನ್ ಆಗಿದ್ದರು. ತಮ್ಮ ಮಕ್ಕಳು ಇಂಡಿಯನ್ ಸಿವಿಲ್ ಸರ್ವಿಸ್ ಸೇರಬೇಕು, ಬ್ರಿಟಿಷ್ ಸರಕಾರದ ಆ ಪ್ರಮುಖ ಹುದ್ದೆಯನ್ನು
ನಿಭಾಯಿಸಬೇಕು ಎಂಬುದು ಅವರ ತಂದೆ ಡಾ.ಕೃಷ್ಣಧುನ್ ಘೋಷ್ ಅವರ ಅಭಿಲಾಷೆ. ಅದಕ್ಕೆಂದು, ಅರವಿಂದರಿಗೆ ಆರಂಭಿಕ ಶಿಕ್ಷಣವನ್ನು ಡಾರ್ಜಲಿಂಗ್
ನಲ್ಲಿ ಕೊಡಿಸಿದರು. ಆ ಗಿರಿಧಾಮದಲ್ಲಿ ಐರಿಷ್ ನನ್ ಗಳು ನಡೆಸುತ್ತಿದ್ದ ಕ್ರಿಶ್ಚಿಯನ್ ಕಾನ್ವೆಂಟ್ನಲ್ಲಿ ಅರವಿಂದರು ಮತ್ತು ಅವರ ಸಹೋದರರು ಇಂಗ್ಲಿಷ್
ಕಲಿತರು. ಅಂದು ಡಾರ್ಜಲಿಂಗ್ ಒಂದು ಆಂಗ್ಲೊ ಇಂಡಿಯನ್ ಕಾಲೊನಿ ಆಗಿತ್ತು. ಅಂದಿನ ಧನಿಕರೆಲ್ಲರೂ ಇಂಗ್ಲೆಂಡ್ನಲ್ಲಿ ಉನ್ನತ ವಿದ್ಯಾಭ್ಯಾಸ ನಡೆಸುವ ಇರಾದೆ ಹೊಂದಿದವರಾಗಿದ್ದು, ಆರಂಭದಲ್ಲಿ ಇಂಗ್ಲಿಷ್ ಪರಿಚಯ ಪಡೆಯಲು ಡಾರ್ಜಲಿಂಗ್ ನಂತಹ ಊರಿನ ಕಾನ್ವೆಂಟ್ ಶಾಲೆಗೆ ಹೋಗುವುದು ಅಂದಿನ ಪರಿಪಾಠ.
1879ರಲ್ಲಿ ಅರವಿಂದರ ತಂದೆಯು ತಮ್ಮ ಕುಟುಂಬವನ್ನು ಇಂಗ್ಲೆಂಡಿಗೆ ಸ್ಥಳಾಂತರಿಸಿದರು. ಮುಖ್ಯ ಉದ್ದೇಶವೆಂದರೆ ತಮ್ಮ ಮಕ್ಕಳಿಗೆ ಐ.ಸಿ.ಎಸ್.(ಇಂದಿನ
ಐಎಎಸ್) ಓದಿಸುವುದು! ಅರವಿಂದರೂ ಸೇರಿದಂತೆ ಆ ಕುಟುಂಬದ ಮೂರು ಮಕ್ಕಳು ಐ.ಸಿ.ಎಸ್. ಓದಲು ಆರಂಭಿಸಿದರು. ಅವರಲ್ಲಿ ಐಸಿಎಸ್ನ ಕೊನೆಯ ಹಂತ ತಲುಪಿದ್ದು ಅರವಿಂದರು ಮಾತ್ರ. ಆದರೆ, ಅದೇಕೋ ಅರವಿಂದರಿಗೆ ಇಂಡಿಯನ್ ಸಿವಿಲ್ ಸರ್ವಿಸ್ ಸೇವೆ ಮಾಡಲು ಇಷ್ಟವಿಲ್ಲ. ಅಂದು ಬ್ರಿಟಿಷರು ಐಸಿಎಸ್ ಪಾಸಾಗಲು ವಿಧಿಸಿದ್ದ ಹಲವು ಷರತ್ತುಗಳಲ್ಲಿ, ಕುದುರೆ ಸವಾರಿಯೂ ಒಂದು.
ಬೇಕೆಂದೇ ಕುದುರೆ ಸವಾರಿ ಪರೀಕ್ಷೆಗೆ ಅರವಿಂದರು ವಿಳಂಬವಾಗಿ ಹೋಗಿ, ನಪಾಸಾದರು. ಈ ನಡುವೆ ಬರೋಡಾದ ಮಹಾರಾಜರ ಸಂಪರ್ಕ ದೊರಕಿ, ಅರವಿಂದರು 1892ರಲ್ಲಿ ಭಾರತಕ್ಕೆ ವಾಪಸಾದರು. ಬರೋಡಾದಲ್ಲಿ ಸೇವೆ ಸಲ್ಲಿಸುತ್ತಿದ್ದಾಗಲೇ, ಬಂಗಾಳದಲ್ಲಿ ಕ್ರಾಂತಿಕಾರಿಗಳನ್ನು ಸಂಘಟಿಸಿದ್ದು ಅರವಿಂದರ ಹೆಚ್ಚುಗಾರಿಕೆ. ಇದಕ್ಕೆ ಅರವಿಂದರ ಸಹೋದರ ಬರೀಂದ್ರಕುಮಾರ್ ಘೋಷ್ ಸಹ ಕೈಜೋಡಿಸಿದರು.
ಈ ನಡುವೆ ಸ್ವಾಮಿ ವಿವೇಕಾನಂದರ ಪ್ರಭಾವ ಬಂಗಾಲದಲ್ಲಿ ದಟ್ಟವಾಗಿತ್ತು. 1902ರಲ್ಲಿ ವಿವೇಕಾನಂದರು ನಿಧನರಾದರು. ವಿವೇಕಾನಂದರ ಬೋಧನೆಯಿಂದ ಪ್ರಭಾವಿತರಾದ ಸಿಸ್ಟರ್ ನಿವೇದಿತಾ ಎಂಬ ಐರಿಷ್ ಮಹಿಳೆಯು ಅರವಿಂದರ ಜತೆಗೂಡಿ, ಬಂಗಾಳದ ತರುಣರಿಗೆ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಭಾಷಣದ ಮೂಲಕ ಪರಿಚಯಮಾಡಿಕೊಡಲು ಆರಂಭಿಸಿದರು. ಆಗ ಹುಟ್ಟಿದ್ದೇ ಅನುಶೀಲನ ಸಮಿತಿ. ಬ್ರಿಟಿಷರು ರೂಪಿಸಿದ್ದ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಪಾಸಾಗಿ, ಭಾರತಕ್ಕೆ ಬಂದು ಇಲ್ಲಿನ ಯಾವುದಾದರೂ ಜಿಲ್ಲೆಯಲ್ಲಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಾ, ಇಂಗ್ಲಿಷರ ‘ಕಲೆಕ್ಷನ್’ ಕೆಲಸಕ್ಕೆ ನೆರವಾಗುತ್ತಾ, ಕಂದು ಸಾಹೇಬರಾಗಬೇಕಿದ್ದ ಅರವಿಂದರು, ಅನುಶೀಲನ ಸಮಿತಿಯನ್ನು ಹುಟ್ಟುಹಾಕಿದ್ದು ಬಹುಷಃ ಇಪ್ಪತ್ತನೆಯ ಶತಮಾನದ ಪವಾಡಗಳಲ್ಲಿ ಒಂದು.
1902ರಲ್ಲಿ ಸ್ಥಾಪನೆಗೊಂಡ ಅನುಶೀಲನ ಸಮಿತಿಯ ಗುರಿ ಸ್ಪಷ್ಟವಾಗಿತ್ತು – ಬ್ರಿಟಿಷರ ದಬ್ಬಾಳಿಕೆಯನ್ನು ನೋಡುತ್ತಾ ಕೂರುವುದಲ್ಲ, ಬದಲಿಗೆ ಅವರ ವಿರುದ್ಧ
ಹೋರಾಡುವುದು, ಅವರನ್ನು ಮಟ್ಟ ಹಾಕುವುದು. 1902ರಿಂದ ಸುಮಾರು 1930ರ ತನಕ ಅನುಶೀಲನ ಸಮಿತಿಯು ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ
ನಡೆಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅವರ ಹೋರಾಟದಲ್ಲಿ ಬಾಂಬ್ ಎಸೆಯುವುದು, ಬುಡಮೇಲು ಕೃತ್ಯ ನಡೆಸುವುದು, ರೈಲುಗಳನ್ನು ಬೀಳಿಸು ವುದು, ಬ್ರಿಟಿಷರ ಟ್ರೆಜರಿ ದೋಚುವುದು, ಬ್ರಿಟಿಷ್ ಅಽಕಾರಿಗಳನ್ನು ಕೊಲೆ ಮಾಡುವುದು, ಜನರನ್ನು ದಂಗೆ ಏಳಿಸುವುದು ಎಲ್ಲವೂ ಸೇರಿತ್ತು.
ಬ್ರಿಟಿಷರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಆರಂಭಿಸಿದ ಅನುಶೀಲನ ಸಮಿತಿಯನ್ನು ಹುಟ್ಟುಹಾಕಿದವರಲ್ಲಿ ಅರಬಿಂದೋ ಘೋಷ್ ಮತ್ತು ಅವರ ಸೋದರ ಬರೀಂದ್ರ ಕುಮಾರ್ ಘೋಷ್ ಪ್ರಮುಖರು. ಇವರಿಗೆ ಸ್ಫೂರ್ತಿ ಎಂದರೆ ವಿವೇಕಾನಂದರ ಭಾಷಣ, ನಮ್ಮ ದೇಶದ ಶಾಕ್ತ ಸಿದ್ಧಾಂತ ಮತ್ತು ಯುರೋಪ್ ದೇಶ ಗಳಲ್ಲಿ ನಡೆದಿದ್ದ ಕ್ರಾಂತಿಗಳು. ಯುರೋಪಿನಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ಅರವಿಂದರು ಅಲ್ಲಿನ ಇತಿಹಾಸವನ್ನು ಅಧ್ಯಯನ ಮಾಡುತ್ತಾ, ಫ್ರೆಂಚ್ ಕ್ರಾಂತಿ, ಇಟಲಿಯನ್ ರಾಷ್ಟ್ರೀಯವಾದಗಳಿಂದ ಪ್ರಭಾವಿತರಾ ಗಿದ್ದರು. ನಮ್ಮ ದೇಶದಲ್ಲಿ ಬ್ರಿಟಿಷರು ಸ್ಥಳೀಯರ ಮೇಲೆ ದಬ್ಬಾಳಿಕೆ ನಡೆಸುತ್ತಾ, ಶೋಷಣೆ ನಡೆಸುತ್ತಿದ್ದು ದನ್ನು ಕಂಡ ಅನುಶೀಲನ ಸಮಿತಿಯು, ಇದನ್ನು ವಿರೋಧಿಸಲು ಅನುಸರಿಸಿದ ಮಾರ್ಗವೆಂದರೆ ಸಶಸ್ತ್ರ ಹೋರಾಟ.
1905ರಲ್ಲಿ ಬ್ರಿಟಿಷರು ಬಂಗಾಳವನ್ನು ವಿಭಜನೆ ಮಾಡಿದರು. ಆದರೆ ಅದರ ವಿರುದ್ಧ ಸ್ಥಳೀಯರು ಬಲವಾದ ಹೋರಾಟ ನಡೆಸಿದ್ದರಿಂದ, ಅದನ್ನು ರದ್ದು ಮಾಡ ಬೇಕಾಯಿತು. ಅರವಿಂದರು 1906ರಲ್ಲಿ ಬರೋಡಾ ತೊರೆದು, ಬಂಗಾಳಕ್ಕೆ ವಾಪಸಾಗುತ್ತಾರೆ. ಕೊಲ್ಕೊತ್ತಾದ ನ್ಯಾಷನಲ್ ಕಾಲೇಜಿನಲ್ಲಿ ಮೊದಲ ಪ್ರಾಂಶು ಪಾಲರಾಗಿ ನಿಯುಕ್ತರಾಗುತ್ತಾರೆ. ಆದರೆ ಬ್ರಿಟಿಷರ ವಿರುದ್ಧ ಜನರನ್ನು ಸಂಘಟಿಸುವ ಕೆಲಸವನ್ನು ಮಾಡಿದ್ದರಿಂದ, ಪ್ರಾಂಶುಪಾಲರ ಕೆಲಸ ನಿಭಾಯಿಸಲು
ಕಷ್ಟವಾಗುತ್ತದೆ.
1907ರಲ್ಲಿ ಅವರು ಕಾಲೇಜಿನ ಹುದ್ದೆಗೆ ರಾಜೀನಾಮೆ ನೀಡಿ, ಬ್ರಿಟಿಷರ ವಿರುದ್ಧ ಹೋರಾಡಲು ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳುತ್ತಾರೆ. ತೆರೆಯ ಮರೆಯಲ್ಲೇ ಇದ್ದು, ಹಲವು ಯುವಕರನ್ನು ಹೋರಾಟಕ್ಕೆ ತರಬೇತುಗೊಳಿಸುತ್ತಾರೆ. ಅರವಿಂದರ ಸಹೋದರ ಬರೀಂದ್ರ ಕುಮಾರ್ ಘೋಷ್ ಅವರು ಅನುಶೀಲನ ಸಮಿತಿಯ ಅಭಿಯಾನಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡವರಲ್ಲಿ ಒಬ್ಬರು. ಅವರು 1907ರಲ್ಲಿ ಹೇಮಚಂದ್ರ ದಾಸ್ ಎಂಬಾತನನ್ನು ಪ್ಯಾರಿಸ್ಗೆ ಕಳಿಸುತ್ತಾರೆ. ಕಾರಣ! ಬಾಂಬ್ ತಯಾರಿ ತರಬೇತಿ.
ಆಗ ಪ್ಯಾರಿಸ್ನಲ್ಲಿದ್ದ ನಿಕೊಲಾಸ್ ಸಫ್ರಾನ್ಸ್ಕಿ ಎಂಬ ರಷ್ಯನ್ ಕ್ರಾಂತಿಕಾರಿಯನ್ನು ಸಂಪರ್ಕಿಸಿ, ಅವನ ಬಳಿ ಬಾಂಬ್ ತಯಾರಿಕೆಯನ್ನು ನಮ್ಮ ದೇಶದವರಿಗೆ ಹೇಳಿಕೊಡಲು ವ್ಯವಸ್ಥೆ ಮಾಡಲಾಗಿತ್ತು. (1917ರಲ್ಲಿ ರಷ್ಯದಲ್ಲಿ ಕ್ರಾಂತಿ ನಡೆದದ್ದು ಇಲ್ಲಿ ನೆನಪಿಗೆ ಬರುತ್ತದೆ). ಹೇಮ ಚಂದ್ರ ದಾಸ್ ಭಾರತಕ್ಕೆ ವಾಪಸಾದ ನಂತರ, ರಹಸ್ಯವಾಗಿ ಬಾಂಬ್ ತಯಾರಿಸುತ್ತಾನೆ. ಇದಾಗಿ ಒಂದೇ ವರ್ಷ! 1908 ಎಪ್ರಿಲ್ 29. ಬಂಗಾಳದ ಮುಜಫರ್ಪುರದ ಯುರೋಪಿಯನ್ ಕ್ಲಬ್ನ ಗೇಟ್ ಬಳಿ, ರಾತ್ರಿ 8.30ರ ಸಮಯದಲ್ಲಿ ಖುದಿರಾಮ್ ಬೋಸ್ ಮತ್ತು ಪ್ರಫುಲ್ ಚಾಕಿ ಸೇರಿ, ಬ್ರಿಟಿಷ್ ನ್ಯಾಯಾಧೀಶ ಕಿಂಗ್ಸ್ ಫೋರ್ಡ್ ಪಯಣಿಸುತ್ತಿದ್ದ ಸಾರೋಟಿನ ಮೇಲೆ ಬಾಂಬ್ ಎಸೆಯುತ್ತಾರೆ.
ಆದರೆ, ಭಾರತೀಯರ ವಿರುದ್ಧ ಕಟುವಾದ ಶಿಕ್ಷೆ ನೀಡುವಲ್ಲಿ ಕುಖ್ಯಾತನಾಗಿದ್ದ ಕಿಂಗ್ ಫೋರ್ಡ್ ತಪ್ಪಿಸಿಕೊಳ್ಳುತ್ತಾನೆ, ಪಕ್ಕದಲ್ಲೇ ಚಲಿಸುತ್ತಿದ್ದ ಇನ್ನೊಂದು ಸಾರೋಟಿನ ಮೇಲೆ ಬಾಂಬ್ ಬಿದ್ದುದರಿಂದ ಇಬ್ಬರು ಬ್ರಿಟಿಷ್ ಮಹಿಳೆಯರು ಸಾಯುತ್ತಾರೆ. ಒಂದೆರಡು ದಿನಗಳಲ್ಲಿ ಖುದಿರಾಮ್ ಬೋಸ್ನನ್ನು ಬ್ರಿಟಿಷ್ ಪೊಲೀಸರು ಬಂಧಿಸುತ್ತಾರೆ. ನಾಲ್ಕೇ ತಿಂಗಳುಗಳಲ್ಲಿ ಮರಣದಂಡನೆ ವಿಧಿಸುತ್ತಾರೆ. ಅಲಿಪುರ ಬಾಂಬಿಂಗ್ ಪ್ರಕರಣ ಎಂದೇ ಹೆಸರಾಗಿರುವ ಈ ಪ್ರಕರಣದಲ್ಲಿ, ಖುದಿರಾಮ್ ಬೋಸ್ ಮರಣದಂಡನೆಗೆ ಒಳಗಾದಾಗ ಆತನಿಗೆ ಕೇವಲ 18 ವರ್ಷ. ಆದರೆ, ಈ ಪ್ರಕರಣದಲ್ಲಿ ಬ್ರಿಟಿಷರು ಮಾಡಿದ ಒಳಸಂಚು ಸರಳವಲ್ಲ. ಇದೊಂದು ನೆಪ ಮಾಡಿಕೊಂಡು, ಬ್ರಿಟಿಷರು ಅರವಿಂದ್ ಘೋಷ್, ಬರಿಂದ್ರ ಕುಮಾರ್ ಘೋಷ್ ಸೇರಿದಂತೆ 33 ಜನರನ್ನು ಬಂಧಿಸಿದರು!
ಬಾಂಬ್ ಎಸೆದದ್ದು ಖುದಿರಾಮ್ ಬೋಸ್ ಎಂದು ಆತನೇ ಹೇಳಿದ್ದರೂ, ಅರವಿಂದರು ಅವನಿಗೆ ಪ್ರೇರಣೆ ನೀಡಿದರು ಎಂಬ ವಾದ ಮಂಡಿಸಿದ್ದರು ಬ್ರಿಟಿಷ್
ಪೊಲೀಸರು. ಎಂತಿದ್ದರೂ, ಅವರದ್ದೇ ಕಾನೂನು, ಅವರದ್ದೇ ನ್ಯಾಯಾಲಯ, ಅವರ ದೇಶದ ನ್ಯಾಯಾಧೀಶರು. ಅರವಿಂದರನ್ನು ಮತ್ತು ಅವರ ಸಹೋದರ ಬಿರೇಂದ್ರ ನಾಥ ಘೋಷರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸುವ ಇರಾದೆ ಅವರದಾಗಿತ್ತು ಎನಿಸುತ್ತದೆ. ಇದಕ್ಕೆಂದೇ ಅವರು ಒಂದು ಮಾಫಿ ಸಾಕ್ಷಿಯನ್ನು ತಯಾರು ಮಾಡಿದ್ದರು! ವಿಚಾರಣೆ ಆರಂಭವಾದ ನಂತರ, ಜೂನ್ 22ರಂದು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ನಾರ್ಟನ್ ಎಂಬಾತ ಒಂದು ಘೋಷಣೆ ಮಾಡಿದ.
ಆಪಾದಿತರಲ್ಲಿ ಒಬ್ಬನಾಗಿದ್ದ, ಅನುಶೀಲನ ಸಮಿತಿಯ ಸದಸ್ಯ ನರೇಂದ್ರನಾಥ ಗೋಸ್ವಾಮಿಯು, ಸರಕಾರದ ಪರವಾದ ಸಾಕ್ಷಿಯಾಗಿ ಬದಲಾಗಿದ್ದಾನೆ ಮತ್ತು ಆತನಿಗೆ ಕ್ಷಮಾದಾನ ನೀಡಲಾಗುವುದು ಎಂಬ ಸೋಟಕ ಹೇಳಿಕೆ ಅದು. ಅವನ ಬಾಯಿಯಿಂದ ಹೇಳಿಸುವ ಸಾಕ್ಷ್ಯದ ಮೂಲಕ (ಸುಳ್ಳು ಸಾಕ್ಷ್ಯ) ಅರವಿಂದರನ್ನು, ಬಿರೇಂದ್ರ ಕುಮಾರ್ ಘೋಷರನ್ನು ಮರಣದಂಡನೆಗೆ ಗುರಿಪಡಿಸುವ ಸಾಧ್ಯತೆ ಇದೆ ಎಂದು ಗುರುತಿಸಿದ ಬಾರಿನ್ ಘೋಷರು, ಎರಡು ಪಿಸ್ತೂಲುಗಳನ್ನು
ರಹಸ್ಯವಾಗಿ ಜೈಲಿಗೆ ತರಿಸಿಕೊಂಡು, ನರೇಂದ್ರನಾಥ ಗೋಸ್ವಾಮಿಯನ್ನು ಕೊಲೆ ಮಾಡುವ ಯೋಜನೆ ತಯಾರಿಸಿದರು. ಜೈಲಿನ ಅಧಿಕಾರಿಗಳ ಎದುರಿನಲ್ಲೇ,
ಗೋಸ್ವಾಮಿಯ ಮೇಲೆ ಒಂಬತ್ತು ಗುಂಡು ಹಾರಿಸಿ, ಸೇನ್ ಮತ್ತು ದತ್ತಾ ಎಂಬವರು ಸಾಯಿಸಿದರು.
ಅವರಿಬ್ಬರಿಗೂ ಆಮೇಲೆ ಗಲ್ಲುಶಿಕ್ಷೆ ಆಯಿತು. ಮಾಫಿ ಸಾಕ್ಷಿ ಎನಿಸಿದ ಗೋಸ್ವಾಮಿಯ ಕೊಲೆಯಿಂದಾಗಿ, ಅರವಿಂದರು ಮತ್ತು ಬಾರಿನ್ ಕುಮಾರ್ ಘೋಷ್ ಮರಣದಂಡನೆಯ ಸಾಧ್ಯತೆ ಯಿಂದ ಹೊರಬಂದರು. ಯಾವುದೇ ಸಾಕ್ಷಾಧಾರ ಇಲ್ಲದ್ದರಿಂದ ಅರವಿಂದರು ಬಿಡುಗಡೆಯಾದರು. ಬರೀಂದ್ರ ಕುಮಾರ್ ಘೋಷ್ಗೆ 12 ವರ್ಷ ಕರಿನೀರಿನ ಶಿಕ್ಷೆಯಾಗುತ್ತದೆ. ಜೈಲಿನಲ್ಲಿದ್ದಾಗಲೇ ಅರವಿಂದರು ತನಗೆ ವಿವೇಕಾನಂದರ ಬೋಧನೆ ಕೇಳಿಸುತ್ತಿತ್ತು ಎನ್ನುತ್ತಿದ್ದರು. ಜೈಲಿನಿಂದ ಹೊರಬಂದ ನಂತರ ಭೂಗತರಾದರು.
ಏಕೆಂದರೆ, ಅವರನ್ನು ಬಂಧಿಸಲು ಬ್ರಿಟಿಷರು ಇನ್ನೊಂದು ವಾರಂಟ್ ತಯಾರಿಸಿದ್ದರು! ಅಧ್ಯಾತ್ಮದ ಹಾದಿ ಹಿಡಿದಿದ್ದ ಅರವಿಂದರು, ಬ್ರಿಟಿಷರ ವಾರಂಟ್ ಜಾರಿಯಾಗುವ ಮೊದಲೇ , 1910ರಲ್ಲಿ ಪಾಂಡಿಚೇರಿಗೆ ಬಂದರು. ಅಂದು ಅದು ಫ್ರೆಂಚರ ವಸಾಹತು. ಅಲ್ಲಿ ಬ್ರಿಟಿಷರ ಕಾನೂನು ನಡೆಯುವುದಿಲ್ಲವಾದ್ದರಿಂದ ಅರವಿಂದರು ಬಚಾವಾದರು. ಧ್ಯಾನಮಾರ್ಗ ಹಿಡಿದ ಅರವಿಂದರು ಬರವಣಿಗೆ ಆರಂಭಿಸಿದರು. ಅಲ್ಲಿ ಅವರು ಸ್ಥಾಪಿಸಿದ ಆಶ್ರಮ ಇಂದು ಜಗದ್ವಿಖ್ಯಾತವಾಗಿದೆ. ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದ ಅರವಿಂದರು, ಫ್ರೆಂಚ್ ಕಾಲೊನಿಗೆ ತಪ್ಪಿಸಿಕೊಂಡು ಬಂದು ಆಶ್ರಮ ಸ್ಥಾಪಿಸಿದ ಕಥೆ ನಿಜಕ್ಕೂ ರೋಚಕ.