ಶ್ವೇತಪತ್ರ
shwethabc@gmail.com
ನಿಮ್ಮದುರಿಗೆ ಒಂದು ಪ್ರಶ್ನೆ ಇಡುತ್ತ ಇಂದಿನ ಅಂಕಣ ಶುರುವಿಟ್ಟುಕೊಳ್ಳುತ್ತೇನೆ. ಬದುಕಲ್ಲಿ ಒಂದು ವಿಚಾರ ನೀವು ಗಮನಿಸಿ ದ್ದೀರಾ! ನೀವು ಬಹಳ ಒಳ್ಳೆಯ ಮನಃಸ್ಥಿತಿಯಲ್ಲಿದ್ದಾಗ ಎಲ್ಲವನ್ನು, ಎಲ್ಲರನ್ನೂ ನಿಭಾಯಿಸಲು ಸಾಧ್ಯವಾಗುತ್ತದೆ ಹೌದಲ್ಲವೇ?!
ಆರಾಮಾಗಿ ವಿಶ್ರಮಿಸಿ ಎದ್ದ ಮರುಗಳಿಗೆ ಸಮಸ್ಯೆಯೊಂದು ಗಂಭೀರವೆನಿಸುವುದೇ ಇಲ್ಲ. ಹಾಗೇ ಮತ್ತೊಂದು ವಿಷಯ ಸ್ನೇಹಿತರೊಬ್ಬರಿಗೆ ಮಾಡಿದ ಫೋನ್ ಕಾಲ್ ಮನಸಿಗೆ ಅದೊಂದು ರೀತಿ ನೆಮ್ಮದಿ ಮೂಡಿಸುತ್ತದೆ. ನಮ್ಮ ಮಾನಸಿಕ ಆರೋಗ್ಯದ ಮೇಲೆ ಆಗುವ ಪರಿಣಾಮಗಳು ಬದುಕಿನ ಪ್ರತಿ ಆಯಾಮದಲ್ಲೂ ಅನುಭವಕ್ಕೆ ಬರುವಂತಹವು. ನಮ್ಮ ಮನಃಸ್ಥಿತಿ, ದೈಹಿಕ ಆರೋಗ್ಯ, ಸಾಮಾಜಿಕ ಸಂಬಂಧ ಇವೆಲ್ಲವುಗಳ ಪೂರ್ಣ ಮೊತ್ತವೇ ಸಂಪೂರ್ಣ ಯೋಗಕ್ಷೇಮ ಹಾಗೂ ಮಾನಸಿಕ ಆರೋಗ್ಯದ ಒಟ್ಟಾರೆಯ ಅಂಶ.
ಮಾನಸಿಕ ಆರೋಗ್ಯ ಹಾಗೂ ಮಾನಸಿಕ ಯೋಗಕ್ಷೇಮವೆಂಬ ಈ ಎರಡು ಅಂಶಗಳನ್ನು ನಿರೂಪಿಸುವುದು ಕಷ್ಟ ಸಾಧ್ಯ. ವಿಶ್ವ ಆರೋಗ್ಯ ಸಂಸ್ಥೆ ಮಾನಸಿಕ ಯೋಗ ಕ್ಷೇಮವನ್ನು ವ್ಯಾಖ್ಯಾನಿಸುವುದು ಹೀಗೆ-ವ್ಯಕ್ತಿ ತನ್ನ ಸಾಮರ್ಥ್ಯವನ್ನು ಅರಿತು ದಿನನಿತ್ಯದ ಬದುಕಿನ ಒತ್ತಡವನ್ನು ನಿಭಾಯಿಸುತ್ತ, ಸೃಜನಾತ್ಮಕವಾಗಿ ಸರಿದೂಗಿಸುತ್ತ ಆ ಮೂಲಕ ಸಮುದಾ ಯಕ್ಕೂ ಕೊಡುಗೆಯನ್ನು ನೀಡುವುದು. ಸಕಾರಾತ್ಮಕ ಮಾನಸಿಕ ಆರೋಗ್ಯ, ಮಾನಸಿಕ ಹೂಡಿಕೆ ಹೀಗೆ ಹತ್ತು ಹಲವಾರು ನಿರೂಪಣೆಗಳು ಸಹ ನಮ್ಮೆದುರಿಗೆ ತೆರೆದುಕೊಳ್ಳುತ್ತವೆ.
ಸಂಶೋಧನೆಗಳು ತಿಳಿಸುವ ಮತ್ತೊಂದು ಮುಖ್ಯ ಸಂಗತಿ ಏನು ಗೊತ್ತೇ? ಮಾನಸಿಕ ಯೋಗಕ್ಷೇಮವೆಂದರೆ ಒತ್ತಡ ಅಥವಾ ಬೇಗುದಿಗಳಿಲ್ಲದ ಬದುಕಲ್ಲ. ಎಲ್ಲ ಸವಾಲು, ಸಮಸ್ಯೆಗಳ ನಡುವೆಯೇ ಖುಷಿಯನ್ನು ಕಂಡು ಕೊಳ್ಳುವುದು. ಹೀಗೆ ಮಾನಸಿಕ ಯೋಗ ಕ್ಷೇಮದಿಂದಿರುವ ವ್ಯಕ್ತಿಗಳು ಸಾಮರ್ಥ್ಯ, ಸಂತಸ, ಸಂತೃಪ್ತಿಯನ್ನು ಹೊಂದಿರುವವರಾಗಿರುತ್ತಾರೆ. ಮೊನ್ನೆ ಅಂತಾ ರಾಷ್ಟ್ರೀಯ ನಿಯತಕಾಲಿಕೆಯನ್ನು ತಿರುವಿ ಹಾಕುತ್ತಿರುವಾಗ ಬಹಳ ಮುಖ್ಯ ವಿಚಾರವೊಂದು ಗಮನ ಸೆಳೆಯಿತು.
ಯಾವ ವ್ಯಕ್ತಿಗಳಲ್ಲಿ ಹೆಚ್ಚಿನ ಮಾನಸಿಕ ಯೋಗಕ್ಷೇಮತೆ ಕಂಡುಬರುವುದೋ ಅಂತವರು ದೀರ್ಘಕಾಲದ ಆರೋಗ್ಯವನ್ನು, ಆಯುಷ್ಯವನ್ನು ಹೊಂದಿರುತ್ತಾರೆ ಎಂಬುದನ್ನು ಆ ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಮಾನಸಿಕ ಯೋಗಕ್ಷೇಮವು ಒಬ್ಬ ವ್ಯಕ್ತಿ ಯಿಂದ ಮತ್ತೊಬ್ಬ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅಂದರೆ ಮಾನಸಿಕತೆಯು ವ್ಯಕ್ತಿಗತವಾಗಿ ಬದಲಾಗುವುದರ ಜತೆಗೆ ನಮ್ಮ
ಬದುಕಿನ ಪ್ರತ್ಯಕ್ಷ ಅನುಭವದ ಆಧಾರದಲ್ಲಿಯೂ ನಿರ್ಧರಿತವಾಗಿರುತ್ತದೆ. ಹೆಡೋನಿಕ್ ಹಾಗೂ ಯುಡೈ ಮೋನಿಕ್ ಎಂಬ ಎರಡು ಸಂತೋಷದ ಪರಿಕಲ್ಪನೆಯ ಮೂಲಗಳು ಸಹ ನಮ್ಮ ಮಾನಸಿಕ ಯೋಗಕ್ಷೇಮವನ್ನು ಅರ್ಥೈಸುವಲ್ಲಿ ಬಹುಮುಖ್ಯ ಪರಿಣಾಮವನ್ನು ಬೀರುತ್ತವೆ.
ಹೆಡೋನಿಕ್ ಸಂತೋಷದ ಕಲ್ಪನೆಯು ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದಷ್ಟು ಹಿಂದಿನದು. ಗ್ರೀಕ್ ತತ್ವಜ್ಞಾನಿ ಅರಿಸ್ಟಿಪನ್ ಜೀವನದ ಅಂತಿಮ ಗುರಿಯು ಆನಂದವನ್ನು ಹೆಚ್ಚಿಸುವುದು ಎಂದು ಕಲಿಸಿದನು. ಇತಿಹಾಸದುದ್ದಕ್ಕೂ ಹೋಪ್ಸ್ ಮತ್ತು ಬೆಂಥಮ್ ಸೇರಿದಂತೆ ಹಲವಾರು ತತ್ವಜ್ಞಾನಿಗಳು ಈ ಹೆಡೋನಿಕ್ ದೃಷ್ಟಿಕೋನಕ್ಕೆ ಬದ್ಧರಾಗಿzರೆ. ಸಂತೋಷದ ದೃಷ್ಟಿಕೋನ ದಿಂದ ಸಂತೋಷವನ್ನು ಅಧ್ಯಯನ ಮಾಡುವ ಮನಃಶಾಸಜ್ಞರು ಮನಸ್ಸು ಮತ್ತು ದೇಹ ಎರಡರ ಸಂತೋಷಗಳ ವಿಷಯದಲ್ಲಿ ಹೆಡೋನಿಯಾವನ್ನು ಪರಿಕಲ್ಪನೆ ಮಾಡುವ ಮೂಲಕ ವಿಶಾಲ ಜಾಲವನ್ನು ಬಿತ್ತರಿಸುತ್ತಾರೆ, ಈ ದೃಷ್ಟಿಕೋನದಲ್ಲಿ ಸಂತೋ ಷವೂ ಆನಂದವನ್ನು ಹೆಚ್ಚಿಸುವುದು ಮತ್ತು ನೋವನ್ನು ಕಡಿಮೆಗೊಳಿಸುವುದನ್ನು ಒಳಗೊಂಡಿರುತ್ತದೆ.
ಅಮೆರಿಕನ್ ಸಂಸ್ಕೃತಿಯಲ್ಲಿ ಹೆಡೋನಿಕ್ ಸಂತೋಷವನ್ನು ಸಾಮಾನ್ಯವಾಗಿ ಅಂತಿಮ ಗುರಿಯಾಗಿ ಸಾಧಿಸಲಾಗುತ್ತದೆ. ಜನಪ್ರಿಯ ಸಂಸ್ಕೃತಿ, ಸಾಮಾಜಿಕ ಸಂತೋಷದಾಯಕ ದೃಷ್ಟಿಕೋನವನ್ನು ಚಿತ್ರಿಸಲು ಒಲವು ತೋರುತ್ತದೆ ಮತ್ತು ಇದರ ಪರಿಣಾಮವಾಗಿ ಅಮೆರಿಕನ್ನರು ಅದರ ವಿವಿಧ ರೂಪಗಳಲ್ಲಿ ಸಂತೋಷವನ್ನು ಸಾಧಿಸುವ ಅತ್ಯುತ್ತಮ ಮಾರ್ಗವೆಂದು
ನಂಬುತ್ತಾರೆ.
ಅದೇ ಯುಡೈಮೋನಿಕ್ ಸಂತೋಷವೂ ಒಟ್ಟಾರೆಯಾಗಿ ಅಮೆರಿಕನ್ ಸಂಸ್ಕೃತಿಯಲ್ಲಿ ಕಡಿಮೆ ಗಮನವನ್ನು ಪಡೆಯುತ್ತದೆ. ಆದರೆ ಸಂತೋಷ ಮತ್ತು ಯೋಗಕ್ಷೇಮದ ಮಾನಸಿಕ ಸಂಶೋಧನೆಯಲ್ಲಿ ಅತ್ಯಂತ ಪ್ರಾಮುಖ್ಯವನ್ನು ಹೊಂದಿರುತ್ತದೆ. ಹೆಡೋನಿಯಾದಂತೆಯೇ ಯುಡೈಮೋನಿಯಾದ ಪರಿಕಲ್ಪನೆಯು ಕ್ರಿಸ್ತಪೂರ್ವ ನಾಲ್ಕನೇಯ ಶತಮಾನಕ್ಕೂ ಹಿಂದಿನದು. ಅರಿಸ್ಟಾಟಲ್ ತನ್ನ ಕೃತಿಯಾದ ನಿಕೋಮಾಚಿಯನ್ ಎಥಿಕ್ಸ್‌ನಲ್ಲಿ ಇದನ್ನು ಮೊದಲು ಪ್ರಸ್ತಾಪಿಸುತ್ತಾನೆ. ಆತನ ಪ್ರಕಾರ ಸಂತೋಷವನ್ನು ಸಾಧಿಸಲು ಒಬ್ಬ ವ್ಯಕ್ತಿ ತನ್ನ ಸದ್ಗುಣಗಳಿಗೆ ಅನುಗುಣವಾಗಿ ತನ್ನ ಜೀವನವನ್ನು ಸಾಗಿಸಬೇಕು. ಜನರು ತಮ್ಮ ಸಾಮರ್ಥ್ಯವನ್ನು ಪೂರೈಸಲು ಮತ್ತು ಅವರು ಅತ್ಯುತ್ತಮ ವ್ಯಕ್ತಿಗಳಾಗಿರಲು ನಿರಂತರವಾಗಿ ಶ್ರಮಿಸಬೇಕು.
ಸಂತೋಷವನ್ನು ಅಧ್ಯಯನ ಮಾಡಿದ ಹಲವು ಸಂಶೋಧನೆಗಳು ಹೆಡೋನಿಕ್ ಹಾಗೂ ಯುಡೈಮೋನಿಕ್ ಎರಡು ರೀತಿಯ
ಸಂತೋಷಗಳು ಅಗತ್ಯವೆಂದು ಪ್ರತಿಪಾದಿಸುತ್ತಾರೆ. ಹೆಡೋನಿಕ್ ನಡವಳಿಕೆಗಳು ಸಕಾರಾತ್ಮಕ ಭಾವನೆ, ಜೀವನ ತೃಪ್ತಿಯನ್ನು ಹೆಚ್ಚಿಸುತ್ತ ಭಾವನೆಗಳನ್ನು ನಿಯಂತ್ರಿಸಲು ಸಹಾಯ ಮಾಡುವುದರ ಜತೆಗೆ ನಕಾರಾತ್ಮಕ ಭಾವನೆಗಳು ಒತ್ತಡ ಮತ್ತು ಖಿನ್ನತೆ ಯನ್ನು ಸಹ ಕಡಿಮೆಗೊಳಿಸುತ್ತವೆ.
ಏತನ್ಮಧ್ಯೆ ಯುಡೈಮೋನಿಕ್ ನಡವಳಿಕೆಯು ಜೀವನ ದಲ್ಲಿ ಹೆಚ್ಚಿನ ಅರ್ಥ ಮತ್ತು ಉನ್ನತಿಯನ್ನು ಹೆಚ್ಚಿಸುವ ಅನುಭವಗಳಿಗೆ ಜತೆಗೆ ನೈತಿಕ ಸದ್ಗುಣಗಳನ್ನು ಅನುಭವಿಸುವ-ಅನುಭಾವಿಸುವ ಒಂದು ಅಪೂರ್ವ ಭಾವನೆಯಾಗಿರುತ್ತದೆ. ಭಾವನಾತ್ಮಕ ಆರೋಗ್ಯ,ಮಾನಸಿಕ ಯೋಗಕ್ಷೇಮ ಈ ಎರಡು ಮನುಷ್ಯನ ಸಮಾಧಾನ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತವೆ. ಯಾವ ವ್ಯಕ್ತಿಯ ಬದುಕಲ್ಲಿ ಮೂಲಭೂತ ಆಶಯಗಳಾದ ಗಾಳಿ,ನೀರು, ಆಹಾರ, ನಿದ್ರೆ, ರಕ್ಷಣೆ ಇವು ಸಂತೃಪ್ತವಾಗಿ ಪೂರೈಕೆ ಆಗಿರುವುದೋ ಅಲ್ಲಿ ಸಂತಸ ಇನ್ನಷ್ಟು ಹೆಚ್ಚು ಅನುವು ಮಾಡಿಕೊಂಡಿರುತ್ತದೆ. ಈ ಸಂತಸದ ಕೀಲಿ ಕೈಯೇ ಭಾವನಾತ್ಮಕ
ಆರೋಗ್ಯ, ಮಾನಸಿಕ ಯೋಗಕ್ಷೇಮ. ಹಾಗಿದ್ದರೆ ಇದರ ಸಂಪೂರ್ಣ ಭಾವಪರತೆಯನ್ನು ಹೊಂದುವುದು ಹೇಗೆ? ಇದಕ್ಕೆ ಸರಳ ಉತ್ತರ.
೧)ಬದುಕಿಗೆ ಅರ್ಥ ಮತ್ತು ಉದ್ದೇಶ ತುಂಬುವುದು – ಇಲ್ಲಿ ಬದುಕಿಗೆ ಅರ್ಥ ಮತ್ತು ಉದ್ದೇಶವನ್ನು ತುಂಬುವುದೆಂದರೆ ಜಗತ್ತನ್ನೇ ಬದಲಾಯಿಸಿ ಬಿಡುವುದೆಂದರ್ಥವಲ್ಲ, ಬದಲಿಗೆ ನಮ್ಮೊಳಗೆ ನಾವು ಬದಲಾಗುತ್ತ ಹೋಗುವುದು. ಯಾರಿಗೂ ನೋವು ಮಾಡ ದಂತೆ ಬದುಕಿ ಬಿಡುವುದು. ಕೆಲವೊಮ್ಮೆ ಮನಸ್ಸಿಗೆ ಅನಿಸುವುದುಂಟು ಅಯ್ಯೋ ನನ್ನ ಬದುಕಿಗೆ ಅರ್ಥವೇ ಇಲ್ಲದಂತಾಗಿದೆ ಎಂದು. ಚಿಂತಿಸ ಬೇಡಿ ಜಗತ್ತು ನಿಮ್ಮನ್ನು ಹೇಗೆ ನೆನಪಿಟ್ಟುಕೊಳ್ಳಬೇಕೆಂದು ಆಶಿಸುವಿರೋ ಹಾಗೆ ಚಿಕ್ಕ ಬದಲಾವಣೆಗಳೊಂದಿಗೆ ಬದುಕಿ ಬಿಡಿ.
೨) ಸಕಾರಾತ್ಮಕ ಆಲೋಚನೆ – ನೆನಪಿರಲಿ ಇದೊಂದು ಪಾಸಿಟಿವ್ ಮಂತ್ರ. ನೀವು ಹೆಚ್ಚು ಹೆಚ್ಚು ಸಕಾರಾತ್ಮಕತೆಯನ್ನು ಮೈಗೂಡಿಸಿಕೊಳ್ಳುತ್ತ ಬಂದಷ್ಟೂ ಅದು ಸದ್ದಿಲ್ಲದೇ ಬದುಕಿನ ಯೋಗ ಕ್ಷೇಮತೆಯನ್ನು ಹೆಚ್ಚಿಸಿಬಿಟ್ಟಿರುತ್ತದೆ. ಬೇಡದ್ದಕ್ಕೆ ಕುಳಿತು ತಂತ್ರಗಳನ್ನು ಹೆಣೆಯುತ್ತಿರುತ್ತೇವಲ್ಲ, ಅದರ ಬದಲಿಗೆ ಪಾಸಿಟಿವ್ ಮನಸ್ಥಿತಿಗೆ ತಂತ್ರಗಳನ್ನು ಯಾಕೆ ಹೆಣೆಯಬಾರದು? ನಿಮ್ಮ ಭವಿಷ್ಯದ ಕುರಿತಾಗಿ ನಿಮ್ಮ ಕನಸುಗಳನ್ನು ಚೆಂದಕ್ಕೆ ಒಂದೆಡೆ ಬರೆಯಿರಿ. ಆಕಾಶಕ್ಕೆ ಏಣಿ ಹಾಕುವಷ್ಟಲ್ಲದಿದ್ದರೂ ಬದುಕಿನ ಕುರಿತಾದ ಪುಟ್ಟ ಪ್ಲಾನ್‌ಗಳನ್ನು ಬರೆಯಿರಿ. ಈ ಪ್ರಕ್ರಿಯೆ ನಿಮ್ಮೊಳಗೆ ಮಾನಸಿಕ ಶಕ್ತಿಯನ್ನು, ದಿವ್ಯ ಪ್ರೇರಣೆಯನ್ನು ತುಂಬುತ್ತದೆ ಪ್ರಯತ್ನಿಸಿ ನೋಡಿ.
೩)ನೆನಪೇಸುಂದರ-ಇಲ್ಲಿಯ ತನಕ ನಿಮ್ಮ ಬದುಕದ ಸುಂದರ ಘಟನೆಗಳನ್ನು ನೆನಪಿಸಿಕೊಳ್ಳಿ. ಈ ನೆನಪುಗಳು ನೀವು ಕುಗ್ಗಿದಷ್ಟು ನಿಮ್ಮನ್ನು ಚೇತೋಹಾರಿಯಾಗಿ ಮೇಲಕ್ಕೆ ಎತ್ತುವ ಜ್ಞಾಪನೆಗಳಾಗಿರುತ್ತವೆ.
೪) ಸಾಧ್ಯವಾದಷ್ಟು ಬೇರೆಯವರೊಂದಿಗೆ ಉತ್ತಮ ವಾಗಿ ಬದುಕಿ – ಹೀಗೆ ಬದುಕುವುದಿದೆಯಲ್ಲ ಅದು ನಿಮ್ಮ ಜಗತ್ತಿನಂದು ವ್ಯತ್ಯಾಸವನ್ನು ಖಂಡಿತವಾಗಿಯೂ ಮೂಡಿಸುತ್ತದೆ. ಹಂಚಿಕೊಳ್ಳುವುದಿದೆಯಲ್ಲ ನಿಮ್ಮನ್ನು ಹಗುರಾಗಿಸುತ್ತ ಸಾಗುತ್ತದೆ.
೫) ಸ್ನೇಹಪರತೆ-ಸ್ನೇಹ ಪರವಾಗಿ ಬದುಕುವ ಗುಣ ವಿದೆಯಲ್ಲ ಅದಕ್ಕೆ ನಾವು ಹೆಚ್ಚಿನ ಒತ್ತಡವನ್ನು ಶಕ್ತಿಯನ್ನು ವಿನಯೋ ಗಿಸುವ ಅವಶ್ಯಕತೆ ಇರುವುದಿಲ್ಲ. ಸ್ನೇಹಪರತೆ ನಮ್ಮನ್ನು ಮಾನಸಿಕವಾಗಿ,ದೈಹಿಕವಾಗಿ, ಭಾವನಾತ್ಮಕ ವಾಗಿ,ಅಧ್ಯಾತ್ಮಿಕವಾಗಿ ಬಲಪಡಿಸುತ್ತದೆ.
೬) ಈ ಕ್ಷಣದಲ್ಲಿ ಜೀವಿಸಿ- ಹೌದು, ಹಿಮದಿನದರ ಬಗ್ಗೆ ಚಿಂತಿಸುವುದು, ಮುಂದಿನದನ್ನು ಯೋಚಿಸುವುದರ ಬದಲು, ಇಂದಿಗಾಗಿ ಬದುಕಿ ಬಿಡುವುದಿದೆಯಲ್ಲ ಇದು ಬಹು ಆಯಾಮದಿಂದಲೂ ಪ್ರಯೋಜನಕಾರಿ. ಈ ಪ್ರಕ್ರಿಯೆ ಪುಟಿದೆಳುವ ಸಂತೋಷವನ್ನು ಬದುಕಿಗೆ ಆನಿಸಬಲ್ಲದು. ಈ ಕ್ಷಣದಲ್ಲಿ ಬದುಕುವ ಆಶಯಕ್ಕೆ ವೈಜ್ಞಾನಿಕ ಮಹತ್ವವನ್ನು ಸಂಶೋಧನೆಗಳು ಸಾಬೀತು ಪಡಿಸುತ್ತವೆ.
ಒತ್ತಡ ನಿರ್ವಹಣೆ, ಗಂಭೀರ ಕಾಯಿಲೆಗಳ ತಡೆಗಟ್ಟುವಿಕೆ, ಆತಂಕ ಮತ್ತು ಖಿನ್ನತೆಯ ನಿರ್ವಹಣೆ ಜೊತೆಜೊತೆಗೆ ಆತ್ಮ ಗೌರವ ಹಾಗೂ ಬದುಕಿನ ಬಗ್ಗೆ ತುಂಬು ಪ್ರೀತಿಯನ್ನು ಈ ಕ್ಷಣದಲ್ಲಿ ಜೀವಿಸುವಿಕೆ ನಮ್ಮದಾಗಿಸುತ್ತದೆ. ಬದುಕಲ್ಲಿ ಸಣ್ಣಪುಟ್ಟ ವಿಚಾರ ಗಳೇನೇ ಇರಲಿ ಅವು ಗಳೆಡೆಗೆ ಕೃತಜ್ಞತೆ ಇರಲಿ.
೭) ನಿಮ್ಮ ಸಾಮರ್ಥ್ಯದ ಅರಿವಿರಲಿ – ಇದನ್ನು ನಾನು ಸಮರ್ಥವಾಗಿ ನಿಭಾಯಿಸಬ ಎಂಬ ಆತ್ಮವಿಶ್ವಾಸವೇ ಬಹಳ ಮುಖ್ಯ. ನೀವೆಲ್ಲಿ ಕುಗ್ಗುತ್ತಿರುವಿರಿ ಎಲ್ಲಿ ನಿಮಗೆ ದೃಢ ವಿಶ್ವಾಸದ ಕೊರತೆ ಇದೆ ಗುರುತಿಸಿ ಅದನ್ನು ಉತ್ತಮಗೊಳಿಸಿಕೊಳ್ಳಲು ಸಾಧ್ಯತೆಗಳೇನು, ಪರಿಶೀಲಿಸಿ.
೮) ಕ್ಷಮಿಸಿಬಿಡಿ – ಎದುರಿಗಿರುವ ವ್ಯಕ್ತಿಯೆಡೆಗಿನ ನಿಮ್ಮ ತಡೆತಗಳನ್ನು ಕ್ಷಮಿಸುವುದರ ಮೂಲಕ ಬಿಡುಗಡೆಗೊಳಿಸಿ, ಗಾಯವನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಿದ್ದರೆ ಅದು ಆರುವುದಾದರೂ ಹೇಗೆ? ಮತ್ತೆ ಆ ಗಾಯಗಳಾಗದಂತೆ ನೋಡಿಕೊಂಡು ಹೋದರಷ್ಟೇ ಸಾಕು. ಅನವಶ್ಯಕ ಬಳಲಿಕೆ ಬೇಡ.
೯) ಸಂಬಂಧಗಳಲ್ಲಿ ಬೆಸೆಯಿರಿ – ಒಂಟಿತನ ನಮ್ಮ ಭಾವನಾತ್ಮಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು ಎಷ್ಟೆಂದರೆ ಒಂಟಿಯಾಗಿರುವುದು ದಿನಕ್ಕೆ ೧೫ ಸಿಗರೇಟನ್ನು ಸೇರಿದಾಗ ಆಗುವಷ್ಟು ಹಾನಿಯನ್ನುಂಟು ಮಾಡುತ್ತದೆ ಎನ್ನುತ್ತವೆ ಸಂಶೋಧನೆಗಳು. ಗಟ್ಟಿಯಾದ ಸಾಮಾಜಿಕ ಸಂಬಂಧದ ಬೆಸುಗೆಯಷ್ಟೇ ಇದಕ್ಕೆ ಮದ್ದು. ಮಾನಸಿಕ ಯೋಗಕ್ಷೇಮತೆಯೊಂದು ನಿರಂತರ ಪ್ರಕ್ರಿಯೆ, ನಿಲ್ದಾಣವಲ್ಲ.